ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಟರ್ ಪ್ಯೂನ್ ಸಿದ್ದಪ್ಪ, ಮತ್ತ ಅವನ ಮಗಳ ಮದವಿ!

By ಟಿಪಿ ವ್ಯಾಸಮುದ್ರಿ, ಧಾರವಾಡ
|
Google Oneindia Kannada News

ಕೋಳಿ ಕೂಗದ ಮುನ್ನ ಆರು ಏಳದ ಮುನ್ನ ಎಂಬ ಸರ್ವಜ್ಞ ವಚನದಂತೆ, ಈ ಮಾತು ತಿಳಿದಿತ್ತೋ ಇಲ್ಲವೋ (ಖಾತ್ರಿ ತಿಳಿದಿಲ್ಲ) ಆದರೆ ಆ ಆದರ್ಶವನ್ನು ತಪ್ಪದೆ ಪಾಲಿಸುತ್ತಿರುವದಂತೂ ಅಗದೀ ಖರೆ. ಸಿದ್ದಪ್ಪನ ದಿನ ಸುರು ಆಗೋದೇ ನಸುಕಿನ ನಾಕು ನಾಕೂವರೆ ಗಂಟೆಗೆ (ಬ್ರಾಹ್ಮೀ ಮುಹೂರ್ತದಲ್ಲಿ).

"ಸರ್ ನಿಮ್ಮ ಗಡಿಯಾಳ ಬ್ಯಾಡ, ಕೀಲೀ ಕೊಡೂದು ಬ್ಯಾಡ, ಅದು ಗಂಟೀ ಹೊಡೂದು ಬ್ಯಾಡ. ನನಗ ಬರೋಬ್ಬರಿ ನಾಕಕ್ಕ ಬಡದ ಎಬ್ಬಿಸಿಧಂಗ ಎಚ್ಚರ ಆಕ್ಕತ್ರಿ. ಮುಂದ ಮಕ್ಕೊಂಡ್ರೂ ನಿದ್ದಿ ಹತ್ತಂಗಿಲ್ಲ್ರಿ. ಅದಕ್ಕ ಎದ್ದs ಬಿಡ್ತೆನ್ರಿ" ಅಂತ ಅವನೇ ಹೇಳ್ತಿದ್ದ.

"ಎದ್ದವನs ಮುಂಜಾನೆ ಕಾರ್ಯಕ್ರಮ ಮುಗಿಸಿ, ದನಕ್ಕ ಆಡಗೋಳಿಗಿ ಮೇವ್ ಹಾಕಿ, ನಸಕ ಹರಿತಂದ್ರ ಕೋಳಿ ಗೂಡಿನ ಬಾಗಲಾ ತಗದಕ್ಯಾಸ್, ಅವುನ್ನ್ ಹೊರಗ ಬಿಟ್ಟ ಬಂದ ಒಂದ ಕಪ್ಪ ಛಾ ಹೊಡಿತೀನ್ರಿ. ಅಲ್ಲಿಂದ ಎಮ್ಮಿ ಹಿಂಡತೀನ್ರಿ ಆ ಮ್ಯಾಗ ಸ್ವಲ್ಪ್ ಹೊತ್ತ ಬಿಟ್ಟ ಜಳಕಾ ಮಾಡ್ತೀನ್ರಿ. ಅಷ್ಟರಾಗ್ ಮುದಿಕಿ (ಹೆಂಡತಿ) ಬಿಸಿ ರೊಟ್ಟಿ ಮಾಡಿರ್ತಾಳ, ಎಡ್ ಕಟದು ಎಡ್ ಕಟಗೊಂಡು ಆಪೀಸ್ಗೆ ಹೊಂಡೂದ್ರಿ" ಅಂತ ಸವಿಸ್ತಾರ ಹೇಳಾವ ನಮ್ಮ ಸಿದ್ದಪ್ಪಾ.

ಆವಾ ಸಪ್ತಾಪುರದಾಗ ಒಬ್ಬರ ಬಂಗಲೆ ಕಾಯ್ಕೊಂಡು ಅದರ ಔಟ್ ಹೌಸ್ ದೊಳಗ ಇರ್ತಿದ್ದ. ಅವರು ವರ್ಗ ಆಗಿ ದೂರದ ಕಲಕತ್ತಾದಾಗ ಇರ್ತಿದ್ರಂತ. ಆ ಬಂಗ್ಲೇದ ದೆಖರೇಕಿ ಇವನದs. ಹ್ಹೀಂಗ ಇರೋಮುಂದ ಆ ಬಂಗ್ಲೇಕ್ಕ ಅವರ ಆಫೀಸಿನವರೆ ಒಬ್ಬರು ವರ್ಗ ಆಗಿ ಬಂದರು. ಸಿದ್ದಪ್ಪ ಆಡು, ಕೋಳಿ ಒಂದ ಎಮ್ಮಿ ಸಾಕೊಂಡಿದ್ದ. ಹಾಲು ಮಾರ್ತಿದ್ದ. ಹೊಸದಾಗಿ ಬಂದ ಸಾಹೇಬರ ಮನೆಗೂ ಹಾಲು ಹಾಕ್ತಿದ್ದ. ಅಲ್ಲೇ ಔಟ್ ಹೌಸ್ ನ್ಯಾಗ್ ಇದ್ದದ್ದರಿಂದ, ಮತ್ತ ಅವನ ಒಳ್ಳೆಯ ಸ್ವಭಾವ ನೋಡಿ ಆ ಸಾಹೇಬರು ಒಂದು ಹೊಸ ಎಮ್ಮೀನೆ ಕೊಡಿಸಿದ್ರ೦ತ. ಇದನ್ನ ನೀನೆ ಸಾಕ್ಯೋ ಮತ್ತ ನನಗ ದಿನಾ 2 ಸೇರು ಛಲೋ ಹಾಲು ಕೊಡು ಅಂತ ಹೇಳಿದರ೦ತ.

Peon Siddappa and his daughter's marriage

ಹೀಂಗs ಹಾಲು, ತತ್ತಿ, ಆಡು ಮಾರಿ ಅಂತೂ ಇಂತೂ ಬಡತನದ ಬಾಳೇ ಸಾಗಿಸಿದ್ದ ಸಿದ್ದಪ್ಪ. ಮುಂದ 3 ವರ್ಷಕ್ಕ ಆ ಸಾಹೇಬರಿಗೆ ಬ್ಯಾರೆ ಕಡೆ ಬದ್ಲೀ ಆತು. ಆಗ ಅವರು ಸಿದ್ದಪ್ಪನ್ನ ಕರದು ನಿನಗೊಂದು ನೌಕರಿ ಕೊಟ್ರ ಮಾಡ್ತೀಯೇನು ಅಂತ ಕೇಳಿದರು. ಅದಕ್ಕ ಸಿದ್ದಪ್ಪ ಸಾಹೇಬರ ನಾ ಹೆಬ್ಬಟ್ರೀ. ಸಾಲಿ ಓದಿಲ್ಲ ಬರೆದಿಲ್ಲ ನನಗ ಯಾರ್ ನೌಕರಿ ಕೊಡ್ತಾರೀ ಅಂದ.

ಅದು ಬಿಡು, ಕೊಟ್ರ ಮಾಡ್ತೀ ಏನು ಅಂತ ಮತ್ತ ಕೇಳಿದರು. ಅಂದ್ರ ನಾ ಏನ್ ಮಾಡಬೇಕು ಹೇಳ್ರಿ ಅಂದ. ಏನಿಲ್ಲ ಸಾಹೇಬರ ಖೋಲಿಮುಂದ ಸ್ಟೂಲ್ ಹಾಕ್ಕೊಂಡು ಕೂಡೋದು. ಘಂಟಿ ಆದರ ಒಳಗ ಹೋಗಿ ಅವರು ಏನ್ ಹೇಳ್ತಾರ ಕೇಳೋದು. ಅವರನ್ನ ಕರಿ ಇದನ್ನ ತಗೊಂಡು ಬಾ. ಚಹಾ ತ೦ದು ಕೊಡು ಹಿಂತಾವು. ಏ ಹಿಂತಾ ಕೆಲಸ ಅಂದರ ವಳೆ ಮಾಡ್ತೀನ್ರಿ ಅಂದ. ಆವಾಗ ಸಾಹೇಬರು ಅವನ ಪೂರ್ಣ ಹೆಸರು ಎಲ್ಲಾ ಬರಕೊಂಡರು. ವಯಸ್ಸು ಕೇಳಿದರು. ಹಿಂದಿನ ದೊಡ್ಡ ಬರದಾಗ 4 ವರ್ಸದವ ಇದ್ನೆರಿ ಅಂದ. ಸಾಹೇಬರು ಹಣಿ ಘಟ್ಟಿಸಿಕೊಂಡು 20 ವರ್ಷ ಅಂತ ಬರಕೊ೦ಡರು.

ಆಗ ಅವನಿಗೆ ಸುಮಾರು 35-38 ವರ್ಷ ವಯಸ್ಸಾಗಿರಬಹುದು ಅಂತ ಅಂದಾಜು. ಆವಾಗೆನ್ ಎಂಪ್ಲಾಯ್ಮೆಂಟ್ ಎಕ್ಸ್ಚೇಂಜ್ ವಗೈರೆ ಇದ್ದಿದ್ದಿಲ್ಲ. ಮತ್ತ ಇಂಥಾ ಸಣ್ಣ ಜಾಗಾಕ್ಕ ನೆಮಸೂ ಅಧಿಕಾರ ಆ ಸಾಹೇಬರಿಗೇ ಇತ್ತಂತ. ಸಂಜಿನ್ಯಾಗ ಬಂದು ಆರ್ಡರ್ ಕೊಟ್ಟೆ ಬಿಟ್ರು. ಅಂತೂ ಈಗ ಸಿದ್ದಪ್ಪ ಸರಕಾರೀ ನೌಕರ ಆದ. ಆಗಂತೂ ಭಾವುಕನಾದ ಸಿದ್ದಪ್ಪ ಗಪ್ಪನೆ ಸಾಹೇಬರ ಕಾಲ ಹಿಡದ. ಹೇಹೇ ಹಾಂಗೆಲ್ಲ ಮಾಡಬಾರದು. ದೇವರು ನಿನಗೆ ಒಳ್ಳೇದು ಮಾಡ್ಲಿ ಅಂತ ಹರಸಿದರು.

ಮೊದಲನೇ ದಿನ ತಮ್ಮ ಕಾರ್ನ್ಯಾಗೆ ಆಫೀಸಿಗೆ ಕರಕೊಂಡು ಹೋದರು. ಮುಂದ ಒಂದ ಎಂಟ ದಿನದಾಗ ಸಾಹೇಬರು ಬಂಗಲೆ ಖಾಲಿ ಮಾಡಿ ಹೊರಟು ಹೋದರು. ಹೋಗೂಮುಂದ ಹೊಸ ಸಾಹೇಬರಿಗೆ ಇವನ ಬಗ್ಗೆ ಹೇಳಿ ಹೋದರು. ಹೀಂಗ ಸಿದ್ದಪ್ಪನ ನೌಕರಿ ನಡೀತು.

ಮುಂದ ಹೊಸಾ ಹುಡುಗರು ಪ್ಯೂನ್ ಜಾಗಾಕ್ಕ್ ಬಂದ್ರು. ಅವರು ಮ್ಯಾಟ್ರಿಕ್ ತನಕ ಕಲ್ತವರು. ಅವರ ಠೀವಿ, ಅವರ ಡ್ರೆಸ್ ನೋಡಿದರ ಕಾರಕೂನರಿಗಿಂತ ನೀಟಾಗಿ ಇರವ್ರು. ಇವ ಹಳೇ ಕಾಲದ ಅನ್ಪಡ ಸಾದಾ ಮನಶ್ಯಾ. ಮತ್ತ ಸಮವಸ್ತ್ರ ಹಾಕೊಂಡು ನೌಕರಿ ಮಾಡಾವ. ವಯಸ್ಸೂ ಆಗಿದ್ದರಿಂದ ಅವರೆಲ್ಲ ಸಿದ್ದಪ್ಪಜ್ಜ ಅಂತ ಚಾಷ್ಟಿ ಮಾಡ್ತಿದ್ದರು. ಆ ಹೊಸಾ ಪ್ಯುನ್ಸು ಇವಗ ಎಲ್ಲಾ ಸಾಹೇಬರ ಬೆಲ್ ನೀನs ನೋಡು ಅಂತ ಹಚ್ಚಿ ತಾವು ಕ್ಯಾಂಟೀನ್ ದಾಗ ಛಾ ಕುಡಿಯೋದು ಸಿಗರೆಟ್ ಸೇದೂದು ಮಾಡಿಕೊತ ಚೈನಿ ಹೊಡ್ಕೊತ್ ಇರವ್ರು.

ಸರಕಾರೀ ಕಚೇರಿ ಅಂದ ಮ್ಯಾಲೆ ಜನ ತಮ್ಮ ಕೆಲಸಕ್ಕ ಬರವ್ರು. ತಮ್ಮ ಕೆಲಸ ಆದ ಮ್ಯಾಲೆ ಹೋಗೂಮುಂದ ಪ್ಯೂನ್ಗೋಳಿಗೆ ಭಕ್ಷೀಸ್(ಟಿಪ್ಸ್) ಅಂತ ಏನರೆ ಕೊಟ್ಟ ಹೋಗವ್ರು. ಅವರು ಎಷ್ಟು ಇಸಗೊತಿದ್ದರೋ ಏನೋ ಇವಗ ಎಲ್ಲರೂ ಸೇರಿ ದಿನಾ ಒಂದ್ 8-10 ರುಪಾಯಿ ಕೊಡವರು. ಇವನದರೆ ಏನ್ ಗಂಟ ಹೋತು(ಸೋವೀ ಕಾಲ). ಅದರಾಗs ಇವನ ಮ್ಯಾಲಿನ ಖರ್ಚು ಹೋಗ್ತಿತ್ತು.

ಸಂಜೀನ್ಯಾಗ ಆಫೀಸ್ ಬಿಟ್ಟ ಮ್ಯಾಗ ಸೀದಾ ಬಸ್ ಹಿಡದು, ಮೇವಿನ ಪ್ಯಾಟಿಗೆ ಹೋಗಿ, ಮೆವ್ ಮತ್ತ ಒಂದು ಕಾಟಾರ್ (ಇದು ಸಿದ್ದಪ್ಪನ ಭಾಷಾ/ಉಚ್ಚಾರ) (QUARTAR) NINTY, ಪಾಕೀಟ ಮತ್ತ ಸ್ವಲ್ಪ್ ಸೇವು ಖಾರಾ ತೊಗೊಂಡು ಮನಿಗೆ ಹೋಗಿ, ಮೇವಿನ ಹೋರಿ ಒಗದು, ದನಕ್ಕ ಆಡಿಗೆ ಮೆವ್ ಹಾಕಿ, ಕಾಲಾ ಮಾರಿ ತೊಕ್ಕೊಂಡು, ನೀರ ಹಾಕ್ಕೊಂಡು ಅದೊಂದು ಕಾಟರ್ ಹೊಡದು, ಎಂಟ ಎಂಟೂವರೆಗೆ ಬಿಸಿ ರೊಟ್ಟಿ.

ಮುದಿಕೀಗೆ ತತ್ತಿ ಹುರಿ ಅನ್ನಾವಂತ. ಅಕಿ ಹೂ ಇರಲೇಳ್ಎಲ್ಲಾ ನೀನs ತಿಂದ ಕುಂತ್ರ ನಮಗ ಕೈಯಾಗ 2 ದುಡ್ಡ ಆಗೂದು ಬ್ಯಾಡಾ ಅಂತಿದ್ಲಂತ. ಏ ನಿನ್ನೌನ್ ರುಂಡಬಡಿಗಿ ಅಂತ ಬೆದರಿಸ್ತಿದ್ದನಂತ ಆವಾಗ ಮುದಿಕಿ 2 ತತ್ತಿ ದ್ವಾಸಿ (ಆಮ್ಲೆಟ್) ಮಾಡಿ ಕೊಡೋದು. ಇವಾ ಗಡದ್ ಹ್ಹೊಡದು ಊಟ ಆದ ಮ್ಯಾಗ ಒಂದೋ ಎರಡೋ ಬೀಡಿ ಸೇದಿ ಬ್ಯಾಸಗಿ ಇದ್ದರ ಮನಿ ಮುಂದ ಬೈಲಾಗ ಇಲ್ಲಾದರ ಒಳಗ ಹೊರಸಿನಮ್ಯಾಗ ಮುಸಕ ಎಳದನಂದರ ಮತ್ತ ಮುಂಜಾನೆ ನಾಕಕ್ಕ್ ಏಳೋದು. ಇದು ಸಿದ್ದಪ್ಪನ ದಿನಚರಿ.

ಸಿದ್ದಪ್ಪನಿಗೆ ಒಟ್ಟು ನಾಕು ಮಕ್ಕಳು. 2 ಹೆಣ್ಣು 2 ಗಂಡು. ಮೂರ ಮಂದಿ ಲಗ್ನಾ ಮಾಡಿದ್ದ, ಕಡೀ ಹುಡಿಗೀದೊಂದು ಮಾಡಬೇಕಿತ್ತು. ಅದಕ್ಕೂ ಒಂದು ಮನೆತನ ನೋಡಿದ್ದ. ಎರಡ ವರ್ಷದ ಹಿಂದ ಸಿದ್ದಪ್ಪ ಹಲ್ ಸೆಟ್ ಹಾಕಿಸಿಕೊಂಡಿದ್ದ. ಆಫೀಸಿನ ಜನ ಯಾಕೋ ಅಜ್ಜಾ ವಳೆ ಐಟ್ ಆಗೀಯಲ್ಲ ಇನ್ನೊಂದು ಮದಿವಿ ಮಾಡಿಕೊಳ್ಳವ ಅದೀ ಏನು.. ಅಂತ ಕಾಡ್ತಿದ್ದರು. ನನಗ್ಯಾರು ಕನ್ಯಾ ಕೊಡ್ತಾರು ಅನ್ನವ. ಗಂಡಸಿನ ಸ್ವಭಾವ ಅಂದ್ರ ಹಿಂಗs. ನಾ ಒಲ್ಲೆ, ಮುದುಕ ಆಗೀನಿ ಅಂತ ಯಾರೂ ಅನ್ನಂಗಿಲ್ಲ. ನನಗ್ಯಾರು ಕೊಡ್ತಾರು ಅಂತನs ಅನ್ನವರು. ಕೊಟ್ರ ಮಾಡಿಕೊಳ್ಳವ್ರ! ಮುಂದ್ ಹೇಳಾವ ಆಯ್ತಾರಕ್ಕೊಮ್ಮೆ ಮಟನ್ ತರ್ತೀನಿ. ಅದಕ್ಕ ಹಲ್ ಇದ್ದರ ಛಲೋ. ಅದಕ್ಕ ಹಾಕ್ಸೀನಿ ಅಂತ ಹೇಳಾವ.

ಅಂತೂ ಕಡೀ ಮಗಳ ಮದಿವಿ ಫಿಕ್ಸ್ ಮಾಡಿದ, ಆಫಿಸ್ನ್ಯಾಗ ಎಲ್ಲಾರಿಗೂ ಬೇಕಾಕ್ಕೊಂಡು ಇದ್ದ. ಕೆಲವರ ಸಹಾಯ ತಗೊಂಡು ಎಲ್ಲಾ ವ್ಯವಸ್ಥಾ ಮಾಡಿಕೊಂಡಿದ್ದ. ಕಾರ್ಡ ಪ್ರಿಂಟ್ ಆದ ಮ್ಯಾಲೆ ಪ್ರತಿಯೊಬ್ಬರ ಕಡೆ ಹೋಗಿ, "ಸಾಹೇಬರ ನನ್ನ ಮನ್ಯಾಗ ಇದು ಕಡೀ ಮದಿವಿ, ನೀವು ತಪ್ಪದೆ ಬಂದು ಆಶೀರ್ವಾದ ಮಾಡಿ ಊಟಾ ಮಾಡಿಕೊಂಡು ಹೋಗಬೇಕ್ರಿ, ತಪ್ಪಸಬ್ಯಾಡ್ರಿ" ಅಂತ ಅಂತಃಕರಣದಿಂದ ಕರೆದಿದ್ದ.

ಮದಿವಿ ದಿನ ಆಫೀಸಿನ ಕೆಲ ಜನ ಮುಂಜಾನೆನೆ ಛತ್ರಕ್ಕ ಹೋಗಿ ಸಹಾಯಕ್ಕ ನಿಂತಿದ್ರು. 12-15ಕ್ಕ ಅಕ್ಕೀಕಾಳು ಅಂತ ಇತ್ತು. ನಾವೂ ಹನ್ನೊಂದೂವರಿ ಪೋಣೇ ಹನ್ನೆರಡಕ್ಕ್ ಹೋದಿವಿ. ಅಷ್ಟರಾಗ ಸಿದ್ದಪ್ಪನ ಇನ್ನೊಂದು ಅವತಾರ ಸುರು ಆಗಿತ್ತು. ಕಾರಣ ಇಷ್ಟೇ. ಗಂಡಿನ ಬೀಗರ ಪೈಕಿ ಒಂದಿಬ್ಬರು ಬಂದು ನಡುವ ಆದವರಿಗೆ ಸರ್ ಅಕ್ಕೀಕಾಳ್ ಬಿದ್ದ ಮ್ಯಾಗ ಗಡಾನೆ ಊಟಕ್ಕ ಹಾಕಿಸಿಬಿಡ್ರಿ ಅಂದರ ನಮಗ ಕತ್ತಲ ಆಗೂದರಾಗ ನಮ್ಮ ಊರ ಮುಟ್ಟಾಕ ಅನಕೂಲ ಆಕ್ಕೈತಿ ಅಂತ ಹೇಳೂದನ್ನ ಇವ ಕೇಳಿಸಿಕೊಂಡ.

ದಿನಾ ಸಂಜಿಮುಂದ ಕುಡ್ಯಾವ ಅಂದ ಮುಂಜಾನೆನೆ ಒಂದ ಕ್ವಾರ್ಟರ್ ಏರಿಸಿ ಬಿಟ್ಟಾನ. ಬರೀ ಮೈಲೇ, ಬರೆ ಒಂದು ಪಟ್ಟಿಪಟ್ಟಿ ಅಂಡರವೇರ್, ಅದರ ಒಂದ ಕಡೆ ಲಾಡಿ ಮಳಕಾಲ ಮಟ ಜ್ಯೋತಾಡಾಕ ಹತ್ತಿತ್ತು. ಡುಮ್ಮ್ ಹೊಟ್ಟಿ ಬಿಟಗೊಂಡು ಎಡಗಾಲಾಗ ಒಂದು ಹವಾಯಿ ಚಪ್ಪಲ್ ಬಲಗಾಲಾಗಿಂದು ಬಲಗೈಯಾಗ ಹಿಡದಾನ. ಬಿಸಿಲಿಗೆ ಮತ್ತ ಎಣ್ಣಿ ಪ್ರಭಾವಕ್ಕ ತಲಿ ಮತ್ತ ಮೈ ಎಲ್ಲಾ ಬೆವರು ಸುರಿಲಿಕ್ಕೆ ಹತ್ತೆದ. ಬೀಗರಿಗೆ ಬೈಲಿಕ್ಕೆ ಶುರು ಹಚ್ಚ್ಯಾನ.(ಕುಡಿದ ಮನಶ್ಯಾನ ಬುದ್ಧಿ ಸ್ಥಿಮಿತ ಕಳಕೊಳ್ಳುವದು ಗೊತ್ತಿಲ್ಲದ ಸಂಗತಿ ಏನಲ್ಲ.)

"ಇವರೌರ್, ಇದೇ ಈಗರೆ ಎಡ್ಎಡ್ ಪಿಲಿಟ ಫರಾಳ ಬಿಗದ್ದಾರು ಮತ್ತ ಲಗೂ ಊಟ ಅತಾರು. ಕಾಲ್ಮರಿಲೆ ಬಡೀತುನು" ಅಂತ ಎಗರಾಡ್ಲಿಕ್ಕೆ ಹತ್ತಿದ್ದ. ಈ ಸುದ್ದಿ ಗಂಡಿನ ಬೀಗರ ಕಡೆ ಮಂದಿಗೂ ಹೆಂಗೋ ಗೊತ್ತಾತು. ಅವರ ಕಡೆನೂ ಒಬ್ಬ ತಿರಸಷ್ಟ ಇದ್ದ ಅವನೂ ಹಾಕಿದ್ದನೋ ಏನೋ. ಆವಾ, ಅವನೌನ ನಾವು ಗಂಡಿನ ಬೀಗರು ಅನ್ನೂ ಖಬರ್ ಬ್ಯಾಡಾ ಅವಗ. ಈ ಮದಿವೀನ ಮುರಕೊಂಡು ಬಿಡಾಣ. ಊಟ ಬ್ಯಾಡಾ ಉಸಾಬರಿ ಬ್ಯಾಡಾ. ಗಂಟ ಕಟ್ರಿ ಬಸ್ ಎರ್ರಿ ಅಂತ ಒದರ್ಲಿಕ್ಕೆ ಹತ್ತಿದ್ನಂತ.

ಅದರಾಗ ಅವರ ಕಡೆ ಒಬ್ಬಾವ ಏ ಹುಚ್ಚ ಹುಚ್ಚರಗತೆ ಮಾತಾಡಬ್ಯಾಡಾ. ತಾಳಿ ಕಟ್ಟಿ ಆಗೇತಿ. ಇದು ರಕ್ತ ಸಂಬಂಧ ಐತಿ, ಲಗ್ನಾ ಮುರುಕೊಂತಾನಂತ. ಏನ ಹುಡಗಾಟಗಿ ಹಚ್ಚೀ. ಎಲ್ಲಿ ಇಟ್ಟಿ ಬುದ್ದಿ, ನಡಕ ಆಫೀಸ್ ಮಂದಿ ಅದಾರು ಅವರನ್ನ ಕೇಳೂನು ಅಂತ ಹೇಳಿದರೂ ಆವಾ ಅಟಾಪ ಆಗೋಲ್ಲ. ಕಡೀಕೆ ನಡುವ ಆದ ಆಫೀಸ್ ಮಂದೀಗೆ ಗುದುಮುರಿಗಿ ಹಾಕಿ ಇಬ್ಬರನ್ನೂ ಸಮಾಧಾನ ಮಾಡೂತನಕ ರಗಡ ರಗಡ ಆಗಿ ಹೋತು.

ಇಕಾಡಿ ಸಿದ್ದಪ್ಪಗ ಅವರು ಊಟಾ ಮಾಡದೇ ಹೊಕ್ಕಾರಂತ ಅಂಬೋ ಸುದ್ದಿ ಗೊತ್ತಾಗಿ, ರಾಜಕಾರಣಿಗಳಂತೆ ಯುಟರ್ನ್ ಹೊಡದ. ಅವನ ಡಯಲಾಗೇ ಬದಲಿ ಆತು. "ಊಟಾ ಮಾಡದನ ಹೊಕ್ಕಾರಂತs. ಇಷ್ಟೆಲ್ಲಾ ಕರ್ಚ್ ಮಾಡಿ ಕಮ್ಮನ ಅಡಿಗಿ ಮಾಡಿಸಿದ್ದು ಯಾರಿಗಿ. ಇವನೌನ ಊಟಾ ಮಾಡದ ಹೆಂಗ್ ಬಸ್ ಹತ್ತಾರ್. ನಾನೂ ನೋಡ್ತೀನಿ ಕಾಲ ಮುರುದು ಕೈಯಾಗ ಕೊಡ್ತೀನಿ" ಅಂತ ಸುರು ಮಾಡಿದ. ಮತ್ತ ಒಬ್ಬಿಬ್ಬರು ಅವನನ್ ಒಳಗ ಕರಕೊಂಡು ಹೋಗಿ ಇನ್ನೊಮ್ಮೆ ಸ್ವಚ್ಛ ಸ್ನಾನಾ ಮಾಡ್ಲಿಕ್ಕೆ ಹಚ್ಚಿ, ಹೊಸ ಅಂಗಿ ಪ್ಯಾಂಟು ಹಾಕಿಸಿ, ಕರಕೊಂಡು ಬಂದ್ರು.

ಸಾರ್ವಜನಿಕ ಅಕ್ಕಿಕಾಳ ಬಿದ್ದ ಮ್ಯಾಲೆ ಬಫೆ ಚಾಲೂ ಆತು. ಊಟದ ಟೈಮನೂ ಆಗಿತ್ತು. ಅಡಗೀನೂ ಛಲೋ ಆಗಿತ್ತು. ಊಟಾ ಮಾಡಿಕೊಂಡು ಹೊರಬಿದ್ದೆ. ಮನದ ಕೆರೆಯಂಚಿನಲ್ಲಿ ಕಪ್ಪೆಗಳ ವಟ ವಟ ಸಾಗುತ್ತಲೇ ಇತ್ತು. ವೈಶಾಖ ಮಾಸದ ಸೂರ್ಯ ಸೇಡಿನ ಭಾವ ತೊಟ್ಟು ಇಡೀ ಲೋಕವನ್ನೇ ಭಸ್ಮ ಮಾಡಲು ಹೊರಟಿದ್ದಾನೋ ಎಂಬಂತೆ ನೆತ್ತಿಯ ಮೇಲೆ ನಿರ್ದಯವಾಗಿ ಸುಡುತ್ತಿದ್ದ.

English summary
Kannada short story by T.P. Vyasamudri from Dharwad. Uneducated Siddappa somwhow gets government job and ekes out his livelihood. One day he fixes his last daughter's marriage and sets up dramatic action. What happens in the marriage hall? Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X