ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಬ್ಬ ಬಾಲಮುರಳೀಕೃಷ್ಣ ಹುಟ್ಟಿಬರಲು ಕಾಯೋಣ!

ಬಾಲಮುರಳೀ ಕೃಷ್ಣ 20ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು ಹಾಗೂ ಅತೀ ಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ಬಾಲಮುರಳಿ ಕೃಷ್ಣ ಇಂದು ನಮ್ಮೊಡನೆ ಇಲ್ಲ ಎಂದು ನಾನು ಹೇಳುವುದು ತಪ್ಪೇ ಆಗುತ್ತದೆ!

By ರಾಮಪ್ರಸಾದ್ ಕೆವಿ
|
Google Oneindia Kannada News

गगनं गगनाकारं सागरः सागरोपमः
मुरळी रवमाधुर्यं मुरळी मंदहासवत्

ಗಗನಂ ಗಗನಾಕಾರಂ ಸಾಗರಃ ಸಾಗರೋಪಮಃ
ಮುರಳೀ ರವಮಾಧುರ್ಯಂ ಮುರಳೀ ಮಂದಹಾಸವತ್

ಆಗಸದ ವಿಸ್ತರಕೆ ಸಾಟಿಯಾಕಾಶವದು
ಕಡಲಿಗೆಣೆಯಾಗುವುದು ಕಡಲು ಒಂದೆ!
ಬಾಲಮುರಳಿಯ ಗಾನಸುಧೆಯೀವ ಸವಿಗಂತು
ಹಾಯೆನಿಪ ಈ ಮೊಗದ ನಗುವೆ ಹೋಲಿಕೆಯು!

(ಸಂಸ್ಕೃತ ಪದ್ಯದ ಮೊದಲ ಸಾಲು ರಾಮಾಯಣದಲ್ಲಿ, ವಾಲ್ಮೀಕಿ ರಾಮ ರಾವಣರ ಯುದ್ಧವನ್ನು ಬಣ್ಣಿಸುವಾಗ ಆಡುವ ಮಾತು. ರಾಮರಾವಣರ ಯುದ್ಧಕ್ಕೆ ರಾಮರಾವಣರ ಯುದ್ಧವೊಂದೇ ಸಾಟಿ ಎಂದು ಅವನು ಹೇಳಿದ ಮಾತು, ಬಾಲಮುರಳೀಕೃಷ್ಣರ ಸಂಗೀತಕ್ಕೂ ಸಲ್ಲುವುದೆನಿಸಿ, ಎರಡನೇ ಸಾಲನ್ನು ನಾನು ಸೇರಿಸಿ, ಅದರ ಕನ್ನಡಾನುವಾದವನ್ನು ಅಡಿಯಲ್ಲೇ ಕೊಟ್ಟಿದ್ದೇನೆ.)

ಬಾಲಮುರಳೀ ಕೃಷ್ಣ 20ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು ಹಾಗೂ ಅತೀ ಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ತ್ಯಾಗರಾಜರ ನೇರ ಶಿಷ್ಯ ಪರಂಪರೆಯಲ್ಲಿ (ಆಂಧ್ರ ಸಂಪ್ರದಾಯದಲ್ಲಿ) ಬೆಳೆದು ಬಂದ ಬಾಲಮುರಳಿ ಕೃಷ್ಣ ಇಂದು ನಮ್ಮೊಡನೆ ಇಲ್ಲ ಎಂದು ನಾನು ಹೇಳುವುದು ತಪ್ಪೇ ಆಗುತ್ತದೆ! ಏಕೆಂದರೆ, ಪೂರ್ಣಾಯಸ್ಸನ್ನು ಸಂಗೀತಕ್ಕೆ ಧಾರೆ ಎರೆದು ಕೋಟ್ಯಂತರ ರಸಿಕರ ಮನಸೂರೆಗೈದ ಬಾಲಮುರಳಿಯ ಸಂಗೀತ ಸುಧೆ ಅಮರ! ಅವರು, ನಮ್ಮಂತೆ ಅವರ ಹಾಡುಗಾರಿಕೆಯನ್ನು ಕೇಳಿ ಆನಂದಿಸುವ ರಸಿಕರು ಬದುಕಿರುವವರೆಗೂ, ಅವರ ರಚನೆಗಳನ್ನು ಇತರ ಸಂಗೀತಗಾರರು ಹಾಡುತ್ತಿರುವವರೆಗೂ, ಅವರು ಬದುಕಿಯೇ, ನಮ್ಮ ನಡುವೆಯೇ ಇದ್ದಂತೆ. [ಬಾಲಮುರಳಿ ಕೃಷ್ಣನ ಕೊರಳಿಗೆ ಕನ್ನಡದ 'ಮುತ್ತಿನ ಹಾರ']

Long live Balamurali Krishna, legendary Karnataka vocalist

ಸಾಮಾನ್ಯವಾಗಿ ಸಂಗೀತಗಾರರಲ್ಲಿ ಹಲವು ವಿಧ. ಕೆಲವರು ಬಹಳ ವಿದ್ವಾಂಸರು, ಪ್ರೇಕ್ಷಕರಿಗೆ ಅತ್ಯುತ್ತಮ ಸಭಾ ಸಂಗೀತದ ಅನುಭವ ಮಾಡಿಸುವವರು ಕೆಲವರು. ಮತ್ತೆ ಕೆಲವರು ಪರಂಪರೆಯನ್ನು ಮುಂದುವರೆಸುವಲ್ಲಿ ಉತ್ತಮ ಶಿಷ್ಯಕೋಟಿಯನ್ನು ತಯಾರು ಮಾಡುವವರು. ಇನ್ನು ಕೆಲವರು ತಮ್ಮ ಹೊಸ ರಚನೆಗಳಿಂದ ಸಂಗೀತದ ಚೌಕಟ್ಟನ್ನು ಇನ್ನೂ ಹಿಗ್ಗಿಸಿ ಅದಕ್ಕೆ ಮೆರಗು ಕೊಡುವವರು. ಕೆಲವರು ಪಂಡಿತರಿಗೆ ಮೆಚ್ಚಿಗೆಯಾದವರು, ಕೆಲವರು ಸಂಗೀತದ ಗಂಧಗಾಳಿಯೂ ಇಲ್ಲದವರಿಗೂ ಹಿಡಿಸುವಂತಹವರು. ಆದರೆ ಈ ಎಲ್ಲಕ್ಕೂ ಉದಾಹರಣೆಯಾಗಿ ನಿಲ್ಲಬಲ್ಲಂತಹವರು ಬಲು ವಿರಳ. ಅವರಲ್ಲಿ ಮುಂಚೂಣಿಯಲ್ಲಿರುವವರು ಡಾ. ಬಾಲಮುರಳಿ ಕೃಷ್ಣ.

ಸಂಗೀತ ಕುಟುಂಬದಲ್ಲಿ ಹುಟ್ಟಿದ ಬಾಲಮುರಳಿ ಕೃಷ್ಣ ಐದು ವರ್ಷದ ಪುಟ್ಟ ಬಾಲಕರಿದ್ದಾಗಲೆ ಹಾಡುಗಾರರಾದರು. ಹಾಡುಗಾರಿಕೆ ಒಂದೇ ಅಲ್ಲದೆ, ಹಲವು ವಾದ್ಯಗಳಲ್ಲೂ (ಖಂಜಿರ, ಮೃದಂಗ, ವಯೋಲಿನ್, ವಯೋಲಾ ಇತ್ಯಾದಿ) ಪರಿಣಿತರಾದರು. ಈ ಲಯವಾದ್ಯಗಳಲ್ಲಿ ಅವರಿಗಿದ್ದ ಪರಿಣತಿಯೇ ಅವರ ಅಪರೂಪದ ಮನೋಧರ್ಮ ಸಂಗೀತಕ್ಕೆ ಮುಖ್ಯ ತಳಹದಿ ಎನ್ನಬಹುದು. ಇಂತಿಷ್ಟು ಪರಿಣತಿಯಿದ್ದ ಅವರು ಹೇಳುತ್ತಿದ್ದ ಪ್ರಕಾರ, ಅವರು ಸಂಗೀತ ಅಭ್ಯಾಸ ಮಾಡುತ್ತಿದ್ದಿದ್ದೇ ಇಲ್ಲವಂತೆ! ಬಹುಶಃ ಸಂಗೀತವೇ ಅವರ ರಕ್ತದಲ್ಲಿ ಹರಿಯುತ್ತಿದ್ದಿರಬೇಕು! ಹಾಗಾಗಿ ಯಾವಾಗಲೂ ಅದೇ ಅವರ ಮನಸ್ಸಿನಲ್ಲೂ ಹರಿದಾಡುತ್ತಿರುವ ಅವರು, ಅದಕ್ಕಾಗಿ ಕುಳಿತು ಅಭ್ಯಾಸ ಮಾಡದಿದ್ದರೆ ಆಶ್ಚರ್ಯವೇನಿದೆ?

Long live Balamurali Krishna, legendary Karnataka vocalist

ತ್ಯಾಗರಾಜರ ನೇರ ಶಿಷ್ಯ ಪರಂಪರೆಯಲ್ಲಿ ಆರನೇ ತಲೆಮಾರಿನ ಬಾಲಮುರಳಿ ಕೃಷ್ಣ, ತ್ಯಾಗರಾಜರ ನಂತರದ ಬಂದ ವಾಗ್ಗೇಯಕಾರರಲ್ಲಿ ಶ್ರೇಷ್ಠತಮರಾಗಿ ನಿಲ್ಲುತ್ತಾರೆ ಎಂಬುದು ನನ್ನ ಅಭಿಪ್ರಾಯ. ಚಿಕ್ಕವಯಸ್ಸಿನಲ್ಲೇ ವಾಗ್ಗೇಯಕಾರರಾದ 'ಬಾಲ'ಮುರಳಿಯೂ ತ್ಯಾಗರಾಜರಂತೆ ಸ್ವನಾಮ ಮುದ್ರೆ ಹೊಂದಿದವರೇ. ನೂರಾರು ರಚನೆಗಳನ್ನು ಪ್ರಸಿದ್ಧ, ಅಪ್ರಸಿದ್ಧ ರಾಗಗಳಲ್ಲಿ ಕಲ್ಪಿಸಿರುವ ಬಾಲಮುರಳಿ, ಈ ವಿಷಯದಲ್ಲೂ ತ್ಯಾಗರಾಜರನ್ನೇ ಮುಂದಾಳಾಗಿ ಇಟ್ಟುಕೊಂಡಿದ್ದಿರಬೇಕು.

ತ್ಯಾಗರಾಜರು ಕೈಹಾಕದೇ ಹೋದ ವರ್ಣ ಮತ್ತೆ ತಿಲ್ಲಾನಗಳು ಬಾಲಮುರಳೀ ಕೃಷ್ಣರ ಸ್ವಂತ ರಚನೆಗಳಲ್ಲಿ ಇಂದು ಹೆಚ್ಚು ಬೆಳಕು ಕಂಡಿವೆ. ಗಂಭೀರನಾಟದ 'ಅಮ್ಮ ಆನಂದದಾಯಿನಿ', ನಾಟ ರಾಗದ 'ಈ ನಾದಮುಲೋ', ಅಮೃತವರ್ಷಿಣಿ ರಾಗದ 'ಆಬಾಲಗೋಪಾಲಮು', ಶುದ್ಧ ತೋಡಿಯ 'ಸರಗುನ ಗಾವುಮು' ಷಣ್ಮುಖಪ್ರಿಯದ 'ಓಂಕಾರ ಪ್ರಣವ ನಾದೋಪಾಸನ' ಮೊದಲಾದ ವರ್ಣಗಳು ಅವರ ಕುಶಲತೆಗೆ ಸಾಕ್ಷಿ. ಇನ್ನು ಅವರ ಕದನಕುತೂಹಲ, ಗರುಡಧ್ವನಿ, ಬೃಂದಾವನಿ ಮೊದಲಾದ ರಾಗಗಳಲ್ಲಿರುವ ತಿಲ್ಲಾನಗಳನ್ನು ಕೇಳುತ್ತಾ ಕೇಳುವವರೇ ಮನಸ್ಸಿನಲ್ಲೇ ನರ್ತಿಸುವಂತಾಗುವುದೂ ಸುಳ್ಳಲ್ಲ. ನರ್ತನ ವೇದಿಕೆಯಲ್ಲಿ ಈ ರಚನೆಗಳು ಹೆಚ್ಚಾಗಿ ಕಾಣಿಸಿಕೊಂಡಿರುವುದರಿಂದ ಬಹುಜನಪ್ರಿಯವೂ ಆಗಿವೆ. [ಶಾಸ್ತ್ರೀಯ ಸಂಗೀತಗಾರ ಎಂ ಬಾಲಮುರಳಿಕೃಷ್ಣ ವಿಧಿವಶ]

Long live Balamurali Krishna, legendary Karnataka vocalist

'ಕೃತಿ' ಎಂಬ ಪ್ರಕಾರದಲ್ಲೂ ಅವರ ಸಾಧನೆ ಸಾಟಿಯಿಲ್ಲದ್ದು. ದುರದೃಷ್ಟವಶಾತ್ ಹೆಚ್ಚಾಗಿ ಎಲ್ಲ ಮೇಳಕರ್ತರಾಗಗಳಲ್ಲೂ ರಚನೆ ಮಾಡಿದ ಕೆಲವರಲ್ಲಿ ಬಾಲಮುರಳಿ ಒಬ್ಬರು ಎಂದು ಹೇಳಿಮುಗಿಸಿಬಿಡುವುದು ರೂಢಿ. ಆದರೆ ಅದೊಂದೇ ಅಲ್ಲ ಅವರ ಸಾಧನೆ! ಸಂಗೀತಕ್ಕೆ ತಕ್ಕುದಾದ ಸಾಹಿತ್ಯ ಚಮತ್ಕಾರ, ಸ್ವರಾಕ್ಷರ ಬಳಕೆ ಇಂಥ ವಿಷಯಗಳು ಅವರ ರಚನೆಗಳಲ್ಲಿ ಹೆಜ್ಜೆ ಹೆಜ್ಜೆಗೂ ಕಾಣುತ್ತವೆ. ಅದರಲ್ಲೂ ಸಾಹಿತ ಸಂಗೀತಗಳ ಸರಿಯಾದ ಪರಿಮಾಣದಲ್ಲಿ ಮಿಳಿತ, ಕೇಳಲು ಹಿತವಾದಪದಗಳ ಬಳಕೆ ಇಂತಹವುಗಳಿಗೆ ಬಾಲಮುರಳಿಯವರ ರಚನೆಗಳು ಒಳ್ಳೇ ಉದಾಹರಣೆ. ಮೊದಮೊದಲು ಅವರು ತಮ್ಮ ಸಂಗೀತ ಕಚೇರಿಗಳಲ್ಲಿ ಸ್ವಂತ ರಚನೆಗಳನ್ನು ಹಾಡುತ್ತಿರಲಿಲ್ಲವಂತೆ. ಆದರೆ ನಮ್ಮ ಪುಣ್ಯ, ನಂತರದ ದಿನಗಳಲ್ಲಿ ಅವರು ತಮ್ಮ ರಚನೆಗಳನ್ನೂ ವೇದಿಕೆಯ ಮೇಲೆ ಹಾಡಲಾರಂಭಿಸಿದ್ದು ಕೇಳುಗರಿಗೂ, ಇತರೆ ಸಂಗೀತಗಾರರಿಗೂ ಭಾಗ್ಯವಾಗಿಯೇ ಪರಿಣಮಿಸಿತು. ಇಲ್ಲದೇ ಹೋಗಿದ್ದರೆ, ಎಷ್ಟೋ ಅನರ್ಘ್ಯ ರತ್ನಗಳು ಯಾವ ಗಣಿಯಲ್ಲೇ ಉಳಿದುಕೊಂಡು ಬಿಡುತ್ತಿದ್ದವೋ!

ಹೆಚ್ಚಾಗಿ ಸಂಸ್ಕೃತ, ತೆಲುಗು ಭಾಷೆಗಳಲ್ಲಿ, ಅಪರೂಪಕ್ಕೆ ತಮಿಳು ಭಾಷೆಯಲ್ಲಿ ಸರಳ, ಸುಂದರ ಸಾಹಿತ್ಯ ಭಾಗಗಳನ್ನು ಹೊಂದಿರುವ ಬಾಲಮುರಳಿ ಅವರ ರಚನೆಗಳೂ ತ್ಯಾಗರಾಜರ ರಚನೆಗಳಂತೆ, ಮೇಲೆ ಸರಳವಾಗಿ ಕಂಡರೂ ಒಳಗೆ ಅಗಾಧವಾದ ಹೂರಣವನ್ನು ತುಂಬಿಸಿಕೊಂಡಿರುತ್ತವೆ. ತ್ಯಾಗರಾಜರಂತೆಯೇ ಪ್ರಯೋಗ ಶಾಲಿಯಾದ ಬಾಲಮುರಳಿ ಮಹತೀ, ಲವಂಗಿ, ಮನೋರಮಾ, ರೋಹಿಣಿ, ಚಂದ್ರಿಕಾ ಹೀಗೆ ಹತ್ತು ಹಲವು ಹೊಸ ರಾಗಗಳನ್ನೂ ಸಂಗೀತಕ್ಕೆ ಬಳುವಳಿಯಾಗಿತ್ತಿದ್ದಾರೆ. ಇನ್ನು ಹಿಂದಿನ ಮೈಸೂರು ವಾಸುದೇವಾಚಾರ್ಯ, ಸ್ವಾತಿ ತಿರುನಾಳ್ ಮೊದಲಾದ ವಾಗ್ಗೇಯಕಾರರ ರಚನೆಗಳಿಗೆ ಜೀವ ತುಂಬಿದ್ದೂ ಬಾಲಮುರಳಿ ಕೃಷ್ಣರೇ. ಅವರ ದನಿಯಲ್ಲಿ ಸುನಾದ ವಿನೋದಿನಿ ರಾಗದ 'ದೇವಾದಿದೇವ', ಅಭೇರಿ ರಾಗದ 'ನಗುಮೋಮು ಗನಲೇನಿ', ಆಹಿರ್ ಭೈರವ್ ರಾಗದ 'ಪಿಬರೇ ರಾಮರಸಂ', ಮತ್ತೆ ತ್ಯಾಗರಾಜರ ಘನರಾಗ ಪಂಚರತ್ನಗಳು ಮೊದಲಾದ ಕೃತಿಗಳ ಸೌಂದರ್ಯಕ್ಕೆ ಮನಸೋಲದವರಾರು?

ತ್ಯಾಗರಾಜರಂತೆ, ತಮ್ಮ ಜೀವನದ ವಿವರಗಳನ್ನೂ ತಮ್ಮ ರಚನೆಗಳಲ್ಲಿ ಅಲ್ಲಲ್ಲಿ ದಾಖಲಿಸಿರುವ (ಉದಾ: ಭಾವಮೇ ಮಹಾಭಾವಮುನ, ಶುದ್ಧ ಧನ್ಯಾಸಿ ರಾಗ), ಅವರಂತೆಯೇ ಪ್ರಾಸಾನುಪ್ರಾಸಗಳುಳ್ಳ ಸಾಹಿತ್ಯವನ್ನು ಬರೆದಿರುವ, ಅವರಂತೆಯೇ ಹೊಸ ರಾಗಗಳನ್ನು ಸೃಷ್ಟಿಸಿದ ಬಾಲಮುರಳಿ ಕೃಷ್ಣ, ಇನ್ನೊಂದು ಕಡೆ ಮುತ್ತುಸ್ವಾಮಿ ದೀಕ್ಷಿತರಂತೆ, ಪದಚಮತ್ಕಾರಗಳನ್ನೂ, ವಿವಿಧ ಯತಿಪ್ರಯೋಗಗಳನ್ನು ಮಾಡುವುದರಲ್ಲೂ (ಉದಾ: ಚಿಂತಯಾಮಿ ಸಂತತಂ, ಸುಚರಿತ್ರ ರಾಗ), ಸಾಹಿತ್ಯದಲ್ಲಿ ಸುಂದರವಾಗಿ ರಾಗಮುದ್ರೆಯನ್ನು ಸೇರಿಸುವುದರಲ್ಲೂ ಸಿದ್ಧ ಹಸ್ತರು.

Long live Balamurali Krishna, legendary Karnataka vocalist

ತಮ್ಮದೇ ಹೊಸ ರಚನೆಗಳಲ್ಲದೆ, ಭದ್ರಾಚಲ ರಾಮದಾಸ, ಅನ್ನಮಯ್ಯ, ಪುರಂದರದಾಸ, ಸದಾಶಿವ ಬ್ರಹ್ಮೇಂದ್ರ ಮೊದಲಾದವರ ರಚನೆಗಳನ್ನು ತಕ್ಕ ಸಂಗೀತವೊದಗಿಸಿ ಹಾಡಿ ಜನಪ್ರಿಯಗೊಳಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತೆ. ಪುರಂದರದಾಸರ ಹಲವು ದೇವರನಾಮಗಳನ್ನು ಅವರು ತೆಲುಗಿಗೆ ಅನುವಾದಿಸಿ, ಅವನ್ನೂ ಹಾಡಿದ್ದಾರೆ. ಅಂತೆಯೇ ಸಂಗೀತದ ಮಟ್ಟು ಸಿಗದೇ ಹೋದ ಸ್ವಾತಿ ತಿರುನಾಳರ ಹಲವು ರಚನೆಗಳ ಸಾಹಿತ್ಯಗಳಿಗೂ, ಜಯದೇವನ ಅಷ್ಟಪದಿಗಳಿಗೂ ರಾಗ ಸಂಯೋಜಿಸಿದ್ದಾರೆ. ಒಂದು ರೀತಿ ಪುರಂದರ, ಅನ್ನಮಯ್ಯ ಮೊದಲಾದವರ ರಚನೆಗಳಿಗೆ, ಆ ಮಹಾತ್ಮರು ಹದಿನೈದನೇ ಶತಮಾನದಲ್ಲಿ ಹಾಡುತ್ತಿದ್ದಿರಬಹುದಾದ ರೀತಿಯ ಸಂಗೀತವನ್ನೂ ಕಲ್ಪಿಸಿ, ಅವಕ್ಕೂ ಮರುಹುಟ್ಟು ಕೊಟ್ಟಿದ್ದಾರೆ ಅಂದರೆ ಸಲ್ಲುವ ಮಾತೇ.

ಭಾರತೀಯ ಸಂಗೀತದ ಒಂದು ಪ್ರಮುಖ ಭಾಗ ಮನೋಧರ್ಮ ಸಂಗೀತ. ಇದರಲ್ಲಿ ಬಾಲಮುರಳಿಯವರ ಶೈಲಿ, ಸರಳವೆಂದು ಕಂಡರೂ, ಅನುಕರಿಸಲು ಬಹಳ ಕಷ್ಟವಾದ ಶೈಲಿ. ಅವರ ಕಲ್ಪನಾಸ್ವರಗಳೂ, ಅವರ ಆಲಾಪನೆಗಳೂ ಅತಿ ಸುಂದರ. ಲೆಕ್ಕಾಚಾರವಿದ್ದರೂ ಲೆಕ್ಕಾಚಾರ ಮಾಡದಂತೆ ಕಾಣುವ ಸ್ವರಗಳು, ಕೆಲವೊಮ್ಮೆ ರಾಗದ ನೆರಳು ಕಂಡರೂ ಕಾಣದಿರುವಂತಹ ಆಲಾಪ. ಇವುಗಳ ಸವಿ ಸವಿದಷ್ಟೂ ಹೆಚ್ಚುತ್ತಿರುತ್ತೆ. ಆ ಧ್ವನಿಯಲ್ಲಿರುವ ಪಲುಕು, ಹಾಡುಕಾರಿಕೆಗೆ ಎಷ್ಟು ಬೇಕೋ ಅಷ್ಟು ತೂಕ, ಎಷ್ಟು ಬೇಕೋ ಅಷ್ಟು ಹಗುರ. ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ಎಂಬ ಮಾತಿನಂತೆ ಹಾಡುಗಾರಿಕೆಯಲ್ಲಿ ಎಲ್ಲಿ ಬೇಕೋ ಅಲ್ಲಿ ಅಷ್ಟು ಗಟ್ಟಿತನ, ಎಲ್ಲಿ ಬೇಕೋ ಅಲ್ಲಿ ಅಷ್ಟು ಮೃದುತ್ವ. ಇದಕ್ಕೆಲ್ಲ ಬಾಲಮುರಳಿಗಿಂತ ಒಳ್ಳೆಯ ಉದಾಹರಣೆ ದೊರೆವುದುಂಟೇ?

ಇವರ ಇನ್ನೊಂದು ಮುಖ : ಚಿತ್ರ ನಟ, ಹಿನ್ನೆಲೆ ಗಾಯಕ, ಚಲನಚಿತ್ರ ಸಂಗೀತ ನಿರ್ದೇಶಕ ಆಗಿಯೂ ಹಲವು ಭಾಷೆಗಳಲ್ಲಿ ಪ್ರಖ್ಯಾತಿ ಹೊಂದಿದ್ದರಿಂದ ಬಾಲಮುರಳಿ ಅವರು ಶಾಸ್ತ್ರೀಯ ಸಂಗೀತದ ಅಭಿರುಚಿ ಇಲ್ಲದವರಿಗೂ ಹತ್ತಿರವಾದರು. ಕನ್ನಡದ ಮಟ್ಟಿಗೆ ಹೇಳುವುದಾದರೆ, ಅವರು ಹಾಡಿದ 'ನಟವರ ಗಂಗಾಧರ', 'ಧರ್ಮವೆ ಜಯವೆಂಬ ದಿವ್ಯ ಮಂತ್ರ', 'ಕೇಳನೋ ಹರಿ ತಾಳನೋ', 'ಈ ಪರಿಯ ಸೊಬಗು', 'ದೇವರು ಹೊಸೆದ ಪ್ರೇಮದ ದಾರ', 'ನಂಬಿದೆ ನಿನ್ನ ನಾದ ದೇವತೆಯೆ', ಮತ್ತೆ ಹಂಸಗೀತೆ, ಮಧ್ವಾಚಾರ್ಯ ಮೊದಲಾದ ಚಿತ್ರಗಳಲ್ಲಿ ಅವರು ಹಾಡಿದ ಎಲ್ಲ ಹಾಡುಗಳು ಕನ್ನಡ ಚಿತ್ರ ಸಂಗೀತದಲ್ಲಿ ಮರೆಯಲಾರದ ಗುರುತು ಮೂಡಿಸಿವೆ. ಇದೇ ರೀತಿ ತಮಿಳು ಚಿತ್ರಗೀತೆಗಳಲ್ಲೂ ಅವರ ಇದೇ ರೀತಿ ಛಾಪನ್ನು ಕಾಣಬಹುದು.

ಹಿಂದಿನ ತಲೆಮಾರುಗಳ ಸಂಗೀತಗಾರರ ಬಗ್ಗೆ ನಾವು ಮಾತಿನಲ್ಲಿ ಕೇಳಿಬಲ್ಲೆವಷ್ಟೆ. ಆದರೆ ಇಂದಿನ ಕಾಲದಲ್ಲಿ ಬಾಲಮುರಳಿಯಂತಹವರ ಸಂಗೀತವನ್ನು ನಾವು ಅವರನಂತರವೂ, ಕೇಳಲು ಸಾಧ್ಯ. ಆ ಮಟ್ಟಿಗೆ ನಾವು ಧ್ವನಿ ಮುದ್ರಿಕೆಗಳಿಗೆ ಕೃತಜ್ಞರಾಗಿರಬೇಕು. ಆದರೂ, ಒಬ್ಬ ತ್ಯಾಗರಾಜರ ನಂತರ ಒಬ್ಬ ಬಾಲಮುರಳಿಕೃಷ್ಣ ಬರುವುದಕ್ಕೆ ರಸಿಕರು ಸುಮಾರು 80 ವರ್ಷ ಕಾಯಬೇಕಾಯಿತು. ಮತ್ತೊಮ್ಮೆ ಇಂತಹ ಮುರಳೀರವವು ಕೇಳಲು, ಇಂತಹ ವಾಗ್ಗೇಯಕಾರರನ್ನು ಕಾಣಲು, ಅಷ್ಟು ಕಾಲವಾಗದಿರಲಿ ಎಂಬ ಆಶಯದೊಂದಿಗೆ, ಬಾಲಮುರಳಿ ಅವರನ್ನು ಒಳ್ಳೇ ಮನಸ್ಸಿನಲ್ಲಿ ಬೀಳ್ಕೊಡೋಣ. ಮತ್ತೊಬ್ಬ ಮುರಳೀಕೃಷ್ಣ ಹುಟ್ಟಿಬರಲು ಕಾಯೋಣ!

English summary
Ramaprasad KV pays rich tribute to legendray Karnataka musician Dr Mangalampalli Balamurali Krishna (1930-2016). The playback singer, instrumentalist, composer, actor is still alive in the music composed, songs sung by him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X