ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕ ಪ್ರೇಮಿ ಸುಬ್ಬು ಪೆಂಗನಾದ ಪುರಾಣ

By ಪ್ರಸಾದ ನಾಯಿಕ
|
Google Oneindia Kannada News

ಸುಬ್ಬಾಶಾಸ್ತ್ರಿ ಅಲಿಯಾಸ್‌ ಸುಬ್ಬುನಿಗೆ ಬಹುವರ್ಷಗಳ ಪ್ರಯತ್ನದ ನಂತರ ಮದುವೆ ಫಿಕ್ಸ್‌ ಆಗಿದ್ದು ಖುಷಿ ಒಂದೆಡೆಯಾದರೆ, ಹುಡುಗಿ ಕಡೆಯವರು ತಮ್ಮ ಹಳ್ಳಿಯಲ್ಲೇ ಮದುವೆ ನಡೆಯಬೇಕೆಂದು ಪಟ್ಟುಹಿಡಿದಿದ್ದು ಪೀಕಲಾಟಕ್ಕೆ ಹಿಡಿದುಕೊಂಡಿತ್ತು. ಮದುವೆ ಗಂಡೇ ಹೆಣ್ಣಿನವರಿಗೆ ತಲೆಬಾಗಿದರೆ ಹೇಗೆಂದು ಸಿಟಿನಲ್ಲೇ ಲಗ್ನ ಆಗಬೇಕೆಂದು ಸುಬ್ಬ ವರಾತ ತೆಗೆದಿದ್ದ. ಇಲ್ಲ ಕಣೋ ಹೆಣ್ಣಿನವರಿಗೆ ತೊಂದರೆಯಾಗುತ್ತೆ ಅಂದ್ರೂ ಈಯಪ್ಪನಿಗೆ ತಲೆಗೇ ಹೋಗ್ತಿಲ್ಲ. ದೊಡ್ಡವರಿಗೆಲ್ಲಾ ದೊಡ್ಡ ಫಜೀತಿ ತಂದಿಟ್ಟಿದ್ದ ಸುಬ್ಬ.

ಹೆಣ್ಣಿನವರ ಮತ್ತು ಗಂಡಿನ ಕಡೆಯ ದೊಡ್ಡವರ ಮದುವೆಯ ಲೆಕ್ಕಾಚಾರವೇ ಬೇರೆಯಾದರೆ, ಸಿಟಿಯಲ್ಲೇ ಆಗಬೇಕೆಂದು ಪಟ್ಟುಹಿಡಿದಿರುವ ಈ ಸುಬ್ಬನ ಲೆಕ್ಕಾಚಾರವೇ ಬೇರೆ. ಅದಕ್ಕೆ ಕಾರಣವೂ ಇಲ್ಲವೆಂದಲ್ಲ. ಆದರೆ, ಎಕ್ಸೆಂಟ್ರಿಕ್‌ ಅಂತ ಅನೇಕರಿಂದ ಬಿರುದು ಪಡೆದಿದ್ದ ಸುಬ್ಬನ ರ್ಯಾಶನಲ್‌ ಕಾರಣವನ್ನು ಕೇಳುವರ್ಯಾರು, ಹೋಗಲಿ ಅರ್ಥ ಆಗುವುದಾದರೂ ಯಾರಿಗೆ? ಇವನ ಕಾರಣ ಕೇಳಿ ಮನೆ ಮಂದಿಯೆಲ್ಲ ಒಟ್ಟಿಗೆ ಹೌಹಾರಿದ್ದರು. ಅದೇನೆಂದರೆ, ಮದುವೆಗೆ ಬರುವ ನೆಂಟರು, ಸ್ನೇಹಿತರು ಪ್ರೆಸೆಂಟೇನಾದರು ಕೊಡಬೇಕೆಂದಲ್ಲಿ ಪುಸ್ತಕವನ್ನು ಆಹೇರಿನ ರೂಪದಲ್ಲಿ ಕೊಡಬೇಕೆಂದು! ಅದು ಸಾಧ್ಯವಾಗಬೇಕಾದರೆ ಮದುವೆ ಬೆಂಗಳೂರಿನಲ್ಲೇ ಆಗಬೇಕು. ಇದು ನಮ್ಮ ಸುಬ್ಬುನಿನ ಬೇಡಿಕೆಯ ಹಿಂದಿನ ರಹಸ್ಯ. ಸರಿ, ಹಿರಿಯರೆಲ್ಲ ತಲೆಯ ಮೇಲೆ ಕೈಹೊತ್ತು ಕುಳಿತರು.

Subbu and his love for books

ಬೇಡ ಕಣೋ ಸುಬ್ಬಾ ಇದೆಂಥ ಬೇಡಿಕೆ . ಹೆಣ್ಣಿನ ಕಡೆಯವರಲ್ಲದೆ ಮದುವೆ ಆಮಂತ್ರಣ ಹೋದೋರೆಲ್ಲ ನಗ್ತಾರೆ . ಬೆಂಗಳೂರಿನ ಬೇಡಿಕೆ ಓಕೆ ಆದರೆ ಪುಸ್ತಕ ಪ್ರೆಸೆಂಟ್‌ ಮಾಡೋ ವಿಚಾರ ನಾಟ್‌ ಓಕೆ ಅಂತ ಸುಬ್ಬನ ಅಪ್ಪ ಸುಬ್ಬನ ಮುಂದೆ ಅಂಗಲಾಚಿದರು. ಸುಬ್ಬ ಗೋಡೆಗಾನಿಕೊಂಡು ಮಾಳಿಗೆ ನೋಡುತ್ತಿದ್ದವನು ಪ್ರತಿಕ್ರಿಯೆಯನ್ನೂ ತೋರದೆ ಹಂಗೇ ನಿಂತ. ಸುಬ್ಬನ ತಂದೆಗೆ ಗೊತ್ತಾಗಿ ಹೋಯಿತು, ಇನ್ನು ಈ ಎಬಡೇಶಿಯ ಮನ ಒಲಿಸೋದು ಅಸಾಧ್ಯ ಅಂತ. ಸುಬ್ಬ ರೇಗಾಡದೆನೆ ಸುಮ್ಮನೆ ನಿಂತಿದ್ದೇ ಮನೆಯವರಿಗೆಲ್ಲ ಸಮಾಧಾನದ ವಿಷಯವಾಯಿತು. ಇನ್ನು ತುಪ್ಪ ಸವರೋಕ್ಹೋದ್ರೆ ಸುಬ್ಬ ಮನೆ ಬಿಟ್ಟು ಹೋಗೊ ಗಿರಾಕಿನೆ ಅಂತ ಕೊನೆಗೂ ಸುಬ್ಬನಿಗೆ ಮನಸ್ಸಿಲ್ಲದಿದ್ದರೂ ತಲೆ ಬಾಗಲೇಬೇಕಾಯಿತು. ಇಂಥಾ ತಲೆತಿರುಕ ಐಡಿಯಾಗಳು ಸುಬ್ಬನಿಗಲ್ಲದೆ ಮತ್ತಾರಿಗೂ ಬರೋದಕ್ಕೆ ಸಾಧ್ಯ ಇಲ್ಲ ಅಂತ ಗೊತ್ತಿದ್ದರೂ, ಇದೆಲ್ಲದರ ಹಿಂದೆ ಸುಬ್ಬನ ಪರಮಾಪ್ತ ಸ್ನೇಹಿತ ಡಿಬ್ಬಿಯ ಕೈವಾಡ ಇದ್ದೇ ಇದೆ ಎಂದು ಎಲ್ಲರಿಗೂ ಗುಮಾನಿ ಬಂದಿತ್ತು.

ಬಾಯಿಯನ್ನು ಎಡಗಡೆ ಕಿವಿಯವರೆಗೆ ಅಗಲಿಸಿ ಹಲ್ಲು ಕಿರಿದಿದ್ದ ಸುಬ್ಬ.

ಸರಿ, ಸುಬ್ಬ-ಡಿಬ್ಬಿ ಜೋಡಿ ಮಾರ್ಕೆಟ್ಟಿಗೆ ಹೋಗಿ ಕಾರ್ಡು ತಂದು ಪ್ರಿಂಟಿಗೆ ಕೊಟ್ಟಿತು. ಕೊನೆಯಲ್ಲಿ 'ಉಡುಗೊರೆಯನ್ನು ಪುಸ್ತಕದ ರೂಪದಲ್ಲಿ ನೀಡಬೇಕಾಗಿ ವಿನಂತಿ" ಎಂದು ನಮೂದಿಸುವುದನ್ನು ಮರೆಯಲಿಲ್ಲ.

ಕಾರ್ಡುಗಳೆಲ್ಲ ನೆಂಟರಿಷ್ಟರಿಗೆ ತಲುಪಿ, ಮದುವೆಯ ದಿನ ಹತ್ತಿರ ಬಂದೇಬಿಟ್ಟಿತು. ಸುಬ್ಬ ರೋಮಾಂಚನದ ತುತ್ತತುದಿ ಮುಟ್ಟಿದ್ದನ್ನು ಯಾರು ಬೇಕಾದರೂ ನೋಡಿ ಹೇಳಬಹುದಿತ್ತು. ಹಗಲಿಲ್ಲ, ಇರುಳಿಲ್ಲ ಸುಬ್ಬ ಕನಸಿನ ಲೋಕದಲ್ಲಿ ಮುಳುಮುಳುಗಿ ಏಳುತ್ತಿದ್ದ. ಒಂದೆಡೆ ಸುಬ್ಬುಲಕ್ಷ್ಮಿ(ಪ್ರಾಸ್ಪೆಕ್ಟೀವ್‌ ಹೆಂಡತಿ)ಯ ನೆನಪೇ ಕಚಗುಳಿ ಇಡುತ್ತಿದ್ದರೆ, ಮತ್ತೊಂದೆಡೆ ಕುವೆಂಪು, ಬೇಂದ್ರೆ, ಅನಂತಮೂರ್ತಿ ಮೊದಲಾದವರ ಹೆಸರು ನೆನೆಸಿಕೊಂಡು ಥ್ರಿಲ್‌ ಆಗುತ್ತಿದ್ದ. ಮದುವೆ ಒಂದೆರಡು ದಿನ ಇರುವಂತೆ ಚಹಾದ ಕಪ್ಪು-ಬಸಿ ಇಸಿದುಕೊಳ್ಳುವಾಗ ಎಲ್ಲಿ ಅಕ್ಕಪಕ್ಕದವರ ಮೇಲೆ ಚೆಲ್ಲಿಬಿಡುತ್ತಾನೋ ಎಂಬಷ್ಟರ ಮಟ್ಟಿಗೆ ಕೈ ನಡುಗಲು ಪ್ರಾರಂಭಿಸಿತ್ತು. ಎಲ್ಲ ರೋಮಾಂಚನದ ಪ್ರಭಾವ.

ಅಂತೂ ಅಕ್ಷತೆ ಬಿದ್ದು ಸುಬ್ಬ-ಸುಬ್ಬಿ ಸತಿಪತಿಯರಾದರು. ಸುಬ್ಬು ಎಣಿಸಿದಂತೆ ಉಡುಗೊರೆ ಪುಸ್ತಕದ ರೂಪದಲ್ಲಿ ಸುಮಾರು ಬಂದಿತ್ತು. ಒಬ್ಬೊಬ್ಬರೂ ಉಡುಗೊರೆ ಕೊಟ್ಟಾಗಲೆಲ್ಲ ಗಿಫ್ಟ್‌ ಕವರಿನ ಒಳಗಿರುವ ಪುಸ್ತಕ ಯಾವುದಿರಬೇಕೆಂದು ಸುಬ್ಬು ಲೆಕ್ಕಾಚಾರ ಹಾಕಲು ಪ್ರಾರಂಭಿಸಿದ್ದ. ಸುಬ್ಬಲಕ್ಷ್ಮಿಯ ಕಡೆಯವರು ಬಂದಾಗಲೆಲ್ಲ ಸುಬ್ಬುವನ್ನು ಮೊಳಕೈಯಿಂದ ತಿವಿದು ತಮ್ಮಕಡೆಯವರನ್ನು ಪರಿಚಯಿಸಲು ಪ್ರಾರಂಭಿಸಿದ್ದಳು ಸುಬ್ಬಿ. ದಪ್ಪ ಗಿಫ್ಟು ಬಂದಾಗ ಖುಷಿಯಿಂದ ಪುಟಿದೇಳುತ್ತಿದ್ದ ಅವನ ಮೊಗ ತೆಳ್ಳಗಿನ ಉಡುಗೊರೆ ಬಂದಾಗ ವಿಚಿತ್ರ ಮುಖ ಮಾಡಿ ಡಿಬ್ಬಿಯೆಡೆ ನೋಡುತ್ತಿದ್ದ.

ಉಡುಗೊರೆ ಕಾರ್ಯಕ್ರಮ ಮುಗಿದು, ಮನೆ ತುಂಬಿಸುವ ಕಾರ್ಯಕ್ರಮ ಪ್ರಾರಂಭವಾಯಿತು. ಸುಬ್ಬಿಯ ತಂದೆ, ತಾಯಿ, ಅಕ್ಕ-ತಂಗಿಯರ ಕೊರಳುಬ್ಬಿ ಇನ್ನೇನು 'ಹೋ" ಅಂತ ಶುರುವಾಗುವ ಹಂತದಲ್ಲಿತ್ತು. ಇಬ್ಬರನ್ನೂ ಕೂಡಿಸಿ ಆರತಿ ಮಾಡಿ ಹೆಂಗಳೆಯರೆಲ್ಲ ಸುಬ್ಬಿಗೆ ಹೆಸರು ಹೇಳು ಎಂದು ಗಂಟುಬಿದ್ದರು. ಸುಬ್ಬಿ ಏನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ನೀವಾದರೂ ಹೇಳಿ ಎಂದು ಸುಬ್ಬನಿಗೆ ಸುತ್ತುವರಿದವರೆಲ್ಲ ಗಂಟುಬಿದ್ದರು. ಗಂಟು ಬಿದ್ದಿದ್ದೇ ತಡ ಗಂಟಲು ಸರಿ ಮಾಡಿಕೊಂಡು ಸುಬ್ಬ ರೆಡಿಯಾದ.

'ರಾಣೆಬೆನ್ನೂರಾಗ ಭಾಳ ಜಾಲಿ ಬಡ್ಡಿ
ನನ್ನ ಹೇಂತಿ ಸುಬ್ಬಿ ಬಲು ಗಿಡ್ಡಿ"

'ಹೋ" ಎನ್ನಲು ತಯಾರಾಗಿದ್ದ ಹೆಣ್ಣಿನ ಕಡೆಯವರು 'ಹ್ಹೋ ಹ್ಹೋ ಹ್ಹೋ" ಅಂತ ಎದ್ದು ಬಿದ್ದು ನಗಲು ಪ್ರಾರಂಭಿಸಿದರು. ಸುಬ್ಬಿ ಕಿಸಕ್ಕನೆ ನಕ್ಕಿದ್ದಳು. ಸುಬ್ಬಿ ಎತ್ತರ ಎಷ್ಟಿರಬಹುದೆಂದು ವಿವರಿಸಿ ಬೇರೆ ಹೇಳಬೇಕಾಗಿಲ್ಲ.

ಮನೆಗೆ ಬಂದ ಮೇಲೆ ಉಡುಗೊರೆ ಏನೇನು ಬಂದಿದೆ ಎಂದು ನೋಡಲು ಕಾತುರ ತೋರಿದ ಸುಬ್ಬನಿಗೆ ಮೆಲ್ಲಗೆ ಗದರಿಸಿ ನಾಳೆ ನೋಡಿದರಾಯಿತೆಂದು ರೂಮಿಗೆ ತಳ್ಳಿದ್ದರು.

ಮತ್ತೊಂದು ರೋಮಾಂಚನ ಅನುಭವಿಸಿಕೊಂಡು ಬಂದ ಸುಬ್ಬ ಮರುದಿನ ಸ್ನಾನಗೀನ ಮುಗಿಸಿಕೊಂಡು ತಿಂಡಿ ತಿಂದು ಮಗದೊಂಡು ರೋಮಾಂಚನಕ್ಕೆ ಅಣಿಯಾಗಿ ನಿಂತ. ಸರಿ, ಎಲ್ಲ ಆಹೇರುಗಳನ್ನು ಬಿಚ್ಚಲು ಪ್ರಾರಂಭಿಸಿದರು. ಒಂದೊಂದೇ ಬಿಚ್ಚುತ್ತಿದ್ದಂತೆ ಎಡಗಿವಿಯವರೆಗೆ ಅಗಲಿಸಿದ್ದ ಬಾಯಿ ಮತ್ತೆ ಓರೀಜಿನಲ್‌ ಸ್ಥಿತಿಗೆ ಬಂದಿತ್ತು. ಕೆಲ ಜನ ಯಾವ ಪುಸ್ತಕ ಕೊಡಬೇಕೆಂದು ತಿಳಿಯದೆ ಎಂತೆಥದೋ ಪುಸ್ತಕಗಳನ್ನು ಕೊಟ್ಟಿದ್ದರು. ಒಂದೇ ಒಂದು ಹೆಸರಾಂತ ಸಾಹಿತಿ ರಚಿಸಿದ ಪುಸ್ತಕ ಕಂಡುಬರಲಿಲ್ಲ.

ಮೋಸಹೋದೆ ಕಣ್ಲಾ ಮೋಸಹೋದೆ ಅಂತ ತನ್ನಷ್ಟಕ್ಕೆ ತಾನೆ ಅಂದುಕೊಂಡ. ಕೊನೆಗೆ ಡಿಬ್ಬಿ ಮತ್ತು ಗೆಳೆಯರು ನೀಡಿದ ದೊಡ್ಡ ಗಿಫ್ಟಿನ ಮೇಲೆ ಸುಬ್ಬು ಬಲು ಆಸೆ ಇಟ್ಟುಕೊಂಡಿದ್ದ. ಮಿರಿಮಿರಿ ಮಿಂಚುತ್ತಿದ್ದ ಬೆಳ್ಳಿ ಬಣ್ಣದ ಕವರನ್ನು ಬಿಚ್ಚತೊಡಗಿದ. ಬೆಳ್ಳಿ ಕವರಾದ ಮೇಲೆ ಪೇಪರ ಕವರು, ಪೇಪರ ಕವರಾದ ಮೇಲೆ ಮತ್ತೊಂದು ಪೇಪರ ಕವರು, ಮತ್ತೊಂದಾದ ಮೇಲೆ ಮಗದೊಂದು ಪೇಪರ ಕವರು. ಸುಬ್ಬನ ಪೇಶನ್ಸು ಪಾತಾಳಕ್ಕಿಳಿದಿದ್ದರೆ, ಸಿಟ್ಟು ಹಿಮಾಲಯ ಪರ್ವತ ಏರಿತ್ತು.

ಎಲ್ಲಾ ಬಿಚ್ಚಿ ನೋಡಿದಾಗ ಕೊನೆಗೆ ಸಿಕ್ಕಿದ್ದು ಅಂಕಲಿಪಿ. ಡಿಬ್ಬಿ ಅಲ್ಲೆಲ್ಲಿಂದರೋ ಕಣ್ಣು ಹೊಡೆದಿದ್ದ.

English summary
Book Lover Subbu : An humorous article on the occasion of April 1 by Prasad Naik, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X