ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೇಜಸ್ವಿನಿ ಹೆಗಡೆ ಸಣ್ಣಕಥೆ : ಜೀವತಂತು (ಭಾಗ 3)

By ತೇಜಸ್ವಿನಿ ಹೆಗಡೆ, ಬೆಂಗಳೂರು
|
Google Oneindia Kannada News

(ಕಥೆ ಮುಂದುವರಿದಿದೆ...)

'ಮಾನಸ, ಶುಭಾಳ ಮಗುವಿಗೆ ಸೀರಿಯಸ್... ಅವ್ಳ ಸ್ಥಿತೀನೂ ಚೆನ್ನಾಗಿಲ್ಲ. ತುಂಬಾ ಅಪ್‌ಸೆಟ್ ಆಗಿದ್ದಾಳೆ. ನಿನ್ನ ನೋಡ್ಬೇಕು ಅಂತಿದ್ದಾಳೆ. ಪ್ಲೀಸ್ ಕೂಡ್ಲೇ ಹೊರ್ಟು ಬಾ..." ಎಂದಷ್ಟೇ ಹೇಳಿ ಫೋನ್ ಕಟ್ ಮಾಡಿದ ಸುಮತಿ ಮೇಡಮ್ ಧ್ವನಿಯೊಳಗಿದ್ದ ಆತಂಕ ಅವಳನ್ನು ಅಲುಗಾಡಿಸಿಬಿಟ್ಟಿತು. ಒಂದೇ ಉಸಿರಿಗೆ ಒಳಗೋಡಿದವಳನ್ನು ಅಷ್ಟೇ ಗಾಬರಿಯಿಂದ ಹಿಂಬಾಲಿಸಿದರು ವೆಂಕಜ್ಜಿ.

"ಅಮ್ಮಾ, ಸುಮತಿ ಮೇಡಮ್ ಕಾಲ್ ಇತ್ತು... ಶುಭಾ ಕೂಸಿಗೆ ರಾಶಿ ಹುಶಾರಿಲ್ಯಡ... ಆನು ಈಗ್ಲೇ ಹೊರ್ಡವು... ರಾತ್ರಿ ಒಂಭತ್ಗಂಟೆ ಬಸ್ಸಿಗೆ ಹೋಗ್ತಿ... ಪ್ಲೀಸ್ ನೀ ಎಂತೂ ಅಡ್ಡ ಮಾತಾಡಡ... ಅಪ್ಪಂಗೆ ನಾನೇ ಆಮೇಲೆ ಕಾಲ್ ಮಾಡಿ ಎಲ್ಲಾ ಹೇಳ್ತಿ." ಅಮ್ಮನ ಪ್ರತಿಕ್ರಿಯೆಗೂ ಕಾಯದೆ ತನ್ನಷ್ಟಕ್ಕೇ ಹಲುಬುತ್ತಾ ಸಿಕ್ಕ ನಾಲ್ಕು ಬಟ್ಟೆಗಳನ್ನು ಬ್ಯಾಗಿಗೆ ತುರುಕುತ್ತಿದ್ದಳು ಮಾನಸ. ಮಗಳಿಗೆ ಏನನ್ನೋ ಹೇಳಹೊರಟ ಸೊಸೆ ಸಾವಿತ್ರಿಯನ್ನು ಕಣ್ಸನ್ನೆಯಲ್ಲೇ ತಡೆದ ವೆಂಕಜ್ಜಿ, ಮೊಮ್ಮಗಳ ಬಳಿ ಹೋಗಿ ತಲೆ ಸವರಲು, ಅವರ ಹೆಗಲಿಗೊರಗಿ ಹಾಗೇ ಕಣ್ಮುಚ್ಚಿ ಕುಳಿತಳು.

Jeevatantu, a Kannada short story by Tejaswini Hegde (part 3)

***

ಸೀಟಿಗೊರಗಿ ಕುಳಿತವಳಿಗೆ ಎಷ್ಟೇ ಒದ್ದಾಡಿದರೂ ನಿದ್ದೆ ಬರುತ್ತಿಲ್ಲ. ಅಪ್ಪ, ಅಮ್ಮನ ಮುದ್ದಾಗಿದ್ದ ಶುಭಾಳ ಅಶುಭ ಘಳಿಗೆ ಅವಳ ಕಾಲೇಜು ಮುಗಿಯುತ್ತಲೇ ಶುರುವಾದಂತಿತ್ತು. ಅಪಘಾತದಲ್ಲಿ ಗತಿಸಿದ ಹೆತ್ತವರು, ಸ್ವಭಾವತಃ ಒರಟಾಗಿದ್ದ ಅಣ್ಣನ ಅಂಕೆ, ಅತ್ತಿಗೆಯ ಉದಾಸೀನ, ಬದುಕೇ ಕಡುಗತ್ತಲಂತಾಗಿದ್ದಾಗ ಅಚಾನಕ್ಕಾಗಿ ಬೆಳಕು ತಂದವ ಸೌರಭ್ ಶರ್ಮ. ಬಿಹಾರ್ ಮೂಲದ ಸೌರಭನ ಆಕರ್ಷಕ ವ್ಯಕ್ತಿತ್ವ, ಮಾತಿಗೆ ಮರುಳಾದ ಶುಭ ಅಣ್ಣನ ಆಕ್ಷೇಪಣೆಯ ನಡುವೆಯೂ ಕೈ ಹಿಡಿದಿದ್ದಳು.

ಅವಳ ಸಂತಸಕ್ಕೆ ಮನಃಪೂರ್ತಿ ಸಾಥ್ ನೀಡಿದವರೆಂದರೆ ಆತ್ಮದ ಸಖಿ ಮಾನಸ ಮತ್ತು ಅವರಿಬ್ಬರ ಅಕ್ಕರೆಯ ಪ್ರೊಫೆಸರ್, ಸುಮತಿ ರಾವ್. ಮದುವೆಯಾದ ತಿಂಗಳಿಗೇ ಸೌರಭನಿಗೆ ದೆಹಲಿಗೆ ವರ್ಗವಾಗಲು, ಗೆಳತಿಯರಿಬ್ಬರೂ ಅಗಲಬೇಕಾಯಿತು. ಮೊದಮೊದಲು ವಾರಕ್ಕೊಮ್ಮೆ ಹರಟುತ್ತಿದ್ದ ಗೆಳತಿಯರು ಕ್ರಮೇಣ ತಿಂಗಳಿಗೊಮ್ಮೆ ಮಾತನಾಡುವುದೂ ಅಪರೂಪವಾಗಿಹೋಯ್ತು. ಈಗ ಕೆಲವು ತಿಂಗಳ ಹಿಂದಷ್ಟೇ ಹೆರಿಗೆಗಾಗಿ ಅಣ್ಣನ ಮನೆಗೆ ಬಂದ ಸುದ್ದಿ ತಿಳಿದು, ಓಡಿಬಂದಿದ್ದಳು ಮಾನಸ.

ಸಖಿಯ ಕಂತಿದ ಮೊಗ, ಸೊರಗಿದ ದೇಹ ನೋಡಿ ಪರಿಪರಿಯಾಗಿ ಕೇಳಿದ್ದಳು. ಅವಳದೋ ಬರೀ ಹಾರಿಕೆಯ ಉತ್ತರ, ತೋರಿಕೆಯ ನಗು. ಶುಭಾಳ ಈ ವೈಖರಿ ನೋಡಿ, ಅಸಮಾಧಾನದಲ್ಲೇ ಅಲ್ಲಿಂದ ಹಿಂತಿರುಗಿದ್ದಳು. 'ಛೇ... ತಾನೊಮ್ಮೆ ಹೋಗಿ ನೋಡಬೇಕಿತ್ತು. ತನ್ನದೇ ತಪ್ಪು. ಹೇಗೂ ಮದುವೆ ಖರೀದಿಗೆ ಮುಂದಿನ್ವಾರ ಆ ಕಡೆ ಹೋಗೋದಿದೆ ಅಂತ ಸುಮ್ನಾದೆ. ದೇವ್ರೇ.. ಏನೂ ಆಗ್ದೇ ಇರ್ಲಪ್ಪಾ... ಬರೀ ಹದಿನೈದು ದಿನದ ಎಳೆಗೂಸು ಅದು.' ಮನದಲ್ಲೇ ಪ್ರಾರ್ಥಿಸುತ್ತಾ, ಅರ್ಧಂಬರ್ಧ ನಿದ್ದೆಯಲ್ಲೇ ಬೆಂಗಳೂರನ್ನು ತಲುಪಿದಳು.

English summary
Jeevatantu, a Kannada short story by writer Tejaswini Hegde on pleasure of motherhood, problems faced by mother when a girl child is born etc. There is always light at the end of dark tunnel. The short story is from collection Samhita.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X