ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯೋ, ದೇವರ ಫೋಟೋ ಹಿಂದೆ ಬಚ್ಚಿಟ್ಟ ದುಡ್ಡು ಏನು ಮಾಡೋದು?

ಗೌರಿ ಹಬ್ಬಕ್ಕೆ ಕೊಟ್ಟಿದ್ದು, ಅರಿಶಿನ-ಕುಂಕುಮಕ್ಕೆ ಕರೆದಾಗ ಕೊಡುತ್ತಿದ್ದ ದಕ್ಷಿಣೆ, ತರಕಾರಿ ತಗೊಳ್ಳುವಾಗ ಚೌಕಾಶಿ ಮಾಡಿ ಉಳಿಸುತ್ತಿದ್ದ ದುಡ್ಡು...ಹೀಗೆ ಎಲ್ಲ ಹಣ ಒಟ್ಟುಗೂಡಿಸಿದ್ದೆ. ಮೊನ್ನೆಯಷ್ಟೇ 500, 1000 ರುಪಾಯಿ ಬಂಧ ಮಾಡಿಸಿದ್ದೆ.

By ಸ್ವಾತಿ ನೆಂಪೆ
|
Google Oneindia Kannada News

ಇವತ್ತು ಬೆಳಗ್ಗೆಯಿಂದ ಅಡುಗೆ ಮಾಡೋಕೆ ಆಗ್ತಿಲ್ಲ, ಬೇರೆ ಕೆಲಸ ಮಾಡೋಕೆ ಆಗ್ತಿಲ್ಲ. ಉಹುಂ, ಯಾವುದಕ್ಕೂ ಮನಸು ಬರ್ತಿಲ್ಲ. ಅಯ್ಯೋ ನೋಡಿ, ನನ್ನ ಹೆಸರು-ಊರು, ನಾನ್ಯಾರು ಅಂತ ಹೇಳದೆ ಇಷ್ಟುದ್ದ ಹೇಳ್ತಾ ಹೋಗ್ತಿದೀನಿ. ಏನ್ಮಾಡಲಿ ನನ್ನ ಚಿಂತೆ ಹೀಗೆ ಮಾಡಿಸಿದೆ.

ನನ್ನ ಹೆಸರು ಕಮಲಾ, ವಿಮಲಾ, ರಮಾ ಹೀಗೆ ಏನಾದರೂ ಅಂದುಕೊಳ್ಳಿ. ನಾನೊಬ್ಬಳು ಸಾಧಾರಣ ಗೃಹಿಣಿ. ಗಂಡ ಮನೆಯಲ್ಲಿ ಇಲ್ಲದಿದ್ದಾಗ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗೋದು, ವಾಪಸ್ ಕರೆದುಕೊಂಡು ಬರೋದು ನನ್ನ ಪಾಲಿನ ಕೆಲಸ. ಅದು ಬಿಟ್ಟರೆ ಎದುರು ಮನೆಯವರೋ, ಪಕ್ಕದ ಮನೆಯವರೋ ಅರಿಶಿನ-ಕುಂಕುಮಕ್ಕೆ ಕರೆದರೆ ಮಗಳನ್ನೂ ಜೊತೆಗೆ ಕರೆದುಕೊಂಡು ಹೋಗಿ ಬರ್ತೀನಿ.[ಬೆಂಗಳೂರಿನಲ್ಲಿ ಐನೂರು ಸಾವಿರದ ಪರದಾಟದ ದನಿಗಳು]

God photo

ಉಳಿದ ಹಾಗೆ ಮನೆ ಮುಂದೆ ಬರೋ ತರಕಾರಿ-ಹಣ್ಣಿನವರು, ಹಳೆ ಪಾತ್ರೆ, ಪೇಪರ್ ನವರ ಜೊತೆಗೆ ಒಂದಿಷ್ಟು ಚೌಕಾಶಿ ಮಾಡ್ತೀನಿ, ಅಷ್ಟೇ. ತವರು ಮನೆಗೆ ಹೋಗಬೇಕಾದ್ರೂ, ಬರಬೇಕಾದ್ರೂ ಇಗೋ ನಮ್ಮವರ ಜೋಡಿನೇ. ನಿಂಗೆ ನಯಾಪೈಸೆ ಲೋಕಜ್ಞಾನ ಇಲ್ಲ ಅನ್ನೋದು ನಮ್ಮ ಮನೆಯವರು ಸದಾ ನನ್ನ ಬಗ್ಗೆ ಹೇಳೋ ಮಾತು.

ನಿನ್ನೆ ರಾತ್ರಿ ನಮ್ಮ ಮನೆಯವರು ಟಿವಿ ಮುಂದೆ ಕೂತು ತುಂಬ ಹೆಮ್ಮೆ, ವಿಪರೀತ ಗಾಬರಿಯಿಂದ ಏನೇನೋ ಬಡಬಡಿಸ್ತಿದ್ದರು. ಹೇಗೂ ಅಂಥ ಸಮಯದಲ್ಲಿ ನಂಜೊತೆಗೆ ಅವರು ಮಾತನಾಡಲ್ಲ. ಒಂದು ವೇಳೆ ನಾನೇ ಏನಾದ್ರೂ ಕೇಳಿದರೆ, ನಿಂಗೇನು ಗೊತ್ತಾಗುತ್ತೆ ಸುಮ್ಮನೆ ಅಡುಗೆ ಆಯ್ತಾ ನೋಡು ಅಂತ ಗದರ್ತಾರೆ.[ಮದುವೆ, ಮುಂಜಿಗಳಿಗೆ ಬಿಸಿ ಮುಟ್ಟಿಸಿದ ನೋಟು ನಿಷೇಧ]

ಅದಕ್ಕೆ ಅಡುಗೆ ಮನೆ ಬಾಗಿಲಿನಿಂದ ಇಣುಕಿ ನೋಡಿದೆ. ದಪ್ಪ ದಪ್ಪ ಅಕ್ಷರಗಳಲ್ಲಿ 'ಇಂದು ಮಧ್ಯರಾತ್ರಿಯಿಂದ 500, 1000 ರುಪಾಯಿ ನೋಟು ಬಳಕೆಯಲ್ಲಿ ಇರಲ್ಲ' ಎಂಬ ಸುದ್ದಿ. ನಂಗೇ ಒಂದು ಕ್ಷಣಕ್ಕೆ ಎದೆ ಧಸಕ್ ಅಂದುಹೋಯಿತು. ವರ್ಷಗಳಿಂದ ಕೂಡಿಸಿಟ್ಟಿದ್ದ ಹಣವೆಲ್ಲ ಒಟ್ಟು ಮಾಡಿ, ಮೊನ್ನೆಯಷ್ಟೇ 500, 1000 ರುಪಾಯಿ ಬಂಧ ಮಾಡಿಸಿ, ದೇವರ ಮನೆಯಲ್ಲಿರುವ ದೊಡ್ಡ ಫೋಟೋವೊಂದರ ಹಿಂದೆ ಇಟ್ಟಿದ್ದೆ.

ಇಪ್ಪತ್ತೆರಡು ಸಾವಿರ ರುಪಾಯಿ ಆಗಿತ್ತು. ಎರಡು-ಮೂರು ವರ್ಷದಿಂದ ಕೂಡಿಸಿಟ್ಟಿದ್ದೆ. ನನ್ನ ಮಗಳು ಸರಳಾಗೆ ಒಂದು ಜೊತೆ ಜುಮುಕಿ ಮಾಡಿಸೋಣ ಅಂತ ಅಂದುಕೊಂಡಿದ್ದೆ. ಪಕ್ಕದ ಮನೆಯಲ್ಲಿ ಒಬ್ಬರು ಇದ್ದಾರೆ. ನಂಗೆ ಅವರ ಹೆಸರು ಕೂಡ ತಕ್ಷಣಕ್ಕೆ ಹೊಳೆಯಲ್ಲ ನೋಡ್ರಿ. ಅವರೇ ಬೆಲೆ ಕೂಡ ಕೇಳಿಕೊಂಡು ಬಂದಿದ್ದರು. ಇನ್ನೇನು ಅದನ್ನು ತಗೋಬೇಕು ಅಂತ ಮನಸ್ಸು ಮಾಡಿದ್ದೆ ಕಣ್ರೀ. ಅಷ್ಟರಲ್ಲಿ ಈ ಸುದ್ದಿ ಬಂತು.[ತಾತ್ಕಾಲಿಕ ಎಟಿಎಂ ಈ ಬೆಂಗಳೂರು ಟ್ರಾಫಿಕ್ ಪೊಲೀಸು!]

Gold

ನನ್ನ ತವರು ಮನೇಲಿ ಗೌರಿ ಹಬ್ಬಕ್ಕೆ ಕೊಟ್ಟಿದ್ದು, ಅರಿಶಿನ-ಕುಂಕುಮಕ್ಕೆ ಕರೆದಾಗ ಕೊಡುತ್ತಿದ್ದ ದಕ್ಷಿಣೆ, ತರಕಾರಿ ತಗೊಳ್ಳುವಾಗ ಚೌಕಾಶಿ ಮಾಡಿ ಉಳಿಸುತ್ತಿದ್ದ ದುಡ್ಡು...ಹೀಗೆ ಎಲ್ಲ ಹಣ ಒಟ್ಟುಗೂಡಿಸಿದ್ದೆ. ಆ ಒಡವೆ ತಂದು ನಮ್ಮ ಮನೆಯವರಿಗೆ ತೋರಿಸಿ, ನಾನು ಜಾಣೆ ಅಂತ ಅನ್ನಿಸಿಕೊಳ್ಳಬೇಕು ಅನ್ನೋದು ನನ್ನ ಆಸೆಯಾಗಿತ್ತು.

ಈಗ ಹೇಗಾಗಿದೆ ಅಂದರೆ, ನಮ್ಮವರಿಗೆ ಹೇಳೋ ಹಾಗಿಲ್ಲ. ನನಗೋ ಅದನ್ನು ಬದಲಾಯಿಸಿಕೊಳ್ಳೋದು ಹೇಗೆ ಅಂತ ಗೊತ್ತಿಲ್ಲ. ಅಕ್ಕಪಕ್ಕದವರನ್ನು ಕೇಳೋದು ಹೇಗೆ ಹೇಳಿ? ನನ್ನ ತಮ್ಮ ಇಲ್ಲಿಂದ ನಾನೂರು ಕಿಲೋಮೀಟರ್ ದೂರದಲ್ಲಿದ್ದಾನೆ. ಇದಕ್ಕೋಸ್ಕರ ಬಾ ಅಂದರೆ ಬಸ್ ಚಾರ್ಜೇ ಒಂದು-ಒಂದೂವರೆ ಸಾವಿರ ಬೇಕು. ನನ್ನ ಅಮ್ಮನೂ ಹೀಗೆ ಅಥವಾ ನಾನು, ನನ್ನಂಥವರೆಲ್ಲ ಹೀಗೇ. ನಮ್ಗೆ ಸಿಗುವ ಸಣ್ಣ ಮೊತ್ತವನ್ನೆಲ್ಲ ಅಕ್ಕಿ ಡಬ್ಬಿಯಲ್ಲೋ, ದೇವರ ಫೋಟೋ ಹಿಂದೇನೋ ಇಟ್ಟಿರ್ತೀವಿ.[ತರಕಾರಿ ಕೊಳ್ಳುವ ಮುನ್ನ ಚಿಲ್ರೆ ಇದೆಯಾ ನೋಡ್ಕೊಳ್ಳಿ!]

ನಮಗೇನು ಬ್ಯಾಂಕ್ ಅಕೌಂಟಾ ಇರುತ್ತಾ? ಒಂದು ವೇಳೆ ಇದ್ದರೂ ಅಲ್ಲಿಗೆ ಹೋಗಿ ಹಣ ಹಾಕುವಷ್ಟು ಸಮಯ, ತಿಳಿವಳಿಕೆ ಇರುತ್ತಾ? ಪ್ರಧಾನಿಗಳೇನೋ ಒಳ್ಳೆ ಉದ್ದೇಶಕ್ಕೆ ಹೀಗೆ ಮಾಡಿದ್ದಾರೆ ಅಂತ ನನ್ನ ಮಗಳೂ ಹೇಳಿದಳು. ಆದರೆ ನನ್ನಂಥವರಿಗೋಸ್ಕರ ಪ್ರತ್ಯೇಕವಾದ ಅನುಕೂಲ ಅವರು ಮಾಡಿಕೊಡಬೇಕಿತ್ತು. ಮಗಳ ಜುಮುಕಿ ಇನ್ನ್ಯಾವಾಗ ತಗೊಳ್ಳೋದೋ ಏನೋ? ಅಷ್ಟರಲ್ಲಿ ಚಿನ್ನದ ಬೆಲೆ ಎಷ್ಟಾಗಿರುತ್ತೋ ಏನೋ? ಒಟ್ಟಿನಲ್ಲಿ ನಾನೀಗ ಏನು ಮಾಡಬೇಕು ಅಂತ ನೀವೇ ಹೇಳಿ.

English summary
Soliloquy of a woman, who is dreaming to buy golden rings for her daughter, using her hidden treasure. But, what has happened now? The bundle of Rs 500 has become useless, as she has no knowledge how to exchange them in bank. What should she do now? Please help her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X