ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಿಸೋಜ ಭಾಷಣ ಪ್ಯಾಕೇಜ್

By Mahesh
|
Google Oneindia Kannada News

ಕೊಡಗಿನ ಮಡಿಕೇರಿಯಲ್ಲಿ ನಡೆದಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ. ಡಿಸೋಜ ಅವರು ಮೊದಲ ದಿನ ಮಾಡಿರುವ ಅಧ್ಯಕ್ಷೀಯ ಭಾಷಣದ ಪೂರ್ಣಪಾಠ ಇಲ್ಲಿದೆ ಓದಿ

ಎಲ್ಲ ಅಭಿಮಾನಿ ಕನ್ನಡಿಗರೇ,
ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವೊಳೋ
ಅಲ್ಲಿ ಆಕಡೆ ನೋಡಲಾ ಅಲ್ಲಿ ಕೊಡವರ ನಾಡಲಾ ಅಲ್ಲಿ ಕೊಡವರ ಬೀಡಲಾ.
ಸವಿದು ಮೆದ್ದರೋ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು
ಕವಣೆತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು
ಸವರಿ ಆನೆಯ ಸೊಂಡಿಲಲಿ ರಣಕೊಂಬನಾರ್ ಭೋರ್ಗರೆವರೋ
ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ
ಅವರು ಸೋಲ್ಸಾವರಿಯರು ಅವರು ಕಡುಗಲಿಗಲಿವರು ಅವರು ಕೊಡಗಿನ ಹಿರಿಯರು
ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್
ಹೆಮ್ಮೆ ಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೋಲ್
ಬೊಮ್ಮ ಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶವು
ಧರ್ಮ ದಾನದ ಕಟ್ಟು ಕಟ್ಟಳೆ ರೀತಿ ನೀತಿಯ ಕೋಶವು
ನಮ್ಮ ಕೊಡಗಿದು ಜಮ್ಮದು ಜಮ್ಮ ಕೊಡಗಿದು ನಮ್ಮದು ನಮ್ಮೊಡಲ್ ಬಿಡಲಮ್ಮದು.
ಇದು ಅಗಸ್ತ್ಯನ ತಪದ ಮಣೆ ಕಾವೇರಿ ತಾಯ ತವರ್ಮನೆ
ಕನಸಸಿರಿಗುಯ್ಯಾಲೆ ತೂಗಿನಿಲ್ಲಿ ಚಂದಿರವರ್ಮನೆ
ಇದಕೋ ಚಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು
ಇದೋ ಇದೋ ಇಲ್ಲುರುಳ್ದ ಹಾಲೇರಿಯರ ಬಲಗಿರಿ ಶೃಂಗವು
ವಿಧಿಯ ಮಾಟದ ಕೊಡಗಿದು ಮೊದಲೆ ನಮ್ಮದು, ಕಡೆಗಿದು ಕದಲದೆಮ್ಮನು ಬೆಡಗಿದು
ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ
ಸುಮ್ಮನಿತ್ತರೋ ದಟ್ಟಿ ಕುಪ್ಪಸ ? ಹಾಡು ಹುತ್ತರಿಗೇಳಿರಿ
ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ
ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ
ನೆಮ್ಮದಿಯನಿದು ತಾಳಲಿ ಅಮ್ಮೆಯಾ ಬಲ ತೋಳಲಿ ನಮ್ಮ ಕೊಡಗಿದು ಬಾಳಲಿ
-ಪಂಜೆ ಮಂಗೇಶ ರಾವ್ (1874-1937)

ಪಂಜೆ ಮಂಗೇಶ ರಾಯರ ಈ ಕವಿತೆ ಚಿಕ್ಕಂದಿನಲ್ಲಿಯೇ ನನ್ನನ್ನ ಆಕರ್ಷಿಸಿತ್ತು. ಪಂಜೆಯವರು ಕೊಡಗಿನ ಈ ಶ್ರೀಮಂತಿಕೆಯನ್ನ, ಪರಿಸರದ ವೈಭವವನ್ನ, ಕೊಡಗರ ಧೀರತನವನ್ನ ಸೆರೆ ಹಿಡಿದದ್ದು ಕೇವಲ ಭಾಷೆಯ ಮೂಲಕ. ಇಂತಹಾ ಒಂದು ಘನತೆ ನಮ್ಮ ಭಾಷೆಗೆ ಇದೆ ಅನ್ನುವುದೇ ಒಂದು ವಿಶೇಷತೆ.

ಓರ್ವ ಮಹಾನ್ ಕಲಾವಿದ ಕೈಲಿದ್ದ ಕಲಾ ಕುಂಚವನ್ನ ವಿವಿಧ ಬಣ್ಣಗಳಲ್ಲಿ ಅದ್ದಿ ವಿಸ್ತಾರವಾದ ಕ್ಯಾನವಾಸಿನ ಮೇಲೆ ಒಂದು ಭವ್ಯವಾದ ಚಿತ್ರವನ್ನ ರಚಿಸಿದ ಹಾಗೆ ಪಂಜೆಯವರು ಈ ಪದ್ಯದಲ್ಲಿ ಕೊಡಗನ್ನ ಬಣ್ಣಿಸಿದ್ದಾರೆ. ಇದು ನನ್ನ ಆಕರ್ಷಣೆಗೆ ಕಾರಣ. ಆದರೆ ಈ ಸುಂದರ ಭವ್ಯ ಪ್ರದೇಶವನ್ನ ನೋಡ ಬೇಕು ಅನ್ನುವ ನನ್ನ ಕನಸು ನನಸಾದದ್ದು ತುಸು ತಡವಾಗಿ. ನನ್ನ ಮಗಳ ಮದುವೆಯ ನಂತರ ನನ್ನ ಮಗಳು ಅಳಿಯನ ಜೊತೆಯಲ್ಲಿ ನಾನು ಕೊಡಗಿಗೆ ಬಂದೆ. ಇಲ್ಲೆಲ್ಲ ಸುತ್ತಾಡಿದೆ. ಸಾಲಲಿಲ್ಲ. ಮತ್ತೊಮ್ಮೆ ನನ್ನ ಹೆಂಡತಿ ಜೊತೆಗೆ ಕೊಡಗಿಗೆ ಬಂದೆ. ತಲಕಾವೇರಿ, ಭಾಗಮಂಡಲದಿಂದ ರಾಜಾ ಸೀಟಿನವರೆಗೆ ಕೊಡಗನ್ನ ಕಂಡೆ.

80th Kannada Sahitya Sammelana Madikeri President Norbert D'Souza Speech

ನಾನು ಮಲೆನಾಡಿನವ. ನಮ್ಮಲ್ಲಿ ಗುಡ್ಡಗಳು ವಿಸ್ತಾರ, ಕಣಿವೆಗಳು ಆಳ. ಆದರೆ ಕೊಡಗಿನ ಬೆಟ್ಟಗಳು ಹತ್ತಿರ ಹತ್ತಿರ ಒಂದನ್ನೊಂದು ಒತ್ತಿ ನಿಂತು ಕೊಂಡವು. ನಮ್ಮ ಮಲೆನಾಡಿನ ಪರಿಸರಕ್ಕಿಂತ ಭಿನ್ನವಾದ ಪರಿಸರವನ್ನ ನಾನಿಲ್ಲಿ ಕಂಡೆ. ಇದಕ್ಕೆ ಕಾರಣ ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿ ಪ್ರಾರಂಭವಾಗುವುದೇ ಕೊಡಗಿನಿಂದ. ಕೊಡಗನ್ನ ಕರ್ನಾಟಕದ ಸ್ವಿಜರಲ್ಯಾಂಡ ಎಂದು ಕರೆಯುತ್ತಾರೆ. ನಾನು ನನ್ನ ನಾಡನ್ನ ಹೊಗಳಲಿಕ್ಕೆ ಬೇರೊಂದು ದೇಶವನ್ನ ಎರವಲು ಪಡೆಯಲು ಹೋಗುವುದಿಲ್ಲ. ಕೊಡಗು ಕೊಡಗೆ. ಸಮುದ್ರಕ್ಕೆ ಸುಮುದ್ರವೇ ಉಪಮೆಯಂತೆ. ಹಾಗೆಯೇ ಕೊಡಗಿಗೆ ಕೊಡಗೇ ಉಪಮೆ. ಇಲ್ಲಿಯ ಜನಜೀವನ, ಬದುಕಿನ ಕ್ರಮ, ಶ್ರೀಮಂತಿಕೆ, ಭಾಷೆ, ವೀರಯೋಧರನ್ನ ಸದಾ ದೇಶಕ್ಕೆ ಮೀಸಲಿಡುವ ಪರಂಪರೆ, ಕ್ರೀಡಾ ಪಟುಗಳ ಜನ್ಮ ಭೂಮಿ ಇದು. ಇದೆಲ್ಲವೂ ನಾವು ಕನ್ನಡಿಗರು ಹೆಮ್ಮೆ ಪಡುವಂತಹದು. ಇದೀಗ ಮೂರನೇ ಬಾರಿ ನಾನು ಕೊಡಗಿಗೆ ಬಂದಿದ್ದೇನೆ. ಬಂದಿದ್ದೇನೆ ಅನ್ನುವುದಕ್ಕಿಂತ ಕನ್ನಡ ಜನ ನನ್ನನ್ನ ಇಲ್ಲಿಗೆ ಬರಮಾಡಿ ಕೊಂಡಿದ್ದಾರೆ, ಪ್ರೀತಿಯಿಂದ, ಮಮತೆಯಿಂದ, ವಿಶ್ವಾಸದಿಂದ, ಆದರದಿಂದ, ಆತ್ಮೀಯತೆಯಿಂದ. ಕಳೆದ 50 ವರ್ಷಗಳ ನನ್ನ ಕನ್ನಡ ಸೇವೆಯನ್ನ ಗುರುತಿಸಿ ನನಗೆ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನ ದಯಪಾಲಿಸಿ ನನ್ನನ್ನ ಇಲ್ಲಿಗೆ ಬರಮಾಡಿಕೊಂಡಿದ್ದಾರೆ.

ಕೊಡಗು ಐತಿಹಾಸಿಕವಾಗಿ, ಜಾನಪದೀಯವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ನೈಸರ್ಗಿಕ ವಾಗಿ ಶ್ರೀಮಂತವಾದ ಪ್ರದೇಶ. ದೇಶದ ರಕ್ಷಣೆಯ ವಿಷಯಕ್ಕೆ ಬಂದಾಗ ಸದಾ ಮುಂಚೂಣಿಯಲ್ಲಿ ಇರುವ ಪ್ರದೇಶ ಇದು. ನಮ್ಮ ಸೇನಾ ಹಿನ್ನೆಲೆಯಲ್ಲಿ ಪ್ರಭಾವಶಾಲಿಯಾಗಿ ನಿಂತ ಓರ್ವ ಯೋಧ ಜನರಲ್ ಕಾರಿಯಪ್ಪ ಕುರಿತು ಮಕ್ಕಳಿಗಾಗಿ ನಾನು ಒಂದು ಪುಸ್ತಕವನ್ನ ಬರೆದಿದ್ದೇನೆ ಕೂಡ. ಕನ್ನಡ, ಮಲೆಯಾಳಿ, ತಮಿಳಿನಿಂದ ಪ್ರಭಾವಿತವಾದ ಕೊಡಗು ಭಾಷೆ ಮೂಲದಲ್ಲಿ ಅವಲಂಬಿಸಿ ಕೊಂಡಿರುವುದು ಕನ್ನಡ ಶಬ್ದಗಳನ್ನೇ ಎಂದು ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಕೊಡಗಿನ ಪ್ರಖ್ಯಾತ ಕವಿಗಳೆಂದರೆ ಅಪ್ಪನೆರವಂಡಪ್ಪುಚ್ಚ ಕವಿ, ನಡಕೇರಿಯಿಂಡ ಚಿಣ್ಣಪ್ಪ ಕವಿ. ಕನ್ನಡ ಸಾಹಿತ್ಯಕ್ಕೆ ಅಪರೂಪದ ಸಣ್ಣ ಕತೆ ನೀಡಿದ ಕೊಡಗಿನ ಗೌರಮ್ಮನವರನ್ನ ಎಂದೂ ಮರೆಯಲಾಗದು. ಅಂತೆಯೇ ಕೊಡಗಿನ ಪ್ರಖ್ಯಾತ ಲೇಖಕರಾದ ಐ. ಮಾ. ಮುತ್ತಣ್ಣ, ಬಿ. ಗಣಪತಿ, ಎಸ್. ಚಿನ್ನಪ್ಪ ಮೊದಲಾದವರನ್ನು ಸಹ. ಕ್ರಿಸ್ತಶಕ ಎರಡನೇ ಶತಮಾನದಿಂದ ಪ್ರಾರಂಭವಾಗುವ ಕೊಡಗಿನ ಇತಿಹಾಸ ರೋಮಾಂಚನವನ್ನ ಉಂಟು ಮಾಡುವಂತಹದು.

ಕರ್ನಾಟಕದ ಪ್ರಥಮ ದೊರೆಯೆಂದೇ ಪ್ರಖ್ಯಾತನಾದ ಕದಂಬ ಮಯೂರ ವರ್ಮನ ವಂಶದವನಾದ ಚಂದ್ರ ವರ್ಮ ಕೊಡಗಿನ ಮೂಲ ಪುರುಷ. ಗಂಗ, ಕದಂಬ, ಚೋಳ, ಕೊಂಗಾಳ್ವರು, ಚೆಂಗಾಳ್ವರು, ಹೊಯ್ಸಳ, ವಿಜಯನಗರದ ಅರಸರು, ಇಲ್ಲಿ ರಾಜ್ಯವನ್ನ ಆಳಿದ್ದಾರೆ. ದೂರದ ನಮ್ಮ ಇಕ್ಕೇರಿಯ ಅರಸರು ಕೊಡಗರ ಹೆಣ್ಣನ್ನ ಮಲೆನಾಡಿಗೆ ಕೊಂಡೊಯ್ದದ್ದು ನಮಗೆ ಮಲೆನಾಡಿಗರಿಗೆ ಹೆಮ್ಮೆಯ ವಿಷಯ. ಇದೆಲ್ಲದರ ಕುರುಹಾಗಿ ಹಿಂದಿನ ಅವಶೇಷಗಳು, ದೇವಾಲಯಗಳು ಇಲ್ಲಿವೆ. ಈ ದೊರೆಗಳ ಕಾಲದ ಶಾಸನಗಳು ದೊರೆತಿವೆ. ಇಂತಹಾ ಒಂದು ಮಣ್ಣಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅರ್ಥಪೂರ್ಣ ಎಂದು ನಾನು ಬಗೆಯುತ್ತೇನೆ. ಸಮ್ಮೇಳನಾಧ್ಯಕ್ಷರು ತಮ್ಮ ಬಗ್ಗೆ ಏನು ಹೇಳಿದರು ಮುಂದೆ ಓದಿ..

English summary
The three day Kannada Sahitya Sammelana inaugurated today (Jan.7). Here is the complete text of speech by eminent Kannada writer and novelist President for 80th Kannada Sahitya Sammelana Norbert D'Souza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X