ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರ್ರೀ ಲೇ ಇಲ್ಲೇ ನನ್ನ ಉಳ್ಳಾಗಡ್ಡಿ ರೊಕ್ಕ ಕೊಡಿಸ್ರೋ!

By ಉಪೇಂದ್ರ ಕಗಲಗೊಂಬ
|
Google Oneindia Kannada News

ಮಟ ಮಟ ಮಧ್ಯಾಹ್ನ; ಟಾಯೆಮ್ 2 ಆಗಿತ್ತ್. ಸಿಕ್ಕಾಪಟಿ ಬಿಸಿಲ ಬ್ಯಾರೆ! ನಮ್ ಯಂಕ ಬಾಳ್ ಸುಸ್ತ್ ಆಗಿದ್ದ. ಆಗತಾನ ಹುಬ್ಬಳ್ಳಿ ಎಪಿಎಂಸಿಗೆ ಹೋಗಿ 2 ಎಕರೆದಾಗ ಬೆಳಿದಿದ್ದ 50 ಕ್ವಿಂಟಾಲ್ ಉಳ್ಳಾಗಡ್ಡಿ ಮಾರಿ ವಾಪಸ್ ತನ್ನ ಊರ ಕಲಘಟಿಗೆ ಹೋಗಾಕ, ಹುಬ್ಬಳ್ಳಿ ಹಳಿ ಬಸ್ಟ್ಯಾಂಡಿಗೆ ಬಂದಿದ್ದ. ರಣ ಬಿಸಲಿಗೆ ಯಂಕನ ಮಕಾ ಮಂಕ್ ಆಗಿತ್ತ್.

ನೀರಡಿಶಿ ಆದಾಗ್ಲೆಲ್ಲಾ, ಬಾಯಾಗ ನೀರ್ ಹಾಕ್ಕೊಂಡೊಮಿಗ್ಲೆ ಎಲ್ಲಾ ಕಡೆ ಬಳ ಬಳ ಅಂತ ನೀರ ಇಳಿತ್ತಿತ್ತ್. ಬೆವರಿನ ಮಹಾತ್ಮೆ ಹೆಂಗ್ ಇತ್ತ್ ಅಂದ್ರ, ಯಂಕನ ಪಂಚಿ-ದೊತ್ರದ ಹೊಲಸ ನಾತಾ ಮತ್ತ್ ಅವ್ನೂ ಹವಾಯ್ ಚಪ್ಪಲಿನೂ ಕುಂಯ್-ಕುಂಯ್ ಅಂತ್ ಸವಂಡ ಮಾಡೂವಷ್ಟ್ರ ಮಟ್ಟಿಗೆ ಯಂಕ ಬೆಂದ ಹೋಗಿದ್ದ. ತನ್ನ ಊರ ಬಸ್ ಬರುವಲ್ಲಿ ಅಲ್ಲೇ ಕಟ್ಟಿ ಮ್ಯಾಗ ತನ್ನ ಕೈಚೀಲ ಎದಿಗೆ ಅದುಮಿಕೊಂಡ ಬಸ್ ಬರೂ ಹಾದಿ ನೋಡಕೋತ ಕುಂತ.

ತನ್ನ 2 ಎಕರೆ ಹೊಲದಾಗ ಉಳ್ಳಾಗಡ್ಡಿ ಬೆಳೆದ ಪರಿ ಮತ್ತ್ ನೀರಿನ ಸೆಲಿ ಇಲ್ಲದ ಒಣ ಭೂಮ್ಯಾಗ ತಾನು ಪಟ್ಟ ಕಷ್ಟ ನೆನಿಸಿಕೊಂಡ ಒಬ್ನ ಯೋಚನಿಮಗ್ನದಾಗ ಯಂಕ ಮುಳುಗಿದ್ದ. ಇವತ್ತ ತನ್ನ ಗೆಳೆಯ ರಾಮ್ಯಾನ ಟ್ರ್ಯಾಕ್ಟರನ್ಯಾಗ ಅವ ಬೆಳಿದ ಉಳ್ಳಾಗಡ್ಡಿ ಜೊತಿ ತನ್ನ ಉಳ್ಳಾಗಡ್ಡಿನೂ ತುಂಬಿಸಿ ಎಪಿಎಂಸಿಗೆ ಕಳಿಸಿದ್ದ. ಇದ್ರಿಂದ ಬಾಡಗಿ ಖರ‍್ಚು ಉಳಿಸುವಂಗ ಮಾಡಿದ್ದ ರಾಮ್ಯಾನ ಸಹಾಯ ನೆನಿಸಿಕೊಂಡ ಮನಸ್ಸ್ಯಾಗ ಕೊಂಡ್ಯಾಡಿದ. [ಇನ್ನೊಂದು ಕಥೆ : ಸೇಡಿಗಾಗಿ ಚಡಪಡಿಸುತ್ತಿದ್ದ ಕೊಲೆಗಾರನ ಕೆಂಗಣ್ಣು!]

Poor onion farmer in Hubballi bus stand

ಇನ್ನೊಂದ್ಕಡೆ, ತನ್ನ ಹೆಂಡತಿ ಮಾದೇವಿಗೆ ಹುಷಾರಿಲ್ಲ. ಕೆಮ್ಮು-ಜ್ವರ ಮತ್ತ ಗಂಟಲ ಬ್ಯಾನಿ ಅಂತ ನಾಲ್ಕೈದ ವಾರದಿಂದ ಬಳಲಾಕತ್ತಾಳ. ಇಷ್ಟ ಇದ್ರೂನೂ ಹೊಲದಾಗ ಕೆಲಸ ಮಾಡಿ ತನ್ನ ಜೀವ ಸವಿಸ್ತಿರುವುದಕ್ಕ ಮಾದೇವಿ ಬಗ್ಗೆ ಮರುಗತೋಡಗಿದ. ಮನಿಗೆ ಹೋದ ಕೂಡಲೇ ಮಾದೇವಿನ ದವಾಖಾನಿಗೆ ಕರ‍್ಕೊಂಡ ಹೋಗಬೇಕ್ ಅಂತೇಲೆ ತನ್ನ ಕೆಲಸ ಮುಗಿದ ಕೂಡಲೇನ ರಾಮ್ಯಾಗ ಹೇಳಿ ಎಪಿಎಂಸಿಯಿಂದ ಹುಬ್ಬಳ್ಳಿ ಬಸ್ ಸ್ಡ್ಯಾಂಡಗೆ ಬಂದಿದ್ದ. ಅವ್ನೌನ ಇನ್ನೂ ಬಸ್ ಬರವಲ್ದ ಅಲ್ಲಾ ಅಂತ ಯೋಚನಿಮಗ್ನದಿಂದ ಹೊರಬಂದ ಯಂಕ ಬಸ್ ಬರೂ ಹಾದಿ ನೋಡಿದ.

ಅಷ್ಟೊತ್ತಿಗೆ ಒಬಾಕಿ ಹೆಣ್ಣಮಗಳು ಸಾವಕಾಶ ಯಂಕನ ಬಾಜು ಬಂದ ಕುಂತ್ಲ. ಇವನನ್ನ ಮೈಲಿಂದ ಕೆಳಗ ನೋಡಿ, ಇನ್ನಷ್ಟ ಯಂಕನ ಸನೆಕ ಸರದ್ಲು. ಯಂಕ ತನ್ನ ಬಾಜು ಕುಂತ್ ಹೆಣ್ಣ್‌ಮಗಳನ್ನ ನೋಡಿ "ಏನ ಗೌಡಶೇನಿ ಬಸ್ಸಿಗೆ ಕಾಯಕತ್ತಿರನ" ಅಂತ ಕೇಳಿದ. ಆ ಹೆಣ್ಣಮಗಳು ಒಮಿಂಗ್ಲೆ ತಡವರಿಸಿಕೊಂಡ್ "ಹ್ಹಾ...ಹೌದ ನೋಡ ಮಾಮಾ. ಬಾಳೊತ್ ಆತು ಬಸ್ಸಿನ ಹಾದಿ ನೋಡಾಕತ್ತ್, ಆಗಲೇ ಬಾರಾಕ ಇತ್ತು, ಬರುದ್ರಾಗ ಹೋಗಿತ್ತ್. ಇನೇನ್ ಬರೂ ಟಾಯೆಮ ಆಗೇತಲ ಮಾಮಾ. ಬಂದಕೂಡ್ಲೆ ಇಬ್ರೂ ಹೋಗುನಂತ" ಅಂತ ಹೇಳಿ ಯಂಕನ ಕಬರ‍್ಕೊಂಡ ತಿನ್ನುವಂಗ ನೋಡಾಕತ್ತಿದ್ಲು.

ಇಕಿ ಮಾತಿನ ದಾಟಿ ನೋಡಿ ಯಂಕ ಯಾಕೋ ತನ್ನ ಟಾಯೆಮ ಸರಿ ಇಲ್ಲ ಅಂತ ಸುಮ್ಮನ ಕುಂತ ಜಾಗದಿಂದ ಎದ್ದ್ ಪಕ್ಕದ್ ಇನ್ನೋದ ಕಟ್ಟಿ ಮ್ಯಾಗ ಕುಂತ. ಈ ಪಿಕ ಅಂತೂ ಉಳ್ಳಾಗಡ್ಡಿ ಆತು; ಈಗ ಯಾವ ಬೆಳಿ ಹಾಕ್ಲಿ..? ಏನ ಕಬ್ಬ ಹಾಕ್ಲಿ..? ಕಬ್ಬ ಹಾಕಿದ್ರ ಅದಕ್ಕ ನೀರ ಜಾಸ್ತಿ ಬೇಕ. ಅಷ್ಟ ಅಲ್ದ, ಬೆಳಿ ಕಟಾವಿಗೆ ಬರಾಕ ಒಂದ ವರಸ(ವರ್ಷ) ಕಾಯಬೇಕ. ಇಲ್ಲಾ...ಸೇಂಗಾ ಹಾಕ್ಲಿ..? ಅದಾದ್ರ ಉಲ್ಲಾಗಡ್ಡಿಗತೇ 4 ತಿಂಗಳ ಸಾಕ ಬೆಳಿ ಬರಾಕ. ಆದ್ರ ಹುಳದ ಕಾಟಾ ಬಾಳ ಇರತೈತಿ. ಮತ್ತ್ ಮಾರ್ಕೆಟನ್ಯಾಗ ಹೌದನ್ನುವಷ್ಟ ಸೇಂಗಾಕ ಬೆಲಿನೂ ಇಲ್ಲಾ. ಇವನೌವ್ನ ಈ ಒಣ ಭೂಮ್ಯಾಗ ಏನ ಬೇಳಿಲಿ ಅಂತ ಯಂಕ ತಲಿ ಕೆಡಸ್ಕೊಂತ ಕುಂತ. [ಮಗದೊಂದು ಕಥೆ : ಯುಗಾದಿ ಹಬ್ಬ ಮತ್ತು ಇಸ್ಪೀಟ್ ರಾಜನ ನಸೀಬ]

ಉತ್ತರ ಕರ್ನಾಟಕದಾಗ ಬಾಳ ರೈತ್ರು ಬರಡ ಭೂಮ್ಯಾಗ ಒಕ್ಕಲತನ ಮಾಡ್ತಾರ. ತಮ್ಮ ಉಸ್ರು ಇರುವರ‍್ಗೂ ನೀರ ಇಲ್ಲದ್ ಒಣ ನೆಲದಾಗ ಹಸರ ಕಾಣಸ್ತಾರ. ಈ ಸರ್ಕಾರಂತೂ ನಮ್ಮ ಹತ್ರ ಸುಳಿಯುವುದು ಚುನಾವಣೆ ಹತ್ರ ಬಂದಾಗಷ್ಟ. ಬ್ಯಾಡಾದವರಿಗೆಲ್ಲಾ ಅನ್ನ ಭಾಗ್ಯ ಅಂತ ಕೊಟ್ಟ ನಮ್ಮ ಬೆಳದ ಬೆಳೀಗೆ ಬೆಲೆ ಇಲ್ಲದಂಗ ಮಾಡ್ಯಾರ. ಇಷ್ಟೆಲ್ಲಾ ತ್ರಾಸನ್ಯಾಗ ರೈತ್ರು ಸಾಲ ತೀರಸಾಕ ಆಗದ ಸಾಯಾಕತ್ತಾರ, ಕಳಸಾ ಬಂಡೂರಿ ಸಲವಾಗಿ ಉಗ್ರ ಹೋರಾಟ ಮಾಡಾಕತ್ರುನೂ ಇವ್ರಿಗೆ ಯಾವ್ದು ಕಬರ ಇಲ್ಲಾ. ಈ ಎಲ್ಲಾ ಅನುಭವಿಸು ಬ್ಯಾನಿ(ನೋವು), ಸರ್ಕಾರದ ಮೇಲಿನ ಸಿಟ್ಟು, ಈ ಎಲ್ಲಾ ವಿಚಾರಗಳನ್ನ ತಲ್ಯಾಗ ತುಂಬಿಸ್ಕೊಂಡಿದ್ದ ಯಂಕ.

ಯಾರೋ ತನ್ನ ಮುಂದ ಬಂದ ನಿಂತಂಗಾತು. ಯಂಕ ತಲಿಯೆತ್ತಿ ನೋಡ್ತಾನ, ಒಮಿಗ್ಲೆ ಗಾಬರಿ! ತಾನ ಮೊದಲ ಕುಂತಿದ್ದ ಕಟ್ಟಿ ಮ್ಯಾಗ ಬಾಜು ಹೆಣ್ಣ್ ಮಗಳ ಯಂಕನ ಮುಂದ ಬಂದ ನಿಂತಾಳ. "ಯಾಕವ್ವ ಏನಾತು ಹಿಂಗ್ಯಾಕ ನನ್ನ ಮುಂದ ಬಂದ ನಿಂತಿ" ಅಂತ ಮೆದು ಧ್ವನಿ ತಗದು ಕೇಳಿದ ಯಂಕ. "ಯಾಕ, ಮೈಯಾಗ ಆರಾಮ ಐತಿಲ್ಲೋ. ನನ್ನ ಒಬ್ಬಾಕಿನ್ನ ಅಲ್ಲಿ ಬಿಟ್ಟ್ ಇಲ್ಲಿ ಬಂದ ಕುಂತಿ." ಅಂತ ಸಿಟ್ಟಿಲೇ ಬಾಯ್ ಮಾಡಾಕ ಚಾಲು ಮಾಡಿದ್ಲು. ಯಂಕಗ ಏನು ತಿಳೀವಲ್ದು. ಈಕೀ ಯಾಕ ಬಾಯಿ ಮಾಡಾಕತ್ತಾಳಂತ! "ಬಸ್ ಸ್ಟ್ಯಾಂಡನ್ಯಾಗ ಹಿಂಗ ಎಲ್ಲರ ಮುಂದ ಬಾಯಿ ಮಾಡಬ್ಯಾಡವ್ವ. ನೀ ಯಾರು, ನಿನಗ ಏನ ಬೇಕಾಗೇತಿ? ಹೇಳ" ಅಂತ ಆ ಕೇಳಿದ.

"ಕಟ್ಕೊಂಡ ಹೆಂಡ್ತಿನ ಯಾರ ಅಂತ ಕೇಳ್ತಿಯೇನ. ನಿನ್ನಂತ ಕುಡುಕ ಗಂಡನ ಕಟ್ಕೊಂಡ ನಾನ ದಿನಾ ಸಾಯಾಕತ್ತೀನಿ. ಈಗ ನನ್ನ-ಮಕ್ಕಳನ್ನ ನಡು ನೀರಾಗ ಬಿಟ್ಟ್ ಹೊಂಟ್ಟಿಯಾ?" ಅಂತ ಬೈದ್ಲು. ಅಕೀನ ಮಾತ ಕೇಳಿ ಅಂಜಕಿಯಿಂದ "ನೋಡು, ನೀ ಯಾರ‍್ನೋ ನೋಡಿ ನಿನ್ನ ಗಂಡ ಅಂತ ತಿಳ್ಡೊಂಡಿ. ನೀ ಯಾರೋ-ಏನೋ ಗೊತಿಲ್ಲ. ನೀ ಮನಿಗೆ ನಡಿ ನಿನ್ನ ಗಂಡ ಮನಿಗೆ ಬರ‍್ತಾನ" ಅಂತ ಯಂಕ ಎದ್ದು ಮುಂದ ಹೋಗಾಕ ಹೋಕ್ತಾನ, ಅಷ್ಟ್ರಾಗ ಒಬ್ಬ ಗಂಡಮಗ ಬಂದ ಯಂಕನ ಹೆಗಲ ಮ್ಯಾಗ ಕೈ ಹಾಕಿ ನಿಲ್ಲಿಸಿ, "ಯಾಕಲೇ ಮಾಮಾ, ನನ್ನ ತಂಗಿನ ನಿನಗ ಮದುವೆ ಮಾಡಿ ಕೊಟ್ರ, ನೀನ ಹಿಂಗಾ ಮಾಡೂದು..! ಈಗ ಹೆಚ್ಚಿಗೆ ಏನೂ ಮಾತಾಡಾಂಗಿಲ್ಲ. ಸುಮ್ಮನ ಮನಿಗೆ ನಡಿತ್ತಿರಬೇಕ ಅಷ್ಟ. ನಡಿ-ನಡಿ ಮನಿಗೆ" ಅಂತ ಅಂಗಿ ಕಾಲರಗೆ ಕೈ ಹಾಕಿದ.

ಯಂಕಗ ಬಾಳ ಅಂಜಕಿ ಆತು. ಇವ್ರು ಯಾರೋ ಏನೋ ನನ್ನ ಯಾಕ ಗೋಳ ಹೋಕೊಳಾಕತ್ತಾರೋ ಅಂತ ದಿಕ್ಕ ತೋಚದಂಗಾತು. ಆ ಗಂಡಮಗ ಮತ್ತ ಆ ಹೆಣ್ಣ್ ಮಗಳು ಯಂಕನ ದಬ್ಬಕೊಂಡ ಹೊಂಟಿದ್ರು. ಈಷ್ಟೊತಿಗಾಗ್ಲೆ ಜನನೂ ಗುಂಪು ಕೂಡಿತ್ತು. ಯಂಕಗ ಮನಸ್ಸಿಗೆ ಗಾಸಿಯಾಗಿತ್ತು, ತನ್ನ ಸ್ವಾಭಿಮಾನಕ್ಕೂ ಧಕ್ಕೆಯಾಗಿತ್ತು. ಗಂಡಮಗನನ್ನ ತಡೆದು ನಿಲ್ಲಿಸಿ "ಯಾಕ್ರಿಲೇ, ಸುಮ್ನ ಅದನ ಅಂತ ಬಿಟ್ರ ಬಾಳ ಮಾಡಾಕತ್ತಿರಿ. ನಿಮ್ಮ ನಾಟಕ ನನ್ನ ಹತ್ರ ಇಟ್ಕೊಬ್ಯಾಡ್ರಿ." ಅಂತ ದಬಾಯಿಸಿದ. ಆ ಹೆಣ್ಣ್ ಮಗಳು ಜೋರ ಅಳತಾ "ಯೆಂತಾ ಗಂಡನ ಕೊಟ್ಯೋ ದೇವ್ರ, ಕುಲಿ ಮಾಡಿ ಮನಿ ನಡೆಸಾಕಿ ನಾನು, ಮಕ್ಕಳನ್ನ ನೋಡತ್ತಿರಾಕಿ ನಾನು, ಇಂತ ಕುಡಕನ ಗಂಡನಿಂದ ಚಿತ್ರಹಿಂಸೆ ಅನುಭವಿಸಾಕಿ ನಾನ!" ಅಂತ ಕಿರಚಾಕತ್ಲು.

ಆ ಹೆಣ್ಣ್‌ಮಗಳ ಮತ್ತ್ ಅವಳ ಜೊತಿ ಬಂದ ಗಂಡಮಗ ಯಂಕ ಜಗ್ಗೊತ್ತ ಕರ‍್ಕೊಂಡ ಹೋಗ್ತಿದ್ರು. ಯಂಕನ ಜನರ ಕಡೆ ಕೈ ಮುಗುದ "ನೋಡ್ರಿ, ನನ್ನ ಊರ ಕಲಘಟಿಗಿ. ನನ್ನ ಮನಿ ಮತ್ತ್ ಹೆಂಡ್ತಿ ಇರೋದೆಲ್ಲಾ ಕಲಘಟಿಗ್ಯಾಗ. ಇವರ‍್ಯಾರೋ ನನಗ ಗೊತ್ತಿಲ್ಲ" ಅಂತ ಬೇಡಕೊಂಡ. ಅಲ್ಲಿ ಸೆರಿದ್ದ ಜನ ಯಂಕನ ಮೈಲೆ ಸಿಟ್ಟ ಬಂದಿತ್ತ್. ಇವ ಯೆಂತಾ ಗಂಡಮಗ, ತನ್ನ ಹೆಂಡ್ತಿಗೆ ಮೋಸ ಮಾಡಾಕತ್ತಾನ ಅಂತ ಜನ ಯಂಕಗ ಬೈಯಾಕ ಚಾಲು ಮಾಡಿದ್ರು.

ಕಡಿಕ ಆ ಗಂಡಮಗ, ಯಂಕನ ಹೆಗಲಮ್ಯಾಗಿಂದ್ದ ಕೈ ತೆಗದ ಸಿಟ್ಟಿಂದ "ಲೇ ನಿನ್ನವ್ನ ಹಾಳಾಗೊ ಲೇ... ಯೇ ಅಕ್ಕಾ, ಇಂತ ಹುಳ ಯಾಕ ಬೇಕ ನಿನಗ. ನಡಿ-ನಡಿ ಇಂತವ ಇದ್ರೇಷ್ಟು ಬಿಟ್ರೆಷ್ಟು?" ಅಂತ ಹೆಣ್ಣ್ಮಗಳಿಗೆ ಹೇಳಿದ. "ಯೇ ಗಂಡಸ ಇವತ್ತ ನಿನ್ನ ಪಾಲಿಗೆ ಸತ್ತಿ. ನಿನ್ನ ಪಾಪ ನಿನ್ನ ಸುಡತ್ತೈತಿ. ನೋಡತ್ತಿರ ನೀ" ಅಂತ ಹೇಳಿದ ಆ ಹೆಣ್ಣ್ಮಗಳು, ತನ್ನ ಜೊತಿಗಿದ್ದ ಗಂಡಮಗನ ಕರ‍್ಕೊಂಡ ಹೊಂಟ್ಲು. ಯಂಕನ ಸುತ್ತ ನೆರಿದಿದ್ದ ಜನದಾಗ ಕೆಲವ್ರು ಇವನ್ ನೋಡಿ ಬಾಯಿಗೆ ಬಂದಾಂಗ ಬೈಯಾಕ ಚಾಲು ಮಾಡಿದ್ರು. ಇನ್ನು ಕೆಲವ್ರು ಸಿಟ್ಟಿಂದ ನೋಡುದು, ಹಲ್ಲ ಮಸಿಯುವುದನ್ ನೋಡಿ ಯಂಕಗ ಬಾಳ ಬ್ಯಾಸರ ಆತು. ತನ್ನ ಮ್ಯಾಗ ತನಗ ಜಿಗುಪ್ಸೆ ಭಾವನಾ ಬಂತು.

ಎಲ್ಲಾ ಶಾಂತ ಆದ ಮ್ಯಾಗ ಜನ ತಮ್ಮ ಪಾಡಿಗೆ ಹೊಕ್ಕಾರ. ಯಂಕ ಮೆಲ್ಲಕ ಸುಧಾರಿಸಿಕೊಳ್ತಾನ. ಒಂದೆರಡ ನಿಮಿಷದ ನಂತರ ಏನೋ ಗಡಬಡ ಆಗೆತೀ ಅಂತ ಯಂಕಗ ಅನ್ಸತ. ತಕ್ಷಣ ಎಚ್ಚೆತ ಯಂಕ ಏನೋ ಹುಡಕಾಕತ್ತ. ತನ್ನ ಹತ್ತೆಕ ಇದ್ದ ಕೈ ಚೀಲ ಇರಲಿಲ್ಲ. ಗಾಬರಿ ಆತು, ಜೋರಾಗಿ ಯಂಕ ಅಳಾಕ ಚಾಲು ಮಾಡಿದ.

ಜನ್ರ ಕಡೆ ನೋಡಿ "ಲ್ರೇ.., ಆ ಇಬ್ರೂ ನನ್ನ ಜೊತೆ ಮಾಡಾಕತ್ತಿದ್ದ ನಾಟಕ ಅಂತ ಎಷ್ಟ ಬಡ್ಕೊಂಡ್ರುನೂ ಯಾರು ಕೇಳಿಲಲ್ರಿಲೇ. ಅವರಿಬ್ರೂ ನನ್ನ ಜೊತಿ ಕೀತಾಡಿ-ಗುದ್ದಾಡಿ ನನ್ನ ಉಳ್ಳಾಗಡಿ ಮಾರಿದ್ದ ದುಡ್ಡೆಲ್ಲಾ ತುಡುಗ್ ಮಾಡ್ಕೊಂಡ ಹೋದ್ರಲೇ..! ನಿವೆಲ್ಲಾ ಆ ಹೆಣ್ಣ್ ಮಗಳು ಮತ್ತ್ ಆ ಗಂಡಮಗದ ನಾಟಕ ನೋಡಿ ಅದನ್ನ ನೀವ್ ನಂಬಿ ನನಗ ಬೈದ್ರಿ, ಶಾಪ ಹಾಕಿದ್ರಿ, ನನ್ನ ತಪಿತಸ್ಥನ ಜಾಗದಾಗ ನಿಲ್ಲಿಸಿದ್ರಿ. ಒಂದ ಹೆಣ್ಣ್ ಮಗಳ ಇಷ್ಟೋತಾಕ ನನ್ನ ಮ್ಯಾಗ ಏನೇನೋ ಆರೋಪ ಮಾಡಿದ್ಲ. ಅಕಿಕಡೆ ಅನಬಾರದೆಲ್ಲಾ ಅನ್ನಿಸ್ಕೊನ್ನಿ. ಆ ಗಂಡ ಮಗ ಮತ್ತ್ ಆಕಿ ನನ್ನ ಎಳೆದಾಡಿದ್ರು. ನೀವೆಲ್ಲಾ ಅದನ್ನ ನಂಬಿದ್ರಿ. ಬರ್ರೀ ಲೇ ಇಲ್ಲೇ. ನನ್ನ ಉಳ್ಳಾಗಡ್ಡಿ ರೊಕ್ಕ ಕೊಡಿಸ್ರೊ. ನನ್ನ ಮಾದೇವಿ ಹಾಸಿಗೆ ಹಿಡದಾಳ, ದವಾಖಾನಿಗೆ ಹೋಗಬೇಕ ರೊಕ್ಕ ಕೊಡಿಸ್ರೋ" ಅಂತ ಹುಚ್ಚನ ತರ ಒದರಾಡಾಕತ್ತ. ಈಗ ಯಾವ ಜನನೂ ಯಂಕ ಸನೆಕ ಹಾಯಲಿಲ್ಲ.

ಕಡಿಕ ವಾಪಸ ಎಪಿಎಂಸಿಗೆ ಹೋಗಿ ತನ್ನ ಗೆಳೆಯ ರಾಮ್ಯಾನ ಹತ್ರ ಹೋಗಿ ಆದ ಘಟನಾ ಎಲ್ಲಾ ತಿಳಿಸಿದ. ರಾಮ್ಯಾಗ ಬ್ಯಾಸರ ಆತು. ಯಂಕಗ ಧೈರ್ಯ ತುಂಬಿದ. ಊರಿಗೆ ಕರ‍್ಕೊಂಡ ಹೋಗಿ ಯಂಕಗ ಮನಿ ಖರ್ಚಿಗೆ ಹಣದ ಸಹಾಯ ಮಾಡಿದ. ಮಾದೇವಿಗೆ ದವಾಖಾನಿಗೆ ತೋರಿಸಿದ.

ಯಂಕ ದೃತಿಗೆಡದ ಆದದೆಲ್ಲಾ ಮರೆತ ಹುಮ್ಮಸಿನಿಂದ ಕಷ್ಟಪಟ್ಟ ದುಡಿಯಾಕ ಚಾಲು ಮಾಡಿದ. ಯಂಕನ ನಿಷ್ಟಾವಂತಿಕಿ ಮತ್ತ ಅವ ಪಟ್ಟ ಶ್ರಮಕ್ಕ ಅವನಿಗಿದ್ದ ತೊಂದರಿ ಎಲ್ಲಾ ಸುಧಾರಣೆ ಆಗಾಕತ್ತು. ರಾಮ್ಯನ ಕಷ್ಟದಾಗೂ ಭಾಗಿ ಅವನ ತೊಂದರಿಗೆ ಯಂಕ ಸಹಾಯ ಮಾಡಿದ. ಇಬ್ರೂದು ಗೆಳೆತನ ಇನ್ನಷ್ಟ ಗಟ್ಟಿ ಆತು. ಕೊನಿಗೆ ಯಂಕನ ಬಾಳೆದಾಗ ಸ್ನೇಹನ ಕೈ ಹಿಡಿತು.

English summary
A Kannada short story Upendra from Hubballi. North Karnataka is hit by drought, farmers are committing suicide due to failure of crops. The author here weaves a story around the plight of a onion grower, who is fight for his crops. To add salt to the wounds he gets duped by a lady.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X