ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆತ್ತಲಾದಳು ಗುರುಬಸವಿ ಊರ ಕೆರೆಯ ಮುಂದೆ!

By ಕುಸುಮಬಾಲೆ
|
Google Oneindia Kannada News

ಚಾಮರಾಜನಗರದ ವಿಶಿಷ್ಟ ಭಾಷೆಯಲ್ಲಿ ಬರೆಯುತ್ತಲೇ, ಸಮಾಜದ ವಿಭಿನ್ನ ಮುಖಗಳನ್ನು ಅನಾವರಣಗೊಳಿಸುತ್ತಾ, ಅಚ್ಚರಿಯನ್ನು, ಒಂದು ಬಗೆಯ ಬೆರುಗನ್ನು ಮೂಡಿಸುವ, ಇಂದಿನ ಜಮಾನಾದ ಪ್ರಖರ ಲೇಖಕಿ ಕುಸುಮಬಾಲೆ. 'ಅವಧಿ'ಯಲ್ಲಿ ಪ್ರಕಟವಾಗುತ್ತಿರುವ ಅಂಕಣ 'ಯ್ಯೋಳ್ತೀನ್ ಕೇಳಿ' ಸಂಕಲನದ ರೂಪದಲ್ಲಿ ಮಾರ್ಚ್ 12ರಂದು ಎನ್ಆರ್ ಕಾಲೋನಿಯ ಬಿಎಂಶ್ರೀ ಭವನದಲ್ಲಿ ಸಂಜೆ 5 ಗಂಟೆಗೆ ಬೆಳಕು ಕಾಣಲಿದೆ. ಈ ಸಂಕಲನದಿಂದ ಆಯ್ದ 'ಬೆತ್ತಲಾದ ಗಂಡುಬೀರಿ ಗುರುಬಸವಿ'ಯ ಕಥೆಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ - ಸಂಪಾದಕ.

ಒಂದು ಊರ ಹೆಸರು ಹೇಳಿದರೆ ಅದಕೆ ಸಂಬಂಧಿಸಿದ ಒಂದು ಪದ ಹೇಳಬೇಕು ಅಂತೊಂದು ಕಾಂಪಿಟಿಷನ್. ಯಾರೂ ಬೇಡ ಸ್ಪರ್ಧಿಗಳು ಮನಸಲ್ಲಿ ನಿಮಗೆ ನೀವೇ ಹೇಳಿಕೊಳ್ಳಿ, ಆಟ ಆಡಿಕೊಳ್ಳಿ. ಮೈಸೂರು- ಅರಮನೆ. ಬಳ್ಳಾರಿ- ಗಣಿ. ಬೆಂಗಳೂರು - ಐಟಿ. ಮಂಡ್ಯ- ಸಕ್ಕರೆ (ಅಂಬರೀಷು). ಹೀಗೆ ಒಂದೊಂದು ಊರು ಅಂದ ಕೂಡಲೆ ಥಟ್ ಅಂತ ಒಂದೇನೋ ತಲೆಗೆ ಬರುತ್ತದೆ. ಚಾಮರಾಜನಗರ ಅಂದುಕೊಳ್ಳಿ.. ಬರಡು ಮತ್ತು ಶಾಪದ ಕತೆ ಅದೇ ಮೊದಲು ತಲೆಗೆ ಬರೋದು. ನಿಜವೆಂದರೆ ಯಾವ ಊರೂ, ಅದರ ರೀತಿನೀತಿಯೂ ದೂರದಲ್ಲಿ ನಿಂತು ನಾವು ಗ್ರಹಿಸಿದಂತೆ ಇರುವುದಿಲ್ಲ. ಹಾಗೆ ಗ್ರಹಿಸುವುದು ಸಾಧ್ಯವೂ ಇಲ್ಲ. ಸಾಧುವೂ ಅಲ್ಲ.

ಇಷ್ಟೊಂದು ಪತ್ರಿಕೆಗಳು, ಎಷ್ಟೊಂದು ಎಲೆಕ್ಟ್ರಾನಿಕ್ ಮಾಧ್ಯಮಗಳು.. ಸಂಖ್ಯೆ ಕೇಳಿದರೇ ಬೆಚ್ಚಿ ಬೀಳಿಸುತ್ತವೆ. ಆದರೆ ಎಲ್ಲವೂ ಹಿಡಿದರೆ ಒಂದೇ ದಾರಿ. ಹತ್ತಿದರೆ ಒಂದೇ ಮರ. ಬಳಸುವ ಪದಗಳೋ ಅಕ್ಷರಶಃ ಅವವೇ ಪದಗಳನ್ನ ಬಸೀ ಬಳಸೀ ಉಜ್ಜಾಡಿಬಿಟ್ಟಿದ್ದಾರೆ. ವ್ಯಕ್ತಿಗಳು, ಊರುಗಳ ವಿಚಾರದಲ್ಲೂ ಅಷ್ಟೆ. ದಲಿತ ಸಾಹಿತಿ. ಅಂತ ಯಾರೋ ಬಳಸಿದ್ದರೆ ಮರುಪ್ರಶ್ನೆ ಎತ್ತದೆ ಅವರಿಗೆ ಸಂಬಂಧಿಸಿದ ಯಾವುದೇ ಸ್ಟೋರಿಗೂ ಅದನ್ನು ಸೇರಿಸಿಕೊಂಡುಬಿಡುತ್ತಾರೆ. ಸಿನೆಮಾದ ಹೀರೋಗಳಿಗೆ ಬಾಯಿಮಾತಲಿ ಕೊಟ್ಟ ಥರಥರದ ಬಿರುದುಗಳು. ಐಶ್ವರ್ಯಾ ರೈನ ಐಶ್ ಬೇಬಿ ಅನ್ನುವುದು ಹೀಗೆ ಸಾವಿರ ಸಿಕ್ತವೆ, ಯಾರೋ ಬಳಸಿದರೆ ಇನ್ಯಾರೋ ಕಾಪಿಕ್ಯಾಟ್ ಮಾಡಿಬಿಡುತ್ತಾ ಅದನ್ನೊಂದು ಪರಂಪರೆಯೇ ಅನ್ನುವಂತೆ ಬೆಳೆಸುತ್ತಾರೆ. ಅಂತೆಯೇ ಪಾಪ ತಾವು ಎಂದೂ ಕಣ್ಣಿಂದ ನೋಡೇ ಇರದ ಚಾಮರಾಜನಗರದ ಸುದ್ದಿ ಬಂದಾಗೆಲ್ಲ 'ಶಾಪಗ್ರಸ್ತ ಜಿಲ್ಲೆಯೆನಿಸಿರುವ ಚಾಮರಾಜನಗರದಲ್ಲಿ...' ಅಂತ ಶುರುಮಾಡುವುದೇ ತುಂಬ ಜನರ ಕಾಯಿಲೆ. [ಚಾಮರಾಜನಗರ ಭೇಟಿ, ದಾಖಲೆ ಬರೆದ ಸಿದ್ದರಾಮಯ್ಯ!]

Story of Gurubasavi, who challenged the society with her guts

ಕೋಟ್ಯಂತರ ಕನ್ನಡಿಗರಿಗೆ ಚಾಮರಾಜನಗರ ಅಂದರೆ ಗೊತ್ತಿರೋದು ಒಂದೇ ಕತೆ. ಅಲ್ಲಿಗೆ ಕಾಲಿಟ್ರೆ ಅಧಿಕಾರ ಹೋಗತ್ತೆ, ಅನ್ನೋದು. ಮುಂಚೆ ಎಷ್ಟು ಜನರಿಗೆ ಗೊತ್ತಿತ್ತೋ ಈ ನ್ಯೂಸ್ ಚಾನೆಲ್ಲುಗಳು ಬಂದ ಮೇಲೆ ತಲೆಮೇಲೆ ಹೊಡೆದು ಹೇಳಿದಂತೆ ಹೇಳೀ ಹೇಳೀ ಎಲ್ಲರ ತಲೆಯೊಳಗೂ ಕೂರಿಸಿಬಿಟ್ಟಿವೆ. ತೀರಾ ಹೆಚ್ಚೆಂದರೆ ಮಾದೇಶ್ವರ ಬೆಟ್ಟವಿದೆ, ಬಿಳಿಗಿರಿರಂಗನ ಕಾಡಿದೆ ಅದಿದೆ ಇದಿದೆ ಅನ್ನುತ್ತಾರೆ. ಅಲ್ಲಿ ಜನರಿದ್ದಾರೆ ಅನ್ನುವುದು ಕಡೆಯ ಮಾತಾಗುತ್ತದೆ. ಇನ್ನು ಹೆಣ್ಣುಮಕ್ಕಳ ಮಾತೆಲ್ಲಿ ಆಡಲುಂಟು? ಹಾಗೆಂದು ಅಲ್ಲಿ ಅವಳಿದ್ದುದೇ ಸುಳ್ಲಲ್ಲ. ಸುಳ್ಳಾಗಿದ್ದರೆ ಅವಳು ಜನರ ನಾಲಗೆಯಲ್ಲಿನ್ನೂ ಬದುಕಿರುತ್ತಿರಲಿಲ್ಲ. ಹೌದು, ಯಾವ ಖತರ್ನಾಕ್ ಕ್ಯಾಮರಾಗೂ ಕಾಣದ ಒಬ್ಬಳಿದ್ದಳು ಅಲ್ಲಿ, ಈ ಕ್ಯಾಮರಾದವರ ಅಪ್ಪನ ಅಪ್ಪನ ಅಪ್ಪನ ಕಾಲದಲ್ಲಿ.. ಈ ಕ್ಯಾಮರಾವೆಂಬ ಕ್ಯಾಮರಾ ಕೂಡ ಹುಟ್ಟೇ ಇರದ ಕಾಲದಲ್ಲಿ, ಗುರುಬಸವಿ ಅವಳ ಹೆಸರು..

ಚಾಮರಾಜನಗರ ಜಿಲ್ಲೆಯಲ್ಲೇ ಸ್ಕೂಲು ಓದಿದ ನನ್ನ ಕಿವಿಗೆ ಆಗಾಗ ಅವಳ ಹೆಸರು ಬೀಳುತ್ತಿತ್ತು. ಯಾರಾದರೂ ನಿರ್ಭಿಡೆಯಿಂದ, ಗಂಡುಹುಡುಗರ ಜೊತೆ ತಿರುಗಾಡುತಿದ್ದರೆ, ಬೋಲ್ಡ್ ಆಗಿದ್ದರೆ, ಗಂಡುಭೀರಿ ಅನ್ನುವುದು ಸಾಮಾನ್ಯ. ಆದರೆ ಅಲ್ಲಿ "ಅಯ್ಯೋ ಯಾಕ್ಯೋಳಿರಿ ನಗರದ್ ಗುರುಬಸವಿ ಅಂಗ್ ತಿರುಗಾಡ್ತಳ ಅದೇನಾದಳೋ ಎತ್ತಾದಳೋ ಕಾಣೆ" ಅನ್ನುತ್ತಿದ್ದರು. ಬೋಲ್ಡ್ ಆಗಿ ಓಡಾಡೋ ಹುಡುಗೀರು ಮಾತ್ರವಲ್ಲ. ಗಂಡನನ್ನ ಅಂಟಿಕೊಳ್ಳದೇ ತಾನೇ ಕೊಳ್ಳೆಗಾಲ, ನಗರ, ನರಸೀಪುರ ಅಂತ ಪೇಟೆಗೆ ಓಡಾಡೋ ಹೆಂಗಸರನ್ನೂ ಹಾಗೇ ಕರೆಯುತ್ತಿದ್ದರು. ಆದರೆ ಯಾವಳವಳು ಗುರುಬಸವಿ? ಅನ್ನೋದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. ಮಾವ ಹೇಳಿದ ಆ ಗುರುಬಸವಿಯ ಕಥೆ ಯೋಳ್ತೀನ್ ಕೇಳಿ...

Story of Gurubasavi, who challenged the society with her guts

ಗುರುಬಸವಿಯ ಕಥೆ ಯೋಳ್ತೀನ್ ಕೇಳಿ...

ಆ ಕಾಲಕ್ಕೆ ಅವಳೊಬ್ಬ ನಿರ್ಭಿಡೆಯ ಹೆಣ್ಣು. ಯಾರ ಹೊಲಕಾದರೂ ಹೋಗಿ ಮರ ಹತ್ತುತಿದ್ದವಳು. ಗಾಡಿ ಹೊಡೆಯುತ್ತಿದ್ದವಳು. ವೇಷ ಹೆಣ್ಣಿನದೇ ಆಗಬೇಕೆಂದಿರಲಿಲ್ಲ. ಪಂಚೆ ಷರಟಿಗೂ ಸೈ. ಮೈ ಮುಚ್ಚಲು ಬಟ್ಟೆ ಬೇಕಷ್ಟೆ. ಅದರ ವಿನ್ಯಾಸದ ಬಗ್ಗೆ ಅವಳದು ತಕರಾರಿರಲಿಲ್ಲ. ಒಂಥರದ ಉಡಾಫೆ, ಡೋಂಟ್ ಕೇರ್ ಪ್ರವೃತ್ತಿ. ಇವಳನ್ನ ಹಿಡಿದು ಬಗ್ಗಿಸಬೇಕು ಅಂತ ಯತ್ನಿಸಿ ಸೋತವರೆಷ್ಟೋ. ಇಂತ ಗುರುಬಸವಿ ಆ ಊರಮುಖಂಡನಿಗೆ ಅದೇನು ಮಂಗಳಾರತಿ ಮಾಡಿದ್ದಳೋ ಏನು ಕತೆಯೋ ಗೊತ್ತಿಲ್ಲ. ಅವನು ಅವಳಿಗೆ ಒಂದು ಚಾಲೆಂಜು ಹಾಕಿದ. ಮಾನಗೆಟ್ಟ ಚಾಲೆಂಜು ಅದು. "ಇಷ್ಟೆಲ್ಲ ಹಾರಾಡ್ತೀಯಲ್ಲೆ ಗುರುಬಸವಿ. ನಾ ಯೋಳುದ್ ಕೆಲ್ಸ ನೀ ಮಾಡುದ್ರ ನಿನಗ್ ಐನೂರ್ ಬೆಳ್ಳಿ ನಾಣ್ಯ, ಒಂದ್ ಕುದುರೆ ಫ್ರೀಯಾಗ್ ಕೊಟ್ಬುಡ್ತೀನಿ" ಅಂದ. "ಅದೇನ ಯೋಳು ಮದ್ಲು. ಮಾಡದು ಬುಡದು ಆಮ್ಯಾಲ" ಅಂದಳವಳು. "ಬರಾ ಹುಣ್ಣಿಮೆ ರಾತ್ರಗ, ಮೈ ಮೇಲ ಒಂದ ದಾರದೆಳೆಯೂ ಇರದಂಗ ಊರ್ ಮುಂದಲ್ ಕೆರೆಯಾ ಒಂದ್ ಸುತ್ ಸುತ್ತಬೇಕು. ಅದ ಯಾರ್ ಬೇಕಾರೂ ನೋಡಬೋದು. ಆದುದಾ ಯೋಳು" ಅಂತ ಮೀಸೆ ತಿರುವಿ ಹುಬ್ಬು ಎತ್ತಿದ. ಕ್ಷಣವೂ ಯೋಚಿಸದೆ, "ಆಯ್ತು.. ಒಪ್ಕಂಡೆ. ಸಾರ್ಸು ಡಂಗೂರ" ಅಂದುಬಿಟ್ಟಳು ಗುರುಬಸವಿ. ಅವನು ಎತ್ತಿದ ಹುಬ್ಬು ಇಳಿಯಿತೋ ಇಲ್ಲವೋ ಅನುಮಾನ ನನಗೆ.

ಅವತ್ತು ಹುಣ್ಣಿಮೆ ಬಂದೇ ಬಿಟ್ಟಿತ್ತು, ಡಂಗೂರ ಸಾರಿಯಾಗಿತ್ತು. ಎಳೆಯರಿಂದ ಹಳಬರವೆರೆಗೆ ಎಲ್ಲ ವಯೋಮಾನದ ಗಂಡಸರೂ ಕೆರೆಯ ಸುತ್ತ ಜಮಾಯಿಸಿಬಿಟ್ಟಿದ್ದರು. ಐನೂರು ಬೆಳ್ಳಿ ರೂಪಾಯಿ. ಒಂದು ಕುದುರೆ ಸಮೇತ ಚಾಲೆಂಜು ಹಾಕಿದ ಮಹಾವೀರ ಮುಂದಿನ ಸಾಲಲ್ಲೇ ಹಾಜರಿದ್ದ. ಗುರುಬಸವಿ ಬಂದಳು ಒಂದೊಂದೇ ಬಟ್ಟೆ ಕಳಚಿ ಕೆರೆಗೆಸೆಯುತ್ತಾ ಒಂದಲ್ಲ, ಮೂರು ಸುತ್ತು ಹಾಕಿದಳು. ಮಹಾವೀರನ ಮುಂದೆ ಬಂದು ಕೈ ಚಾಚಿದಳು. ಐನೂರು ಬೆಳ್ಳಿಯ ನಾಣ್ಯ, ಕುದುರೆ ತತ್ತಾ ಇಲ್ಲಿ ಅಂದಳು. ಅವನು ಮರುಮಾತಾಡದೇ ಕೊಟ್ಟ. ಗುಂಪಿನಿಂದೊಬ್ಬ ಮುದುಕ ಬಂದ. "ಯಾನವ್ವ, ಗುರುಬಸವೈ, ಎಲ್ಲಾರೂ ಉಂಟವ್ವಾ ಇಂತಾ ಕತ? ಮಾನವಿದ್ದವರು ಮಾಡಾ ಕೆಲ್ಸವಾ ಇದು?" ಕೇಳಿದ. "ಹ್ಞೂ ಕಣ್ ತಾತ ನಾ ಮಾನಗೆಟ್ಟೋಳು. ಮಾನವಿದ್ ನನ್ನಮಕ್ಳು ನೀವಾಗಿದ್ರ ಇಲ್ಲಿಗಂಟಾ ಯಾಕ್ ಬತ್ತಿದ್ರಿ? ಕಣ್ ಮುಚ್ಕಂಡ್ ಹಟ್ಟೀಲೇ ಬಿದ್ಕತಿದ್ರಿ" ಅಂದಳು. ಈ ಮಾತಿಗೆ ಮಾನಗೇಡಿಗಳ ಬಳಿ ಉತ್ತರವಿರಲಿಲ್ಲ. ಬಂದಿದ್ದ ಬಡ್ಡೆತ್ತವೆಲ್ಲ ಮುಖ ಮುಚ್ಕಂಡು ಮನೆಸೇರಿಕೊಂಡವು. ಅವತ್ತು, ಅಂದರೆ ನೂರು ವರ್ಷಕ್ಕೂ ಹಿಂದೆ, ಎಂತಾ ಧೈರ್ಯ ಪ್ರದರ್ಶಿಸಿದ್ದಳು ಗುರುಬಸವಿ! ಊರ ಗಂಡಸೆರಲ್ಲರ ಮುಂದೆ ಸಲೀಸಾಗಿ ಬೆತ್ತಲಾಗಿ ನಿಲ್ಲಬೇಕಂದರೆ ಅವಳ ಗುಂಡಿಗೆ ಎಂತದ್ದಿರಬೇಕು? ಎಲ್ಲ ಮುಗಿದ ಮೇಲೆ, ಒಂದೇ ಒಂದು ಸಾಲಿನಲ್ಲಿ ಇಡೀ ಗಂಡು ಕುಲದ ಮುಖಕ್ಕೆ ರಾಚುವಂತೆ ಝಾಡಿಸಿಬಿಟ್ಟಳಲ್ಲ ದಿಟ್ಟೆ!

Story of Gurubasavi, who challenged the society with her guts

ಅದಕ್ಕೇ ಹೇಳಿದ್ದು, ಚಾಮರಾಜನಗರವೆಂದರೆ ಶಾಪದ ಊರು ಮಾತ್ರವೇ ಅಲ್ಲ. ಅಲ್ಲಿ ಗುರುಬಸವಿಯ ಕತೆಯೂ ಉಂಟು. ಆದರೆ ಇಂತ ಹಿನ್ನೆಲೆಯ ಗುರುಬಸವಿಯ ಹೆಸರನ್ನ ಜನ ನೆಗೆಟಿವ್ ಅರ್ಥದಲ್ಲಿ ಬಳಸುವ ಬಗ್ಗೆ ಬೇಸರವಾಗುತ್ತದೆ. ಈ ಕತೆಯೊಂದಿಗೆ ನನಗೆ ಇದ್ದ ಇನ್ನೂ ಒಂದು ದೊಡ್ಡ ಸಂದೇಹ ನಿವಾರಣೆಯಾಯ್ತು. ಮೈಸೂರು ಜಿಲ್ಲೆಯ ಹಳ್ಳಿ ಹುಡುಗಿಯರಿಗೆ ಹೋಲಿಸಿದರೆ ಚಾಮರಾಜನಗರದ ಹಳ್ಳಿ ಹುಡುಗಿಯರು ತುಸು ಬೋಲ್ಡ್. ಸಾಮಾನ್ಯವಾಗಿ ಸ್ಪೋರ್ಟ್ಸನಂತ ಚಟುವಟಿಕೆಗೆ ಕರೆದರೆ ಇವರು ಹಿಂಜರಿಯದೇ ಬರುತ್ತಾರೆ. ಸೈಕಲ್ ಹೊಡೆಯೋದು ಒಂದು ಸಾಮಾನ್ಯ ಸಂಗತಿ.

ಈ ಮೈಸೂರ ಭಾಗದ ಹಳ್ಳಿಗಳಲ್ಲಿ ಮೈನೆರೆದ ಹೆಣ್ಣುಮಕ್ಕಳು ಹೊಸಿಲು ದಾಟುವಂತಿಲ್ಲ. ಸೈಕಲ್ ಏರುವುದು ಅಪರಾಧವೇ ಸರಿ. ಈಗ ತುಸು ಬದಲಾಗಿದೆ ನಿಜ. ಆದರೂ ಮೂಲ ಸ್ವಭಾವ ಹಾಗೆ ಹಾಗೇ ಇದೆ. ಚಾಮರಾಜನಗರದಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿ, ಪಿಯುಸಿಗೆ ಮೈಸೂರು ಜಿಲ್ಲೆಯ ಹಳ್ಳಿ ಸೇರಿದ ನನಗೆ ಇದು ಭಯಂಕರ ವಿಚಿತ್ರವಾಗಿ ಕಂಡಿತ್ತು. ಮತ್ತು ನನ್ನ ವರ್ತನೆ ಈ ಊರಿನವರಿಗೆ ವಿಚಿತ್ರ ಅನಿಸಿತ್ತು. ಯಾಕೆ ಹೀಗೆ? ಅಕ್ಕ ಪಕ್ಕದ ಊರುಗಳ ನಡುವೆ ಹೆಣ್ಣುಮಕ್ಕಳ ಸ್ವಾತಂತ್ರ್ಯದ ವಿಚಾರದಲ್ಲಿ ಯಾಕಿಷ್ಟು ದೊಡ್ಡ ವ್ಯತ್ಯಾಸ ಅಂತ ತುಂಬ ಸಲ ಯೋಚಿಸುತ್ತಿದ್ದೆ. ಈಗ ಅನಿಸುತ್ತದೆ. ಚಾಮರಾಜನರದ ಹುಡುಗಿಯರ ಬೋಲ್ಡ್ ನೆಸ್‍ ಗೆ ಆ ಗುರುಬಸವಿಯ ಪ್ರಭಾವವೇ ಕಾರಣವಿರಬೇಕು. ಅವಳ ಆತ್ಮ ಆ ಜಿಲ್ಲೆಯಲ್ಲಿ ಈಗಲೂ ಗಾಳಿಯಂತೆ ಸುಳಿಯುತ್ತಿರಬೇಕು, ಸೋಂಕುತ್ತಿರಬೇಕು.

ನಮ್ಮ ಕ್ರಿಕೆಟ್ ಟೀಂ ಗೆದ್ದರೆ ನಾನು ಅವರ ಮುಂದೆ ಬೆತ್ತಲಾಗಿ ನಿಲ್ಲುತ್ತೇನೆ ಅಂತ ಸ್ಟೇಟ್‍ ಮೆಂಟ್ ಕೊಟ್ಟ ಪೂನಂ ಪಾಂಡೆಯ ಹೇಳಿಕೆಯನ್ನ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿದವು. ರಾತ್ರಿಕಳೆದು ಬೆಳಗಾಗುವುದರೊಳಗೆ ಅವಳ ಹೆಸರು ಗಡಿನಾಡ, ಆಡು ಮೇಯಿಸುವ ಹುಡುಗನ ಬಾಯಲ್ಲೂ ಹರಿದಾಡುತ್ತಿತ್ತು. ಅದಕ್ಕೂ ಮೀರಿದ ಸಂಗತಿಯೆಂದರೆ ಆಟಕ್ಕೂ ಮುಂಚೆಯೇ ಆಕೆ ಬಹುತೇಕ ಬೆತ್ತಲಾಗಿದ್ದಳು ಮಾಧ್ಯಮಗಳಲ್ಲಿ!

ಹಾಗೆಂದು ಗುರುಬಸವಿಯೂ ಪೂನಂಳೂ ಒಂದೇ ಅಲ್ಲ. ಅವಳು ಬೆತ್ತಲಾದ ಕಾಲ, ಸಮಾಜ, ಪರಿಸ್ಥಿತಿ ಮತ್ತು ಉದ್ದೇಶಗಳಿಗೂ, ಇವಳು ಬೆತ್ತಲಾದ(!) ಕಾಲ, ಸಮಾಜ, ಪರಿಸ್ಥಿತಿ, ಮತ್ತು ಉದ್ದೇಶಗಳಿಗೂ ಏನೇನೂ ಸಂಬಂಧವಿಲ್ಲ. ಆದರೆ "ನೀನು ಬೆತ್ತಲು ನಿಂತರೂ ನಾವು ನೋಡುವುದಿಲ್ಲ. ಮಾನವುಳ್ಳವರು ನಾವು" ಅಂತ ಅವಳಿಗೂ ಯಾರೂ ಹೇಳಲಿಲ್ಲ ಮತ್ತು ಇವಳಿಗೂ. "ಮಾನವಿದ್ ನನ್ನಮಕ್ಳು ನೀವಾಗಿದ್ರ ಇಲ್ಲಿಗಂಟಾ ಯಾಕ್ ಬತ್ತಿದ್ರಿ? ಕಣ್ ಮುಚ್ಕಂಡ್ ಹಟ್ಟೀಲೇ ಬಿದ್ಕತಿದ್ರಿ" ಅಂತ ಒಂದೇ ಸಾಲಲ್ಲಿ ಎಲ್ಲವನೂ ಹೇಳಿಹೋದ ಗುರುಬಸವಿ ಎಲ್ಲಿದ್ದೀಯೇ?

English summary
Story of a woman Gurubasavi, who challenged the society with her guts by walking naked around the tank in front of entire village, shaming the leaders in Chamarajanagar. This Kannada essay is one chapter of Kannada column by young writer Kusumabaale published in Avadhi magazine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X