ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಮುರಳಿ ಕೃಷ್ಣನ ಕೊರಳಿಗೆ ಕನ್ನಡದ 'ಮುತ್ತಿನ ಹಾರ'

ಕನ್ನಡದ ಜೊತೆಗಿನ ಅವರ ನಂಟು ಇಂದು ನಿನ್ನೆಯದಲ್ಲ 1975ರಲ್ಲಿ ಬಿಡುಗಡೆಯಾಗಿ ಎರಡು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡ ಜಿವಿ ಅಯ್ಯರ್ ಅವರ ನಿರ್ದೇಶನದ 'ಹಂಸಗೀತೆ'ಗೆ ಬಾಲಮುರಳಿ ಕೃಷ್ಣ ಅವರು ಸಂಗೀತ ನೀಡಿದ್ದಲ್ಲದೆ, ಹಾಡನ್ನೂ ಹಾಡಿದ್ದರು.

By Prasad
|
Google Oneindia Kannada News

ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ....

ಅತ್ಯುದ್ಭುತ ಛಾಯಾಗ್ರಹಣವಿದ್ದ, ರಾಜೇಂದ್ರ ಸಿಂಗ್ ಬಾಬು ಅವರ ಅಷ್ಟೇ ಅತ್ಯುತ್ತಮ ನಿರ್ದೇಶನವಿದ್ದ ಮುತ್ತಿನ ಹಾರ ಚಿತ್ರದ ಈ ಗೀತೆ ಕಿವಿಯ ಮೇಲೆ ಬೀಳುತ್ತಿದ್ದರೆ ಎಂಥವನೂ ಭಾವಪರವಶನಾಗಿಬಿಡುತ್ತಾನೆ. ವಿಷ್ಣುವರ್ಧನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ ಈ ಚಿತ್ರದ್ದು ಒಂದು ತೂಕವಾದರೆ, ಈ ಗೀತೆಗೆ ಜೀವ ತುಂಬಿದ ಆ ಕಂಠದ್ದು ಮತ್ತೊಂದು ತೂಕ.

ಈ ಗೀತೆಯಲ್ಲದೆ ಕನ್ನಡದಲ್ಲಿ ಹಂಸಗೀತೆ, ಮಧ್ವಾಚಾರ್ಯ ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿ, ತಮ್ಮ ಅದ್ಭುತ ಕಂಠಸಿರಿಯನ್ನು ಕನ್ನಡ ಸಿನೆಮಾ ಜಗತ್ತಿಗೆ ತೋರಿದ ಕಂಚಿನ ಕಂಠದ ಶಾಸ್ತ್ರೀಯ ಗಾಯಕ ಡಾ. ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ ಅವರು ಸಂಗೀತ ಜೊತೆಗಿನ ತಮ್ಮ ಪ್ರೇಮದ ಪಯಣವನ್ನು ಮುಗಿಸಿ, ಗಂಧರ್ವಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಕನ್ನಡದ ಜೊತೆಗಿನ ಅವರ ನಂಟು ಇಂದು ನಿನ್ನೆಯದಲ್ಲ 1975ರಲ್ಲಿ ಬಿಡುಗಡೆಯಾಗಿ ಎರಡು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡ ಜಿವಿ ಅಯ್ಯರ್ ಅವರ ನಿರ್ದೇಶನದ 'ಹಂಸಗೀತೆ'ಗೆ ಬಾಲಮುರಳಿ ಕೃಷ್ಣ ಅವರು ಸಂಗೀತ ನೀಡಿದ್ದಲ್ಲದೆ, ಹಾಡನ್ನೂ ಹಾಡಿದ್ದರು. ಹಂಸಗೀತೆಗೆ ಅತ್ಯುತ್ತಮ ಚಿತ್ರ ಮತ್ತು 'ಹಿಮಾದ್ರಿ ಸುತೆ ಪಾಹಿಮಾಮ್' ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ಪ್ರಶಸ್ತಿಯನ್ನು ಅವರು ಪಡೆದಿದ್ದರು.

Mangalampalli Balamurali Krishna, Indian Carnatic vocalist, a profile

ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲಾಗಿರುವ ಅ.ನ. ಕೃಷ್ಣರಾಯರ ಕಾದಂಬರಿ ಆಧಾರಿತ, ಎಸಿ ನರಸಿಂಹಮೂರ್ತಿ ಅವರ ನಿರ್ದೇಶನದ 'ಸಂಧ್ಯಾರಾಗ', ಎಂವಿ ಕೃಷ್ಣಸ್ವಾಮಿ ಅವರ ನಿರ್ದೇಶನದ 'ಸುಬ್ಬಾಶಾಸ್ತ್ರಿ' ಚಿತ್ರಗಳಲ್ಲಿಯೂ ಕರ್ನಾಟಕ ಸಂಗೀತದ ಗಾರುಡಿಗ ಬಾಲಮುರಳಿ ಕೃಷ್ಣ ಅವರು ತಮ್ಮ ಕಂಠಸಿರಿಯ ಕಾಣಿಕೆ ನೀಡಿದ್ದರು.

ನಂತರ 1986ರಲ್ಲಿ ಬಿಡುಗಡೆಯಾದ, ಜಿವಿ ಅಯ್ಯರ್ ಅವರ ನಿರ್ದೇಶನದ 'ಮಧ್ವಾಚಾರ್ಯ' ಚಿತ್ರಕ್ಕೂ ಡಾ. ಬಾಲಮುರಳಿಕೃಷ್ಣ ಅವರು ಹಿನ್ನೆಲೆ ಸಂಗೀತ ನೀಡಿ ಹಾಡುಗಳನ್ನೂ ಹಾಡಿದ್ದರು. ಈ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. ಆದರೆ, ಮುತ್ತಿನ ಹಾರದಲ್ಲಿ ಅವರು ಹಾಡಿದ 'ದೇವರು ಹೊಸೆದ ಪ್ರೇಮದ ದಾರ' ಕನ್ನಡದಲ್ಲಿ ಅವರು ಹಾಡಿದ ಕೊನೆಯ ಚಿತ್ರಗೀತೆಯಾಯಿತು.

ಬಾಲಮುರಳಿ ಕೃಷ್ಣ ಅವರ ಬಾಲ್ಯ

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸಂಕರಗುಪ್ತಂ ಎಂಬಲ್ಲಿ 1930ರ ಜುಲೈ 6ರಂದು ಸಂಗೀತಗಾರರ ಕುಟುಂಬದಲ್ಲಿ ಅವರ ಜನನವಾಯಿತು. ಅವರ ತಂದೆ ಕೊಳಲು, ಪಿಟೀಲು ಮತ್ತು ವೀಣಾವಾದಕರಾಗಿದ್ದರೆ, ಅವರ ತಾಯಿ ಕೂಡ ಅತ್ಯುತ್ತಮ ವೀಣಾ ವಾದಕರಾಗಿದ್ದರು. ಇನ್ನೂ ಕೂಸಿದ್ದಾಗಲೇ ಬಾಲಮುರಳಿ ಕೃಷ್ಣ ಅವರು ತಾಯಿಯನ್ನು ಕಳೆದುಕೊಂಡರು.

ಅವರ ತಂದೆಯ ಆರೈಕೆಯಲ್ಲಿಯೇ ಬಾಲಮುರಳಿ ಕೃಷ್ಣ ಅವರು ಬೆಳೆದರು. ಅವರಲ್ಲಿದ್ದ ಸಂಗೀತಾಸಕ್ತಿಯನ್ನು ಗಮನಿಸಿ, ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬರುವ ಪರುಪಲ್ಲಿ ರಾಮಕೃಷ್ಣಯ್ಯ ಪಂತುಲು ಅವರ ಬಳಿ ಸಂಗೀತ ಕಲಿಯಲು ಅವರ ತಂದೆ ಬಿಟ್ಟರು. ತ್ಯಾಗರಾಜರ ಆರಾಧನೆಯಂದು 8ರ ಬಾಲಕ ತನ್ನ ಮೊದಲ ಕಚೇರಿಯನ್ನು ನೀಡಿ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದರು.

ಅವರ ಮೂಲ ಹೆಸರಿದ್ದುದು ಮುರಳಿಕೃಷ್ಣ ಮಾತ್ರ. ಆದರೆ, ಅವರಲ್ಲಿದ್ದ ಅಗಾಧವಾದ ಸಂಗೀತ ಪರಿಣತೆಗೆ ಮರುಳಾದ ಖ್ಯಾತ ಹರಿಕಥೆಪಟು ಮುಸುನುರಿ ಸೂರ್ಯನಾರಾಯಣ ಮೂರ್ತಿ ಭಾಗವತಾರ್ ಅವರು ಮುರಳಿಕೃಷ್ಣನ ಹೆಸರಿನ ಹಿಂದೆ 'ಬಾಲ' ಎಂದು ಸೇರಿಸಿದರು. ಅವರು ಅಂದಿನಿಂದ ಬಾಲಮುರಳಿ ಕೃಷ್ಣ ಎಂದೇ ಖ್ಯಾತರಾದರು.

ವಿಶ್ವದಾದ್ಯಂತ ಪಸರಿಸಿದ ಖ್ಯಾತಿ

ಆರು ವರ್ಷದವನಿದ್ದಾಗಲೇ ಆರಂಭವಾದ ಸಂಗೀತಯಾತ್ರೆ ವಿಶ್ವದಾದ್ಯಂತ ಪಸರಿಸಿತು. ಜಗತ್ತಿನಾದ್ಯಂತ 25 ಸಾವಿರಕ್ಕೂ ಹೆಚ್ಚು ಕಚೇರಿಗಳಲ್ಲಿ ಅವರು ಪಾಲ್ಗೊಂಡಿದ್ದರು. ಪಂಡಿತ ಭೀಮಸೇನ ಜೋಶಿ, ಹರಿಪ್ರಸಾದ್ ಚೌರಾಸಿಯಾ, ಕಿಶೋರಿ ಅಮೋನಕರ ಮುಂತಾದ ದಿಗ್ಗಜರೊಂದಿಗೆ ಸಂಗೀತ ಕಚೇರಿಗಳನ್ನು ಬಾಲಮುರಳಿ ಕೃಷ್ಣ ನೀಡಿದ್ದರು.

ಬಾಲಮುರಳಿ ಕೃಷ್ಣ ಅವರು ಸುತ್ತದ ದೇಶವೇ ಇಲ್ಲ, ಕಂಠಮಾಧುರ್ಯಕ್ಕೆ ಮರುಳಾಗದ ಕಿವಿಗಳೇ ಇಲ್ಲ. ಅವರು ತಮ್ಮ ಮಾತೃಭಾಷೆ ತೆಲುಗಲ್ಲದೆ, ಕನ್ನಡ, ಸಂಸ್ಕೃತ, ತಮಿಳು, ಮಲಯಾಳಂ, ಹಿಂದಿ, ಬಂಗಾಳಿ ಮತ್ತು ಪಂಜಾಬಿನಲ್ಲಿಯೂ ಹಲವಾರು ಹಾಡುಗಳನ್ನು ಹಾಡಿ ಸಂಗೀತ ರಸಿಕರನ್ನು ಮೋಡಿ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಂಗೀತ ಚಿಕಿತ್ಸೆಯಲ್ಲಿ ಅವರು ತೊಡಗಿಸಿಕೊಂಡಿದ್ದರು.

ಬಾಲಮುರಳಿ ಕೃಷ್ಣ ಅವರ ಸಂಗೀತ ಪಯಣದಲ್ಲಿ ಯಾವುದೇ ಗಡಿ ಇರಲಿಲ್ಲ. ಕರ್ನಾಟಕ ಸಂಗೀತದಲ್ಲಿ ಹಲವಾರು ಕೃತಿಗಳಿಗೆ ಸಂಗೀತ ನೀಡಿದ್ದಲ್ಲದೆ, ಗಣಪತಿ, ಸರ್ವಶ್ರೀ, ಮಹತಿ, ಲಾವಂಗಿ ಮುಂತಾದ ರಾಗಗಳನ್ನು ಹುಟ್ಟುಹಾಕಿದ ಕೀರ್ತಿಯೂ ಅವರದು.

ಪಡೆದ ಪ್ರಶಸ್ತಿಗಳಿಗೂ ಲೆಕ್ಕವಿಲ್ಲ

ಕೇಂದ್ರ ಸರಕಾರದಿಂದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀಗೆ ಅವರು ಭಾಜನರಾಗಿದ್ದಾರೆ. ಸಂಗೀತ ಸಾಧನೆಗಾಗಿ ಫ್ರಾನ್ಸ್ ಸರಕಾರ ನೀಡುವ Chevalier of the Ordre des Arts et des Lettres ಅಂತಾರಾಷ್ಟ್ರೀಯ ಪ್ರಶಸ್ತಿ ಅವರನ್ನು ಪಡೆದುಕೊಂಡಿದ್ದಾರೆ.

ಕೇರಳ ಸರಕಾರದಿಂದ ಎರಡು ಚಿತ್ರಗಳಿಗೆ ಅತ್ಯುತ್ತಮ ಗಾಯಕ ಪ್ರಶಸ್ತಿ, ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ ಪ್ರಶಸ್ತಿ, ಸಂಗೀತ ಕಲಾಶಿಖಾಮಣಿ, ಸಂಗೀತ ಕಲಾಸಾರಥಿ, ಸಂಗೀತ ಕಲಾವಿರಿಂಚಿ ಮುಂತಾದ ಪ್ರಶಸ್ತಿಗಳು ಅವರನ್ನು ಅರಸಿಬಂದವು, ತಮ್ಮ ಗೌರವವನ್ನೂ ಹೆಚ್ಚಿಸಿಕೊಂಡಿದ್ದವು. ಅಪಾರವಾದ ಕರ್ನಾಟಕ ಸಂಗೀತದ ಶ್ರೀಮಂತಿಕೆಯನ್ನು ಬಿಟ್ಟು ನವೆಂಬರ್ 22ರಂದು ಅವರು ಅಗಲಿದ್ದಾರೆ.

English summary
Profile of Mangalampalli Balamurali Krishna, Indian Carnatic vocalist, multi-instrumentalist, playback singer, composer and actor. He was awarded the Padma Vibhushan, India's second-highest civilian honour, for his contribution towards Indian Art. He breathed his last on 22nd November.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X