ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಲ್‌ಬುಲ್ ಹಕ್ಕಿ ಗೂಡು ಮತ್ತು ಮನೆ

By * ಶಾಂತಾ ನಾಗರಾಜ್, ಬೆಂಗಳೂರು
|
Google Oneindia Kannada News

Shantha Nagaraj, Bangalore
ಬೆಳಗಿನ ಹನ್ನೊಂದು ಗಂಟೆಯ ಹೊತ್ತಿಗೆ ಒಂದು ಹದ ಮನೆಗೆಲಸ ಮುಗಿದ ನಿರಾಳದ ಭಾವದಲ್ಲಿ ಹೊರಗಿನ ಬಾಲ್ಕನಿಯ ಉಯ್ಯಾಲೆಯಲ್ಲಿ ಕುಳಿತು ಅವರೆಕಾಯಿ ಬಿಡಿಸಲು ತೊಡಗಿದೆ. ಗಂಡ ಆಗತಾನೆ ತಿಂಡಿ ತಿಂದು ಬ್ಯಾಂಕಿನಿಂದ ಪೆನ್‌ಶನ್ ತರುವುದಕ್ಕೆಂದು ಹೊರಗೆ ಹೋಗಿದ್ದರು. ಇನ್ನು ಅವರು ಅಲ್ಲಿ ಇಲ್ಲಿ ಸುತ್ತಿ ಮನೆಗೆ ಬರುವುದು ಒಂದೂವರೆ ಮೇಲೇ. ಅಲ್ಲಿಯವರೆಗೆ ಅಡುಗೆ ಮಾಡಲು ಬೇಕಾದಷ್ಟು ಪುರುಸೊತ್ತು ನನಗೆ.

ನಮ್ಮದು ಮೂಲೆ ಮನೆಯಾದ್ದರಿಂದ ಎರಡು ಬದಿಯ ರಸ್ತೆ ಪ್ರಶಾಂತವಾಗಿ ಕಾಣುತ್ತಿತ್ತು. ಉದ್ಯೋಗಸ್ಥ ಮಹಿಳೆ ಮತ್ತು ಪುರುಷರು ತಮ್ಮತಮ್ಮ ಕೆಲಸಗಳಿಗೆ ಹೋಗಿ, ಮಕ್ಕಳು ಶಾಲೆಗೆ ಹೋಗಿ, ಒಂದು ರೀತಿಯಲ್ಲಿ ರಸ್ತೆಯೂ ನನ್ನಂತೇ ನಿರಾಳದ ಭಾವವನ್ನು ಅನುಭವಿಸುತ್ತಿತ್ತು. ಆಗ ಎಲ್ಲಿಂದಲೋ ಹಾರಿಬಂದ ಬುಲ್‌ಬುಲ್‌ ಹಕ್ಕಿಗಳ ಇನಿದನಿ ನಮ್ಮ ಪಾರಿಜಾತ ಮರದಿಂದ ಕೇಳಿಸಿತು. ತುಂಬ ಸಂಭ್ರಮವಾಯಿತು ನನಗೆ. ಕಳೆದ ವರ್ಷ ನಮ್ಮ ಹಿಂದಿನ ರಸ್ತೆಯ ನನ್ನ ಗೆಳತಿಯ ಮನೆಯಲ್ಲಿ ಅವರ ಬಚ್ಚಲು ಮನೆಯ ಕಿಟಕಿಗೇ ಈ ಹಕ್ಕಿಗಳು ಗೂಡನ್ನು ಕಟ್ಟಿದ್ದವು. ಪ್ರತಿಬಾರಿ ಅವರ ಮನೆಗೆ ಹೋದಾಗಲೆಲ್ಲಾ ಅವರ ಮಕ್ಕಳಿಂದ ಆ ಹಕ್ಕಿಗಳ ಕಥೆಗಳನ್ನು ಹೊಟ್ಟೆಕಿಚ್ಚಾಗುವಷ್ಟು ಕೇಳಿದ್ದೇ ಕೇಳಿದ್ದು. ಈ ಬಾರಿ ಈ ಹಕ್ಕಿಗಳು ನಮ್ಮ ಅಂಗಳದಲ್ಲಿ ಹಾರಾಡುತ್ತಿವೆ! ಇವಿಲ್ಲಿ ಗೂಡುಕಟ್ಟಬಹುದೇ? ಆಸೆ ಮತ್ತು ಕುತೂಹಲಗಳು ನನ್ನಲ್ಲಿ ಗೂಡುಕಟ್ಟತೊಡಗಿದವು. ಮಾಡುವ ಕೆಲಸವನ್ನು ಬಿಟ್ಟು ಬಾಲ್ಕನಿಯ ತುದಿಯಲ್ಲಿ ನಿಂತು ಹಕ್ಕಿಗಳನ್ನೇ ಗಮನಿಸತೊಡಗಿದೆ.

ಸರ್ಕಾರದಲ್ಲಿ ಸಣ್ಣ ಕೆಲಸದಲ್ಲಿದ್ದ ನನ್ನ ಗಂಡ ಟ್ರಾನ್ಸ್‌ಫರ್ ಕಾರಣದಿಂದ ಕರ್ನಾಟಕದ ಸುತ್ತೆಲ್ಲಾ ಸುತ್ತಿ ನಲವತ್ತು ವರ್ಷದ ಹಿಂದೆ ಬೆಂಗಳೂರಿಗೆ ಬಂದು, ರಸ್ತೆಯೇ ಸರಿಯಾಗಿರದಿದ್ದ ಈ ಬಡಾವಣೆಯಲ್ಲಿ ಈ ಮೂಲೆ ಸೈಟನ್ನು ಕೊಂಡು, ಮಕ್ಕಳಂತೂ ಇಲ್ಲ, ಕೊನೆಗಾಲದಲ್ಲಿ ಇರುವುದಕ್ಕಾದರೂ ಸೂರೊಂದಿರಲಿ ಎನ್ನುವ ನೆಮ್ಮದಿಗಾಗಿ ಇಲಾಖೆಯಲ್ಲಿಯೇ ಸಾಲ ಮಾಡಿ ಕಟ್ಟಿಸಿದ ಮನೆ. ರಿಟೈರ್ ಆದಾಗ ಬಂದ ಹಣದಲ್ಲಿ ಮೊದಲ ಮಹಡಿಯಲ್ಲಿ ಚಿಕ್ಕ ಮನೆ ಕಟ್ಟಿ ನಾವು ಅಲ್ಲಿಗೆ ಬಂದು ಕೆಳಗಿನ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದವು. ಮಕ್ಕಳಿಲ್ಲದಿದ್ದರೇನಂತೆ ಮನೆಯೇ ನಮ್ಮ ಮಗ, ತಿಂಗಳು ತಿಂಗಳಿಗೂ ಸಂಪಾದಿಸುತ್ತಾನಲ್ಲ? ಎಂದು ಬೀಗುತ್ತಾ ಬದುಕಿದ್ದ ಕಾಲ. ಮನೆಕಟ್ಟುವ ಕಾಲಕ್ಕೇ ಆ ಮೂಲೆಯಲ್ಲೊಂದು ಕೆಂಡ ಸಂಪಿಗೆ ಮರ, ಈ ಮೂಲೆಯಲ್ಲೊಂದು ಪಾರಿಜಾತದ ಮರ ನೆಡೆಸಿ ಅದು ಹೂ ಬಿಟ್ಟಾಗ ರಸ್ತೆಗೆಲ್ಲಾ ಹಂಚಿ ಸಡಗರಿಸಿದ್ದ ಕಾಲವೂ ಹೌದು. ಇದೀಗ ಆ ಸಡಗರಕ್ಕೆ ಸಂಭ್ರಮಕ್ಕೆ ಸುವರ್ಣದ ಕಲಶವನ್ನಿಡಲು ಈ ಪಿಕಳಾರಹಕ್ಕಿಯ ಆಗಮನವಾಗಿದೆ.

ಮೊದಲ ದಿನ ಹಕ್ಕಿಗಳು ಸುಮಾರು ಅರ್ಧಗಂಟೆಯತನಕ ನಮ್ಮ ಅಂಗಳದಲ್ಲಿ ಹಾರಾಟ ನಡೆಸಿ ವಾಪಸ್ ಹೋಗಿ ಬಿಟ್ಟವು. ಮರುದಿನ ಅದೇ ಸಮಯಕ್ಕೆ ಆಗಮಿಸಿದ ಅವು ಸ್ವಲ್ಪ ಹೆಚ್ಚು ಹೊತ್ತು ಕಾಲ ಕಳೆದವು ನನ್ನ ನಿರೀಕ್ಷೆಯ ಮಟ್ಟವೂ ಏರುವ ಹಾಗೆ! ಮೂರನೇ ದಿನ ಬಂದ ಗಂಡು ಹಕ್ಕಿಯ ಬಾಯಲ್ಲಿ ದೊಡ್ಡ ಹತ್ತಿಯ ಚೂರೊಂದಿತ್ತು. ಓಹೋ ಈ ದಿನ ಗೂಡಿನ ಶಂಕು ಸ್ಥಾಪನೆ ಆಗಿಯೇ ಹೋಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ನನ್ನ ಮನದ ತುಂಬಾ ಆಸೆಯ ಬತ್ತಿಗಳನ್ನು ಹಚ್ಚಿಟ್ಟುಕೊಂಡು ಆರತಿ ಎತ್ತಲು ನಾನು ಕಾದಿದ್ದೇ ಬಂತು. ಗಂಡು ಹಕ್ಕಿ ಸಂಪಿಗೆ ಮರದ ರೆಂಬೆಯ ಮೇಲೆ ಹತ್ತಿಯ ಚೂರನ್ನು ಇಡುವುದು, ಪಾರಿಜಾತದ ಮೇಲೆ ಕುಳಿತ ಹೆಣ್ಣು ಬೇಡ ಬೇಡವೆನ್ನುವಂತೆ ಫೀಫೀಫೀ ದನಿಯನ್ನು ಮಾಡುವುದು, ಎರಡೂ ಕ್ಷಣಾರ್ಧದಲ್ಲಿ ಹಾರಿಯೇ ಬಿಡುವುದು, ಮತ್ತೆ ಕೆಲವೇ ನಿಮಿಷ ಗಂಡಿನ ಆಗಮನ ಪಾರಿಜಾತದ ಮೇಲೆ, ಸಂಪಿಗೆಯ ಮೇಲಿನ ಹೆಣ್ಣು ಮತ್ತೆ ಫೀಫೀಫೀ. ಇವುಗಳ ಸಡಗರವೋ ಸಂಭ್ರಮವೋ ನಿರಾಕರಣೆಯೋ ಸಿದ್ಧತೆಯೋ ಗಂಟೆಗಟ್ಟಲೇ ನಡೆದೇ ಇತ್ತು. ಮರುದಿನ ಗಂಡುಹಕ್ಕಿಯ ಬಾಯಲ್ಲಿ ಉದ್ದನೆಯ ಒಣಹುಲ್ಲು. ಮತ್ತೆ ಜೂಟಾಟ ಫೀಫೀಫೀ ಸಡಗರ. ನನ್ನ ಹೃದಯದ ಬತ್ತಿಗಳು ಉರಿದುರಿದು ಆರಲು ತೊಡಗಿದರೂ ಇಲ್ಲಿ ಶಂಕುಸ್ಥಾಪನೆಯ ಮಾತೇ ಇಲ್ಲ!

ಹೌದು ಅವಾದರೂ ಇಲ್ಲಿ ಏಕೆ ಗೂಡನ್ನು ಕಟ್ಟಿಯಾವು? ನಮ್ಮ ಮನೆಯಿರುವುದು ಹೇಳಿ ಕೇಳಿ ಮೂಲೆಯಲ್ಲಿ. ನಾವು ಮನೆ ಕಟ್ಟಿದಾಗ ಕೊಂಪೆಯಂತಿದ್ದ ಈ ಬಡಾವಣೆ ಈಗ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾಗಿದೆ. ಬರೀ ಬಂಡೆಗಳಂತಿದ್ದ ಜಾಗದಲ್ಲಿ ಇಸ್ಕಾನ್ ದೇವಾಲಯ ತಲೆಯೆತ್ತಿ ತನ್ನ ಪ್ರತಿಷ್ಠೆಯನ್ನೂ ಕಟ್ಟಡವನ್ನೂ ಆಕಾಶಕ್ಕೇರಿಸಿದೆ. ಅತ್ತ ಮಹಲಕ್ಷ್ಮಿ ಬಡಾವಣೆಯ ಆಂಜನೇಯ ಮೂವತ್ತೈದು ವರ್ಷಗಳ ಹಿಂದೆ ಬರೀ ಎತ್ತರ ಬಂಡೆಯಾಗಿದ್ದವ ಇಂದು ಆಕಾರ ತಳೆದು ತನ್ನ ತಲೆಯ ಮೇಲೆ ಸೂರನ್ನೂ, ಅದಕ್ಕೊಂದು ಬಂಗಾರದ ಗೋಪುರವನ್ನೂ ಪಡೆದು ಕೀರ್ತಿಯನ್ನು ಹರಡಿದ್ದಾನೆ. ಇದೀಗ ನಮ್ಮ ಮನೆಯ ಕೊನೆಯಲ್ಲೇ ಮೆಟ್ರೋ ಅವತರಿಸಲು ಕೆಲಸಗಳು ಭರದಿಂದ ನಡೆಯುತ್ತಿವೆ. ಇಂಥಾ ಗುಜಂಗುಷ್ಟಿಯಲ್ಲಿ, ಕಲುಷಿತ ವಾತಾವರಣದಲ್ಲಿ ಗೂಡುಕಟ್ಟಲು ನಮ್ಮಂತೆ ಬುಲ್‌ಬುಲ್‌ಗೇನು ಹುಚ್ಚೆ? ಅವು ಜಾಣಹಕ್ಕಿಗಳು ಹುಡುಕುತ್ತವೆ ಎಲ್ಲದರೂ ನಿರ್ಮಲವಾದ ಪರಿಸರವನ್ನು. ಎನೋ ಎರಡು ದಿನ ನನ್ನಲ್ಲಿ ಆಸೆ ಹುಟ್ಟಿಸಿದವಲ್ಲ ಅಷ್ಟೇ ಸಾಕು ಎನ್ನುತ್ತಾ ನಿಟ್ಟುಸಿರಿಟ್ಟೆ.

ಒಂದೆರಡು ದಿನ ಕಳೆದಿರಬಹುದೆ ಅಷ್ಟೇ ಪಕ್ಕದ ಮನೆಯ ನಿರ್ಮಲಾ "ಆಂಟಿ ಬನ್ನಿ ಇಲ್ಲಿ. ನಮ್ಮ ಅಡುಗೆಮನೆಯ ವೆಂಟಿಲೇಟರ್ ಮೇಲೆ ಹಕ್ಕಿಯೊಂದು ಗೂಡು ಕಟ್ಟಿದೆ ಇದು ಯಾವಹಕ್ಕಿ ಹೇಳಿ. ನೀವಾದರೆ ಹಕ್ಕಿಯ ಬಗ್ಗೆ ಪುಸ್ತಕ ಓದುತ್ತಿರುತ್ತೀರಲ್ಲ"? ಎಂದು ಕರೆದಳು. ಹೋಗಿ ನೋಡುತ್ತೇನೆ, ಹಲವು ದಿನಗಳಿಂದ ನನ್ನಲ್ಲಿ ಆಸೆಯನ್ನು ಚಿಗುರಿಸಿದ ಅವೇ ಬುಲ್‌ಬುಲ್‌ಹಕ್ಕಿಗಳು ಅವಳ ಮನೆಯ ಅಡುಗೆಕೋಣೆಯ ವೆಂಟಿಲೇಟರ್ ಮೇಲೆ ಅಡರಿವೆ. ಸಿಟ್ಟು ಹತಾಶೆಗಳೆಲ್ಲಾ ಒಟ್ಟಿಗೇ ಕಾಡಿದವು. ಇರುವ ಸೈಟಿನ ತುಂಬಾ ಮನೆಕಟ್ಟಿರುವ ಅಲ್ಲಿ ಪಾಟಿನಲ್ಲಿದ್ದ ತುಳಸಿಗಿಡವನ್ನು ಬಿಟ್ಟರೆ ಮತ್ತೊಂದು ಗಿಡವಿಲ್ಲ. ಆದರೂ ಈ ಕಳ್ಳ ಹಕ್ಕಿಗಳು ನನಗೆ ನಿರಾಸೆ ಮಾಡಿ ಇಲ್ಲಿ ಗೂಡು ಕಟ್ಟಿವೆಯಲ್ಲ? ಮಕ್ಕಳಿಲ್ಲದ ನಾವು ಇವಕ್ಕೂ ಬೇಡಾದವೆ? ಸಣ್ಣ ನೋವಿನಲ್ಲೂ ಒಂದು ಸಣ್ಣ ಹಠ ಮುಂದಿನ ವರ್ಷ ಹೇಗಾದರೂ ಇವು ನಮ್ಮಲ್ಲಿ ಗೂಡು ಕಟ್ಟುವಹಾಗೆ ಮಾಡಬೇಕು.

ಅಂದಿನಿಂದ ಬುಲ್‌ಬುಲ್‌ಹಕ್ಕಿಗಳ ಬಗ್ಗೆ ನನ್ನ ಅಧ್ಯಯನ ಪ್ರಾರಂಭವಾಯಿತು. ಅವಕ್ಕೆ ಎಂಥಾ ಪರಿಸರ ಬೇಕು? ಅವುಗಳ ಆಹಾರವೇನು? ಇತ್ಯಾದಿ ಇತ್ಯಾದಿ. ನಮ್ಮ ಅಂಗಳದಲ್ಲಿ ಎರಡು ಮರಗಳೇ ಅಲ್ಲದೇ ದಾಸವಾಳ, ಗುಲಾಬಿ ಮುಂತಾದ ಹೂಗಿಡಗಳೂ ಇದ್ದವು. ಇದರ ಜೊತೆಗೆ ಮುಂದಿನ ವರ್ಷ ಹಣ್ಣು ಬಿಡುವ ಹಾಗೆ ಕಾರೆಹಣ್ಣಿನ ಗಿಡ, ಕವಳೆಹಣ್ಣಿನ ಗಿಡ ಹಾಕಿಸಬೇಕು. ಅವು ನಮಗೇನೂ ಉಪಯೋಗವಿಲ್ಲದಿದ್ದರೂ ಹಕ್ಕಿಗಳಿಗಾಗುತ್ತವೆ. ಬುಲ್‌ಬುಲ್‌ಹಕ್ಕಿಗಳ ಆಹಾರದಲ್ಲಿ ಮಕರಂದವೂ ಸೇರಿದೆ. ಒಂದಿಷ್ಟು ಮಕರಂದ ಹೆಚ್ಚು ಇರುವ ಹೂ ಗಿಡಗಳನ್ನು ಹಾಕುತ್ತೇನೆ. ಹೀಗೇ ಮುಂದಿನ ವರ್ಷದ ಯೋಜನೆ ಸಿದ್ಧವಾಗುತ್ತಲೆ ಇತ್ತು.

ಒಂದು ತಿಂಗಳು ಕಳೆದಿರಬಹುದಷ್ಟೆ, ನಿರ್ಮಲಾ ಬುಲ್‌ಬುಲ್‌ಹಕ್ಕಿಯ ಪುಟ್ಟ ಗೂಡನ್ನು ನನ್ನ ಕೈಲಿರಿಸುತ್ತಾ ಹೇಳಿದಳು "ಆಂಟಿ ಈ ಗೂಡಲ್ಲಿ ಆ ಹಕ್ಕಿಗಳು ಯಾವಾಗ ಮೊಟ್ಟೆ ಇಟ್ಟವೋ ಅವು ಯಾವಾಗ ಮರಿಯಾದವೋ ನಾನು ನೋಡಲೇ ಇಲ್ಲ. ನನ್ನ ಆಫೀಸ್ ಕೆಲಸ ಮನೆಗೆಲಸದಲ್ಲಿ ಇವೆಕ್ಕೆಲ್ಲಾ ಹೊತ್ತೆಲ್ಲಿ? ನಿನ್ನೆ ಮನೆ ಹೊರಭಾಗಕ್ಕೆ ಪೈಂಟ್ ಮಾಡಿಸಲು ಕ್ಲೀನ್ ಮಾಡುತ್ತಿದ್ದಾಗ ಈ ಖಾಲಿ ಗೂಡು ಸಿಕ್ಕಿತು. ನಿಮಗಿದರಲ್ಲೆಲ್ಲಾ ಆಸಕ್ತಿಯಿದೆಯಲ್ಲ? ನೀವಾದರೆ ಇದನ್ನ ಏನಾದರೂ ಕಲಾತ್ಮಕವಾಗಿ ಬಳಸಿಕೊಳ್ತೀರಿ ಅಂತ ತಂದೆ" ಗೂಡು ಬೆಚ್ಚಗೆ ನನ್ನ ಕೈಯಲ್ಲಿ ಕುಳಿತಿತ್ತು. ತಲೆಯನ್ನು ಇದಕ್ಕೊಂದು ಕೃತಕ ಮರ, ಗೂಡಿನಲ್ಲಿಡಲು ಒಂದೆರಡು ಕೃತಕ ಹಕ್ಕಿಗಳು ಏನೇನೋ ಕನಸು ಕಾಣುತ್ತಾ ನಿಂತಿದ್ದೆ. ನಿರ್ಮಲ ಯಾವಾಗ ಹೊರಟು ಹೋದಳೋ, ಇವರು ಯಾವಾಗ ಮೆಟ್ಟಿಲು ಹತ್ತಿ ಬಂದರೋ ಒಂದರ ಪರಿವೆಯೋ ಇಲ್ಲ.

"ಆಯ್ತು ಬಿಡು ನಾವಿನ್ನು ಮುಳುಗಿದಂತೇ" ಇವರಿಂದ ಗಾಬರಿ, ಹತಾಶೆ, ಸಿಟ್ಟಿನ ಸ್ವರ ಕೇಳಿ ಬೆದರಿ ಎಚ್ಚೆತ್ತೆ. 'ಏನಾಯ್ತು'? ಪ್ರಶ್ನೆ ಒಂದೇ ಉತ್ತರ ದೀರ್ಘ, ಮಾರಕ, ಆತ್ಮಾಘಾತಕ, ಇನ್ನೂ ಎನೇನೋ ಎಲ್ಲಾ. "ಮೆಟ್ರೋ ಬರುತ್ತಿರುವುದರಿಂದ ಈ ರಸ್ತೆಯನ್ನೂ ಅಗಲ ಮಾಡುತ್ತಾರಂತೆ ನಮ್ಮ ಮೂವತ್ತೈದು, ಇಪ್ಪತ್ತೈದು ಅಡಿ ಸೈಟಿನಲ್ಲಿ ಮೂವತ್ತೈದು ಅಡಿ ಅಗಲ, ಹದಿನೇಳು ಅಡಿ ಉದ್ದದ ಜಾಗ ರಸ್ತೆಗೆ ಬಿಟ್ಟುಕೊಡಬೇಕಂತೆ. ಉಳಿಯುವುದು ಎಂಟು ಅಡಿ ಅಗಲ ಮೂವತ್ತೈದು ಅಡಿ ಉದ್ದ! ಏನು ಮನೆ ಕಟ್ಟುತ್ತೀಯೋ? ಓಣಿ ಕಟ್ಟುತ್ತೀಯೋ? ನೀನೇ ನಿರ್ಧರಿಸು. ಬರುವ ಬಾಡಿಗೆ ಹೋಗುತ್ತದೆ. ತಿಂಗಳಿಗೆ ಆರು ಸಾವಿರ ಪಿಂಚಣಿಯಲ್ಲಿ ಎಲ್ಲಿ ಬದುಕಲಿ? ಬಾಡಿಗೆ ಮನೆಯನ್ನು ಎಲ್ಲಿ ಹುಡುಕಲಿ? ಇವರು ಕೊಡುವ ಪರಿಹಾರ ಧನ ನಾವು ಬದುಕಿರುವಾಗಲೇ ಸಿಗುತ್ತದೋ ಸತ್ತ ಮೇಲೋ ಯಾರಿಗೆ ಗೊತ್ತು?" ಎಪ್ಪತ್ತೈದು ವರ್ಷದ ಇವರು ಶೂನ್ಯದಲ್ಲಿ ನೋಟಹರಿಸಿ ತಮಗೆ ತಾವೇ ಎಂಬಂತೆ ಪ್ರಶ್ನೆಗಳ ಮೇಲೆ ಪ್ರಶ್ನೆ ಉದುರಿಸುತ್ತಿದ್ದರು.

ನನ್ನ ಮನಸ್ಸು ಮೂವತ್ತೈದು ವರ್ಷಗಳ ಹಿಂದೆ ಜಾರಿತು. ನಾವು ಈ ಮನೆ ಕಟ್ಟಿದ ಹೊಸತು ಹಳ್ಳಿಯಿಂದ ಇವರ ಚಿಕ್ಕಪ್ಪ, ಮಾವ ಬರುತ್ತಿದ್ದರು. ಕಚ್ಚಾ ರಸ್ತೆಯಾದರೂ ಮನೆಯ ಸುತ್ತಾ ಕಾಡಿನಂತೆ ಗಿಡಮರಗಳು ಬೆಳೆದಿದ್ದವು. ಅವುಗಳ ತುಂಬಾ ಗಿಣಿ, ಗುಬ್ಬಚ್ಚಿಗಳ ಗೂಡು ಕಣ್ಣಿಗೇ ಕಾಣಿಸುತ್ತಿದ್ದವು. ಬೆಳಗಿನ ಐದು ಗಂಟೆಗೆ ಅಂಗಳದಲ್ಲಿ ನಿಂತರೆ ಸಾಕು ಸೂರ್ಯನ ಕೆಂಪು ಕಿರಣಗಳು ಮೈಮನವನ್ನೆಲ್ಲಾ ತೋಯಿಸಿಬಿಡುತ್ತಿದ್ದವು. 'ಸೂರ್ಯೋದಯದ ಸೊಬಗು ನೋಡಲು ನಿಮ್ಮ ಮನೆಗೇ ಬರಬೇಕು' ಎಂದು ಬೇರೆ ಬಡಾವಣೆಯಲ್ಲಿದ್ದ ನೆಂಟರು ನಮ್ಮ ಮನೆಯನ್ನು ಹಾಡಿಹೊಗಳುತ್ತಿದ್ದರು. ಈ ಹೆಮ್ಮೆಯನ್ನು ಉಳಿಸಿಕೊಳ್ಳಲಿಕ್ಕೇ ಅಲ್ಲವೇ ಮಹಡಿಯಲ್ಲಿ ಮನೆಕಟ್ಟುವಾಗ ಮನೆ ಚಿಕ್ಕದಾದರೂ ಚಿಂತೆಯಿಲ್ಲ ಬಾಲ್ಕನಿ ದೊಡ್ಡದಾಗಿರಬೇಕೆಂದು ಹತ್ತಡಿ ಅಗಲ ಹತ್ತಡಿ ಉದ್ದದ ಜಾಗವನ್ನು ತೆರುವಾಗಿಯೇ ಇರಿಸಿಕೊಂಡದ್ದು? ಈ ಬಾಲ್ಕನಿ ಈ ಉಯ್ಯಾಲೆ ಇವುಗಳಲ್ಲಿ ಸಡಗರಿಸಿದವರೆಷ್ಟು? ಸಂಭ್ರಮಿಸಿದವರೆಷ್ಟು? ಬಂದ ನೆಂಟರಂತೂ ಮನೆಯೊಳಗೆ ಬರುವಂತೆಯೇ ಇಲ್ಲ, ಉಯ್ಯಾಲೆಯಲ್ಲೇ ಸ್ಥಾಪನೆ! ಅಲ್ಲೇ ಕಾಫಿ ತಿಂಡಿಗಳ ಸರಬರಾಜು! ಮಕ್ಕಳೂ ಅಷ್ಟೆ, ಉಯ್ಯಾಲೆಯ ಸರಪಳಿ ಕಬ್ಬಿಣದ್ದಾದ್ದರಿಂದ ಉಳಿಸಿವೆ, ಹಗ್ಗದ್ದಾಗಿದ್ದರೆ ಎಂದೋ ಕಿತ್ತು ಹೋಗಿರುತ್ತಿತ್ತು. ನೆಂಟರು ಬಾಲ್ಕನಿಯಲ್ಲೂ ಉಯ್ಯಾಲೆಯಲ್ಲೂ ಮಲಗಿದ್ದೂ ಉಂಟು, ಬೆಳಗಿನ ಸೂರ್ಯಪಾನ ಮಾಡಿದ್ದೂ ಉಂಟು.

ನಮ್ಮ ಮನೆ ಎತ್ತರದಲ್ಲಿದೆ. ಮತ್ತು ಮನೆಯ ಮುಂದೆ ಒಂದು ತ್ರಿಕೋಣಾಕಾರದ ಪಾರ್ಕ್ ಇದೆ. ಆ ಪಾರ್ಕಿನಿಂದ ಕೆಳಗೆ ಇಳಿಜಾರಿನಲ್ಲಿ ರಸ್ತೆ ಇಳಿದಿದೆ. ಮನೆಯ ಮುಂದೆ ಮನೆಯೇ ಕಟ್ಟುವವರಿಲ್ಲವಾದ್ದರಿಂದ ಸೂರ್ಯನಿಗೂ ನಮಗೂ ನೇರ ನೆಂಟಸ್ಥನ! 'ಪೂರ್ವದಿಕ್ಕಿನ ಮನೆ ಎಂಥಾ ಪುಣ್ಯವಂತರು ನೀವು'? ಹೌದು ಸತತ ಮೂವತ್ತೈದು ವರ್ಷಗಳು ಪುಣ್ಯ ಅನುಭವಿಸಿದ್ದಾಯಿತು. ಈಗ? ಉಳಿಯುವ ಎಂಟಡಿಯಲ್ಲಿ ಮನೆಯೋ ಗುಡಿಸಲೋ? ಕೈಯಲ್ಲಿರುವ ಪಿಕಳಾರದ ಗೂಡಿನ ಕಡೆ ನೋಟ ಹರಿಯಿತು. ಯಾವ ಮೇದಾರನೂ ಮಾಡದಂಥಾ ಸುಂದರ ಮಾಟದ ಗೂಡು ನನ್ನ ಕೈಲಿದೆ. ಇದನ್ನು ಕಟ್ಟಿದ ಜೋಡಿಹಕ್ಕಿಗಳು ನಿಸೂರಾಗಿ ತಮ್ಮ ಮರಿಗಳನ್ನು ಆಕಾಶಕ್ಕೊಪ್ಪಿಸಿ ಹಾರಿಹೋಗಿವೆ ಅವೆಲ್ಲವೂ ನಮ್ಮನ್ನು ನೋಡಿ ನಸುನಗುತ್ತಿವೆಯೇ?

English summary
Bulbul bird and home : Kannada short story by Shantha Nagaraj, Bangalore. Is Bangalore metro boon or bane to the residents of Bangalore?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X