ಮೂಡಿಗೆರೆ ಸಂತ ಸದ್ದಿಲ್ಲದೇ ಹೊರಟ!

Subscribe to Oneindia Kannada


ಇವತ್ತು ಮತ್ತೆ ಸಾಹಿತ್ಯಕ್ಕೊಂದು ಕಳೆ ಮತ್ತು ಬೆಲೆ ಬರಬೇಕಿದ್ದರೆ ತೇಜಸ್ವಿ ಕಂಪ್ಯೂಟರ್‌ನಿಂದ ಕಥಾಸಂಕಲನವೋ ಕಾದಂಬರಿಯೋ ಹೊರಬರಬೇಕು ಅಂದ್ಕೊತಿದ್ವಿ. ಆದರೆ, ಅವರ ಇತ್ತೀಚಿನ ಕೃಷಿ ನೋಡುತ್ತಿದ್ದರೆ ಆ ಸೂಚನೆ ಕಾಣಿಸುತ್ತಿರಲಿಲ್ಲ. ಇನ್ನು ಅವರೇ ಇಲ್ಲವಲ್ಲ. ಯಾಕೋ ಇಷ್ಟು ಬೇಗ, ಮಾಯಾಲೋಕ ಕರಗಿಹೋಯಿತು! ಕನ್ನಡಿಗರಿಗೆ ಅದೃಷ್ಟ ಕಡಿಮೆ ಬಿಡಿ...

None mesmerized him like the greenery of Malnadಕುವೆಂಪು ಅವರ ಮೇರು ಕೃತಿ ಯಾವುದು ಎಂಬ ಪ್ರಶ್ನೆಗೆ ಅವರ ಬಗ್ಗೆ ಅಸಮಾಧಾನ ಇಟ್ಟುಕೊಂಡವರು ಪೂರ್ಣಚಂದ್ರ ತೇಜಸ್ವಿ ಅನ್ನುವುದೂ ಉಂಟು. ಬೇಂದ್ರೆಯವರ ಕೆಟ್ಟ ಕೃತಿ ವಾಮನ ಬೇಂದ್ರೆ ಎಂಬ ಜೋಕೂ ಚಾಲ್ತಿಯಲ್ಲಿದೆ!

ಮೊದಲನೆಯದ್ದರ ಬಗ್ಗೆ ಅನುಮಾನ ಬೇಕಾಗಿಲ್ಲ . ತೇಜಸ್ವಿ ತಮ್ಮ ಆರಂಭದ ಸಂಕಲನದಲ್ಲೇ ಪ್ರತಿಭೆ ತೋರಿದವರು. ಸಾಹಿತಿಯ ಮಗ ಸಾಹಿತಿಯಾಗೋದಿಲ್ಲ , ಸಾಹಿತ್ಯ ದ್ವೇಷಿಯಾಗುತ್ತಾನೆ ಎಂಬ ಮಾತನ್ನು ಸುಳ್ಳು ಮಾಡಿದವರು.

ಇದೊಂದು ತಮಾಷೆ ನೋಡಿ. ಜಗತ್ತಿನ ಶ್ರೇಷ್ಠ ಲೇಖಕರ ಮಕ್ಕಳು ಯಾರು ಎನ್ನುವುದೇ ನಮಗೆ ಗೊತ್ತಿಲ್ಲ . ಷೇಕ್ಸ್‌ಪಿಯರ್‌ ಮಗ ಯಾರು ಅನ್ನೋದೇನಾದರೂ ಗೊತ್ತೇ, ಕುಮಾರ ವ್ಯಾಸನಿಗೆ ಮಕ್ಕಳಿದ್ದರೇ? ಮಾಸ್ತಿಯವರ ಮಗ ಏನು ಮಾಡುತ್ತಾನೆ ? ಕಾಳಿದಾಸನ ಮಗ ಯಾವ ಕೃತಿ ಬರೆದ? ನಿಮಗೆ ಉತ್ತರ ಸಿಗುವುದಿಲ್ಲ .

ಆಸ್ತಿಪಾಸ್ತಿ, ರಾಜ್ಯ, ಅಧಿಕಾರ ಯಾವುದು ಬೇಕಾದರೂ ಮಗನ ಪಾಲಾಗಬಹುದು. ಪ್ರತಿಭೆ ಹಾಗಾಗುವುದಿಲ್ಲ . ಆದರೆ, ಕುವೆಂಪು ವಿಚಾರದಲ್ಲಿ ಮಾತ್ರ ಹಾಗಾಯಿತು.

ನವ್ಯದ ಜಂಜಡಗಳಿಂದ, ಅಂತರ್ಮುಖತೆಯಿಂದ ಬೇಸತ್ತು , ಹೊಸ ಹಾದಿ ಹಿಡಿಯಬೇಕು ಎಂದು ತಮ್ಮ ಕಥಾಸಂಕಲನದ ಮೂಲಕ ಘೋಷಿಸಿಕೊಂಡೇ ಆಖಾಡಕ್ಕಿಳಿದ ತೇಜಸ್ವಿ ಬರೆದದ್ದು ಕೆಲವೇ ಕೃತಿಗಳನ್ನು . ಆದರೆ ಅವುಗಳೆಲ್ಲ ಅತ್ಯುತ್ತಮ ಕೃತಿಗಳೇ. ತಬರನ ಕತೆ, ಕುಬಿ ಮತ್ತು ಇಯಾಲ , ನಿಗೂಢ ಮನುಷ್ಯರು, ಕರ್ವಾಲೋ, ಚಿದಂಬರ ರಹಸ್ಯ, ಕಿರಗೂರಿನ ಗಯ್ಯಾಳಿಗಳು, ಜುಗಾರಿ ಕ್ರಾಸ್‌, ಕೃಷ್ಣೇಗೌಡರ ಆನೆ, ಪರಿಸರದ ಕತೆಗಳು... ಹೀಗೆ ಅವರ ಬರಹಗಳ ಪಟ್ಟಿ ಸಾಗುತ್ತದೆ.

ಇವತ್ತೂ ಬೇಜಾರಾದಾಗ ನೀವು ಓದಬಹುದಾದ ಕತೆ ಬರೆದವರಲ್ಲಿ ,ನೆನಪಿಗೆ ಬರುವ ಬೆರಳೆಣಿಕೆಯಷ್ಟು ಮಂದಿಯಲ್ಲಿ ತೇಜಸ್ವಿಯೂ ಒಬ್ಬರು.

ತೇಜಸ್ವಿ ಉಳಿದ ಲೇಖಕರಂತಲ್ಲ . ಅವರು ಮೊದಲು ನಾನ್‌ ಅಕಾಡೆಮಿಕ್‌ ಸಾಹಿತಿ. ಅತ್ಯಂತ ಹುಲುಸಾಗಿ ಸಾಹಿತ್ಯ- ಕೃಷಿ ಮಾಡಿದವರು ಎಂದು ಅವರ ಕಾಫಿ ತೋಟ ನೋಡಿದವರು ಅವರನ್ನು ಗೇಲಿ ಮಾಡೋದುಂಟು. ಆದರೆ ತನ್ನನ್ನೇ ತಮಾಷೆ ಮಾಡಿಕೊಳ್ಳುವುದು ಅವರಿಗೆ ಪ್ರಿಯವಾದ ಸಂಗತಿ. ಅವರ ಎಲ್ಲಾ ಬರಹಗಳಲ್ಲೂ ನಾಯಕ ಪೇಚಿಗೀಡಾಗುತ್ತಾನೆ !

ಮೂಡಿಗೆರೆಯ ಕಾಫಿ ನೆರಳಲ್ಲಿ ಕತೆ ಬರೆಯುತ್ತಾ, ಕಂಪ್ಯೂಟರ್‌ ಬೆನ್ನು ಹತ್ತಿದ್ದ ತೇಜಸ್ವಿ ಇದೀಗ ಜವರಾಯನ ಹಿಂಬಾಲಿಸಿ ಹೊರಟುಬಿಟ್ಟಿದ್ದಾರೆ. ಇದು ಸಾಮಾನ್ಯ ಅಲ್ಲ ಕಣ್ರೀ.. ಇದರೊಳಗೆ ಏನೇನೋ ಇದೆ. ನೋಡಿದರೆ ಗಾಬರಿಯಾಗುತ್ತೆ ಅಂತ ಮೂರು ವರ್ಷದ ಹಿಂದೆಯೇ ಕಂಪ್ಯೂಟರ್‌ ಬೆನ್ನಿಗೆ ಬಿದ್ದ ತೇಜಸ್ವಿ ರಾಮಾಯಣ ದರ್ಶನಂನ ಹಸ್ತಪ್ರತಿ ಮುದ್ರಿಸಿ ಕೈ ಕೆಸರು ಮಾಡಿಕೊಂಡರು. ಆ ಸಾಹಸಕ್ಕೆ ಬಲಿಯಾದದ್ದು ಅವರ ಹಾಗೂ ಲಂಕೇಶ್‌ ಗೆಳೆತನ. ತೇಜಸ್ವಿ ತೇಜೋವಧೆ ಮಾಡಿದೆ ಅಂತ ಪಾಳೇಗಾರರು ಬೀಗಿದ್ದೂ ಆಯಿತು.

ಈ ನಡುವೆ ಕಂಪ್ಯೂಟರ್‌ನಲ್ಲಿ ಅದೇನೋ ಸಾಹಸ ಮಾಡಿ ಚಿತ್ರಕಲಾವಿದರೂ ಆಗಿದ್ದ ತೇಜಸ್ವಿ, ಮಿಲೆನಿಯಮ್‌ ಪುಸ್ತಕ ಮಾಲೆ ಆರಂಭಿಸಿದರು. ಪುಸ್ತಕ ಪ್ರಕಾಶನ ಆರಂಭಿಸಿ ದುಡ್ಡು ಬೆಳೆಯ ತೊಡಗಿದರು. ಸೃಜನಶೀಲ ಸಾಹಿತ್ಯ ಮರೆತುಬಿಟ್ಟರು ಎಂಬ ದೂರುಗಳು ತೇಜಸ್ವಿ ಕೊನೆಗಾಲದಲ್ಲಿ ಕೇಳಿಬಂದಿದ್ದವು.

ಇವತ್ತು ಮತ್ತೆ ಸಾಹಿತ್ಯಕ್ಕೊಂದು ಕಳೆ ಬರಬೇಕಿದ್ದರೆ ತೇಜಸ್ವಿ ಕಥಾಸಂಕಲನವೋ ಕಾದಂಬರಿಯೋ ಹೊರಬೇಕು. ಆದರೆ ಇಂದು ಅವರೇ ಇಲ್ಲವಲ್ಲ!

ಹಿಂದೊಮ್ಮೆ ತೇಜಸ್ವಿ ಲಂಕೇಶರಿಗೊಂದು ಪತ್ರ ಬರೆದು ‘ನಮ್ಮದೆಲ್ಲ ಗ್ಯಾರಂಟಿ ಪಿರಿಯಡ್‌ ಮುಗಿದುಹೋಗಿದೆ. ಎಚ್ಚರಿಕೆಯಿಂದ ದೇಹ ಬಳಸಬೇಕು’ ಎಂದದ್ದು ಕೆಲವರಿಗಾದರೂ ನೆನಪಾಗಿರಬಹುದು.

Please Wait while comments are loading...