ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ತೆರೆದ ಕಿಟಕಿ' ಯನ್ನು ನಿಮ್ಮ ಮುಂದೆ ತೆರೆದಿಟ್ಟು ಬಿಡ್ತೀನೇನೋ

By ಪುಸ್ತಕಪ್ರೇಮಿ
|
Google Oneindia Kannada News

ನಾನು ಹೀಗೆ ಮುಂದುವರೆಯುತ್ತಾ ಹೋದರೆ 'ತೆರೆದ ಕಿಟಕಿ ' ಯನ್ನು ನಿಮ್ಮ ಮುಂದೆ ಪೂರಾ ತೆರೆದಿಟ್ಟುಬಿಡ್ತೀನೇನೋ ..... ಪುಸ್ತಕ ನೀವೇ ಓದಿ. 'A must read' ಎಂದಷ್ಟೇ ನಾನು ಹೇಳಬಯಸುತ್ತೇನೆ ಎಂದು ಕೊನೆಯಲ್ಲಿ ತಿಳಿಸಿದ ಬಹುರಾಷ್ಟ್ರೀಯ ಸಂಸ್ಥೆಯ ಉದ್ಯೋಗಿ ರಮಾ ಎಂ ಎನ್ ಅವರು ಪತ್ರಕರ್ತ ಚೈತನ್ಯ ಹೆಗಡೆ ಅವರ 28 ಅಂಕಣಗಳ ಸರಮಾಲೆಯ 'ತೆರೆದ ಕಿಟಕಿ ' ಪುಸ್ತಕದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ರೀತಿಯಲ್ಲಿ.

ನಿಜಕ್ಕಾದರೂ ಒಂದಕ್ಕಿಂತ ಒಂದು ಅಣಿಮುತ್ತುಗಳು. 'ತೆರೆದ ಕಿಟಕಿ' ಎಂಬ ಹೆಸರೇ ಸೂಚಿಸುವಂತೆ ಇಲ್ಲಿ ವಿಷಯ ವೈವಿಧ್ಯ, ಹರವು ಓದುಗನಿಗೆ ಕೊಡುವ ಅನುಭೂತಿ ಅದ್ಭುತ, ಅಪೂರ್ವ !

Book review of Chaitanya Hegde's ' Tereda Kitaki'

ಚೈತನ್ಯರ ಬರಹಗಳಲ್ಲಿ ನನ್ನನ್ನು ಸೆಳೆದದ್ದು ಅವರ ನಿರೂಪಣೆ. ಭಾಷೆಯ ವೈಭವೀಕರಣ, ಆತ್ಮರತಿ ಅವರ ಅಂಕಣದಲ್ಲಿ ಎಲ್ಲೂ ಇಣುಕುವುದಿಲ್ಲ. ಉತ್ಪ್ರೇಕ್ಷೆ, ಅಣಕ, ಅದು ಮತ್ಯಾರದ್ದೋ ಕೆಲಸ ಎಂದು ಬೊಟ್ಟು ಮಾಡಿ ತೋರಿಸುವಿಕೆ ಇಂತಹ ನಕಾರಾತ್ಮಕ ಲೇಖನಗಳು, ಕಾರ್ಯಕ್ರಮಗಳು ಬೊಬ್ಬಿಡುತ್ತಿರುವ ವಾಸ್ತವದಲ್ಲಿ, 'do whatever you can from wherever you are' ಎಂಬ ಹೇಳಿಕೆಯಂತೆ ಚೈತನ್ಯ ಓದುಗನಿಗೆ ಅರಿವೇ ಆಗದಂತೆ ತಣ್ಣಗೆ ಒಂದು ಸಕಾರಾತ್ಮಕವಾದ ಸಂದೇಶ ತಮ್ಮ' ಅಂಕಣದ ಮೂಲಕ ರವಾನೆ ಮಾಡಿಬಿಡ್ತಾರೆ. 'ಧಿಕ್ಕಾರ ಕೂಗುತ್ತಲೇ ನಾವೇ ಕಂಡುಕೊಳ್ಳಬೇಕಾದ ಉತ್ತರಗಳು' ಅಂಕಣ ಇದಕ್ಕೊಂದು ಪುರಾವೆ.

'ತೆರೆದ ಕಿಟಕಿ' ಯ ಅಂಕಣಗಳಲ್ಲಿ ಭಾವ, ಭಾವನೆಗಳ ಜೊತೆಜೊತೆಗೆ ಮಾಹಿತಿಯ ಮಹಾಪೂರವು ಹರಿದುಬರುತ್ತೆ. ಮತ್ತು ಇದು ಒಂದು ಕಾಲಘಟ್ಟಕ್ಕೆ ಸೀಮಿತವಾದುದಲ್ಲ. ಎಂದಾದರು ಎಲ್ಲಾದರು ಪುಸ್ತಕ ಮಗುಚಿ ಹಾಕಿದರೂ ಅಂದಿಗೂ ಅದು ಪ್ರಸ್ತುತ ಎನಿಸುತ್ತೆ.

'ಮಳೆ ನಿಂತ ಮೇಲೂ ಇವರ ಋಣ ಮನದಲ್ಲಿರಲಿ ...' ಎಂಬ ಅಂಕಣ 1962 ರ ಭಾರತ ಚೀನಾ ಯುದ್ಧದಿಂದ ಹಿಡಿದು ಇತ್ತೀಚೆಗೆ ಉತ್ತರ ಖಾಂಡವು ಪ್ರಳಯದಂಥ ಪ್ರವಾಹಕ್ಕೆ ತುತ್ತಾದಾಗ "they fought to the last man, last round" ಎಂಬ ಗುರಿ ಹೊಂದಿದ ನಮ್ಮ ಯೋಧರು ನಡೆಸಿದ ಕಾರ್ಯಾಚರಣೆ.

Book review of Chaitanya Hegde's ' Tereda Kitaki'

'ನಮ್ಮುಸಿರನ್ನು ಕಾಯುತ್ತಿರುವ ಹೆಸರೇ ಇಲ್ಲದವರು' ಎಂಬ ಅಂಕಣದಲ್ಲಿ ಬೇಹುಗಾರಿಕೆಗೆಂದು ಪರದೇಶಗಳಿಗೆ ತೆರಳಿ ಇಂಟೆಲಿಜೆನ್ಸ್ ನ ಗಮನಕ್ಕೆ ಅಪಾಯದ ಸೂಚನೆ ಕೊಟ್ಟು, ಕಡೆಗೆ ಅನಾಮಧೇಯರಾಗೆ ಉಳಿಯುವ ಸಾಮಾನ್ಯ ಜನರು.... ' ಸುಡುಗಾಡನ್ನು ಸೋಕಿದ ಗಾಳಿ ನಮ್ಮ ಬೃ೦ದಾ ವನಕ್ಕೂ ಬಡಿಯುತ್ತದೆ " ಎಂಬ ಅಂಕಣ ದಕ್ಷಿಣ ಸುಡಾನ್ ನಲ್ಲಿ ಭಾರತದ ರಫ್ತು ಹಿತಾಸಕ್ತಿಗೆ ವೇದಿಕೆ ನಿರ್ಮಿಸುವ ಮಹತ್ವಾಕಾಂಕ್ಷೆಗಾಗಿ, ನಮ್ಮ ಯೋಧರು ಸುಡಾನ್ ಗೆ ತೆರಳಿ ಅಲ್ಲಿನ ಬುಡಕಟ್ಟು ಜನರನ್ನು ಸುರಕ್ಷಿತವಾಗಿಡಲು ಬಂಡುಕೋರರೊಂದಿಗೆ ಸೆಣೆಸುತ್ತಾರೆ ಎಂದೆಲ್ಲ ಅಪರೂಪದ ಮಾಹಿತಿಯೊಂದಿಗೆ, ಆ ಯೋಧರ ದಾರುಣ ಪರಿಸ್ಥಿತಿ ಮನ ಕಲಕುವಂತೆ ಚೈತನ್ಯ ಚಿತ್ರಿಸಿದ್ದಾರೆ.

ಹಾಗೆ 'ಬೆಂಗಳೂರಿನ ಎದೆಯ ಮೇಲೆ ಬಿತ್ತು ಒಂದು ಬಿರುಮಳೆ ' 'ಬೇಸಿಗೆಗೆ ಬತ್ತಿಹುದು ಭಾವಿ ಅಷ್ಟೇ ಅಲ್ಲ ಭಾವಗಳು' ಎಂಬ ಅಂಕಣಗಳಲ್ಲಿ ಮರಗಿಡಗಳ ಸ್ವಗತ ಇದೆ. ಅವು ತಮ್ಮ ಅಳಲನ್ನು ಯಾವ ಪರಿಯಲ್ಲಿ ತೋಡಿಕೊಳ್ಳುತ್ತೆ ಅಂದರೆ ಓದುಗ ಇದು ಕೇವಲ ಅಂಕಣ, ಪುಸ್ತಕ ಓದಿ ಬದಿಗಿಟ್ಟರೆ ಮುಗಿಯಿತು ಎಂಬ ಭಾವನೆಯನ್ನು ಮರೆತು ಅದೇ ಗುಂಗಿನಲ್ಲಿ ಉಳಿದುಬಿಡ್ತಾನೆ.

ನನಗೆ ಖುಷಿ ಕೊಡುವ ಚೈತನ್ಯರ ಇನ್ನೊಂದು ಕಲೆ ಅವರ ಕಲ್ಪನಾಶಕ್ತಿ. ಒಂದು ಗಹನವಾದ ವಿಷಯಕ್ಕೆ 'ಇದಮಿತ್ತಂ' ಎಂದು ಪರಿಹಾರ ಸೂಚಿಸಲಾಗದ ಸಂದರ್ಭದಲ್ಲಿ, ಚೈತನ್ಯ ಮೆಲ್ಲಗೆ ಕಲ್ಪನಾಲೋಕಕ್ಕೆ ಜಾರಿ ಆ ಸಂದರ್ಭಕ್ಕೆ ಒಂದು ಸುಖಾಂತ್ಯ ಕೊಟ್ಟುಬಿಡ್ತಾರೆ . 'ಮತಭಾರತ ಸಂತೆಯಲ್ಲಿ ಹೊಸ ಕನಸ ಹುಡುಕಾಟ' ಓದಿದ ಯಾರ ಮೊಗದಲ್ಲಾದರೂ ಕಿರುನಗೆ ಮೂಡದಿರಲಾರದು.

ಪುಸ್ತಕ ಹಾಗು ಚಲನಚಿತ್ರ ವಿಮರ್ಶೆಯತ್ತಲು ತೆರೆದ ಕಿಟಕಿ ಬೆಳಕು ಬೀರುತ್ತೆ. ಜುಂಪಾ ಲಾಹಿರಿ ಅವರ ಪುಸ್ತಕಗಳ ಬಗ್ಗೆ ಮಾಹಿತಿ, ವೆಂಡಿ ಹಾಗು ಫ್ರಿಜೋರ ಸಂಶೋದನ ಲೇಖನಗಳ ಬಗ್ಗೆ ಚರ್ಚೆ, ಡಾವಿಂಚಿ ಕೋಡ್, ಇಂಗ್ಲಿಷ್ ವಿಂಗ್ಲಿಶ್ ಮುಂತಾದ ಚಿತ್ರಗಳ ವಿಮರ್ಶೆ ಇತ್ಯಾದಿ ಓದುಗರನ್ನು ಚಿಂತನೆಗೆ ಹಚ್ಚುತ್ತವೆ

ಒಂದು ಗಟ್ಟಿಯಾದ ವಸ್ತುವಿಲ್ಲದಿದ್ದರು ಸಹ ಅದರ ಸುತ್ತಲೂ ಅಂಕಣ ಹಣೆಯುವ ಗಟ್ಟಿತನ ಚೈತನ್ಯರ ಲೇಖನಗಳಿಗಿದೆ. 'ಬೈಟು ಕಾಫಿ ಕುಡಿಯೋಣವಾ ? ' 'ಚಳಿಗುಳ್ಳೆಗಳ ಆಯಲು ಯಾರೆಲ್ಲ ಬರುವಿರಿ ಅಂಗಳಕೆ ?' ಈ ಕೆಟಗರಿಯಲ್ಲಿ ಬರುತ್ತವೆ.

ಅಕ್ಷರಕ್ಕೆ ಸಾವಿರಾರು ಮೈಲಿ ದೂರ ಇದ್ದವರ ಬೆಸೆಯುವ ಶಕ್ತಿ ಇದೆ . ಹಾಗೆ ನೋಡಿದರೆ ಎಲ್ಲವೂ ಅಕ್ಷರವೇ , ಕವಿತೆ ಇರಬಹುದು , ಕಥೆ ಇರಬಹುದು , ಲೇಖನ ಇರಬಹುದು , ಹಾಸ್ಯ ಇರಬಹುದು , ಅಕ್ಷರ ಜೋಡಣೆ , ಅದು ಕೊಡುವ ಅರ್ಥ , ವ್ಯಕ್ತಿಯ ವಿಚಾರ ಬಿಂಬಿಸುತ್ತವೆ , ಹೊಸ ಲೋಕ ನಮ್ಮ ಮುಂದೆ ತೆರೆದು ಇಡುತ್ತವೆ . ವ್ಯಕ್ತಿ ಅಷ್ಟೇ ಅಲ್ಲದೆ ಇಡಿ ಸಮುದಾಯದ ಚಿಂತನೆ ಬದಲಿಸುವ ಶಕ್ತಿ ಅಕ್ಷರಕ್ಕಿದೆ , ನಾನು ಮೊದಲೇ ಹೇಳಿದ ಹಾಗೆ ಅಕ್ಷರ ಜೋಡಣೆ ಸರಿ ಇರಬೇಕಷ್ಟೆ ಎಂದವರು ಸಾವಿರಾರು ಮೈಲಿ ಭಾರತ ಬಿಟ್ಟು ದೂರದ ಬಾರ್ಸಿಲೋನಾದಲ್ಲಿ ಇದ್ದ ಪ್ರಕಾಶಕ ರಂಗಸ್ವಾಮಿ ಮೂಕನಹಳ್ಳಿ.

Book review of Chaitanya Hegde's ' Tereda Kitaki'

ಒಂದು ಒಳ್ಳೆ ವಿಷಯ ಸಾವಿರಾರು ಜನರ ತಲುಪಲಿ , ನಮ್ಮ ಕಾಡುವ ಅಸಂಖ್ಯ ಸಮಸ್ಯೆಗಳ ಮುಂದೆ ಮಂಡಿ ಊರಿ ಕೋರುವ ಬದಲು ಜಗತ್ತಿನ ಸಮಸ್ಯೆ ಮುಂದೆ ಹೋಲಿಸಿ , ಪಲಾಯನ ಮಾಡದೆ ಪರಿಹಾರ ಕಂಡು ಕೊಳ್ಳಲು ಕೆಲವರಿಗಾದರೂ ಸಹಾಯವಾಗಲಿ ಎಂಬ ಧ್ಯೇಯದ 'ಏಕಂ ಪ್ರಕಾಶನ'ದ ಚೊಚ್ಚಲ ಕೊಡುಗೆ 'ತೆರೆದ ಕಿಟಕಿ'

ಎಂಟು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಯಾನ ಮಾಡುತಿರುವ ಚೈತನ್ಯ ಹೆಗಡೆಯವರ ಹುಟ್ಟೂರು ಉತ್ತರ ಕನ್ನಡದ ಸಿದ್ದಾಪುರ. ತೆರೆದ ಕಿಟಕಿ ಅಂಕಣ ಸಂಕಲನ ಲೇಖಕರ ಎರಡನೇ ಕೃತಿ. ತರುಣ್ ವಿಜಯ್ ಬರಹಗಳ ಅನುವಾದವಾದ ಚೈತನ್ಯ ಹೆಗಡೆಯವರ ಮೊದಲ ಕೃತಿ ಓ ನನ್ನ ಭಾರತ ಮೂರು ಮುದ್ರಣಗಳನ್ನು ಕಂಡಿದೆ.

ಪುಸ್ತಕದ ಹೆಸರು : ತೆರೆದ ಕಿಟಕಿ

ಲೇಖಕರು : ಚೈತನ್ಯ ಹೆಗಡೆ,
ಪ್ರಕಾಶಕರು : ಏಕಂ ಪ್ರಕಾಶನ , ಬೆಂಗಳೂರು -560091
ಮೊದಲ ಮುದ್ರಣ : 2015
ಪುಟಗಳು : 172 ಪುಟ , ಮೌಲ್ಯ : ರೂಪಾಯಿ 120/-

ಕೃತಿ ಲಭ್ಯವಿರುವ ಪುಸ್ತಕ ಮಳಿಗೆಗಳು :

ಚೈತ್ರ ಬುಕ್ ಹೌಸ್ , ಅಂಕಿತ ಪುಸ್ತಕ ಮತ್ತು , ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ'ತೆರೆದ ಕಿಟಕಿ' ಪುಸ್ತಕ ಲಭ್ಯವಿದೆ. ಮಂಗಳೂರು , ಧಾರವಾಡ ,ಶಿರಸಿ ,ಹುಬ್ಬಳ್ಳಿಯ ಪುಸ್ತಕ ಮಳಿಗೆಯಲ್ಲಿ ತೆರೆದ ಕಿಟಕಿ ಪುಸ್ತಕ ಸಿಗುತ್ತದೆ. ಅಂಚೆ ಮೂಲಕ ನೇರವಾಗಿ ಪುಸ್ತಕ ಪಡೆಯಲು ಮಿಂಚಂಚೆ ವಿಳಾಸ [email protected] ಗೆ e-mail ಮಾಡಿ.

English summary
Book review of Chaitanya Hegde's ' Tereda Kitaki'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X