ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡಗ ಕನ್ನಡಿಗರನ್ನು ಕನ್ನಡಿಗರೇ ಮರೆತಿರುವ ದುರಂತ ಕಥೆ

By ಸಂಪಿಗೆ ಶ್ರೀನಿವಾಸ, ಬಡಗ ಕನ್ನಡಿಗ
|
Google Oneindia Kannada News

ಈಗ ತಮಿಳುನಾಡಿನಲ್ಲಿರುವ ನೀಲಗಿರಿ ಜಿಲ್ಲೆ ನಮ್ಮ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ದಕ್ಷಿಣಕ್ಕೆ, ಪಶ್ಚಿಮಘಟ್ಟಗಳ ಮಡಿಲಿನಲ್ಲಿರುವ ಸುಂದರ ಮಲೆನಾಡ ಜಿಲ್ಲೆ. ನೀಲಗಿರಿ ಜಿಲ್ಲೆ ಕನ್ನಡ ಅರಸರಾದ ಗಂಗರು ಹಾಗೂ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು.

ಮೈಸೂರಿನ ಒಡೆಯರು, ಉಮ್ಮತ್ತೂರಿನ ಪಾಳೇಯಗಾರರರು, ನಂತರ ಟಿಪ್ಪು ಸುಲ್ತಾನ್ ನೀಲಗಿರಿ ಜಿಲ್ಲೆಯನ್ನು ಮೈಸೂರು ರಾಜ್ಯದ ಭಾಗವಾಗಿ ಆಳ್ವಿಕೆ ನಡೆಸಿದ್ದರು. 1799ರ ಬ್ರಿಟೀಷರ ವಿರುದ್ಧದ ಯುದ್ಧದಲ್ಲಿ ಟಿಪ್ಪು ಸೋತಾಗ ಶ್ರೀರಂಗಪಟ್ಟಣದ ಒಪ್ಪಂದದಂತೆ ಅಚ್ಚಕನ್ನಡದ ನೀಲಗಿರಿ, ಕೃಷ್ಣಗಿರಿ(ಹೊಸೂರು ಸೇರಿ), ಧರ್ಮಪುರಿ ಪ್ರದೇಶಗಳನ್ನು ಬ್ರಿಟಿಷರು ಆಕ್ರಮಿಸಿ ತಮ್ಮ ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸಿಕೊಂಡರು.

Badaga : The forgotten tribe and Kannada language

ಈಗಲೂ ಈ ಪ್ರದೇಶಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಂತೆ ತಮಿಳರ ದಬ್ಬಾಳಿಕೆಯ ನಡುವೆ ಬಾಳುತ್ತಿದ್ದಾರೆ. ಇಲ್ಲಿ ನಾನು ನಿಮಗೆಲ್ಲ ಹೇಳುತ್ತಿರುವುದು ನಮ್ಮವರೇ ಆದ ನೀಲಗಿರಿಯ ಬಡಗ ಅಥವಾ ಬಡಗ ಒಕ್ಕಲಿಗರ ಬಗ್ಗೆ.

ತೋಡರು, ಇರುಳರು, ಕುರಂಬರು, ಕೊಟರು ಇತ್ಯಾದಿ ಬುಡಕಟ್ಟು ಜನಾಂಗದ ಹಾಗೆ ಬಡಗರು ಅಥವಾ ಬಡಗರು ನೀಲಗಿರಿಯ ಒಂದು ಬುಡಕಟ್ಟು ಜನಾಂಗ. ಕೆಲವು ಇತಿಹಾಸಕಾರರು ಬಡಗರು ಕರ್ನಾಟಕದ ಮೈಸೂರು ಜಿಲ್ಲೆಯ ನಂಜನಗೂಡು ಮತ್ತು ಚಾಮರಾಜನಗರ ಭಾಗದಿಂದ ನೀಲಗಿರಿಗೆ ಟಿಪ್ಪು ಕಾಲದಲ್ಲಿ ಅವನ ಉಪಟಳಕ್ಕೆ ಹೆದರಿ ವಲಸೆ ಹೋದರೆಂದು ಹೇಳುತ್ತಾರೆ. ಆದರೆ ಬಡಗರು ನೀಲಗಿರಿಯ ಒಂದು ಮೂಲ ಬುಡಕಟ್ಟು ಜನಾಂಗ ಎಂದು ಕೆಲವರು ಹೇಳುತ್ತಾರೆ.

ಬಡಗರ ಭಾಷೆ ನಮ್ಮ ಕನ್ನಡದ ಉಪಭಾಷೆ. ಕೇಳಲು ಸ್ವಲ್ಪ ಜಾನಪದ ಶೈಲಿಯ ಮೈಸೂರು ಚಾಮರಾಜನಗರ ಜಿಲ್ಲೆಯ ಗ್ರಾಮಾಂತರ ಕನ್ನಡ ಭಾಷೆಯಂತೆ ಕೇಳಿಸುತ್ತದೆ. ಬಡಗರು ನೀಲಗಿರಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜನಾಂಗ. ನೀಲಗಿರಿ ಜಿಲ್ಲೆಯ 350ಕ್ಕೂ ಹೆಚ್ಚು ಪರ್ವತ ಪ್ರದೇಶದ ಹಟ್ಟಿಗಳಲ್ಲಿ ನೆಲೆಸಿದ್ದಾರೆ. ಬಡಗರ ಮುಖ್ಯ ಕುಲ ದೇವತೆ ಹೆತ್ತೆ ಮತ್ತು ಹೆರಿಯೋದಯ್ಯ. ಜೊತೆಗೆ ಹಿಂದೂ ದೇವತೆಗಳನ್ನು ಪೂಜಿಸುತ್ತಾರೆ. ಡಿಸೆಂಬರ್ ಜನವರಿ ಸಮಯದಲ್ಲಿ ಆಚರಿಸುವ ಹೆತ್ತೆ ಅಮ್ಮನನ್ನು ಪೂಜಿಸುವ ಹೆತ್ತೆ ಹಬ್ಬ ಅವರ ಮುಖ್ಯ ಹಬ್ಬ.

Badaga : The forgotten tribe and Kannada language

ನೀಲಗಿರಿ ಜಿಲ್ಲೆಯಲ್ಲಿ ಅನೇಕ ಹಟ್ಟಿಗಳ, ಊರುಗಳ, ಬೆಟ್ಟಗಳ ಹೆಸರು ಬಡಗ ಕನ್ನಡ ಭಾಷೆಯಲ್ಲೆ ಇವೆ. ಉದಾ: ಕೊಟಗಿರಿ, ಕೊಡನಾಡು, ಮಾಸಿನ ಗುಡಿ, ನಂಜನಾಡು, ಗುಡಲೂರು, ಬಿಕ್ಕೆತ್ತಿ ಇತ್ಯಾದಿ ಊರುಗಳು ಮತ್ತು ನೀಲಗಿರಿಯ ಉದಕಮಂಡಲದಲ್ಲಿರುವ ಅತಿಎತ್ತರದ ಬೆಟ್ಟದ ಹೆಸರು ದೊಡ್ಡ ಬೆಟ್ಟ. ಕೋಲರಿ ಬೆಟ್ಟ, ಕೂನೂರು ಬೆಟ್ಟ, ಹುಲಿಕಲ್ಲು ದುರ್ಗ, ದಿಂಬಟ್ಟಿ ಬೆಟ್ಟ, ಕಲ್ಲಹಟ್ಟಿ ಜಲಪಾತ, ಘಾಟ್ ಇತ್ಯಾದಿ.

ಮಧುರವಾದ ಬಡಗ ಕನ್ನಡ ಹಾಡನ್ನು ಕೇಳಿ

ಬ್ರಿಟೀಷರಿಂದಾಗಿ ನಾವು ನೀಲಗಿರಿ ಜಿಲ್ಲೆಯ ಅಚ್ಚ ಕನ್ನಡ ಪ್ರದೇಶ ಮತ್ತು ಅಚ್ಚ ಕನ್ನಡ ಮಾತನಾಡುವ ಬಡಗರನ್ನು ಕೆಲವು ಶತಮಾನದಿಂದೀಚೆಗೆ ಕಳೆದುಕೊಂಡು ಅವರನ್ನು ಮರೆತೇಬಿಟ್ಟಿದ್ದೇವೆ. ಮದ್ರಾಸ್ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಮೇಲೆ ತಮಿಳುನಾಡಿನ ಬಯಲು ಸೀಮೆಯ ಕೊಯ್ಮತ್ತೂರು, ಈರೋಡು ಮತ್ತು ಇತರ ಜಿಲ್ಲೆಗಳಿಂದ ವಲಸೆ ಬಂದು ತಮಿಳರು ನೀಲಗಿರಿ ಜಿಲ್ಲೆಯಲ್ಲಿ ನೆಲೆಸಿ ಕಳೆದ ಇನ್ನೂರು ವರುಷಗಳಲ್ಲಿ ಅಲ್ಲಿನ ಮೂಲ ನಿವಾಸಿಗಳ ಮೇಲೆ ಶಾಲೆಗಳಲ್ಲಿ ತಮಿಳು ಭಾಷೆ ಹಾಗು ಸಂಸ್ಕೃತಿಯನ್ನು ಹೇರಿದ್ದಾರೆ ಹೇರುತ್ತಿದ್ದಾರೆ.

ಕಳೆದೆರಡು ಪೀಳಿಗೆಯ ಮತ್ತು ಇಂದಿನ ಪೀಳಿಗೆಯ ಬಡಗರು ಶಾಲೆಗಳಲ್ಲಿ ಅನಿವಾರ್ಯವಾಗಿ ತಮಿಳು ಕಲಿತು ತಮಿಳಿಗರಾಗಿ ಬಿಟ್ಟಿದ್ದಾರೆ. ತಮ್ಮ ಬಡಗ ಕನ್ನಡ ಭಾಷೆಯನ್ನು ಮನೆಗಳಲ್ಲಿ ಮಾತನಾಡುತ್ತಾರೆ ಮತ್ತು ಹಬ್ಬ ಹರಿದಿನಗಳಲ್ಲಿ ಬಡಗ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡ್ದಿದಾರೆ ಎನ್ನುವದು ಸಮಾಧಾನಕರ ವಿಷಯ. ಆದರೆ ಕನ್ನಡ ಲಿಪಿಯನ್ನು ಕಲಿಯದೇ ಕನ್ನಡದಿಂದ ದೂರವಾಗುತ್ತಿದ್ದಾರೆ.

Badaga : The forgotten tribe and Kannada language

ತಮಿಳಿನ ಪ್ರಭಾವಕ್ಕೆ ಒಳಗಾಗಿ ಇಂದಿನ ಪೀಳಿಗೆಯ ಮಕ್ಕಳಿಗೆ ತಮಿಳು ಹೆಸರುಗಳನ್ನೂ ಬಡಗರು ಇಟ್ಟುಕೊಳ್ಳುತ್ತಿದ್ದಾರೆ. ತಮಿಳು ಸಿನಿಮಾ ಪ್ರಭಾವದಿಂದ ತಮಿಳು ಅಭಿಮಾನಿಗಳಾಗಿ, ತಮ್ಮ ಮೂಲ ಕನ್ನಡವೆಂದು ಹೇಳಲು ನಾಚಿಕೆ ಮತ್ತು ಅವಮಾನ ಪಡುತ್ತಿದ್ದಾರೆ. ತಮ್ಮ ಬಡಗ ಭಾಷೆ ಕನ್ನಡದಿಂದ ಪ್ರತ್ಯೇಕ ಭಾಷೆ, ತಾವು ಕನ್ನಡಿಗರಲ್ಲವೆಂದು ಹೇಳಿಕೊಳ್ಳುತ್ತಿರುವುದು ನಿಜಕ್ಕೂ ದುರಂತ.

ಮಧುರವಾದ ಮತ್ತೊಂದು ಬಡಗ ಕನ್ನಡ ಹಾಡನ್ನು ಕೇಳಿ


ನಮ್ಮವರೆ ಆದ ನಮ್ಮ ಕನ್ನಡ ನುಡಿಯನ್ನೇ ಮಾತನಾಡುವ ಬಡಗರನ್ನು ನಾವು ಕನ್ನಡಿಗರು ಮರೆತಿದ್ದೇವೆ. ಅವರಾಡುವ ನಮ್ಮದೇ ನುಡಿಯಾದ ಬಡಗ ಕನ್ನಡ ನುಡಿಯನ್ನು ಕಡೆಗಣಿಸಿದ್ದೇವೆ. ಬಡಗ ಜನರನ್ನು ಮತ್ತೆ ಕನ್ನಡ ಸಂಸ್ಕೃತಿಯಕಡೆಗೆ ಹೊರಳುವಂತೆ, ಕನ್ನಡ ಲಿಪಿಯನ್ನು ಕಲಿಯುವಂತೆ ಮಾಡಿ ಅವರನ್ನು ನಾವು ಕನ್ನಡ ಅಭಿಮಾನಿಗಳಾಗಿ ಮಾಡಬೇಕಿದೆ.

ಬಡಗರಿಗೆ ತಾವು 2000 ವರುಷಗಳಿಗೂ ಹೆಚ್ಚು ಇತಿಹಾಸವಿರುವ ಕನ್ನಡ ನುಡಿಯವರೇ ಎಂದು ಹೇಳಿಕೊಳ್ಳುವಂತೆ ಅವರಲ್ಲಿ ಹೆಮ್ಮೆ ಮೂಡಿಸಬೇಕಿದೆ. ಅವರ ವಿಶಿಷ್ಟ ಗಿರಿಜನ ಸಂಸ್ಕೃತಿಯನ್ನು ಕರ್ನಾಟಕದಾದ್ಯಂತ ಪರಿಚಯಯಿಸಿ ಅವರ ಸಂಸ್ಕೃತಿ ಕನ್ನಡದ ಸಂಸ್ಕೃತಿಯ ಭಾಗವೆಂದು ಅವರಿಗೆ ಮನವರಿಕೆ ಮಾಡಿ, ಅವರ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ನಮ್ಮ ಸಾಹಿತಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಸಚಿವರು ಮತ್ತು ಸಾಮಾನ್ಯ ಕನ್ನಡಿಗರು ಬಡಗರ ಬಗ್ಗೆ ಆಸಕ್ತಿ ವಹಿಸಿ ಬಡಗ ನುಡಿ ಮತ್ತು ಬಡಗರನ್ನು ನಮ್ಮವರೆಂದು ಅಪ್ಪಿಕೊಂಡು ಅವರನ್ನು ಹೊರನಾಡ ಕನ್ನಡಿಗರೆಂದು ಸ್ಥಾನಮಾನ ನೀಡಿ ಗೌರವಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಬಡಗ ಜಾನಪದ ಕುಣಿತ

English summary
Badagas the tribal people residing in Nilagiri mountain range in Tamil Nadu, are originally Kannadigas from Mysuru region. They speak a dialect of Kannada. But, onslaught of Tamil has made them to forget Kannada. An eye opening article from Sampige Srinivasa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X