ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರ ಸಾವರಕರ್ ದೇಹತ್ಯಾಗ ಮಾಡಿ ಅಮರರಾದ ದಿನ

By * ಅಂಜಲಿ ರಾಮಣ್ಣ
|
Google Oneindia Kannada News

Andaman Kalapani jail cell
ಅಪ್ರತಿಮ ಸ್ವಾತಂತ್ರ್ಯ ಯೋಧ ವಿನಾಯಕ ದಾಮೋದರ ಸಾವರಕರ್ (ವೀರ ಸಾವರಕರ್) ಅವರನ್ನು ನೆನೆಯಲು ಇಂಥದೊಂದು ದಿನವೇ ಬೇಕಿಲ್ಲ. ಅಪ್ಪಟ ಹಿಂದೂತ್ವವಾದಿ ಸಾವರಕರ್ ಅವರು ಅಂಡಮಾನ್‌ನ ಕಾಲಾಪಾನಿ ಸೆಲ್ಯುಲಾರ್ ಬಂಧಿಖಾನೆಯಲ್ಲಿ 13 ವರ್ಷಗಳ ಕಾಲ ಶಿಕ್ಷೆ ಅನುಭವಿಸಿರುವುದು ಎಲ್ಲರಿಗೂ ತಿಳಿದ ವಿಷಯ. ನಂತರ ಬಿಡುಗಡೆಯಾಗಿ ಅವರು ದೇಹತ್ಯಾಗ ಮಾಡಿದ್ದು ಫೆ.26ರಂದು. ಅವರ ಅಂತ್ಯಕ್ರಿಯೆಯಾಗಿದ್ದು ಫೆ.27ರಂದು ಎರಡೂವರೆ ಸಾವಿರ ಸಮವಸ್ತ್ರಧಾರಿಗಳ ಸಮ್ಮುಖದಲ್ಲಿ. ಈ ಸಂದರ್ಭದಲ್ಲಿ, ಅಂಡಮಾನಿಗೆ ಭೇಟಿ ನೀಡಿ ಕಾಲಾಪಾನಿ ಜೈಲನ್ನು ಕಂಡು ಕಣ್ಣೀರಾಗಿ ಬಂದ ಲೇಖಕಿ ವೀರ ಸಾವರ್ಕರ್ ಅವರನ್ನು ಸ್ಮರಿಸಿಕೊಂಡಿದ್ದಾರೆ.

***

ಕಾಲೇಜಿನ ದಿನಗಳ ಖಾಸ ಗೆಳತಿಯರಿಬ್ಬರು ಅಂಡಮಾನಿನವರು. ಆ ಸ್ಥಳಕ್ಕೆ ಭೇಟಿ ನೀಡಬೇಕೆನ್ನುವ ನನ್ನ ಆಸಕ್ತಿ ಅಷ್ಟಕ್ಕೆ ಮಾತ್ರ ಸೀಮಿತವಾಗಿತ್ತು. ಆ ದಿನ ದ್ವೀಪಕ್ಕೆ ಕಾಲಿಟ್ಟಾಗ ಸೂರ್ಯನನ್ನೂ ಸುಡೋ ಬಿಸಿಲು. ಆದರೂ ಪೋರ್ಟ್ಬ್ಲೇರ್ ವಿಮಾನ ನಿಲ್ದಾಣದ ಹೆಸರು 'ವೀರ್ ಸಾವರ್ಕರ್’ ಅಂತ ನೋಡಿ ಬಿಸಿಲೂ ಮನಸ್ಸಿಗೆ ತಂಪಾಯ್ತು. ಪ್ರವಾಸದ ಎರಡು ದಿನಗಳಲ್ಲೇ ತಿಳಿಯಿತು, ಅಲ್ಲಿ ಹುಡುಗೀರು ಹೆಂಗಸರ ತರಹ ಇಲ್ಲ. ಹುಡುಗರು ಅವರನ್ನು ಕಣ್ಣೆತ್ತಿಯೂ ನೋಡೋಲ್ಲ. ಸ್ವಚ್ಛತೆ ಇಲ್ಲ. ದೊಡ್ಡ ದೊಡ್ಡ ಷಾಪಿಂಗ್ ಮಾಲ್‍ಗಳಿಲ್ಲ. ಸಿನೆಮಾ ಹಾಲ್ ಅಂತು ಒಂದೂ ಇಲ್ಲ. ಊಟದಲ್ಲಿ ಉಪ್ಪಿಲ್ಲ, ಖಾರವಿಲ್ಲ. ನಕ್ಷತ್ರಗಳನ್ನು ಬಾವುಟಗಳಲ್ಲಿ ಹಾರಿಸುವ ಆಸ್ಪತ್ರೆಗಳಿಲ್ಲ. ರಸ್ತೆಗಳಿಲ್ಲ. ಅದಿಲ್ಲ. ಇದಿಲ್ಲ. ಎಲ್ಲಾ ಇಲ್ಲಗಳ ನಡುವೆಯೂ ದಂಡಿಯಾಗಿ ಇರುವುದು ಎಂದರೆ ಅಷ್ಟ ದಿಕ್ಕುದೆಸೆಗಳಲ್ಲೂ ಸಮುದ್ರ ಮತ್ತು ವೀರ ಸಾವರ್ಕರ್!

1857ರ ಮಹಾಯುದ್ಧದಲ್ಲಿನ ಭಾರತೀಯ ಸ್ವಾತಂತ್ರ್ಯಯೋಧರನ್ನು ಗಡಿಪಾರು ಮಾಡಿ ಖೈದಿಗಳನ್ನಾಗಿಡಲು ನಿರ್ಮಿಸಿದ್ದ ಸೆಲ್ಯುಲಾರ್ ಜೇಲ್ ಈಗಿಲ್ಲಿ ರಾಷ್ಟ್ರೀಯ ಸ್ಮಾರಕ. ಬೆಳಕು-ಧ್ವನಿಯ ಮೂಲಕ ಇಲ್ಲಿ ಇತಿಹಾಸವನ್ನು ತೆರೆದಿಡಲಾಗುತ್ತೆ ಆಗ ನಾವು ಚರಿತ್ರೆಯ ಪುಟಗಳ ಅಕ್ಷರಗಳಾಗೋದಂತೂ ನಿಜ. ಇಲ್ಲೇ ಇದೆ ವೀರಸಾವರ್ಕರ್‍‍ನ ಬದುಕು, ನೆನಪು, ಸಂದೇಶಗಳ ಸಾರಾಂಶ. ಆತ ಇದ್ದ ಕೋಣೆ, ಇತರ ಯೋಧರು ನೇಣಿಗೆ ಕೊರಳೊಡ್ಡಿದ ಜಾಗಗಳನ್ನು ನೋಡಿದಾಗ ಹೃದಯ ಕಣ್ಣೀರಾಗದಿದ್ದರೆ ಕೇಳಿ.

ಕಣ್ಣೀರ ಕಥೆ ಹೇಳುವ ಕಾಲಾಪಾನಿ :
ನಿಲ್ಲಲು ಹೊತ್ತಿಲ್ಲದಂತೆ ಎಲ್ಲೆಲ್ಲಿಯೂ ಸದಾಕಾಲವೂ ಅಲೆಯಾಗುವ ಸಮುದ್ರದ ನಟ್ಟನಡುವೆ ವೃತ್ತಾಕಾರದಲ್ಲಿ 7 ಕಕ್ಷೆಗಳಲ್ಲಿ ಕಟ್ಟಲಾಗಿದ್ದ ಸೆಲ್ಯುಲಾರ್ ಬಂಧಿಖಾನೆಗೆ ಅಂದಿದ್ದ ಹೆಸರು “ಕಾಲಾಪಾನಿ”. 222 ಕೋಣೆಗಳಿದ್ದ ಇಲ್ಲಿ 600ಕ್ಕೂ ಹೆಚ್ಚು ಸ್ವಾತಂತ್ರ್ಯ ಸೇನಾನಿಗಳು ಕಣ್ಣೀರಾಗಿದ್ದಾರೆ. ಕಾಲು ಚಾಚಿ ಮಲಗುವುದಿರಲಿ ತಲೆ ಎತ್ತಿ ಕುಳಿತುಕೊಳ್ಳಲೂ ಆಗದ ಕೋಣೆಗಳಲ್ಲಿ ಮಿಣುಕು ಬೆಳಕು ಬೀರುವ ಗವಾಕ್ಷಿಗಳಿವೆ. ಕಣ್ಣು ತೆರೆದಿರುವಾಗಲೆಲ್ಲಾ ಅಲ್ಲಿದ್ದವರಿಗೆ ಕಾಣುತ್ತಿದ್ದದ್ದು ಸಮುದ್ರ ಮತ್ತು ಸಮುದ್ರ ಮಾತ್ರ. ನೆತ್ತಿ ಕುದಿಸುವ ಬಿಸಿಲಿನಲ್ಲಿ ಬ್ರಿಟೀಷ್ ಅಧಿಕಾರಿಗಳು ಕೊಟ್ಟಾಗ ಕೊಡುವಷ್ಟು ನೀರನ್ನು ಕುಡಿದು ದಿನಕ್ಕೆ 18 ಗಂಟೆಗಳ ಕಾಲ ಮರದ ದಿಮ್ಮಿಗಳನ್ನು ಬೆನ್ನ ಮೇಲೆ ಹೊತ್ತು ತಂದು ಕತ್ತರಿಸಿ ಸಾಗಿಸಬೇಕಾದ ಕೆಲಸ ಸೇನಾನಿಗಳಿಗೆ. ಅಕ್ಕಪಕ್ಕದವರೊಡನೆ ಮಾತನಾಡುವುದು ನಿಷಿದ್ಧ. ಅಧಿಕಾರಿಗಳ ಮನೋಯಿಚ್ಛೆಯಂತೆ ಛಡಿ ಏಟುಗಳು, ಕಾದ ಮರಳಿನಲ್ಲಿ ಬೆತ್ತಲೆ ಮೈನ ಉಜ್ಜಾಟ. ಇವು ಸೌಮ್ಯ ಸ್ವರೂಪದ ಶಿಕ್ಷೆಗಳೆನಿಸಿದ್ದರೆ, ಕೈಕಾಲುಗಳನ್ನು ಕಟ್ಟಿ ನಳಿಕೆಯ ಮೂಲಕ ಶ್ವಾಸಕೋಶಗಳಿಗೆ ಬಿಸಿ ಹಾಲನ್ನು ಹುಯ್ಯುವುದು ತೀವ್ರ ರೂಪದ ಶಿಕ್ಷೆಯಾಗಿತ್ತು.

ಇಂತಹ ಭಯಾನಕ ವಾತಾವರಣದಲ್ಲಿ ಜುಲೈ 4, 1911ರಿಂದ 1924ರವರೆಗೂ ಬಂಧಿಯಾಗಿದ್ದದ್ದು ವೀರ ಸಾವರ್ಕರ್. ಅದೇ ಸಮಯದಲ್ಲಿ ಸೆಗಾರ್ ಖಾನ್‍ನೊಡನೆ ನಿಕಟ ಸ್ನೇಹ ಬೆಳೆಯಿತು. ಆದರೆ ಅಲ್ಲೇ ಹತ್ತಿರದ ವೈಪರ್ ದ್ವೀಪದಲ್ಲಿ ಸೆಗಾರ್ ಖಾನ್‍ನನ್ನು ನೇಣಿಗೇರಿಸಿದ್ದನ್ನು ಕಣ್ಣಾರೆ ಕಂಡ ಸಾವರ್ಕರ್ ಹೆಚ್ಚು ಹೆಚ್ಚು ಅಂತರ್ಮುಖಿಯಾಗಿದ್ದು. 1913ರಲ್ಲಿ ಕಾಲಾಪಾನಿಗೆ ಭೇಟಿಯಿತ್ತ ಮಹಾತ್ಮ ಗಾಂಧಿಯವರನ್ನು ಸಾವರ್ಕರ್ ಕೇಳಿದ ಒಂದೇ ಮಾತು “ಇಲ್ಲಿನ ಬಂಧಿಗಳಿಗೆ ಅಕ್ಷರ ಕಲಿಸಿಕೊಡಲು ಅನುವು ಮಾಡಿಸಿಕೊಡಿ”.

ಅಂತೂ ಅನುಮತಿ ಸಿಕ್ಕಿತ್ತು. ಸಾವರ್ಕರ್ ಜೊತೆಯವರನ್ನು ಸಾಕ್ಷರರನ್ನಾಗಿ ಮಾಡಿದ್ದಲ್ಲದೆ, ಈಗ ಜಗತ್ತಿನ 17 ಭಾಷೆಗಳಿಗೆ ಭಾಷಾಂತರಗೊಂಡಿರುವ “ಕಾಲಾಪಾನಿ” ಎನ್ನುವ ಕಥನವನ್ನೂ ರಚಿಸಿದ್ದು ಇಲ್ಲಿನ ಕೋಣೆಯಲ್ಲೇ. ಕವಿ, ನಾಟಕಕಾರ, ವಿಮರ್ಶಕ, ಚಿಂತಕ ಎಂದೆಲ್ಲಾ ಹೆಸರು ಮಾಡಿದ್ದ ಸಾವರ್ಕರ್ ಇಂಗ್ಲಿಷ್ ಕಲಿತು “Transportation of my Life” ಎನ್ನುವ ಕೃತಿಯನ್ನು ರಚಿಸಿದ್ದು ಹಾಗು ಹಲವಾರು ಕವನಗಳನ್ನು ಭಾಷಾಂತರಗೊಳಿಸಿದ್ದು ಈ ಜೇಲಿನಲ್ಲಿದ್ದಾಗಲೇ. ಲಂಡನ್‍ನಿಂದ ಪ್ರಕಟವಾಗುತ್ತಿದ್ದ ಮರಾಠಿ ಪಾಕ್ಷಿಕಕ್ಕೆ ಅಂಡಮಾನಿನ ಜೇಲಿನಿಂದ ಬರೆಯುತ್ತಿದ್ದ ಏಕೈಕ ಪತ್ರಕರ್ತ ವೀರ ಸಾವರ್ಕರ್.

ಗಾಂಧಿ ಮತ್ತು ಪಟೇಲರ ಮನವಿಯಂತೆ 1924ರಲ್ಲಿ ಸಾವರ್ಕರ್‌ನನ್ನು ಪುಣೆಯ ಬಂಧಿಖಾನೆಗೆ ವರ್ಗಾಯಿಸಲಾಯಿತು. ಗಾಂಧಿ ಹತ್ಯೆಯಲ್ಲಿ ಒಂದೊಮ್ಮೆ ಹಿಂದೂ ಮಹಾಸಭೆಯ ಅಧ್ಯಕ್ಷನಾಗಿದ್ದ ಸಾವರ್ಕರ್‌ನ ಪಾತ್ರವೂ ಇದೆ ಎನ್ನುವ ಆಪಾದನೆಯಿಂದ ಸಾಕಷ್ಟು ಮನನೊಂದ ವೀರ ತಮ್ಮ 83ನೇ ವಯಸ್ಸಿನಲ್ಲಿ 1966ರ ಫ಼ೆಬ್ರವರಿ 1ರಂದು ಆಮರಣಾಂತ ಉಪಾವಾಸ ಕೈಗೊಂಡು ಫೆ. 26ನೇ ದಿನಾಂಕ ಬೆಳಗ್ಗೆ 10.30ಕ್ಕೆ ದೇಹತ್ಯಾಗ ಮಾಡಿ ಅಮರರಾಗಿದ್ದು ಇತಿಹಾಸ. ಸಮವಸ್ತ್ರ ಧರಿಸಿದ 2500 ಸ್ವಯಂಸೇವಕರಿಂದ ಗೌರವ ಪಡೆದ ಏಕೈಕ ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್ ಬರೆದ ಕೊನೆಯ ಕವಿತೆಯ ಸಾಲೊಂದು ಹೇಳುತ್ತೆ “ಘಳಿಗೆಯಲಿ ಕ್ಷಣವೊಂದು ಕಳೆದು ಹೋದಂತೆ, ಓ ಗೆಳೆಯಾ, ಒಮ್ಮೆ ಕಳೆದದ್ದು ಮತ್ತೆಂದೂ ಬಾರದಂತೆ.......”

English summary
Indian freedom fighter, revolutionary, writer, political leader Veer Savarkar (Vinayak Damodar Savarkar) sacrificed his life for the country on February 26, 1966. He was cremated with due respect on Feb 27. Anjali Ramanna, who visited Kalapani selular jail in Andaman, remembers the fighter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X