ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕುಲ ಪುರೋಹಿತ - ಆಲೂರ ವೆಂಕಟರಾಯರು

By Staff
|
Google Oneindia Kannada News

ತಮ್ಮ ಇಡೀ ಆಯುಷ್ಯದಲ್ಲಿ ಕರ್ನಾಟಕವೊಂದನ್ನೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ಅದರ ಸಿದ್ಧಿಗಾಗಿ ಅವಿರತವಾಗಿ ಶ್ರಮಿಸಿ, ಅದರ ಸಿದ್ಧಿಯನ್ನು ಕಂಡ ಆಲೂರ ವೆಂಕಟರಾಯರು ನಿಜಕ್ಕೂ 'ಕನ್ನಡ ಕುಲಪುರೋಹಿತ"ರೇ ಸರಿ. ಕನ್ನಡ-ಕನ್ನಡಿಗ-ಕರ್ನಾಟಕದ ಏಳ್ಗೆಗಾಗಿ ತನು-ಮನ-ಧನ ಅರ್ಪಿಸಿ ದುಡಿದ ವೆಂಕಟರಾಯರು ಕನ್ನಡಕುಲಕ್ಕೆ ಸದಾ ಪ್ರಾತಃಸ್ಮರಣೀಯರು. ಶನಿವಾರ(ಫೆ.25) ವೆಂಕಟರಾಯರ ಪುಣ್ಯತಿಥಿ. ಈ ಹಿನ್ನೆಲೆಯಲ್ಲೊಂದು ಸ್ಮರಣೆ.

* ವೆಂಕಟಾಚಲ, ಮೈಸೂರು.

ಕರ್ನಾಟಕತ್ವವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡು, ಕನ್ನಡದ ಕಟ್ಟಾಳುವಾಗಿ ಕನ್ನಡವನ್ನು ಅದರ ಎಲ್ಲ ಸಾಧ್ಯತೆಗಳಲ್ಲಿ ಸಾಕ್ಷಾತ್ಕರಿಸಿಕೊಂಡ ಧೀಮಂತ ವ್ಯಕ್ತಿ, ಕನ್ನಡದ ಕುಲಪುರೋಹಿತ ಆಲೂರ ವೆಂಕಟರಾಯರು. ಅವರು ಮಾಡಿದ ಕನ್ನಡ ಸೇವೆ, ಕನ್ನಡವನ್ನು ಕಟ್ಟುವ ಕೆಲಸ, ಕನ್ನಡವನ್ನು ಕನ್ನಡಿಗರೆಲ್ಲರಲ್ಲಿ ತುಂಬಿದ ಕಾಯಕ - ಇವುಗಳೆಲ್ಲವೂ ಅನನ್ಯವಾದವು.

ವೆಂಕಟರಾಯರು ಹುಟ್ಟಿದ್ದು ಜುಲೈ 12, 1880ರಂದು. ಅವರ ಜನ್ಮಸ್ಥಳ ವಿಜಾಪುರ(ಬಿಜಾಪುರ). ಅವರ ಊರು ಧಾರವಾಡ(ಈಗ ಗದಗ ಜಿಲ್ಲೆ) ಜಿಲ್ಲೆ ರೋಣ ತಾಲ್ಲೂಕಿನ ಹೊಳೆಆಲೂರು. ತಂದೆ ಭೀಮರಾಯ, ತಾಯಿ ಭಾಗೀರಥಿಬಾಯಿ. ಧಾರವಾಡದ ವಿದ್ಯಾರ್ಥಿ ಜೀವನ ವೆಂಕಟರಾಯರ ಮುಂದಿನ ಎಲ್ಲ ಬೆಳವಣಿಗೆಗಳಿಗೆ ನಾಂದಿಯಾಯಿತು. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಅವರು ಕನ್ನಡದ ವಿಚಾರದಲ್ಲಿ ಆಸಕ್ತಿ ತಳೆಯುವ ಹಲವು ಸಂದರ್ಭಗಳು ಒದಗಿದವು.

 Aloora Venkatarayaru

ಮುಂದೆ ಪುಣೆಯ ಫರ್ಗ್ಯೂಸನ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ಭಾಟೆ, ಕರ್ವೆ, ರಾಜವಾಡೆ, ಗೋಖಲೆ - ಇವರುಗಳು ಆಲೂರರಿಗೆ ಸ್ಫೂರ್ತಿಯ ಸೆಲೆಗಳಾದರು. ವೀರ ಸಾವರಕರ ಅವರಂತಹವರ ಒಡನಾಟ ಇವರಲ್ಲಿ ರಾಷ್ಟ್ರಭಕ್ತಿಯ ವೀರನಿಷ್ಠೆಯುಂಟಾಗಲು ಕಾರಣವಾಯಿತು. ಬಾಲಗಂಗಾಧರ ತಿಲಕರು ಇವರ ತಾರುಣ್ಯದ ಧೀರೋದಾತ್ತ ನಾಯಕರಾದರು.

ಒಮ್ಮೆ ವೆಂಕಟರಾಯರು ಬೇಸಿಗೆರಜೆಯಲ್ಲಿ ಹಂಪೆಗೆ ಹೋಗಿದ್ದರು. ಹಾಳು ಹಂಪೆಯ ಅವಶೇಷಗಳು ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಉಂಟುಮಾಡಿದವು. ಅವರ ಮಾತಿನಲ್ಲಿಯೇ ಕೇಳಿ...'ಆ ದಿವಸ, ನನ್ನ ಮನದಲ್ಲಿ ವಿದ್ಯುತ್ತಿನ ಸಂಚಾರವನ್ನು ಮೂಡಿಸಿತು. ಚಲನಚಿತ್ರ ಪಟದಲ್ಲಿ ವಿದ್ಯುದ್ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡ ಹತ್ತಿತು. ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿಧದ ತರಂಗಗಳಿಗೆ ಇಂಬುಗೊಟ್ಟಿತು. ಹೃದಯ ಸಮುದ್ರವು ಅಲ್ಲೋಲ ಕಲ್ಲೋಲವಾಯಿತು. ಆ ದಿವಸವು ನನ್ನ ಜೀವನ ಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು."

ನಂತರದ ದಿವಸಗಳಲ್ಲಿ 'ಕರ್ನಾಟಕ ವಿದ್ಯಾವರ್ಧಕ ಸಂಘ" ಪ್ರವೇಶಿಸಿದ ಆಲೂರರು ಅದರ ಜವಾಬ್ದಾರಿಯನ್ನು ಹೊತ್ತುಕೊಂಡರು. ಅಷ್ಟೇ ಅಲ್ಲದೆ 'ವಾಗ್ಭೂಷಣ" ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡು ತಮ್ಮ ಸ್ವಸಾಮರ್ಥ್ಯದಿಂದ ಆ ಪತ್ರಿಕೆಗೆ ಹೊಸ ರೂಪು ಕೊಟ್ಟರು. ಕನ್ನಡವನ್ನು ಸಮೃದ್ಧವಾಗಿ ಬೆಳೆಸಿದರು.

1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಇದರ ಹಿಂದಿನ ರೂವಾರಿ ಆಲೂರ ವೆಂಕಟರಾಯರೇ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಆಲೂರರ ಮೊಟ್ಟ ಮೊದಲ ಕೃತಿ 'ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ ವಿದ್ಯಾರಣ್ಯರು". 'ಕರ್ನಾಟಕತ್ವದ ಅಭಿಮಾನ ಹುಟ್ಟಿಸುವುದಕ್ಕೆ ನಾನು ಬರೆದ ಮೊಟ್ಟ ಮೊದಲ ಪುಸ್ತಕ ಈ ಶ್ರೀ ವಿದ್ಯಾರಣ್ಯರ ಚರಿತ್ರೆ" ಎಂದು ಅವರೇ ಹೇಳಿಕೊಂಡಿದ್ದಾರೆ.

1912 ರಲ್ಲಿ ಆಲೂರ ವೆಂಕಟರಾಯರು ತಮ್ಮ ಆಚಾರ್ಯ ಕೃತಿ 'ಕರ್ನಾಟಕ ಗತವೈಭವ" ವನ್ನು ಪ್ರಕಟಿಸಿದರು. ಇದು ಕನ್ನಡಿಗರೆಲ್ಲರ ಕಣ್ತೆರೆಸಿದ ಕೃತಿ. ಕನ್ನಡಿಗರ ಪುಣ್ಯ ವಿಶೇಷದ ಫಲವೇ ಈ ಕೃತಿ ಎಂದರೂ ಅತಿಶಯೋಕ್ತಿಯಲ್ಲ.

ವಿಮರ್ಶಕ ಡಾ।। ರಂ. ಶ್ರೀ. ಮುಗಳಿಯವರು 'ಕರ್ನಾಟಕ ಗತವೈಭವ"ದ ಬಗ್ಗೆ ಆಡಿರುವ ಮಾತುಗಳು ಹೀಗಿವೆ :

'ಇದೊಂದು ಸಣ್ಣ ಸ್ವರೂಪದ, ಯುಗ ಪ್ರವರ್ತಕ ಕೃತಿಯಾಗಿದೆ. ಕನ್ನಡ ಜನತೆಯ ಕಣ್ಣನ್ನು ಇದು ತೆರೆಯಿಸಿತು. ಕನ್ನಡ ಹೃದಯವನ್ನು ಕೆರಳಿಸಿತು, ಅರಳಿಸಿತು. ಶತಶತಮಾನದಿಂದ ಹೆರವರ ತೊತ್ತಾಗಿ ಸ್ವಂತದ ಅರಿವನ್ನು ಕಳೆದುಕೊಂಡು ಸುಪ್ತವಾಗಿದ್ದ ಜಡವಾದ ಕಣ್ಣನ್ನು ಇದು ಅಗಲವಾಗಿ ತೆರೆಯಿಸಿತು. ವಿಶಾಲವಾದ ನೋಟವನ್ನು ಕೊಟ್ಟಿತು. ಭಾರತ ಮತ್ತು ಕರ್ನಾಟಕಕ್ಕೆ ಇವುಗಳ ಸಮ್ಯಗ್ದರ್ಶನವನ್ನು ಒದಗಿಸಿತು."

ಆಲೂರರು ಕಂಡ ಭವ್ಯ ಕರ್ನಾಟಕದ ಕನಸು ಗತವೈಭವವನ್ನು ಸ್ಮರಿಸುವುದರಲ್ಲಿಯೇ ಕೊನೆಗೊಳ್ಳಲಿಲ್ಲ. 'ಕರ್ನಾಟಕದ ವೀರರತ್ನಗಳು", 'ಕರ್ನಾಟಕತ್ವದ ಸೂತ್ರಗಳು" ಮತ್ತು 'ಕರ್ನಾಟಕತ್ವದ ವಿಕಾಸ" ಗ್ರಂಥಗಳನ್ನು ಬರೆಯುವ ಮೂಲಕ ಕರ್ನಾಟಕ ದರ್ಶನವನ್ನು ಸಮಗ್ರಗೊಳಿಸಿದರು. ಕರ್ನಾಟಕದ ಏಕೀಕರಣ ಕಾರ್ಯದ ಪ್ರತಿ ಹಂತದಲ್ಲಿಯೂ ತಮ್ಮನ್ನೇ ತಾವು ಅರ್ಪಿಸಿಕೊಂಡ ಆಲೂರರು ಅದಕ್ಕೆ ಬೇಕಾದ ನೆಲೆಗಟ್ಟನ್ನು ನಿರ್ಮಿಸಿದರು. ಹೊಸ ಕರ್ನಾಟಕದ ನಿರ್ಮಾಣಕ್ಕೆ ಸಾಂಗವಾಗಿ ಬೇಕಾದ ವಿಶ್ವ ಕರ್ನಾಟಕದ ಭಿತ್ತಿ ಚಿತ್ರಗಳನ್ನು ರೂಪಿಸಿದರು. ಅವಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಅದು ಕನ್ನಡ ಜನರ ಹೃನ್ಮನಗಳಲ್ಲಿ ನೆಲೆಗೊಳ್ಳುವಂತೆ ನೋಡಿಕೊಂಡರು.

ಕರ್ನಾಟಕ ಏಕೀಕರಣ ಕಾರ್ಯದಲ್ಲಷ್ಟೇ ಅಲ್ಲದೆ ಆಲೂರರು ಕನ್ನಡಕ್ಕಾಗಿ ಅದರ ವಿವಿಧ ಮಜಲುಗಳಲ್ಲಿ ಕೆಲಸ ಮಾಡಿದರು. ಸಂಘ ಸಂಸ್ಥೆಗಳನ್ನು ಕಟ್ಟಿದರು ; ರಾಷ್ಟ್ರೀಯ ಶಾಲೆಗಳನ್ನು ತೆರೆದರು ; ವಾಚನಾಲಯ ಚಳವಳಿಯನ್ನು ಹುಟ್ಟುಹಾಕಿದರು ; ಐತಿಹಾಸಿಕ ಸಂಶೋಧನಾ ಕಾರ್ಯಗಳನ್ನು ನಡೆಸಿದರು ; ಧಾರವಾಡದಲ್ಲಿ ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲವನ್ನು ಸ್ಥಾಪಿಸಿದರು. 'ಪ್ರಾಚೀನ ಕರ್ನಾಟಕ" ಎಂಬ ಆಂಗ್ಲಕನ್ನಡ ಅರ್ಧವಾರ್ಷಿಕ ಪತ್ರಿಕೆಯನ್ನು ನಡೆಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕ ಪತ್ರಿಕಾ ಇತಿಹಾಸದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದ 'ಜಯ ಕರ್ನಾಟಕ" ಪತ್ರಿಕೆಯನ್ನು ಸ್ಥಾಪಿಸಿ ನಡೆಸಿಕೊಂಡು ಬಂದರು.

ಆಲೂರ ವೆಂಕಟರಾಯರು ನುಡಿದ ಕನ್ನಡ ಮಂತ್ರಗಳು :

'ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಅತ್ಯಾನಂದದಿಂದ ಪುಲಕಿತಗೊಳ್ಳುವುದಿಲ್ಲವೋ, ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವನಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ; ದೇಹವಲ್ಲ, ಮೋಟು ಮರ"

- 'ಕರ್ನಾಟಕ ಗತವೈಭವ"ದಲ್ಲಿ

'ಕರ್ನಾಟಕತ್ವವೆಂದರೆ ಕೇವಲ ದೇಶಾಭಿಮಾನವಲ್ಲ; ಕೇವಲ ಭಾಷಾಭಿಮಾನವಲ್ಲ; ಕೇವಲ ಇತಿಹಾಸಾಭಿಮಾನವಲ್ಲ; ಇವೆಲ್ಲವುಗಳನ್ನು ಮೀರಿದ, ಇವೆಲ್ಲವುಗಳನ್ನು ಒಳಗೊಂಡ ಪರಿಶುದ್ಧ ಭಾವನೆ"

- 'ಕರ್ನಾಟಕತ್ವದ ಸೂತ್ರಗಳು" ಕೃತಿಯಲ್ಲಿ

'ಕರ್ನಾತಕ ಗತವೈಭವವು ಅಖಂಡ ಕರ್ನಾಟಕಕ್ಕೆ ತಳಹದಿಯಾದಂತೆ, ಇದು ಭಾವೀ ವೈಭವಕ್ಕೆ ತಳಹದಿಯಾಗಬಹುದೆಂದು ಆಶೆ. ಭಾವೀ ವೈಭವವನ್ನು ಪಡೆಯುವುದು ಹತ್ತು ಪಟ್ಟು, ನೂರು ಪಟ್ಟು ಹೆಚ್ಚಿನ ಕಾರ್ಯ. ಕಟ್ಟುವುದಕ್ಕಿಂತ ಕಾಪಾಡುವುದು ಕಠಿಣ ಕೆಲಸ, ಕರ್ನಾಟಕದ ಭಾವಿ ವೈಭವ ಕಟ್ಟುವುದೆಂದರೆ ಹಂಪೀ ವಿರೂಪಾಕ್ಷ ದೇವಾಲಯದ ಗೋಪುರ ಕಟ್ಟಿದಂತೆ...! ಹಾಗೆ ಕರ್ನಾಟಕದ ಭಾವೀ ವೈಭವದ ಗೋಪುರ ಕಟ್ಟಲ್ಪಟ್ಟು ಅದು ಮಿಕ್ಕವರಿಗೆಲ್ಲರಿಗೂ ನಮ್ಮ ಸಂಸ್ಕೃತಿಯ ದೀಪಸ್ಥಂಬವಾಗಲಿ"

- 'ಕರ್ನಾಟಕತ್ವದ ವಿಕಾಸ" ಕೃತಿಯಲ್ಲಿ

'ಕರ್ನಾಟಕವೆಂಬುದೊಂದು ಜನಾಂಗವು. ಅದಕ್ಕೆ ಒಂದೇ ಒಂದು ಶರೀರ, ಮನಸ್ಸು, ಮತ್ತು ಆತ್ಮಗಳಿರುತ್ತವೆಂಬ ಭಾವನೆಯು ಎಲ್ಲಿಯವರೆಗೆ ನಮ್ಮಲ್ಲಿ ಉತ್ಪನ್ನವಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಕನ್ನಡ ನುಡಿಯು ಅಭಿವೃದ್ಧಿಯ ಭರದಿಂದ ಸಾಗಲಾರದು"

- 1930 ರಲ್ಲಿ ಮೈಸೂರಿನಲ್ಲಿ ನಡೆದ 16ನೇ ಕರ್ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ.

ಆಲೂರರ ಈ ಮಾತುಗಳು ಅಂದಿಗೆ ಮಾತ್ರವಲ್ಲ, ಇಂದಿಗೂ ಸರಿ ಹೊಂದುವಂತಹವೇ ಎಂಬುದು ಗಮನಾರ್ಹ.

ಕರ್ನಾಟಕ ಚಳವಳಿಯೆಂದರೆ ಆಲೂರ ವೆಂಕಟರಾಯರು, ಆಲೂರ ವೆಂಕಟರಾಯರೆಂದರೆ ಕರ್ನಾಟಕ ಚಳವಳಿ. ಇದು ಉತ್ಪ್ರೇಕ್ಷೆಯ ಮಾತಲ್ಲ. ತಮ್ಮ ಇಡೀ ಆಯುಷ್ಯದಲ್ಲಿ ಕರ್ನಾಟಕವೊಂದನ್ನೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ಅದರ ಸಿದ್ಧಿಗಾಗಿ ಅವಿರತವಾಗಿ ಶ್ರಮಿಸಿ, ಅದರ ಸಿದ್ಧಿಯನ್ನು ಕಂಡ ಆಲೂರ ವೆಂಕಟರಾಯರು ನಿಜಕ್ಕೂ ಕನ್ನಡ ಕುಲಪುರೋಹಿತರೇ ಸರಿ. ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆಗಾಗಿ ತನು-ಮನ-ಧನ ಅರ್ಪಿಸಿ ದುಡಿದ ವೆಂಕಟರಾಯರು ಕನ್ನಡಕುಲಕ್ಕೆ ಸದಾ ಪ್ರಾತಃಸ್ಮರಣೀಯರು. ಆ ಸ್ಮರಣೆ ಕನ್ನಡಿಗರಲ್ಲಿ ನಿತ್ಯೋತ್ಸಾಹ-ನಿತ್ಯೋತ್ಸವವನ್ನು ತುಂಬುತ್ತಲೇ ಇರುತ್ತದೆ...

English summary
Aloora Venkatarayaru worked hard for unifying Karnataka and renaissance of Karnataka. An article by Venkatachala on the occasion of his birthday on 25th February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X