ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಳಿವಿನಂಚಿನಲ್ಲಿರುವ ಕೊಡಗಿನ ‘ಕೆಂಬಟ್ಟಿ’ ಜನಾಂಗ ಮರೆಯಾಗದಿರಲಿ

By ಬಿ.ಎಂ.ಲವಕುಮಾರ್
|
Google Oneindia Kannada News

ಇದು ತಲತಲಾಂತರಗಳಿಂದಲೂ ಕೊಡಗಿನಲ್ಲಿ ಕೊಡವ ಸಂಸ್ಕೃತಿಯನ್ನು ಅನುಸರಿಸುತ್ತಾ ಬದುಕು ಕಟ್ಟಿಕೊಂಡು ಬಂದಿರುವ ಮೂಲ ನಿವಾಸಿಗಳಾದ ಕೆಂಬಟ್ಟಿ ಜನಾಂಗದ ದುರಂತ ಕಥೆ. ಕೆಂಬಟ್ಟಿ ಜನಾಂಗವನ್ನು ಕೊಡಗು ಹೊರತುಪಡಿಸಿದರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.

ಕೆಂಬಟ್ಟಿ ಜನಾಂಗದ ದುರಂತ ಅಂದ್ರೆ ಕೊಡಗಿನಲ್ಲಿ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಈ ಜನಾಂಗದ ಹೆಸರು ಜಾತಿವಾರು ಪಟ್ಟಿಯಲ್ಲಿ ಇನ್ನೂ ಕೂಡ ದಾಖಲಾಗಿಲ್ಲ. ಹೀಗಾಗಿ ಈ ಜನಾಂಗ ಸರ್ಕಾರದ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ.

ಕೆಂಬಟ್ಟಿ ಜನಾಂಗದ ಕುರಿತು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಇವರು ಕೊಡಗಿನ ಮೂಲ ನಿವಾಸಿಗಳು ಎನ್ನುವುದು ತಿಳಿದು ಬರುತ್ತದೆಯಲ್ಲದೆ, ಕೊಡವ ಆಚಾರ, ವಿಚಾರ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿರುವ ಕೀರ್ತಿಯೂ ಸಲ್ಲುತ್ತದೆ. ಈ ಜನಾಂಗವು ಜಿಲ್ಲೆಯ ಕೆಲವೇ ಕೆಲವು ಕಡೆ ಮಾತ್ರ ವಾಸವಿರುವುದನ್ನು ನಾವು ಕಾಣಬಹುದು.[ಇಂದು ಹುತ್ತರಿ ಹಬ್ಬ, ಮನೆಗೆ ಬಂದಳು ಧಾನ್ಯಲಕ್ಷ್ಮಿ!]

ವಿರಾಜಪೇಟೆ ತಾಲ್ಲೂಕಿನಲ್ಲಿ ಶೇ.70, ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ಶೇ.30ರಷ್ಟು ವಾಸವಿರುವುದಾಗಿಯೂ, ಒಟ್ಟಾರೆ ಇಡೀ ಜಿಲ್ಲೆಯಲ್ಲಿ 20,000 ಜನಸಂಖ್ಯೆ ಹೊಂದಿರುವುದಾಗಿ ಅಂದಾಜಿಸಲಾಗಿದೆ.

The Kembatti Holeya community are live in the Kodagu district of Karnataka

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜೋಡುಬಿಟ್ಟಿ, ಮತ್ತೂರು, ಮುಗಟಗೇರಿ, ಕಾನೂರು, ಕೋತೂರು, ವಡ್ಡರಮಾಡು, ಬಾಳೆಲೆ, ಕೈಕೇರಿ, ನಾಂಗಾಲ, ವೀರಾಜಪೇಟೆ, ಮಗ್ಗುಲ, ಕರಡ, ಕಕ್ಕಬೆ, ಕುಂಜಿಲ, ಸೂರ್ಯ, ಪಾರಾಣೆ, ಬಿಳುಗುಂದ, ಅರಮೇರಿ, ಬೇತ್ರಿ, ಮಡಿಕೇರಿ, ಕಡಗದಾಳು, ಕುಶಾಲನಗರ, ಆರ್ಜಿ, ಮರಂದೋಡು, ತಿತಿಮತಿ, ನಡಿಕೇರಿ, ಹುದಿಕೇರಿಯಲ್ಲಿ ವಾಸಿಸುವುದನ್ನು ಕಾಣಬಹುದು.

ಬಿಲ್ಲರಿ ಕುಟ್ಟಡ, ಪೆಮ್ಮಡಿ ಕುಟ್ಟಡ, ಮೂಕುಟ್ಟಡ, ಚಟ್ಟಕುಟ್ಟಡ, ತೂಚಕುಟ್ಟಡ, ಚಿಮ್ಮಿಕುಟ್ಟಡ, ಚಟ್ಟಕುಟ್ಟಡ(ಮಗ್ಗುಲ) ಉತ್ತಕುಟ್ಟಡ(ಕಕ್ಕಬೆ) ಹೀಗೆ 38 'ಮನೆ ಹೆಸರು(ಕುಟುಂಬ)' ಮತ್ತು ಊರಿನಲ್ಲಿ 'ದೇವರ ಮಂದ್(ಪ್ರಾಚೀನ)' ಹೊಂದಿರುವ ಜನಾಂಗವು ಬ್ರಿಟಿಷರ ಆಳ್ವಿಕೆಯ ಸಮಯದಲ್ಲೂ ಹಾಗೂ ಕೊಡಗಿನ ರಾಜರ ಕಾಲದಿಂದಲೂ ನೆಲೆಸಿದ ಪುರಾವೆಗಳಿವೆ. ಆದರೆ ಸರ್ಕಾರದ ಜಾತಿವಾರು ಪಟ್ಟಿಯಲ್ಲಿ ಈ ಜನಾಂಗವನ್ನು ಸೇರಿಸುವ ಕೆಲಸವಾಗದಿರುವುದರಿಂದ ಈ ಜನಾಂಗಕ್ಕೆ ಆದ್ಯತೆ ಸಿಗದೆ ಇನ್ನೂ ಕೂಡ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿಯುವಂತಾಗಿದೆ.['ಕರ್ನಾಟಕದ ಕಾಶ್ಮೀರ' ಕೊಡಗು ಪ್ರವಾಸಿಗರಿಲ್ಲದೆ ಖಾಲಿ..ಖಾಲಿ]

ಪ್ರಕೃತಿಯೊಂದಿಗೆ ಒಡನಾಟ:

ಈ ಜನಾಂಗ ಆದಿವಾಸಿಗಳಲ್ಲದಿದ್ದರೂ ಸದಾ ಪ್ರಕೃತಿಯೊಂದಿಗೆ ಒಡನಾಟ ಇಟ್ಟುಕೊಂಡವರು. ಕಾಡಿನಲ್ಲಿ ದೊರೆಯುವ ಸಂಪನ್ಮೂಲಗಳೇ ಇವರಿಗೆ ಜೀವನಾಧಾರವಾಗಿತ್ತು. ಹಿಂದಿನ ಕಾಲದಲ್ಲಿ ಕಾಡಿಗೆ ಹೋಗಿ ವೋಟೆ (ಒಂದು ಜಾತಿಯ ಬಿದಿರು)ಯನ್ನು ಕಡಿದು ತಂದು ಅದರಲ್ಲಿ ಕುಕ್ಕೆ (ಗದ್ದೆಗೆ ಗೊಬ್ಬರ ಹಾಕಲು) ತುಳಿಯ(ಭತ್ತ ಶೇಖರಿಸಿ ಇಡಲು), ಕೋರಿಕೊಡೆ(ಮಳೆಗಾಲದಲ್ಲಿ ಗದ್ದೆ ತೋಟಕ್ಕೆ ಹೋಗಲು ಕೊಡೆಯ ರೂಪದಲ್ಲಿ ಉಪಯೋಗಿಸುತ್ತಿದ್ದರು) ಈಗಲೂ ಕಕ್ಕಬೆ, ನಾಪೋಕ್ಲು ಕಡೆಗಳಲ್ಲಿ ಕಂಡುಬರುತ್ತದೆ. ಮೀನು ಹಿಡಿಯಲು ಪೊಡಗಳನ್ನು ತಯಾರಿಸುತ್ತಿದ್ದರು.

ಹೆಂಗಸರು ಕಾಡಿನಿಂದ ಓಲೆಗರಿ (ತಾಳೆಗರಿಗೆ ಸೇರಿರುವ ಒಂದು ರೀತಿಯ ಸಸ್ಯ)ಯನ್ನು ತಂದು ಹದ ಮಾಡಿ ಚಾಪೆ(ಪಲಂಬು) ತಯಾರಿಸುತ್ತಿದ್ದರು. (ಆಗಿನ ಕಾಲದಲ್ಲಿ ಇದನ್ನು ಮದುವೆ ಸಂದರ್ಭ ಬಾಳೆ ಕಡಿಯುವ ಶಾಸ್ತ್ರದಲ್ಲಿ ಹಾಗೂ ವಧು-ವರ ಧಾರೆಗೆ ಕೂರುವ ಸ್ಥಳದಲ್ಲಿ ಹಾಸಿ ಕೂರಿಸಲಾಗುತ್ತಿತ್ತು. ಈಗ ಓಲೆಗರಿ ಹಾಗೂ ವೋಟೆಗಳು ಸಿಗದ ಕಾರಣ ಈ ಕಸುಬುಗಳು ಮರೆಯಾಗಿದೆ. ಚಾಪೆ ಮಾತ್ರ ಈಗಲೂ ಚಾಲ್ತಿಯಲ್ಲಿದೆ.) ಇದನ್ನು ಮನೆಮನೆಗೆ ಕೊಂಡೊಯ್ದು ಮಾರಿ ತಮ್ಮ ಜೀವನವನ್ನು ನಡೆಸುತ್ತಿದ್ದರು. ಇವತ್ತಿನ ದಿನಗಳಲ್ಲಿ ಈ ವಸ್ತುಗಳು ಹೇರಳವಾಗಿ ಸಿಗದ ಕಾರಣ ಜೀವನ ನಿರ್ವಹಣೆಗಾಗಿ ಕೂಲಿ ಕೆಲಸ ಸೇರಿದಂತೆ ಹಲವು ಕಸುಬುಗಳನ್ನು, ಕೆಲವೆಡೆ(ಕಡಗದಾಳು) ವಾಲಗವನ್ನೂ ಮಾಡುತ್ತಿದ್ದಾರೆ.[ಕಿತ್ತಳೆ ನಾಡು ಕೊಡಗಿನಲ್ಲಿ ಹಳೆ ಸುಂದರಿಯರದ್ದೇ ದರ್ಬಾರ್]

The Kembatti Holeya community are live in the Kodagu district of Karnataka

ಹಾಗೆನೋಡಿದರೆ ಕೊಡಗಿನಲ್ಲಿ ಕೊಡವ ಸಂಸ್ಕ್ರತಿಯನ್ನು ಹೊಂದಿರುವ ಕೊಡವ, ಅಮ್ಮ ಕೊಡವ, ಹೆಗ್ಗಡೆ, ಕೆಂಬಟ್ಟಿ, ಐರಿ, ಕೊಯವ, ಕೊಡವ ಸವಿತ, ಬಣ್ಣ, ಕುಡಿಯ, ಕಣಿಯ, ಮೇದ, ಕೊಡವ ಮಡಿವಾಳ, ಕೊಡವ ನಾಯರ್, ಮಲಿಯ, ಪಣಿಕ, ಬೂಣೆ ಪಟ್ಟಮ, ಕೋಲೆಯ, ಗೊಲ್ಲ, ಬಾಣಿಯ ಮೊದಲಾದ ಜನಾಂಗಳ ಹೆಸರು ಪಟ್ಟಿಯಲ್ಲಿ ಇದೆಯಾದರೂ ಕೆಂಬಟ್ಟಿ ಜನಾಂಗದ ಹೆಸರು ಮಾತ್ರ ಎಲ್ಲೂ ಕಾಣಿಸುವುದಿಲ್ಲ. ಹೀಗಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

ಈ ಜನಾಂಗ ಸಂಪ್ರದಾಯದಲ್ಲೂ ಪಕ್ಕಾ ಕೊಡವ ಸಂಸ್ಕೃತಿಯನ್ನೇ ಹೊಂದಿರುವುದನ್ನು ಕಾಣಬಹುದು. ಮದುವೆ, ಮಕ್ಕಳ ನಾಮಕರಣ, ಹೊಸ ಮನೆ ಸೇರುವುದು, ಸಾವು, ಸಂಸ್ಕಾರ ಎಲ್ಲದರಲ್ಲೂ ಕೊಡವ ಆಚಾರ ವಿಚಾರವನ್ನೇ ಮಾಡುತ್ತಾರೆ.

ಇನ್ನು ಕುಟುಂಬದಲ್ಲಿ ಕಾರಣ ಕೊಡುವುದು, ಹುತ್ತರಿ ಹಬ್ಬ, ಕೈಲ್ ಪೋದ್, ಸಂಕ್ರಮಣ ಈ ಹಬ್ಬಗಳನ್ನು ಕೊಡವ ಪದ್ಧತಿಯಲ್ಲಿಯೇ ಆಚರಿಸುತ್ತಾರೆ. ಉದಾಹರಣೆಗೆ (ಬಿಳುಗುಂದ, ಕಕ್ಕಬೆ, ನಾಪೋಕ್ಲುಗಳಲ್ಲಿ ಕೋಲಾಟ ಕಂಡು ಬರುತ್ತದೆ). ಇವರ ಕುಲದೇವತೆ "ಪನ್ನಂಗಾಲತಮ್ಮೆ (ಇಗ್ಗುತಪ್ಪ ದೇವರ ತಂಗಿ)". ಈಗಲೂ ಯುವಕಪಾಡಿ ಕಕ್ಕಬೆಯಲ್ಲಿ ಆದಿ ಸ್ಥಾನವಿದೆ. ಇಲ್ಲಿ ಪ್ರತಿವರ್ಷ ಏಪ್ರಿಲ್ ತಿಂಗಳ 12 ಮತ್ತು 13ರಂದು ಹಬ್ಬ ನಡೆಯುತ್ತದೆ. ಈಗಲೂ ಕೊಡೆಯ ರೂಪದಲ್ಲಿ ದೇವರು ಬರುತ್ತವೆ.[ಮಂಜಿನ ಮಡಿಕೇರಿಯಲ್ಲಿ ಮುದ ನೀಡುವ ತಾಣಗಳು]

ಇಷ್ಟೆಲ್ಲಾ ವಿಶಿಷ್ಟತೆ ಹೊಂದಿದ್ದರೂ ಈ ಜನಾಂಗ ನಿಕೃಷ್ಟವಾಗಿಯೇ ಬದುಕುತ್ತಿದೆ. ಇವರನ್ನು ಮುಖ್ಯವಾಹಿನಿಗೆ ತರುವ ಕೆಲಸಗಳು ಇನ್ನೂ ಕೂಡ ಆಗದಿರುವುದು ಇಲ್ಲಿನ ಜನಪ್ರತಿನಿಧಿಗಳ ಕಾರ್ಯವೈಖರಿಗೆ ಹಿಡಿದ ಕೈಕನ್ನಡಿಯಾಗಿದೆ. ಈ ಜನಾಂಗವನ್ನು ಪರಿಶಿಷ್ಟ ಪಂಗಡ ಕೆಂಬಟ್ಟಿಗೆ ಸೇರಿಸಲು ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಡತಗಳು ಹಲವು ವರ್ಷಗಳಿಂದ ಧೂಳು ಹಿಡಿಯುತ್ತಾ ಬಿದ್ದಿವೆ.

ಈ ಕುರಿತಂತೆ ಜನಪ್ರತಿನಿಧಿಗಳು ಸೇರಿದಂತೆ ಸರ್ಕಾರದ ಮಟ್ಟದ ಅಧಿಕಾರಿಗಳಿಗೆ ಜನಾಂಗದ ಪ್ರಮುಖರು ಮನವಿ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕೊಡವ ಸಂಸ್ಕøತಿಯನ್ನು ಉಳಿಸಿ, ಬೆಳೆಸಿಕೊಂಡು ಬಂದ ಜನಾಂಗವೊಂದು ಮೂಲ ಸವಲತ್ತುಗಳಿಂದ ವಂಚಿತವಾಗಿ ಸಮಾಜದಲ್ಲಿ ಹೀನಾಯವಾಗಿ ಬದುಕುವಂತಾಗಿದೆ. ಇನ್ನಾದರೂ ಈ ಜನಾಂಗದ ಕೂಗಿಗೆ ಸರ್ಕಾರ ಸ್ಪಂದಿಸಲಿ...

English summary
The Kembatti Holeya community are concentrated in the Kodagu district of Karnataka. Kannada, dravidian and kodagu are spoken in this communities. They work as plantation labours in coffee estates, Basketry is their occuption. They are hindus and worship Kaveriamma, Bhagavati, Iswar etc
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X