ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕಿನ ಮತ್ತೊಂದು 'ಮುಖ'ದ ಹೆಸರು ಮಧು

ಆತ ಹೇಳಿಕೊಂಡ ಆ ಘಟನೆ ನಿಮಗೆ ಗೊತ್ತಾಗಬೇಕು. ಅಂಥದ್ದೊಂದು ಸನ್ನಿವೇಶ ಎದುರಾದ ನಂತರವೂ ಅವರ ಬದುಕು ಯಾವುದಕ್ಕೆ ಮುಡುಪಾಗಿದೆ ಅಂತ ನೀವು ತಿಳಿದುಕೊಳ್ಳಬೇಕು.

By ಗಗನ್ ಪ್ರೀತ್
|
Google Oneindia Kannada News

ನಾಗರಹೊಳೆ ನನ್ನ ಪಾಲಿಗೆ ಮತ್ತೊಂದು ಮನೆ. ಅಲ್ಲಿಗೆ ಅದೆಷ್ಟೋ ಸಲ ಹೋಗಿದ್ದೀನಿ. ಆದರೆ ಆ ವ್ಯಕ್ತಿ ಕಣ್ಣಿಗೆ ಬಿದ್ದಿದ್ದು ಮೊನ್ನೆ. ತಲೆ ಮೇಲಿದ್ದ ಟೋಪಿಯನ್ನ ಮುಖದವರೆಗೆ ಸರಿಸಿ ಏನೋ ಬಚ್ಚಿಡುವ ಪ್ರಯತ್ನ ಮಾಡುತ್ತಿದ್ದರು. ಎದುರಿನವರಿಗೆ ಈ ಮುಖ ಬೇಸರ ಆಗುತ್ತದ್ದೇನೋ ಎಂಬ ಅಳುಕು ಅವರಲ್ಲಿ ಇದ್ದಂತೆ ಕಾಣುತ್ತಿತ್ತು.

ಇಂಥ ಸಂದರ್ಭಗಳಲ್ಲೇ ನಮ್ಮಂಥವರ ಕುತೂಹಲವೂ ಜಾಸ್ತಿ. ಆದ್ದರಿಂದಲೇ ಅವರನ್ನು ಮಾತನಾಡಿಸಿದೆ. ಆತ ಹೇಳಿಕೊಂಡ ಆ ಘಟನೆ ನಿಮಗೆ ಗೊತ್ತಾಗಬೇಕು. ಅಂಥದ್ದೊಂದು ಸನ್ನಿವೇಶ ಎದುರಾದ ನಂತರವೂ ಅವರ ಬದುಕು ಯಾವುದಕ್ಕೆ ಮುಡುಪಾಗಿದೆ ಅಂತ ನೀವು ತಿಳಿದುಕೊಳ್ಳಬೇಕು ಅಂತ ಅನ್ನಿಸಿದ್ದರಿಂದಲೇ ನೀವು ಈ ಲೇಖನ ಓದ್ತಿದ್ದೀರಿ.[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]

ಈ ವ್ಯಕ್ತಿ ಹೆಸರು ಮಧು. ಅದರರ್ಥ ಜೇನು. ಅವರು ಕಾಡಿನಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದರು. ಅಂದರೆ, ಕಾಡಿನಲ್ಲಿ ಪ್ರಾಣಿಗಳ ಬೇಟೆ ಆಗದಂತೆ ತಡೆಯೋದು, ಮರಗಳು ಕಡಿದು ಸಾಗಿಸದಂತೆ ನೋಡಿಕೊಳ್ಳೋದು ಅವರ ಕೆಲಸವಾಗಿತ್ತು.

ಅದೊಂದು ಬೆಳಗ್ಗೆ ತಮ್ಮ ಕೆಲಸದ ಸಲುವಾಗಿ ಮೂವರು ಗೆಳೆಯರ ಜತೆಗೆ ಮಧು ಕಾಡಿಗೆ ಹೊರಟಿದ್ದಾರೆ. ಅದೆಲ್ಲಿತ್ತೋ ದಿಢೀರನೆ ಕರಡಿಯೊಂದು ಪೊದೆಯಿಂದ ಹೊರಬಂದು ಮಧು ಮೇಲೆ ದಾಳಿ ಮಾಡಿದೆ. ಜತೆಯಲ್ಲಿದ್ದವರು ಗಾಬರಿಯಿಂದ ಓಡಿಹೋಗಿದ್ದಾರೆ. ಮಧು ಅವರ ಮುಖವನ್ನು ಆ ಕರಡಿ ಅಕ್ಷರಶಃ ಕಿತ್ತುಹಾಕಿದೆ. ಆ ನಂತರ ಗಾಳಿಯಲ್ಲಿ ಗುಂಡು ಹಾರಿಸಿ ಕರಡಿ ಓಡಿಸಲಾಗಿದೆ. ಅಲ್ಪ-ಸ್ವಲ್ಪ ತ್ರಾಣವಿದ್ದ ಮಧು ಕೈ ಮಾಡಿ ಕರೆದಿದ್ದಾರೆ. ನಾನು ಬದುಕಿದ್ದೀನಿ ಅಂತ ದೈನ್ಯದಿಂದ ಕಣ್ಣೀರಿಟ್ಟಿದ್ದಾರೆ.['ಜಂಗಲ್ ಡೈರಿ'-ಇದು ಗಗನ್ ನ ಕನಸಿಗೆ ದಾರಿ]

ಕನ್ನಡಿ ಸಂಭ್ರಮವಲ್ಲ..

ಕನ್ನಡಿ ಸಂಭ್ರಮವಲ್ಲ..

ಆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಪರೇಷನ್, ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಒಂದು ಹಂತಕ್ಕೆ ಮಧು ಮುಖ ನೋಡುವಂತಾಗಿದೆ. ಎಷ್ಟೋ ಚಿಕಿತ್ಸೆ ನಂತರ ಇಂದಿನ ಸ್ಥಿತಿಗೆ ತಂದಿದ್ದಾರೆ. ಇದು ಮೂರು ವರ್ಷದ ಹಿಂದೆ ನಡೆದ ಘಟನೆ. ಇಬ್ಬರು ಮಕ್ಕಳ ತಂದೆ ಮಧುಗೆ ಇವತ್ತು ಕನ್ನಡಿ ನೋಡೋದರಲ್ಲಿ ಯಾವ ಸಂಭ್ರಮವೂ ಇಲ್ಲ. ಆದರೆ ಕೆಟ್ಟ ಕನಸಿನಂತಹ ಆ ಘಟನೆಯು ಕಾಡಿನ ಬಗ್ಗೆ, ಪ್ರಾಣಿಗಳ ಬಗ್ಗೆ ಪ್ರೀತಿಯನ್ನೂ ಕಡಿಮೆ ಮಾಡಿಲ್ಲ.

ಅಪರಿಚಿತರೇನಲ್ಲ

ಅಪರಿಚಿತರೇನಲ್ಲ

ಈಗ ಅರಣ್ಯ ಇಲಾಖೆಯಲ್ಲೇ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಆತ. ಅಂದಹಾಗೆ, ಮಧು ಅವರ ಹೆಂಡತಿಗೆ ಏನು ಅನ್ನಿಸಿರಬಹುದು ಎಂದು ಮಾತನಾಡಿಸಿದರೆ, ನನಗೇ ಹಾಗೆ ಆಗಿದ್ದರೆ ಅವರು ನೋಡಿಕೊಳ್ತಿರಲಿಲ್ವಾ ಅಂತಾರೆ. ಇನ್ನೇನು ಹೇಳಬೇಕು ಅಂತ ಕೂಡ ತೋಚಲಿಲ್ಲ. ಮಧು ಅವರಿಗೆ ಕಾಡು ಅಪರಿಚಿತವೇನಾಗಿರಲಿಲ್ಲ. ಹೊಸತು ಕೂಡ ಅಲ್ಲ. ಅಂತಹವರಿಗೆ ಹೀಗಾಗಿದೆ ಅನ್ನೋದು ಆಶ್ಚರ್ಯವೇ.

ಸೋಮಾರಿ ಕರಡಿ

ಸೋಮಾರಿ ಕರಡಿ

ನಿಮಗೆ ಗೊತ್ತಿರಲಿ, ಭಾರತದಲ್ಲಿ ಕಂಡುಬರುವುದು ಸೋಮಾರಿ ಕರಡಿ. ಮೈ ತುಂಬ ಕಪ್ಪು ಕೂದಲಿರುತ್ತದೆ. ಎದೆಯ ಭಾಗದಲ್ಲಿ 'ಯು' ಆಕಾರದ ಬಿಳಿ ಕೂದಲಿರುತ್ತದೆ. ಇದರ ಮುಖ್ಯ ಆಹಾರ ಅಂದರೆ, ಹುಳ-ಹುಪ್ಪಟೆ, ಹಣ್ಣುಗಳು. ಅದರಲ್ಲೂ ಹಲಸು, ಜೇನು ಪ್ರಿಯವಾದವು. ತುಂಬ ಸಲೀಸಾಗಿ ಮರವನ್ನು ಏರುತ್ತದೆ. ವಾಸನೆ ಗ್ರಹಿಸುವ ಶಕ್ತಿಯೂ ಹೆಚ್ಚು. ಉಗುರುಗಳು ಚೂಪು-ಚೂಪು.

ಖಾಸಗಿತನ ಗೌರವಿಸಿ

ಖಾಸಗಿತನ ಗೌರವಿಸಿ

ಇನ್ನೊಂದು ಮಾತು. ನಾಗರಹೊಳೆ ಹೆಸರುವಾಸಿಯಾದ ಪ್ರವಾಸಿ ತಾಣ. ಅಂತಹ ಕಡೆ ಹೋದಾಗ ಮಧು ಅವರನ್ನು ಹುಡುಕುವ, ಮಾತನಾಡಿಸುವ ಪ್ರಯತ್ನ ಮಾಡಬೇಡಿ. ಅವರ ಖಾಸಗಿತನವನ್ನು ಗೌರವಿಸಿ. ಪ್ರಾಣಿಗಳ ದಾಳಿ ಜೀವನ ಪೂರ್ತಿ ದೊಡ್ಡ ಗಾಯ ಮಾಡುತ್ತದೆ. ದಯವಿಟ್ಟು ಹುಷಾರಾಗಿರಿ. ನಮ್ಮ ಈ ಲೇಖನದ ಉದ್ದೇಶ ಒಂದು ಘಟನೆ, ಆ ಹಿನ್ನೆಲೆ, ಬದುಕಿನ ಪರಿಚಯ ಮಾಡುವುದಾಗಿತ್ತು ಅಷ್ಟೇ.

English summary
Madhu, Nagarahole forest department operator now. Three years before bear attacked on Madhu. He saved with major injuries. How is his life now? To know that, please read this article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X