ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಾವೋನ ಕೊನೆಯ ನರ್ತಕ' ಕೃತಿಯ ಅವಲೋಕನ

By ಗಿರೀಶ್ ಜಮದಗ್ನಿ, ಸಿಂಗಪುರ
|
Google Oneindia Kannada News

Mao’s Last Dancer
ಸಾಹಿತ್ಯವೆಂಬ ವಿಶಾಲ ಮರದಲ್ಲಿ ಕಥೆ, ಕವನ, ಕಾದಂಬರಿಯಂತೆ, ಬೇರೆ ಭಾಷೆಯ ಉತ್ತಮ ಕೃತಿಗಳನ್ನು ಅನುವಾದ ಮಾಡುವುದೂ ಒಂದು ದೊಡ್ಡ ರೆಂಬೆ. ಕನ್ನಡಕ್ಕೆ ಕೂಡ ಇತರೆ ಭಾಷೆಯ ಹಲವಾರು ಕವನ ಸಂಕಲನಗಳು, ಸಣ್ಣ ಕಥೆಗಳು, ಕಾದಂಬರಿಗಳು ಅನುವಾದಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಕೆ.ಎಸ್.ನ ಅವರ "ರಾಬರ್ಟ್ ಬರ್ನ್ಸ್ ಕವಿಯ ಕೆಲವು ಪ್ರೇಮಗೀತೆಗಳು", ಬಿ.ಎಂ.ಶ್ರೀ ಅವರ "ಇಂಗ್ಲೀಷ್ ಗೀತೆಗಳು", ವಂಶಿ ಅವರು ಅನುವಾದಿಸಿದ ಯಂಡಮೂರಿ ವೀರೆಂದ್ರನಾಥ್ ಅವರ ಕಾದಂಬರಿಗಳು, ಡಿ.ವಿ.ಜಿ ಅವರು ಭಾಷಾಂತರಿಸಿದ ಶೇಕ್ಸ್‌ಪಿಯರ್‌ನ ಹಲವು ನಾಟಕಗಳು ಮತ್ತು ಉಮರ್ ಖಯ್ಯಾಮ್‌ನ ಕವನಗಳು...

ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಮ್ಮ ದೇಶದ ಪ್ರಸಿದ್ಧ ವ್ಯಕ್ತಿಗಳ (ಮಹಾತ್ಮಾ ಗಾಂಧಿ, ಅಬ್ದುಲ್ ಕಲಾಂ, ಎಲ್.ಕೆ.ಅದ್ವಾನಿ) ಮುಂತಾದವರ ಆತ್ಮಚರಿತ್ರೆಗಳು ಕನ್ನಡಕ್ಕೆ ಅನುವಾದಗೊಂಡಿವೆ. ಆದರೆ ಬೇರೆ ದೇಶದ ಪ್ರಜೆಯ/ ಭಾಷೆಯ ಆತ್ಮಚರಿತ್ರೆಗಳು ಕನ್ನಡಕ್ಕೆ ಅನುವಾದಗೊಂಡಿರುವುದು ಬಹಳ ಕಮ್ಮಿ ಎಂದೇ ಹೇಳಬೇಕು. ಈ ಹಿನ್ನೆಲೆಯಲ್ಲಿ ಶ್ರೀಮತಿ ಜಯಶ್ರೀ ಭಟ್ ಅವರ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಚೀನಾದ ಒಂದು ಹಿಂದುಳಿದ ಹಳ್ಳಿಯಲ್ಲಿ ಹುಟ್ಟಿದ ಲಿನ್ ಕುನ್‌ಕ್ಸಿನ್ ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟ, ನೋವು, ಸಂಕಟ, ಅಡೆತಡೆ, ತೊಂದರೆ, ಹಿಂಸೆ ಮತ್ತು ಇದೆಲ್ಲವನ್ನು ಎದುರಿಸಿ ಅವರು ಮಾಡಿದ ಅಸಾಧ್ಯ ಸಾಧನೆಯನ್ನು ವಿವರಿಸುವ ಈ ಆತ್ಮಚರಿತ್ರೆ ಮನಮುಟ್ಟುವಂತಹುದು. ತನ್ನ ತಾಯಿಯ ಬಗ್ಗೆ ಇನ್ನಿಲ್ಲದ ಗೌರವ, ಆದರ, ಮಮತೆ ಮತ್ತು ಪ್ರೀತಿಯನ್ನು ಹೊಂದಿರುವ ಲೀ, ತಮ್ಮ ಆತ್ಮಚರಿತ್ರೆಯನ್ನು ಅವರ ತಾಯಿಯ ಜೀವನದ ಒಂದು ಪ್ರಮುಖ ಘಟನೆಯಿಂದಲೇ ಪ್ರಾರಂಭಿಸಿರುವುದು ಆಲೋಚನಾ ಪೂರ್ಣವಾದದ್ದು. ಮೊದಲಿನ ಅಧ್ಯಾಯಗಳು ಅವರ ಬಾಲ್ಯಜೀವನದ ಉಲ್ಲಾಸ, ಉತ್ಸಾಹ, ಕಷ್ಟ-ಕಾರ್ಪಣ್ಯಗಳನ್ನು ಎಳೆ ಎಳೆಯಾಗಿ ಬಿಡಿಸುತ್ತಾ ಹೋಗುತ್ತದೆ.

ಬಹಳ ತಡವಾಗಿ ಅಕ್ಷರಾಭ್ಯಾಸ ಶುರುಮಾಡಿದ ಲೀ, ಅವರಿಗೆ ಆಗ ಇದ್ದ ಬಡತನ, ಚೀನಾದಲ್ಲಿ ಆಗಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿ, ಮಾವೋನ ನಿರ್ದಯೆಯ ಆಡಳಿತ ವೈಖರಿಯನ್ನು ಬಹಳ ಕೂಲಂಕುಶವಾಗಿ, ಸಣ್ಣ ಸಣ್ಣ ಘಟನೆಗಳನ್ನೂ ಉದ್ಧರಿಸಿ, ಕಣ್ಣ ಮುಂದೆ ಚಿತ್ರಿಸಿದ್ದಾರೆ. ಹಳ್ಳಿಯಲ್ಲಿನ ಬಾಲ್ಯ, ಬೀಜಿಂಗ್ ನೃತ್ಯಶಾಲೆಯಲ್ಲಿ ಅಭ್ಯಸಿಸಿದ ವರ್ಷಗಳ ಘಟನೆಗಳು, ವೈಫಲ್ಯಗಳು, ಗೆಲುವುಗಳು, ವೇದನೆಗಳು, ಅಮೆರಿಕ ಪ್ರವಾಸ ಮತ್ತು ಅಲ್ಲಿನ ಜೀವನ, ಎಲ್ಲದಕ್ಕಿಂತ ಮಿಗಿಲಾಗಿ ಅವರು ದೇವರೆಂದೇ ಪೂಜಿಸುವ ಅವರ ತಾಯಿಯ ಬಗೆಗಿನ ವಿಷಯಗಳು, ವಿವರಗಳು, ವಿಚಾರಗಳು ಓದುಗನನ್ನು ನಮ್ರನಾಗಿಸುತ್ತದೆ. ಗೆಡ್ಡೆ ಗೆಣೆಸು ತಿಂದು ಅಡ್ಡಾಡಿಕೊಂಡಿದ್ದ ಹುಡುಗ, ಪರಿಚಯವೇ ಇಲ್ಲದ ಬ್ಯಾಲೆ ಕಲೆಯನ್ನು ಕಲಿತು, ಪ್ರಪಂಚದ ಅತ್ಯುತ್ತಮ ಬ್ಯಾಲೆ ನರ್ತಕನಾಗಿ ಮಾರ್ಪಾಡಾಗುವ ಪ್ರಕ್ರಿಯೆ ಓದುಗನಿಗೆ ಬೆರಗು ಮೂಡಿಸುತ್ತದೆ. ತನ್ನ ಗುರಿಯ ಬಗ್ಗೆ ಏಕಾಗ್ರತೆ, ಬದ್ಧತೆ ಮತ್ತು ಛಲವಿದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಲ್ಲ ಎನ್ನುವುದಕ್ಕೆ ಲೀ ಕುನ್‌ಕ್ಸಿನ್ ಅದ್ಭುತ ನಿದರ್ಶನ.

ವೈಯಕ್ತಿಕವಾಗಿ ಹೇಳುವುದಾದರೆ, ಲೀ ಕುನ್‌ಕ್ಸಿನ್‌ರ ಆತ್ಮಚರಿತ್ರೆಯನ್ನು ಓದುತ್ತಿದ್ದಾಗ ಲೀ ಅವರ ಬಾಲ್ಯ, ಊರು ಮತ್ತು ಹಲವು ಇತರ ವಿವರಣೆಗಳಲ್ಲಿ ಲೀ ಜಾಗದಲ್ಲಿ ನನ್ನನ್ನೇ ನಾನು ಕಂಡೆ (ನಾವಿಬ್ಬರೂ ಅರವತ್ತರ ದಶಕದ ಮಕ್ಕಳೂ ಕೂಡ!). ಅವರ ಬಾಲ್ಯದ ಪ್ರಸಂಗಗಳಲ್ಲಿ ನನ್ನ ಬಾಲ್ಯವನ್ನು ಮರು ಕಂಡೆ. ಪ್ರಾಸಂಗಿಕವಾಗಿ, ಲೀ ಅಂತೆ ನಾನು ಕೂಡ ಒಂದು ಸಣ್ಣ ಪಟ್ಟಣದಿಂದ ಬಂದವನು. ನನ್ನೂರಿಗೂ, ಸಾವಿರಾರು ಮೈಲಿ ದೂರದಲ್ಲಿರುವ ಲೀ ಕುನ್‌ಕ್ಸಿನ್ ಬೆಳೆದ ಊರಿಗೂ ಇರುವ ಎಷ್ಟೊಂದು ಸಾಮ್ಯತೆಯನ್ನು ಓದಿ ಸೋಜಿಗವಾಯಿತು. ಲೀ ಪಟ್ಟ ಕಷ್ಟ, ಕೀಳರಿಮೆ, ಮುಜುಗರಗಳು ಮತ್ತು ತುಂಟತನಗಳು ನನ್ನವೂ ಆಗಿವೆ. ತನ್ನ ಹಳ್ಳಿಯಿಂದ ಲೀ ಮೊದಲ ಬಾರಿಗೆ ಬೀಜಿಂಗ್ ಹೋದಾಗ ಅವರು ಅನುಭವಿಸಿದ ಆತಂಕ, ಕಂಡ ವಿಸ್ಮಯಗಳು, ನನ್ನ ಸಣ್ಣ ಊರು ಬಿಟ್ಟು ಮೊದಲ ಬಾರಿಗೆ ಮುಂಬೈ ಮಹಾನಗರಕ್ಕೆ ನಾ ಮಾಡಿದ ಪ್ರವಾಸ ಮತ್ತು ಅಲ್ಲಿಯ ಮೊದಮೊದಲ ದಿನಗಳನ್ನು ಜ್ಞಾಪಿಸಿ ಮನಸ್ಸನ್ನು ಮುದಗೊಳಿಸಿದವು. ಲೀ ಅವರ ಮೊದಲ ಅಮೇರಿಕ ಪ್ರವಾಸದ ದುಗುಡ ದುಮ್ಮಾನಗಳು, ನನ್ನ ಮೊದಲ ಅಮೇರಿಕಾ ಯಾತ್ರೆ (ಯಾತನೆ!)ಯನ್ನು ಮೆಲುಕುಹಾಕಿಸಿ ನನ್ನನ್ನು ಭಾವುಕನಾಗಿಸಿದ್ದೂ ನಿಜ.

ನನಗೆ ಹಾಗೂ ನನ್ನಂತಹ ಸಣ್ಣ ಹಳ್ಳಿ ಅಥವಾ ಪಟ್ಟಣದಲ್ಲಿ ಬೆಳೆದ ಓದುಗರಿಗೆ ನಮ್ಮ ಬಾಲ್ಯದ ನೆನಪು ಮತ್ತೆ ಮರುಕಳಿಸುವಂತೆ ಮಾಡಲು ಲೀ ಎಷ್ಟು ಕಾರಣರೋ ಅಷ್ಟೇ ಜಯಶ್ರೀ ಭಟ್ ಅವರ ಅನುವಾದವೂ ಕೂಡಾ ಕಾರಣ. ಬಹಳ ಸರಳವಾದ ಭಾಷೆಯನ್ನು ಹೊಂದಿದ ಭಾವಾನುವಾದ, ಓದಲು ಅಪ್ಯಾಯಮಾನ. ಮೂಲ ಚೀನಿ ಭಾಷೆಯ ಪದಗಳನ್ನು ಭಾಷಾಂತರಿಸುವಾಗ ಕನ್ನಡಕ್ಕೆ ಹೊಂದುವ, ಪರಿಚಿತ ಪದಗಳನ್ನು ಬಳಸಿರುವುದು ಸೂಕ್ತ. ಆತ್ಮಚರಿತ್ರೆಯ ಓಟವೂ ಸುಲಲಿತವಾಗಿದೆ ಮತ್ತು ಓದಿಸಿಕೊಂಡು ಹೋಗುತ್ತದೆ. ಕೆಲವು ಕಡೆ ಇಂಗ್ಲಿಷ್ ಪದಗಳ ನೇರ ತರ್ಜುಮೆಯನ್ನು ಮಾಡದೆ ಕನ್ನಡದಲ್ಲಿ ಪ್ರಚಲಿತ ಪದಗಳನ್ನು (open door policyಗೆ "ತೆರೆದ ಬಾಗಿಲು ನೀತಿ" ಎನ್ನುವುದಕ್ಕಿಂತ "ಮುಕ್ತದ್ವಾರ ನೀತಿ") ಬಳಸಬಹುದಿತ್ತು ಎಂದೆನಿಸಿದರೂ, ಅಂತಹ ಹಾಗು ಇನ್ನಿತರ ಚಿಕ್ಕಪುಟ್ಟ ನ್ಯೂನತೆಗಳು ಒಟ್ಟಾರೆಯಾಗಿ ಪರಾಮರ್ಶಿಸಿದಾಗ ಗೌಣವಾಗುತ್ತವೆ.

ಲೀ ಕುನ್‌ಕ್ಸಿನ್‌ರ ಆತ್ಮಚರಿತ್ರೆಯನ್ನು ಕನ್ನಡದಲ್ಲಿ ಓದಿದಾಗ ಸಿಕ್ಕ ಖುಶಿ, ಅನುಭವ ಮತ್ತು ಅಪ್ಯಾಯತೆ, ಇಂಗ್ಲಿಷ್ ಮೂಲ ಕೃತಿ ಓದಿದ್ದರೆ ಸಿಗುತ್ತಿರಲಿಲ್ಲ ಎನ್ನುವುದು ನನ್ನ ದೃಢ ಅಭಿಪ್ರಾಯ. ಏಕೆಂದರೆ ನಮ್ಮ ಭಾಷೆಯಲ್ಲಿ ಓದಿಗಾಗ ಕೃತಿಯಲ್ಲಿನ ಭಾವನೆಗಳು ನಮಗೆ ಹತ್ತಿರವಾಗುತ್ತವೆ, ಮತ್ತು ನಮ್ಮವೇ ಆಗುತ್ತವೆ. ಆ ಕಾರಣದಿಂದಲೇ ಈ ಅನುವಾದಿತ ಕೃತಿ ಓದುಗನಿಗೆ ಮೆಚ್ಚುಗೆಯಾಗುತ್ತದೆ. "ನಿನ್ನ ಜೀವಮಾನದಲ್ಲಿ ಕನಿಷ್ಠ ನಲವತ್ತು ಅಸಾಧಾರಣ ಜನರ ಆತ್ಮಚರಿತ್ರೆಯನ್ನು ಓದು" ಎಂದು ನನ್ನ ಪರಿಚಯದವರೊಬ್ಬರು ನಾನು ಚಿಕ್ಕವನಿದ್ದಾಗ ಸಲಹೆ ಮಾಡಿದ್ದರು. ಆ ನಲವತ್ತರಲ್ಲಿ ಈ ಲೀ ಕುನ್‌ಕ್ಸಿನ್ ಒಬ್ಬರಾಗಿದ್ದು ನನ್ನ ಅದೃಷ್ಟವೇ ಸರಿ! ಬ್ಯಾಲೆ ಮತ್ತು ಆ ಕಲೆಯ ಸಾಧಕರ ಬಗ್ಗೆ ಕಿಂಚಿತ್ತೂ ಅರಿವಿರದ ನನಗೆ ಲೀ ಕುನ್‌ಕ್ಸಿನ್ ಎಂಬ ಈ ದೈತ್ಯ ಸಾಧಕನನ್ನು ಪರಿಚಯಿಸಿದಕ್ಕಾಗಿ ಜಯಶ್ರೀ ಭಟ್ ಅವರಿಗೆ ಧನ್ಯವಾದಗಳು. ಅವರ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ. ಕನ್ನಡದ ಉತ್ತಮ ಕೃತಿಗಳೂ ಇಂಗ್ಲಿಷ್ ಭಾಷೆಗೆ ಅವರಿಂದ ಅನುವಾದಗೊಳ್ಳಲಿ ಎಂದು ಆಶಿಸುತ್ತೇನೆ.

ಪುಸ್ತಕದ ವಿವರ : "ಮಾವೋನ ಕೊನೆಯ ನರ್ತಕ" (ಮೂಲ : Mao's Last Dancer, ಲೇಖಕ: ಲೀ ಕುನ್‌ಕ್ಸಿನ್)
ಕನ್ನಡಕ್ಕೆ ಅನುವಾದ : ಜಯಶ್ರೀ ಭಟ್
ಬೆಲೆ : 220 ರು.
ಪುಟಗಳು : 278
ಪ್ರಕಾಶಕರು : ಛಂದ ಪುಸ್ತಕ
ರಕ್ಷಾಪುಟ : ಅಪಾರ

English summary
Mao’s Last Dancer, book review by Girish Jamadagni, Singapore. The book is translated by Jayashri Bhat and is published by Chanda Pustaka Publications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X