ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ : ಮಲತಾಯಿ ಮನೆಯಲ್ಲಿ ಕನ್ನಡದ ಮಕ್ಕಳು

By * ಕನ್ನಡ-ಕ, ಹೈದರಾಬಾದ್
|
Google Oneindia Kannada News

Kannadigas in Hyderabad (Pic : hyderabadplanet.com)
ಹೈದರಾಬಾದ್! ಇದು ಕನ್ನಡಿಗರಿಗೂ ರಾಜಧಾನಿ ಎನ್ನುವುದು ನಿಮಗೆ ಗೊತ್ತಾ? ನಿಜಾಮರ ಕಾಲದಲ್ಲಿ ಕನ್ನಡ ಇಲ್ಲಿನ ಆಡಳಿತ ಭಾಷೆಗಳಲ್ಲೊಂದಾಗಿತ್ತು. ಹೈದರಾಬಾದ್ ಆಗಿನ ಕಲ್ಬುರ್ಗಿ, ರಾಯಚೂರು, ಬೀದರ್ ಜಿಲ್ಲೆಗಳ ರಾಜಧಾನಿಯಾಗಿತ್ತು. ಇಡೀ ದೇಶ 1947ರ ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಂಡು ಸ್ವಾತಂತ್ರ್ಯ ಅನುಭವಿಸುತ್ತಿದ್ದರೆ, ಹೈದರಾಬಾದ್ ಮತ್ತು ಕನ್ನಡದ ಗಡಿ ಪ್ರದೇಶಗಳು ನಿಜಾಮರ ಶೋಷಣೆಗೊಳಗಾಗಿ ನರಳುತ್ತಿದ್ದವು. ಇದು ಇತಿಹಾಸ. ರಾಜ್ಯ ಪುನರ್ ವಿಂಗಡಣೆಯ ಆ ನರಳಿಕೆಗಳನ್ನು ಅನುಭವಿಸಿದವರು ನಾವಲ್ಲ, ನಮ್ಮ ಹಿರಿಯರು ಸಾರ್ ಹಿರಿಯರು!

ಉಕ್ಕಿನ ಮನುಷ್ಯ ವಲ್ಲಭಾಯಿ ಪಟೇಲರ ಅವಿರತ ಶ್ರಮದಿಂದಾಗಿ 1948 ಸೆಪ್ಟೆಂಬರ್ ನಲ್ಲಿ ನಿಜವಾದ ಸ್ವಾತಂತ್ರ್ಯ (ವಿಮೋಚನೆ ಎನ್ನುವುದು ಸೂಕ್ತ ಪದ) ಈ ಭಾಗದ ಕನ್ನಡಿಗರಿಗೆ ಸಿಕ್ಕಿತು. ಹಲವಾರು ಕನ್ನಡಿಗರು ಆ ಹೋರಾಟದಲ್ಲಿ ಪಾಲ್ಗೊಂಡು ಇಂದಿಗೂ ಇಲ್ಲಿ ಅಜರಾಮರರಾಗಿ ಜನರ ನೆನಪಿನಲ್ಲಿ ಉಳಿದಿದ್ದಾರೆ. ಆಂಧ್ರ ಸರ್ಕಾರ ಇವರ ಹೆಸರುಗಳನ್ನು ರಸ್ತೆ ಮತ್ತು ಉದ್ಯಾನ ವನಗಳಿಗೆ ಇಟ್ಟು ತನ್ನ ಋಣ ತೀರಿಸಿಕೊಂಡಿದೆ.

ತೆಲುಗು, ಉರ್ದು ಬಿಟ್ಟರೆ, ಕನ್ನಡ ಇಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ. ಸರಿ ಸುಮಾರು 7 ಲಕ್ಷ ಕನ್ನಡಿಗರು ಇಲ್ಲಿ ನೆಲೆ ಊರಿದ್ದಾರೆ. ಅಸಂಖ್ಯಾತ ಸಾಫ್ಟ್ ವೇರ್ ಉದ್ಯೋಗಿಗಳು ಇತ್ತೀಚಿಗೆ ವಲಸೆ ಬಂದಿದ್ದರೆ, ಪ್ರತಿದಿನ ಕಲ್ಬುರ್ಗಿ, ರಾಯಚೂರು, ಬೀದರ್ ನಿಂದ ಸಾವಿರ ಸಾವಿರ ಜನ ಸಾಮಾನು, ಸಗಟು ಖರೀದಿಗಾಗಿ ಹೈದರಾಬಾದಿಗೆ ಬಂದುಹೋಗಿ ಮಾಡುತ್ತಾರೆ. ಅವರಿಗೆಲ್ಲ ಬೆಂಗಳೂರಿಗಿಂತ ಹೈದರಾಬಾದೇ ಹೃದಯಕ್ಕೆ ಹತ್ತಿರ. ತಪ್ಪೇನು?

ಬೆಂಗಳೂರಿನ ಜನಕ್ಕೆ ಈ ಪ್ರದೇಶಗಳು ಎಂದೂ ಹೃದಯಕ್ಕೆ ಹತ್ತಿರವಾಗಲೇ ಇಲ್ಲ. ನಮ್ಮ ಬೆಂಗಳೂರಿನ ಕನ್ನಡಿಗರಿಗೆ ಫಿನ್ ಲ್ಯಾಂಡ್ ಗೊತ್ತು, ಆಕ್ ಲ್ಯಾಂಡ್ ಗೊತ್ತು, ಕ್ಯಾಲಿಫೋರ್ನಿಯಾನೂ ಗೊತ್ತು. ಆದರೆ ಉತ್ತರ ಕರ್ನಾಟಕದವರ ಬಗ್ಗೆ ಬೆಂಗಳೂರಿನವರ ಅಸಡ್ಡೆ ಇಲ್ಲಿನ ಜನರನ್ನ ಮಾತ್ರವಲ್ಲ, ಇಡೀ ಹೈದರಾಬಾದ್ ಕರ್ನಾಟಕ ಪ್ರದೇಶದ ಜನರನ್ನೇ ಭಾವನಾತ್ಮಕವಾಗಿ ಕರ್ನಾಟಕದಿಂದ ದೂರ ಮಾಡಿದೆ. ಎಷ್ಟು ಜನಕ್ಕೆ ಗೊತ್ತು? ಇಡೀ ಕರ್ನಾಟಕದಲ್ಲಿ ಮೊತ್ತ ಮೊದಲಿಗೆ ಕನ್ನಡ ಟಿವಿ ಪ್ರಸಾರದ ಕಾರ್ಯಕ್ರಮಗಳು ಹೈದರಾಬಾದ್ನ ಸ್ಟುಡಿಯೋದಲ್ಲಿ ತಯಾರಾಗಿ ಕಲಬುರ್ಗಿಯ ದೂರದರ್ಶನದಲ್ಲಿ ಸುಮಾರು 30 ವರ್ಷಗಳ ಹಿಂದೆ ಪ್ರಸಾರವಾಗ್ತಿತ್ತು. ಬೆಂಗಳೂರಿನವರಿಗೆ ಆಗ ಟಿವಿ ಅಂದ್ರೆ ಗೊತ್ತೇ ಇರ್ಲಿಲ್ಲ.

ಮನೆಮನೆ ಮಾತಾಗದ ಮಾತೃಭಾಷೆ : ಕನ್ನಡ ಅಂದ್ರೆ ಇವತ್ತು ಇಲ್ಲಿನ ಕನ್ನಡಿಗರಿಗೆ ಬರೀ ಮನೆ ಭಾಷೆ. ಕಾಚಿಗುಡ ಪ್ರದೇಶದ ಲಕ್ಷಾಂತರ ಕನ್ನಡಿಗರು 'ಕರ್ನಾಟಕ ಸಾಹಿತ್ಯ ಮಂದಿರ' ಹೆಸರಿನಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸುತ್ತ ಕನ್ನಡದ ನೆನಪನ್ನ ಮಾಡಿಕೊಳ್ತಾರೆ. ಕರಾವಳಿ ಜನ ಯಕ್ಷಗಾನ ನಡೆಸುತ್ತ 'ಅದು ಮಾತ್ರ ಕನ್ನಡ ಸೇವೆ' ಎಂದು ಸಂತಸ ಪಡುತ್ತಾರೆ. ನನ್ ಮಾತು ನಂಬಿ. ಇಲ್ಲಿನ ಕೇಬಲ್ ನಲ್ಲಿ ಕೇವಲ 2 ಕನ್ನಡ ಚಾನೆಲ್ ಕೊಡ್ತಾರೆ. ಯಾಕೆ ಅಂತ ಕೇಳಿದ್ರೆ ಕನ್ನಡ ಚಾನೆಲ್ಸ್ ಫ್ರೀ ಟು ಏರ್ ಇಲ್ಲ, ದುಡ್ಡು ಕೊಡಬೇಕು, ಅದಕ್ಕೆ ಅಗಲ್ಲ ಅಂತಾರೆ.

ಕನ್ನಡ ಸಿನೆಮಾಗಳು ದಶಕಗಳ ಹಿಂದೆ ಒಂದು ಥೇಟರ್ ನಲ್ಲಿ ಬರ್ತಿತ್ತಂತೆ. ಈಗ ಕೇವಲ ವರ್ಷಕ್ಕೆ ಒಂದೋ ಎರಡೋ ಚಿತ್ರ ಅದೂ ರವಿವಾರ 1 ಆಟ ಮಾತ್ರ. ಮುಂಗಾರು ಮಳೆ ಮಾತ್ರ ಇಲ್ಲಿ 7 ವಾರ ಹೌಸ್ ಫುಲ್ ಓಡಿತು. ನಂತರ ಸತತವಾಗಿ ಕನ್ನಡ ಚಿತ್ರಗಳು ಮಲ್ಟಿಪ್ಲೆಕ್ಸ್ ನಲ್ಲಿ ಬಂದ್ರೂ, ಜನರನ್ನ ಸೆಳೆಯೋಕ್ಕೆ ಆಗ್ಲಿಲ್ಲ. ಬೆಂಗಳೂರಿನ ಕನ್ನಡ ಪೇಪರ್ ಗಳಲ್ಲಿ ಹೈದರಾಬಾದ್ ನಲ್ಲೂ ಕನ್ನಡ ಚಿತ್ರ ಬಿಡುಗಡೆ ಅಂತ ಪ್ರಚಾರ ಕೊಡ್ತಾರೆ. ಅದು ಶುದ್ಧ ಸುಳ್ಳು! ಕನ್ನಡ ಚಿತ್ರ ನಿರ್ಮಾಪಕರಿಗೆ ಮಾರ್ಕೆಟಿಂಗ್ ಅಂದ್ರೇನೆ ಗೊತ್ತಿಲ್ಲ. ಬೆಂಗಳೂರಲ್ಲಿ ಥೇಟರ್ ಸಿಕ್ಕಿಲ್ಲ ಅಂತ ಅಳ್ತಾರೆ. ಹೈದರಾಬಾದ್ ನಲ್ಲಿ ಎನೂ ಸಮಸ್ಯೆ ಇಲ್ಲ. ಇಲ್ಲಿ ಬಂದು ಪ್ರಚಾರ ಮಾಡಿ, ಚಿತ್ರ ಬಿಡುಗಡೆ ಮಾಡಿ. ನೂರು ದಿನ ಓಡಿಸ್ತೀವಿ.

ಕನ್ನಡದ ಒಂದೂ ಪೇಪರ್ ಇಲ್ಲಿ ಪ್ರಿಂಟ್ ಆಗಲ್ಲ. ಕನ್ನಡಪ್ರಭದ ಜತೆಗೆ, ಇತ್ತೀಚಿಗೆ ಪ್ರಜಾವಾಣಿ ಮುಂಜಾನೆ ಕೆಲವೇ ಕೆಲವು ಪ್ರದೇಶಗಳಲ್ಲಿ ಸಿಗ್ತಾ ಇದೆ. ಅದ್ರಲ್ಲಿ ಬರೀ ರಾಯಚೂರಿನ ಸುದ್ದಿ ಮಾತ್ರ ಸಿಗುತ್ತೆ. ಅದೇ ಈನಾಡು ತೆಲುಗು ಪೇಪರನ ಕರ್ನಾಟಕ ಆವೃತ್ತಿ ತೊಗೊಳ್ಳಿ, ಎಷ್ಟೊಂದು ಕರ್ನಾಟಕದ ಸುದ್ದಿ ಇರುತ್ತೆ. ಇವರ್ಯಾಕೆ ಆಂಧ್ರದ ಸುದ್ದಿನ ಕೊಡೋಲ್ಲ? ಮತ್ತೆ ಅದೇ ಸಮಸ್ಯೆ. ಇವರಿಗೂ ಮಾರ್ಕೆಟಿಂಗ್ ಅಂದ್ರೇನೆ ಗೊತ್ತಿಲ್ಲ. ತಮ್ಮ ವ್ಯಾಪಾರದ ವ್ಯಾಪ್ತಿ ಅಗಲ ಮಾಡಿಕೊಳ್ಳೋಕೆ ಯಾಕೆ ಇವರಿಗೆ ಇಷ್ಟ ಇಲ್ಲ? ಕನಿಷ್ಠ ಏಜೆಂಟ್ ಗಳನ್ನ ನೇಮಿಸೋಕ್ಕೆ ಆಗೋಲ್ವ? ರವಿ ಬೆಳೆಗೆರೆ ಇಷ್ಟೆಲ್ಲಾ ಮಾಡ್ತಾರೆ, ಒಂದು ವಾರ ಇಲ್ಲಿ ಕ್ಯಾಂಪ್ ಹಾಕಿ ಎಲ್ಲ ಕಡೆ 'ಹಾಯ್ ಬೆಂಗಳೂರ್' ಸಿಗೋ ಹಾಗೆ ಮಾಡಬಾರದಾ?

ಇಂಟರ್ ನೆಟ್ಟೇ ಸರ್ವಸ್ವವಾಗಿದೆ ಇವತ್ತು. ಇಲ್ಲಿನ ಜನ ನಿತ್ಯ ಇಣುಕಿ ನೋಡುವ thatskannada.com ಮತ್ತು ಸಾಮಾಜಿಕ ಸಂಪರ್ಕ ತಾಣಗಳು ಕನ್ನಡ ಮತ್ತೆ ಹೊಸ ಅವತಾರದಲ್ಲಿ ಕ್ರಾಂತಿ ಮಾಡಿ ಹೊರನಾಡ ಕನ್ನಡಿಗರು ಮತ್ತೆ ಆನ್ ಲೈನ್ ವೇದಿಕೆಗಳಲ್ಲಿ ಒಂದಾಗುವಂತೆ ಮಾಡಿದೆ. Thank you Internet, thank you thatskannada. ನಾವು ಆಸೆ ಬಿಟ್ಟಿಲ್ಲ. ಇಂದಿನ hifi-Wifi ಯುವ ಜನಾಂಗ ಕನ್ನಡವನ್ನ ಮತ್ತೊಮ್ಮೆ ಉಚ್ಛ್ರಾಯ ಸ್ಥಿತಿಗೆ ತಲುಪುವಂತಾಗಲು ಅಂತರ್ಜಾಲದಲ್ಲಿ ಕನ್ನಡ ಕೃಷಿ ಮಾಡುವವರಿಗೆಲ್ಲ ಜಯಸಿಗಲಿ.

ಮುಗಿಯದ ಮಾತು : ಕರ್ನಾಟಕ ಭಾರತದ ಒಂದು ರಾಜ್ಯ ಮಾತ್ರ. ಆದರೆ ಕನ್ನಡ ವಿಶ್ವದಾದ್ಯಂತ ಇದೆ. ಬಾವಿಯ ಕಪ್ಪೆಯಾಗದೆ ಕನ್ನಡದ ನಾಟಕ, ಚಲನಚಿತ್ರ, ಪತ್ರಿಕೆಗಳು ನಮ್ಮ ಊರುಗಳಿಗೂ ಬಂದು ಕನ್ನಡದ ಸಂಸ್ಕೃತಿಯನ್ನ ಬೆಳೆಸುವ ಸದ್ಬುದ್ಧಿ ಕೊಡು ತಾಯೆ ಭುವನೇಶ್ವರಿ ಎನ್ನುವುದು ಪ್ರತಿಯೊಬ್ಬ ಹೈದರಾಬಾದ್ ಕನ್ನಡಿಗರ ಬೇಡಿಕೆ.

English summary
After Telugu and Urdu, Kannada is the third largest language used in Andhra Pradesh. The twin cities of Hyderabad-Secundarabad is the second capital for people of Karnataka living in the State. What are the aspirations of Kannada people settled in AP Capital? How do they connect with their language-homes in Karnataka? A study of Language needs and needs of the Language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X