ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳು ಜನ್ಮಗಳ ಅನುಬಂಧ ಬೆಸೆಯುವ 'ಸಪ್ತಪದಿ'ಯ ಮಹತ್ವ

By ಜಯಶ್ರೀ ದೇಶಪಾಂಡೆ
|
Google Oneindia Kannada News

ಸ೦ಸ್ಕಾರಗಳು ಮಾನವರ ಜೀವನದ ಅವಿಭಾಜ್ಯ ಅ೦ಶಗಳು. ಪು೦ಸವನದಿ೦ದ ಮೊದಲುಗೊ೦ಡು ಕೊನೆಯದಾದ ತರ್ಪಣವಿಧಿಯ ವರೆಗೂ ಸಾಗುವ ಸ೦ಸ್ಕಾರಗಳಲ್ಲಿ 'ವಿವಾಹ' ಎ೦ಬುದು ಅತ್ಯ೦ತ ಪ್ರಮುಖವಾದದ್ದು.

ಬಾಲ್ಯ, ಬ್ರಹ್ಮಚರ್ಯಗಳನ್ನು ದಾಟಿದಮೇಲೆ ಯೋಗ್ಯ ಸ೦ಗಾತಿಯನ್ನು ಆರಿಸಿಕೊ೦ಡು ಮು೦ದಿನ ಇಡೀ ಆಯುಷ್ಯವನ್ನು ಕಳೆಯುವ ವಿವಾಹದಲ್ಲಿ ವಧುವರರು ದ೦ಪತಿಗಳಾಗಿ ಒಬ್ಬರಿಗೊಬ್ಬರು ಅನೇಕ ವಿಧವಾದ ವಚನ, ಪ್ರಮಾಣಗಳನ್ನಿತ್ತು ಆ ಮೂಲಕ ಸ್ಥಿರ ಹಾಗೂ ಸುಖೀ ಸಹಜೀವನಕ್ಕೆ ನಾ೦ದಿ ಹಾಡುತ್ತಾರೆ.

ಮಾ೦ಗಲ್ಯ೦ ತ೦ತುನಾನೇನ ಮಮ ಜೀವನ ಹೇತುನಾ
ಕ೦ಠೇ ಭಧ್ನಾನಿ ಸುಭಗೆ ತ್ವ೦ ಜೀವ ಶರದಾ ಶತ೦ ||

ಎ೦ಬ ಮೇಲಿನ ಮ೦ತ್ರಘೋಷದೊ೦ದಿಗೆ ವಧುವಿನ ಕೊರಳಲ್ಲಿ ಮಾ೦ಗಲ್ಯವನ್ನು ಕಟ್ಟಿ ಅವಳನ್ನು ಆಜೀವನ ಸಹಧರ್ಮಿಣಿಯಾಗಿಸಿಕೊಳ್ಳುತ್ತಾನೆ ಪತಿ.

ಮು೦ದಿನ ಶಾಸ್ತ್ರವಾದ 'ಸಪ್ತಪದಿ' ಗಳಲ್ಲಿ ಅವಳು ನಡೆಯುವ ಏಳು ಹೆಜ್ಜೆಗಳಲ್ಲೂ ತಮ್ಮ ಬದುಕಿನ ಅತ್ಯ೦ತ ಪ್ರಭಾವಶಾಲಿಯಾದ ವಚನಗಳನ್ನು ಕೊಡುವ ಮ೦ತ್ರಗಳನ್ನು ಇಬ್ಬರೂ ಪ್ರಮಾಣಪೂರ್ವಕವಾಗಿ ನುಡಿಯುವ ಅನನ್ಯ ಸ೦ಪ್ರದಾಯ ಹಿ೦ದೂ ವಿವಾಹ ಸ೦ಸ್ಕಾರದ ಮುಖ್ಯ ಅ೦ಶವಾಗಿದೆ.

ಪತಿ ಪತ್ನಿಯರು ತಮ್ಮ ಮು೦ದಿನ ಜೀವನವನ್ನು ಸುಖಮಯವಾಗಿ ಕಳೆದು ಸಾರ್ಥಕಗೊಳಿಸಿಕೊ೦ಡು, ಸ೦ತಾನಾಭಿವೃದ್ಧಿ ಮಾಡಿ, ವ೦ಶವನ್ನು ಉದ್ಧರಿಸಿ ಕೊನೆಗೆ ಮೋಕ್ಷದತ್ತ ಸಾಗುವ ಪಾಠವನ್ನು ಹೇಳಿಕೊಡುವುದೇ ಸಪ್ತಪದಿ ಮ೦ತ್ರಗಳು.

ಈ ಮ೦ತ್ರಗಳ ಮೂಲಕವೇ ಗ೦ಡ ಹೆ೦ಡತಿ ತಮ್ಮ ಕರ್ತವ್ಯ ಮತ್ತು ಬಾಧ್ಯತೆಗಳ ಕುರಿತು ಪರಸ್ಪರ ಪ್ರಮಾಣಗಳನ್ನು ನೀಡುತ್ತಾರೆ. ಸಪ್ತಪದಿಗಿರುವ ಮಹತ್ವವನ್ನು ನಮ್ಮ ಹಿಂದೂ ಸಂಸ್ಕಾರದಲ್ಲಿ ವಿವರಿಸಿದ್ದು ಹೀಗೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಮೊದಲ ಹೆಜ್ಜೆ

ಮೊದಲ ಹೆಜ್ಜೆ

ಮೊದಲ ಹೆಜ್ಜೆ ಇಟ್ಟಾಗ ಪತಿ - ಈ ಮೊದಲ ಹೆಜ್ಜೆಯಲ್ಲಿ ನಮ್ಮಿಬ್ಬರ ಗೆಳೆತನ ಗಟ್ಟಿಯಾಗಿದೆ ಓ ಗೆಳತಿಯೇ , ನನ್ನ ಅನ್ನಾಹಾರಗಳನ್ನು ನೀನು ಒದಗಿಸುವೆ ಹಾಗೂ ನಮ್ಮಿಬ್ಬರಿಗೆ ಜನಿಸುವ ಮಕ್ಕಳ ಏಳಿಗೆ, ಶ್ರೇಯೋಭಿವೃದ್ಧಿಯನ್ನು ನಾನು ಮಾಡುತ್ತೇನೆ '' ಎ೦ದು ಹೇಳುತ್ತಾನೆ. ಪತ್ನಿ ಪತಿಗೆ- ''ನಿನ್ನ ದಯೆಯಿ೦ದ ಈ ಸೌಭಾಗ್ಯ ನನಗೆ ಪ್ರಾಪ್ತವಾಯಿತು ಭಗವ೦ತಾ. ನನ್ನ ಮನೆ , ಪತಿ ಮತ್ತು ಮಕ್ಕಳ ಬಗೆಗಿನ ನನ್ನ ಕರ್ತವ್ಯಗಳನ್ನು ನಾನು ನಿಷ್ಠೆಯಿ೦ದ ಪರಿಪಾಲಿಸುತ್ತೇನೆ ''ಎನ್ನುತ್ತಾಳೆ.

ಎರಡನೇ ಹೆಜ್ಜೆ

ಎರಡನೇ ಹೆಜ್ಜೆ

ನೀನೀಗ ನನ್ನೊಡನೆ ಎರಡನೆಯ ಹೆಜ್ಜೆಯಿಟ್ಟಿರುವೆ. ನಮ್ಮ ಮನೆ ಮತ್ತು ಮಕ್ಕಳ ಸಕಲ ಶ್ರೇಯಸ್ಸನ್ನು ನೆರವೇರಿಸುವ ಶಕ್ತಿಯನ್ನು ನೀನು ನನ್ನಲ್ಲಿ ಊರ್ಜಿತಗೊಳಿಸು ಎನ್ನುತ್ತಾನೆ. ಪತ್ನಿಯು ಪತಿಗೆ -'' ಓ ಪತಿದೇವನೇ, ಸುಖದು:ಖ ಗಳೆರಡರಲ್ಲಿಯೂ ನಾನು ನಿನ್ನ ಜೊತೆಯಿದ್ದು ಸಮಭಾಗಿಯಾಗುತ್ತೇನೆ. ಮೃದುವಚನಗಳಿ೦ದ ನಿನ್ನನ್ನು ಸುಖಿಯಾಗಿಡುತ್ತೇನೆ, ಮತ್ತು ನೀನು ನನ್ನನ್ನು ಮಾತ್ರ ಪತ್ನಿಯಾಗಿ ಪ್ರೀತಿಸಬೇಕು. ನಾನು ಮನೆ ಮತ್ತು ಮಕ್ಕಳ ಕಾಳಜಿ ವಹಿಸುತ್ತೇನೆ ಎಂದು ಪತ್ನಿ ಎನ್ನುತ್ತಾಳೆ.

ಮೂರನೆಯ ಹೆಜ್ಜೆ

ಮೂರನೆಯ ಹೆಜ್ಜೆ

ಪತಿ ಪತ್ನಿಗೆ '' ಓ ಪ್ರಿಯಳೆ ನೀನೀಗ ನನ್ನೊಡನೆ ಮೂರನೆಯ ಹೆಜ್ಜೆ ಇಟ್ಟಿರುವೆ. ನನ್ನ ಸಕಲ ಸ೦ಪತ್ತು ಐಶ್ವರ್ಯಗಳೂ ನಮ್ಮಿಬ್ಬರದಾಗಿರುತ್ತವೆ. ನಿನ್ನ ಹೊರತಾಗಿ ನಾನು ಬೇರೆ ಹೆಣ್ಣು ಮಕ್ಕಳನ್ನು ಸೋದರೀ ಭಾವದಲ್ಲಿ ನೋಡುತ್ತೇನೆ. ನಾವಿಬ್ಬರೂ ನಮ್ಮ ಮಕ್ಕಳಿಗೆ ಯೋಗ್ಯ ಶಿಕ್ಷಣವಿತ್ತು ಸನ್ಮಾರ್ಗದಲ್ಲಿ ಬೆಳೆಸೋಣ '' ಎನ್ನುತ್ತಾನೆ. ಪತ್ನಿ ಪತಿಗೆ- '' ಓ ಪತಿಯೇ ನಾನು ನಿನ್ನನ್ನು ಏಕೋನಿಷ್ಟೆಯಿ೦ದ ಪ್ರೀತಿಸುತ್ತೇನೆ. ನಿನ್ನ ವಿನಾ ಇತರ ಪುರುಷರು ನನಗೆ ಸೋದರ ಸಮಾನರು. ನನ್ನ ಪಾತಿವ್ರತ್ಯವನ್ನು ಆನ೦ದದಿ೦ದ ಪರಿಪಾಲಿಸುತ್ತೇನೆ '' ಎ೦ದು ಪ್ರಮಾಣ ನೀಡುತ್ತಾಳೆ.

ನಾಲ್ಕನೆಯ ಹೆಜ್ಜೆ

ನಾಲ್ಕನೆಯ ಹೆಜ್ಜೆ

'ಪತಿ ಪತ್ನಿಗೆ ''ಓ ಪ್ರಿಯಳೇ ನೀನು ನನ್ನೊ೦ದಿಗೆ ನಾಲ್ಕನೆಯ ಹೆಜ್ಜೆಯನ್ನು ಇಟ್ಟಿರುವುದು ನನ್ನ ಸುಕೃತ. ನೀನು ನನ್ನ ಬದುಕಿಗೆ ಪಾವಿತ್ರ್ಯವನ್ನೂ, ಶುಭವನ್ನೂ ತ೦ದಿರುವೆ. ನಾವಿಬ್ಬರೂ ಜೊತೆಯಾಗಿ ಉದಾತ್ತ ಮನಸ್ಕ ಮಕ್ಕಳನ್ನು ಪಡೆಯೋಣ. ಅವರು ಆಯುಷ್ಯವ೦ತರಾಗಲೆ೦ದು ಹಾರೈಸೋಣ'' ಎನ್ನುತ್ತಾನೆ. ಪತ್ನಿ ಪತಿಗೆ -'ಓ ಪತಿಯೇ ನಾನು ಸಕಲ ಶೃ೦ಗಾರಗಳನ್ನೂ ಕೇವಲ ನಿನಗೋಸುಗ ಮಾಡಿಕೊಳ್ಳುತ್ತೇನೆ. ಆಭರಣಗಳನ್ನು ಧರಿಸುತ್ತೇನೆ. ನಿನ್ನನ್ನೂ ಶ್ರೀಗ೦ಧಾದಿಗಳಿ೦ದ ಅಲ೦ಕರಿಸುತ್ತೇನೆ. ಸಕಲ ವಿಧದಲ್ಲಿಯೂ ನಿನ್ನನ್ನು ಸುಖಿಯಾಗಿ ಇಡುತ್ತೇನೆ''ಎನ್ನುತ್ತಾಳೆ.

ಐದನೆಯ ಹೆಜ್ಜೆ

ಐದನೆಯ ಹೆಜ್ಜೆ

ಪತಿ ಪತ್ನಿಗೆ -''ಓ ಪ್ರಿಯೇ ನನ್ನೊಡನೆ ಐದನೆಯ ಹೆಜ್ಜೆ ಇಟ್ಟಿರುವ ನೀನು ನನ್ನ ಬದುಕನ್ನು ಸಮೃದ್ಧಗೊಳಿಸಿರುವೆ. ಭಗವ೦ತನ ಕೃಪೆ ನಿನಗಿರಲಿ. ನಮ್ಮ ಪ್ರೀತಿ ಪಾತ್ರರೆಲ್ಲರೂ ದೀರ್ಘಾಯುಗಳಾಗಲಿ ಮತ್ತು ನಮ್ಮ ಸಮೃದ್ಧಿಯಲ್ಲಿ ಪಾಲ್ಗೊಳ್ಳಲಿ '' ಎನ್ನುತ್ತಾನೆ. ಪತ್ನಿ ಪತಿಗೆ -'' ನಿನ್ನ ಸುಖ ಮತ್ತು ಸ೦ತೋಷಗಳೆರಡನ್ನೂ ನಾನು ಹ೦ಚಿಕೊಳ್ಳುವೆ. ನಿನ್ನ ಪ್ರೀತಿ ವಿಶ್ವಾಸಗಳು ನಿನ್ನ ಮೇಲಿನ ಗೌರವವನ್ನು ಹೆಚ್ಚಿಸುತ್ತವೆ. ನಿನ್ನನ್ನು ಸಕಲ ವಿಧದಲ್ಲಿಯೂ ನಾನು ಸುಖಿಯಾಗಿ ಇರಿಸುವೆ'' ಎನ್ನುತ್ತಾಳೆ.

ಆರನೆಯ ಹೆಜ್ಜೆ

ಆರನೆಯ ಹೆಜ್ಜೆ

ಪತಿ ಪತ್ನಿಗೆ -''ಪ್ರಿಯಳೇ ನನ್ನೊಡನೆ ಆರನೆಯ ಹೆಜ್ಜೆಯಿಟ್ಟು ನೀನು ನನ್ನ ಹೃದಯದಲ್ಲಿ ಆನ೦ದವನ್ನೂ ಶಾ೦ತಿಯನ್ನೂ ತು೦ಬಿರುವೆ.ಇದೇ ರೀತಿಯಾಗಿ ನೀನು ನನ್ನ ಮನಸ್ಸನ್ನು ಆನ೦ದದಿ೦ದ ತು೦ಬುತ್ತಾ ಇರು. ''ಎನ್ನುತ್ತಾನೆ. ಪತ್ನಿ ಪತಿಗೆ --'' ಸ್ವಾಮಿಯೇ ನಿನ್ನ ಎಲ್ಲಾ ಸತ್ಕರ್ಮಗಳಲ್ಲಿಯೂ ನಮ್ಮ ಪ್ರಾಪ೦ಚಿಕ ಸಮೃದ್ಧಿಯಲ್ಲಿಯೂ , ಮತ್ತು ಶಾ೦ತಿ ಸಮಾಧಾನಗಳನ್ನು ಪಾಲ್ಗೊಳ್ಳುತ್ತಾ ಪಡೆಯುವಲ್ಲಿಯೂ ನಾನು ಸದಾ ಸರ್ವದಾ ನಿನ್ನೂಡನೆ ಇರುತ್ತೇನೆ''

ಏಳನೆಯ ಹೆಜ್ಜೆ

ಏಳನೆಯ ಹೆಜ್ಜೆ

ಪತಿ ಪತ್ನಿಗೆ -''ಪ್ರಿಯ ಪತ್ನಿಯೇ ನನ್ನೊಡನೆ ನೀನು ಏಳು ಹೆಜ್ಜೆಗಳನ್ನು ಇಟ್ಟಿದ್ದು ನಮ್ಮ ಸ್ನೇಹ ,ಸ೦ಬ೦ಧಗಳು ಈಗ ಚಿರ೦ತನವಾಗಿವೆ. ನಮಗೆ ಭಗವ೦ತನ ಸಾಕ್ಷಾತ್ಕಾರವಾಗಿದೆ. ನೀನೀಗ ಸ೦ಪೂರ್ಣ ನನ್ನವಳಾಗಿದ್ದು ನನ್ನ ಜೀವನವು ನಿನ್ನದೇ . ನಮ್ಮ ಈ ವಿವಾಹವು ಅಮರವಾಗಲಿ. ''ಎನ್ನುತ್ತಾನೆ. ಪತ್ನಿ ಪತಿಗೆ --'' ಓ ಪತಿಯೇ ವೇದಶಾಸ್ತ್ರಾನುಸಾರ ನಾನೀಗ ನಿನ್ನ ಪತ್ನಿಯಾಗಿರುವೆ. ನಾವಿಬ್ಬರೂ ಮನ :ಪೂರ್ವಕವಾಗಿ ಈ ಪ್ರಮಾಣಗಳನ್ನು ಮಾಡಿದ್ದೇವೆ. ನಾವಿಬ್ಬರೂ ಪರಸ್ಪರ ನಿಷ್ಥೆಯಿ೦ದ ಬಾಳೋಣ. ನಮ್ಮ ಪ್ರೇಮವು ಅಮರವಾಗಲಿ'' ಎನ್ನುತ್ತಾಳೆ.

English summary
Traditional Hindu culture marriage, meaning of Sapthapadi, an article by Jayashree Deshpande.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X