ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ಘಟ ಒಟ್ಟಿಗೆ ನುಡಿಸುವ ಸುಕನ್ಯಾ ರಾಂಗೋಪಾಲ್

By ಅಶ್ವಿನಿ ಸತೀಶ್, ಸಿಂಗಪುರ
|
Google Oneindia Kannada News

ತಮಿಳುನಾಡಿನ ಮೈಲಾಡುತೊರೆಯಲ್ಲಿ ಸಂಗೀತಗಾರರು ಹಾಗು ತಮಿಳು ಪಂಡಿತರಿಂದ ಕೂಡಿದ ಕುಟುಂಬದಲ್ಲಿ ಜನಿಸಿದ ಸುಕನ್ಯಾ ಅವರಿಗೆ ಎಳೆಯ ವಯಸ್ಸಿನಿಂದಲೇ ತಾಳವಾದ್ಯಗಳೆಡೆ ಅಪಾರವಾದ ಆಕರ್ಷಣೆ. ಚಿಕ್ಕವರಿದ್ದಾಗ ಪೊಂಗಲ್ ಹಬ್ಬದ ಸಮಯದಲ್ಲಿ ತಮಿಳುನಾಡಿನ ಬೀದಿಗಳಲ್ಲಿ ಸಿಗುತ್ತಿದ್ದ ಆಟದ ತಾಳವಾದ್ಯ 'ಡಮರು'ವನ್ನು ಕೊಂಡು ಉತ್ಸಾಹದಿಂದ ನುಡಿಸುತ್ತಿದ್ದರು.

ತಮ್ಮ 12ನೇ ವಯಸ್ಸಿನಲ್ಲಿ' ಚೆನ್ನೈ'ನ 'ಶ್ರೀ ಜಯಗಣೇಶ ತಾಳವಾದ್ಯ ವಿದ್ಯಾಲಯ'ದಲ್ಲಿ ಮೃದಂಗವನ್ನು ಅಭ್ಯಸಿಸಲು ಆರಂಭಿಸಿದರೂ ಘಟಂ ವಾದ್ಯವೇ ಅವರ ಮುಖ್ಯ ಆಕರ್ಷಣೆಯಾದ್ದರಿಂದ ನುರಿತ ಶಿಕ್ಷಕರಾದ ಹರಿಹರಶರ್ಮ ಅವರಲ್ಲಿ ಅಭ್ಯಾಸ ಆರಂಭಿಸಿದರು.

 TT Krishnamachari award to ghatam player from Karnataka Sukanya Ramgopal

ನಂತರ ಹರಿಹರಶರ್ಮ ಅವರ ಮಗ ಪದ್ಮಭೂಷಣ ವಿಕ್ಕು ವಿನಾಯಕರಾಮ್ ಅವರ ಬಳಿ ಬಹು ವರ್ಷಗಳ ಕಾಲ ಕಠಿಣವಾದ ಅಭ್ಯಾಸವನ್ನು ಮಾಡಿ, ಘಟಂ ವಾದನದ ತಂತ್ರಗಳನ್ನೆಲ್ಲ ಕರಗತಮಾಡಿಕೊಂಡರು. ಇಂದು ಶುದ್ಧ ವಿಕ್ಕು ಬಾನಿಯ ಘಟಂ ವಾದನಕ್ಕೆ ಸಾಕ್ಷಿಯಾದ ಹಲವು ಕಲಾವಿದರಲ್ಲಿ ಮುಂಚೂಣಿಯಲ್ಲಿರುವ ಕಲಾವಿದೆ. ಕೊನಕ್ಕೊಳ್ ನಲ್ಲಿ ಕೂಡ ಪರಿಶ್ರಮವಿರುವ ಇವರು ಅದನ್ನು ವೇದಿಕೆಯ ಮೇಲೆ ಹಲವು ಬಾರಿ ಪ್ರಸ್ತುತಪಡಿಸಿದ್ದಾರೆ.

ಸುಕನ್ಯಾ ಅವರು ಸಂಗೀತಕ್ಷೇತ್ರದ ಇಂದಿನ ಬಹುತೇಕ ಎಲ್ಲ ಹಿರಿಯ ಕಲಾವಿದರಿಗೆ ಘಟಂ ವಾದನದಲ್ಲಿ ಸಹಕಾರವನ್ನು ನೀಡಿದ್ದಾರೆ. ಭಾರತದ ಎಲ್ಲ ಪ್ರತಿಷ್ಠಿತ ವೇದಿಕೆಗಳಲ್ಲಿ ಮಾತ್ರವಲ್ಲದೆ ಯುಕೆ, ಕೆನಡಾ, ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲ್ಯೆಂಡ್, ದುಬೈ, ಸಿಂಗಪುರ, ಡೆನ್ಮಾರ್ಕ್ ಹಾಗು ಇನ್ನು ಎಷ್ಟೋ ದೇಶಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

 TT Krishnamachari award to ghatam player from Karnataka Sukanya Ramgopal

'ಪ್ಯಾರಿಸ್'ನ 'ಸಿಟ್ ಡಿ ಲ ಮ್ಯೂಸಿಕ್ ', 'ಮ್ಯೂಸೀ ಗ್ಯುಮೆಟ್' ಅಂತಹ ಪ್ರಮುಖವಾದ ಸ್ಥಳಗಳಲ್ಲಿ ಮತ್ತು ಸಂಗೀತ ನಾಟಕ ಅಕಾಡೆಮಿಯ ರಜತಮಹೋತ್ಸವದ ಸಂದರ್ಭದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಕರ್ನಾಟಕ ಸಂಗೀತ ಮಾತ್ರವೇ ಅಲ್ಲದೆ ಪಾಶ್ಚಾತ್ಯ ಬ್ಯಾಂಡ್ ಗಳಲ್ಲಿಯೂ ಭಾಗವಹಿಸಿ, ಬೇರೆ ದೇಶಗಳಲ್ಲಿ ಅಪರೂಪವೆನಿಸುವ ಘಟಂ ವಾದ್ಯವನ್ನು ಪರಿಚಯಿಸಿ, ಅಲ್ಲಿಯ ಅಪಾರ ಸಂಗೀತ ಕೇಳುಗರ ಅಭಿಮಾನವನ್ನು ಗಳಿಸಿದ್ದಾರೆ.

 TT Krishnamachari award to ghatam player from Karnataka Sukanya Ramgopal

ಆಕಾಶವಾಣಿಯ 'ಎ ಟಾಪ್' ದರ್ಜೆಯ ಕಲಾವಿದೆ ಹಾಗು "ಐಸಿಸಿಆರ್" ನಿಂದ ಅತ್ಯುತ್ತಮ ಕಲಾವಿದೆ ಎಂದು ಪರಿಗಣಿಸಲ್ಪಟ್ಟಿರುವ ಇವರಿಗೆ ಹಲವು ಪ್ರತಿಷ್ಠಿತ ಬಿರುದು, ಪ್ರಶಸ್ತಿಗಳು ಸಂದಿವೆ. ಘಟಂ ವಾದನವನ್ನು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಉಪಯುಕ್ತವೆನಿಸುವ ವಿಕ್ಕು ಬಾನಿಯ ವಿಶೇಷ ಘಟಂ ವಾದನ ತಂತ್ರಗಳನ್ನು ಹಾಗು ಈ ಬಾನಿಯ ಅನನ್ಯತೆಯನ್ನು ವಿವರಿಸುವ 'ಸುನಾದಂ' ಎಂಬ ಪುಸ್ತಕವನ್ನು ಬರೆದುದು ಮುಂದಿನ ಪೀಳಿಗೆಯ ಘಟಂ ವಾದಕರಿಗೆ ಇವರ ಕೊಡುಗೆ.

ಘಟ ತರಂಗ್

ತಮ್ಮ ಗುರುಗಳೊಂದಿಗೆ ಮಾಡಿದ "ಘಟಮಾಲ' ಕಾರ್ಯಕ್ರಮದಿಂದ ಬಹು ಪ್ರಭಾವಿತರಾಗಿ 'ಘಟ ತರಂಗ್' ಎಂಬ ವಿಶೇಷವಾದ ಕಾರ್ಯಕ್ರಮದ ಪರಿಕಲ್ಪನೆಗೆ ಮುಂದಾದರು. ಘಟಂನಂತಹ ತಾಳವಾದ್ಯದಲ್ಲಿ ರಾಗಗಳನ್ನು ನುಡಿಸುವ ಮೂಲಕ ಮಾಧುರ್ಯವನ್ನು ಹೊಮ್ಮಿಸುವ ಹೊಸ ಆವಿಷ್ಕಾರ ಇದಾಯಿತು.

ಬೇರೆ ಬೇರೆ ಶ್ರುತಿಯ ಆರು ಘಟಂಗಳನ್ನುಆರಿಸಿ, ಅವುಗಳನ್ನು ಒಂದು ರಾಗದ ಸ್ವರಗಳಿಗೆ ಹೊಂದಿಸಿ, ಅವುಗಳ ಮೂಲಕವೇ ಕೃತಿಗಳನ್ನು ನುಡಿಸಿ 1994ರಲ್ಲಿ ಮೊದಲ ಬಾರಿಗೆ ಬೆಂಗಳೂರಿನ 'ಪರ್ಕಸ್ಸಿವ್ ಆರ್ಟ್ ಸೆಂಟರ್'ನಲ್ಲಿ ಪ್ರಾತ್ಯಕ್ಷಿಕೆ ನೀಡಿದರು. 1996ರಲ್ಲಿ 'ಮದ್ರಾಸ್ ಮ್ಯೂಸಿಕ್ ಅಕಾಡೆಮಿ'ಯಲ್ಲಿ ಇದರ ಬಗೆಗೆ ನೀಡಿದ ಪ್ರಾತ್ಯಕ್ಷಿಕೆ ಅತ್ತ್ಯುತ್ತಮ ಪ್ರಾತ್ಯಕ್ಷಿಕೆ ಎಂಬ ಪ್ರಶಸ್ತಿಗೆ ಆಯ್ಕೆಯಾಗಿತ್ತು.

 TT Krishnamachari award to ghatam player from Karnataka Sukanya Ramgopal

ಈ ವಿಶೇಷವಾದ ಆವಿಷ್ಕಾರಕ್ಕೆ ಅನೇಕ ಹಿರಿಯ ವಿದ್ವಾಂಸರಿಂದ ಸಾಕಷ್ಟು ಪ್ರಶಂಸೆ, ಪ್ರೋತ್ಸಾಹ ಸುಕನ್ಯಾ ಅವರಿಗೆ ದೊರಕಿತು. ಘಟ ತರಂಗ್ ನುಡಿಸಲು ಅನುವಾಗುವಂತಹ ಕೆಲವು ರಚನೆಗಳನ್ನು ಸ್ವತಃ ರಚಿಸಿದರು. ಕಳೆದ 20 ವರ್ಷಗಳಲ್ಲಿ 'ಘಟ ತರಂಗ್' ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.

ಎಂದಿನಿಂದಲೂ ಉಪಪಕ್ಕವಾದ್ಯವಾಗಿ ನುಡಿಸಲ್ಪಡುತ್ತಿದ್ದ ಘಟಂ ಈ ಕಾರ್ಯಕ್ರಮದಲ್ಲಿ ಪ್ರಧಾನ ವಾದ್ಯವಾಗಿ ವೇದಿಕೆಯ ಮಧ್ಯದ ಸ್ಥಾನವನ್ನು ಪಡೆದುದು ಕ್ರಾಂತಿ ಎನಿಸಿಕೊಂಡಿತು. ಒಂದು ಘಟಂ ಹಿಡಿದು ನುಡಿಸುವುದೇ ಬಹಳ ಕಷ್ಟವಾದರೂ, ಆರು ಘಟಂಗಳಲ್ಲಿ ಲಯಬದ್ಧವಾಗಿ ಕೃತಿಗಳನ್ನು ನುಡಿಸುವಷ್ಟು ಹತೋಟಿ ಸಾಧಿಸಿರುವುದು ಇವರ ದೂರದೃಷ್ಟಿ, ವರ್ಷಗಳ ಕಠಿಣ ಪರಿಶ್ರಮಗಳಿಗೆ ಸಾಕ್ಷಿ.

1995ರಲ್ಲಿ "ಸ್ತ್ರೀ ತಾಳ ತರಂಗ್" ಎಂಬ ಸ್ತ್ರೀ ವಾದಕಿಯರ ತಂಡವನ್ನು ರಚಿಸಿದರು. ವೀಣೆ, ಪಿಟೀಲು, ಮೃದಂಗ, ಘಟಂ ಹಾಗು ಮೋರ್ಸಿಂಗ್ - ಈ ವಾದ್ಯಗಳನ್ನು ಅದ್ಭುತವಾಗಿ ನುಡಿಸುವ ಪ್ರತಿಭಾವಂತ ವಾದಕಿಯರ ಈ ತಂಡ ಪ್ರಸ್ತುತಪಡಿಸುವ 'ಲಯ ರಾಗ ಸಮರ್ಪಣಂ' ಇಂದು ದೇಶ ವಿದೇಶಗಳಲ್ಲಿ ಜನಪ್ರಿಯತೆ ಪಡೆದಿದೆ. ರಾಗ -ತಾನ - ಪಲ್ಲವಿಯನ್ನು ಕೂಡ ಘಟತರಂಗ್ ನಲ್ಲಿ ನುಡಿಸುವ ಈ ತಂಡದ ಪ್ರಸ್ತುತಿಗಳು ವಿನೂತನ ಎನಿಸಿಕೊಂಡಿವೆ.

 TT Krishnamachari award to ghatam player from Karnataka Sukanya Ramgopal

ಸುಮಾರು 38 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಸುಕನ್ಯಾ ಅವರು ವಿಶೇಷವಾಗಿ ಘಟಂ ವಾದನ ಶಿಕ್ಷಣಕ್ಕೆಂದೇ ಮೀಸಲಾಗಿರುವ 'ಶ್ರೀ ವಿಕ್ಕು ವಿನಾಯಕರಾಮ್ ಸ್ಕೂಲ್ ಫಾರ್ ಘಟಂ' ಎಂಬ ಶಾಲೆಯನ್ನು ಸ್ಥಾಪಿಸಿ ಆ ಮೂಲಕ ಅನೇಕ ಶಿಷ್ಯರಿಗೆ ತರಬೇತಿ ನೀಡುತ್ತಿದ್ದಾರೆ. ಅವರಲ್ಲಿ ಹಲವರು ವೇದಿಕೆಯ ಕಲಾವಿದರಾಗಿ ಕಚೇರಿಗಳು, ವಾದ್ಯವೃಂದಗಳಲ್ಲಿ ಭಾಗವಹಿಸಿ ಪ್ರಸಿದ್ಧಿ ಪಡೆಯುತ್ತಿದ್ದಾರೆ.

ಇವರ ಈ ಎಲ್ಲ ಕೈಂಕರ್ಯಗಳಿಗೆ ಸದಾ ಪ್ರೋತ್ಸಾಹಕವಾಗಿ ನಿಂತಿರುವ ಪತಿ ವಿ. ರಾಮ್ ಗೋಪಾಲ್ 'ಬಿ.ಎಚ್.ಇ.ಎಲ್'ನಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿದವರು. ಮಗ, ಮಗಳು ಹಾಗು ಅಳಿಯ ಎಲ್ಲರು ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಇವರ ಸಂಗೀತ ಸಾಧನೆಗಳಿಗೆ ಹೆಮ್ಮೆ ಪಡುತ್ತಾರೆ ಹಾಗು ಒಂದಿಲ್ಲೊಂದು ರೀತಿಯಲ್ಲಿ ಸಹಕಾರ ನೀಡುತ್ತಾರೆ.

ಸಹಜವಾದ ನಡೆ ನುಡಿಯ, ಅತ್ಯಂತ ಸರಳ ಸ್ವಭಾವವುಳ್ಳ ಸ್ನೇಹಮಯಿ ಸುಕನ್ಯಾ ರಾಮ್ ಗೋಪಾಲ್ ಅವರನ್ನು ನೋಡಿದಾಗ ಯಾರಿಗಾದರೂ "ಇವರೇನಾ ಇಷ್ಟೆಲ್ಲಾ ಸಾಧಿಸಿರೋದು" ಅನ್ನಿಸುವುದು ತುಂಬಾ ಸಹಜ. ತುಂಬಿದ ಕೊಡಗಳೇ ಹಾಗಲ್ಲವೇ?

ಅಕಾಡೆಮಿಯ ಟಿಟಿಕೆ (ಟಿ.ಟಿ. ಕೃಷ್ಣಮಾಚಾರಿ) ಪ್ರಶಸ್ತಿಯಂತಹ ಇನ್ನು ಹಲವು ಪ್ರಶಸ್ತಿ ಗೌರವಗಳು ಇವರಿಗೆ ಪ್ರಾಪ್ತಿಯಾಗಲಿ ಎಂಬುದು ನಮ್ಮೆಲ್ಲರ ಆಶಯ.

English summary
TT Krishnamachari award to well known ghatam player from Karnataka Sukanya Ramgopal. The award is given by Madras music academy, Chennai. Sukanya Ramgopal is staying in Bengaluru. An introduction by Ashwini Satish, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X