ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಳ್ಗತೆ (ಭಾಗ 4) : ಎಡವಟ್ಟಾಯ್ತು ತಲೆಕೆಟ್ಟೋಯ್ತು

By ಮಾಧವ ವೆಂಕಟೇಶ್
|
Google Oneindia Kannada News

"ಏನಾಯ್ತು? ಯಾಕ್ ನಿಲ್ಲಿಸ್ದಿ?" ನಾಡಿ ಆತಂಕದಿಂದ ಕೇಳಿದ. ಬುರ್ಲಿ ಉತ್ತರಿಸಿದ, "ನಾಡಿ! ತಾತ ನಿನ್ ಬಲ್ಗಡೆ ಸೈಡ್ಲಾಕ್ ಎಗರ್ಸ್ಬಿಟಿದಾರೆ". ನಾಡಿ ಇದನ್ನು ಕೇಳುತ್ತಿದ್ದ ಹಾಗೆ ಸೀಟಿನಿಂದ ದಬಕ್ಕನೆ ಎಗರಿ ರೂಫಿಗೆ ತಲೆ ಹೊಡಿಸಿಕೊಂಡ. ನನ್ನ ಕಡೆ ತಿರುಗಿದ್ದ ಕಾರಿನ ಕನ್ನಡಿಯನ್ನು, ಕಿತ್ತುಹೋಗುವಷ್ಟು ರಭಸದಿಂದ ತನ್ನ ಕಡೆ ತಿರುಗಿಸಿಕೊಂಡು ಮುಖದ ಬಲಭಾಗವನ್ನು ನೋಡಿಕೊಂಡ. ನೋಡಿದ ನಂತರ ನಾಡಿಯ ಕಣ್ಣು ಸ್ವಲ್ಪ ಒದ್ದೆಯಾಯಿತು.

ಇನ್ನು ಹದಿನೈದು ನಿಮಿಷದಲ್ಲಿ ಪೂಜೆ ಶುರುವಾಗಬೇಕು. ಐದು ಸೆಕೆಂಡು ಮೂರೂ ಜನ ದಿಗ್ಭ್ರಾಂತರಾಗಿ ಪೆದ್ದರ ಹಾಗೆ ಸುಮ್ಮನೆ ಕೂತು ಬಿಟ್ಟೆವು. ಬುರ್ಲಿ ಮೊದಲು ಎಚ್ಚೆತ್ತುಕೊಂಡ. ಯಾರ ಮೇಲೂ ಯಾವತ್ತೂ ಜೋರು ಮಾಡದ ಬುರ್ಲಿಯ ಧ್ವನಿಯಲ್ಲಿ ಈ ಬಾರಿ ಕೋಪದ ಸುಳಿವು ಕೇಳಿಬಂತು - "ತಿರುಗ್ಸು ಕಾರನ್ನ", ಎಂದಷ್ಟೇ ಹೇಳಿದ. ಯು ಟರ್ನ್ ಮಾಡಿ ವೇಗದಿಂದ ಕಾರನ್ನು ವಾಪಸ್ಸು ತಾತನ ಸಲೂನ್ ಕಡೆಗೆ ಓಡಿಸಿದೆ.

ಐದು ನಿಮಿಷ ಮತ್ತು ನಾಲ್ಕು ಟ್ರಾಫಿಕ್ ಉಲ್ಲಂಘನೆಗಳ ನಂತರ, ಸಲೂನ್ ಇದ್ದ ಅದೇ ಶಾಂತ ರೆಸಿಡೆನ್ಷಿಯಲ್ ರಸ್ತೆಗೆ ಬಂದೆವು. ಕಾರನ್ನು ನಾನು ಸಂಪೂರ್ಣವಾಗಿ ನಿಲ್ಲಿಸುವ ಮೊದಲೇ ನಾಡಿ ಬಾಗಿಲು ತೆಗೆದು ಧಡಧಡನೆ ಸಲೂನಿಗೆ ಓಡಿದನು. ನೋಡಿದರೆ ಸಲೂನಲ್ಲಿ ಯಾರೂ ಇರಲಿಲ್ಲ. ಕಳೆದ ಬಾರಿ ತಾತಾ ಪ್ರವೇಶಿಸಿದ ಹಿಂದಿನ ಬಾಗಿಲನ್ನು ಬಡಿದೆವು, "ತಾತ! ತಾತ!". ಬಾಗಿಲು ಲಾಕ್ ಆಗಿತ್ತು. ಯಾರೂ ಬರಲಿಲ್ಲ.

Friend's marriage and awkward hair cutting (part 4)

ನಾವು ಸಲೂನಿಂದ ಹೊರಟು ಇನ್ನೂ ಐದು ನಿಮಿಷವೂ ಆಗಿಲ್ಲ. ತಾತ ಇಲ್ಲೇ ಎಲ್ಲೋ ಹತ್ತಿರದಲ್ಲೇ ಹೋಗಿರುತ್ತಾರೆ ಎಂದು ಊಹಿಸಿ, ನಾಡಿಗೆ ಅಲ್ಲೇ ಇರಲು ಹೇಳಿ, ನಾನು ಬುರ್ಲಿ ತಾತನನ್ನು ಹುಡುಕಲು ನಡೆದುಕೊಂಡು ಹೊರಟೆವು. ಹುಡುಕುತ್ತಾ ಹುಡುಕುತ್ತಾ ಸಮೀಪದಲ್ಲಿದ್ದ ಒಂದು ಪುಟ್ಟ ಕಮರ್ಷಿಯಲ್ ಏರಿಯಾಗೆ ಬಂದೆವು. ತಾತನನ್ನು ಅಲ್ಲಿ ಕಂಡುಹಿಡಿಯಲು ತುಂಬಾ ಸಮಯ ಬೇಕಾಗಿರಲಿಲ್ಲ. ನಮ್ಮ ನಡುವೆಯೇ ಇದ್ದ ಒಂದು ಕಾಕನ ಅಂಗಡಿಗೆ ಅವರು ನಡೆದುಕೊಂಡು ಹೋಗುತ್ತಿದ್ದರು. ನಾವಿಬ್ಬರೂ ಓಡಿಕೊಂಡು ಅವರನ್ನು ಹಿಂಬಾಲಿಸಿದೆವು. ಅವರು ಕಾಕನ ಅಂಗಡಿ ತಲುಪಿ ಬೀಡಿ ಖರೀದಿಸುವಷ್ಟರಲ್ಲಿ ನಾವು ಅವರ ಹತ್ತಿರ ಬಂದಿದ್ದೆವು. ತಾತನ ಎದುರು ನಿಂತು ನಾನು ಗದರಿಸಿದೆ, "ರೀ ತಾತ! ಏನ್ ಕಟಿಂಗ್ ಮಾಡೋದು ನೀವು? ನನ್ ಫ್ರೆಂಡ್ ನ ಸೈಡ್ಲಾಕ್ ತೆಗದ್ಬಿಟ್ಟೀದೀರಲ್ಲ! ಬನ್ನಿ ಈಗ, ಸರಿ ಮಾಡಿ ಬೇಗ".

ತಾತ ಬೀಡಿ ಹಚ್ಚಿಕೊಂಡು ನಮ್ಮಿಬ್ಬರನ್ನ ದಿಟ್ಟಿಸಿ ನೋಡಿದರು. ನಂತರ ಬೀಡಿಯನ್ನು ಶಿವಣ್ಣ ಓಂ ಪಿಚ್ಚರಿನಲ್ಲಿ ಸೇದುವಂತೆ ಆಳವಾಗಿ ಸೇದಿ, ಹೊಗೆಯನ್ನು ಸಾವಕಾಶವಾಗಿ ನಮ್ಮ ಮುಖಗಳ ಮೇಲೆ ಬಿಟ್ಟರು. ನಾನು ಕೆಮ್ಮನ್ನು ತಡೆದುಕೊಂಡೆ.
"ಮಿಕ್ಕಿದ್ ಬೀಡಿನ ದಾರೀಲಿ ಸೇದಿ", ಎಂದು ಬುರ್ಲಿ ತಾತನನ್ನು ಅರ್ಧ ಎಳೆದುಕೊಂಡು ನಡಿಸಿಯೇ ಬಿಟ್ಟ.
ನಾನು, ಬುರ್ಲಿ, ತಾತ ಸಲೂನ್ ಕಡೆಗೆ ಓಡಿದೆವು. ನಾಡಿ ಸಲೂನ್ ಕುರ್ಚಿಯಲ್ಲಿ ನಿರ್ಲಿಪ್ತನಾಗಿ, ಕನ್ನಡಿಯನ್ನು ನೋಡುತ್ತಾ ಮಂಕು ಕವಿದವರ ಹಾಗೆ ಕೂತಿದ್ದನು. ತಾತ ಬಂದು ಅವನ ತಲೆಯ ಬಲ ಭಾಗವನ್ನು ಹಿಡಿದು ದಿಟ್ಟಿಸಿ ನೋಡಿದರು.
"ಓ ..... ", ಎಂದು ಜ್ಞಾನೋದಯ ಆದವರ ಹಾಗೆ ಆಲಾಪನೆ ಹೊರಡಿಸಿದರು.
"ಏನ್ ನಿದ್ದೆ ಮಾಡ್ತಿದ್ರ ಕಟಿಂಗ್ ಮಾಡ್ವಾಗ?", ನಾಡಿ ಸರ್ರನೆ ರೇಗಿದ.
"ಸಮಾಧಾನ, ಸಮಾಧಾನ. ಕ್ಷಮ್ಸಪ್ಪ, ನಂಗೆ ಕಣ್ಣು ಸ್ವಲ್ಪ ಮಂದ. ಈಗ ಹೋಗಿರೋ ಕೂದ್ಲನ್ನ ತಕ್ಷಣ ಬೆಳೆಸೋಕೆ ಆಗಲ್ಲ".
"ಓ! ಹೌದಾ?", ನಾಡಿ ವ್ಯಂಗ್ಯವಾಗಿ ಕೇಳಿದ.
"ಕೇಳಪ್ಪ. ಆದ್ರೆ ಇದನ್ನ ತಾತ್ಕಾಲಿಕವಾಗಿ ಸರಿಪಡಿಸಬಹುದು. ನನ್ನ ಹತ್ರ ಒಂದಿಷ್ಟು ವಿಗ್ ಗಳು ಇವೆ. ಅವುಗಳಲ್ಲಿ ಒಂದೆರಡು ಎಳೆ ಕತ್ತರಿಸಿ ನಿನ್ನ ಕಿವಿ ಹತ್ರ ಫೆವಿಕ್ವಿಕ್ ಹಾಕಿ ಅಂಟಸ್ದ್ರೆ ಕೂದ್ಲು ಬೆಳೆಯೋ ತನಕ ಯಾರಿಗೂ ಗೊತ್ತಾಗೋಲ್ಲ".
ನಾವು ಮೂರೂ ಜನ ಇಂಜಿನಿಯರ್ ಗಳು, ಅರ್ಧ ಆಶ್ಚರ್ಯದಿಂದ, ಅರ್ಧ ಸಂದೇಹದಿಂದ ತಾತನ ಪರಿಹಾರದ ಬಗ್ಗೆ ಯೋಚಿಸಿದೆವು.

ತಾತ ಡ್ರಾಯರ್ ಇಂದ ಒಂದು ವಿಗ್ ಅನ್ನು ತೆಗೆದು, ಕತ್ತರಿಯಿಂದ ಎರಡು ಎಳೆ ಕೂದಲು ಕತ್ತರಿಸಿ ನಾಡಿಯ ಸೈಡ್ ಲಾಕ್ ಇರಬೇಕಾದ ಜಾಗದಲ್ಲಿ ಹಿಡಿದಿಟ್ಟರು. ಅನುವಂಶಿಕವಾಗಿ ಬಂದಿದ್ದ ನಾಡಿಯ ಕೆಂಚು ಕೂದಲಿಗೂ, ವಿಗ್ ನ ಕಪ್ಪು ಕೂದಲಿನ ಎಳೆಗಳಿಗೂ ಚೂರೂ ಹೊಂದಾಣಿಕೆ ಇರಲಿಲ್ಲ. ಏನು ಮಾಡುವುದೆಂದು ಯೋಚಿಸುತ್ತಾ ಎಲ್ಲಾ ಮೌನವಾಗಿದ್ದೆವು.

ಬೆಳ್ಳಿಗ್ಗೆ ನಾನು ಛತ್ರದಲ್ಲಿ ನೋಡಿದ್ದ ಒಂದು ದೃಶ್ಯ ಆಗ ನನಗೆ ನೆನಪಿಗೆ ಬಂತು. "ವಿಗ್ ಕೂದ್ಲಿಗೆ ಮೆಹೆಂದಿ ಹಚ್ಚಿದರೆ ಹೇಗೆ? ಕಪ್ಪು ಮತ್ತೆ ಮೆಹೆಂದಿ ಬಣ್ಣ ಸೇರಿ ಕೆಂಚು ಆಗ್ಬೋದು...", ನಾನು ಸೂಚಿಸಿದೆ. ತಾತ, ಸ್ವಲ್ಪ ಯೋಚಿಸಿ, "ಹೂಂ. ಅದ್ಮಾಡ್ಬೋದು. ಇಲ್ಲೇ ಹಿಂದಿನ ಬೀದೀಲಿ ಒಂದು ಬ್ಯೂಟಿ ಪಾರ್ಲರ್ ಇದೆ. ಹೋಗಿ ಬೇಗ ಸ್ವಲ್ಪ ಮೆಹೆಂದಿ ತೊಗೊಂಡು ಬನ್ನಿ ", ಎಂದು ನನ್ನ ಮತ್ತೆ ಬುರ್ಲಿನ ಕಳಿಸಿದರು.

ಪಕ್ಕದ ಬೀದಿಯಾದರೂ, ನಾವಿಬ್ಬರು ಕಾರಲ್ಲಿ ಹತ್ತಿಕೊಂಡೆವು. ಒಂದು ನಿಮಿಷದ ನಂತರ ಫೆಮಿನ ಬ್ಯೂಟಿ ಪಾರ್ಲರಿನ ಮುಂದೆ ನಿಂತೆವು. ಪಾರ್ಲರಿನ ಕಿಟಕಿಗಳು ಬುಲೆಟ್ ಪ್ರೂಫ್ ಗಾಜೇನೋ ಎಂಬಂತೆ ಕಪ್ಪು ಸ್ಕ್ರೀನಿನಿಂದ ಆವರಿಸಿದ್ದವು. ನಾನು ಮುಂದೆ ಹೋಗಿ ಬಾಗಿಲನ್ನು ತಟ್ಟಿದೆ. ನಡುವಯಸ್ಸಿನ ಒಬ್ಬಾಕೆ ಬಾಗಿಲು ತೆರೆದರು. ನಮ್ಮನ್ನು ನೋಡಿದಾಕ್ಷಣ ಅವರು ಎಡಗಡೆಗೆ ನೋಡುವಂತೆ ಸೂಚಿಸಿದರು. ನಾವು ಆ ದಿಕ್ಕಿನಲ್ಲೇ ನೋಡಿದೆವು.

"LADIES AND CHILDREN ONLY", ಎಂಬ ಬೋರ್ಡು ಕಣ್ಣಿಗೆ ಬಿತ್ತು.

"ಅದ್ನಮ್ಗೆ ಗೊತ್ತು ಮೇಡಂ. ನಾವು ಬಂದಿರೋದು ಬೇರೆ ವಿಷ್ಯಕ್ಕೆ. ನಮ್ಗೆ ಅರ್ಜೆಂಟ್ ಆಗಿ ಒಂದು ಮೆಹೆಂದಿ ಟ್ಯೂಬ್ ಬೇಕು", ಎಂದೆ. ನಮ್ಮನ್ನು ಮೇಲಿನಿಂದ ಕೆಳಗೆ ಸಂಶಯಾತ್ಮಕವಾಗಿ ಪರೀಕ್ಷಿಸಿ, "ಯಾಕೋ?", ಎಂದು ಮುಗುಳ್ನಗುತ್ತಾ ಆಕೆ ಕೇಳಿದರು. ನಡೆದದನ್ನ ಇವರಿಗೆ ಈಗ ಹೇಗೆ ಹೇಳೋದು?
"ಇವ್ನು ನನ್ನ ಸ್ನೇಹಿತ ಬುರ್ಲಿ ಅಂತ", ಎಂದು ಬುರ್ಲಿಯ ಕಡೆ ತೋರಿಸಿದೆ. ಬುರ್ಲಿ "ಹಾಯ್" ಎನ್ನುವಂತೆ ಕೈ ಬೀಸಿದ. ನಾನು ಮುಂದುವರೆದೆ, "ನಾಳೆ ಇವನ ಮದ್ವೆ ಇದೆ. ಮಾಹರಾಣಿಯರ ವಿವಾಹ ಪೂರ್ವದ ಆಜ್ಞೆ ನಡೆಸಬೇಕಿದೆ."
"ಹೌದಾ! ಓ ಕಂಗ್ರಾಟ್ಸ್!", ಎಂದು ಬುರ್ಲಿಗೆ ಹೇಳಿ ಕಿಲಿ ಕಿಲಿ ನಕ್ಕರು.
"ಥ್ಯಾಂಕ್ಸ್ ಮೇಡಂ", ಬುರ್ಲಿ ನೆಲ ನೋಡಿಕೊಂಡು ಉತ್ತರಿಸಿದ.
"ಒಂದ್ ನಿಮ್ಷ ಬಂದೆ ", ಎಂದು ಮೇಡಂ ಪಾರ್ಲರ್ ಒಳಗೆ ಹೋಗಿ, ಒಂದು ಮೆಹೆಂದಿ ಟ್ಯೂಬ್ ಅನ್ನು ಹಿಡಿದುಕೊಂಡು ಬಂದು, ಬುರ್ಲಿಗೆ ಕೊಟ್ಟರು. ಅದರ ಬೆಲೆಯನ್ನು ನೋಡಿ ಅವನು ವಾಲೆಟ್ ಅನ್ನು ತೆಗೆದ.
"ಬೇಡಾಪ್ಪ ಪರವಾಗಿಲ್ಲ. ಮಹಾರಾಣಿಗೆ ಮದ್ವೆ ಮುಂಚಿನ ಸಿಂಗಾರಕ್ಕಾಗಿ ಇಲ್ಲೀಗೆ ಬರೋಕ್ಕೆ ಹೇಳಿ, ಆಯ್ತಾ?"
"ಖಂಡಿತ, ಖಂಡಿತ", ಬುರ್ಲಿ ತಲೆದೂಗಿದ.

English summary
Friend's marriage and awkward hair cutting : Kannada Short story by Madhava Venkatesh. Author's friend goes for hair cutting on the previous day of his marriage. What happens there? How the friends handle the situation? Author narrates it in a funny way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X