ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ತೇದಾರಿ ಕಾದಂಬರಿ: ಇಟಗಿಯನ್ನು ಬ್ಲ್ಯಾಕ್ ಮೇಲ್ ಮಾಡಿದ್ಯಾರು?

By ಬಸವರಾಜ್ ಕಂಠಿ
|
Google Oneindia Kannada News

ಬೆಳಗಾವಿಯ ಹೆಸರಾಂತ ವ್ಯವಹಾರಸ್ಥರಾದ ಅಮರ್ ಇಟಗಿ ಅವರು ತುರ್ತಾಗಿ ಬರಲು ಹೇಳಿದ್ದರು. ಸುಮಾರು ಹನ್ನೊಂದು ಗಂಟೆಗೆ, ಮೈಸೂರು ರಸ್ತೆಯ ಹೋಟೆಲೊಂದರ ಕೋಣೆಯಲ್ಲಿ ಕುಳಿತು, ಅವರು ನನ್ನ ಕೈಗಿಟ್ಟ ಪತ್ರವೊಂದನ್ನು ತುಂಬಾ ಗಮನವಿಟ್ಟು ಓದಿದೆ.

ಒಂದೊಂದು ಪದ, ಸಾಲನ್ನು ಅಳೆದು ತೂಗಿ ನನ್ನ ತಲೆಯಲ್ಲಿ ಇಳಿಸಿಕೊಳ್ಳುತ್ತಾ, ಅವುಗಳ ಹಿಂದೆ ಅಡಗಿದ್ದ ಮಿದುಳಿನ ಯೋಚನೆಯ ಬಗೆಯನ್ನು ತಿಳಿಯಲು ಪ್ರಯತ್ನಿಸಿದೆ. ಹದಿನೈದು ನಿಮಿಷ ಕಳೆಯಿತು. ಮೊದಲೈದು ನಿಮಿಷ ಅಮರ್ ಅವರು ತಾಳ್ಮೆಯಿಂದ ಇದ್ದರೂ ಕೊನೆಕೊನೆಗೆ ಕುಂತಲ್ಲಿ ಕೂರಲಾಗದೇ ಕೈ- ಕಾಲು ಅಲ್ಲಾಡಿಸುತ್ತಾ ತಮ್ಮ ಮನಸ್ಸಿನ ತಳಮಳವನ್ನು ಹೊರಹಾಕಲು ಶುರು ಮಾಡಿಕೊಂಡಿದ್ದರು. ನಾನು ಮಾತಾಡಿದೆ,

"ನೀವು ಭಯ ಪಡುವ ಅಗತ್ಯ ಇಲ್ಲ. ಇದು ಬೊಗಳುವ ನಾಯಿ ಅಷ್ಟೇ. ಕಚ್ಚುವುದಿಲ್ಲ". ಅಮರ್ ಅವರು ತಮ್ಮ ಹೆಂಡತಿಯ ಹೊರತಾಗಿ ಬೆಂಗಳೂರಿಗೆ ಬಂದಾಗಲೆಲ್ಲಾ ಇನ್ನೊಬ್ಬ ಹುಡುಗಿಯ ಸಂಬಂಧ ಇಟ್ಟುಕೊಂಡಿದ್ದು ಗೊತ್ತಾಗಿ ಅವರಿಗೆ ಬ್ಲಾಕ್ ಮೇಲ್ ಮಾಡಲು ಬರೆದಿದ್ದ ಕಾಗದ.

'Tabbaliyu neenade magale'-A detective mystery part-2

"ಹೆಂಗ್ ಹೇಳ್ತೀರಿ?" ಅವರ ಮುಖದಲ್ಲಿ ಇನ್ನೂ ಗಾಬರಿಯಿತ್ತು.

"ಇದು ಯಾರೋ ಪ್ರೊಫೆಷನಲ್ ಬ್ಲಾಕ್ ಮೇಲರ್ ಬರೆದಿರೋ ಪತ್ರ ಅಲ್ಲ. ಅಂಥವರು ನೇರ ಕಾಲ್ ಮಾಡ್ತಾರೆ. ಪತ್ರ ಬರೆದಿರುವ ಮುಖ್ಯ ಕಾರಣ ತನ್ನ ಬಗ್ಗೆ ಯಾವ ಸುಳಿವೂ ಬಿಟ್ಟು ಕೊಡಬಾರದು ಅಂತ. ನಿಮ್ಮ ಹತ್ತಿರದವರೇ ಇದನ್ನು ಮಾಡಿರೋದು. ನಿಮ್ಮ ಈ ಕಳ್ಳ ಸಂಬಂಧ ಯಾರಿಗೆ ಗೊತ್ತು?"

ಅವರು ಮುಖ ಹಿಂಡುತ್ತಾ, "ಒಂದ್ ನಾಲ್ಕ್ ಐದ್ ಮಂದಿಗೆ ಗೊತ್ತದ. ಎಲ್ಲಾರೂ ನನ್ ಫ್ರೆಂಡ್ಸ್", ಅಂದರು.

"ಹಾಗಾದರೇ ಅವರಲ್ಲೇ ಯಾರೋ ಇದನ್ನಾ ಬರೆದಿದಾರೆ. ಅವರಲ್ಲಿ ಯಾರಿಗೆ ದುಡ್ಡಿನ ಅವಶ್ಯಕತೆ ಇದೆ ಅಂತ ನೋಡಿ, ನಿಮಗೇ ಹೊಳೆಯುತ್ತೆ."

"ಆಂ... ಆಯ್ತು. ನಾ ವಿಚಾರ ಮಾಡ್ತೀನಿ. ಹಂಗಾರ ಈ ಪತ್ರ ಸೀರಿಯಸ್ ಆಗಿ ತೊಗೊಳ್ಳೋದು ಬ್ಯಾಡ ಅಂತೀರಿ?".

"ಈಗ ಬೇಡ. ಒಂದು ವಾರ ಕಾಯ್ದು ನೋಡಿ. ಇನ್ನೊಂದು ಪತ್ರ ಬಂದರೆ ಯೋಚನೆ ಮಾಡೋಣ. ಅವರಿಗೆ ಹಣದ ಅವಶ್ಯಕತೆ ಇದೆ. ಹಾಗಾಗಿ ಒಮ್ಮೆಲೆ ನಿಮ್ಮ ಮನೆಯವರಿಗೆ ಈ ವಿಷಯ ತಿಳಿಸುವದಿಲ್ಲ. ನಿಮಗೆ ಇನ್ನೊಂದು ಛಾನ್ಸ್ ಕೊಟ್ಟೇ ಕೊಡ್ತಾರೆ".

"ಆಯ್ತು ಬಿಡ್ರಿ ಪುಲಕೇಶಿ" ನಿಟ್ಟುಸಿರು ಬಿಡುತ್ತಾ ಎದ್ದು ನಿಂತರು ಅಮರ್. "ನಿಮ್ ಫೀಸು?"

"ಐದ್ ಸಾವ್ರ", ಎಂದು ನಾನು ಹೇಳುತ್ತಿದ್ದಂತೆಯೇ, ನಮ್ಮ ಕೋಣೆಯ ಬಾಗಿಲನ್ನು ಯಾರೋ ಬಡಿದರು.

"ಯಾರದು?" ಎಂದೆ.

"ಪೊಲೀಸ್", ಹೊರಗಿನ ದನಿ ಉತ್ತರಿಸಿತು. ನಾನು ಕುರ್ಚಿಯಿಂದ ಎದ್ದು ಬಾಗಿಲು ತೆಗೆದೆ. ಪೇದೆಯೊಬ್ಬ ನಿಂತಿದ್ದ.

"ಎಸ್. ಐ ಸರ್ ಕರೀತಾ ಇದಾರೆ. ಬನ್ನಿ", ಎಂದನು. ನನಗೆ ಗಲಿಬಿಲಿಯಾಗಿ, ಯಾಕೆ? ಏನಾಯಿತು? ಎಂಬ ಕೇಳ್ವಿಗಳು ಮನಸ್ಸಿನಲ್ಲಿ ಹುಟ್ಟಿಕೊಂಡವು. ಕೋಣೆಯ ಹೊರಗಿನ ಚಾವಡಿಯ ಕೊನೆಯಲ್ಲಿ ಎಸ್. ಐ ಒಬ್ಬರು ಕುಳಿತಿದ್ದರು. ನಾನು, ನನ್ನ ಹಿಂದೆ ಅಮರ್, ಎಸ್. ಐ ಎದುರಿಗೆ ಹೋಗಿ ನಿಂತೆವು.

"ನಿಮ್ ಹೆಸರು?" ಕೇಳಿದ.

"ಪುಲಕೇಶಿ", ಎಂದೆ.

"ಓಹ್! ಪತ್ತೇದಾರಿ ಪುಲಕೇಶಿ ನೀವೇನಾ?", ಮುಖ ಅರಳಿಸಿ ಕೇಳಿದ.

"ಹೌದು", ಎಂದೆ. ನನ್ನ ಕೈ ಕುಲುಕುತ್ತಾ, "ನಾನು ಕೆಂಗೇರಿ ಸ್ಟೇಷನ್ನಿನ ಎಸ್. ಐ, ಭೈರೇಗೌಡ", ಎಂದು ಕುಳಿತುಕೊಳ್ಳಲು ಹೇಳಿದ. ಅಮರ್ ಅವರ ಪರಿಚಯ ಮಾಡಿಕೊಟ್ಟೆ. ಅವನು ನಮ್ಮನ್ನು ಕರೆಸಿದ ಕಾರಣ ತಿಳಿಸಿದ,

"ಪುಲಕೇಶಿಯವರೇ, ನೀವು ಬಂದ್ರಲ್ಲಾ, ಆ ರೂಮಿನ ಮುಂದೆಗಡೆ, ಎರಡು ರೂಮು ಬಿಟ್ಟು ಮೂರನೇ ರೂಮ್ ನಲ್ಲಿ ಒಂದು ಕೊಲೆಯಾಗಿದೆ. ಹುಡುಗಾ ಹುಡುಗಿ ರಾತ್ರಿ ಬಂದ್ರಂತೆ, ಹುಡುಗ ಸತ್ತಿದ್ದಾನೆ, ಹುಡುಗಿ ನಾಪತ್ತೆ. ಇಲ್ಲಿ ಯಾರೂ ಅವ್ಳನ್ನಾ ನೋಡಿಲ್ಲ. ಮುಖಕ್ಕೆ ಬಟ್ಟೆ ಸುತ್ಕೊಂಡಿದ್ಳಂತೆ. ಅದಕ್ಕೇ ನೀವೇನಾದ್ರೂ ನೋಡಿದ್ದೀರಾ ಅಂತ ಕೇಳೋಕೆ ಕರೆಸ್ದೆ."

"ನಾನು ಇಲ್ಲಿಗ್ ಬಂದಿದ್ದೆ ಈಗ ಹನ್ನೊಂದರ ಸುಮಾರಿಗೆ. ಒಂದಿಬ್ರು ಕಾನ್ ಸ್ಟೇಬಲ್ ಗಳು ಆ ರೂಮಿನ ಮುಂದೆ ಇದ್ರು... ಆದ್ರೆ ನಾನು ತಲೆ ಕೆಡಿಸಿಕೊಳ್ಳಿಲ್ಲಾ... ನೇರ ಇವ್ರ ರೂಮಿಗೆ ಹೋದೆ".

ಅವನು ಅಮರ್ ಅವರ ಕಡೆಗೆ ತಿರುಗಿದ. ಅಮರ್ ಮಾತಾಡಿದರು, "ನಾನು ನಿನ್ನೆ ಸಂಜಿಕ ಒಂಬತ್ತರ ಹೊತ್ತಿಗೆ ರೂಮಿಗ್ ಬಂದೆ. ಅವಾಗೇನ್ ಯಾರ್ನೂ ನೋಡಿಲ್ಲ".

ನನಗೆ ಪತ್ತೇದಾರಿಕೆಯ ತವಕ ತಡೆಯಲಾಗಲಿಲ್ಲ. "ಆ ರೂಮು ನೋಡಬಹುದಾ?", ಕೇಳಿದೆ.

"ಬನ್ನಿ... ನಾನೂ ಬರ್ತೀನಿ", ಎಂದು ಎದ್ದನು ಭೈರೇಗೌಡ. ಎಲ್ಲರೂ ಆ ಕೋಣೆಯೆಡೆಗೆ ಹೊರಟೆವು.

ಮುಂದುವರಿಯುವುದು

English summary
'Tabbaliyu neenade magale'-A murder mystery story by Basavaraj Kanthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X