ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮರ್ಶೆ : ಅರಿವಿನ ಪರಿಧಿಯ ಹೊರಗೆ ಉಡಾಯಿಸುವ ವಿಮಾನ 'ಯಾನ'

By ಸುದರ್ಶನ ಗುರುರಾಜರಾವ್, ಇಂಗ್ಲೆಂಡ್
|
Google Oneindia Kannada News

ಯಾನದಲ್ಲಿ ಬರುವ ಪ್ರಮುಖ ಪಾತ್ರಗಳಾದ ಉತ್ತರಾ (ಹೆಣ್ಣು) ಹಾಗೂ ಸುದರ್ಶನ (ಗಂಡು) ಎರಡೂ ನನಗೆ ಆತ್ಮೀಯವಾದ ಹೆಸರುಗಳೇ. ಉತ್ತರಾ ನನ್ನ ಜನ್ಮ ನಕ್ಷತ್ರದ ಹೆಸರಾದರೆ ಸುದರ್ಶನ ನನ್ನ ಹೆಸರೇ ಆಗಿದೆ. ಸ್ವನಾಮ ಪ್ರೇಮ, ಸ್ವನಾಮಾನುಕಂಪ ಹಾಗೂ ಪಕ್ಷಪಾತಗಳು ತಿಳಿಯದ್ದೇನಲ್ಲ. ಈ ಹಿನ್ನೆಲೆಯಲ್ಲಿ ಈ ಕಾದಂಬರಿಯ ಪಾತ್ರಗಳನ್ನು ನಿರೂಪಣೆಯನ್ನು ಹಾಗೂ ಕಥಾವಸ್ತುವನ್ನು ಅದಷ್ಟು ವಸ್ತುನಿಷ್ಠವಾಗಿ ಮಾಡಲು ಪ್ರಯತ್ನಿಸಿದ್ದೇನೆಂದು ಮೊದಲೇ ಘೋಷಿಸಿಬಿಡುತ್ತೇನೆ.

''ಯಾನ'' ಭೂಮಿಯಿಂದ ಬೇರೊಂದು ಸೌರವ್ಯೂಹವನ್ನೇ ಹೊಕ್ಕು ಅಲ್ಲಿ ಜೀವಸಂಕುಲವನ್ನು ಬೆಳೆಸಬಲ್ಲ, ಪೋಷಿಸಬಲ್ಲ ಗ್ರಹವೊಂದನ್ನು ಹುಡುಕುವ ಮಾನವನ ಮಹದೋದ್ದೇಶದ ಪ್ರಯಾಣಕಥನ. ಪ್ರಯಾಣವೊಂದು ದಿಢೀರ್ ಎಂದು ಪ್ರಾರಂಭವಾಗುವುದಿಲ್ಲವಷ್ಟೆ ; ಅದಕ್ಕೆ ತಯಾರಿ ಬೇಕು. ಆ ತಯಾರಿಯ ಹಂತದಲ್ಲಿ ಪಾತ್ರ ಪರಿಚಯಗಳಾಗುವುದಲ್ಲದೆ ಅವರ ಜೀವನದ, ಆ ದೇಶ ಕಾಲಗಳ ವಿದ್ಯಮಾನಗಳ ಭೂಮಿಕೆ ಕಾದಂಬರಿಯಲ್ಲಿ ಸಿದ್ದವಾಗುತ್ತದೆ. ಕಥೆಯು ಭೂತ ವರ್ತಮಾನಗಳ ಮಧ್ಯೆ ತುಯ್ದಾಡುತ್ತಾ, ಪಾತ್ರಗಳ ಮನೋವ್ಯಾಪಾರವನ್ನು ಅವರು ನಂಬಿದ ತತ್ವಗಳ /ಮಾನಸಿಕ ಮಸೂರದ ಮೂಲಕ ಹಾಗೂ ಅವರುಗಳು ಇರುವ ದೇಶ ಕಾಲ ಧರ್ಮ ನಂಬಿಕೆಗಳ ಚೌಕಟ್ಟಿನಲ್ಲಿ ತಿಳಿಸುತ್ತಾ ಸಾಗುತ್ತದೆ. ಇಲ್ಲಿ ಅರಿವು ಮತ್ತು ನಂಬಿಕೆಗಳ ನಡುವಿನ ವ್ಯತ್ಯಾಸ ಗಮನಿಸಬೇಕು. ನಂಬಿಕೆ ಮತ್ತು ಆಯ್ಕೆಗಳ ನಡುವಿನ ತಾಕಲಾಟಗಳೂ ಬರುತ್ತವೆ. ಮಾನವನ ಜೀವನದ ವಿದ್ಯಮಾನಗಳು ಮತ್ತು ಅಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸರಳ ರೇಖಾತ್ಮಕವಾಗಿರದೆ ಎಡ ಬಲ ಊರ್ಧ್ವ ಹಾಗೂ ಅಧೋಮುಖಗಳಿಂದ ಬಂದು ಬಡಿಯುವ ಹಲಾವಾರು ಘಟನೆ, ಒತ್ತಡಗಳ ಸಂಕೀರ್ಣ ಉತ್ಪತ್ತಿ ಎಂಬುದು ಭೈರಪ್ಪನವರ ಎಲ್ಲ ಕಾದಂಬರಿಗಳಂತೆ ಇಲ್ಲಿಯೂ ಹಾಸು ಹೊಕ್ಕಾಗಿರುವ ಅಂಶ; ಆದರೆ ಆಯಾಮ ಮಾತ್ರ ಬೇರೆ. [ಭೈರಪ್ಪನವರಿಗೆ ಜ್ಞಾನಪೀಠಕ್ಕೆ ಸಮಾನಾಂತರ ಸಮ್ಮಾನ]

SL Bhyrappa's Yaana review by Sudarshana Gururajarao

ಮೊದಲಿಗೆ ಪಾತ್ರಗಳನ್ನೂ ಕುರಿತು ನೋಡೋಣ.

ಉತ್ತರಾ:

ಉತ್ತರಾ ಒಬ್ಬಳು ಚೆಲುವು, ಛಲ, ವಿದ್ಯೆ, ಬುದ್ಧಿ, ಆತ್ಮವಿಶ್ವಾಸ, ಯಾರೂ ಬಯಸಬಹುದಾದ ಸಾಮಾಜಿಕ ಹಾಗೂ ಕೌಟುಂಬಿಕ ಹಿನ್ನೆಲೆಯಿಂದ ಬಂದ ಹೆಣ್ಣು. ತಾನು ಬಯಸಿದ್ದನ್ನು ಹೋರಾಡಿ ಪಡೆಯಬಲ್ಲ ಮನೋಸ್ಥೈರ್ಯ ಇರುವಂಥವಳು. ಹೊಸ ಅನುಭವ ಸಾಹಸಗಳಿಗೆ ತನ್ನನು ತಾನು ಒಡ್ಡಿಕೊಳ್ಳಬಲ್ಲ ಆಧುನಿಕ ಮನೋಭಾವದವಳಾದರೂ ತನ್ನ ತಾಯಿ ತಂದೆಯರಿಂದ ಭಾರತೀಯ ಧರ್ಮ ನಂಬಿಕೆಗಳ ಅರಿವನ್ನು ಇಟ್ಟುಕೊಂಡು ಬೆಳೆದಿರುವವಳು. ಪೈಲಟ್ ವೃತ್ತಿಯಿಂದ ಹೊರಬಂದು ವ್ಯೋಮಯಾನದ ಪ್ರಯೋಗಾತ್ಮಕ ಕ್ರಿಯೆಗೆ ಸ್ವಇಚ್ಚೆಯಿಂದಲೇ ಹೋಗಿ ಆಯ್ಕೆಯಾಗುತಾಳೆ. ಅಲ್ಲಿ ಯಾದವನೊಂದಿಗೆ ಪ್ರೇಮಾಕುರವೂ ಆಗಿ ಬಾಹ್ಯಾಕಾಶದಲ್ಲಿ ದೇಹಸಂಪರ್ಕ ಮಾಡುವ ಮುನ್ನ ಗಂಧರ್ವ ರೀತಿಯಲ್ಲಿ ವಿವಾಹವನ್ನು ಮಾಡಿಕೊಳ್ಳುತಾಳೆ. ಆ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಹೆಸರನ್ನೂ ಗಳಿಸುತ್ತಾಳೆ. ತನಗಿದ್ದ ಸಂಸ್ಕಾರದ ಫಲವಾಗಿ ಆ ಎಲ್ಲ ಹಣ, ಹೆಸರು ಪ್ರತಿಷ್ಠೆಗಳು ತರಬಹುದಾದ ಅವಘಡಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತಾಳೆ. ಮುಂದಿನ ಹಂತದ ಯೋಜನೆಗೆ ಅವಳ ಪ್ರಿಯಕರ /ಗಂಡನಾದ ಯಾದವನು ಉತ್ಸಾಹ ತೋರದಿದ್ದಾಗ ತಾನು ಹೊರಟು ನಿಲ್ಲುತ್ತಾಳೆ. [ಮೋದಿ ಬೆಂಬಲಿಸಿದ ಭೈರಪ್ಪ, ಯುಆರ್ಎ ಏನಂದ್ರಪ್ಪ?]

ಮನೆಯ/ ಮನೆಯವರ ಜವಾಬುದಾರಿಯ ಕಾರಣ ಅವನು ಬರುತ್ತಿಲ್ಲವೆಂದು ತಿಳಿದಿದ್ದರೂ ತನ್ನ ನಿರ್ಧಾರ ಬದಲಾಯಿಸದವಳಾಗುತ್ತಾಳೆ. ಸ್ವತಂತ್ರ ಮನೋಭಾವದ ಉತ್ತರಾ, ಯಾದವನ ಭೂಮಿಯ ಮೇಲಿನ ಕೌಟುಂಬಿಕ ಅನಿವಾರ್ಯತೆಗಳಿಗೆ ಸ್ಪಂದಿಸುವುದಿಲ್ಲ. ಕೀರ್ತಿ, ಹೊಸ ಅನುಭವ, ದೇಶಪ್ರೇಮ ದೇಶಸೇವೆ ಇವುಗಳ ನಡುವಿನ ಗೊಂದಲ ಒಂದು ಕಡೆ, ಯಾದವನ ಮೇಲಿನ ಪ್ರೀತಿ, ಸೆಳೆತ, ತನ್ನದೇ ಸಂತತಿಯನ್ನು ಬೆಳೆಸುವ ಆಕಾಂಕ್ಷೆ ಇನ್ನೊಂದೆಡೆ. ಯಾದವ ಅವಳ ಒತ್ತಡಕ್ಕೆ ಒಪ್ಪದೇ ಹೋದಾಗ ತನ್ನ ಅಂತರಾತ್ಮಕ್ಕೆ ವಿರುದ್ಧ ಯಾನಕ್ಕೆ ಹೊರಟೆ ಬಿಡುತ್ತಾಳೆ. ಅಲ್ಲಿಂದ ಮುಂದೆ ಅವಳ ಉತ್ಸಾಹ, ಕಾರ್ಯತತ್ಪರತೆ ತನ್ನ ತತ್ವಗಳ ಮೇಲಿನ ನಂಬಿಕೆ ಇತ್ಯಾದಿಗಳು ಅವಳ ಜೀವನದಲ್ಲಿ ಮಸುಕಾಗುತ್ತಾ ಹೋಗುತ್ತವೆ. ತನ್ನ ಅಯೋಮಯ ಹೊಯ್ದಾಟದಲ್ಲಿ ಸಹಯಾತ್ರಿ ಸುದರ್ಶನನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಅವನನ್ನು ವಿರೋಧಿಸಿ, ಆ ಮೂಲಕ ದಾಂಪತ್ಯ ಜೀವನ ಶುರುಮಾಡುವಲ್ಲಿ ವಿಳಂಬಿಸಿ ಅವನನ್ನು ಮಾನಸಿಕವಾಗಿಯೂ, ದೈಹಿಕವಾಗಿಯೂ ಕಳೆದುಕೊಳ್ಳುತ್ತಾಳೆ. ಕೃತಕ ಗರ್ಭಧಾರಣೆಯ ಮೂಲಕ ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಪಡೆದು, ಅವರ ಆರೈಕೆ ಪಾಲನೆ ಮಾಡಿದಾಗ್ಯೂ ಅವಳ ಹಾಗೂ ಸುದರ್ಶನನ ಮಧ್ಯೆ ಮಾನಸಿಕ ಸಾಹಚರ್ಯ ಸೌಹಾರ್ದತೆ ಬೆಳೆಯುವುದೇ ಇಲ್ಲ. ಒಳ್ಳೆಯ ತಾಯಿಯಾಗುವ ಉತ್ತರಾ ತನ್ನ ನಡವಳಿಕೆ ನಿರ್ಧಾರಗಳಿಂದ ಹಲವು ಉತ್ತರಗಳಿಲ್ಲದ ಪ್ರಶ್ನೆಗಳನ್ನು ಹುಟ್ಟಿ ಹಾಕುತ್ತಾಳೆ.

ಒಂದು ಪಾತ್ರ ಓದುಗರು ಕಟ್ಟಿಕೊಂಡ ನಿರೀಕ್ಷೆ ಅಥವಾ ಆದರ್ಶದ ಪ್ರಕಾರ ಸಾಗಬೇಕೇ ಬೇಡವೇ ಎಂಬುದು ಇಲ್ಲಿನ ಚರ್ಚೆಯ ವಿಷಯ.

ಮಹಿಳಾವಾದಿಗಳ ಪ್ರಕಾರ ಉತ್ತರಾ ಪಾತ್ರ ಪೂರ್ಣ ಪ್ರಮಾಣದಲ್ಲಿ ಮೂಡಿ ಬಂದಿಲ್ಲ ಎಂದೆನ್ನಬಹುದು. ಅಷ್ಟೆಲ್ಲಾ ಪ್ರತಿಭೆಯಿದ್ದವಳನ್ನು ಕಡೆಗೆ ಯಾವುದನ್ನೂ ವೃದ್ಧಿಗೊಳಿಸಿಕೊಳ್ಳದೆ ಇಡೀ ಯಾನದ ಕಾಲಮಾನದಲ್ಲಿ ತೋಟದಲ್ಲಿ ಕಾಲ ಕಳೆಯುವ, ಮಕ್ಕಳಿಗೆ ತಾಯಿಯಾಗುವ, ಹಾಗೂ ಆಗೀಗ ಅಡುಗೆ ಮಾಡುವ ಗೃಹೀತ ಕೆಲಸಕ್ಕೆ ಸೀಮಿತಗೊಳಿಸಿ ಕಾದಂಬರಿಕಾರರು ಈ ಪಾತ್ರಕ್ಕೆ ಅನ್ಯಾಯ ಮಾಡಿದ್ದಾರೆ; ಮಹಿಳಾ ಸಬಲತೆಯನ್ನು ಎತ್ತಿ ಹಿಡಿದಿಲ್ಲ, ಮತ್ತೆ ಅದೇ ದಮನೀಯ ಮನೋಧರ್ಮವನ್ನು ಒಬ್ಬ ಆಧುನಿಕ ಮಹಿಳೆಗೆ ಆರೋಪಿಸಿ ಪ್ರಗತಿವಿರೋಧಿಯಾಗಿ ಬಿಂಬಿಸಿಕೊಂಡಿದ್ದಾರೆ ಎನ್ನುವ ಟೀಕೆಗಳು ಬರಬಹುದಾದ ಸನ್ನಿವೇಶ ತಂದುಕೊಂಡಿದ್ದಾರೆ.

ಸೈದ್ಧಾಂತಿಕ ನೆಲೆಗಟ್ಟಿನಿಂದ ನೋಡಿದರೆ ಇದು ಸರಿ ಎಂದೆನ್ನಿಸಬಹುದು. ಆ ಪಾತ್ರವನ್ನು ಆದರ್ಶೀಕರಣಗೊಳಿಸಿ ನೌಕಾಯಾನದ ಯಶೋಗಾಥೆಯಲ್ಲಿ ಅವಳ ಸಾಹಸ, ತಾಂತ್ರಿಕ ಪರಿಣತಿಗಳನ್ನು ಒರೆಗಿಟ್ಟು ಪಾತ್ರವನ್ನು ಸಶಕ್ತಗೊಳಿಸಬಹುದಿತ್ತು. ಆದರೆ ಅದು ಕೇವಲ ಸೈದ್ಧಾಂತಿಕ ನೆಲೆಗಟ್ಟು.

ವೈಚಾರಿಕ ಹಾಗು ವಾಸ್ತವಿಕ ನೆಲೆಗಟ್ಟಿನಿಂದ ನೋಡಿದಾಗ ಹಲವಾರು ಹೆಣ್ಣುಗಳು ತಮ್ಮ ಸಾಧನೆಯ ಹಾದಿಯಿಂದ ಸರಕ್ಕನೆ ಹೊರಳಿ ತಮ್ಮ ಪಾರಂಪರಿಕವಾದ, ಜೀವ ವಿಕಾಸದ ಮೂಲಭೂತ ಕೆಲಸವಾದ ಕುಟುಂಬದ ಲಾಲನೆ ಪಾಲನೆಯಲ್ಲಿ ತೊಡಗುವುದು ಅಪರೂಪವೂ ಅಲ್ಲ, ಅಸಾಧುವೂ ಅಲ್ಲ, ಅಸಾಧ್ಯವೂ ಅಲ್ಲ. ಅಷ್ಟಕ್ಕೂ ತನ್ನ ಪ್ರೇಮವೈಫಲ್ಯವನ್ನು ಅನುಭವಿಸಿದ ಉತ್ತರೆಯಲ್ಲಿ ಆ ರೀತಿಯ ನಿರಾಸಕ್ತಿ ಮೂಡುವುದು ಹಲವಾರು ಮನೋವ್ಯಾಪಾರಗಳ ಸಾಧ್ಯಾಸಾಧ್ಯತೆಗಳ ಪಟ್ಟಿಯಲ್ಲಿ ಪ್ರಮುಖವಾದ ಅಂಶವೇ ಅಗಿದೆ‌. ಹಾಗಾಗಿ ಭೈರಪ್ಪನವರು ತಮಗೆ ಬೇಕಾದ ಒಂದನ್ನು, ಹಂದರಕ್ಕೆ ಹೊಂದುವಹಾಗೆ ವಾಸ್ತವಿಕ ನೆಲೆಗಟ್ಟಿನಲ್ಲಿ ಅರಿಸಿಕೊಂಡದ್ದು ಅಕ್ಷಮ್ಯವೆಂತೇನೂ ಅನಿಸಲಿಲ್ಲ. ಇಷ್ಟಕ್ಕೂ ಜೀವನ ನಿರ್ವಹಣೆ ಹಾಗೂ ಭದ್ರತೆಯ ದೃಷ್ಟಿಯಿಂದ ಯಾವ ಕೊರತೆಯೂ ಇರದ ಪರಿಸ್ಥಿತಿಯಲ್ಲಿ ಮಾನವ ಜೀವಿಯೊಂದು ಇರುವಾಗ ದೇಹ - ಮನಸ್ಸುಗಳಿಗೆ ಕಡಿಮೆ ಜಗ್ಗಾಟ ಮಾಡಿಸುವ ಹಾದಿ ಹಿಡಿಯುವುದು ಮೂರರಲ್ಲಿ ಎರಡರಷ್ಟು ಜನ ಆಯ್ದುಕೊಳ್ಳುವ ಆಯ್ಕೆ!

ಯಾದವ :

ಕೆಳ ಮಧ್ಯಮ ವರ್ಗದ ಸಾಂಪ್ರದಾಯಿಕ ಕುಟುಂಬದಿಂದ ಬಂದ, ತನ್ನವರ, ತನ್ನ ಮನೆಯವರ ಮೇಲೆ ಪ್ರೀತಿ ಜವಾಬ್ದಾರಿಗಳು ಇರುವ ಯುವಕನೊಬ್ಬನ ಮನೋವ್ಯಾಪಾರಗಳನ್ನು ಪ್ರತಿನಿಧಿಸುವ ಪಾತ್ರ. ಸಾಧಾರಣಕ್ಕಿಂತ ಹೆಚ್ಚಿನ ಬುದ್ಧಿಮತ್ತೆಯಿದ್ದರೂ ಯಾದವ ದೈಹಿಕವಾದ ಚಟ್ಟುವಟಿಕೆಗಳಲ್ಲಿ ಹೆಚ್ಚು ಒಲವಿರುವ ಮನಸ್ಸುಳ್ಳವ; ಸೈದ್ಧಾಂತಿಕ ವಿಜ್ಞಾನ ಹಾಗೂ ಅದರ ಪರಿಕಲ್ಪನೆಗಳು ಅವನಿಗೆ ಹಿಡಿಸವು. ಹೀಗಾಗಿ ಈಗಾಗಲೇ ವೈಜ್ಞಾನಿಕವಾಗಿ, ಪ್ರಾಯೋಗಿಕವಾಗಿ ಭದ್ರ ನೆಲೆಯ ಮೇಲೆ ನಿಂತಿರುವ ಬಾಹ್ಯಾಕಾಶಯಾನ ಅವನಿಗೆ ಸುಲಭ ಸಾಧ್ಯ. ಇಲ್ಲಿ ಅಮೂರ್ತ (ಅಬ್ಸ್ಟ್ರ್ಯಾಕ್ಟ್) ಆಲೋಚನೆಗಳ ವ್ಯಾಪ್ತಿ ಬಹಳ ಕಡಿಮೆ. ಆದರೆ ಇನ್ನೊಂದು ಸೌರವ್ಯೂಹಕ್ಕೆ ಹೋಗುವ ಸೋಲಾರಿಸ್ನಲ್ಲಿ ಅವನ ಬುದ್ಧಿಮತ್ತೆಗೆ ಹೆಚ್ಚಿನ ಸವಾಲು ಎದುರಾಗುತ್ತಿತ್ತು. ಅವನ ಮನಸ್ಥಿತಿ ಅದರ ಮಟ್ಟಕ್ಕೆ ಏರಿಸುವಷ್ಟಿರಲಿಲ್ಲ. [ಕಡಲಾಚೆ ಲೇಖಕರಿಗೆ ಎಸ್ಎಲ್ ಭೈರಪ್ಪ ಕಿವಿಮಾತು]

ತಂಗಿಯರ ಮದುವೆ ಹಾಗೂ ತಂದೆ ತಾಯಿಯರ ಆರೈಕೆ ಪಾಲನೆಗಳನ್ನು ಪ್ರಧಾನ ಜೀವನ ಧ್ಯೇಯವನ್ನಾಗಿ ಪರಿಗಣಿಸುವ ಅವನಿಗೆ (ಅಥವಾ ಅವನಂತಿರುವ ಇನ್ಯಾರಿಗಾದರೂ) ಈ ಹೊಸಬಗೆಯ ಸಾಹಸಕ್ಕೆ ಕೈ ಹಾಕಿ ಅವರೆಲ್ಲರಿಂದ ದೂರ ಉಳಿಯುವ ಮನೋದಾರ್ಢ್ಯತೆ ಇರುವುದಿಲ್ಲ. ಹಾಗಾಗಿಯೇ ಹೊಸ ಸವಾಲಿಗೆ ಒಡ್ಡಿಕೊಳ್ಳುವ ಉತ್ತರೆಯ ಹಂಬಲದಿಂದ ದೂರ ಸರಿಯುತ್ತಾನೆ. ಉತ್ತರಾ ಕೂಡಾ ಅವನ ಕೋರಿಕೆಯನ್ನು ತಿರಸ್ಕರಿಸಿ ಹೊರಟು ನಿಲ್ಲುತ್ತಾಳೆ. ಹಾಗೆಂದು ಅವನಿಗೆ ಉತ್ತರೆಯ ನೆನಪು ಮಾಸುವುದಿಲ್ಲ; ತನ್ನ ಹೆಂಡತಿ ರಾಜನಿಗೆ ಅದನ್ನು ತಿಳಿಸಿರುವುದು ಇಲ್ಲ. ರಾಷ್ತ್ರೀಯ ಭದ್ರತೆ, ರಹಸ್ಯದ ಕಾರಣದ ಜೊತೆಗೆ ಪತಿ ಪತ್ನಿಯರ ನಡುವೆ ಬೇರೊಂದು ಹೆಣ್ಣಿನ ವಿಚಾರವಾಗಿ ಇರಬಲ್ಲ ಆತಂಕ, ಸಂಕೋಚ ಎರಡೂ ಕಾರಣ. ಅದು ತಿಳಿದು ಬಿಟ್ಟಾಗ ರಜನಿಯ ಪ್ರತಿಕ್ರಿಯೆಯೂ, ಯಾದವನ ನಡವಳಿಕೆಯೂ ಯಾವ ಆದರ್ಶಗಳ ಚೌಕಟ್ಟಿಗೆ ಮಣಿಯದೆ ಸಾಮಾನ್ಯ ಮನುಷ್ಯರ ಪ್ರಾತಿನಿಧಿಕ ಪ್ರತಿಕ್ರಿಯೆಯಾಗಿಯೇ ಚಿತ್ರಣಗೊಂಡಿದೆ.

ಭೈರಪ್ಪನವರ ಕಥಾನಿರೂಪಣೆ ಇದೇ ಕಾರಣಕ್ಕೆ ಸಾರ್ವಕಾಲಿಕ ಕೃತಿಯಾಗಿ ನಿಲ್ಲುವ ಶಕ್ತಿ ಪಡೆದಿರುತ್ತದೆ. ಆದರ್ಶಗಳ ಚೌಕಟ್ಟಿನಲ್ಲಿ ಇಬ್ಬರೂ ಅಥವಾ ಇಬ್ಬರಲ್ಲಿ ಒಬ್ಬರು ಪ್ರಬುದ್ಧ ನಡವಳಿಕೆ ತೋರಬಹುದಿತ್ತು. ಇದು ಅಪರೂಪ. ಆದರೆ ಇತಿಹಾಸ ಗಮನಿಸಿದಾಗ ಸಾಂದರ್ಭಿಕ ಅನಿವಾರ್ಯತೆಯನ್ನು ಲೆಕ್ಕಿಸದೆ ಪ್ರತಿಭಟನೆ, ಜಗಳ ದೂಷಣೆ, ಆರೋಪ ಪ್ರತ್ಯಾರೋಪ ಇತ್ಯಾದಿಗಳೇ ಹೆಚ್ಚು ನಡೆಯುವ ಕಾರಣ ವಾಸ್ತವಿಕ ನೆಲೆಗಟ್ಟಿನ ಚಿತ್ರಣ. ಮನೋವ್ಯಾಧಿಗೆ ತುತ್ತಾಗುವುದು ಇದರ ಇನ್ನೊಂದು ಲಕ್ಷಣ. ಅವನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ತನ್ನ ಸಾಮರ್ಥ್ಯದ ಚೌಕಟ್ಟಿನಲ್ಲಿ ಆದಷ್ಟು ಪ್ರಾಮಾಣಿಕವಾಗಿ ಇರಬಯಸುವ ವ್ಯಕ್ತಿ. ವ್ಯಕ್ತಿಕೇಂದ್ರಿತ ಆಸೆ ಆಕಾಂಕ್ಷೆಗಳು ಹಾಗೂ ಕುಟುಂಬ ಅಥವಾ ಸಮುದಾಯ ಕೇಂದ್ರಿತ ನಿರೀಕ್ಷೆಗಳ ತಾಕಲಾಟದಲ್ಲಿ ಯಾದವನ ಮನಸ್ಸು ಎರಡನೆಯ ಕಡೆಗೆ ವಾಲಿದುದು ಅನಿರೀಕ್ಷಿತವೇನಲ್ಲ. ಅದು ಸಂಸ್ಕಾರ ಸಂಸ್ಕೃತಿಗಳು ರೂಪಿಸುವ ಒಂದು ವ್ಯಕ್ತಿತ್ವ. ವೈಯಕ್ತಿಕ ಆಕಾಂಕ್ಷೆ, ಉತ್ತರಾಳ ಆಗ್ರಹ ಹಾಗೂ ತನ್ನ ಕುಟುಂಬ ಇಟ್ಟಿರುವ ನಿರೀಕ್ಷೆ ಇವು ಮೂರರ ತಾಕಲಾಟದಲ್ಲಿ, ಹಗ್ಗ ಜಗ್ಗಾಟದಲ್ಲಿ ಸಮನ್ವಯ ಸಾಧಿಸುವ ಸಾಧ್ಯತೆ ಇಲ್ಲದೇ ಹೋದಾಗ ಅಸಹಾಯಕವಾದ, ಬಲಹೀನವಾದ ಹಾಗೂ ವ್ಯತಿರಿಕ್ತ ಪರಿಣಾಮಗಳಿಗೆ ಹಲವು ಜೀವಗಳು ತುತ್ತಾಗುವ ಸಾಧ್ಯತೆ ಮನಗಂಡು ತನ್ನ ಹಾಗೂ ಉತ್ತರಾಳ ಸಂಬಂಧವನ್ನು ತೊರೆಯುವ ಕಷ್ಟ ಸಾಧ್ಯ, ಆದರೆ ಕಾರ್ಯಸಾಧುವಾದ ನಿರ್ಧಾರ ತೆಗೆದುಕೊಳ್ಳುತ್ತಾನೆ. ವ್ಯಕ್ತಿಗತ ಹಿತಾಸಕ್ತಿಗಾಗಿ ಇನ್ನೊಬ್ಬರ ಹಿತವನ್ನು ಮೆಟ್ಟಲು ಸಧೃಢ ಮನಸ್ಸು ಬೇಕಾಗಿಲ್ಲ. ಹೀಗಾಗಿ ಅವನು ದುರ್ಬಲ ಮನಸ್ಸಿನ ವ್ಯಕ್ತಿಯೆಂದು ನನಗನ್ನಿಸುವುದಿಲ್ಲ.

ಸುದರ್ಶನ

ಮೂರನೆಯ ಪಾತ್ರವಾಗಿ ಮೂಡಿಬರುವ ಸುದರ್ಶನನ ವ್ಯಕ್ತಿತ್ವ ಸ್ವಲ್ಪ ವಿಭಿನ್ನ ಸ್ವರೋಪದ್ದು. ಇವನು ಅಸಾಧಾರಣ ಬುದ್ಧಿವಂತ ಹಾಗೂ ಒಂದು ಚೌಕಟ್ಟಿಗೆ ಒಳಪಟ್ಟ ವ್ಯಕ್ತಿತ್ವದವನಲ್ಲ. ಇವನ ಬಾಲ್ಯ ಯೌವನಗಳನ್ನು ಹೆಚ್ಚು ಕಟ್ಟಿಕೊಟ್ಟಿಲ್ಲವಾದ್ದರಿಂದ ತಂದೆ ತಾಯಿಯರ ಪರಿಪೂರ್ಣ ಆರೈಕೆ ಇವನಿಗೆ ಸಿಕ್ಕಿಲ್ಲ ಹಾಗೂ ಅಕ್ಕನ ಆರೈಕೆಯಲ್ಲಿ ಬೆಳೆದವನೆಂದು ಊಹಿಸಿಕೊಳ್ಳಬಹುದು. ಇಂತಹ ಸನ್ನಿವೇಶಗಳಲ್ಲಿ ಆಗುವ ಬಹುತೇಕ ಮನಬೆಳವಣಿಗೆಗಳಂತೆ ಇವನಿಗೆ ಸಾಮಾಜಿಕ ಬಂಧನ ವಾತ್ಸಲ್ಯಗಳ ಸೆಳೆತ ಅಷ್ಟಕ್ಕಷ್ಟೆ. ಹಾಗೆಂದು ಮೌಲ್ಯಗಳೇ ಇಲ್ಲವೆನ್ನುವಂತಿಲ್ಲ. ಹೊರದೇಶಗಳಲ್ಲಿ ಇದ್ದ ಕಾರಣಕ್ಕೂ, ಯಾನಕ್ಕೆ ಮುಂಚೆಯೇ ದೇಹ ಸಂಪರ್ಕದ ಅನುಭವ ಇದ್ದುದಕ್ಕೂ, ಮದುವೆಯಾಗದೆ ಉಳಿದವನಾದುದಕ್ಕೂ ಹೆಚ್ಚಿನ ತಾಕಲಾಟಗಳು ಇವನಲ್ಲಿ ಕಂಡುಬರುವುದಿಲ್ಲ. ಯಾನದಲ್ಲಿ ಉತ್ತರೆಯ ನಡವಳಿಕೆಗಳು ಇವನಲ್ಲ್ಲಿ ಎಬ್ಬಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಅಂತರ್ಮುಖಿಯಾಗುವ ಮೂಲಕ ಅವನ ಪಾತ್ರ ಹಾಗೂ ವ್ಯಕ್ತಿತ್ವ ಬೆಳೆಯುತ್ತಾ ಹೋಗುತ್ತದೆ. ಧ್ಯಾನಸ್ಥಿತಿಯಲ್ಲಿ ಇಳಿಯುತ್ತಾ ವಿಶ್ವರಹಸ್ಯದ ಉತ್ತರಗಳನ್ನು ತತ್ವಮೀಮಾಂಸೆಯಲ್ಲಿ ಹುಡುಕುತ್ತಾ ಹೋಗುವ ಅವನ ವೈಚಾರಿಕ ಲಹರಿ ಕಾದಂಬರಿಯ ಮೂಲ ತಿರುಳು ಎಂದೆನ್ನಬಹುದು. ಈ ಮೂಲ ತಿರುಳಿನ ಸುತ್ತಲೇ ಇರುವ ಸಿಪ್ಪೆ, ಬೀಜಗಳಂತೆ ಉಳಿದ ಪಾತ್ರಗಳು ನನಗೆ ಭಾಸವಾಗುತ್ತವೆ.

ಬೆಳಕು- ಕತ್ತಲು, ಸೂರ್ಯ, ಗುರುತ್ವ, ಕೃಷ್ಣ ಗುಹ್ವರ ಇತ್ಯಾದಿಗಳ ತಾತ್ವಿಕ ಸಂವಾದ ಇಲ್ಲಿನ ಹೈಲೈಟ್. ಸಮಕಾಲೀನ ಜಗತ್ತಿನ ಎಡ-ಬಲ ರಂಗಗಳ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು, ಜಾಹೀರಾತು ಮಾರುಕಟ್ಟೆ ಹಣ ಪ್ರಚಾರಗಳ ಜೇಡರ ಬಲೆ, ಹಿಮಾಲಯದ ತಪ್ಪಲು, ಅಲ್ಲಿ ನಡೆಯುತ್ತಿರುವ ವಿಧ್ವಂಸಕ ಬೆಳವಣಿಗೆಗಳು, ಜನರ ಮನೋಭಾವ ಮೌಲ್ಯಗಳಲ್ಲಾಗುತ್ತಿರುವ ಅಧಃಪತನಗಳು ಎಲ್ಲವನ್ನು ವಿವರಿಸುವಲ್ಲಿ ಕಥೆ ನಡೆಯುವ ಕಾಲಮಾನದ ಚಾರಿತ್ರಿಕ ಚೌಕಟ್ಟನ್ನು ಕಟ್ಟಿಕೊಡುತ್ತವೆ. ಹಾಗಾಗಿ ಈ ಕಾದಂಬರಿಯನ್ನು ಇನ್ನೂ ಐವತ್ತು ವರ್ಷ ಕಳೆದು ಓದಿದರೂ ಅದರ ಪ್ರಸ್ತುತಿ ಸ್ವೀಕರಣೀಯವೆಂದು ನನ್ನ ಭಾವನೆ. ಅಕ್ಕನ ನಿರಪೇಕ್ಷ ಅಂತಃಕರಣ, ಭಾವನ, ಅವರ ಮಕ್ಕಳ ಪ್ರೀತಿ, ಧ್ಯೇಯಸಾಧನೆಗೆ ಮುಖಮಾಡಿದವನಿಗೆ ಆಸ್ತಿಪಾಸ್ತಿಯ ಮೇಲಿನ ನಿರಾಸಕ್ತಿಯಂಥ ಸಾರ್ವಕಾಲಿಕ ಸತ್ಯಗಳು ಕೂಡಾ ಕಥೆಯಲ್ಲಿ ಬಂದು ಹೋಗುತ್ತವೆ.

ಭೂಮಿಯಲ್ಲಿ ಲೋಭ ಮೋಹಗಳನ್ನು ಗೆಲ್ಲಬಲ್ಲ ಮನೋಭೂಮಿಕೆ ರೂಪುಗೊಂಡು ಉತ್ತರೆಯೊಂದಿಗೆ ಸೋಲ್ಯಾರಿಸ್ ನಲ್ಲಿ ಕಾಮವನ್ನು ಗೆಲ್ಲಬಲ್ಲ, ಕ್ರೋಧವನ್ನು ಮಣಿಸಬಲ್ಲ ಮನೋಸ್ಥಿತಿ ಮೂಡುವುದರ ಮುನ್ನುಡಿ ಸುಪ್ತವಾಗಿ ವ್ಯಕ್ತಪಡಿಸುತ್ತಾರೆ ಭೈರಪ್ಪನವರು. ಏಕಾಂತದಲ್ಲಿ ಕಾಮವನ್ನು ಗೆಲ್ಲುವುದು ಕಷ್ಟಕರ. ಇಲ್ಲಿ ಅವನು ಉತ್ತರೆಯೊಡನೆ ಹೊಂದಾಣಿಕೆ ಮಾಡಿಕೊಂಡು ಉಳಿದ ಸಾಧನೆಗಳ ಶಿಖರ ಏರಬಹುದಿತ್ತೇ ಇಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಹಾಗಿದ್ದರೆ ಕಥೆಯ ಓಟಕ್ಕೆ ಚ್ಯುತಿ ಬರುತ್ತಿತ್ತೇ ಇಲ್ಲವೇ ಎಂದು ಹೇಳುವುದು ಕಷ್ಟ. ಅವರಿಬ್ಬರಲ್ಲಿ ಮೂಡುವ ಬಿರುಕು ಹಾಗೂ ಸಮರಸವಿಲ್ಲದ ಜೀವನ ಓದುಗನಲ್ಲಿ ಒಂದುಬಗೆಯ ಹತಾಶೆ ಮೂಡಿಸುವುದಂತೂ ನಿಜ. ಯಾನದ ನೌಕೆಯ ಒಳಗೂ, ಹೊರಗೂ ಇರುವ ನಿರ್ವಾತವನ್ನು, ಏಕತಾನತೆಯನ್ನು ಇದು ಪ್ರತಿನಿಧಿಸುತ್ತದೆಯೇನೋ ನನಗೆ ತಿಳಿಯದು. ಎರಡು ವಿಭಿನ್ನ ನೌಕೆಗಳಲ್ಲಿ ಎರಡು ವಿಭಿನ್ನ ಪರಸ್ಪರ ಸಂಬಂಧವಿರುವ ಜೋಡಿಗಳ ಕಥಾ ಹಂದರ ಇದ್ದಲ್ಲಿ ಕಥೆಯ ವ್ಯಾಪ್ತಿ ಸಮಗ್ರವಾಗುತ್ತಿತ್ತೇನೋ.

ಉಳಿದ ಮುಖ್ಯಪಾತ್ರಗಳಾದ ಆಕಾಶ್ ಹಾಗೂ ಮೇದಿನಿ ಅವರ ಚಿತ್ರಣ ಕಥಾ ಕ್ರಿಯೆಯ ಮೂಲ ಪರಿಕರಗಳಾಗದೆ ಕೇವಲ ವೇಗವರ್ಧಕಗಳಂತೆ ಮೂಡಿಬರುತ್ತವೆ.

ಕಥಾನಿರೂಪಣೆ:

ವೈಜ್ಞಾನಿಕ ಹಂದರದ ಮೇಲೆ ಕಟ್ಟಿಕೊಟ್ಟ ವೈಚಾರಿಕ ಕಥೆಯಾದ್ದರಿಂದ ಇಲ್ಲಿ ಯಾವ ರೋಚಕ ಸನ್ನಿವೇಶಗಳೂ ಮೂಡುವುದಿಲ್ಲ. ಬಾಲಿವುಡ್ ಅಥವಾ ಹಾಲಿವುಡ್ ನ ಸಾಹಸ ಇಲ್ಲಿಲ್ಲ. ಅಲ್ಲಲ್ಲಿ ಸ್ವಲ್ಪ ನಿಧಾನವಾಗಿ ಹೋಗುತ್ತಿದೆ ಎಂದೆನ್ನಿಸಿದರೂ, ಓದಿಸಿಕೊಂಡು ಹೋಗುವುದರಲ್ಲಿ ಕಾದಂಬರಿ ಸೋಲುವುದೆಂದು ನನಗನ್ನಿಸಲಿಲ್ಲ. ಭೈರಪ್ಪನವರ ಕಥೆಗಳಲ್ಲಿ ಬರುವ ಕಾಮ ಇಲ್ಲಿಯೂ ಸಾಕಷ್ಟು ಇದೆ. ಅಲ್ಲಲ್ಲಿ ವೈಜ್ಞಾನಿಕ ವಿವರಣೆಗಳಿದ್ದರೂ, ಓದುಗನ ಗಮನ ಆ ಕಡೆಗೆ ಅಷ್ಟು ಹರಿಯದು- ಕಾರಣ ಇದು ಮೂಲಭೂತವಾಗಿ ವೈಚಾರಿಕ ಕಾದಂಬರಿ. ಹಾಗಾಗಿ ಇದನ್ನು ವೈಜ್ಞಾನಿಕ ಕಾದಂಬರಿ ಎಂದೆನ್ನಲಾಗದು.

ಕಥಾವಸ್ತು:

ಕಾದಂಬರಿ ಬರೆಯುವುದು ಮತ್ತು ಓದುವುದು ಏಕೆ ಎಂದು ಕೇಳಿಕೊಂಡರೆ ಹಲವರಿಂದ ಹಲವು ಉತ್ತರಗಳನ್ನು ನಿರೀಕ್ಷಿಸಬಹುದು. ಮಕ್ಕಳಿಗೆ ಕಥೆಗಳನ್ನು ಹೇಳುವುದರ ಮೂಲಧ್ಯೇಯ ಅವು ಪುರಾಣ, ಇತಿಹಾಸ, ದೃಷ್ಟಾಂತಗಳ ಮೂಲಕ ಪ್ರಪಂಚದ ಗುಣ ಸ್ವರೂಪಗಳನ್ನು, ಒಳ್ಳೆಯದು-ಕೆಟ್ಟದ್ದು ಸ್ವೀಕೃತ -ಅಸ್ವಿಕೃತ ನಡವಳಿಕೆಗಳ ನಡುವಿನ ವ್ಯತ್ಯಾಸ ಗ್ರಹಿಸಿ ವ್ಯಕ್ತಿತ್ವವನ್ನು ರೂಪುಗೊಳಿಸಲಿಕ್ಕೆ ಹಾಗೂ ಮನರಂಜನೆಗೆ ಎಂದು ವ್ಯಾಖ್ಯಾನಿಸಬಹುದು.

ಆದರೆ ಪ್ರೌಢರು ಈ ಕಾದಂಬರಿಗಳಿಂದ ಏನನ್ನು ತೆಗೆದುಕೊಳ್ಳಬೇಕು? ಕನಸುಗಳನ್ನೆ, ಆದರ್ಶಗಳನ್ನೆ, ಕಟುವಾಸ್ತವಗಳನ್ನೆ, ಅಥವಾ ಕ್ರಾಂತಿಕಾರಿ ಮನೋಭಾವಗಳನ್ನೆ, ವೈಚಾರಿಕತೆಯನ್ನೆ ಹೇಳುವುದು ಕಷ್ಟ. ಮೇಲಿನ ಎಲ್ಲ ನಿರೀಕ್ಷೆಗಳನ್ನು, ವಾಸ್ತವಿಕ, ಪ್ರಾಯೋಗಿಕ ಅಥವಾ ಕಾಲ್ಪನಿಕ ಆಯಾಮಗಳ ನಡುವೆ ಯಾವುದರಲ್ಲಿ ಭಾವಿಸಿಕೊಳ್ಳಬೇಕು ಎಂದಾಗ ಪ್ರಶ್ನೆ ಇನ್ನೂ ಜಟಿಲವಾಗುತ್ತದೆ. ಯಾರಿಗೆ ಯಾವುದು ಬೇಕು ಎನ್ನುವುದು ಅವರವರ ಭಾವ ಭಕುತಿ ಸಂಸ್ಕೃತಿ ಸಂಸ್ಕಾರಗಳನ್ನು, ಮನೋಧರ್ಮ ಮನೋವಾಂಛೆಗಳನ್ನು ಅವಲಂಬಿಸಿರುತ್ತದೆ.

ನನ್ನ ಮಟ್ಟಿಗೆ ಹೇಳುವುದಾದರೆ ಒಂದು ಸಾಹಿತ್ಯ ಕೃತಿ ವೈಚಾರಿಕತೆಯನ್ನು ಪ್ರಚೋದಿಸಬೇಕು. ಪರಂಪರೆ ತಳಹದಿಯ ಮೇಲೆ ನಮ್ಮ ಮನಸ್ಸಿನ ಗಡಿಯನ್ನು ವಿಸ್ತರಿಸುವಂತಿರಬೇಕು. ಹಳೆ ಬೇರಿನ ಮರಕ್ಕೆ ಹೊಸಚಿಗುರನ್ನು ಟಿಸಿಲೊಡೆಸಬೇಕು- ಬರೀ ಎಲೆಗಳನ್ನಲ್ಲ- ರೆಂಬೆ ಕೊಂಬೆಗಳ ಸಮೇತವಾಗಿ. ನಮ್ಮ ನಡುವಿನ ತಾಕಲಾಟಗಳಿಗೆ ನಮ್ಮ ಮನೋಧರ್ಮ, ಮಾನವನ ಮೂಲಗುಣಗಳು ಕಾರಣವೇ ಹೊರತು ಅವುಗಳನ್ನು ಮೀರಿನಿಂತ ಧರ್ಮ ಅಲ್ಲ ಎಂಬ ಸತ್ಯವನ್ನು ಸಾರುವಂತಿರಬೇಕು. ಈ ಕಡೆಯ ಅಂಶ ಕೆಲವರಿಗೆ ಒಪ್ಪಿಗೆಯಾಗದೇ ಇರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಾವು ಒಂದು ಸಮುದಾಯವಾಗಿ ಸದೃಢವಾಗಿ ಮುನ್ನಡೆಯಬೇಕಾದರೆ ನಮ್ಮ ಮೂಲ ಹಾಗೂ ದೇಶೀ ಪರಂಪರೆಯ ಬಗೆಗೆ ವೈಜ್ಞಾನಿಕ ಅರಿವು, ಚಿಕಿತ್ಸಕ ಹೆಮ್ಮೆ ಇರುವುದು ಬಹಳ ಮುಖ್ಯ. ನಮ್ಮ ಸಂಸ್ಕೃತಿಯ ಅರಿವು ನಮಗೆ ಗಹನವಾಗಿ ಇದ್ದಲ್ಲಿ ಮಾತ್ರ ವಿಧ್ವಂಸಕ ಶಕ್ತಿಗಳು ಕೀಳಾಗಿ ಕಾಣುವುದಾಗಲೀ, ಕೀಳರಿಮೆ ಮೂಡಿಸುವುದಾಗಲೀ ಮಾಡಲಾರವು, ಒಡೆಯಲಾರವು.

ಇದೇ ಕಾರಣಕ್ಕೆ ಭೈರಪ್ಪನವರ ಯಾನ ನನಗೆ ಪ್ರಸ್ತುತವಾಗಿಯೂ, ಆಪ್ತವಾಗಿಯೂ ಕಾಣುತ್ತದೆ. ದೇಶೀ ಭಾವನೆಗಳು ಹಾಗೂ ಚಿಂತನೆಗಳನ್ನು ಒರೆಗಿಟ್ಟು ಹೊಸ ಯುಗದ ವೈಜ್ಞಾನಿಕತೆಗೆ ಪೂರಕವಾಗಿ ತಾತ್ವಿಕ ಅಂಶಗಳ ಸಮನ್ವಯ ಸಾಧಿಸುತ್ತಾ ಹೋಗುತ್ತಾರೆ. ಪಾತ್ರಗಳನ್ನೂ ಯಾವ ಆದರ್ಶಗಳ ಚೌಕಟ್ಟಿಗೂ ಬಂಧಿಸದೆ ಅವರವರ ನಿರ್ಧಾರಗಳಿಗೆ ಪಕ್ಕಾಗಿಸುತ್ತಾರೆ ಹಾಗೂ ಆ ನಿರ್ಧಾರಗಳಿಗಳ ಪರಿಣಾಮಗಳನ್ನು ತೋರಿಸಿ ಅವಕ್ಕೆ ಹೊಣೆಯಾಗಿಸುತ್ತಾರೆ.

ಪರ್ವ, ಸಾರ್ಥ, ನೆಲೆ ಕಾದಂಬರಿಗಳಷ್ಟು ತೀವ್ರವಾಗಿಲ್ಲದಿದ್ದರೂ ಯಾನ ನಮ್ಮ ಮನೋ ವಿಮಾನವನ್ನು ಅರಿವಿನ ಪರಿಧಿಯ ಹೊರಗೆ ಉಡಾಯಿಸುವುದರಲ್ಲಿ ಯಶಸ್ವಿಯಾಗಿದೆ ಎಂದೆನ್ನಲು ಅಡ್ಡಿಯಿಲ್ಲ. [ಕೃಪೆ : ನಿಲುಮೆ]

English summary
Sudarshana Gururajarao from England reviews ace Kannada novelist Dr. S.L. Bhyrappa's latest novel Yaana. He goes into main characters and discusses about their lifestyle, relationships. One must read this not so scientific but thought provoking novel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X