ಜಯಂತ್ ಕಾಯ್ಕಿಣಿ ಕವನ: ಒಂದು ಜಿಲೇಬಿ

 
Share this on your social network:
   Facebook Twitter Google+    Comments Mail

ಜಯಂತ್ ಕಾಯ್ಕಿಣಿ ಕವನ: ಒಂದು ಜಿಲೇಬಿ
* ಜಯಂತ್ ಕಾಯ್ಕಿಣಿ

ಬಸ್ ಸ್ಟಾಂಡ್ ತನಕ ಬಿಟ್ಟು ಬಾರೋ
ಅಂದಿದ್ದಕ್ಕೆ ಯಾಕಿಷ್ಟು ಸಿಟ್ಟು ಪೋರಾ
ನಿನ್ನ ಬೇಬಕ್ಕ ಕಣೋ ಅವಳು
ಈ ಕಂದನ ಮಾಮನಪ್ಪಾ ನೀನು ಎತ್ತಿಕೊಳ್ಳೋ
ಮುದ್ದು ಮಾಡೋ

ಹೋಗ್ತಾ ತಿರುವಿನ ಗೂಡಂಗಡಿಯಲ್ಲಿ
ಪೆಪ್ಪರಮಿಂಟು ಕೊಡಿಸು
ಪುಟ್ಟಬಲೆಗಳಪುಟಾಣಿ ಬೊಗಸೆಯಲ್ಲಿ
ಅವಕೆ ಇನ್ನೂ ಬಣ್ಣ ನೋಡು

ಈ ಶರ್ಟು ಬೇಬೀನೇ ತಂದಿದ್ದಲ್ಲವೇನೋ ಹೋದ ಸರ್ತಿ
ಏನೋ ಅಡಚಣೆ ಈ ಸಲ ತಂದಿಲ್ಲ ಅಷ್ಟೆ
ಬೆಂಗಳೂರಿಗೆ ಕೆಲಸ ಹುಡುಕಲು ಹೋಗುತ್ತೀ ಅಂತಿ
ಆಗ ಅವಳಲ್ಲೇ ಇರಬೇಕು ತಾನೆ ನೀನು
ಹೀಗೆ ಸೆಟೆದುಕೊಂಡು ಹೇಗೋ
ಈ ನಿನ್ನ ದಾಡಿ ಮಾಡದ ಮುಖ ನೋಡಿ ಅವಳು
ಹುಷಾರಿಲ್ವೇನೋ ಎಂದಿದ್ದಕ್ಕೆ

ಹೌದು ಬದುಕೇ ಒಂದು ಕಾಯಿಲೆ ಎಂದು ಬಿಟ್ಟೆ
ತಪ್ಪು ತಪ್ಪು ಕಂದಾ
ಕಣ್ಣು ಮುಂಜಾಗಲು ಬಂದರೂ ನೈಟ್ ಬಸ್ಸಿನ ಡ್ಯೂಟಿಗೆ
ಹೋಗ್ತಾರಲ್ಲಾ. . .ನಿನಗೆ ದಡ್ಡರಂತೆಕಾಣ್ತಾರಲ್ಲಾ. ..
ನಿನ್ನಪ್ಪ. .. ಅವರಿಗೆ ದಾವಣಗೆರೆ ಸರ್ಕಾರಿ ಆಸ್ಪತ್ರೆ
ಹಾಯುವಾಗೆಲ್ಲ ಪ್ರತಿ ಸಲಾನೂ ಖುಷಿಯಂತೆ.. .
ನಮ್ಮ ಬಾಬು ಹುಟ್ಟಿದ್ದು ಇಲ್ಲೇ ಅಂತ
ಪಕ್ಕದಲ್ಲಿದ್ದವರಿಗೆ ಹೇಳ್ತಾರಂತೆ

ನೀನು ಹೊಟ್ಟೇಲಿದ್ದಾಗ ಅವರ ಅಕ್ಕ
ಅಂದ್ರೆ ನಿನ್ನ ಕಾಕೂ ಸಾಂಗ್ಲಿಯಲ್ಲಿ ಕೂತುಕೊಂಡೇ
ನಿನಗಾಗಿ ಹೆಣೆದು ಕಳಿಸಿದ್ದರಲ್ಲ ಅದೇ
ಅದೇ ಜಾಂಬಳಿ ಸ್ವೆಟರು ಇದು ನೋಡು
ಈಗ ಈ ಮರಿ ಹಾಕಿಕೊಂಡಿದ್ದು. .. ಬಟನ್ ಮಾತ್ರ ಬೇರೆ. ..

ಜಾಣ ಬಾಬು ಏಳು
ಬಿಟ್ಟು ಬಾ ಅವರನ್ನು ಬಸ್ ಸ್ಟಾಂಡಿಗೆ
ಹಾಗೇ ಪಬ್ಲಿಕ್ ಲೈಬ್ರರಿಗೆ ಹೋಗಿ
ವರ್ತಮಾನ ಪತ್ರಿಕೆಗಳನ್ನು ಓದಿ ಬಾ

ಬೇಬಿಗಿಂತ ತಂದಿದ್ದ ಜಿಲೇಬಿಯಲ್ಲಿ ಒಂದನ್ನು
ಅವಳ ಕಂದನ ಕಣ್ಣಿಂದಲೂ ತಪ್ಪಿಸಿ ಬಚ್ಚಿಟ್ಟಿದ್ದೇನೆ
ಆ ಮೇಲೆ ಬಂದು ತಿನ್ನು
ಏಳು ಚಿನ್ನ ಹೊರಡು

ಇದನ್ನೂ ಓದಿ:
ಕೊನೇ ಶಬ್ದ : ಜಯಂತ್ ಕಾಯ್ಕಿಣಿ ಕವನ

&13;

Write a Comment