ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ಕರುಣಾಮಯಿಗಳಾ? ಈ ಲೇಖನ ಓದಿ ನೀವೇ ನಿರ್ಧರಿಸಿ

By ಮಾಧವ, ಮೈಸೂರು
|
Google Oneindia Kannada News

How compassionate are you
"compassion ಎಂದರೆ ಏನು?", ಎಂದು ಯಾರಾದರೂ ನಿಮ್ಮನ್ನು ಅಪ್ಪಿತಪ್ಪಿ ಕೇಳಿದರೆ, ನಿಮ್ಮ ಉತ್ತರ ಈ ರೀತಿ ಇರಬಹುದು, "compassion ಅಥವಾ ಕರುಣೆ ಏನು ಅಂತ ಹೇಳುವುದು ಸ್ವಲ್ಪ ಕಷ್ಟ, ಆದರೆ ಕರುಣೆಗೆ ಕೆಲವು ಉದಾಹರಣೆಗಳೆಂದರೆ, ಬಡವರಿಗೆ ಧನ ಸಹಾಯ ಮಾಡುವುದು, ಹಸಿದವರಿಗೆ ಊಟಕ್ಕೆ ಹಣ ಕೊಡುವುದು, ಪ್ರಾಕೃತಿಕ ದುರಂತಗಳಲ್ಲಿ ಕಷ್ಟಕ್ಕೆ ಒಳಗಾದ ಜನರಿಗೆ ಒಂದು ದಿನದ ನಮ್ಮ ಸಂಬಳವನ್ನು ಕಳಿಸುವುದು....", ಎಂದು ನೀವು ಕೇವಲ ಆರ್ಥಿಕ ರೀತಿಯಲ್ಲಿ ಕರುಣೆಯನ್ನು ಅರ್ಥಮಾಡಿಕೊಂಡಿರಬಹುದು.

"ಕರುಣೆ, ಅನುಕಂಪ ಎಂದರೆ ಇಷ್ಟೇನಾ?" ಎಂದು ನಿಮ್ಮನ್ನು ಮತ್ತೆ ಪ್ರಶ್ನಿಸಿದಲ್ಲಿ, ನೀವು ಸ್ವಲ್ಪ ಯೋಚನೆ ಮಾಡಿ, "ಕರುಣೆ ಎಂದರೆ charitable ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು. ಇಂತಹ ಕೆಲಸಗಳಲ್ಲಿ ಪ್ರಖ್ಯಾತರಾದ ಕೆಲವು ಮಂದಿ - ಮದರ್ ತೆರೇಸಾ, ಬಾಬಾ ಅಮ್ಟೆ, ಸುಧಾ ಮೂರ್ತಿ, ಅಣ್ಣಾ ಹಜಾರೆ, ಮೇಧಾ ಪಾಟ್ಕರ್,....", ಮುಂತಾದವರ ಹೆಸರುಗಳನ್ನು ನೀವು ಒಂದೇ ಉಸಿರಿನಲ್ಲಿ ಹೇಳಬಹುದು. ಕಡಿಮೆ ಸವಲತ್ತಿನ ಜನರಿಗೆ ಆರ್ಥಿಕ ಸಹಾಯ ಮಾಡುವುದು ಖಂಡಿತವಾಗಿ ಒಂದು ಒಳ್ಳೆಯ ಕಾರ್ಯ. ನಿಮ್ಮ ಸಮಯವನ್ನು charitable ಚಟುವಟಿಕೆಗಳಿಗೆ ನೀಡುವುದು ಇನ್ನೂ ಉತ್ತಮ. ಆದರೆ, ದೈನಂದಿನ ಬದುಕಿನಲ್ಲಿ ನಾವು ಕರುಣೆಯನ್ನು ಹೇಗೆ ತೋರಿಸಬಹುದು?

ನಮ್ಮ ದೈನಂದಿನ ಬದುಕಿನಲ್ಲಿ ಕರುಣೆಯನ್ನು ಮೂಡಿಸಲು ಬೇಕಾದ ಮೌಲ್ಯ ಸಹನೆ. ಒಂದು ಸ್ವಲ್ಪ ಸಹನೆಯನ್ನು ನಾವು ದಿನೇ ದಿನೇ ಬೆಳಿಸಿಕೊಳುತ್ತಾ ಹೋದರೆ ನಾವು ಅನ್ಯರ ಮನಸ್ಸನ್ನು ಮುಟ್ಟಬಹುದು. ಜೊತೆಗೆ ನಮ್ಮ ಬದುಕಿಗೂ ಒಂದು ಹೊಸ (ಸಹಾನುಭೂತಿಯುಳ್ಳ) ಮಾರ್ಗ ಕಲ್ಪಿಸಬಹುದು. ಈ ಕೆಳಗಿನ ತಂತ್ರಗಳು ಸಹನೆಯ ರೂಪದ ಕರುಣೆಯನ್ನು ನಿಮ್ಮಲ್ಲಿ ಮೂಡಿಸಲು ಸಹಾಯ ಮಾಡುತ್ತವೆ.

* ನಿಮ್ಮ ಸ್ನೇಹಿತ ಅವನ ಅನುಭವದ ಒಂದು ಸಕತ್ ಸ್ಟೋರಿಯನ್ನು ಜೋಶ್‌ನಿಂದ ಹೇಳುತ್ತಿರುವಾಗ, "ಅಯ್ಯೋ ಹೌದಾ? ನಂಗೂ ಹಂಗೆ ಆಯ್ತು ಕಣೋ! ಅವತ್ತು ನಾನು ಜಾನು ಬೈಕಿನಲ್ಲಿ ಹೋಗ್ತಿರ್ವಾಗ.... ", ಎಂದು ಗೆಳೆಯನ ಮಾತಿಗೆ, ಬುಲ್ಡೋಜರ್ ಹಾಗೆ, ಅಡ್ಡ ಬರಬೇಡಿ. ಗೆಳೆಯನ ಮಾತನ್ನು ಸಹೃದಯದಿಂದ ಕೇಳಿಸಿಕೊಳ್ಳಲು ಪ್ರಯತ್ನಿಸಿ. ಬೇಕಾದರೆ ಅವನ ಅನುಭವದ ಬಗ್ಗೆ ಒಂದೆರಡು ಪ್ರಶ್ನೆ ಕೇಳಿ. ಮಧ್ಯ ಬಾಯ್ ಹಾಕದೆ ನೀವು ಮಾತನ್ನು ಕೇಳಿಸಿಕೊಳ್ಳುವುದನ್ನು ರೂಢಿ ಮಾಡಿಕೊಂಡರೆ, ಮಾತಾಡುತ್ತಿರುವವರಿಗೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ. ಯಾಕೆಂದರೆ ಅನ್ಯರ ಮಾತನ್ನು ಗಮನವಿಟ್ಟು ಕೇಳುವವರ ಸಂಖ್ಯೆ ಬಲು ಕಮ್ಮಿ.

* ನೀವು ಇಂಟರ್ವ್ಯೂಗಳಲ್ಲಿ ಗಮನಿಸಿರಬಹುದು. ಕೆಲವು ಸಂದರ್ಶಕರು ಕೆಲಸದ ಅಭ್ಯರ್ಥಿಗಳನ್ನು ವೈಯಕ್ತಿಕವಾಗಿ ನಿಂದಿಸುವ ಚಟವನ್ನು ಬೆಳೆಸಿಕೊಂಡಿರುತ್ತಾರೆ. ಅಭ್ಯರ್ಥಿಗಳನ್ನು ಅಸಹನೀಯವಾದ ಒಂದು ಕೋಣೆಗೆ ನೂಕಲು ಪ್ರಯತ್ನಿಸುತ್ತಾರೆ. ಕೆಲಸ ಇರಲಿ, ಅಭ್ಯರ್ಥಿಗಳು ತಮ್ಮ ಮಾನವ ಘನತೆಯನ್ನೇ ಕಾಪಾಡಿಕೊಳ್ಳಬೇಕು. ಇಂತಹ ಸಂದರ್ಶಕರಿಗೆ ಒಂದು ಬುದ್ಧಿವಂತ, ಸರಳ ಚರ್ಚೆಯ ಮೂಲಕ ಅಭ್ಯರ್ಥಿಗಳನ್ನು ಅಳೆಯುವ ಜಾಣ್ಮೆ ಇರುವುದಿಲ್ಲ. ನಿಮ್ಮ ಬದುಕಿಗೆ ಅನ್ವಯಿಸುವಂತೆ, ನೀವು ಬೇರೆಯವರನ್ನು ವೈಯಕ್ತಿಕ ರೀತಿಯಲ್ಲಿ ನೋವಿಸದೆ ಅವರನ್ನು ತಿದ್ದುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು. ತಪ್ಪು ಮಾಡುವವರ ಮುಖಭಂಗ ಮಾಡುವ ಬದಲು, ಅವರಿಗೆ ಏಳಿಗೆಯ ಮಾರ್ಗದರ್ಶನ ನೀಡಿ ನಂತರ ಹುರಿದುಂಬಿಸಿ. ನೆನಪಿರಲಿ, ನಿಮಗೆ ಆತ್ಮೀಯರ ತಪ್ಪಿನ ನಂತರದ ಸರಿದಾರಿ ತೋರಿಸುವ ಅಧಿಕಾರವಿದೆಯೇ ಹೊರತು, ಅನ್ಯರ ಯೋಗ್ಯತೆಯನ್ನು ಪ್ರಶ್ನಿಸುವ ಹಕ್ಕು ಇಲ್ಲ. ಈ ಸಲಹೆ ಅಧ್ಯಾಪಕರಿಗೆ ಸ್ವಲ್ಪ ಜಾಸ್ತಿ ಅನ್ವಯಿಸುತ್ತದೆ.

* ಮನೆಗೆಲಸದಲ್ಲಿ ನಿಮ್ಮ ಹೆಂಡತಿಗೆ ಸ್ವಲ್ಪ ಸಹಾಯ ಮಾಡಲು ಪ್ರಾರಂಭಿಸಿ. ಬೇಕಾಗಿರಲಿ ಬಿಡಲಿ ದಿವಸ ಮೂರ್ಹೊತ್ತು ಅಡುಗೆ ಮಾಡು, ಮನೆ ಸ್ವಚ್ಛಗೊಳಿಸು, ಮಕ್ಕಳನ್ನು ನೋಡಿಕೊ, ಅತಿಥಿಗಳನ್ನು ಸತ್ಕರಿಸು, ಎಂದು ನಿಮಗೆ ಯಾರಾದರೂ ಸೂಚಿಸಿದರೆ, ಹೇಗಾಗುತ್ತದೆ ಯೋಚಿಸಿ. ಹಾಗಂತ, "ನಾಳೆಯಿಂದ ನಾನೇ ಅಡುಗೆ ಮಾಡ್ತೀನಿ", ಎಂಬ ಆತುರದ ಘೋಷಣೆಗಳ ಬಗ್ಗೆ ಎಚ್ಚರಿಕೆ! ಮೊದಲನೆ ಹೆಜ್ಜೆಯಾಗಿ ನಿಮ್ಮ ಊಟದ ತಟ್ಟೆಯನ್ನು ನೀವೇ ತೊಳೆಯುವುದು, ಶರ್ಟನ್ನು ಇಸ್ತ್ರಿ ಮಾಡುವುದು, ಮಕ್ಕಳಿಗೆ ಪಾಠ ಹೇಳುವುದು, "ಕಾಫಿ ಕೊಡೆ", ಎಂದು ರಾಜರ ಹಾಗೆ ಆಜ್ಞೆ ಮಾಡದೆ ನೀವೇ ಕಾಫಿ ಮಾಡಿಕೊಳ್ಳುವುದು, ಮುಂತಾದ ಸುಲಭ ಕೆಲಸಗಳಿಂದ ಪ್ರಾರಂಭಿಸಿ. ಹೀಗೆ ಮನೆಗೆಲಸದಲ್ಲಿ ನೀವು ಸ್ವಲ್ಪ ಕೈಹಾಕಿದರೆ ನಿಮ್ಮ ಹೆಂಡತಿಯ ಬಗ್ಗೆ (ನಂತರ ನಿಮ್ಮ ಬಗ್ಗೆ) ಒಂದು ಹೊಸ ಗೌರವ ಮೂಡುತ್ತದೆ.

* ಮಕ್ಕಳನ್ನು ಸಾಧನೆಯ ಮೆಟ್ಟಿಲಿನ ಮೇಲೆ ನೂಕುವುದನ್ನು ನಿಲ್ಲಿಸಿ. ಬೆಳೆಯುವ ಮಗುವಿನ ಚಟುವಟಿಕೆಗಳಲ್ಲಿ ಪೋಷಕರ ಪ್ರೋತ್ಸಾಹ ಮುಖ್ಯ. ಆದರೆ, ನಮ್ಮಲ್ಲಿ ಎಷ್ಟು ಜನ ಇಂತಹ ಉಸಿರುಕಟ್ಟದ ಪ್ರೋತ್ಸಾಹ ನೀಡುತ್ತೇವೆ? ಮನೆಯಲ್ಲಿ ನೋಡಿದರೆ, ದೇಸಾಯಿಯವರ ಹುಡುಗನಿಗಿಂತ ಜಾಸ್ತಿ ಮಾರ್ಕ್ಸ್ ತೆಗೆದುಕೊಳ್ಳಲು ಗದರಿಸುವ ಅಮ್ಮ. ಪಠ್ಯಪುಸ್ತಕದಲ್ಲೇ ಇರುವ ಉತ್ತರವನ್ನು ಹೊರಗೆ ಹಾಕಲು ಆಜ್ಞಾಪಿಸುವ ಶಾಲೆಯ ಮೇಷ್ಟ್ರು. ಮುಗಿಯಿತ್ತಲ್ಲ ಒಬ್ಬ ಸೃಜನಾತ್ಮಕ ಮಗುವಿನ ಶಿಕ್ಷಣಕಾರ್ಯ! ಇಂತಹ ಸಮಾಜ ಸಂಸ್ಥೆಯಿಂದ ಹೊರಬರುವುದು ಪ್ರತ್ಯೇಕ ವ್ಯಕ್ತಿಗಳಲ್ಲ, ಕೇವಲ ಫ್ಯಾಕ್ಟರಿ ಪೆಟ್ಟಿಗೆಗಳು. ಮಕ್ಕಳಿಗೆ ಒಂದು ಆರೋಗ್ಯಕರ ಬೆಳವಣಿಗೆಯ ಪರಿಸರವನ್ನು ನೀಡಲು ನೀವು ಸಹನೆ ಮತ್ತು ಸ್ವಾತಂತ್ರ ಎಂಬ ಎರಡು ಶಬ್ದಗಳನ್ನು ನೆನಪಿಟ್ಟುಕೊಳ್ಳಬೇಕು. ನೀವು ಚಿಕ್ಕಂದಿನಿಂದಲೇ ನಿಮ್ಮ ಮಕ್ಕಳಿಗೆ ಸ್ವತಂತ್ರವಾಗಿ ಯೋಚಿಸುವ, ವರ್ತಿಸುವ, ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಸಹನೆಯಿಂದ ಮೂಡಿಸಿದರೆ, ಅವರಿಗೆ ನೀವು ಒಂದು ಅಪೂರ್ವ ಉಡುಗೊರೆಯನ್ನು ಕೊಟ್ಟಂತೆ.

* ಅಂಗವಿಕಲನಾದ ಒಬ್ಬ ವ್ಯಕ್ತಿಯನ್ನು ನೀವು ಮುಂದಿನ ಬಾರಿ ಭೇಟಿಯಾದಾಗ, "ಅಂದ್ಹಾಗೆ, ಏನ್ ಆಯ್ತು ಸಾರ್ ನಿಮ್ ಕೈಗೆ?", ಎಂದು ಯಾರಿಗೂ ಪ್ರಯೋಜನವಿಲ್ಲದ ಕುತೂಹಲವನ್ನು ತೋರಿಸಬೇಡಿ. ಯೋಚನೆ ಮಾಡಿ. ಪ್ರತಿನಿತ್ಯ ಅನುಭವಿಸಬೇಕಾದ ಒಬ್ಬ ಮನುಷ್ಯನ ಅಂಗವಿಕಲತೆಯ ಬಗ್ಗೆ ನೀವು ಮತ್ತೊಮ್ಮೆ ಅವರಿಗೆ ಅದನ್ನು ಜ್ಞಾಪಿಸಿದರೆ ಅವರಿಗೆ ಹೇಗೆ ಅನಿಸಬಹುದು? ಅಂಗವಿಕಲರ ಕಷ್ಟಗಳನ್ನು ನೀವು ಯಾವುದೇ ರೀತಿ ಕಡಿಮೆ ಮಾಡಲು ಸಾಧ್ಯವಾದರೆ, ಖಂಡಿತ ಅದನ್ನು ಮಾಡಿ. ಆದರೆ, ನಯನಾಜೂಕಿಲ್ಲದ ಪ್ರಶ್ನೆಗಳನ್ನು ಕೇಳಬೇಡಿ. ಅದೇ ರೀತಿ, ಪರದೇಶದವರು ರಸ್ತೆಯಲ್ಲಿ ನಡೆಯುತ್ತಿದ್ದರೆ ತಿರುಗಿ ತಿರುಗಿ ಅವರನ್ನು ಮೃಗಾಲಯದ ಪ್ರಾಣಿಗಳಂತೆ ನೋಡುವ ಅವಶ್ಯಕತೆ ಇಲ್ಲ. ಸ್ವಲ್ಪ ಮೈತುಂಬಿದ ಗೆಳತಿಯು ತೂಕ ಇಳಿಸಿದರೆ, "ಅಯ್ಯೋ ಇದೇನು ಸುಲೇಖಾ? ಕಡ್ಡಿಯ ಹಾಗೆ ಒಣಗಿಕೊಂಡು ಬಿಟ್ಟಿದಿ. ಹುಷಾರಾಗಿದ್ಯಾ?", ಎಂದು ಯೋಚಿಸದೆ ಪದಗಳನ್ನು ಹೊರಡಿಸಬೇಡಿ. ನಿಮ್ಮ ಮಾತಿನ ಹಿಂದೆ ಕೆಟ್ಟ ಉದ್ದೇಶ ಇಲ್ಲದೆ ಇರಬಹುದು, ಆದರೆ ಭೇಟಿಯಾದ ತಕ್ಷಣ ಇಂತಹ ಮಾತನ್ನು ಕೇಳಿದರೆ ಯಾರಿಗಾದರೂ ಸ್ವಲ್ಪ ಅಸಮಾಧಾನವಾಗುತ್ತದೆ.

* ನೀವು ಗ್ರಾಹಕ ಸೇವೆಯ ಕೆಲಸದಲ್ಲಿದರೆ, ಗ್ರಾಹಕರಿಗೆ ನಾಳೆಯಿಂದ ಒಂದು ಸ್ವಲ್ಪ ಹೆಚ್ಚು ಸೌಜನ್ಯತೆಯನ್ನು ತೋರಿಸಿ. ಗ್ರಾಹಕರು ಪ್ರಶ್ನೆ ಕೇಳಿದರೆ ಉತ್ತರಿಸದೆ ಇರುವುದು, ಫೋನ್ ಮಾಡಿದರೆ, "ಯೈ! ಆಫೀಸಿಗ್ ಬನ್ನಿ, ಆಮೇಲ್ ಮಾತಾಡಣ. ದೊಡ್ದಾಗ್ ಫೋನ್ ಮಾಡ್ಬಿಟ್ರು" ಎಂದು ಹೇಳಿ ಫೋನನ್ನು ಕುಕ್ಕುವುದು, ಆಫೀಸಿಗೆ ಹೋದರೆ, "ಯೈ! ಏನಾಗ್ಬೇಕು? ನಾಳೆ ಬನ್ನಿ. ಸುಮ್ನೆ ತಲೆ ತಿಂತಾರೆ", ಎಂದು ಸಿಡುಕುವುದು, ಮುಂತಾದ ಅಸಭ್ಯ ವರ್ತನೆಗಳು ನಮ್ಮ ಸಮಾಜದಲ್ಲಿ ಎಷ್ಟು ಸಾಮಾನ್ಯ ಎಂದರೆ, ನಮಗೆ ನಾಗರಿಕ ಜನರು ಹೇಗೆ ವರ್ತಿಸುತ್ತಾರೆ ಎಂಬುದು ಮರೆತೇ ಹೋಗಿದೆ ಅನಿಸುತ್ತದೆ. ಸೇವಾ ಸಿಬ್ಬಂದಿ ಗ್ರಾಹಾಕರ ವಿಷಯದಲ್ಲಿ ಒಂದು ಸ್ವಲ್ಪ ಸಹನೆ ತೋರಿಸದರೆ ನಮ್ಮ ದೇಶ ಎಷ್ಟು ಬದಲಾಗುತ್ತದೆ, ಅಲ್ಲವೇ?

* ನಮ್ಮ ಸಮಾಜದಲ್ಲಿ ವೃದ್ಧಾಶ್ರಮಕ್ಕೆ ತಂದೆ ತಾಯಿಯರನ್ನು ಸೇರಿಸುವ ಜನರನ್ನು ಖಳನಾಯಕರಂತೆ ನೋಡುವ ಪದ್ಧತಿ ಇತ್ತೀಚಿಗೆ ಹುಟ್ಟಿಕೊಂಡಿದೆ. ಆದರೆ, ಹಿರಿಯ ತಂದೆ ತಾಯಿಯರನ್ನು ಜೊತೆಗೆ ಇಟ್ಟುಕೊಳ್ಳುವ ಅನೇಕ ಮಕ್ಕಳು ಅವರನ್ನು ಹೇಗೆ ನೋಡಿಕೊಳ್ಳುತ್ತಾರೆ ನಿಮಗೆ ಗೊತ್ತೇ? ಕೆಲವು ಹಿರಿಯರು ಮೊಮ್ಮಕ್ಕಳನ್ನು ಆಟವಾಡಿಸುವ 'ನಾನಿ'ಗಳಾದರೆ, ಇನ್ನೂ ಕೆಲವರು ತಮ್ಮ ಮಾನವೀಯ ಹಕ್ಕುಗಳನ್ನು ತ್ಯಜಿಸಿ, ಸೊಸೆಯ ಕೈಯಲ್ಲಿ ಮೂತಿ ತಿವಿಸಿಕೊಂಡು ಮೂಲೆ ಸೇರಿರುತ್ತಾರೆ. ಟಿವಿ ನೋಡಲು, ದೇವಸ್ಥಾನಕ್ಕೆ ಹೋಗಲು, ಪ್ರವಾಸ ಮಾಡಲು, ಹಣ ಖರ್ಚು ಮಾಡಲು, ಮುಂತಾದ ಸಣ್ಣ ಪುಟ್ಟ ವಿಷಯಗಳಿಗೂ ಅನುಮತಿ ಬೇಡಬೇಕಾದ ವಿಷಾದಕರ ಪರಿಸ್ಥಿತಿ ಕೆಲವು ಹಿರಿಯರಿಗೆ ಬಂದುಬಿಡುತ್ತದೆ. ಇಂತಹ ಸೆರೆಮನೆಯ ವಾತಾವರಣದಲ್ಲಿ ನೆಲೆಸುವುದಕ್ಕಿಂತ, 'ನಮ್ಮದು' ಎನಿಸಿಕೊಳ್ಳುವ, ವೈವಿಧ್ಯಮಯ ಹಿನ್ನೆಲೆಗಳ ಜನರಿರುವ, ಶಾಂತಿ-ನೆಮ್ಮದಿಗಳಿಂದ ಕೂಡಿದ ವೃದ್ಧಾಶ್ರಮ ಸೇರುವುದು ಎಷ್ಟೋ ಮೇಲು. ಎಲ್ಲಾರೂ ಹೆತ್ತವರನ್ನು ವೃದ್ಧಾಶ್ರಮಗಳಿಗೆ ಸೇರಿಸಬೇಕು ಎಂದು ಇಲ್ಲಿ ಸೂಚಿಸಲಾಗಿಲ್ಲ. ಆದರೆ, ಒಬ್ಬ ಹಿರಿಯ ವ್ಯಕ್ತಿಯನ್ನು ನೋಡಿಕೊಳ್ಳಲು ಬೇಕಾದ ಸಮಯ ಮತ್ತು ಶ್ರಮಗಳನ್ನು ಒದಗಿಸಲು, ನಿಮ್ಮ ಜೀವನ ಸಂದರ್ಭದ ಕಾರಣದಿಂದಾಗಿ, ಸಾಧ್ಯವಾಗದೆ ಇರಬಹುದು. ಆಗ, ಅವರಿಗಾಗಿ ಬೇರೆ ರೀತಿಯ ಆರೈಕೆಯ ಹಾದಿಗಳನ್ನು ಪರಿಶೋಧಿಸುವುದರಲ್ಲಿ ತಪ್ಪೇನೂ ಇಲ್ಲ.

ನೋಡಿದಿರಲ್ಲ, ಕರುಣೆಯ ವಿವಿಧ ಮುಖಗಳನ್ನು. ಈ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಕ್ರಮೇಣವಾಗಿ ಅಳವಡಿಸಿಕೊಳ್ಳಿ. ನಂತರ ನಿಮ್ಮ ಬದುಕಿನಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ.

English summary
How compassionate are you? Please ask yourself this question. Being sympathetic is not the only way of being compassionate. There are several faces for compassion. Read this article by Madhava Venkatesh from Mysore and decide yourself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X