ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳನ್ನು ಬೆಳೆಸಲು ಇನ್ನೊಂದಿಷ್ಟು ಸೂತ್ರಗಳು

By ಮಾಧವ ವೆಂಕಟೇಶ್
|
Google Oneindia Kannada News

ಹಿಂದಿನ ಕಾಲದಲ್ಲಿ ಹೇಗಿತ್ತೋ ಗೊತ್ತಿಲ್ಲ. ಆದರೆ, ಇಂದಿನ ಕಾಲದಲ್ಲಿ ಮಾತ್ರ ಮಕ್ಕಳನ್ನು ಬೆಳೆಸುವುದು ಮತ್ತು ಅವರನ್ನು ಪ್ರಜ್ಞಾವಂತ ನಾಗರನ್ನಾಗಿ ಮಾಡುವುದು ಪಾಲಕರಿಗೆ ನಿಜಕ್ಕೂ ಒಂದು ಸವಾಲಿನ ಕೆಲಸ. ಅದರಲ್ಲೂ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು, ಅವರನ್ನು ಕಷ್ಟನಷ್ಟಗಳಿಗೆ ಸ್ಪಂದಿಸುತ್ತ ಬೆಳೆಸುವುದಿದೆಯಲ್ಲ, ಅದು ಅನುಭವಿಸಿದವರಿಗೇ ಗೊತ್ತು.

ಪಾಲಕರಾಗಿ ನಾವು ಅರ್ಥ ಮಾಡಿಕೊಳ್ಳಬೇಕಿರುವುದೇನೆಂದರೆ, ಮಕ್ಕಳು ತುಂಬಾ ಸೂಕ್ಷ್ಮಮತಿಗಳಾಗಿರುತ್ತಾರೆ. ಹಾಗೆಯೆ, ಕಾಲಕ್ಕೆ ತಕ್ಕಂತೆ ಬುದ್ಧಿವಂತಿಕೆ ಪ್ರದರ್ಶಿಸುವುದನ್ನು ಮತ್ತು ಸಂದರ್ಭಕ್ಕೆ ತಕ್ಕಂತೆ ತಮ್ಮ ನಡವಳಿಕೆಗಳನ್ನು ಬದಲಿಸಿಕೊಳ್ಳುವುದನ್ನು ಕರಗತ ಮಾಡಿಕೊಂಡಿರುತ್ತಾರೆ. ಪರಿಸ್ಥಿತಿ ಹೀಗಿದ್ದಾಗ, ಮಕ್ಕಳ ಮನಸ್ಸಿಗೆ ಘಾಸಿಯಾಗದಂತೆ ನಡೆದುಕೊಳ್ಳುವ ಜವಾಬ್ದಾರಿ ಪೋಷಕರ ಮೇಲಿರುತ್ತದೆ.

ಮಕ್ಕಳನ್ನು ಬೆಳೆಸುವ ರೀತಿ ಮತ್ತು ಅವರನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಮಾಧವ ವೆಂಕಟೇಶ್ ಅವರು ಕೆಲ ಸೂತ್ರಗಳನ್ನು ಪಾಲಕರಿಗಾಗಿ ಇಲ್ಲಿ ಸೂಚಿಸಿದ್ದಾರೆ. ಇವನ್ನು ಚಾಚೂತಪ್ಪದೆ ಅಳವಡಿಸಿಕೊಳ್ಳಬೇಕಂತೇನಿಲ್ಲ. ಆದರೆ, ಇವುಗಳ ಕುರಿತು ಚಿಂತನೆ ನಡೆಸಿದರೆ ಮಕ್ಕಳ ಬಾಳು ಹಸನಾಗುವುದರಲ್ಲಿ ಸಂಶಯವೇ ಇಲ್ಲ. [ಭಾಗ 1 : ಮಲ್ಲಿಗೆಯಂಥ ಮಕ್ಕಳ ಮನಸ್ಸನ್ನು ನೋಯಿಸಬೇಡಿ]

ಮಕ್ಕಳನ್ನು ವಸ್ತುಗಳಂತೆ ಕಾಣುವುದು ತುಚ್ಛ ವರ್ತನೆ

ಮಕ್ಕಳನ್ನು ವಸ್ತುಗಳಂತೆ ಕಾಣುವುದು ತುಚ್ಛ ವರ್ತನೆ

"ಸುಮ್ನೆ ಎಲ್ಲಾರ ತರ ನೀನೂ ಇರಕ್ಕಾಗಲ್ವಾ?" ಅನ್ನೋ ಧಾಟಿಯ ಮಾತನ್ನು ನಿಮ್ಮ ಶಬ್ದಕೋಶದಿಂದ ಇಂದೇ ತೆಗೆದುಹಾಕಿ. ಮಕ್ಕಳನ್ನು ವಸ್ತುಗಳಂತೆ ಹೋಲಿಸುವುದು ನಿಜವಾಗಿಯೂ ತುಚ್ಛ ವರ್ತನೆ. ಪ್ರಾಣಿಗಳೂ ಇದನ್ನ ಮಾಡುವುದಿಲ್ಲ. "ಸಿಂಹದ ಮರಿ ನೋಡು, ಎಷ್ಟು ಚೆನಾಗಿ ಬೇಟೆಯಾಡುತ್ತೆ. ನೀನು ಇದ್ಯ, ಗೂಬೆ" ಅಂತ ಗೂಬೆಯ ತಂದೆ ಗೋಬೆಮರಿಗೆ ಹೇಳುತ್ತಾ? ಮಕ್ಕಳಿಗೆ ಬೇರೆಯವರ ಅಳತೆಕೋಲು ಉಪಯೋಗಿಸಿ ಜೀವನ ನಡೆಸುವ ಬದಲು, ತಮ್ಮ ಮನಸ್ಸಾಕ್ಷಿಯನ್ನು ಕೇಳುವುದನ್ನು ಪರಿಚಯಿಸಿ. ಸದಾ ಬಹಿರಂಗದ ಕಡೆ ಪಂಚೇಂದ್ರಯಗಳನ್ನು ತಿರುಗಿಸುವ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಂತರ್ಮುಖಿಗಳಾಗಿ ಬೆಳೆಯುವ ಯುವಕ-ಯುವತಿಯರ ತೀವ್ರ ಅವಶ್ಯಕತೆ ಇದೆ.

ಮಕ್ಕಳಿಗೆ ಈ ಕ್ಷಣದ ಅಮೂಲ್ಯತೆಯನ್ನು ತಿಳಿಸಿ

ಮಕ್ಕಳಿಗೆ ಈ ಕ್ಷಣದ ಅಮೂಲ್ಯತೆಯನ್ನು ತಿಳಿಸಿ

ಮಕ್ಕಳಿಗೆ ಈ ಕ್ಷಣದ ಅಮೂಲ್ಯತೆಯನ್ನು ತಿಳಿಸಿ. ಅವರು ಪಶ್ಚಾತ್ತಾಪ ಮತ್ತು ಚಿಂತೆಯಿಲ್ಲದೆ ನಿರಾತಂಕವಾಗಿ ಬೆಳೆಯಲಿ. ಕೂಸಿಗೆ ಪದೇ ಪದೇ ಕೋರ್ಟ್ ಪ್ರಾಸಿಕ್ಯೂಟರ್ ತರ ಹಿಂದೆ ಮಾಡಿದ ತಪ್ಪುಗಳನ್ನು ನೆನಪಿಸುವುದನ್ನು ಬಿಡಿ. ಭೂತಕಾಲದ ತಪ್ಪುಗಳಲ್ಲಿ ತೇಲಾಡುವುದು ಭೂತವೇ ಹೊರತು, ಆರೋಗ್ಯಕರ ಮನುಷ್ಯನಲ್ಲ.

ಆಸಕ್ತಿ ಎಂಬುದು ಸ್ವಯಂಭೂ, ತಾನಾಗಿಯೇ ಬರಬೇಕು

ಆಸಕ್ತಿ ಎಂಬುದು ಸ್ವಯಂಭೂ, ತಾನಾಗಿಯೇ ಬರಬೇಕು

ನಿಮ್ಮ ಮಗ ಅಥವಾ ಮಗಳು ಓದಿನಲ್ಲಿ ಆಸಕ್ತಿ ತೋರಿಸುವುದಿಲ್ಲವಾ? ಪ್ರತೀ ಎಕ್ಸಾಮ್ನಲ್ಲೂ ತೀರ ಕಮ್ಮಿ ಮಾರ್ಕ್ಸ್ ತೊಗೋತಾರಾ? ಅವರಿಗೆ ಓದಲು ಹೇಳಿ ಹೇಳಿ ನಿಮಗೆ ಆಯಾಸವಾಗಿದ್ದೀಯಾ? ಒಂದು ಮಾತನ್ನು ನೆನಪಿಟ್ಟುಕೊಳ್ಳಿ : ಈ ಜಗತ್ತಲ್ಲಿ ಜಪ್ಪಯ್ಯ ಅಂದರೂ ಒಂದು ವಿಷಯದಲ್ಲಿ ಆಸಕ್ತಿಯಿಲ್ಲದ ಮನುಷ್ಯನಲ್ಲಿ ನೀವು ಆಸಕ್ತಿ ಹುಟ್ಟಿಸಲು ಸಾಧ್ಯವಿಲ್ಲ. ಆಸಕ್ತಿ ಎಂಬುದು ಸ್ವಯಂಭೂ; ಅದು ಅವರಿಗಾಗಿಯೇ ಬರಬೇಕು. ಮಗನಿಗೆ ನೀವು ಸ್ಥಿರವಾಗಿ, "ನಿನ್ನ ವರ್ತನೆಗಳಿಗೆ ನೀನೇ ಹೊಣೆ. ಮುಂದೆ ಯಾರೂ ನಿನ್ನ ರಕ್ಷಣೆಗೆ ಬರುವುದಿಲ್ಲ" ಎಂದು ಮುಂದಿನ ಪರಿಣಾಮವನ್ನು ವಿವರಿಸಿ, ನಿಮ್ಮ ಕೈಲಾದ ಸಹಾಯ ಮತ್ತು ಪ್ರೋತ್ಸಾಹ ನೀಡಿ. ಇದರಾಚೆಗೆ ನೀವೇನಾದರೂ ಕೂದಲು ಕೆದರಿಕೊಂಡು, ಬಿಪಿ ಏರಿಸಿಕೊಂಡು, ನೀವೂ ವೈಯಕ್ತಿಕವಾಗಿ ನೋವು ಮಾಡಿಕೊಂಡು, ಅವನಿಗೂ ಚಿತ್ರಹಿಂಸೆ ಕೊಟ್ಟರೆ, ಎಲ್ಲಾರೂ ಸೋತಂತೆ ಆಗುತ್ತದೆ.

ಸೃಜನಾತ್ಮಕ ರೀತಿಯಲ್ಲಿ ಜೀವಿಸಲು ಹೇಳಿಕೊಡಿ

ಸೃಜನಾತ್ಮಕ ರೀತಿಯಲ್ಲಿ ಜೀವಿಸಲು ಹೇಳಿಕೊಡಿ

ಉಪಯೋಗವಿಲ್ಲದಿರುವಾಗ ದೂರು ಹೇಳುವ ಅಥವಾ ಗೊಣಗಾಡುವ ನಿಮ್ಮ ವಾಕ್ಯಗಳನ್ನು ಇನ್ನು ಮುಂದೆ ಆಡಬೇಡಿ. ನೀವೇನಾದರು ಉದ್ದ ಕ್ಯೂನಲ್ಲಿ ನಿಮ್ಮ ಮಕ್ಕಳೊಂದಿಗೆ ನಿಂತಿದ್ದರೆ, "ಥೂ! *#@$%ಳು. ಅದೆಷ್ಟೊತ್ತು ಅಂತ ಮಾಡ್ತಾರೆ! ಈ ಶೆಕೆಲಿ ಜೀವ ಹೋಗ್ತಾ ಇದೆ. ಹೂಂ! ಮುಂದೆ ಹೋಗಯ್ಯ ಏನ್ ಗುರಾಯಿಸ್ತ್ಯಾ?" ಅಂತ ವಾತಾವರಣಕ್ಕೆ negativity ಚುಚ್ಚಬೇಡಿ. ಮಕ್ಕಳಿಗೆ ಪ್ರತಿ ಸನ್ನಿವೇಶದಲ್ಲೂ ಸೃಜಾನಾತ್ಮಕ ಮತ್ತು ವಿನೋದ ಭರಿತ ರೀತಿಯಲ್ಲಿ ಜೀವಿಸಲು, ನಿಮ್ಮ ಉದಾಹರಣೆಯ ಮೂಲಕ, ಹೇಳಿಕೊಡಿ.

ಅವರ ಪಾಡಿಗೆ ಅವರು ಆಡಲು, ಓದಲು ಬಿಡಿ

ಅವರ ಪಾಡಿಗೆ ಅವರು ಆಡಲು, ಓದಲು ಬಿಡಿ

ಮಕ್ಕಳಿಗೂ ಖಾಸಗಿತನವೆಂಬ ಮೌಲ್ಯವಿರುತ್ತದೆ ಎಂಬುದನ್ನು ಗುರುತಿಸಿ. ಸ್ವಲ್ಪ ಸಮಯ ಅವರ ಪಾಡಿಗೆ ಅವರು ಆಡಲು, ಓದಲು, ಮೌನವಾಗಿರಲು ಬಿಡಿ. ಅವರನ್ನೂ ಬಿಡಿ, ನಿಮ್ಮನ್ನು ನೀವೇ ಬಿಡು ಮಾಡಿಕೊಳ್ಳಿ. ಇದರಿಂದ ನಿಮ್ಮ ಜೀವನದ ಪ್ರಾಜೆಕ್ಟ್ ಗಳಿಗೆ ನಾಂದಿ ಹಾಡಲು ಅಮೂಲ್ಯ ಸಮಯ ಸಿಗುತ್ತದೆ. ನಂತರ ನೀವಿಬ್ಬರು ಒಟ್ಟಿಗೆ ಕಳೆಯುವ ಸಮಯ ಕೂಡ ಇನ್ನೂ ಸುಂದರವಾಗಿರುತ್ತದೆ.

ಮಕ್ಕಳಿಗೆ ಬೇಷರತ್ತಾದ ಪ್ರೀತಿ ಕೊಡಿ

ಮಕ್ಕಳಿಗೆ ಬೇಷರತ್ತಾದ ಪ್ರೀತಿ ಕೊಡಿ

ಕೊನೆಯದಾಗಿ, parenting ಎಂಬುದು ನೀವು ನಿರ್ವಹಿಸಬೇಕಾದ ಒಂದು ತಾತ್ಕಾಲಿಕ ಕ್ರಿಯೆ ಎಂದು ತಿಳಿದುಕೊಳ್ಳಿ. ಅದು ಒಂದು ಶಾಶ್ವತ ಕರ್ತವ್ಯವಲ್ಲ. ಪುಟಾಣಿಗಳು ಬೆಳೆದು ನಿಂತ ಮೇಲೆ ನಿಮ್ಮನ್ನು ಬಿಟ್ಟು ಪ್ರಪಂಚವನ್ನು ಎದುರಿಸಬೇಕು. ಅವರು ಬೆಳೆಯುತ್ತಿರುವಾಗ ಬೇಷರತ್ತಾದ ಪ್ರೀತಿ ಕೊಡಿ, ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ, ಲೌಕಿಕ ಮತ್ತು ಅಲೌಕಿಕ ಶಿಕ್ಷಣ ನೀಡಿ. ಆದರೆ, ಅವರು ದೊಡ್ಡವರಾಗಿ ಅವರವರ ಕನಸುಗಳನ್ನು ಪೂರೈಸಲು ಗಂಟುಮೂಟೆ ಕಟ್ಟಿಕೊಂಡು ಮನೆಯ ಹೊಸ್ತಿನಲ್ಲಿ ನಿಂತು ಹಿಂದೆ ನೋಡಿದಾಗ, ನಿಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ಮಾತ್ರ ಅವರೊಂದಿಗೆ ಕಳುಹಿಸಿ.


ಅದು ಬಿಟ್ಟು, "ಆದಷ್ಟು ಬೇಗ ಇದೇ ಊರಲ್ಲಿ ಕೆಲಸ ಹುಡ್ಕು. ಮಗ ಮತ್ತೆ ಮನೆ ಸೇರ್ಕೊಂಡ್ಬಿಟ್ರೆ ಸಾಕಪ್ಪ" ಅಥವಾ "ಗಂಡಂಗೆ ಹೇಳು ಪ್ರತೀವಾರ ನಮ್ಮ ಮನೆಗೆ ವಾಪಸ್ಸು ಕರ್ಕೊಂಡು ಬರ್ಬೇಕು ಅಂತ" ಎಂದು ಮಗ ಮತ್ತು ಮಗಳನ್ನು ಕಳಿಸಿಕೊಡುವ ತಂದೆ ತಾಯಿ, ಸಿಎಂ ಖುರ್ಚಿ ಬಿಡದ ಮಾಜಿ ಸಿಎಂ ಹಾಗೆ, ಅವರ ಪಾತ್ರ ಈಗ ಮುಗಿಯಿತು ಎಂದು ಒಪ್ಪಿಕೊಳ್ಳಲು ತಯಾರ್ ಇರುವುದಿಲ್ಲ. ಮಗ-ಸೊಸೆ, ಮಗಳು-ಅಳಿಯ ಎಲ್ಲಿರುತ್ತಾರೋ ಅಲ್ಲಿ ನೆಮ್ಮದಿಯಿಂದ ಬಾಳಲು ಬಿಟ್ಟು, ನಿಮ್ಮ ಜೀವನದ ಮುಂದಿನ ಹಂತದಲ್ಲಿ ಚೈತನ್ಯ ಭರಿತ ಹೆಜ್ಜೆಗಳನ್ನು ಇಡಲು ಶುರು ಮಾಡಿ.

"ಏಲ್ಲಾ ಸೌಕರ್ಯಗಳನ್ನು ಒದಗಿಸುವ ತಂದೆ-ತಾಯಿಯರಿಗೆ ಮಕ್ಕಳು ಸದಾ ಋಣಿಯಾಗಿರಬೇಕು. ಯಾವಾಗಲೂ ನಾವು ಹೇಳುವ ಮಾತನ್ನು ಕೇಳಿ, ನಮ್ಮ ಕೊನೆಗಾಲದಲ್ಲಿ ನಮಗೆ ಆಶ್ರಯ ನೀಡಬೇಕು" ಎಂಬ ತ್ರೇತಾಯುಗದ ಆದರ್ಶ ಮಕ್ಕಳನ್ನು ಉತ್ಪಾದನೆ ಮಾಡಲು ನೀವು ಚಡಪಡಿಸುತ್ತಿರಬಹುದು. ಆದರೆ, ಇದು ತ್ರೇತಾಯುಗದಲ್ಲೂ ಸಫಲವಾಗಲ್ಲಿಲ್ಲ; ರಾಮನ ನೆನಪಿನಲ್ಲಿ ದಶರಥ ಕೊರಗಿ ಕೊರಗಿ ಸತ್ತನು, ಕೈಕೇಯಿ ಪಶ್ಚಾತಾಪದ ಜಲಪಾತದಲ್ಲಿ ಮುಳುಗಿ ಹೋದಳು. [ಮಕ್ಕಳನ್ನು ಬೆಳೆಸೋದು ಅಂದ್ರೆ ತಮಾಷೆ ಅಲ್ಲರೀ]

ನೆನಪಿರಲಿ - ಎಲ್ಲಾ ಮಾನವ ಸಂಬಂಧಗಳಲ್ಲೂ ಪರಾವಲಂಬನೆ ಮತ್ತು ಬಾಧ್ಯತೆಗಿಂತ ಸ್ವಾವಲಂಬನೆ ಮತ್ತು ಆಯ್ಕೆಯ ಸ್ವಾತಂತ್ರ ಉತ್ತಮ. ನಿಮ್ಮ ಮಕ್ಕಳನ್ನು ಆಪ್ತ ಸ್ನೇಹಿತರಂತೆ ನೋಡಲು ಪ್ರಾರಂಭಿಸಿ. ಅವರ ಆಯ್ಕೆ-ಅನಿಸಿಕೆಗಳನ್ನು ಗೌರವಿಸಿ. ಅವರಿಗೆ ಜವಾಬ್ದಾರಿ ಮೂಡಿಸುವಂತಹ ಸ್ವಾತಂತ್ರ ಮತ್ತು ಪ್ರೀತಿಯನ್ನು ನೀಡಿ, ವಾಪಸ್ಸು ಏನೂ ಬಯಸಬೇಡಿ. ನಂತರ ನಿಮ್ಮ ಮಕ್ಕಳು ಹೇಗೆ ಜೀವನದಲ್ಲಿ ಮೇಲೇರಲು ಆರಂಭಿಸುತ್ತಾರೆ ಎಂಬುದನ್ನು ಗಮನಿಸಿ.

English summary
Bringing up children is not an easy task. Never ever act like a Hilter. Understand the mind of your children and act accordingly to make them responsible citizen. Madhava Venkatesh explains few tips for the parents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X