ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾನೋ ಎಂದರೆ ಎಷ್ಟು : ವಿಚಿತ್ರ, ವಿಶಿಷ್ಟ, ವಿಸ್ಮಯ!

By ಡಾ. ಕೆ.ಎಸ್.ಆರ್. ಮೂರ್ತಿ
|
Google Oneindia Kannada News

ಚಿನ್ನದ ಬಣ್ಣ ಎಲ್ಲರಿಗೂ ಗೊತ್ತು. ಬಡವರಾದರೇನು, ಶ್ರೀಮಂತರಾದರೇನು, ಬಂಗಾರದ ಬಣ್ಣವು ಎಲ್ಲ ಮಾನವರಿಗೂ ಒಂದೇ ತರಹ ಕಾಣಿಸುತ್ತದೆ. ಆದರೆ, ಚಿನ್ನವನ್ನು ಅತಿ ಸಣ್ಣ ಕಣಗಳಾಗಿ ಮಾಡಿದಾಗ ನಮ್ಮ ಕಣ್ಣಿಗೆ ಬೇರೆಯ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಚಿನ್ನದ ಕಣದ ಆಕಾರ, ಗಾತ್ರ ಬೇರೆ - ಬೇರೆ ಯಾದಾಗ ಬೇರೆ ಬಣ್ಣಗಳಲ್ಲಿ ನಮ್ಮ ಕಣ್ಣಿಗೆ ಕಾಣುತ್ತದೆ. ಉದಾಹರಣೆಗೆ, ನೀಲಿ, ಹಳದಿ ಇತ್ಯಾದಿ ಬಣ್ಣಗಳಲ್ಲಿ ಚಿನ್ನವು ನಮ್ಮ ಕಣ್ಣಿಗೆ ಕಾಣಿಸುತ್ತದೆ. ಈ ರೀತಿಯ ವ್ಯಕ್ತತೆಯು ನ್ಯಾನೋ ಗಾತ್ರ ಪ್ರಮಾಣದಲ್ಲಿ ವಿಶಿಷ್ಟ ಮತ್ತು ವಿಚಿತ್ರ.

ಇಂಗಾಲದ ನ್ಯಾನೋ ಕೊಳವೆ : ನ್ಯಾನೋ ಲೋಕದ ವಿಚಿತ್ರಕ್ಕೆ ಇಂಗಾಲದ ನ್ಯಾನೋ ಕೊಳವೆ ಇನ್ನೊಂದು ಉದಾಹರಣೆ. ಇದು ಇಂಗಾಲದ ಒಂದು ಬಹಳ ತೆಳುವಾದ ಹಾಳೆಯನ್ನು ಕೊಳವೆಯಾಗಿ ಸುತ್ತಿದರೆ ಇರುವ ಹಾಗಿರುತ್ತದೆ. ಈ ಕೊಳವೆಯ ಉದ್ದ ಸುಮಾರು ನೂರು ನ್ಯಾನೋ ಮೀಟರು. ಕೊಳವೆಯ ಸುತ್ತಳತೆಯು ಸುಮಾರು ಹತ್ತರಿಂದ ಇಪ್ಪತ್ತು ನ್ಯಾನೋ ಮೀಟರು ಇರಬಹುದು. ನಮ್ಮ ಕಣ್ಣಿಗೆ ಇದು ಇದ್ದಿಲಿನ ಧೂಳಿನಂತೆ ಕಾಣಬರುತ್ತದೆ. ಆದರೆ, ಈ ಕೊಳವೆಯ ಭೌತ ಗುಣಗಳನ್ನು ಪರೀಕ್ಷಿಸಿದರೆ "ವಜ್ರ ದೇಹಿ" ಎಂದು ಹೆಸರನ್ನು ಕೊಡಬಹುದೇನೋ!

ಈ ಇಂಗಾಲದ ನ್ಯಾನೋ ಕೊಳವೆಗಳನ್ನು ಬಣ್ಣಕ್ಕೆ ಬೆರೆಸಿ ಕಾರಿಗೆ ಹಚ್ಚಿದರೆ, ಒಂದು ದೊಡ್ದ ಸುತ್ತಿಗೆಯನ್ನು ಉಪಯೋಗಿಸಿ ಬಲವಾಗಿ ಹೊಡೆದರೂ, ಸುತ್ತಿಗೆಯೇ ರಬ್ಬರಿನ ಚೆಂಡು ಪುಟಿದೇಳುವ ಹಾಗೆ ವಾಪಸ್ಸು ಚಿಮ್ಮುತ್ತದೆಯೇ ಹೊರತು, ಕಾರಿಗೆ ಏನೂ ಅಪಾಯವಾಗಿರುವುದಿಲ್ಲ. ಇದೊಂದೇ ಅಲ್ಲ, ಈ ನ್ಯಾನೋ ಕೊಳವೆಯ ಮಹತ್ತು ಬಹು ಮುಖ. ಇದು ತಾಮ್ರ ಮತ್ತು ಬೆಳ್ಳಿಗಳಿಗಿಂತ ಅತಿ ಹೆಚ್ಚಿನ ಶಾಖ ವಾಹಕ ಮತ್ತು ವಿದ್ಯುತ್ ವಾಹಕ. ವಜ್ರ ಸಮಾನ ಕಠಿಣತೆಗೋ ಈ ಇಂಗಾಲದ ನ್ಯಾನೋ ಕೊಳವೆಗಳು ಬಹಳ ಪ್ರಸಿದ್ಧ.

ನ್ಯಾನೋ ಲೋಕವೇ ಬೇರೆಯ ರೀತಿಯಲ್ಲಿ ಇದೆ. ಪುರಾಣದಲ್ಲಿ, ಕವಿಗಳ ಕಲ್ಪನಾ ಲೋಕದಲ್ಲಿ ಮೂರು ಲೋಕಗಳನ್ನು ನಾವು ಕೇಳಿದ್ದೇವೆ. ಭೂಮಿ, ಆಕಾಶ, ಪಾತಾಳಗಳ ಜೊತೆಗೆ ನ್ಯಾನೋ ಲೋಕವು ತನ್ನದೇ ಆದ ಭೌತ ಲೋಕ.

ಒಂದು ಮೀಟರಿನಲ್ಲಿ ನೂರು ಸೆಂಟಿ ಮೀಟರುಗಳಿರುತ್ತವೆ; ಅಥವಾ, ಒಂದು ಮೀಟರನ್ನು ನೂರು ಸಮ ಭಾಗಗಳಾಗಿ ಮಾಡಿದಾಗ ನೂರರಲ್ಲಿ ಒಂದೊಂದು ಭಾಗವೂ ಸೆಂಟಿ ಮೀಟರುಗಳಿರುತ್ತವೆ. ಸೆಂಟಿ ಅಂದರೆ ನೂರರಲ್ಲಿ ಒಂದು ಬಾಗ ಎಂದರ್ಥ. ಮಿಲಿ ಮೀಟರು ಎಂದರೆ ಮೀಟರಿನಲ್ಲಿ ಸಾವಿರದ ಒಂದು ಭಾಗ. ಸಾವಿರವನ್ನು ಬರೆಯುವಾಗ ಒಂದು ಬರೆದು ಮೂರು ಸೊನ್ನೆಗಳನ್ನು ಬರೆಯುತ್ತೇವೆ. ಹಾಗೆಯೇ ಇಲ್ಲಿ ನಾವು ಭಾಗ ಮಾಡುತ್ತಿರುವುದರಿಂದ ದಶಕ ಬಿಂದುವನ್ನು ಬರೆದು ನಂತರದಲ್ಲಿ, ಮೂರು ಸ್ಥಾನಗಳಷ್ಟು ತೋರಿಸಬೇಕು. ಮೈಕ್ರೋ ಮೀಟರು ಅಂದರೆ ಮಿಲಿಮೀಟರಿನಲ್ಲಿ ಸಾವಿರದ ಒಂದು ಭಾಗ. ಇಲ್ಲಿ ನಾವು ಭಾಗ ಮಾಡುತ್ತಿರುವುದರಿಂದ ದಶಕ ಬಿಂದುವನ್ನು ಬರೆದು ನಂತರದಲ್ಲಿ, ಆರು ಸ್ಥಾನಗಳಷ್ಟು ತೋರಿಸಬೇಕು.

ನ್ಯಾನೋ ಅಂದ್ರೆ ಎಷ್ಟು? : ನ್ಯಾನೋ ಎಂದರೆ ಮೈಕ್ರೋದಲ್ಲಿ ಒಂದು ಸಾವಿರದ ಭಾಗ. ನ್ಯಾನೋ ಬರೆಯುವಾಗ ದಶಕ ಬಿಂದುವಾದ ನಂತರ ಒಂಬತ್ತು ಸ್ಥಾನಗಳಿರಬೇಕು. ಒಂದರಿಂದ ಹಿಡಿದು ಹತ್ತರಿಂದ ಗುಣಿಸಿದರೆ ನೂರು, ಮತ್ತೆ ಇನ್ನೊಂದು ಸಾರಿ ಹತ್ತರಿಂದ ಗುಣಿಸಿದರೆ ಸಾವಿರ. ಹೀಗೆಯೇ, ಹತ್ತು ಸಾವಿರ, ಲಕ್ಷ, ಹತ್ತು ಲಕ್ಷ, ಕೋಟಿ, ಹತ್ತು ಕೋಟಿ, ನೂರು ಕೋಟಿ ಗುಣಾಕಾರ ಮಾಡಬಹುದು.

ಭಾಗಾಕಾರ ಮತ್ತೆ ಮತ್ತೆ ಹತ್ತರಿಂದ ಮಾಡಿದರೆ, ಮೀಟರು ಭಾಗಗಳಾಗುತ್ತಾ ಡೆಸಿ, ಸೆಂಟಿ, ಮಿಲಿ ಆಗುವ ಹೊತ್ತಿಗೆ ಸಾವಿರದ ಒಂದು ಭಾಗ ಆಗಿರುತ್ತದೆ. ಮೀಟರನ್ನು ಹತ್ತು ಲಕ್ಷ ಭಾಗ ಅಥವಾ ಮಿಲಿಯನ್ನು ಭಾಗ ಮಾಡಿದರೆ ಮೈಕ್ರೋ ಮೀಟರು ಆಗಿಬಿಡುತ್ತದೆ. ನಮ್ಮ ತಲೆಯ ಕೂದಲು ನೂರು ಮೈಕ್ರೋ ಮೀಟರು ದಪ್ಪ ಇರಬಹುದು. ಅಂದರೆ ಮೈಕ್ರೋ ಮೀಟರು ನಮ್ಮ ಕೂದಲನ್ನು ನೂರು ಭಾಗ ಸೀಳಿದ ಹಾಗೆ. ನ್ಯಾನೋ ಮೀಟರು ಎಂದರೆ, ನಮ್ಮ ತಲೆಯ ಕೂದಲನ್ನು ಒಂದು ಲಕ್ಷ ಭಾಗ ಸೀಳಿದ ಹಾಗೆ!

English summary
What is Nano? What is the significance of Nano in the present world? How can Nano be used in various fields for better performance? An interesting and informative article by Dr. KRS Murthy, America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X