ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕನ್ನಡದ ಜೇನುಗಳ ಜಾತ್ರೆಗೆ ಹೋಗಿದ್ರಾ?

By * ಸತೀಶ್ ಭಟ್, ಮಾಗೋಡ್, ಉತ್ತರ ಕನ್ನಡ
|
Google Oneindia Kannada News

Get together of bees in Uttara Kannada
ಮರವೊಂದಕ್ಕೆ ಅಬ್ಬಬ್ಬಾ ಎಂದರೆ ಎಷ್ಟು ಜೇನುಗೂಡುಗಳು ಕಟ್ಟಿಯಾವು? ಎರಡು? ಐದು? ಹೆಚ್ಚೆಂದರೆ ಹತ್ತರವರೆಗೂ ಕಟ್ಟಬಹುದೇನೋ. ಆದರೆ, ಈ ಮರಕ್ಕೆ ಕಟ್ಟಿರುವ ಜೇನುಗೂಡುಗಳನ್ನು ಎಣಿಸಿ ಎಣಿಸಿಯೇ ಸುಸ್ತಾಗಬೇಕು! ಒಂದರಿಂದ ಪ್ರಾರಂಭವಾಗುವ ನಿಮ್ಮ ಲೆಖ್ಖ ಐವತ್ತು ದಾಟಿ ನೂರರ ಸಮೀಪ ತಲುಪಿದರೂ ಅಚ್ಚರಿಯಿಲ್ಲ.

ನೀವು ಎಣಿಸುತ್ತಿರುವಂತೆಯೇ ಕನಿಷ್ಠವೆಂದರೂ ಎರಡು ಹೊಸ ಜೇನು ಸಂಸಾರಗಳು ಅದೇ ಮರದ ಯಾವುದೋ ಟೊಂಗೆಯಲ್ಲಿ ಗೂಡು ಹೆಣೆಯಲು ಜಾಗವರಸುತ್ತಿರುತ್ತವೆ. ನಂಬಿ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಶತಶತಮಾನಗಳಿಂದ ಬೇಡ್ತಿ ಸೇತುವೆಯ ಸಮೀಪದ ಈ ಮರಕ್ಕೆ ಅಸಂಖ್ಯಾತ ಜೇನು ಗೂಡುಗಳು ಕಟ್ಟುತ್ತವೆ. ಸೋಜಿಗವೆಂದರೆ, ಬಿಡುವೇ ಇಲ್ಲದಂತೆ ವರ್ಷಪೂರ್ತಿ ಗೂಡು ಹೆಣೆಯುತ್ತಲೇ ಇರುತ್ತವೆ!

ಪ್ರಕೃತಿ ವೈಚಿತ್ರ್ಯ :
ಬೇಡ್ತಿ ಸೇತುವೆಯನ್ನು ದಾಟಿ ಶಿರಸಿಯೆಡೆಗೆ ಸಾಗುವಲ್ಲಿ ಸೇತುವೆಯಿಂದ ಸ್ವಲ್ಪೇ ದೂರದಲ್ಲಿ ರಸ್ತೆಯ ಎಡ ಭಾಗದಲ್ಲಿಯೇ ಗೋಚರಿಸುತ್ತದೆ ಈ "ಜೇನ್ಮರ"ದ ಸೋಜಿಗ. ಅಲ್ಲಿ ಸಂಸಾರ ಹೂಡಿರುವ ನೂರಕ್ಕೂ ಅಧಿಕ ಜೇನುಗೂಡುಗಳನ್ನು ನೋಡಿ ಕಣ್ತುಂಬಿಕೊಳ್ಳುವುದೇ ಮುದ. ಸುತ್ತಲಿನ 2-3 ಕಿ.ಮೀ ವ್ಯಾಪ್ತಿಯಲ್ಲಿಯೂ ಜೇನಿನ ಮಧುರ ಘಮಘಮ. ಇದರೊಟ್ಟಿಗೆ ಪಕ್ಕದಲ್ಲಿಯೇ ಇರುವ ಇನ್ನೊಂದು ಮರವನ್ನು ಕೂಡ ಜೇನುಗಳು ಆಶ್ರಯಿಸಿ ಗೂಡು ಕಟ್ಟುತ್ತವೆ. ಅಂತೆಯೇ ತಾಲೂಕಿನ ಸವಣಗೇರಿ, ಕಮ್ಮಾಣಿ, ಲಾಲಗುಳಿಯ ಕಗ್ಗಾಡುಗಳಲ್ಲಿಯೂ ಇಂಥಹುದೇ ಜೇನ್ಮರಗಳು ಕಂಡುಬರುತ್ತವೆಯಾದರೂ ಜೇನುಗಳ ಸಂಖ್ಯೆ ಕಡಿಮೆ.

ಈ ಜೇನುಗಳು ಸೇಫ್! :
ಕಳೆದೊಂದು ದಶಕದೀಚೆಗೆ ಜೇನುಕಂದುಗಳಿಗೆ ಕಳ್ಳರ ಕಾಟ ಹೆಚ್ಚೆಂದೇ ಹೇಳಬೇಕು. ಚಿಕ್ಕಪುಟ್ಟ ಜೇನುಗಳನ್ನೂ ಅವೈಜ್ಞಾನಿಕವಾಗಿ ಕೊಯ್ದು ಸಂಗ್ರಹಿಸುತ್ತಾರೆ. ಆದರೆ ಈ ಮರವನ್ನಾಶ್ರಯಿಸಿದ ಜೇನುಗಳಿಗೆ ಜೀವಭಯವಿಲ್ಲ. ಕಾರಣ, ಮರದ ಏರಲಾಗದ ಎತ್ತರ ಹಾಗೂ ಮರದ ಆಕಾರ. ಉಪಾಯದಿಂದ ಅಕ್ಕ-ಪಕ್ಕದ ಮರವನ್ನೇರಿ ಮುಖ್ಯ ಜೇನು ಮರಕ್ಕೆ ಹಗ್ಗ ಎಸೆದು ಸರ್ಕಸ್ ಮಾಡುವವರೂ ಇಲ್ಲ.

ಸುತ್ತಲಿನ ಪ್ರದೇಶಗಳಲ್ಲಿ ಈ ಮರವನ್ನು ದೇವರ ಮರವೆಂದೇ ಕರೆಯಲಾಗುತ್ತದೆ. ಹಾಗಾಗಿ ಎಂಥಹ ಅನುಭವೀ ಜೇನು ಕೊಯ್ಲುಗಾರನೂ ಈ ಮರವನ್ನು ಕತ್ತೆತ್ತಿ ನೋಡಿಯಾನೇ ಹೊರತು ಗೂಡಿಗೆ ಕೈಹಾಕುವ ಸಾಹಸ ಮಾಡಲಾರ. ಹಿರಿಯರು ನೆನಪಿಸಿಕೊಳ್ಳುವಂತೆ ಹಿಂದೊಮ್ಮೆ ವ್ಯಕ್ತಿಯೊಬ್ಬ ಈ ಮರವನ್ನೇರಿ ಜೇನು ಕೊಯ್ಯಲು ಪ್ರಯತ್ನಿಸಿದ್ದ. ಇದಕ್ಕಾಗಿ ಆತ ತೆತ್ತ ಬೆಲೆ ಆತನದೇ ಪ್ರಾಣ! ಈ ಎಲ್ಲಾ ಕಾರಣಗಳಿಂದ ಈ ಜೇನುಗಳು ಸೇಫ್! ಇತ್ತೀಚಿನ ದಿನಗಳಲ್ಲಿ ಅರಣ್ಯ ಲಾಖೆ ಗುತ್ತಿಗೆ ಆಧಾರದಲ್ಲಿ ಈ ಜೇನುಗಳ ಕೊಯ್ಲಿಗೆ ಅನುಮತಿ ನೀಡಿದೆ.

ಹಾಗೆಯೇ ಈ ಮರಕ್ಕೆ ವರ್ಷದ ಎಲ್ಲ ಕಾಲದಲ್ಲಿಯೂ ಜೇನುಗಳ ಆಗಮನವಾಗುವದೂ ಮತ್ತೊಂದು ವಿಶೇಷ. ಹತ್ತಿರವೇ ನೀರಿನ ಲಭ್ಯತೆ, ಅನುಕೂಲಕರವಾದ ವಾತಾವರಣ, ದಟ್ಟ ಕಾಡು ಇವೆಲ್ಲವೂ ಈ ಮರಕ್ಕೆ ಇಷ್ಟೊಂದು ಜೇನುಗಳು ಗೂಡು ಕಟ್ಟಲು ಕಾರಣವೆಂದು ಹೇಳಬಹುದು. ಹಾಗಾಗಿಯೇ ಇಲ್ಲಿ ಪ್ರತೀ ವರ್ಷವೂ ಜೇನುಗಳ ಹಬ್ಬ. ಜೊತೆಗೆ ನೋಡಿ ಆಸ್ವಾದಿಸಿ ಕಣ್ತುಂಬಿಕೊಳ್ಳುವ ಕಂಗಳಿಗೂ!

;
English summary
Have you ever seen hundreds of beehives on a single tree or in a single place? If you want to see this beauty of nature, you have to Uttara Kannada district, Yellapur taluk. Near Bedti bridge a big tree has sheltered hundreds of honeycombs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X