ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿ ಎಂದರೇನು? ಮಡಿಯ ಬಗ್ಗೆ ಶಾಸ್ತ್ರ ಏನು ಹೇಳುತ್ತದೆ?

By ವಿಷ್ಣುದಾಸ ನಾಗೇಂದ್ರಾಚಾರ್ಯ, ಮೈಸೂರು
|
Google Oneindia Kannada News

ದೇವಸ್ಥಾನಗಳಲ್ಲಿ, ಮನೆಯಲ್ಲಿ ಮಡಿ ಮಡಿ ಅಂತ ಮಡಿ ಮಾಡುವವರನ್ನು ನೀವು ನೋಡಿರಬಹುದು. ಕೆಲವರಿಗೆ ಇದು ಅತಿರೇಕ ಅಂತ ಅನ್ನಿಸಿರಲೂಬಹುದು. ಆದರೆ, ನಿಜವಾದ ಮಡಿ ಅಂದರೆ ಯಾವುದು? ಇದು ಕೆಲವರಿಗೆ ಮಾತ್ರ ಸಂಬಂಧಿಸಿದ್ದಾ ಅಥವಾ ಯಾರು ಬೇಕಾದರೂ ಆಚರಿಸಬಹುದಾಗಿದ್ದಾ? ಈ ಸೂಕ್ಷ್ಮವಾದ ವಿಷಯ ಕುರಿತು ವಿಷ್ಣುದಾಸ ನಾಗೇಂದ್ರಾಚಾರ್ಯ ಅವರು ಅತ್ಯಂತ ವಿಸ್ತೃತವಾಗಿ ವಿವರಿಸಿದ್ದಾರೆ.

ಜ್ಯೋತಿಷ್ಯ ಎನ್ನುವ ಅದ್ಭುತ ಶಾಸ್ತ್ರ ಇವತ್ತು ಮಂಗಗಳ ಕೈಯಲ್ಲಿರುವ ಮಾಣಿಕ್ಯವಾಗಿದೆ ಎಂದ ಮಾತ್ರಕ್ಕೆ ಜ್ಯೋತಿಷ್ಯದ ಬೆಲೆ ಕಡಿಮೆಯಾಗುವದಿಲ್ಲ. ಹಾಗೆಯೇ, ಮಡಿಯನ್ನು ಸರಿಯಾಗಿ ಆಚರಿಸದೆ, ಶುಚಿತ್ವಕ್ಕೆ ಬೆಲೆ ಕೊಡದೆ ಮಡಿ ಮಾಡುವ ಜನರನ್ನು ಕಂಡು ನಿಮಗೆ ರೋಸಿಹೋಗಿರಬಹುದು, ಅದಕ್ಕೆ ಉತ್ತರ - ಮಡಿಯನ್ನು ಬಿಡುವುದಲ್ಲ, ಶುದ್ಧವಾಗಿ ಮಡಿಯನ್ನು ಮಾಡಿ ಅವರಿಗೆ ಪಾಠ ಕಲಿಸುವದು. ಮಾಡಿ ಅದನ್ನು ಎನ್ನುತ್ತಾರೆ ವಿಷ್ಣುದಾಸ.

ಸ್ನಾನ ಮಾಡುವಾಗ, ಪೂಜೆ ಪುನಸ್ಕಾರ ಕೈಗೊಂಡಿರುವಾಗ, ಜಪತಪ ಮಾಡುವಾಗ, ಮೈಲಿಗೆಯಾದಾಗ, ಅಡುಗೆ ಮಾಡುವಾಗ, ಭೋಜನಕ್ಕೆ ಕುಳಿತುಕೊಳ್ಳುವಾಗ ಗಂಡಸರು ಮತ್ತು ಹೆಂಗಸರು ಯಾವ ರೀತಿ ಮಡಿಯ ನಿಮಯಗಳನ್ನು ಪಾಲಿಸಬೇಕು ಎಂದು ಕೂಡ ವಿಷ್ಣುದಾಸ ಅವರು ತಿಳಿಸಿಕೊಟ್ಟಿದ್ದಾರೆ. ಅತ್ಯಂತ ತಾಳ್ಮೆಯಿಂದ ಮುಡಿಯಿಂದ ಅಡಿಯವರೆಗೂ ಓದಿರಿ, ನಿಮ್ಮ ಅಭಿಪ್ರಾಯ ತಿಳಿಸಿರಿ. [ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ!]

Definition of Madi in Brahminism by Vishnudasa Nagendracharya

ಸ್ನಾನ ಮಾಡುವಾಗ ಮಡಿ

ಸ್ನಾನ ಎಂದರೆ ಮೈಮೇಲೆ ನೀರು ಸುರಿದುಕೊಳ್ಳುವುದಲ್ಲ. ಮೊದಲಿಗೆ ಆಚಮನ ಮಾಡಿ, ಸಂಕಲ್ಪ ಮಾಡಿ, ಶ್ರೀಹರಿಯನ್ನು ಪ್ರಾರ್ಥನೆ ಮಾಡಿ, ಗಂಗಾದಿ ತೀರ್ಥಗಳನ್ನು ಸ್ಮರಿಸಿ, ಮಂತ್ರಗಳನ್ನು ಪಠಿಸಿ ಮಾಡುವದೇ ಸ್ನಾನ. ಇದರಿಂದಲೇ ಮನುಷ್ಯ ಮಡಿಯಾಗುವದು. ಕೇವಲ ಸ್ನಾನ ಮಾಡುವದರಿಂದ ಮಡಿಯಾಗುವದೇ ಇಲ್ಲ. (ಸ್ನಾನದ ಕುರಿತು ಪ್ರತ್ಯೇಕ ಲೇಖನ ಬರೆಯುತ್ತೇನೆ)

ಹೀಗೆ ವಿಷ್ಣುಸ್ಮರಣಪೂರ್ವಕವಾಗಿ ಶುದ್ಧವಾದ ಕ್ರಮದಲ್ಲಿ ತಲೆಸ್ನಾನವನ್ನು ಮಾಡಿದ ನಂತರ ಮನುಷ್ಯ ಭಗವಂತನ ಪೂಜೆ ಮಾಡಲು ಅರ್ಹನಾಗುತ್ತಾನೆ. ಆದರೆ ಅದಕ್ಕೂ ಮತ್ತಷ್ಟು ನಿಯಮಗಳಿವೆ.

1. ಸ್ನಾನ ಮಾಡುವಾಗ ಬೆತ್ತಲೆಯಾಗಬಾರದು. ಬೆತ್ತಲೆಯಾಗಿ ಮಾಡಿದ ಸ್ನಾನದಿಂದ ಮನುಷ್ಯ ಮಡಿಯಾಗುವದಿಲ್ಲ.

2. ಸ್ನಾನ ಮಾಡುವಾಗ ಎರಡು ಬಟ್ಟೆ ಇರಲೇ ಬೇಕು. ಉಟ್ಟ ಬಟ್ಟೆ, ಮೈ ವರೆಸಿಕೊಳ್ಳುವ ಬಟ್ಟೆ.

3. ಮೈ ವರೆಸಿಕೊಳ್ಳುವ ಬಟ್ಟೆಯನ್ನೂ ತೋಯಿಸಿ ಸ್ನಾನ ಮಾಡಿ, ಆ ಬಟ್ಟೆಯನ್ನು ಹಿಂಡಿ ಅದರಿಂದಲೇ ಮೈ ವರೆಸಿಕೊಳ್ಳಬೇಕು. ಆಗ ಮಾತ್ರ ಪೂಜೆಯ ಮಡಿಗೆ ಅರ್ಹರಾಗುತ್ತೇವೆ. ಮೈಲಿಗೆಯ ಬಟ್ಟೆಯಿಂದ ವರೆಸಿಕೊಂಡರೆ ಪೂಜೆಯ ಮಡಿಗೆ ಅರ್ಹತೆ ದೊರೆಯುವದಿಲ್ಲ. ಮಡಿಯಲ್ಲಿಯೇ ವಸ್ತ್ರವನ್ನು ಒಣಗಿ ಹಾಕಿದ್ದರೆ, ಸ್ನಾನ ಮಾಡಿ, ಸ್ನಾನದ ಕಾಲದಲ್ಲಿಯೇ ಮಡಿಮಾಡಿಕೊಂಡ ಒದ್ದೆಯ ಉತ್ತರೀಯದಿಂದ ಒಮ್ಮೆ ವರೆಸಿಕೊಂಡು ಆ ಬಳಿಕ ಒಣಗಿದ ಮಡಿವಸ್ತ್ರವನ್ನು ತೆಗೆದುಕೊಂಡು, ಆ ಒಣಗಿದ ವಸ್ತ್ರದಿಂದ ಪೂರ್ಣವಾಗಿ ಮೈ ವರೆಸಿಕೊಳ್ಳಬಹುದು. ವರೆಸಿಕೊಂಡ ತಕ್ಷಣ ನೀರಿನಲ್ಲಿ ಹನ್ನೆರಡು ಊರ್ಧ್ವಪುಂಢ್ರಗಳನ್ನು ಧರಿಸಬೇಕು. ಇಲ್ಲದಿದ್ದರೆ ಮಡಿವಸ್ತ್ರವನ್ನುಡುವ ಅರ್ಹತೆ ಒದಗುವುದಿಲ್ಲ. ಕಾರಣ ಬಟ್ಟೆ ಉಡುವುದೂ ಸಹ ದೇವರ ಸೇವೆ, ಸತ್ಕರ್ಮ. ಅದನ್ನು ಮಾಡಬೇಕಾದರೆ ಮೈಮೇಲೆ ಊರ್ಧ್ವಪುಂಢ್ರಗಳಿರಲೇ ಬೇಕು.

4. ಸ್ನಾನ ಮಾಡಿದ ನಂತರ ಮೈಯಿಂದ ನೀರು ಸೋರಿಸಿಕೊಂಡು ನಡೆದು ಬರಬಾರದು. [ಬ್ರಾಹ್ಮಣ ಹುಡುಗನ ವೀರ್ಯಕ್ಕೆ ಭಾರೀ ಬೇಡಿಕೆ]

Definition of Madi in Brahminism by Vishnudasa Nagendracharya

5. ಸ್ನಾನ ಮಾಡುವಾಗ, ಮಾಡಿದ ನಂತರ ಮಾತ್ರ ಒದ್ದೆಬಟ್ಟೆ. ಆ ನಂತರ ಮೊದಲೇ ಮಡಿಯಲ್ಲಿ ಒಣಗಿ ಹಾಕಿದ ವಸ್ತ್ರವನ್ನು ಉಟ್ಟರೆ ಮಾತ್ರ ಮಡಿ. ಒದ್ದೆಯ ವಸ್ತ್ರದಲ್ಲಿ ದೇವರ ಪೂಜೆ, ಊಟ ಮಾಡುವದರಿಂದ ಒಂದು ಪ್ರತ್ಯೇಕ ನರಕವಾಗುತ್ತದೆ ಎಂದು ಧರ್ಮಶಾಸ್ತ್ರದಲ್ಲಿದೆ. ಒದ್ದೆಯ ಬಟ್ಟೆಯನ್ನುಟ್ಟು ಮಾಡುವ ಸತ್ಕರ್ಮ ಒಂದೇ, ಅದು ನಮ್ಮ ತಂದೆತಾಯಿಯರ ಅಪರಕರ್ಮ. ಒದ್ದೆಯುಟ್ಟು ಯಾವ ಸತ್ಕರ್ಮಗಳನ್ನೂ ಮಾಡುವಂತಿಲ್ಲ.

ಹೌದು, ನೀವು ಒದ್ದೆಯುಟ್ಟು ಬಡಿಸುವವರನ್ನು, ಊಟ ಮಾಡುವವರನ್ನು ನೋಡಿರಬಹುದು. ಅದು ನಿಸ್ಸಂಶಯವಾಗಿ ಮೈಲಿಗೆ. ಒದ್ದೆ ಬಟ್ಟೆಯನ್ನುಟ್ಟು ಮಲಮೂತ್ರಗಳ ವಿಸರ್ಜನೆ ಸಹಿತ ಮಾಡುವ ಹಾಗಿಲ್ಲ, ಅಂದ ಮೇಲೆ ಒದ್ದೆ ಬಟ್ಟೆಯುಟ್ಟು ಪೂಜೆ ಮಾಡುವದು, ಬಡಿಸುವದು, ಊಟ ಮಾಡುವದು ನಿಶ್ಚಿತವಾಗಿ ತಪ್ಪು.

ಗ್ರಹಣ ಮುಂತಾದ ಅತ್ಯಂತ ಅನಿವಾರ್ಯ ಪ್ರಸಂಗದಲ್ಲಿ ಒದ್ದೆಯ ಬಟ್ಟೆಯನ್ನು ಏಳು ಬಾರಿ ಚೆನ್ನಾಗಿ ಝಾಡಿಸಿ ಉಡುವ ಸಂಪ್ರದಾಯವಿದೆ. ಕಾರಣ, ಆಗ ಒಣ ಹಾಕಿದ ಮಡಿಯ ವಸ್ತ್ರ ದೊರೆಯಲು ಸಾಧ್ಯವಿಲ್ಲ. ಅದಕ್ಕಾಗಿ ಅತ್ಯಂತ ಅನಿವಾರ್ಯ ಪ್ರಸಂಗಗಳಲ್ಲಿ ಈ ನಿಯಮ. ಹೊರತು ಬೇರೆಯ ಪ್ರಸಂಗಗಳಲ್ಲಿ ಅಲ್ಲ, ಯಾವಾಗಲೂ ಅದನ್ನು ಪಾಲಿಸುವಂತಿಲ್ಲ.

6. ಹೀಗೆ ವಿಷ್ಣುಸ್ಮರಣಪೂರ್ವಕವಾಗಿ, ಶುದ್ಧವಾದ ಕ್ರಮದಲ್ಲಿ ಸ್ನಾನ ಮಾಡಿ ಬಂದು, ಹಿಂದಿನ ದಿವಸ ಒಣ ಹಾಕಿದ ಬಟ್ಟೆಯನ್ನುಟ್ಟು, ಈಗ ಸ್ನಾನ ಮಾಡಬೇಕಾದರೆ ಉಟ್ಟಿದ್ದ ಬಟ್ಟೆಯನ್ನು ನಾಳೆಗಾಗಿ ಒಣ ಹಾಕಬೇಕು. ಮಡಿಯನ್ನು ಒಣ ಹಾಕಲು ಲೋಹದ ತಂತಿಯನ್ನೋ, ಸರಳನ್ನೋ, ಮರವನ್ನೋ ಬಳಸಬೇಕು. ದಾರದ ಮೇಲೆ ಬಟ್ಟೆಯನ್ನು ಒಣ ಹಾಕಬಾರದು.

ನೀರು, ಬಟ್ಟೆ, ಮುಂತಾದವು ಮಡಿಯಲ್ಲಿ ತಂದಿದ್ದರೆ ಮಾತ್ರ ಮಡಿ. ಮೈಲಿಗೆಯಲ್ಲಿ ಮುಟ್ಟಿದ್ದರೆ ಮೈಲಿಗೆ. ಹೀಗಾಗಿ, ಮಡಿಯಲ್ಲಿ ನಾವು ಪ್ರತ್ಯೇಕ ನೀರನ್ನು ತರಬೇಕು.

7. ಶುದ್ಧ ಬಟ್ಟೆಯುಟ್ಟ ಬಳಿಕ ಆಚಮನ ಮಾಡಬೇಕು. ಆ ನಂತರ ಗೋಪೀಚಂದನ ಹಚ್ಚಿಕೊಂಡು, ಸಂಧ್ಯಾವಂದನೆ ಮಾಡಿ ಸಾಲಿಗ್ರಾಮಾದಿಗಳ ಪೂಜೆಯನ್ನು ಮಾಡಬೇಕು.

8. ದೇವರ ಪೂಜೆ ಮಾಡುವಾಗ ಮಡಿಯಲ್ಲಿರುವ ಮತ್ತೊಬ್ಬರನ್ನು ಸಹ ಮುಟ್ಟಬಾರದು. ಅವರು ಪದಾರ್ಥಗಳನ್ನು ನೆಲದ ಮೇಲಿಟ್ಟರೆ ಅವನ್ನು ತೆಗೆದುಕೊಳ್ಳಬೇಕು. [ಬ್ರಾಹ್ಮಣರೆಂಬ ರೋಮನ್ ಕ್ಯಾಥೋಲಿಕ್ಕರು!]

ಮಂತ್ರಗಳ ಜಪಕ್ಕೆ ಬೇಕಾದ ಮಡಿ

ಮೇಲಿನ ದೇವರ ಪೂಜೆಯ ಮಡಿಯಲ್ಲಿಯೇ ಮಂತ್ರಗಳ ಜಪ ಮಾಡುವದು ಉತ್ತಮ ಪಕ್ಷ. ಅದು ಸಾಧ್ಯವಿಲ್ಲದೇ ಇದ್ದಾಗ ಮೇಲೆ ಹೇಳಿದಂತೆ ಸ್ನಾನ ಮಾಡಿ, ಶುದ್ಧ ರೇಶಿಮೆಯ ವಸ್ತ್ರವನ್ನುಟ್ಟು ಅಥವಾ ಶುದ್ಧವಾದ ಧಾವಳಿಯನ್ನುಟ್ಟು (ಈ ರೇಶಿಮೆಯ, ಧಾಬಳಿಯ ವಸ್ತ್ರವನ್ನು ಊಟ ಮಾಡುವಾಗ ಉಟ್ಟಿರಬಾರದು, ಜಪಕ್ಕಾಗಿಯೇ ಪ್ರತ್ಯೇಕ ತೆಗೆದಿಟ್ಟರಬೇಕು) ಉತ್ತರೀಯವನ್ನು ಹೊದ್ದು ಮಂತ್ರಗಳ ಜಪ, ವೇದ, ವಿಷ್ಣುಸಹಸ್ರನಾಮ, ವಾಯುಸ್ತುತಿಗಳ ಪಾರಾಯಣವನ್ನು ಮಾಡಬೇಕು. ಈ ಶುದ್ಧಿ ಇಲ್ಲದೇ ಇದ್ದರೆ ಇವನ್ನು ಜಪಿಸಬಾರದು.

ಅಡುಗೆ ಮತ್ತು ಭೋಜನದ ಮಡಿ

ಮೇಲೆ ಹೇಳಿದಂತೆ ಸ್ನಾನ ಮಾಡಿ, (ಸ್ತ್ರೀಯರು ಮಾತ್ರ ತಲೆ ಸ್ನಾನ ಮಾಡದಿದ್ದರೂ ಶುದ್ಧರಾಗುತ್ತಾರೆ. ಆದರೆ ಪುರುಷರು ತಲೆಸ್ನಾನ ಮಾಡದಿದ್ದರೆ ಶುದ್ಧರಾಗುವದಿಲ್ಲ. ಹೀಗಾಗಿ ಅವರು ಪ್ರತೀನಿತ್ಯ ತಲೆಸ್ನಾನ ಮಾಡಲೇಬೇಕು) ಶುದ್ಧವಾದ ಒಣಗಿದ ವಸ್ತ್ರಗಳನ್ನುಟ್ಟು ಅಡುಗೆ ಮಾಡಬೇಕು. ಅದೇ ಮಡಿಯಲ್ಲಿ ಭೋಜನವನ್ನು ಮಾಡಬೇಕು.

ದೇವರ ಪೂಜೆಯ ಮಧ್ಯದಲ್ಲಿ, ಅಡುಗೆ ಮಾಡುವಾಗ, ಮಲಮೂತ್ರ ವಿಸರ್ಜನೆ ಮಾಡುವ ಅನಿವಾರ್ಯತೆ ಒದಗಿದಾಗ ಮತ್ತೆ ಸ್ನಾನ ಮಾಡಿಯೇ ಮುಂದುವರೆಸಬೇಕು. ಮಲಮೂತ್ರಗಳನ್ನು ಬಲವಂತವಾಗಿ ತಡೆಹಿಡಿದು ಪೂಜೆ, ಅಡುಗೆ ಮಾಡುವದು ಅಪರಾಧ, ಪಾಪ ಎಂದು ಪರಿಗಣಿಸಲ್ಪಟ್ಟಿದೆ. [ಸಜ್ಜನರು ಆಚರಿಸಬೇಕಾದ ಸತ್ಕರ್ಮ : ಮಡಿಮೈಲಿಗೆ]

ಬಟ್ಟೆ ಹರಿದಿದ್ದರೆ ಮಡಿಗೆ ಬರುವದಿಲ್ಲ

ಬಟ್ಟೆಗೆ ಅಂಚಿಲ್ಲದಿದ್ದರೆ ಮಡಿಗೆ ಬರುವದಿಲ್ಲ. ಅಂಚಿಲ್ಲದ ವಸ್ತ್ರವನ್ನುಟ್ಟು ಮಾಡುವ ಸತ್ಕರ್ಮ ಒಂದೇ, ಅದು ಅಪರಕರ್ಮ.

ಹೊಲಿದ ಬಟ್ಟೆಗಳು ಪೂಜೆಯ ಮಡಿಗೆ ಬರುವದಿಲ್ಲ. ಅಂದರೆ Shirt, pant ಮುಂತಾದವುಗಳು ಮಡಿಗೆ ಬರುವದಿಲ್ಲ. ಸೀರೆ ಪಂಚೆಗಳು ಮಾತ್ರ ಮಡಿಗೆ ಬರುವ ಬಟ್ಟೆಗಳು. ಹೆಂಗಸರ ಕಂಚುಕಕ್ಕೆ (Blouse) ಶಾಸ್ತ್ರವೇ ವಿನಾಯಿತಿ ನೀಡಿದೆ. ಅವರು ಅವಶ್ಯವಾಗಿ ಕಂಚುಕವುಟ್ಟೇ ಅಡುಗೆ ಮಾಡಬೇಕು. (ಇಲ್ಲಿಯೂ ಒಂದು ಬನ್ನಂಜೆಯ ದುರ್ವಾದವಿದೆ. ಹಿಂದಿನ ಕಾಲದಲ್ಲಿ ಹೆಂಗಸರು ಬ್ಲೌಸ್ ಧರಿಸುತ್ತಿರಲಿಲ್ಲ ಎನ್ನುವದು ಅವರ ವಿಚಿತ್ರ ದುರ್ವಾದ. ಅವರ ಶಿಷ್ಯರಾದ ಉಡುಪಿ ರಾಮನಾಥಾಚಾರ್ಯರೂ ಆ ದುರ್ವಾದವನ್ನು ಪ್ರಬಲವಾಗಿ ಖಂಡಿಸಿದ್ದಾರೆ. ಮಹಾಭಾರತದಲ್ಲಿ ಸ್ತ್ರೀಯರ ಕಂಚುಕದ ಕುರಿತು ಸ್ವಷ್ಟ ಉಲ್ಲೇಖವಿದೆ, ದ್ರೌಪದಿಯ ಮಾನರಕ್ಷಣೆಯ ಉಪನ್ಯಾಸವನ್ನು ಮಾಡುವಾಗ ಈ ಬನ್ನಂಜೆಯ ದುರ್ವಾದವನ್ನು ಮಹಾಭಾರತ ಮತ್ತು ಪುರಾಣಗಳ ಪ್ರಮಾಣಗಳೊಂದಿಗೆ ಸಂಪೂರ್ಣವಾಗಿ ಖಂಡಿಸುತ್ತೇನೆ.)

ದೇವರ ಪೂಜೆ ಮುಗಿದ ಬಳಿಕ ಊಟಕ್ಕಾಗಿ ಸಾಕಷ್ಟು ಸಮಯವಿದ್ದರೆ ಮೈಲಿಗೆಯಲ್ಲಿನ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ಆ ನಂತರ, ಶರ್ಟ್, ಪ್ಯಾಂಟ್ ಮುಂತಾದವನ್ನು ತೆಗೆದು, ಮಡಿಪಂಚೆಯನ್ನುಟ್ಟು ಕೈ ಕಾಲುಗಳನ್ನು ತೊಳೆದುಕೊಂಡು, ಶುದ್ಧವಾಗಿ ವರೆಸಿಕೊಂಡು, ಒಂದು ವಸ್ತ್ರವನ್ನು ಒದ್ದೆ ಮಾಡಿಕೊಂಡು ಅದನ್ನುಟ್ಟು ಭೋಜನಕ್ಕಾಗಿ ಒಣಗಿಸಿಕೊಂಡ ಮಡಿ ವಸ್ತ್ರವನ್ನುಟ್ಟು ಊಟ ಮಾಡಬೇಕು. ಕನಿಷ್ಠ ಪಕ್ಷ ರೇಶಿಮೆಯ ವಸ್ತ್ರವನ್ನಾದರೂ ಉಟ್ಟು ಊಟ ಮಾಡಬೇಕು. ಹೊಲಿದ ಬಟ್ಟೆಗಳನ್ನು ಹಾಕಿಕೊಂಡು, ಶೂ ಚಪ್ಪಲಿಗಳನ್ನು ಹಾಕಿಕೊಂಡು ಸರ್ವಥಾ ಊಟ ಮಾಡಬಾರದು.

ಸಾಮಾನ್ಯವಾಗಿ ಹೊರಗಿನ ಕೆಲಸಗಳಿಗೆ ಹೋಗಿ ಬಂದ ನಂತರ ಸ್ನಾನ ಮಾಡುವದು ಆರೋಗ್ಯ ಮತ್ತು ಧರ್ಮದ ದೃಷ್ಟಿಗಳಿಂದ ತುಂಬ ಒಳ್ಳೆಯದು. ಹೀಗಾಗಿ ಸಂಜೆ ಆಫೀಸಿನಿಂದ ತಿರುಗಿ ಬಂದ ನಂತರ ಸ್ನಾನ ಮಾಡುವದು ಒಳಿತು. ಆದರೆ, ಕೆಲವು ಬಾರಿ ಸಾಧ್ಯವಾಗುವದಿಲ್ಲ.

ಹೀಗಾಗಿ, ಮನೆಗೆ ಬಂದು ಕೈಕಾಲು ತೊಳೆದು, ಬಟ್ಟೆಯನ್ನು ಬಿಚ್ಚಿ ಬೇರೆ ಬಟ್ಟೆಯನ್ನುಟ್ಟು ತುಳಸೀವೃಂದಾವನಕ್ಕೆ ನಮಸ್ಕಾರ ಮಾಡಿ ತುಳಸೀಮೃತ್ತಿಕೆಯನ್ನು ಸ್ಪರ್ಶ ಮಾಡಬೇಕು. ನಂತರ ಮತ್ತೊಮ್ಮೆ ಕೈಕಾಲು ತೊಳೆದು ರೇಶಿಮೆಯ ವಸ್ತ್ರವನ್ನುಟ್ಟು ಸಂಧ್ಯಾವಂದನೆ ಊಟಗಳನ್ನು ಮಾಡತಕ್ಕದ್ದು.

ವಸ್ತುತಃ ಮಡಿ ಎನ್ನುವದು ಓದಿನಿಂದ ಕಲಿಯುವಂತಹುದ್ದಲ್ಲ. ನೋಡಿ ಕಲಿಯುವಂತಹದು. 'ಶಾಸ್ತ್ರ ಬಲ್ಲ ಪಂಡಿತ'ರನ್ನು ಹತ್ತಿರದಿಂದ ಗಮನಿಸಿದರೆ ಸರಿಯಾದ ತಿಳಿವಳಿಕೆ ಬರಲು ಸಾಧ್ಯ.

ನನ್ನ ಅನುಭವದ ನೆಲೆಗಟ್ಟಿನಲ್ಲಿ ಒಂದು ಮಾತನ್ನು ಬಹಳ ಸ್ಪಷ್ಟವಾಗಿ ಹೇಳುತ್ತೇನೆ. ಮಡಿ ಮಾಡುತ್ತೇವೆ ಎಂದು ಹೇಳುವ ತುಂಬ ಜನ ಪಂಡಿತರು ಎಂದು ಕರೆಸಿಕೊಂಡವರಿಗೇ ಮಡಿ ಎನ್ನುವದರ ಸ್ಪಷ್ಟ ಪರಿಕಲ್ಪನೆ ಇಲ್ಲ. ಹೀಗಾಗಿ, ಇವರ ದಡ್ಡತನದ ಹಾರಾಟಗಳನ್ನು ನೋಡಿ ಮಡಿಯ ಬಗ್ಗೆ ತಾತ್ಸಾರ ತಾಳಬೇಡಿ. ಶಾಸ್ತ್ರದಲ್ಲಿ ಅದಕ್ಕೆ ಬಹಳ ಮಹತ್ತ್ವವನ್ನು ನೀಡಿದ್ದಾರೆ. ಒಂದು ಉದಾಹರಣೆ ನೀಡುತ್ತೇನೆ - ಶ್ರಾದ್ದದ ದಿವಸ ಹೊಸದಾದ, ಇನ್ನೂ ಉಡದ ಬಿಳಿ ಬಟ್ಟೆಯನ್ನು ಒದ್ದೆ ಮಾಡಿ ಅಂದೇ ಒಣಗಿಸಿ ಉಟ್ಟು ಶ್ರಾದ್ಧ ಮಾಡಬೇಕು. ಒಮ್ಮೆ ಉಟ್ಟ ವಸ್ತ್ರ, ಹಿಂದಿನ ದಿವಸ ಒಣಹಾಕಿದ ವಸ್ತ್ರ ಯಾವುದೂ ಶ್ರಾದ್ಧದ ಮಡಿಗೆ ಬರುವದಿಲ್ಲ.

ಹೀಗೆ ಮಡಿ ಎನ್ನುವ ಆಚರಣೆ ಇದ್ದೇ ಇದೆ. ಜ್ಯೋತಿಷ್ಯ ಎನ್ನುವ ಅದ್ಭುತ ಶಾಸ್ತ್ರ ಇವತ್ತು ಮಂಗಗಳ ಕೈಯಲ್ಲಿರುವ ಮಾಣಿಕ್ಯವಾಗಿದೆ ಎಂದ ಮಾತ್ರಕ್ಕೆ ಜ್ಯೋತಿಷ್ಯದ ಬೆಲೆ ಕಡಿಮೆಯಾಗುವದಿಲ್ಲ. ಹಾಗೆಯೇ, ಮಡಿಯನ್ನು ಸರಿಯಾಗಿ ಆಚರಿಸದೆ, ಶುಚಿತ್ವಕ್ಕೆ ಬೆಲೆ ಕೊಡದೆ ಮಡಿ ಮಾಡುವ ಜನರನ್ನು ಕಂಡು ನಿಮಗೆ ರೋಸಿಹೋಗಿರಬಹುದು, ಅದಕ್ಕೆ ಉತ್ತರ - ಮಡಿಯನ್ನು ಬಿಡುವುದಲ್ಲ, ಶುದ್ಧವಾಗಿ ಮಡಿಯನ್ನು ಮಾಡಿ ಅವರಿಗೆ ಪಾಠ ಕಲಿಸುವದು. ಮಾಡಿ ಅದನ್ನು.

ಒಟ್ಟಾರೆ ಸಂಗ್ರಹ

ದೇವರನ್ನು, ದೇವತೆಗಳನ್ನು, ವೇದಾದಿಶಾಸ್ತ್ರಗಳನ್ನು, ಗುರುಗಳನ್ನು ನಿಂದೆ ಮಾಡುವದರಿಂದ, ದ್ವೇಷ ಮಾಡುವದರಿಂದ ಉಂಟಾಗುವ ಮೈಲಿಗೆ ಅತ್ಯಂತ ನೀಚ ಮೈಲಿಗೆ. ಇದಕ್ಕೆ ಶುದ್ಧಿಯೇ ಇಲ್ಲ. ನಿಂದೆ ಮಾಡಿಸಿಕೊಂಡ ದೇವರು, ಗುರುಗಳು ತಾವಾಗಿ ಅನುಗ್ರಹ ಮಾಡಿದರೆ ಉಂಟು ಇಲ್ಲದಿದ್ದರೆ ಇಲ್ಲವೇ ಇಲ್ಲ.

ಕೊಲೆ, ಸುಲಿಗೆ, ಹಾದರ, ಸುಳ್ಳು ಮುಂತಾದ ಅಸತ್ಕರ್ಮಗಳನ್ನು ಮಾಡುವದರಿಂದ ಉಂಟಾಗುವ ಮೈಲಿಗೆ. ಇವಕ್ಕೆ ಪ್ರಾಯಶ್ಚಿತ್ತದಿಂದ ಮಾತ್ರ ಶುದ್ಧಿ. ಈ ಪಾತಕ ಮಾಡಿದವರು ಬ್ರಾಹ್ಮಣರೇ ಅಲ್ಲ. ಸಂಧ್ಯಾವಂದನೆಗೂ ಅನರ್ಹರು ಅವರು.

ಜನನ, ಮರಣ, ರಜಸ್ವಲಾದೋಷಗಳಿಂದ ಉಂಟಾಗುವ ಮೈಲಿಗೆ. ಇದಕ್ಕೆ ಕಾಲದಿಂದ ಶುದ್ಧಿ. ಆಯಾಯಾ ಕಾಲ ಮುಗಿದ ಮೇಲೆ ಗಂಡಸರು ಜನಿವಾರವನ್ನು ಬದಲಿಸಬೇಕು. ಮೈಲಿಗೆಯ ಕಾಲದಲ್ಲಿ ಅತ್ಯಂತ ಕನಿಷ್ಠ ಸತ್ಕರ್ಮಗಳಿರುತ್ತವೆ.

ಮಲಮೂತ್ರ ವಿಸರ್ಜನೆ, ವಾಂತಿಯಿಂದ ಉಂಟಾಗುವ ಮೈಲಿಗೆ. ಕೈ ಕಾಲು ತೊಳೆದು ಆಚಮನ ಮಾಡುವದರಿಂದ ಶುದ್ಧಿ.

ಸೀನು, ಆಕಳಿಕೆಯಿಂದ ಉಂಟಾಗುವ ಮೈಲಿಗೆ. ಬಲಗಿವಿಯನ್ನು ಸ್ಪರ್ಶ ಮಾಡುವದರಿಂದ ಶುದ್ಧಿ.

ಸಂಕಲ್ಪಪೂರ್ವಕವಾಗಿ ಮಂತ್ರ ಹೇಳುತ್ತ ಮಾಡುವದರಿಂದ ಮಡಿ.

ದೇವರ ಪೂಜೆಯನ್ನು ಮಾಡುವಾಗ ಇರಬೇಕಾದ ಶುದ್ಧಿ - ಮಡಿ ಅದು ಸರ್ವಶ್ರೇಷ್ಠ ಮಡಿ. ಶುದ್ಧವಾಗಿ ಒಣಹಾಕಿದ ವಸ್ತ್ರವನ್ನುಟ್ಟು ಆಚರಿಸಬೇಕಾದ ಮಡಿ.

ಜಪ, ಪಾರಾಯಣಗಳನ್ನು ಮಾಡಬೇಕಾದರೆ ಇರಬೇಕಾದ ಮಡಿ. ಸ್ನಾನ ಮಾಡಿದ ನಂತರ ರೇಶಿಮೆಯ ವಸ್ತ್ರ, ಧಾಬಳಿಯನ್ನು ಉಟ್ಟು ಮಾಡಬೇಕಾದ ಮಡಿ.

ಮೂರನೆಯ ಹಂತದ್ದು ಭೋಜನದ ಮಡಿ. ಭೋಜನಕಾಲದಲ್ಲಿ ಉಟ್ಟ ರೇಶಿಮೆಯ ವಸ್ತ್ರವನ್ನು ಜಪಾದಿಗಳಿಗೆ ಬಳಸಬಾರದು.

English summary
What is madi? Is it just a state of being clean? What the Madhwa shastras say? Vishnudasa Nagendracharya from Mysuru explains the importance of madi (cleanliness) while taking bath, performing pooja, preparing food, during meditation etc in a methodical way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X