ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊರ್ಮಿಳೆ ಪೂರ್ಣವಾಗಿ ಅರಳಿದ ವ್ಯಕ್ತಿತ್ವದವಳು

By ವಿಜಯರಾಘವನ್
|
Google Oneindia Kannada News

ಉತ್ತರಕಾಂಡ ಹೆಸರಿನ ಸಮರ್ಥನೆಗೆಂಬಂತೆ ಕಾದಂಬರಿಯ ಮೊದಲಲ್ಲಿಯೇ ರಾಮ ಪರಿತ್ಯಜಿಸಿದ ಗರ್ಭಿಣಿ ಸೀತೆ ತಾನು ಹಡೆದ ಮಕ್ಕಳಿಗೆ ಬತ್ತಿದಂತಿದ್ದ ಮೊಲೆಗಳಿಂದ ಸಾಲದ ರುಚಿಯಿಲ್ಲದ ಹಾಲು ಕುಡಿಸುತ್ತಲಿದ್ದಾಳೆ. ಅವಳ ಜೊತೆಗಾತಿ ಸಾಮಾನ್ಯ ಕೃಷಿಕ ಹೆಣ್ಣು ಸುಕೇಶಿ. ಅಯೋಧ್ಯೆಯಿಂದ ಬಂದವಳು. ಸೀತೆಯ ಏಕೈಕ ಆತ್ಮಸಂಗಾತಿ. ಅವಳು ಮಾನವೀಯತೆಯ ಮೂರ್ತಿ. ಸುಕೇಶಿಗೆ ಹಾಲು ಸಾಲದ ಮಕ್ಕಳ ಚಿಂತೆ. ಅದಕ್ಕಾಗಿಯೇ ಅವಳದು ಅಕ್ಕರೆಯ ಆರೈಕೆ. ಅವಳ ಗಂಡ ಕಂಬನೂ ಅಂತೆಯೇ. ಅವನು ಮಾನವ ಪಕ್ಷಪಾತಿ. ಈ ಕಂಬ ರಾಮಾಯಣ ಬರೆದ ಕಂಬನೇ? ಇರಬಹುದು.

ಮೊಲೆಯೂಡಿಸುತ್ತ ಕೂತ ಸೀತೆ. ಅವಳ ಮನಸ್ಸಿನಲ್ಲಿ ತನ್ನ ಹುಟ್ಟು, ರಾಮಾದಿಗಳ ಹಾಗೂ ಅವರ ವಂಶದ ಹುಟ್ಟು, ತಂದೆ- ಮಾವ ಇಬ್ಬರ ಸರಿಸುಮಾರು ಒಂದೇ ಬಗೆಯ ಹುಟ್ಟಿಸಲಾಗದ ವ್ಯಥೆಗಳು, ಅವು ತರುವ ಕಥೆಗಳು ಎಂಬಲ್ಲಿಂದ ಶುರುವಾಗಿ ತನ್ನ ಅಂದಿನವರೆಗಿನ ಎಲ್ಲವೂ ಚಿತ್ರಗಳಾಗಿ ಮೂಡುವುದನ್ನು ಅವಳೇ ಕಾದಂಬರಿಕಾರರ ಕೈಲಿ ಬರೆಯಿಸುತ್ತಿದ್ದಾಳೆ. ಇದು ಅವಳ ದಿನಚರಿಯಲ್ಲ. ಕತೆ ತನ್ನ ಆ ಘಟ್ಟ ತಲುಪಿದಾಗ ಹೊರಗೆ ಹೋಗಿದ್ದ ವಾಲ್ಮೀಕಿ ಮುನಿಗಳಿಗೆ ಕ್ರೌಂಚವಧೆ ಗೋಚರವಾಗುತ್ತದೆ. ಅದರ ದರ್ಶನದಲ್ಲಿ ಅವರುಲಿಯುವ ಮಾ ನಿಷಾಧವು ಅವರ ಮನಸ್ಸಿನಲ್ಲಿ ಗಾಢೋಪಮೆಯಂತೆ ನಿಂತು ರಾಮಾಯಣದ ಕಾವ್ಯ ಬರೆಯಲು ಪ್ರೇರೇಪಿಸುತ್ತದೆ.[ಕಾದಂಬರಿ ವಿಮರ್ಶೆ: ಉತ್ತರಕಾಂಡದ ಹೆಸರಿನಲ್ಲಿ ಉತ್ತರಪೂರ್ವಕಾಂಡದ ಕತೆ]

SL Bhyrappa's novel Uttarakhanda review by Vijayaraghavan

ಆ ಕಥೆ ಅವರು ಬಲ್ಲರು. ಅದು ರಚನೆಯಾಗಿ ನಿಲ್ಲತಕ್ಕಂತಹ ಕಾವ್ಯವಾಗುವ ಸಾಧ್ಯತೆಯನ್ನು ಅವರು ಅರಿತಿದ್ದಾರೆ. ಏಕೆಂದರೆ ಅಲ್ಲಿ ನಾಯಕನಿಗಿಂತ ತಮ್ಮ ಆಶ್ರಮದಲ್ಲಿ ಆಶ್ರಯದಲ್ಲಿರುವ ಸೀತೆಯ ಪೂರ್ತಿ ಕತೆಯ ದಾರುಣತೆಯ ಮಡುಗಟ್ಟಿದ ಚಿತ್ರ ಅವರ ಮನಸ್ಸಿನಲ್ಲಿದೆ. ಆದರೆ ವಯಸ್ಸಿನ ಕಾರಣವಾಗಿ ಅವರದನ್ನು ಮಾಡಲಾರರು. ಅದಕ್ಕವರು ಆರಿಸುವುದು ತಾರಕನೆಂಬ ತಮ್ಮ ಆಶ್ರಮದಲ್ಲಿದ್ದ ಒಬ್ಬ ನೆಚ್ಚಿಕೆಯುಳ್ಳವನನ್ನು. ಆ ಕೃತಿ ತಾರಕನ ಕೇಳ್ವಿಕೆಯ ಹೊರತಾಗಿಯೂ ಮುಗಿಯುವುದಿಲ್ಲ. ಅದಕ್ಕೆ ವಾಲ್ಮೀಕಿಗಳು ಸಮರ್ಥನೆಯನ್ನು ಕೊನೆಗೆ ಕೊಡುತ್ತಾರೆ.

ಕೃತಿಯ ಮೊದಲಲ್ಲಿ ರಾಮ- ಲಕ್ಷ್ಮಣರು ನಮಗೆ ಗೋಚರವಾಗುವುದು ಮೊದಲನೆಯವನಾದ ರಾಮ ಅಡೇಶಿಯಸ್ ಆಗಿ, ಎರಡನೆಯವನು ಲಕ್ಷ್ಮಣ ಅಗದೀ ಸಬ್ ಮಿಸಿವ್ ಆಗಿ. ಸೀತೆ ತಾನೇ ಸ್ವಯಂ ತನಗೆ ಯಾವುದೇ ಶಕ್ತಿಯಿಲ್ಲದ ಮರುಗುವ, ಕೊರಗುವ, ಕಷ್ಟಕೋಟಲೆಯನ್ನು ಮಾತು ನುಂಗಿ ಅನುಭವಿಸುವ ಹೆಣ್ಣಾಗಿ. ಆದರೆ ಲಕ್ಷ್ಮಣನ ಹೆಂಡತಿ ಊರ್ಮಿಳೆ ಪೂರ್ಣವಾಗಿ ಅರಳಿದ ವ್ಯಕ್ತಿತ್ವದವಳು. ಅವಳು ಸೀತಾ, ರಾಮ, ಲಕ್ಷ್ಮಣರು ವನವಾಸಕ್ಕೈದಿದಾಗ ಅರಮನೆಯನ್ನು ನೋಡಿಕೊಳ್ಳುತ್ತಾಳೆ. ಹಳೆಯ ರಾಮಾಯಣಗಳಲ್ಲಿಯಂತೆ ಹದಿನಾಲ್ಕು ವರ್ಷ ಅವಳು ತಪಸ್ಸು ಮಾಡುವುದಿಲ್ಲ. ಅದಕ್ಕಾಗಿಯೇ ರಾಮನು ಸೀತೆಯನ್ನು ಅಪವಾದದ ಕಾರಣಕ್ಕಾಗಿ ಪರಿತ್ಯಜಿಸಿದಾಗ ಢಾಣಾ ಡಂಗುರ ಹೊಡೆಯಿಸುವ ಲಕ್ಷ್ಮಣನ ಮೇಲೆ ಅವಳು ಮುನಿಸಿಕೊಳ್ಳುತ್ತಾಳೆ. ಕೊನೆಯಲ್ಲಿ ಧರ್ಮಸಭೆಯಲ್ಲಿ ರಾಮನ ಇಡೀ ವ್ಯಕ್ತಿತ್ವವನ್ನು ಸೀತೆ, ಊರ್ಮಿಳೆ, ಲಕ್ಷ್ಮಣ ಇವರ ಪಾತ್ರಗಳ ನುಡಿಗಳು, ಸ್ವಯಂ ರಾಮನ ಹೊಂದಿಕೆಯಾಗದ ಸಮಜಾಯಿಷಿಗಳು ಬಹಿರಂಗಪಡಿಸುತ್ತವೆ.

ಅವನೊಬ್ಬ ದ್ವಂದ್ವ ಮನಸ್ಸಿನವನು. ಸೀತೆಯ ಮಾತಿನಲ್ಲಿ ಹೇಳಬೇಕಾದರೆ ರಾಮ ಧರ್ಮದ ಮದ್ಯಪಾನ ಮಾಡಿದ ಕುಡುಕ. ಅವನು ಪಾಲಿಸುವುದು ತಾನು ಧರ್ಮವೆಂದು ಬಗೆದದ್ದನ್ನ. ಅವನಿಗೆ ದಶರಥ ಕೇಕಯ ರಾಜನಿಗೆ ಕೊಟ್ಟ ಮತ್ತು ಆಗ ಭಾಗಶಃ ಅಸಂಗತವಾದ ಮಾತನ್ನು ನಡೆಸಿಕೊಡುವುದು ಪುರುಷಾರ್ಥಗಳಲ್ಲಿ ಒಂದಾಗಿಹೋಗುತ್ತದೆ. ಕಾರ್ಯಕಾರಣ ಬಗೆಯುವುದು ಅವನ ಜಾಯಮಾನದಲ್ಲೇ ಬಂದಿರುವುದಿಲ್ಲ. ಅಷ್ಟರ ಮಟ್ಟಿಗೆ ದುರ್ಬಲನಾದವನು ಭೈರಪ್ಪನವರ ರಾಮ. ಅದರ ವಿರುದ್ಧವೆಂಬಂತೆ ಲಕ್ಷ್ಮಣ ರಾಮನಂತೆ ಹಳ್ಳ ಹಿಡಿದ ಕೋಸಲ ದೇಶದ ಆಡಳಿತದಲ್ಲಿ ತೊಡಗಿಕೊಳ್ಳದೆ ತಾಯಿಯ ಸ್ತ್ರೀಧನ ಸ್ವತ್ತಾದ ಐವತ್ತು ಹಳ್ಳಿಗಳ ಜನಪದದಲ್ಲಿ ನೆಲೆಯಾಗುತ್ತಾನೆ.

ಅವನು ಸೀತಾಪರಿತ್ಯಾಗದ ಸಂದರ್ಭದಲ್ಲಿ ರಾಮನ ವಿರುದ್ಧ ಪ್ರತಿಭಟಿಸಲು, ಮಾತನಾಡಲು ಹಿಂಜರಿಯುವುದಿಲ್ಲ, ರಾಜಾಜ್ಞೆ ಪಾಲಿಸುತ್ತಾನೆ. ಮತ್ತು ಬಳಿಕ ಅಯೋಧ್ಯೆಯನ್ನೇ ತೊರೆದು ಹೋಗಿಬಿಡುತ್ತಾನೆ. ಈ ವ್ಯಕ್ತಿತ್ವವು ಸೀತೆಗೆ ರಾಮನ ವ್ಯಕ್ತಿತ್ವಕ್ಕಿಂತ ದೊಡ್ಡದಾಗಿ ಕಾಣುತ್ತದೆ. ಅವನಂತೆಯೇ ಊರ್ಮಿಳೆ ಕೊನೆಯವರೆಗೂ ಸೀತೆಗೆ ಕಾಪಿರುವವಳು, ಅವಳನ್ನು ಸಮರ್ಥಿಸುವವಳು. ಈ ಚಿತ್ರಣಗಳಲ್ಲಿ ಲಕ್ಷ್ಮಣ ಮತ್ತು ಅವನ ಹೆಂಡತಿಯ ವ್ಯಕ್ತಿತ್ವಗಳು ಭಿನ್ನವಾಗಿ, ಆದರೆ ಸುಸಂಬದ್ಧವಾಗಿ ಚಿತ್ರಿತವಾಗಿವೆ. ಮುಂದುವರಿಯುವುದು....

English summary
Kannada wellknown novelist, Indian writer SL Bhyrappa's new novel Uttarakhanda review by Vijayaraghavan, writer from Kolar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X