ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರಿನ ಅಭಿಷೇಕಕ್ಕೆ ಕಾದಿದೆ ನನ್ನ ಮೈಮನ

ಈ ಸಲ ಯಾಕೋ ಎಂದಿಗಿಂತ ಹೆಚ್ಚು ಕಾಲ ಗ್ರೀಷ್ಮನ ಸಾಂಗತ್ಯದಲ್ಲೇ ಮೈಮರೆತ ನಮ್ಮ ಪ್ರಕೃತಿ ಕೊನೆಗೂ ಮುಂಗಾರಿನ ಅಭಿಷೇಕಕ್ಕೆ ಸಜ್ಜಾಗಿದ್ದಾಳೆ.

By ನಿ.ರಚಿತ ಮಲ್ನಾಡ್
|
Google Oneindia Kannada News

ಈ ಸಲ ಯಾಕೋ ಎಂದಿಗಿಂತ ಹೆಚ್ಚು ಕಾಲ ಗ್ರೀಷ್ಮನ ಸಾಂಗತ್ಯದಲ್ಲೇ ಮೈಮರೆತ ನಮ್ಮ ಪ್ರಕೃತಿ ಕೊನೆಗೂ ಮುಂಗಾರಿನ ಅಭಿಷೇಕಕ್ಕೆ ಸಜ್ಜಾಗಿದ್ದಾಳೆ. ಈ ಸಲವೂ ನಾನು ಮೊದಲ ಮಳೆಯಲ್ಲಿ ನೆನೆಯಲು ಕಾತುರಳಾಗಿದ್ದೇನೆ ಎನ್ನುವ ಮಲೆನಾಡಿನ ಹುಡುಗಿಯ ಲಹರಿ ನಿಮಗಾಗಿ ಇಲ್ಲಿದೆ...[ಲೇಖನ ಕೃಪೆ : ನಿರಚಿತ ಬ್ಲಾಗ್]

ಪ್ರತಿ ಸಾರಿಯಂತೆ ಈ ಸಲವೂ ಅಡಿಕೆ ಮರಕ್ಕೆ ಔಷಧ ಹಾಕಲು ಮರೆತವರು ಗಡಿಬಿಡಿಯಲ್ಲಿ ಮರ ಏರುತ್ತಿರುವ ದೃಶ್ಯ ಮನೆಗೆ ಹೋಗುವಾಗ ಕಣ್ಣಿಗೆ ಬಿತ್ತು. [ಮುದ್ದಿನ ಮಳೆಮಾಸ ಜೂನಿನಲ್ಲೊಂದು ಲಹರಿ]

ಈ ಬಾರಿ ಮಳೆ ಪ್ರಮಾಣದ ಲೆಕ್ಕಾಚಾರ, ಖರ್ಚಿನ ಲೆಕ್ಕಾಚಾರ, ಅಡುಗೆ ಮನೆಯಲ್ಲಿ ಶೇಖರಿಸಿಟ್ಟ ಹಪ್ಪಳದ ವ್ಯಾಪಾರ, ನಿತ್ಯ ಪಾರಾಯಣ, ಆಗಾಗ ಪ್ರಸಂಗಗಳ ರಂಜನೀಯ ಕಾಲಕ್ಕೆ ಮುಂಗಾರು ನಾಂದಿ ಹಾಡುತ್ತಿದೆ.

[ಮಲೆನಾಡಿನಾ ಮಳೆಹಾಡಿನಾ ಪಿಸು ಮಾತಿನಾ ಹೊಸತನ... ಸವಿದೆನಾ...]

ಅಪ್ಪ ಆಗಲೇ ತೋಟಕ್ಕೆ ಬೇಕಾದ ವ್ಯವಸ್ಥೆ ಮಾಡಿ ಮಳೆರಾಯನನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ನಾನಂತೂ ಮುಂಗಾರಿನ ಮೊದಲ ಮಳೆಯ ಮಹಾ ಮಜ್ಜನಕ್ಕೆ ಸಜ್ಜಾಗಿದ್ದೇನೆ. ಈ ನಡುವೆ ಕಳೆದ ವಾರ ಮಳೆಯ ನಿರೀಕ್ಷೆಯಲ್ಲಿ ರಾಜಧಾನಿಯಿಂದ ಮನೆಗೆ ಬಂದಿದ್ದ ಕಿಟ್ಟನ ಆರ್ಭಟ ಮಾತ್ರ ಜೋರಾಗಿತ್ತು.

ಹುಟ್ಟಿದ್ದು, ಓದಿದ್ದು, ಬೆಳೆದಿದ್ದು ಇಲ್ಲೇ ಆದರೂ ಕಿಟ್ಟನ ಹಾವ ಭಾವ ವರಸೆ ಎಲ್ಲವೂ ಯಾವುದೇ ಪಟ್ಟಣದ ಪೋಕರಿಗಳಿಗೇನು ಕಡಿಮೆ ಏನಿಲ್ಲ. ಬೆಂಗಳೂರಲ್ಲಿ ಎಂಎನ್ ಸಿ ಕಂಪನಿಯಲ್ಲಿ ಕೆಲ್ಸ ಮಾಡುತ್ತಿರುವ ಧಿಮಾಕು ಬೇರೆ ಈ ನಡುವೆ ಹೆಚ್ಚಾಗಿ ಕಾಣುತ್ತಿತ್ತು. ಮುಂದೆ ಓದಿ...

ದಿನ ನಿತ್ಯದ ಸಂಜೆ ಮಳೆ

ದಿನ ನಿತ್ಯದ ಸಂಜೆ ಮಳೆ

ಊರಿಗೆ ಬಂದವನೇ ಇಲ್ಲಿನ ಬಿಸಿಲನ್ನು ಬೆಂಗಳೂರಿನ ದಿನ ನಿತ್ಯದ ಸಂಜೆ ಮಳೆಯನ್ನು ಶಪಿಸತೊಡಗಿದ. ಅದೇನು ಮರವೋ ಯಾರು ಯಾವ ಕಾಲದಲ್ಲಿ ನೆಟ್ಟರೋ ದಿನವೋ ಒಂದಲ್ಲ ಒಂದು ಕಡೆ ಉದುರಿ ಬೀಳುತ್ತಲೇ ಇರುತ್ತದೆ. ಬೈಕಲ್ಲಿ ಅಡ್ಡಾಡುವುದಿರಲಿ, ಆಫೀಸಿನಿಂದ ಮನೆಗೆ ವಾಪಸ್ ಬರೋಕೆ ಹೆದರಿಕೆ ಆಗುತ್ತೆ..ಇದರ ಜೊತೆಗೆ ಮಳೆ ಸ್ವಲ್ಪ ಜೋರಾದರೆ ಸಾಕು ರಸ್ತೆ ಹೊಂಡದ ತುಂಬಾ ನೀರು ನಿಲ್ಲುತ್ತೆ...ಒಟ್ಟಾರೆ, ಆಫೀಸ್ ಹತ್ತಿರನೇ ಮನೆ ಇದ್ದವರೇ ಲಕ್ಕಿ ಅಂದುಬಿಟ್ಟ.

ಮರಗಳನ್ನು ಬೆಳೆಸುವ ಬಗ್ಗೆ

ಮರಗಳನ್ನು ಬೆಳೆಸುವ ಬಗ್ಗೆ

ಮರಗಳು ಹಳೆಯವಾದರೂ ನಮ್ಮಲ್ಲಿನ ಮರಗಳಲ್ಲ, ಬ್ರಿಟಿಷರ ಕಾಲದ್ದು ಎಂದು ಹೇಳಿಕಂಡರೂ ಅವು ಮಾವು, ಹಲಸಲ್ಲ, ಬಣ್ಣ ಹೂಬಿಡುವ ಅಲಂಕಾರಿಕ ಮರಗಳಷ್ಟೇ. ಇನ್ನಾದರೂ ಗಟ್ಟಿ ಮರಗಳನ್ನು ಬೆಳೆಸುವ ಬಗ್ಗೆ ಬೆಂಗಳೂರಲ್ಲಿ ಪ್ರಜ್ಞೆ ಮೂಡಿಸಿತು.. ಅಲ್ವೋ ಆಫೀಸ್ ಗೂ ನಿನ್ನ್ ರೂಮಿಗೂ ಏನ್ ಮಹಾ ದೂರ ಇದೆ. ಹತ್ತು ಕಿ.ಮೀ ಇರಬಹುದು ಅಷ್ಟೇ ಅಲ್ವ ಅಂದೆ.

ನಾ ಬರ್ತಿನಿ ಎಂದು ತನ್ನ ಮನೆಗೆ ಹೊರಟ.

ನಾ ಬರ್ತಿನಿ ಎಂದು ತನ್ನ ಮನೆಗೆ ಹೊರಟ.

ಏನು ಹತ್ತು ಕಿ.ಮೀ ನೀನು ಬಂದು ಓಡಾಡು ಎರಡು ದಿನ ಗೊತ್ತಾಗ್ತು ಅಂದ.
ಅಯ್ಯೋ ಬೇಡ ಮಾರಾಯ.. ನಾ ಇದ್ರು ಹೋದ್ರು ಬದುಕಿದ್ರೂ ಇಲ್ಲೇ ಮಲೆನಾಡಿನ ಮೂಲೆ ನಾಗೆ ಎಂದು ಹೇಳಿದೆ.
ನೀನು ಬಿಡು, ಯಾವಾಗ್ಲು ಹೀಗೆ ಹೇಳ್ತಿಯಾ ನಾಳೆ ಮದ್ವೆ ಆದ್ಮೇಲೆ ನೋಡುವಾ ಎಂದು ಕಿಸಿದವನು ಸುಮ್ಮನಾದ. ಅಷ್ಟರಲ್ಲಿ ಅವನ ದೊಡ್ಡಪ್ಪ ಎದುರಿಗೆ ಬಂದಿದ್ರು..
ಯಾರದೋ ಮದ್ವೆ ಅಂದ್ರು
ಅದು ದೊಡ್ಡಪ್ಪ, ಸಸಿತೋಟ ಕಡೆ ಫ್ರೆಂಡ್ ಹೋಗುಕು ನಾಳೆ.. ನಾ ಬರ್ತಿನಿ ಎಂದು ತನ್ನ ಮನೆಗೆ ಹೊರಟ.

ನನಗರಿವಿಲ್ಲದ್ದಂತೆ ಹುಡುಕಿದ್ದು ಉಂಟು

ನನಗರಿವಿಲ್ಲದ್ದಂತೆ ಹುಡುಕಿದ್ದು ಉಂಟು

ಅಣ್ಣನಿಗೆ ಅವನು ಯಾರ ಮದ್ವೆ ಬಗ್ಗೆ ಹೇಳಿದ್ದು ಎಂಬುದು ತಿಳಿಯದಷ್ಟು ದಡ್ಡರಲ್ಲ. ಮಗಳ ಮದುವೆ ಮಾಡುವ ಇರಾದೆ ಇಲ್ಲದ್ದಷ್ಟು ನಿರ್ದಯಿ, ನಿರ್ಭಾವುಕ ವ್ಯಕ್ತಿ ಏನಲ್ಲ. ಮಗಳನ್ನು, ಈ ಮಳೆಕಾಡಿನ ಮನೆಯನ್ನು ಸಂಭಾಳಿಸಬಲ್ಲ ಹುಡುಗನಿಗಾಗಿ ನನಗರಿವಿಲ್ಲದ್ದಂತೆ ಹುಡುಕಿದ್ದು ಉಂಟು.
ಆದರೆ, ನನಗೆ ಅಪ್ಪನ ಎಲ್ಲಾ ಚರ್ಯೆಗಳು ಬಹುಬೇಗ ತಿಳಿದು ಬಿಡುತ್ತಿತ್ತು. ಅಪ್ಪ ಹೇಳದಿದ್ದರೂ ಅವರ ಸುತ್ತಾಟ ಎಲ್ಲಿ ತನಕ ಸಾಗಿತ್ತು ಎಂಬುದನ್ನು ರಾಮಣ್ಣ ವರದಿ ಒಪ್ಪಿಸುತ್ತಿದ್ದ. ಆದರೆ, ಇದುವರೆವಿಗೂ ಸಂಬಂಧ ಕುದುರಿಲ್ಲ, ನಾನು ಒಪ್ಪುವುದಿರಲಿ, ಅಣ್ಣನಿಗೆ ಇಷ್ಟವಾಗುತ್ತಿರಲಿಲ್ಲ.

.ಸದ್ಯಕ್ಕೆ ಅಲ್ಪ ವಿರಾಮ..

.ಸದ್ಯಕ್ಕೆ ಅಲ್ಪ ವಿರಾಮ..

ನಮಗಿಬ್ಬರಿಗೂ ನಮ್ಮನ್ನು ಇಷ್ಟಪಡುವವರಿಗಿಂತ ನಮ್ಮ ಪರಿಸರವನ್ನು ಪ್ರೀತಿಸುವ ಜನ ಬೇಕೆನಿಸಿ ವರ್ಷಗಳೇ ಕಳೆದಿವೆ. ಮನೆ, ತೋಟ, ಅಣ್ಣ ನೋಡಿಕೊಳ್ಳುವ ವೃದ್ಧಾಶ್ರಮ, ಶಾಲೆ, ನದಿ, ಆಗಾಗ ಪೇಟೆ ಕಡೆ ಸುತ್ತಾಟ, ಪ್ರತಿದಿನವೂ ಹೊಸ ನೋಟ, ಬದುಕಿಗೆ ಇಷ್ಟು ಸಾಕು ಬೇರೆ ಯಾವ ಕಾಮನೆಗಳು ಸುಳಿಯದಿರಲಿ.. ಮಳೆ ಸುರಿಯುವ ಹಾಗಿದೆ.. ಮುಂಗಾರಿನ ಅಭಿಷೇಕಕ್ಕೆ ಮೊದಲ ಮಜ್ಜನಕ್ಕೆ ನಾ ಹೊರಡಬೇಕಿದೆ..ಅದಕ್ಕೂ ಮೊದಲು ಬೆಚ್ಚಗಿನ ಕಾಫಿ ಹೀರಬೇಕಿದೆ...ಸದ್ಯಕ್ಕೆ ಅಲ್ಪ ವಿರಾಮ..

English summary
Malnad Girl's musings: Eagerly awaiting for much needed monsoon rain for the Malenadu region in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X