ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿಗರ ಕಣ್ಣಲ್ಲಿ ಗತಕಾಲದ ವೈಭೋಗದ ಹಂಪಿ : ಮಾತುಕತೆ

ವಿಜಯನಗರ ಸಾಮ್ರಾಜ್ಯವನ್ನು ಬಣ್ಣಿಸಿದವರಲ್ಲಿ ವಿದೇಶಿ ಪ್ರವಾಸಿಗರು ಬಹಳ ಮಹತ್ವದ ಪಾತ್ರ ವಹಿಸಿದ್ದು, ಅಂದಿನ ವಿಜಯನಗರ ಸಾಮ್ರಾಜ್ಯದ ಬಗ್ಗೆ ತಮ್ಮ ಅರಿವಿಗೆ ಸಿಕ್ಕಂತೆ ಬಣ್ಣನೆ ಮಾಡಿದ್ದಾರೆ.

By Prasad
|
Google Oneindia Kannada News

ಹಂಪಿ ಇಂದು 'ಹಾಳು ಹಂಪಿ' ಎಂದು ಕುಖ್ಯಾತಿ ಪಡೆದಿರಬಹುದು. ಆದರೆ, ನೂರಾರು ವರ್ಷಗಳ ಹಿಂದೆ ವಿಜಯನಗರ ಉತ್ತುಂಗದ ಕಾಲದಲ್ಲಿದ್ದಾಗ ಹಂಪಿ ಹೇಗಿದ್ದಿರಬಹುದು ಕಲ್ಪನೆ ಮಾಡಿಕೊಳ್ಳಲು ಸಾಧ್ಯವೆ? ಅಂಥ ಗತವೈಭವವನ್ನು ಕಣ್ಣಾರೆ ಕಂಡ ವಿದೇಶಿಯರು ಏನು ಬರೆದಿದ್ದಾರೆಂಬುದನ್ನು ತಿಳಿಯಬೇಕಿದ್ದರೆ ಫೆ.12ರ ಭಾನುವಾರ ಖಂಡಿತ ಬನ್ನಿ.

ಕನ್ನಡ ನಾಡಿನ ಚರಿತ್ರೆಯ ಹೊತ್ತಗೆಯಲ್ಲಿ, ವಿಜಯನಗರ ಸಾಮ್ರಾಜ್ಯದ ಕಾಲ ಬಂಗಾರದ ಪುಟ ಎನ್ನುವುದು ಜನಜನಿತವಾದ ಮಾತು. ಚಾಲುಕ್ಯ ರಾಷ್ಟಕೂಟ ಸಾಮ್ರಾಜ್ಯಗಳ ಹರವು, ಹೊಯ್ಸಳರ ಶೌರ್ಯಸಾಹಸಗಳನ್ನು ಮೈಗೂಡಿಸಿಕೊಂಡೇ ಮೆರೆದ ವಿಜಯನಗರ ಸಾಮ್ರಾಜ್ಯವು ತನ್ನ ವೈಭವಕ್ಕೆ ಅಂದಿನಿಂದಲೂ ಪ್ರಪಂಚದ ತುಂಬಾ ಹೆಸರುವಾಸಿಯಾಗಿದೆ.

ವಿಜಯನಗರ ಸಾಮ್ರಾಜ್ಯದ ವೈಭವದ ಬಗ್ಗೆ ನಾವು, ನಮ್ಮ ಹಿರಿಯರು ಬಣ್ಣಿಸಿದಂತಹ ಕಥನಗಳನ್ನು ಮೆಲುಕುಹಾಕುವುದು.. ಹಂಪೆಗೆ ಪ್ರವಾಸ ಹೋಗಿ ಅಲ್ಲಿನ ಪಾಳುಬಿದ್ದ ಗುಡಿಗಳನ್ನು, ಒಡೆದ ಮುರಿದ ನೋವಿನ ಕಥನ ಹೇಳುವ ಕಲ್ಲುಗಳನ್ನೂ ಕಂಡು ಮರುಗುವುದು ಸಾಮಾನ್ಯವಾಗಿ ಕನ್ನಡಿಗರೆಲ್ಲರ ಅನುಭವ. ನಮ್ಮ ವಿಜಯನಗರ ಹಾಗಿತ್ತಂತೆ, ಹೀಗಿತ್ತಂತೆ ಎಂದು ಅದರ ವೈಭವದ ಬಗ್ಗೆ ಕೇಳುವುದು ನಮ್ಮೆಲ್ಲರ ಮೈಪುಳಕಕ್ಕೆ ಕಾರಣವಾಗುವುದು ದಿಟ.

Hampi - in the eyes of foreigners

ಇಂಥಾ ವಿಜಯನಗರ ಸಾಮ್ರಾಜ್ಯವನ್ನು ಬಣ್ಣಿಸಿದವರಲ್ಲಿ ವಿದೇಶಿ ಪ್ರವಾಸಿಗರು ಬಹಳ ಮಹತ್ವದ ಪಾತ್ರ ವಹಿಸಿದ್ದು, ಅಂದಿನ ವಿಜಯನಗರ ಸಾಮ್ರಾಜ್ಯದ ಬಗ್ಗೆ ತಮ್ಮ ಅರಿವಿಗೆ ಸಿಕ್ಕಂತೆ ಬಣ್ಣನೆ ಮಾಡಿದ್ದಾರೆ. ಇದು ಕನ್ನಡನಾಡಿನ ಇತಿಹಾಸದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವ ಮಹತ್ವದ ಬರಹಗಳಾಗಿವೆ.

ವಿಶೇಷವೆಂದರೆ ಈ ಪ್ರವಾಸಿಗರ ಬರಹದಲ್ಲಿ ಬರಿಯ ರಾಜವೈಭವವಷ್ಟೇ ಇರದೆ ಅಂದಿನ ಜನತೆಯ ಸಾಮಾಜಿಕ ಜೀವನ, ಜನರು ಬದುಕುತ್ತಿದ್ದ ಬಗೆ, ಯುದ್ಧಕಾಲದಲ್ಲಿ ಸಾಮಾನ್ಯರ ಬದುಕು ಬವಣೆ, ನಮ್ಮ ಸಮಾಜದ ನಂಬಿಕೆ, ಆಚರಣೆ, ನಮ್ಮ ಉಡುಗೆ ತೊಡುಗೆ, ಊಟ ತಿಂಡಿ, ಬಾಳು ಬವಣೆಗಳೆಲ್ಲದರ ಬಗ್ಗೆ ವಿವರಿಸಲಾಗಿದೆ.

ರಾಜ್ಯಗಳ ನಡುವಿನ ಸಂಬಂಧಗಳು, ನಮ್ಮವರ ಯುದ್ಧ ಕೌಶಲ್ಯಗಳು, ನಮ್ಮವರು ಕಟ್ಟುತ್ತಿದ್ದ ನಗರಗಳ ಯೋಜನೆಗಳು, ಅತ್ಯಂತ ಮುಂದುವರೆದ ನೀರಾವರಿ ವ್ಯವಸ್ಥೆಗಳೆಲ್ಲದರ ಬಗ್ಗೆ ಕುತೂಹಲಕಾರಿಯಾಗಿ ಈ ಪ್ರವಾಸಿಗರು ಬರೆದಿದ್ದಾರೆ.

ಸುಮಾರು 1340ರಿಂದ 1630ರವರೆಗೆ ಹಲವಾರು ದೇಶಗಳ ಹತ್ತಾರು ಪ್ರವಾಸಿಗರು ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ಕೊಟ್ಟಿದ್ದು, ತಮ್ಮ ಗ್ರಹಿಕೆಗೆ ದಕ್ಕಿದಂತೆ ಇತಿಹಾಸವನ್ನು ದಾಖಲಿಸಿದ್ದಾರೆ.

ಇಬ್-ನೆ-ಬತುತಾ ಎಂದು ಹೆಸರಿನಿಂದ ಖ್ಯಾತನಾಗಿದ್ದ ಮೊರೊಕೊ ದೇಶದ ಅಬೂ ಅಬ್ದುಲ್ ಮಹಮದ್ ಎಂಬ ಇಸ್ಲಾಂ ಧರ್ಮ ಪ್ರಚಾರಕ, ಇಟಲಿ ಮೂಲದ ನಿಕೊಲೊ-ದೆ-ಕಂತಿ ಎಂಬ ಸಿರಿಯಾ ದೇಶದ ವರ್ತಕ, ಸೀಜರ್ ಫ್ರೆಡರಿಕ್ ಎಂಬ ಪ್ರವಾಸಿ, ಪರ್ಷಿಯಾದ ಅಬ್ದುಲ್ ರಜಾಕ್ ಎಂಬ ರಾಯಭಾರಿ, ರಷ್ಯಾದ ಅಥನೇಷಿಯಸ್ ನಿಕಿಟಿನ್ ಎಂಬ ವ್ಯಾಪಾರಿ, ಪೋರ್ಚುಗೀಸಿನ ದುಆರ್ತೆ ಬಾರ್ಬೋಸಾ ಎಂಬ ನಾವಿಕ, ಡೊಮಿಂಗೋ ಪ್ಯಾಸ್, ನೂನಿಜ್ ಮೊದಲಾದವರು ಬರೆದಿಟ್ಟಿದ್ದಾರೆ.

ಈ ಪ್ರವಾಸಿ ಅನುಭವ ಕಥನಗಳನ್ನು ಹಿರಿಯರಾದ ನಾಡೋಜ ಡಾ. ಎಚ್. ಎಲ್ ನಾಗೇಗೌಡರ "ಪ್ರವಾಸಿ ಕಂಡ ಇಂಡಿಯಾ", ಸದಾನಂದ ಕನವಳ್ಳಿಯವರ ಅನುವಾದ ಕಥನ "ಮರೆತು ಹೋದ ಮಹಾಸಾಮ್ರಾಜ್ಯ: ವಿಜಯನಗರ" ಮೊದಲಾದ ಗ್ರಂಥಗಳಿಂದ ಹೆಕ್ಕಿ "ಪ್ರವಾಸಿ ಕಂಡ ವಿಜಯನಗರ" ಎನ್ನುವ ಅಪೂರ್ವ ಪುಸ್ತಕವನ್ನು ಡಾ. ಬಿ ಎ ವಿವೇಕ್ ರೈ ಅವರ ಸಂಪಾದಕತ್ವದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಹೊರತಂದಿದೆ.

ಈ ಹೊತ್ತಗೆಯನ್ನು ಆಧರಿಸಿ ಮತ್ತೊಮ್ಮೆ ಇತಿಹಾಸದ ಪುಟಗಳನ್ನು ನಿಮ್ಮೆದುರು ತೆರೆದಿಡುವ ಪ್ರಯತ್ನವನ್ನು, ಮುನ್ನೋಟ ಪುಸ್ತಕ ಮಳಿಗೆಯಲ್ಲಿ ಬರುವ ಭಾನುವಾರ, ಅಂದರೆ ದಿನಾಂಕ 12.02.2017ರ ಬೆಳಗ್ಗೆ 11:30ರಿಂದ 12:30ರವರೆಗೆ ನಡೆಯುವ ಮಾತುಕತೆಯಲ್ಲಿ ಆನಂದ್ ಮಾಡಲಿದ್ದು ಭಾಗವಹಿಸಬಹುದಾಗಿದೆ.

English summary
Can you imagine how Hampi was during the reign of Vijayanagara emperrors centuries back. Many foreign travelers have documented the richness Hampi in terms of culture, tradition, language etc. Anand G talks about the book published by Hampi University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X