ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣಕಥೆ : ಓಡಿಬಂದು ಮಣಿಯ ಬೆನ್ನು ತಟ್ಟಿದ್ದ ಕಿಟ್ಟು

By ಮಾಧವ ವೆಂಕಟೇಶ್
|
Google Oneindia Kannada News

ಶ್ರೀಧರ ತನ್ನ ಮುಂದೆ ಕೂತಿದ್ದ ಹುಡುಗನ ಕಡೆ ನೋಡಿದ. ಮಣಿ ಮೆದುವಾಗಿ ನಕ್ಕಿದ. "ಬಾ ಒಂದು ರೌಂಡ್ ಇಲ್ಲೇ ನಡ್ಕೊಂಡು ಬರಣ" ಎಂದು ಹೇಳಿ ಶ್ರೀಧರ, ತನ್ನ ಮೇಜಿನ ಮುಂದೆ ನಡೆದು, ಎದುರಿನಲ್ಲಿ ಕೂತಿದ್ದ ಮಣಿಯನ್ನು ಕೈ ಹಿಡಿದು ಎದ್ದು ನಿಲ್ಲಿಸಿದ. ಮಣಿ ತನ್ನ ಊರುಗೋಲನ್ನು ಹಿಡಿದುಕೊಂಡು ಶ್ರೀಧರನ ಜೊತೆ ನಿಧಾನಕ್ಕೆ ನಡೆದ.

ಮನೋವಿಜ್ಞಾನದಲ್ಲಿ ಡಾಕ್ಟರೇಟ್ ಮುಗಿಸಿ, ಸರ್ಕಾರದ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಬೆಂಗಳೂರು ವಿಭಾಗವನ್ನು ಹೊಸದಾಗಿ ಸೇರಿದ ಶ್ರೀಧರ, ಮಣಿಯನ್ನು ಇಲಾಖೆ ಕಟ್ಟಡದ ಹೊರದ್ವಾರದ ಕಡೆ ನಡೆಸಿದ. ಇಬ್ಬರೂ ಗೇಟಿನ ಬಳಿ ಬಂದು, ಮುಂದೆ ಇದ್ದ ಕನಕ್ಪುರ ಮುಖ್ಯ ರಸ್ತೆಯ ಗಜಿಬಿಜಿಯನ್ನು ಮೌನವಾಗಿ ಗಮನಿಸಿದರು.

ಟ್ರಾಫಿಕ್ ಸ್ವಲ್ಪ ಕಡಿಮೆಯಾದ ಮೇಲೆ ಶ್ರೀಧರ ಮಣಿಯ ಕೈ ಹಿಡಿದು ರಸ್ತೆಯನ್ನು ದಾಟಲು ನಿಧಾನಕ್ಕೆ ಮುಂದೆ ನಡೆದ. ಎಲ್ಲಿಂದಲೋ ಪ್ರತ್ಯಕ್ಷವಾದ ಒಂದು ವೇಗದ ಮೋಟರ್ಸೈಕಲ್ ಕೆಲವೇ ಅಡಿಗಳ ಅಂತರದಲ್ಲಿ ಮಣಿ-ಶ್ರೀಧರರನ್ನು ಹೊಡೆಯುವುದನ್ನು ತಪ್ಪಿತು. ಹೆಲ್ಮೆಟ್ ಧರಿಸಿದ್ದ ಬೈಕಿನ ಚಾಲಕ ತಕ್ಷಣ ಹಿಂದೆ ತಿರುಗಿ, "ಏಯ್ ಕುಂಟ, ನೋಡ್ಕಂಡ್ ನಡ್ಯೋ!" ಎಂದು ಗದರಿಸಿ, ಬೈಕನ್ನು ಓಡಿಸುವ ಬದಲು ಹಾರಿಸಿಕೊಂಡು ಗಾಡಿಗಳ ಅರಣ್ಯದಲ್ಲಿ ನಾಪತ್ತೆಯಾದ.

Mani : Short story by Madhava Venkatesh

ಹಾಗೂ ಹೀಗೂ ಮಣಿಯನ್ನು ರಸ್ತೆಯ ಇನ್ನೊಂದು ಬದಿಗೆ ತಲುಪಿಸಿದ ಶ್ರೀಧರ, ಅಲ್ಲೇ ನಿಂತು ಒಮ್ಮೆ ಮಣಿಯ ಮುಖವನ್ನು ನೋಡಿದ. ಒಂದು ತಿಂಗಳ ಹಿಂದೆ ತನ್ನ ಸೈಕಲ್ಲಿಗೆ ಒಂದು ಬೈಕು ಬಂದು ಗುದ್ದಿ, ಮಂಡಿಯ ಕೆಳಭಾಗದ ಕಾಲನ್ನು ಕಳೆದುಕೊಂಡ ಮಣಿಯ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಪ್ರಾಸ್ಥೆಟಿಕ್ ಕಾಲನ್ನು ಹಾಕಿಸಲಾಗದ ದಿನಗೂಲಿಗಳಾದ ಮಣಿಯ ತಂದೆ-ತಾಯಿಗೆ, ತಮ್ಮ ಹತ್ತು ವರ್ಷದ ಬಾಲಕನ ದೈಹಿಕ-ಮಾನಸಿಕ ಯಾತನೆಯನ್ನು ಕಡಿಮೆಗೊಳಿಸಲು ಮತ್ತ್ಯಾವುದೇ ಮಾರ್ಗ ತಿಳಿಯದೆ, ಕೊನೆಗೆ ಶ್ರೀಧರನ ಕಚೇರಿಗೆ ಬಂದು ಕಣ್ಣೀರು ಹಾಕಿದ್ದರು.

ಶ್ರೀಧರ ತನ್ನ ಚಿಂತನೆಯಿಂದ ಹೊರಬಂದು, ಮಂಡಿಯೂರಿ, ಮಣಿಗೆ ಸಾಂತ್ವನ ನೀಡಲು ಅವನನ್ನೇ ನೇರವಾಗಿ ನೋಡಿದ. ಮಣಿಯ ಕಣ್ಣುಗಳು ವ್ಯಕ್ತಪಡಿಸುತ್ತಿದ್ದ ನೋವನ್ನು ಕಡಿಮೆಗೊಳಿಸುವ ಯಾವ ಪದವೂ ಶ್ರೀಧರನಿಗೆ ಬರಲಿಲ್ಲ. ಮೌನವಾಗಿ ಎದ್ದು ನಿಂತು, ಮಣಿಯ ಭುಜವನ್ನು ಹಿಡಿದು, ಒಂದು ಶಾಂತ ರಸ್ತೆಯ ಕಡೆ ಅವನನ್ನು ನಡೆಸಿದ.

ಸುತ್ತಲೂ ಹಸಿರು ಮರಗಳಿಂದ ಆವರಿಸಿದ ಆ ರಸ್ತೆಯಲ್ಲಿ ಇಬ್ಬರೂ ನಡೆಯುತ್ತಿರುವಾಗ, ಎಡಗಡೆಯಲ್ಲಿ ಒಂದು ವಿಶಾಲವಾದ ಆಟದ ಮೈದಾನ ಕಾಣಿಸಿತು. ಮೈದಾನದ ಪಾರ್ಕಿಂಗ್ ಜಾಗದಲ್ಲಿ ಮರ್ಸಿಡೀಸ್, ಪೋರ್ಶ್, ಆಡಿ, ಮುಂತಾದ ದುಬಾರಿ ಕಾರುಗಳು ಮಾತ್ರ ಕಾಣಿಸುತ್ತಿದ್ದವು. ಮಣಿ ಮತ್ತು ಶ್ರೀಧರ ಮೈದಾನದಲ್ಲಿ ಕ್ರಿಕೆಟ್ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ಯುವಕರನ್ನು ನೋಡಿದರು. ಬೌಲರ್ ಹಾಕಿದ ಬಾಲನ್ನು ಹೊಡೆಯಲು, ವೈವಿದ್ಯಮಯ ರಕ್ಷಾಫಲಕಗಳಿಂದ ಅಲಂಕೃತನಾದ ಬ್ಯಾಟ್ಸಮನ್, ವಿಫಲನಾದ. ಚಂಡು ಹಿಂದೆ ಕೀಪರ್ ಕೈಯಿಗೆ ಹೋಯಿತು. ಪೀ ಪೀ ಎಂದು ವಿಷಲ್ ಊದಿಕೊಂಡು ಬ್ಯಾಟ್ಸಮನ್ ಕಡೆಗೆ ನಡೆದ ಕೋಚ್, "ಏನು ನಿಂಗೆ ರೋಗ? ಈತರ ಏನಾದ್ರೂ ಮ್ಯಾಚ್ನಲ್ಲಿ ಆಡದ್ರೆ, ಟಾಟಾ ಅನ್ನು ನಿನ್ನ ಸ್ಟೇಟ್ ಲೆವೆಲ್ ಕನಸಿಗೆ", ಎಂದು ಇಂಗ್ಲಿಷ್ನಲ್ಲಿ ರೇಗಿದ. ಬ್ಯಾಟ್ಸಮನ್ ಮುಖ ಮರಿಸಲು ತಲೆ ಬಗ್ಗಿಸಿದ.

ಬೌಲರ್ ಮಾಡಿದ ಮುಂದಿನ ಬಾಲನ್ನು, ಬಯ್ಯಿಸಿಕೊಂಡ ಬ್ಯಾಟ್ಸಮನ್, ಉದ್ವೇಗದಿಂದ ಬ್ಯಾಟನ್ನು ಬೀಸಿ, ಶಕ್ತಿಮೀರಿ ಹೊಡೆದ. ಗಗನದೆತ್ತರಕ್ಕೆ ಹಾರಿದ ಚಂಡು, ಧರೆಗೆ ಇಳಿದು, ನೆಲದಲ್ಲಿ ಮೂರು ಸಲಿ ನೆಗೆದು, ಮಣಿ-ಶ್ರೀಧರರು ನಿಂತಿದ್ದ ಜಾಗಕ್ಕೆ ಬಂದು ನಿಂತಿತು. ಫೀಲ್ಡರ್ ಒಬ್ಬನು ಓಡಿ ಬಂದು, "ಬಾಲ್ ಪ್ಲೀಸ್", ಎಂದು ಕೂಗಿದ. ಶ್ರೀಧರ ಬಾಲನ್ನು ಎತ್ತಿಕೊಂಡು, ಫೀಲ್ಡರ್ ಕೈಗೆ ಎಸೆದ. ಅದನ್ನು ಹಿಡಿದ ಅವನು, ಬಾಲನ್ನು ಬೌಲರ್ ಕಡೆಗೆ ಎಸೆದ ನಂತರ ಆಟ ಮುಂದುವರಿಯಿತು. ಮಣಿ-ಶ್ರೀಧರರು ಐದು ನಿಮಿಷ ಆಟವನ್ನು ನೋಡಿ, ಪುನಃ ರಸ್ತೆಯಲ್ಲಿ ನಡೆಯಲು ಮುಂದಾದರು.

ಆ ರಸ್ತೆಯ ಕೊನೆಗೆ ಬಂದ ಶ್ರೀಧರ, ಒಮ್ಮೆ ವಿರಾಮಿಸಿ, ಪಕ್ಕದಲ್ಲಿದ್ದ ಒಂದು ಸಣ್ಣ ಬೀದಿಯ ಕಡೆಗೆ ನಡೆದ. ಮಣಿ, ಸ್ವಲ್ಪ ನಿಧಾನವಾಗಿ ಅವನನ್ನು ಹಿಂಬಾಲಿಸಿದ. ಆ ಬೀದಿಯನ್ನು ಪ್ರವೇಶಿಸಿದಾಕ್ಷಣ ಕಂಡು ಬಂದ ಎಲ್ಐಜಿ ಮನೆಗಳಿಂದ, ಇದು ಮಧ್ಯಮ ವರ್ಗದವರು ವಾಸಿಸುವ ಒಂದು ಬಡಾವಣೆ ಎಂದು ಹೇಳಬಹುದಾಗಿತ್ತು. ಜೇನು ಗೂಡಿನಂತೆ ಪಕ್ಕ ಪಕ್ಕದಲ್ಲೇ ಕಟ್ಟಲಾಗಿದ್ದ ಮನೆಗಳ ಸಾಲು. ಟೆರೇಸಿನ ಮೇಲೆ ಒಣಗಲು ಹಾಕಲಾಗಿದ್ದ ಬಟ್ಟೆಗಳು. ಜಾಗದ ಕೊರತೆಯಿಂದಾಗಿ, ಒಂದು ಕಾಂಪೌಂಡ್ ಒಳಗೆ, ಮತ್ತೊಂದು ಕಾಂಪೌಂಡ್ ಹೊರಗೆ ನಿಲ್ಲಿಸಲಾಗಿದ್ದ ಸ್ಕೂಟರ್ ಗಳು. ಸಂಜೆ ಆರು ಗಂಟೆಯಾದ್ದರಿಂದ, ಮನೆ ಒಳಗಿಂದ ಬರುತ್ತಿದ್ದ ಧಾರಾವಾಹಿಯ ಸದ್ದು, ಅದರ ಜೊತೆ ಜೊತೆಗೆ ನಡೆಯುತ್ತಿದ್ದ ಮನೆ ಹೆಂಗಸರ ವಿಮರ್ಶೆ. ಮಣಿ-ಶ್ರೀಧರರು ಬೀದಿಯ ವಾತಾವರಣವನ್ನು ಗಮನಿಸಿದರು.

"ಲೋ ಕಿಟ್ಟು ಕತ್ತಲಾಗ್ತಾಯ್ದೆ. ಬೇಗ ಬಾಲ್ ಮಾಡು", ಬೀದಿಯ ಕೊನೆಯಿಂದ ಒಂದು ಧ್ವನಿ ಕೇಳಿಬಂತು. ಮಣಿ ಮತ್ತು ಶ್ರೀಧರ ಸ್ವಲ್ಪ ಮುಂದೆ ನಡೆಯುತ್ತಿದ್ದಂತೆಯೇ, ಎಡ ಭಾಗದಲ್ಲಿದ್ದ ಎರಡು ಮನೆಗಳ ನಡುವೆ ನುಸುಳಿಕೊಂಡಿದ್ದ ಒಂದು ಖಾಲಿ ಸೈಟಿನಲ್ಲಿ ಸುಮಾರು ಹತ್ತು-ಹನ್ನೊಂದು ವರ್ಷದ ಐದಾರು ಹುಡುಗರು ಕ್ರಿಕೆಟ್ ಆಡುತ್ತಿದ್ದ ದೃಶ್ಯ ಕಂಡು ಬಂತು. ಶ್ರೀಧರ ಒಂದು ಬಾರಿ ಹುಡುಗರ ಕಡೆ ಕಣ್ಣು ಹಾಯಿಸಿ ಮುಂದೆ ನಡೆದ.

ಟಪ್! ಟೆನಿಸ್ ಬಾಲು ಮೈಲೊ ಜೊತೆಗೆ ಉಚಿತವಾಗಿ ಸಿಗುವ ಟೊಳ್ಳು ಬ್ಯಾಟಿಗೆ ತಾಕಿದ ಸದ್ದು ಬೀದಿಯ ಪೂರ ಕೇಳಿಸಿತು. ಶ್ರೀಧರ ಹಿಂದೆ ತಿರುಗಿ ನೋಡಿದ. ಅವನು ನೋಡು ನೋಡುತ್ತಿದ್ದಂತೆಯೇ ಅರ್ಧ ಕಿತ್ತು ಹೋದ ಒಂದು ಟೆನಿಸ್ ಬಾಲು ಮಣಿಯ ಊರುಗೋಲಿನೆಡೆಗೆ ಉರುಳಿಕೊಂಡು ಬಂದು ನಿಂತಿತು. ಮಣಿ ಎರಡು ಕ್ಷಣ ಪಿಳಿಪಿಳಿ ಕಣ್ಣು ಮಿಟುಕಿಸಿ, ನಂತರ ಒಂದು ಊರುಗೋಲನ್ನು ಕೆಳಗೆ ಇಟ್ಟು, ಕಷ್ಟ ಪಟ್ಟು ಬಗ್ಗಿ, ಬಾಲನ್ನು ಎತ್ತಿಕೊಂಡು ನಿಂತನು. ಆಡುತ್ತಿದ್ದ ಹುಡುಗರಲ್ಲಿ ಒಬ್ಬ ಹುಡುಗ ಸೈಟಿನ ಅಂಚಿಗೆ ಓಡಿ ಬಂದು, ಮಣಿಯಿಂದ ಸ್ವಲ್ಪ ದೂರದಲ್ಲಿ ನಿಂತನು.

ಮೊದಲು ಮಣಿ, ನಂತರ ಶ್ರೀಧರನನ್ನು ಸಂಕ್ಷಿಪ್ತವಾಗಿ ನೋಡಿ, "ಇಬ್ಬರೂ ಆಟಡೋಕ್ಕೆ ಪ್ಲೀಸ್ ಬರ್ತೀರಾ? ಸ್ಕೂಲಲ್ಲಿ ಟೆಸ್ಟು ಅಂತ ಇವತ್ತು ಕೆಲವು ಹುಡುಗ್ರು ಬಂದೇ ಇಲ್ಲ... " ಎಂದು ನುಡಿದ. ಮಣಿ ಶ್ರೀಧರನ ಕಡೆ ನೋಡಿದ. ಶ್ರೀಧರ, ಹಳೆಯ ಅಂಗಿ, ಶಾಲೆ ಯುನಿಫಾರ್ಮ್ ನ ಚಡ್ಡಿ ಧರಿಸಿದ್ದ ಆ ಹುಡುಗನ ಕಡೆ ನೋಡಿ, ಮೆಲ್ಲನೆ ನಕ್ಕಿದ.

ಪಂದ್ಯದ ಕೊನೆಯ ಓವರ್ ಬೌಲ್ ಮಾಡಲು ಶ್ರೀಧರನಿಗೆ ಅವಕಾಶ ಸಿಕ್ಕಿತು. ಎದುರಾಳಿ ತಂಡದ ಮಣಿ, ಗೆಲ್ಲಲು ನಾಲ್ಕು ರನ್ ಮಾಡಬೇಕು. ಮಣಿ ಮೈಲೊ ಬ್ಯಾಟನ್ನು ಜೋರಾಗಿ ಕುಟ್ಟಿ ಮುಂದೆ ನೋಡಿದ. ಅವನ ಪರವಾಗಿ ಓಡುತ್ತಿದ್ದ "ಸಬ್" ಕಿಟ್ಟು, ಓಡಲು ತಯಾರಾದ. ಶ್ರೀಧರ ಮಾಡಿದ ಮೊದಲು ನಾಲ್ಕು ಬಾಲುಗಳಿಂದ ಒಂದು ರನ್ನೂ ಬರಲಿಲ್ಲ. ಸ್ವಲ್ಪ ಒತ್ತಡಕ್ಕೆ ಒಳಗಾದ ಮಣಿ, ಹಣೆಯ ಮೇಲಿನ ಬೆವರನ್ನು ವರೆಸಿಕೊಂಡ. ಪಕ್ಕದಲ್ಲಿ ನಿಂತಿದ್ದ ಕಿಟ್ಟು, "ಒಂದು ನಿಮಿಷ", ಎಂಬುವಂತೆ ಶ್ರೀಧರನಿಗೆ ಸಂಜ್ಞೆ ಮಾಡಿ, ಮಣಿಯ ಹತ್ತಿರ ಬಂದು ಕಿವಿಯಲ್ಲಿ ಏನನ್ನೋ ಪಿಸುಗುಟ್ಟಿದ. ನಂತರ ಮಣಿಯ ಬೆನ್ನನ್ನು ತಟ್ಟಿ ವಾಪಸ್ಸು ತನ್ನ ಸ್ಥಾನಕ್ಕೆ ಮರಳಿದ.

ಮಣಿ ಬ್ಯಾಟಿನ ಮೇಲೆ ವರಗಿಕೊಂಡು ಬಾಲಿಗಾಗಿ ಕಾಯುತ್ತಾ ನಿಂತನು. ಶ್ರೀಧರ ಈ ಬಾರಿ ಬಾಲನ್ನು ಸ್ವಲ್ಪ ಜೋರಾಗಿಯೇ ಎಸೆದ. ಮಣಿ ನಿಂತಲ್ಲೇ, ದೋಬಿ ಬಟ್ಟೆಯನ್ನು ಎತ್ತಿ ಬೀಸುವಂತೆ, ಬ್ಯಾಟನ್ನು ರಭಸದಿಂದ ಅರ್ಧವೃತ್ತಾಕಾರವಾಗಿ ತಿರುಗಿಸಿ, ಚಂಡನ್ನು ಹೊಡೆದ. ಎಲ್ಲರೂ ಬಾಲಿನ ವಾಯು ಪಥವನ್ನು ಉಸಿರು ಹಿಡಿದುಕೊಂಡು ನೋಡಿದರು. ಬಾಲನ್ನೇ ನೋಡಿಕೊಂಡು ನಿಂತ ಕಿಟ್ಟು, ಓಡುವುದನ್ನೇ ಮರೆತ. ಬಾಲು ಸೈಟಿನ ಆಚೆಗೆ ನೇರವಾಗಿ ಬಿದ್ದರೆ, ಅದು ಔಟು. ಮೊದಲು ಭೂಸ್ಪರ್ಶವಾಗಿ ನಂತರ ಸೈಟಿನ ಆಚೆಗೆ ಹೋದರೆ, ಅದು ಫೋರು. ಮಣಿ ಹೊಡೆದ ಬಾಲು ನೇರವಾಗಿ ಸೈಟಿನ ಅಂಚಿಗೆ ಹೋಗಿ, ಸೈಟಿನ ಒಳಗೆ ಒಂದು ಬಾರಿ ನೆಗೆದು, ಆಚೆಯ ರಸ್ತೆಯ ಕಡೆ ಹೋಯಿತು.

ಮಣಿಯ ತಂಡದವರೆಲ್ಲಾ ಭಾವೋತ್ಕರ್ಷತೆಯಿಂದ, "ಓ..", ಎಂದು ಕೂಗಿ, ಓಡಿ ಬಂದು ಮಣಿಯನ್ನು ತಬ್ಬಿಕೊಂಡರು. ಅವರು ತಬ್ಬಿಕೊಂಡ ಬಲಕ್ಕೆ, ಬೆಂಬಲಕ್ಕಾಗಿ ಮಣಿ ಹಿಡಿದ ಬ್ಯಾಟು ಕೈಜಾರಿ ಕೆಳಗೆ ಬಿದ್ದಿತು. ಇನ್ನೇನು ಅವನು ಎಡವಿ ಬೀಳುವಷ್ಟರಲ್ಲಿ, ಬಾಲ ಭೀಮಸೇನನಂತ್ತಿದ್ದ ಒಬ್ಬ ಹುಡುಗ, ಬಗ್ಗಿ ಮಣಿಯನ್ನು ಕೆಳಗಿನಿಂದ ಎತ್ತಿಯೇ ಬಿಟ್ಟ. ಬಾಕಿ ಹುಡುಗರು ಆ ಹುಡುಗನ ಜೊತೆ ಸೇರಿಕೊಂಡು ಮಣಿಯನ್ನು ಎತ್ತಿ, ಸೈಟಿನ ಸುತ್ತಾ, "ಮಣಿಗೆ, ಜಯ್! ಮಣಿಗೆ, ಜಯ್!", ಎಂದು ಚೀರುತ್ತಾ ಮೆರವಣಿಗೆ ಮಾಡಿದರು. ಕೆಳಗೆ ಇಳಿದ ಮಣಿಯ ಬಳಿ ಕಿಟ್ಟು ನೇರವಾಗಿ ಬಂದು, ಗಂಭೀರ ದನಿಯಲ್ಲಿ, "ಮಣಿ, ನಾಳೆನೂ ಬರ್ತ್ಯಾ ತಾನೇ?" ಎಂದು ಕೇಳಿದ. ಮಣಿ ಹರ್ಷೋಲ್ಲಾಸದಿಂದ ಹಿಂದೆ ತಿರುಗಿ ಶ್ರೀಧರನ ಕಡೆ ನೋಡಿದನು. ಶ್ರೀಧರ ಅಣ್ಣನ ಕಣ್ಣುಗಳು ಯಾಕೋ ಒದ್ದೆಯಾಗಿದ್ದವು.

English summary
Mani : A Kannada short story by Madhava Venkatesh. Mani had lost his leg after he met with an accident with a bike. His parents had no means to provide artificial leg to Mani. One day he goes for a walk with Sridhar, who worked in woman and child welfare dept. What happens next? Read the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X