ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯರು ರಸ ಹೀರಿ ಬಿಸಾಡಿದ ಕಬ್ಬಿನ ಜಲ್ಲೆಯಲ್ಲ!

By ಶುಭಾಶಯ ಜೈನ್
|
Google Oneindia Kannada News

ಬಸ್ಸಲ್ಲಿ ಪ್ರಯಾಣಿಸ್ತಾ ಇದ್ದೆ.. ಹಳ್ಳಿಮಾರ್ಗ.. ಮಧ್ಯೆ ದಾರೀಲಿ ಒಬ್ರು ವಯಸ್ಸಾದ ಅಜ್ಜಿ ಬಸ್ ಹತ್ತಿದ್ರು.. ಅಜ್ಜಿ ಬಸ್ ಹತ್ತಿದ ತಕ್ಷಣ ಬಸ್ಸಲ್ಲಿದ್ದ ಯುವಕರಿಗೆ ಆ ಅಜ್ಜಿಯನ್ನು ಚುಡಾಯಿಸುವ ಹುರುಪು.. ಅಜ್ಜಿ ಅವರಿಗೆ ಪರಿಚಯದವರೇ ಇರಬೇಕು ಅಂದುಕೊಂಡೆ. ಬಸ್ ಕಂಡೆಕ್ಟರ್ ಸೇರಿದಂತೆ ಅವರ ಬಳಗದ ಚೇಷ್ಟೆ ಮುಂದುವರಿದಿತ್ತು..

ಅಜ್ಜಿಯ ಕೆನ್ನೆ ಗಿಲ್ಲೋದು, ಜುಟ್ಟು ಎಳೆಯೋದು, ಆಕೆಯ ಕೈಚೀಲಕ್ಕೆ ಕೈಹಾಕೋದು ಹೀಗೆ... ಅಜ್ಜಿ ಕೋಪಿಸ್ಕೊಂಡ್ರೆ ಅದು ಅವರನ್ನು ಮತ್ತಷ್ಟು ಪ್ರಚೋದಿಸಿದ ಹಾಗಾಗ್ತಿತ್ತು.. ಅಜ್ಜಿ ಎಷ್ಟೇ ನೊಂದುಕೊಂಡ್ರೂ, ಬೇಡಾಂದ್ರೂ, ಅವರು ಬಸ್ಸಿಳಿವವರೆಗೂ ತರಲೆಗಳನ್ನು ನಿಲ್ಲಿಸಲೇ ಇಲ್ಲ.

ಇದು ನಿಮಗೆ ತಿಳಿದಿರಲಿ, ಬೇಕಾಗಬಹುದುಇದು ನಿಮಗೆ ತಿಳಿದಿರಲಿ, ಬೇಕಾಗಬಹುದು

Senior citizens deserve respect from the younger generation

ದೃಶ್ಯ ಕಂಡು ನನಗೇ ರೇಗಿ ಹೋಗಿತ್ತು.. ಅದೇ ಚೇಷ್ಟೆಗಳನ್ನು ಅವರು ಬೇರೆ ಯಾರಿಗಾದ್ರೂ ಮಾಡುವ ಧೈರ್ಯವಿದೆಯಾ? ಖಂಡಿತಾ ಇಲ್ಲ. ಆಕೆ ಅಜ್ಜಿ, ಆಕೆಯ ದೈಹಿಕ ಸ್ಥಿತಿಯೇ, ಅಸಹಾಯಕತೆಯೇ ಅವರು ಈ ರೀತಿ ವರ್ತಿಸುವುದಕ್ಕೆ ಕಾರಣವಾಗಿದ್ದು. ಹಾಗಾದ್ರೆ ಹಿರಿಯ ನಾಗರಿಕರನ್ನು ಈ ರೀತಿ ನಡೆಸಿಕೊಳ್ಳುವ ನಾವು ಎತ್ತ ಸಾಗುತ್ತಿದ್ದೇವೆ?

ಇಷ್ಟೇ ಅಲ್ಲ, ಸಮಾಜದಲ್ಲಿ ಪದೇ ಪದೇ ಕಾಣ್ತಾ ಇರ್ತೇವೆ, ವಯಸ್ಸಾದವರ ಬಗ್ಗೆ ಕೀಳಾಗಿ ಮಾತನಾಡುವುದು, ಅಪಹಾಸ್ಯ ಮಾಡುವುದು, ಅವರು ನಿಷ್ಪ್ರಯೋಜಕರು ಎಂದು ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು, ಅವರನ್ನು ಕೇಳುವವರಿಲ್ಲವೆಂದು ದೌರ್ಜನ್ಯ ಮಾಡುವುದು, ಬಲಹೀನತೆಗಳನ್ನು ವ್ಯಂಗ್ಯ ಮಾಡುವುದು, ವೃದ್ಧಾಶ್ರಮಕ್ಕೆ ತಳ್ಳುವುದು, ಹೀಗೆ ಒಂದು ರೀತಿ ನಮ್ಮ ಉದ್ಧಟತನಗಳು ಅವರಿಗೆ ಉಪದ್ರವವಾಗಿ ಕಾಣುತ್ತೆ..

ಸಾಮಾಜಿಕ ಭದ್ರತೆ ಅಂದ್ರೇನು ಮಗು?ಸಾಮಾಜಿಕ ಭದ್ರತೆ ಅಂದ್ರೇನು ಮಗು?

ಇದು ಮುಂದುವರಿದ ಸಮಾಜದ ದುರಂತ ಅಂತಾನೇ ಹೇಳಬಹುದು. ಹಳೇ ಬೇರಿನ ಆಧಾರ ಇದ್ದರೆ ತಾನೆ ಹೊಸ ಚಿಗುರಿನ ಅಸ್ತಿತ್ವ ತಿಳಿಯುವುದು? ಎಷ್ಟೇ ಜ್ಞಾನ ಸಂಪತ್ತಿದ್ರೂ ಆ ಪಾಂಡಿತ್ಯಕ್ಕೆ, ಅನುಭವಕ್ಕೊಂದು ಘನತೆ, ಪ್ರಬುದ್ಧತೆ ಬರೋದು ವಯಸ್ಸಾದ ಮೇಲೆಯೇ. ಅದಕ್ಕೆ ಉದಾಹರಣೆಗಳನ್ನು ಇತಿಹಾಸ ಪುರಾಣಗಳಲ್ಲಿ ಕಾಣಬಹುದು, ವಶಿಷ್ಠ, ವಿಶ್ವಾಮಿತ್ರ, ಶುಕ್ರಾಚಾರ್ಯ, ಇತಿಹಾಸದ ಚಾಣಕ್ಯ, ಇವರ ಮುಪ್ಪು ಇವರ ಪಾಂಡಿತ್ಯಕ್ಕೆ ಮುಕುಟಮಣಿಯ ಹಾಗೆ ಇತ್ತೇ ಹೊರತು.. ವಯಸ್ಸಿನಿಂದ ಅವರ ಜ್ಞಾನ ಸಂಪತ್ತು ಕಳೆಗುಂದಿದ್ದನ್ನು ನಾವು ನೋಡಿಲ್ಲ. ಅವರ ಮುದಿವಯಸಿನ ಹಿತನುಡಿ ಚಿಂತನೆಗಳೇ ಸಾಮ್ರಾಜ್ಯ ಕಟ್ಟಲೂ ನೆರವಾಯ್ತು.. ಕಿರಿಯರನ್ನು ಸನ್ಮಾರ್ಗದಲ್ಲಿ ನಡೆಸಲೂ ಕಾರಣವಾಯ್ತು.

ವಯಸ್ಸಾದ ನಂತರ ನಿಶ್ಯಕ್ತಿ, ಕಿವಿಮಂದ, ದೃಷ್ಟಿ ದೋಷಗಳು, ಸಂಪಾದನೆ ಇಲ್ಲವೆಂಬ ನಿವೃತ್ತಿಯ ನಂತರದ ಕೊರಗು, ಆಹಾರ ಸೇರದೇ ಇರುವುದು, ನಿದ್ರೆ ಬಾರದಿರುವುದು, ಇಮೋಷನಲ್ ಡಿಸ್ಟರ್ಬನ್ಸ್, ಸ್ಟ್ರೋಕ್ ಡಯಾಬಿಟೀಸ್, ಬಿಪಿ, ಶುಗರ್, ಉಸಿರಾಟದ ತೊಂದರೆ, ಹೃದಯ ಸಮಸ್ಯೆ, ಅಲ್ಝೆಮೇರ್, ಮರೆಗುಳಿತನ, ಬೆನ್ನುನೋವು ಒಂಟಿತನ ಈ ಎಲ್ಲಾ ಸಮಸ್ಯೆಗಳು ಕಾಡೋದು ಇಳಿ ವಯಸ್ಸಿನಲ್ಲೇ.

Senior citizens deserve respect from the younger generation

ಈ ಸಂದರ್ಭದಲ್ಲಿ ತಾನೇ ಹಿರಿಯರಿಗೆ ನಮ್ಮ ನೆರವು ಬೇಕಿರುವುದು! ಜೀವನವೆಲ್ಲಾ ನಮಗಾಗಿ, ನಮ್ಮ ಏಳಿಗೆಗಾಗಿ, ಶ್ರಮಿಸಿದ ಹಿರಿ ಜೀವಗಳಿಗೆ ನಾವು ಕೊಡುತ್ತಿರುವುದೇನು? ವೃದ್ಧಾಶ್ರಮದ ಭಾಗ್ಯ, ನಿರ್ಲಕ್ಷ್ಯ, ಅವಹೇಳನ, ಚುಚ್ಚುಮಾತುಗಳು, ಅವರ ಇಳಿವಯಸ್ಸಿನಲ್ಲಿ ಹಿರಿಯರು ನಮಗೆ ಭಾರವೇ ಅದ್ಯಾಕೆ ಎಲ್ಲ ಹಸುರೆಲೆಗಳು ಒಂದು ದಿನ ಹಣ್ಣೆಲೆಗಳಾಗ್ತೇವೆ ಅಂತ ಚಿಂತಿಸಲ್ಲ?

ಮಕ್ಕಳು ದೂರ ಹೋದಾಗ ಅವರಲ್ಲಿ ಎಂಪ್ಟಿ ಶೆಲ್ ಫೀಲ್ ಆಗುತ್ತೆ.. ವಯಸ್ಸಾದವರನ್ನು ಪ್ರೀತಿಯಿಂದ ನೋಡಿಕೊಳ್ಳುವ ಕಾಳಜಿ ಬೇಕು. ನಮ್ಮ ಬಾಲ್ಯ, ಹರೆಯದಲ್ಲಿ ಅವರು ನೀಡಿದ ಪ್ರೀತಿಗೆ ಪ್ರೀತಿಯನ್ನು ನೀಡುವ ಮಮಕಾರ ಬೇಕು.. ಮಕ್ಕಳ ಸಾಮೀಪ್ಯ, ಪ್ರೀತಿಯ ಮಾತುಕತೆ, ಒಡನಾಟ ಕಾಳಜಿ, ಆರೈಕೆ, ಅವರಿಗೆ ಅಗತ್ಯ... ಹಿರಿಯರು ಅನುಭವಗಳಿಂದ ತುಂಬಿದ ಕೊಡ. ವಯಸ್ಸಾಗ್ತಾ ಹೋದಂತೆ ಅವರ ಶಕ್ತಿಯೂ ಪ್ರಖರವಾಗ್ತಾ ಹೋಗ್ತದೆ. ವಯಸಾಗ್ತಾ ಹಿರಿಯರು ಕಿರಿಯರ ಪಾಲಿನ ಆಸ್ತಿಗಳಾಗ್ತಾ ಹೋಗ್ತಾರೆ. ಅವರ ಅನುಭವ, ಆಶೀರ್ವಾದಗಳು ಅತ್ಯಮೂಲ್ಯ ಸೊತ್ತುಗಳಾಗ್ತವೆ.

Senior citizens deserve respect from the younger generation

ಆದ್ರೆ ಅವರ ಬೆಲೆ ತಿಳಿಯದ ನಾವು ಅವರನ್ನು ಕಾಲದಲ್ಲಿ ಒದೀತೇವೆ, ಮುದುಕರನ್ನು ಕಡೆಗಣಿಸ್ತೇವೆ, ವೃದ್ಧಾಶ್ರಮಕ್ಕೆ ಸೇರಿಸ್ತೇವೆ. ನಿಷ್ಪ್ರಯೋಜಕರಂತೆ ಕಾಣ್ತೇವೆ, ಅವರ ಮನಸನ್ನು ನೋಯಿಸ್ತೇವೆ. ಸ್ವಾರ್ಥಿಗಳಾಗ್ತೇವೆ. ಹೀಗೆ ಮೌಲ್ಯಗಳು ಅಧೋಗತಿಗಿಳಿಯುವುದು ಆಧುನಿಕ ಸಮಾಜದ ದುರಂತ. ಹಿರಿಯರನ್ನು ಲಾಭಕ್ಕಾಗಿ ಬಳಸಿಕೊಂಡು ಕಬ್ಬಿನ ಜಲ್ಲೆಯಂತೆ ಬಿಸಾಡ್ತೇವೆ. ಹಿರಿಯರು ರಸಮುಗಿದ ಕಬ್ಬಿನ ಜಲ್ಲೆಯಲ್ಲ. ಸದಾ ರಸ ಒಸರುವ ಜಲ್ಲೆಗಳು. ಹಿರಿಯರು ದೈಹಿಕವಾಗಿ ಅಸಮರ್ಥರಾದಾಗ ದೌರ್ಜನ್ಯ ಎಸಗುವ ಕಟುಕರು ನಾವು. ವೃದ್ಧಾಪ್ಯವನ್ನೇ ಮಾನದಂಡವಾಗಿಸಿಕೊಂಡು ಅನುಭವದ ತೇಜಪುಂಜವಾಗಿರುವ ಹಿರಿಯರನ್ನು ಮೂಲೆಗುಂಪು ಮಾಡುವವರು ಸ್ವಾರ್ಥದ ಅಂಧಕಾರದಲ್ಲಿರುವವರು. ಅವರಿಗೆ ನಿಜಕ್ಕೂ ಜ್ಞಾನ ಅನ್ನೋದು ಮರೀಚಿಕೆಯೇ ಸರಿ.

English summary
Now-a-days it has become fashion to tease, provoke, anger old people by the young generation. Who will teach these people a lesson? Senior citizen are bundle of experience. Shubhashaya Jain laments the treatment meted out to the senior citizen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X