ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹಾಡು ಎಂದಕೂಡಲೇ ಹಾಡದು ಗಾನ ಕೋಗಿಲೆ’

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

I sound like a man- Gangubai Hangal‘ನನಗ ಮೊದಲಿಂದಲೂ ನಮ್ಮ ಗುರುಗಳಂಗ ಗಟ್ಟಿಯಾಗಿ ಹಾಡಬೇಕಂತ ಆಸೆಯಿತ್ತು . ಟಾನ್ಸಿಲ್‌ ಇದ್ದಿದ್ರಿಂದ ಆಪರೇಷನ್‌ ಆತು. ಆಪರೇಷನ್‌ ಮಾಡಿದ ಮ್ಯಾಲ ನನ್ನ ಧ್ವನಿ ಗಂಡಸಿನ ಧ್ವನಿಯಂಗ ದಪ್ಪ ಆತು. ಇದ್ರ ಬಗ್ಗೆ ನನಗ ಖುಷಿ ಅದ.’

- ಹೆಣ್ಣುಮಕ್ಕಳ ಧ್ವನಿಯಂಗೆ ಮೆದು ಇರದೆ, ಗಂಡಸರಂತೆ ಗಡುಸಾಗಿರೊ ತಮ್ಮ ಧ್ವನಿಯ ಕುರಿತು ಪ್ರಸಿದ್ಧ ಹಿಂದೂಸ್ತಾನಿ ಗಾಯಕಿ ಡಾ.ಗಂಗೂಬಾಯಿ ಹಾನಗಲ್‌ ಹೆಮ್ಮೆಯಿಂದ ಹೇಳಿಕೊಂಡಿದ್ದು ಹೀಗೆ. ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಅಭಿಮಾನಿಗಳಿಗೆ ಮುಖಾಮುಖಿಯಾಗಿದ್ದರು. ಕನ್ನಡ ಭವನದ ನಯನ ಸಭಾಂಗಣದಲ್ಲಿ ಈ ಹೃದಯಸ್ಪರ್ಶಿ ಕಾರ್ಯಕ್ರಮ ನಡೆದದ್ದು, ಶನಿವಾರ(ಜೂ.15).

ಹಳ್ಳಿಯಿಂದ ಅಮೆರಿಕಾದವರೆಗೆ ತಮ್ಮ ಹಾಡು ಹರಿದು ಬಂದ ಬಗೆ, ಹಿಂದೂಸ್ತಾನಿ ಅಂದು- ಇಂದು, ಬಾಲ್ಯದ ನೆನಪುಗಳು, ತಮ್ಮ ಸಂಗೀತದ ಅಭಿರುಚಿ.. ಹೀಗೆ ಗಂಗೂಬಾಯಿ ಅವರ ಮಾತು ಕೇಳುಗರ ಪ್ರಶ್ನೆಗಳಿಗೆ ತಕ್ಕಂತೆ ಹರಿದಾಡಿತು.

ಕನ್ನಡಹಾಡು ಹಾಡಬೇಕು ಅಂತ ನನಗೆ ಯಾವತ್ತೂ ಅನ್ನಿಸಲಿಲ್ಲ ಎಂದು ಗಂಗೂಬಾಯಿ ಹೇಳಿದಾಗ ಪ್ರಶ್ನೆ ಕೇಳಿದವರಿಗೆ ಅಚ್ಚರಿ, ತುಸು ಆಘಾತ. ‘ಕನ್ನಡ ಹಾಡು ಹಾಡಬಾರದು ಅಂತಲ್ಲ . ಆದರೆ ಹಾಡಬೇಕು ಅಂತ ನನಗೆ ಸ್ವತಃ ಅನ್ನಿಸ್ಲಿಲ್ಲ . ಅದಕ್ಕ ಪ್ರಯತ್ನಾನು ಪಟ್ಟಿಲ್ಲ . ನನ್ನ ತಾಯಿ ದಾಸರ ಪದ ಹಾಡ್ತಿದ್ರು. ನನಗದು ಸಾಧ್ಯ ಇಲ್ಲ ಅನ್ನಿಸಿ, ಪ್ರಯತ್ನ ಮಾಡೋಕೆ ಹೋಗ್ಲಿಲ್ಲ ’ ಎಂದು ಗಂಗೂಬಾಯಿ ಸ್ಪಷ್ಟನೆ ನೀಡಿದರು.

ಮಾತುಕತೆ ಮಥನ :

  • ಹಾಡೋರಿಗೆ ಮಾತುಕತೆ ಅಂದ್ರ ಹೆದ್ರಿಕಿ ಆಗ್ತದ. ಆದ್ರೂ ನನಗ ತಿಳಿದಿದ್ದು ಹೇಳ್ತೀನಿ.
  • ನಮ್ಮೂರಾಗ ದನ ಕಾಯೋ ಹುಡುಗರೆಲ್ಲಾ ಚೆನ್ನಾಗಿ ಹಾಡ್ತಿದ್ರು. ಗ್ರಾಮೋಫೋನು ಹಾಡು ಕೇಳ್ತಿದ್ವಿ . ಕೇಳಿ ಕೇಳಿ ನಮಗೂ ಹಾಡಬೇಕು ಅನ್ನಿಸ್ತು . ಸ್ವಲ್ಪ ದಿನ ಕಥಕ್‌ ಅಭ್ಯಾಸ ಮಾಡ್ತಿದ್ದೆ . ಆದ್ರೆ, ನೃತ್ಯ ಮಾಡಿದ್ರೆ ಧ್ವನಿ ಕಳದುಹೋಗ್ತದ ಎಂದು ಯಾರೋ ಹೇಳಿದರು. ನೃತ್ಯ ಬಿಟ್ಟೆ .
  • ಆಕಾಶವಾಣೀನಾಗೆ ಮೊದಲು ಗಂಗೂಬಾಯಿ ಹುಬ್ಬಳ್ಳಿ ಅಂತಿದ್ರು. ಆಮ್ಯಾಲೆ ಬೇರೆ ಹೆಸರು ಸೂಚಿಸ್ರಿ ಅಂದ್ರು. ಕೊನೆಗೆ ಖಾಯಂ ಆದದ್ದು ಗಂಗೂಬಾಯಿ ಹಾನಗಲ್‌.
  • ಈಗಿನ ಉದಯೋನ್ಮುಖ ಗಾಯಕರ ನೋಡಿದ್ರೆ ಬೇಸರ ಆಗ್ತದ. ಪೇಪರ್‌ನಾಗ ಹೆಸ್ರು ಬಂದಕೂಡ್ಲೆ ಹಾಡೋದ ನಿಲ್ಲಿಸ್‌ ಬಿಡ್ತಾರೆ.
  • ಮುಂದಿನ ಪೀಳಿಗೆ ಹಿಂದೂಸ್ತಾನೀನ ಹ್ಯಾಂಗ ಮುಂದುವರಿಸ್ತಾರಾ ಅನ್ನೋದು ನೆನಸಿಕೊಂಡ್ರ ಹೆದ್ರೀಕಿ ಆಗ್ತದ.
  • ಬ್ಯಾರೆಯವರದ್ದು ನಮಗ್ಯಾಕ ಅಂದ್ರ ಆಗೊಲ್ಲ . ಅನುಭವ ಬರಬೇಕಾದ್ರ ಎಲ್ಲರ ಸಂಗೀತಾನು ಕೇಳಬೇಕು.
  • 11 ವರ್ಷದ ಹಿಂದೆ ಅಮೆರಿಕಾಗೆ ಹೋಗಿದ್ದೆ . ನನ್ನ ಸಂಗೀತ ಕೇಳುವಾಗ ಅವರು ತಲೆದೂಗುವುದಾಗಿ, ವ್ಹಾ ವ್ಹಾ ಅನ್ನುವುದಾಗಲಿ ಮಾಡಲಿಲ್ಲ . ಕಾರ್ಯಕ್ರಮ ಮುಗಿದ ಮ್ಯಾಲೆ ಮಾತ್ರ ಚಪ್ಪಾಳೆಯೋ ಚಪ್ಪಾಳೆ.
  • ಹಾಡು ಅಂದ ಕೂಡ್ಲೆ ಹುಡುಗಿಯಂಗ ಹಾಡಕ ಆಗುತ್ತೇನ? ಅದ್ಕ ಸಿದ್ಧತೆ ಬೇಕಾಗ್ತದ. (ಕಾರ್ಯಕ್ರಮದಲ್ಲಿ ಹಾಡಲು ಕೋರಿಕೆ ಬಗ್ಗೆ)
  • ನನ್ನ ಮೆಚ್ಚಿನ ರಾಗಗಳು- ಆಸಾವರಿ, ಮಿಯಾ ಕಿ ಮೋತಿ, ಮಿಯಾ ಕಿ ಮಲ್ಹಾರ, ಯಮನ್‌ ಮತ್ತು ಶುದ್ಧ ಕಲ್ಯಾಣ್‌.
89 ವರ್ಷ ದಾಟಿದ ಗಂಗೂಬಾಯಿ ಕಾರ್ಯಕ್ರಮದುದ್ದಕ್ಕೂ ಆಯಾಸವಿಲ್ಲದೆ, ಬೇಸರವಿಲ್ಲದೆ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯದ ನಿರ್ದೇಶಕ ಸಿ.ಸೋಮಶೇಖರ್‌, ಸಾಹಿತಿ ಶೂದ್ರ ಶ್ರೀನಿವಾಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಾಡೇ ಉಸಿರು..
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X