ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಸ್ ಪುಟ್ಟಣ್ಣ ಅವರ ಕಾದಂಬರಿಗೆ ಶತಮಾನ ಸಂಭ್ರಮ

By ರಾಘವೇಂದ್ರ ಅಡಿಗ
|
Google Oneindia Kannada News

ಕನ್ನಡದಲ್ಲಿ ಕಾದಂಬರಿ ಪ್ರಕಾರವನ್ನು ಜನಪ್ರಿಯಗೊಳಿಸಿದವರು ಕಾರಂತರು, ಅ.ನ.ಕೃ. ಮುಂತಾದವರಾದರೆ, ಕಾದಂಬರಿ ಪ್ರಕಾರವನ್ನು ಹುಟ್ಟುಹಾಕಿದವರು ಗುಲ್ವಾಡಿ ವೆಂಕಟರಾವ್ (ಇಂದಿರಾಬಾಯಿ-ಕನ್ನಡದ ಮೊದಲ ಸಾಮಾಜಿಕ ಕಾದಂಬರಿ) ಮೈಸೂರು ಸೂರ್ಯನಾರಾಯಣ ಭಟ್ಟ ಪುಟ್ಟಣ್ಣ (ಎಂ.ಎಸ್. ಪುಟ್ಟಣ್ಣ) ನವರುಗಳು.

ಇದರಲ್ಲಿ ಎಂ.ಎಸ್. ಪುಟ್ಟಣ್ಣನವರು ಬರೆದ ಪ್ರಥಮ ಕಾದಂಬರಿ-ಮಾಡಿದ್ದುಣ್ಣೋ ಮಹಾರಾಯ (1915) ಗೆ ಇದೀಗ ಶತಮಾನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕೃತಿಕಾರರಾದ ಪುಟ್ಟಣ್ಣ ಹಾಗೂ ಕೃತಿಯ ಕುರಿತಂತೆ ಲೇಖನ ಇಲ್ಲಿದೆ:

ಪುಟ್ಟಣ್ಣ (ಲಕ್ಷ್ಮೀನರಸಿಂಹ ಶಾಸ್ತ್ರಿ)ನವರು ಹುಟ್ಟಿದ್ದು ಮೈಸೂರಿನಲ್ಲಿ (21-11-1854). ತಂದೆ ಸೂರ್ಯನಾರಾಯಣ ಭಟ್ಟ, ತಾಯಿ ಲಕ್ಷ್ಮಮ್ಮ. ಹುಟ್ಟಿದ ಹತ್ತು ದಿವಸದಲ್ಲೇ ತಾಯಿಯನ್ನು ಕಳೆದುಕೊಂಡು ಬೆಳದದ್ದು ಸೋದರ ಮಾವನ ಮನೆಯಲ್ಲಿ. ಪ್ರಾರಂಭಿಕ ವಿದ್ಯಾಭ್ಯಾಸ ಖಾಸಗಿ ಮಠಗಳಲ್ಲಿ ಪೂರೈಸಿದ ಪುಟ್ಟಣ್ಣನವರು ಬಳಿಕ ರಾಜಾ ಸ್ಕೂಲಿನಲ್ಲಿ (ಇಂದಿನದ ಮಹಾರಾಜಾ ಕಾಲೇಜು) ಎಫ್. ಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೋಲಾರದ ಪ್ರೌಢಶಾಲೆಯಲ್ಲಿ ಸಹ ಅಧ್ಯಾಪಕರಾಗಿ ನೇಮಕಗೊಂಡರು.

ಮದರಾಸಿನಲ್ಲಿ ಬಿ.ಎ. ಪದವಿ ವ್ಯಾಸಂಗವನ್ನು ಮುಗಿಸಿದ ಇವರು ಅಧ್ಯಾಪಕ ಪದವಿ ಬಿಟ್ಟು ಬೆಂಗಳೂರಿನ ಚೀಫ್ ಕೋರ್ಟಿನಲ್ಲಿ (ಈಗಿನ ಹೈಕೋರ್ಟಿನಲ್ಲಿ) ಭಾಷಾಂತರಕಾರರಾಗಿ ದುಡಿದರು.

1867 ರಲ್ಲಿ ಅವರನ್ನು ಚಿತ್ರದುರ್ಗದ ಅಮಲ್ದಾರನ್ನಾಗಿ ನೇಮಿಸಲಾಯಿತು. ಮುಂದೆ ನೆಲಮಂಗಲ, ಚಾಮರಾಜನಗರ, ಬಾಗೇಪಲ್ಲಿ, ಮುಳಬಾಗಿಲು, ಹೊಸದುರ್ಗಗಳಲ್ಲಿ ಅಮಲ್ದಾರರಾಗಿ ಕಾರ್ಯ ನಿರ್ವಹಿಸಿದರು. ಬೆಂಗಳೂರಿನ ತೆರೆಗೆದಾರರ ಸಂಘಟಕರಾಗಿದ್ದ ಅವರು ಆ ದಿನಗಳಲ್ಲಿಯೇ ದಾಖಲೆಗಳನ್ನು ಕನ್ನಡದಲ್ಲಿ ಮೂಡಿಸಲು ಕಾರಣರಾದರು.

ಇನ್ನು ವಕೀಲರಾಗಿ, ವಿಶ್ವವಿದ್ಯಾಲಯ ಶಿಕ್ಷಣ ಮಂಡಲಿಗಳಲ್ಲಿ ಪರೀಕ್ಷಕರಾಗಿ, ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಸದಸ್ಯರಾಗಿ, ಕೆಲಕಾಲ ಕಾರ್ಯದರ್ಶಿಯಾಗಿ ವಹಿಸಿದ ಜವಾಬ್ದಾರಿಗಳು.ಹಲವಾರಿದ್ದವು.

MS Puttanna's Kannada Novel celebrates 100th Anniversary

ಪುಟ್ಟಣ್ಣನವರದು ಕನ್ನಡದ ಪುನರುಜ್ಜೀವನದ ಕಾಲ. ಸಾಹಿತ್ಯರಚನೆಗೆ ರಾಜಾಶ್ರಯ ಸಮೃದ್ಧವಾಗಿದ್ದ ಕಾಲ. ಹಳೆ ಕಾವ್ಯಗಳ ಪ್ರಕಟಣೆ, ಭಾಷಾಂತರ, ಸ್ವತಂತ್ರ ಕೃತಿಗಳ ರಚನೆಗಳು ಕಾಣಿಸಿಕೊಂಡ ಸಾಹಿತ್ಯ ಸಂದರ್ಭದಲ್ಲಿ ಇವರು ಬರೆದದ್ದು.

ಸಾಹಿತ್ಯ ಕೃಷಿ: 'ಮಾಡಿದ್ದುಣ್ಣೋ ಮಹಾರಾಯ', 'ಮುಸುಕು ತೆಗೆಯೇ ಮಾಯಾಂಗನೆ', 'ಅವರಿಲ್ಲದೂಟ'ಇವರ ಕಾದಂಬರಿಗಳು ಆಡುಮಾತಿನ ಮೇಲೆ ರಚಿಸಿದ ಕಾದಂಬರಿಗಳು ಬಹುಬೇಗ ಜನಪ್ರಿಯವಾದುವು ಇವರ ಕಥಾಸಂಕಲನಗಳು - ನೀತಿ ಚಿಂತಾಮಣಿ, ಪುಟ್ಟಣ್ಣ ಹೇಳಿದ ಕಥೆಗಳು, ಪೇಟೆಮಾತೇನಜ್ಜಿ. ಜೀವನ ಚರಿತ್ರೆಗಳು-ಚೀನಾದೇಶದ ತತ್ವಜ್ಞಾನಿ ಕನ್‌ಫ್ಯೂಷಿಯಸ್ಸನನ್ನು ಕುರಿತು ಕಂಫ್ಯೂಷನ ಚರಿತ್ರೆ, ಕುಣಿಗಲ್ ರಾಮಾಶಾಸ್ತ್ರಿಗಳ ಚರಿತ್ರೆ, ಹೈದರಾಬಾದಿನ ಮಂತ್ರಿ ಸಾಲಾರ್ಜಂಗ್ ಮ್ಯೂಜಿಯಂ ಸ್ಥಾಪಕ ಸರ್ ಸಾಲಾರಜಂಗನ ಚರಿತ್ರೆ, ಬಹಮನಿ ಸಂಸ್ಥಾನದ ಮಂತ್ರಿ ಮಹಮದ್ ಗವಾನನ ಚರಿತ್ರೆ, ಛತ್ರಪತಿ ಶಿವಾಜಿ ಮಹಾರಾಜ ಮೊದಲಾದುವು.

ಶೇಕ್ಸ್‌ಪಿಯರನ ನಾಟಕ ರೂಪಾಂತರ ಜಯಸಿಂಹರಾಜ ಚರಿತ್ರೆ (ಸಿಂಬಲೈನ್) ; ಹೇಮಚಂದ್ರ ರಾಜ ವಿಲಾಸ (ಕಿಂಗ್‌ಲಿಯರ್) ; ಹೇಮಲತ (ಹ್ಯಾಮ್ಲೆಟ್) ; ಸುಮತಿ ಮದನ ಸುಕುಮಾರ ಚರಿತ್ರೆ (ದ ಹಿಸ್ಟರಿ ಆಫ್ ಸ್ಯಾಂಡ್ ಫೋರ್ಡ್ ಅಂಡ್ ಮರ್ಟನ್) ; ಪರ್ಷಿಯನ್ ಮೂಲದ ಹಾತಿಂತಾಯ್ (ಅಪ್ರಕಟಿತ) ಪಾಳೇಗಾರರನ್ನು ಕುರಿತು ಬರೆದ ಕೃತಿಗಳು-ಪಾಳೇಗಾರರು, ಚಿತ್ರದುರ್ಗದ ಪಾಳೇಗಾರರು, ಗುಮ್ಮನಾಯಕನ ಪಾಳಯದ ಪಾಳಯಗಾರರು, ಹಾಗಲವಾಡಿ ಪಾಳಯಗಾರರು, ಇಕ್ಕೇರಿ ಸಂಸ್ಥಾನ ಚರಿತ್ರೆ. ಪಠ್ಯಪುಸ್ತಕದ ಕೊರತೆ ನೀಗಲು ಬರೆದ ಕೃತಿಗಳು-ಹಿಂದು ಚರಿತ್ರ ದರ್ಪಣ, ಹಿಂದು ಚರಿತ್ರ ಸಂಗ್ರಹ, ಕನ್ನಡ ಒಂದನೆಯ ಪುಸ್ತಕ, ಕನ್ನಡ ಲೇಖನ-ಲಕ್ಷಣ. - ಇವು ಪುಟ್ತಣ್ಣನವರ ವೈವಿದ್ಯಮಯ ಸಾಹಿತ್ಯ ಸೃಷ್ಟಿಯಲ್ಲಿ ಮೂಡಿಬಂದ ಪ್ರಮುಖ ಕೃತಿಗಳಾಗಿವೆ.

ಇದಲ್ಲದೆ ಪುಟ್ಟಣ್ಣನವರು ಎಂ. ಬಿ. ಶ್ರೀನಿವಾಸಯ್ಯಂಗಾರ್ಯರೊಡನೆ 1883ರ ಅಕ್ಟೋಬರ್ ಮಾಸದಲ್ಲಿ 'ಹಿತಬೋಧಿನಿ' ಮಾಸಪತ್ರಿಕೆಯನ್ನೂ ಆರಂಭಿಸಿದರು. ಮುಂದೆ ಅವರು ಮದರಾಸಿಗೆ ಉನ್ನತ ವ್ಯಾಸಂಗಕ್ಕೆ ತೆರಳಿದಾಗ ಭವಿಷ್ಯದಲ್ಲಿ ಪ್ರಸಿದ್ಧ ಪತ್ರಿಕೊಧ್ಯಮಿಗಳಾಗಿ ರೂಪುಗೊಂಡ ವೆಂಕಟಕೃಷ್ಣಯ್ಯನವರ ಬೆಳೆಯುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪತ್ರಿಕೆಯ ನಿರ್ವಹಣೆಯನ್ನು ವಹಿಸಿಕೊಟ್ಟರು.

ಹೀಗೆ ಕನ್ನಡಕ್ಕಾಗಿಯೇ ದುಡಿದ ಮಹಾಮಹಿಮ ಪುಟ್ಟಣ್ಣನವರು 1930ರ ಏಪ್ರಿಲ್ 11ರಂದು. ತಮ್ಮ ಇಹಯಾತ್ರೆಯನ್ನು ಮುಗಿಸಿದರು.

ಇದಿಷ್ಟು ಪುಟ್ಟಣ್ಣನವರ ವ್ಯಕ್ತಿ ವಿಚಾರವಾಯಿತು. ಇನ್ನು ಕಾದಂಬರಿಯ ವಿಚಾರಕ್ಕೆ ಬರೋಣ ಕನ್ನಡದಲ್ಲಿ ಕಾದಂಬರಿ ಸಾಹಿತ್ಯ ಪ್ರಕಾರವನ್ನು ಹುಟ್ಟುಹಾಕಿದ ಪುಟ್ಟಣ್ಣನವರು ಕಾದಂಬರಿಗಳಿಗೆ ವಸ್ತು ನಮ್ಮಲ್ಲೇ ವಿಫುಲವಾಗಿದೆ ಎಂಬುದನ್ನು ಕಂಡುಕೊಂಡ ಮೊದಲಿಗರು.

ನ್ಯಾಯಕ್ಕೆ ಗೆಲುವು ಅನ್ಯಾಯಕ್ಕೆ ಸೋಲು ಇದು ಪುಟ್ಟಣ್ಣನವರ ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಸಿದ್ದಾಂತ. ಹೆಣ್ಣಿನ, ಹಣದ ಆಸೆಗೆ ಬಿದ್ದು ಸಮಾಜದ ನಿಯಮಗಳನ್ನು ಮೀರಲೆತ್ನಿಸುವವರಿಗೆ ಉಳಿಗಾಲವಿಲ್ಲ ಎನ್ನುವುದ ಅವರ ನಂಬಿಕೆಯಾಗಿತ್ತು. ಅದರ ಹಿನ್ನೆಲೆಯಲ್ಲಿಯೇ ತಮ್ಮ ಮೊದಲ ಕಾದಂಬರಿಗೆ -ಮಾಡಿದ್ದುಣ್ಣೋ ಮಹಾರಾಯ ಎಂದು ನಾಮಕರಣ ಮಾಡಿದರು.

ಲಂಚಕೋರರು ಅವರಿಂದುಂಟಾಗುವ ಪ್ರಮಾದಗಳು; ಗ್ರಾಮಗಳಲ್ಲಿ ಕಕ್ಷಿ ಅದರ ದೋಷಗಳು; ಮೈಸೂರ ಮುಮ್ಮಡಿ ಶ್ರೀಕೃಷ್ಣರಾಜ ಪ್ರಭುವಿನ ಆಸ್ಥಾನ, ಅವರ ಮಹತ್ತರವಾದ ಔದಾರ್ಯ; ಆಸ್ಥಾನದ ನಕಲಿ; ಹೇಳಿದ್ದನ್ನೆಲ್ಲಾ ನಂಬುವ ಗ್ರಾಮವಾಸಿಗಳು; ಪತಿವ್ರತಾ ಚರಿತ್ರೆ; ಸಹಗಮನ; ಗ್ರಾಮಗಳ ಕೊಳಚೆ; ಅತ್ತೆ ಸೊಸೆಯರ ಪರಸ್ಪರ ಕಿರುಕುಳ; ಮಠದ ಉಪಾಧ್ಯಾಯ, ಅವನ ಕ್ರೌರ್ಯ, ಬಾಲಕರಿಗೆ ಅವ ಕೊಡುವ ಶಿಕ್ಷೆ, ಅವನ ಮಹತ್ತರವಾದ ಕೃತಘ್ನತೆ, ವಿದ್ಯಾರ್ಥಿಗಳಿಗೆ ಮಾಡುವ ಕ್ರೂರವಾದ ಶಿಕ್ಷೆ, ಅದರ ಧರ್ಮಸೂಕ್ಷ್ಮ; ಕಾಪಟ್ಟ, ಅದರ ನೀಚಕೃತ್ಯಗಳು; ನಿಜವಾದ ಸೌಂದರ್ಯವನ್ನು ಸೌಂದರ್ಯವಲ್ಲವೆಂದು ಮಾಡುವ ವರ್ಣನೆ;

ಪಾತಿವ್ರತ್ಯವನ್ನು ಭಂಗ ಮಾಡಲು ನಡೆಸಿದ ಅತಿ ಹೇಯವಾದ ಪ್ರಯತ್ನ; ಶಾಬರ ಪ್ರಯೋಗದ ನೀಚಕೃತ್ಯ; ಒಬ್ಬ ಐಲು ಮನುಷ್ಯನ ಹರಟೆಯಿಂದ ಹುಟ್ಟುವ ಹಾಸ್ಯ; ಒಬ್ಬ ಹುಟ್ಟು ಕಳ್ಳ ಹೇಳಿಕೊಳ್ಳುವ ಸ್ವವಿಚಾರದ ಕಥೆ; ಶ್ಮಶಾನದಲ್ಲಿ ನಡೆದ ಅತಿಭಯಂಕರವಾದ ವಿಷಯ; ಒಬ್ಬ ಮಹಾಮಂತ್ರವಾದಿ ಮಾಡಿದ ಅದ್ಭುತವಾದ ಕಾರ್ಯ; ಮತ್ತು ಅವನ ಪಾರಮಾರ್ಥಿಕತೆ; ಆದ್ಯಂತವಾಗಿರುವ ನೀತಿಯ ಸಾರಾಂಶ; ಇವೇ ಮೊದಲಾದ ಸಂಗತಿಗಳನ್ನೆಲ್ಲಾ ಆಯಾ ಸ್ಥಳಗಳಲ್ಲಿ ವಿವರಿಸಿದ್ದೇನೆ - ಎಂದು ಪೀಠಿಕಾ ಭಾಗದಲ್ಲಿ ಹೇಳಿಕೊಂಡಿರುವ ಪುಟ್ಟಣ್ಣನವರು ತಮ್ಮ ಕಾದಂಬರಿಯಲ್ಲಿಯೂ ಕಾಲಾನುವರ್ತಿಯಾಗಿ ಇದೇ ಸಂಗತಿಗಳು ಬರುವಂತೆ ನೋಡಿಕೊಂಡಿದ್ದಾರೆ.

English summary
Mysuru Suryanarayana Bhatta Puttanna's Kannada Novel 'Madidduno Maharaya' (1915) celebrates 100th anniversary. Gulvadi Venkata Rao, M. S. Puttanna initiated the movement in Kannada literature toward realistic novels with their works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X