ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ತೇದಾರಿ ಕಾದಂಬರಿ: ಮೊಬೈಲ್ ಕಳವಾಗಿದ್ದೇ ಲಾಯರ್ ಗೆ ಗೊತ್ತಿರಲಿಲ್ಲ

By ಬಸವರಾಜ್ ಕಂಠಿ
|
Google Oneindia Kannada News

ಒಂದು ದಿನ ಕಳೆದಿತ್ತು. ಎರಡನೇ ಕೊಲೆಯಲ್ಲಿ ಮೊಬೈಲ್ ಕಳೆದರೂ ಕಂಪ್ಲೇಂಟ್ ಕೊಡದಿರುವ ಹುಡುಗಿ, ರಶ್ಮಿಯನ್ನು ಭೇಟಿಯಾಗಲು ಅವಳ ಮನೆಗೆ ನಾನು ಮತ್ತು ಭೈರೇಗೌಡ ಹೊರಟೆವು. ಬನಶಂಕರಿ ಮೂರನೇ ಹಂತದ ಒಂದು ಬಾಡಿಗೆ ಮನೆ. ರಶ್ಮಿ ಒಬ್ಬ ಕ್ರಿಮಿನಲ್ ಲಾಯರ್. ಸುಮಾರು ಇಪ್ಪತ್ತೆಂಟರ ಹುಡುಗಿ.

"ಎನಕ್ವೈರಿ ಮಾಡೋದಕ್ಕೆ ಒಬ್ಬ ಲೇಡಿ ಎಸ್.ಐ. ಇಲ್ವಾ?" ಅವಳು ಕೇಳಿದಳು. "ಅಥವಾ ಹೆಣ್ಣುಮಕ್ಕಳ ಕೈಲಿ ಸರಿಯಾಗಿ ಎನಕ್ವೈರಿ ಮಾಡೋಕೆ ಬರೋದಿಲ್ಲಾ ಅಂತಾನಾ?".

ನಾನು ಗಲಿಬಿಲಿಗೊಂಡು ಭೈರೇಗೌಡನ ಕಡೆಗೆ ನೋಡಿದೆ. ಅವನು ಉತ್ತರಿಸಿದ, "ಹಾಗಲ್ಲಾ ಮೇಡಂ. ನಮ್ ಸ್ಟೇಷನ್ನಲ್ಲಿ ಲೇಡಿ ಎಸ್.ಐ ಇಲ್ಲ. ಅದಕ್ಕೆ ನಾವೇ ಬಂದಿರೋದು".

'Tabbaliyu neenade magale'-A detective mystery part-7

"ಇವರ್ಯಾರು?", ನನ್ನೆಡೆ ಕೈ ಮಾಡುತ್ತಾ ಕೇಳಿದಳು.

"ಇವರು ಪುಲಕೇಶಿ ಅಂತಾ. ಖಾಸಗಿ ಪತ್ತೇದಾರ. ಈ ಕೇಸಲ್ಲಿ ನಮಗೆ ಸಹಾಯ ಮಾಡ್ತಿದ್ದಾರೆ".

"ಹಮ್... ಸರಿ... ಹೇಳಿ, ನನ್ನಿಂದ ಏನ್ ಆಗ್ಬೇಕು ಅಂತಾ". ಅವಳ ನೋಟ ಮತ್ತು ದನಿ ಎರಡೂ ಮೊನಚಾಗಿದ್ದವು, ಅವಳ ಮೂಗಿನ ಥರ.

"ನಿಮ್ಮ ಮೊಬೈಲು ಈ ಕೊಲೆ ಕೇಸಿನಲ್ಲಿ ಬಳಸಲಾಗಿದೆ. ಅದು ಕಳದೋಗಿದೆ ಅಂತ ನೀವು ಹೇಳಿದ್ರಂತೆ?" ನಾನು ಕೇಳಿದೆ.

"ಈ ಎಸ್.ಐ. ಸಾಹೇಬ್ರು ಹೋದ ವಾರ ಕೇಳಿದಾಗ್ಲೇ ನನಗೆ ಗೊತ್ತಾಗಿದ್ದು, ಅದು ಕಳದೋಗಿದೆ ಅಂತಾ. ಅದು ಹಳೇ ಮೊಬೈಲು. ನನ್ ಹತ್ರ ಇನ್ನೊಂದು ಮೊಬೈಲ್ ಇದೆ. ಎರಡೂ ಯಾವಾಗಲೂ ನನ್ನ ಪರ್ಸ್ ನಲ್ಲೇ ಇರುತ್ವೆ, ಆದ್ರೆ ನಾನು ಉಪಯೋಗಿಸೋದು ಹೊಸ ಮೊಬೈಲ್ ಮಾತ್ರ. ಸೋ ಆ ಹಳೇ ಮೊಬೈಲ್ ಕಳದೋಗಿದ್ದೂ ಕೂಡ ನನಗೆ ಗೊತ್ತಾಗಿಲ್ಲ."

"ನಿಮ್ಮ ಪರ್ಸ್ ನಿಂದಾ ಆ ಮೊಬೈಲ್ ಮಾತ್ರ ಕಳದೋಗಿದೆ. ಅಲ್ವಾ?"

"ಹೌದು".

"ಎಲ್ಲಿ ಅಥವಾ ಯಾರು ಕದ್ದಿರಬಹುದೆಂದು ನಿಮಗೆ ಅನುಮಾನ?"

"ನಾನು ಪ್ರಾಕ್ಟೀಸ್ ಮಾಡ್ತಾಯಿರೋ ಲಾ ಫರ್ಮ್ ತುಂಬಾ ದೊಡ್ಡದು. ನಮ್ ಆಫೀಸ್ ನಲ್ಲೇ ಯಾರಾದ್ರೂ ಕದ್ದಿರಬಹುದು. ಮನೇಲಿ ಯಾರು ಕದೀತಾರೆ ಹೇಳಿ?"

"ನಿಮ್ ಮನೇಲಿ ಯಾರ್ ಯಾರ್ ಇರೋದು?"

"ಮೂರು ಜನ. ನಾನು, ನನ್ನ ತಂಗಿ ನೇತ್ರಾ. ಅವ್ಳು ಬಿ.ಎ. ಮುಗ್ಸಿ ಮನೇಲೇ ಇದಾಳೆ. ನಮ್ಮಿಬ್ಬರ ಜೊತೆ ರೂಪಾ ಅಂತಾ ಇನ್ನೊಬ್ಳು ಇದಾಳೆ... ಪೇಜ್ ತ್ರೀ ರಿಪೋರ್ಟರ್".

"ಏನು? ರೂಪಾ ನಾ?!" ನಾನು ಮತ್ತು ಭೈರೇಗೌಡ ಅಚ್ಚರಿಯಲ್ಲಿ ಕೇಳಿದೆವು.

"ಹೌದು. ಯಾಕೆ? ಅವ್ಳು ನಿಮಗೆ ಗೊತ್ತಾ?"

"ಗೊತ್ತು ಅಂತಾ ಏನಿಲ್ಲಾ...", ನಾನು ಮಾತನ್ನು ಅಲ್ಲಿಗೇ ನಿಲ್ಲಿಸಿದೆ. ಇವಳಿಗೆ ಮೊದಲನೇ ಕೊಲೆಯ ಬಗ್ಗೆ ಹೇಳಿಕೊಳ್ಳಲು ನನಗೆ ಇಷ್ಟವಿರಲಿಲ್ಲ. "ಅವರ ಬಗ್ಗೆ ನಾವು ಪೇಪರ್ ನಲ್ಲಿ ಓದಿದ್ವಿ. ಅಷ್ಟೇ", ಎಂದೆ.

ಅಷ್ಟರಲ್ಲಿ ಸುಮಾರು ಇಪ್ಪತ್ತರ ಒಬ್ಬ ಹುಡುಗಿ, ಕೋಣೆಯೊಂದರಿಂದ ಕೈಯಲ್ಲಿ ಲ್ಯಾಪ್ ಟಾಪ್ ಹಿಡಿದುಕೊಂಡು ಬಂದಳು. "ಅಕ್ಕಾ... ಈ ಲ್ಯಾಪ್ ಟಾಪ್ ಲಾಕ್ ತಗದ್ ಕೊಡು", ಬೇಸರದ ದನಿಯಲ್ಲಿ ಹೇಳಿದಳು. "ನಾನ್ ಬೇಡಾ ಅಂದ್ರೂ ನೀನ್ ಬರೀ ಪಾಸ್ ವರ್ಡ್ ಚೇಂಜ್ ಮಾಡ್ತೀಯಾ".

ರಶ್ಮಿ ಹೇಳಿದಳು, "ಈಗ್ ಬೇಡ ನೇತ್ರಾ... ನಾನ್ ಬ್ಯುಸಿ ಇದೀನಿ. ಆಮೇಲೆ ತಗದ್ ಕೊಡ್ತೀನಿ".

ನೇತ್ರಾ ನಮ್ಮೆಡೆ ಒಂದು ನೋಟ ನೋಡಿ, ಸಿಟ್ಟಿನಲ್ಲಿ, "ಹೋಗು, ನೀನ್ ಬರೀ ಹೀಗೇ ಹೇಳ್ತೀಯಾ. ನಾನ್ ಶಾಪಿಂಗ್ ಮಾಡ್ಬೇಕು ದುಡ್ ಕೊಡು ಅಂದ್ರೂ ಕೊಡೋದಿಲ್ಲ".

"ನಿಂಗ್ ಏನ್ ಬೇಕು ಹೇಳು... ನಾನೇ ಕೊಡಸ್ತೀನಿ"

"ಒಂದ್ ಮೊಬೈಲ್ ಬೇಕು".

"ಸರಿ. ದುಡ್ ಕೊಡ್ತೀನಿ ಬಾ..." ಎನ್ನುತ್ತಾ ಅವಳನ್ನು ಕೋಣೆಯೆಡೆಗೆ ಕರೆದುಕೊಂಡು ಹೋಗಿ ಬಾಗಿಲು ಮುಚ್ಚಿದಳು.

ಕುಂತ ಜಾಗದಿಂದ ಎದ್ದು, ಆ ನಡುಮನೆಯನ್ನು ಒಂದು ಸುತ್ತುಹಾಕಿದೆ. ಎದುರಿನ ಗೋಡೆಗೆ ಒರಗಿಕೊಂಡಿದ್ದ ಮೇಜಿನ ಮೇಲೆ ಓಪ್ರಾ ವಿನ್ ಫ್ರೇಯವರ ಪುಟ್ಟ ಚಿತ್ರವಿತ್ತು. ಪಕ್ಕದಲ್ಲೇ "ಗುಲಾಬ್ ಗ್ಯಾಂಗ್" ಎಂಬುವ ಹೊತ್ತಗೆ. ಇವಳು ಸ್ತ್ರೀವಾದಿ ಎಂದು ಅಲ್ಲಿದ್ದ ವಸ್ತುಗಳು ಚೀರಿ ಹೇಳುತ್ತಿದ್ದವು.

ಒಂದೆರಡು ನಿಮಿಷವಾದಮೇಲೆ ರಶ್ಮಿ ಹೊರಬಂದಳು. "ಸಾರಿ... ಅವಳು ಸ್ವಲ್ಪ ಮೆಂಟಲಿ ವೀಕ್".

"ಏನಾಯ್ತು?" ನಾನು ಕೇಳಿದೆ.

"ಎರಡು ವರ್ಷದ ಹಿಂದೆ ಅಮ್ಮ ತೀರಿಕೊಂಡ್ರು. ನೇತ್ರಾ ಅಮ್ಮನ್ನ ತುಂಬಾ ಹಚ್ಕೊಂಡಿದ್ದರಿಂದ, ಅಮ್ಮ ಸತ್ತ ಶಾಕ್ ಗೆ ಡಿಪ್ರೆಶನ್ ಹೋಗಿದ್ಳು. ಈಗ ಸ್ವಲ್ಪ ಪರವಾಗಿಲ್ಲ."

"ಪರವಾಗಿಲ್ಲ ಅಂದ್ರೆ?" ನಾನ್ ಥಟ್ ಅಂತ ಕೇಳಿದೆ.

"ಆಂ...", ಎಂದು ಹೇಳಲೋ ಬೇಡವೊ ಎನ್ನುವಂತೆ ಮುಖ ಮಾಡಿ, "ಅಳೋದು ಕಮ್ಮಿ ಮಾಡಿದ್ದಾಳೆ... ರಾತ್ರಿ ಆರಾಮಾಗಿ ಮಲಗ್ತಾಳೆ ", ಎಂದಳು. ಗೊತ್ತಿರುವ ವಿಷಯವನ್ನು ತಕ್ಷಣಕ್ಕೆ ತಡೆ ಹಿಡಿಯಲು ಅಥವಾ ಸುಳ್ಳು ಹೇಳಲು ಮಿದುಳಿಗೆ ಸಾಧ್ಯವಾಗದು. ಅದಕ್ಕೆಲ್ಲ ಸಮಯ ಬೇಕು.

ಎರಡನೇ ಕೊಲೆಯಾದ ದಿನದ ಬಗ್ಗೆ ತಿಳಿಸುತ್ತಾ, "ಅವತ್ತು ನೀವು ಎಲ್ಲಿದ್ರಿ?", ಎಂದು ಕೇಳಿದೆ.

"ಓಹ್! ನಿಮಗೆ ಎಲ್ಲರ ಮೇಲೂ ಅನುಮಾನ ಅಲ್ವಾ?" ಮುಗುಳ್ನಗುತ್ತಾ, "ಇರಲಿ... ಅವತ್ತು ನಾನು ನನ್ ತಂಗಿ ಮನೇಲೇ ಇದ್ವಿ. ನಾವ್ ಹೊರಗ್ ಹೋಗೋದು ಶನಿವಾರ ಭಾನುವಾರ ಮಾತ್ರ".

"ನಿಮಗೆ ರೂಪಾ ಹೇಗ್ ಪರಿಚಯ?"

"ನಮ್ಮ ಊರಿನವಳೇ".

ಇನ್ನೇನೂ ಕೇಳುವುದಿರಲಿಲ್ಲ. ಅಲ್ಲಿಂದ ಹೊರಬಂದೆವು.

ಮುಂದುವರಿಯುವುದು

English summary
'Tabbaliyu neenade magale'-A murder mystery story by Basavaraj Kanthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X