ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಪ್ರತಿಮ ಯೋಧ, ಸ್ಫೂರ್ತಿಯ ನಾಯಕ ಮಾಣೆಕ್ ಷಾ'

By Staff
|
Google Oneindia Kannada News

Field Marshal Sam Manekshaw(1914-2008)ವೆಲ್ಲಿಂಗ್‌ಟನ್ (ತಮಿಳುನಾಡು), ಜೂ.27: ಸ್ಯಾಮ್ ಬಹಾದೂರ್ ಎಂದೇ ಖ್ಯಾತರಾಗಿದ್ದ ಫೀಲ್ಡ್ ಮಾರ್ಷಲ್ ಹೋರ್ಮುಸ್ಜಿ ಫ್ರಾಮ್ಜಿ ಜೆಮ್‌ಷೆಡ್‌ಜೀ ಮಾಣೆಕ್ ಷಾ ಗುರುವಾರ (ಜೂ.26) ನಿಧನರಾದರು. ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರೊಬ್ಬ ಅಪ್ರತಿಮ ಯೋಧ ಹಾಗೂ ಸ್ಫೂರ್ತಿಯ ನಾಯಕ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಶೋಕ ಸಂದೇಶದಲ್ಲಿ ಬಣ್ಣಿಸಿದ್ದಾರೆ.

1971ರ ಭಾರತ-ಪಾಕಿಸ್ತಾನ ಯುದ್ಧದ ನೇತೃತ್ವ ವಹಿಸಿ ಭಾರತಕ್ಕೆ ಜಯ ತಂದುಕೊಟ್ಟ ದೇಶದ ಮೊದಲ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಗುರುವಾರ ಕೋಮಾ ಸ್ಥಿತಿಗೆ ಜಾರಿದ್ದರು. ರಾತ್ರಿ 12 ಗಂಟೆ ವೇಳೆಗೆ ನಿಧನ ಹೊಂದಿದರು ಎಂದು ಮಿಲಿಟರಿ ಆಸ್ಪತ್ರೆ ಮೂಲಗಳು ತಿಳಿಸಿವೆ. ಕಳೆದ ಕೆಲದಿನಗಳಿಂದ ಅವರ ದೇಹಸ್ಥಿತಿ ಬಿಗಡಾಯಿಸಿತ್ತು.

ಮಾಣೆಕ್ ಷಾ ಜನಿಸಿದ್ದು 1914ರ ಏಪ್ರಿಲ್ 3 ರಂದು ಪಂಜಾಬಿನ ಅಮೃತಸರದಲ್ಲಿ. ನೈನಿತಾಲ್‌ನಲ್ಲಿ ಶಿಕ್ಷಣ ಪೂರೈಸಿದ ಅವರು ಮಿಲಿಟರಿ ಅಕಾಡೆಮಿ ಸೇರಿದರು. 1934ರಲ್ಲಿ ಭಾರತೀಯ ಸೇನೆಯ 2ನೇ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ನಂತರ ಸೇನೆಯ ಹಲವು ಮಹತ್ವದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬರ್ಮಾ ಮೇಲೆ ದಾಳಿಯಿಟ್ಟ ಜಪಾನ್ ಸೇನೆಯ ವಿರುದ್ಧ ಭಾರತದ ಸೇನೆಯನ್ನು ಮುನ್ನಡೆಸಿದ ಕೀರ್ತಿ ಮಾಣೆಕ್ ಷಾ ಅವರದು. ಈ ಯುದ್ಧದಲ್ಲಿ ಗುಂಡೇಟು ತಿಂದು ತೀವ್ರವಾಗಿ ಗಾಯಗೊಂಡಿದ್ದರು. ನಂತರ ಜಪಾನ್ ಯುದ್ಧದಲ್ಲಿ ಭಾಗವಹಿಸಿದ ಅವರು ಜಪಾನ್ ಶರಣಾದ ಮೇಲೆ 10 ಸಾವಿರಕ್ಕೂ ಹೆಚ್ಚು ಯುದ್ಧ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಶ್ರಮಿಸಿದ್ದರು.

1971ರಲ್ಲಿ ಮಾಣೆಕ್ ಷಾ ದೇಶದ 8ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರಿ ವಹಿಸಿಕೊಂಡು ಭಾರತ-ಪಾಕ್ ಯುದ್ಧದಲ್ಲಿ ಮಹತ್ವದ ಪಾತ್ರವಹಿಸಿದರು. ಷಾ ಅವರ ತಂತ್ರಗಾರಿಕೆಯಿಂದ ಪಾಕ್ ಬೇಷರತ್ತಾಗಿ ಶರಣಾಯಿತು. ದೇಶ ಕಂಡ ಅಪ್ರತಿಮ ಯೋಧ ಮಾಣೆಕ್ ಷಾ 1973ರಲ್ಲಿ ನಿವೃತ್ತರಾಗಿ ಹಲವು ಕಂಪನಿಗಳ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಇಂದು ಅಂತ್ಯಕ್ರಿಯೆ
ಮಿಲಿಟರಿ ಗೌರವಗಳೊಂದಿಗೆ ಶುಕ್ರವಾರ ಮಾಣೆಕ್ ಷಾ ಅವರ ಅಂತ್ಯಕ್ರಿಯೆ ತಮಿಳುನಾಡಿನ ವೆಲ್ಲಿಂಗ್‌ಟನ್‌ನಲ್ಲಿ ನಡೆಯಲಿದೆ. ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಮಿಲಿಟರಿ ಉನ್ನತಾಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X