ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಅವರ ಹಾವ ಭಾವ, ಧ್ವನಿ ಏರಿಳಿತದ ವಿಶ್ಲೇಷಣೆ

By Manjunatha
|
Google Oneindia Kannada News

ಮೈಸೂರು, ಫೆಬ್ರವರಿ 19: ಮೋದಿ ಅತ್ಯುತ್ತಮ ಸಂವಹನಾಕಾರ, ಅವರ ಭಾಷಣ ಕಲೆಗೆ ಹೋಲಿಸಬಹುದಾದ ಇನ್ನೊಬ್ಬ ರಾಜಕಾರಣಿ ಸದ್ಯಕ್ಕಂತೂ ರಾಷ್ಟ್ರ ರಾಜಕಾರಣದಲ್ಲಿ ದೂರಕ್ಕೂ ಕಾಣ ಸಿಗುತ್ತಿಲ್ಲ. ಇದ್ದರೂ ಮೋದಿ ಅವರ ಶೈಲಿಯನ್ನೇ ಅನುಕರಿಸುವವರು ಇದ್ದಾರೆ ಅಷ್ಟೆ.

ಅವರ ಭಾಷಣ ಶೈಲಿ, ಧ್ವನಿ ಏರಿಳಿತ, ಹಾವ ಭಾವ, ಪದಗಳ ಆಯ್ಕೆ, ಎಲ್ಲವೂ ಗಮನಿಸಲರ್ಹ. ಅವರ ಭಾಷಣವನ್ನು ಸಂಶೋಧಿಸಿ ಪುಟಗಟ್ಟಲೆ ಪ್ರಬಂಧ ಬರೆದ ಪತ್ರಕರ್ತರೂ ಇದ್ದಾರೆ. ಈ ಲೇಖನದಲ್ಲೂ ಇದೇ ಪ್ರಯತ್ನವನ್ನು ಮಾಡ ಹೊರಟಿದ್ದೇವೆ.

ಚಿತ್ರಗಳು: ಸಿದ್ದರಾಮಯ್ಯ ತವರಲ್ಲಿ ಮೋದಿ ಮೋಡಿ

ಪ್ರಧಾನಿ ಮೋದಿ ಅವರು ಇಂದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮಾಡಿದ ಭಾಷಣ ಹೇಗಿತ್ತು, ಅವರ ಹಾವ ಭಾವದ, ಅವರ ಶೈಲಿಯ, ಪದಗಳ ಆಯ್ಕೆಯ ವಿಮರ್ಶೆಯನ್ನು ಮಾಡುವ ಸಣ್ಣ ಪ್ರಯತ್ನವೇ ಈ ಲೇಖನ.

ಮೋದಿ ಅವರು ಇಂದು ಮೊದಲು ಭಾಷಣ ಆರಂಭಿಸಿದ್ದು ಕನ್ನಡದಲ್ಲಿ, ಅವರು ತಮಿಳುನಾಡಿನಲ್ಲಿಯೂ ಇದೇ ತಂತ್ರ ಅನುಸರಿಸಿದ್ದರು, ದಕ್ಷಿಣ ಭಾರತೀಯರ ಭಾಷಾ ಪ್ರೇಮದ ಸ್ಪಷ್ಟ ಅರಿವಿರುವ ಮೋದಿ ಅವರು ಮೊದಲು ಸ್ಥಳೀಯ ಭಾಷೆಯಲ್ಲೇ ಭಾಷಣ ಆರಂಭಿಸಿದರು.

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಮೋದಿಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಮೋದಿ

ಸ್ಥಳೀಯ ಭಾಷೆಯಲ್ಲಿ ಆರಂಭ

ಸ್ಥಳೀಯ ಭಾಷೆಯಲ್ಲಿ ಆರಂಭ

ಮೋದಿ ಅವರು ಚಾಮುಂಡಿ ಬೆಟ್ಟ, ಸುತ್ತೂರು ಮಠ, ಮೈಸೂರಿನ ಅರಸರು, ಕುವೆಂಪು ಅವರನ್ನೆಲ್ಲಾ ನೆನದು ಸಾಮಾನ್ಯ ಜನರ ಹುಬ್ಬೇರುವಂತೆ ಮಾಡಿದರು. 'ಎಲಾ ಇವ್ರಾ ಇವ್ರಿಗೆ ನಮ್ಮ ಊರಿನ ಬಗ್ಗೆ ಎಷ್ಟೋಂದ್ ಗೊತ್ತಿದೆ' ಎಂಬ ಭಾವ ಕೇಳುಗರಲ್ಲಿ ಹಾದು ಹೋಗಿರದೇ ಇರದು. ಇದು ಮೋದಿ ಅವರ ಸಾಮಾನ್ಯ ಶೈಲಿ, ಕಳೆದ ಬಾರಿ ಬೆಂಗಳೂರಿಗೆ ಬಂದಾಗ ರಾಹುಲ್ ದ್ರಾವಿಡ್‌ ಅವರನ್ನು ಪ್ರಸ್ತಾಪಿಸಿ ಭಾರಿ ಶಿಳ್ಳೆಗಿಟ್ಟಿಸಿಕೊಂಡಿದ್ದರು. ಮತ್ತು ಈ ವಿಷಯಗಳನ್ನೆಲ್ಲಾ ಅವರು ಭಾಷಣದ ಮೊದಲಲ್ಲೇ ಪ್ರಸ್ತಾಪಿಸುತ್ತಾರೆ ಇದು ಒಂದು ರೀತಿ ಜನರನ್ನು ತಮ್ಮ ಭಾಷಣ ಕೇಳಲು ಸಜ್ಜು ಗೊಳಿಸುವ ತಂತ್ರ ಕೂಡಾ ಹೌದು.

ಎಚ್ಚರಿಕೆಯೂ ಇತ್ತು

ಎಚ್ಚರಿಕೆಯೂ ಇತ್ತು

ಮೋದಿ ಗುಜರಾತಿ, ಅವರಿಗೆ ಭಾಷೆ ಬಳಕೆ ಚೆನ್ನಾಗಿ ಗೊತ್ತು, ಎಚ್ಚರಿಕೆಯನ್ನೂ ನಗುತ್ತಲೇ ದಾಟಿಸುವ ಕಲೆ ಅವರಿಗೆ ಗೊತ್ತಿದೆ. ಇಂದಿನ ಭಾಷಣದಲ್ಲಿಯೂ ಅವರು ಹಾಗೆ ಮಾಡಿದರು. 'ಕೇಂದ್ರ ನೀಡುವ ಅನುದಾನ ರಾಜ್ಯ ಸರ್ಕಾರ ನುಂಗಿ ಹಾಕುತ್ತಿದೆ, ನಾವು 2022 ರಷ್ಟರಲ್ಲಿ ಎಲ್ಲರಿಗೂ ಮನೆ ನಿರ್ಮಿಸುವ ಆಸೆ ಇಟ್ಟುಕೊಂಡಿದ್ದೇವೆ, ಸಿದ್ದರಾಮಯ್ಯ ಅವರಂತಹಾ ಸರ್ಕಾರಗಳು ಇದ್ದರೆ ಇದು ಸಾಧ್ಯವಾ? ಹಾಗಾಗಿ ಬಿಜೆಪಿಗೆ ಮತ ಹಾಕಿ' ಎಂದು ಮೋದಿ ಇಂದು ಹೇಳಿದರು. ಈ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಂಥಹವರಿಗೂ ಅರ್ಥವಾಗುತ್ತದೆ ಇದೊಂದು ಬೆದರಿಕೆ ಅಥವಾ ಪ್ರಲೋಭನೆ ಎಂದು. ಬಿಜೆಪಿಗೆ ಮತಹಾಕದಿದ್ದರೆ ನಿಮಗೆ ಮನೆ ಸಿಗುವುದಿಲ್ಲ ಅಥವಾ ರಾಜ್ಯದಲ್ಲಿ ಇದೇ ಸರ್ಕಾರ ಇದ್ದರೆ ನಾವು ಇಲ್ಲಿ ಮನೆ ನಿರ್ಮಿಸಲು ಸಾಧ್ಯವಿಲ್ಲ ಎಂಬ ಧ್ವನ್ಯರ್ಥ ಮೋದಿ ಅವರ ಈ ಮಾತಿನಲ್ಲಿ ಗುರುತಿಸಬಹುದು ಆದರೆ ಮೋದಿ ಅವರು ಅದನ್ನು ನೇರವಾಗಿ ಹೇಳದೆ ಜೇನು ಬೆರೆಸಿ ಹೇಳಿದರಷ್ಟೆ.

ಸಿದ್ದರಾಮಯ್ಯ ಕೂಡಾ ಬೆಸ್ಟ್‌

ಸಿದ್ದರಾಮಯ್ಯ ಕೂಡಾ ಬೆಸ್ಟ್‌

ಮೋದಿ ಅವರು ಜನಪ್ರಿಯ ಆಂಗಿಕ ಅಭಿನಯ ಎಡಗೈ ಇಂದ ಬಲಗೈ ಹಸ್ತಕ್ಕೆ ಹೊಡೆದು ಮಾತನಾಡುವುದು. ಯಾವುದಾದರೂ ಪ್ರಶ್ನಾತ್ಮಕವಾದ ಮಾತು ಅಥವಾ ಸಾಧನೆಯನ್ನು ಹೇಳುವಾಗ ಮಾತ್ರ ಅವರು ಹೀಗೆ ಮಾಡುತ್ತಾರೆ. ಮೋದಿ ಅವರು ಇಂದೂ ಕೂಡ ಕೈ ಹೊಡೆದು ಪ್ರಶ್ನಿಸಿದರು, ಆದರೆ ಇಂದು ಹೆಚ್ಚು ಗಮನ ಸೆಳೆದಿದ್ದು ಅವರ ಡೈರಿ ಅಭಿನಯ. ಡೈರಿ ಕುರಿತು ಪ್ರಸ್ತಾಪ ಮಾಡಿದ ಅವರು ಡೈರಿ ಹಾಳೆ ತೆರೆಯುವಂತೆ ಅಭಿನಯ ಮಾಡಿದರು, ಏನೋ ಗಹನವಾದುದು, ಪ್ರಮುಖವಾದುದು ಹೇಳುವಾಗ ಬಳಸುವ ತಗ್ಗಿದ ಭಾರವಾದ ಧ್ವನಿ ಧಾಟಿಯನ್ನು ಈ ಸಮಯದಲ್ಲಿ ಬಳಸಿದ ಮೋದಿ ಅವರ ಅಭಿನಯದ ಮೂಲಕ ಜನರನ್ನು ನಗಿಸಿದರು ಕೂಡಾ. ರಾಹುಲ್ ಅಥವಾ ಸ್ವತಃ ಬಿಜೆಪಿ ಯಡಿಯೂರಪ್ಪ ಅವರಿಗೂ ಈ ರೀತಿ ಆಂಗಿಕ ಅಭಿನಯ ಸಾಧ್ಯವಿಲ್ಲ. ಇದನ್ನು ಸಿದ್ದರಾಮಯ್ಯ ಪರಿಣಾಮಕಾರಿಯಾಗಿ ಬಳಸುತ್ತಾರೆ. ಇದರಲ್ಲಿ ಅವರು ಮೋದಿಯನ್ನೂ ಮೀರಿಸಬಲ್ಲರು.

ಇಂದು ಎಷ್ಟು ಬಾರಿ ಬಳಸಿದರು

ಇಂದು ಎಷ್ಟು ಬಾರಿ ಬಳಸಿದರು

'ಭಾಯಿಯೊ ಔರ್ ಬೆಹನೋ' ಇದು ಮೋದಿ ಅವರ ಸಿಗ್ನೇಚರ್ ವಾಕ್ಯವೇ ಆಗಿಬಿಟ್ಟಿದೆ. ಈ ಒಂದು ವಾಕ್ಯ ಇಲ್ಲದೇ ಮೋದಿ ಭಾಷಣ ಮಾಡಲಾರರೇನೊ ಎಂಬಷ್ಟು ಈ ವಾಕ್ಯವನ್ನು ಅವರು ಬಳಸುತ್ತಾರೆ ಆದರೆ ಇಂದು ಮೈಸೂರಿನಲ್ಲಿ ಅವರು ಈ ವಾಕ್ಯವನ್ನು ಬಳಸಿದ್ದು ಕೇವಲ 3 ಬಾರಿ ಮಾತ್ರ ಎನ್ನುವುದು ವಿಶೇಷ. ಗುಜರಾತ್‌ ಚುನಾವಣಾ ರ್ಯಾಲಿಯೊಂದರಲ್ಲಿ ಒಂದು ಗಂಟೆ ಭಾಷಣದಲ್ಲಿ 'ಭಾಯಿಯೊ ಔರ್ ಬೆಹನೊ' ಎಂದು 21 ಬಾರಿ ಮೋದಿ ಬಳಸಿದ್ದರು.

ಧ್ವನಿಯಿಂದಲೇ ಅಭಿವ್ಯಕ್ತಿ

ಧ್ವನಿಯಿಂದಲೇ ಅಭಿವ್ಯಕ್ತಿ

ಮೋದಿ ಅವರು ತಮ್ಮ ಧ್ವನಿ ಏರಿಳಿತದ ಮೂಲಕವೇ ತಾವು ಮಾತನಾಡುತ್ತಿರುವ ವಿಷಯ ಗಹನವಾದುದೆ, ವ್ಯಂಗ್ಯವೇ, ಸಾಧಾರಣ ವಿಷಯವೇ, ಗಂಭೀರವಾದುದೆ ಎಂಬುದನ್ನು ಕೇಳುಗರಿಗೆ ಗೊತ್ತು ಮಾಡಬಲ್ಲರು. ಇಂದೂ ಕೂಡಾ ಅವರ ಭಾಷಣದಲ್ಲಿ ಇದು ಢಾಳಾಗಿ ಕಾಣಲು ದೊರಕಿತು. ಡೈರಿ ವಿಷಯ ಪ್ರಸ್ತಾಪಿಸಿದಾಗ ಧನಿ ತಗ್ಗಿಸಿ ಇದೊಂದು ಹೀನ ಮತ್ತು ಗುಪ್ತವಾದ ಸುದ್ದಿ ಎನ್ನುವ ಭಾವ ಹೊರಡಿಸಿದರು. ಅದೇ, ಮೈಸೂರಿಗೆ ಸ್ಯಾಟಲೈಟ್ ಬಸ್ ನಿಲ್ದಾಣ ಘೋಷಿಸುವ ಸಂದರ್ಭ ಅವರ ಧನಿ ಗಟ್ಟಿಯಾಗಿತ್ತು ಒಂದೇ ಸ್ಥಾಯಿಯಲ್ಲಿತ್ತು, ಪ್ರತಿ ಪದವನ್ನು ಸಮಾಧಾನವಾಗಿ ಕೇಳುಗರಿಗೆ ಗೊಂದಲವಾಗದಂತೆ ಬಿಡಿಬಿಡಿಯಾಗಿ ಬಿಡಿಸಿ ಉಚ್ಛರಿಸಿದರು. ಕಮಿಷನ್ ಸರ್ಕಾರ ಬೇಡ ಮಿಷನ್ ಸರ್ಕಾರ ಬೇಕು ಎಂಬಲ್ಲಿ ಅವರ ಧನಿ ಏರುಗತಿಯಲ್ಲಿ ಸಾಗುತ್ತಿತ್ತು, ಕಮಿಷನ್ ಪದವನ್ನು ನಿಧಾನವಾಗಿ ಹೇಳಿದ ಅವರು ಮಿಷನ್ ಪದವನ್ನು ಜೋರು ಮತ್ತು ಖಚಿತ ಧನಿಯಲ್ಲಿ ಹೇಳಿ ಅದೊಂದು ಉತ್ತಮ ಗುರಿ ಎಂಬಂತೆ ಬಿಂಬಿಸಲು ಯಶಸ್ವಿಯಾದರು.

ಹೊಮ್ಮಿಸುವ ಭಾವ ಗಟ್ಟಿಯಾದುದು

ಹೊಮ್ಮಿಸುವ ಭಾವ ಗಟ್ಟಿಯಾದುದು

ಕಾಂಗ್ರೆಸ್‌ನ ಮಣಿಶಂಕರ್‌ ಅಯ್ಯರ್ ಮೋದಿಯನ್ನು 'ನೀಚ್' ಎಂದಾದ ನಂತರ ಮೋದಿ ಅವರು ರ್ಯಾಲಿಗಳಲ್ಲಿ ಅದನ್ನು ಪ್ರಸ್ತಾಪಿಸಿದ್ದು ನೆನಪಿದ್ದರೆ ಈ ಧ್ವನಿಯ ಬಳಕೆಯಿಂದ ಮೋದಿ ಅವರು ಏನು ಮಾಡಬಲ್ಲರು ಎಂಬುದು ಸುಲಭವಾಗಿ ಊಹಿಸಬಹುದು. ಇಂದೂ ಕೂಡ ಈ ರೀತಿಯ ಕೆಳ ಸ್ಥಾಯಿಯ ಧನಿಯ ಪ್ರಯೋಗ ಮಾಡಿದರು. ಕಾಂಗ್ರೆಸ್ 50 ವರ್ಷಗಳಿಂದ ಏನೂ ಮಾಡದೆ ಈಗ ನಮ್ಮನ್ನು ಟೀಕಿಸುತ್ತಿದೆ ಎಂದ ಮೋದಿ ಈ ಮಾತುಗಳನ್ನು ಕೆಳ ಸ್ಥಾಯಿ ಧನಿಯ ಪ್ರಯೋಗದ ಮೂಲಕ ಆಡಿದರು. 'ನಾವು ಇಷ್ಟೆಲ್ಲಾ ಮಾಡಿದರೂ ವಿನಾ ಕಾರಣ ನಮ್ಮನ್ನೇ ದೂಷಿಸುತ್ತಾರೆ' ಎಂಬ ಭಾವ ಮೋದಿ ಅವರ ಕೆಳಸ್ಥಾಯಿ ಧನಿಯ ಪ್ರಯೋಗದಿಂದ ಸ್ಪಷ್ಟವಾಗಿ ಹೊಮ್ಮುತ್ತದೆ.

ಮೋದಿ ಅವರು ಹೊರತಲ್ಲ

ಮೋದಿ ಅವರು ಹೊರತಲ್ಲ

ಬಿಜೆಪಿ ಪಕ್ಷದ ಬಹುತೇಕರು ತಮ್ಮ ಭಾಷಣಗಳಲ್ಲಿ ದೇಶ ಪ್ರೇಮದ ವಿಷಯ ಪ್ರಯೋಗಿಸಿಯೇ ತೀರುತ್ತಾರೆ. ಮೋದಿ ಅವರು ವಿಶೇಷವೇನಲ್ಲ, ಅವರು ಸಹ ಬಹುಜನರನ್ನು ಭಾವನಾತ್ಮಕವಾಗಿ ತಾಕಬಲ್ಲ ದೇಶ ಪ್ರೇಮದ ಪ್ರಯೋಗವನ್ನು ಚುನಾವಣಾ ಪ್ರಚಾರದಲ್ಲಿ ಮಾಡುತ್ತಲೇ ಬಂದಿದ್ದಾರೆ. ಇಂದು ಅವರು, 'ದೇಶದ ಹೊರತಾಗಿ ಇನ್ನಾವ ವಿಷಯದಲ್ಲೂ ವ್ಯಾಮೋಹ ಇಲ್ಲದ ಬಿಜೆಪಿಗೆ ಮತ ನೀಡಿ' ಎಂದು ಹೇಳಿದರು. ಒಂದೇ ಮಾತಿನಲ್ಲಿ ಬಿಜೆಪಿಯನ್ನು ದೇಶ ಪ್ರೇಮಿ, ಭ್ರಷ್ಟಾಚಾರ ವಿರೋಧಿ, ಜಾತಿ ಧರ್ಮದ ಹೊರತಾದ ಪಕ್ಷ ಎಂದು ಬಿಂಬಿಸುವಲ್ಲಿ ಅವರು ಯಶಸ್ವಿಯಾದರು. ಅವರ ಈ ಮಾತು ಭಾರಿ ಕರತಾಡನವನ್ನೂ ಗಿಟ್ಟಿಸಿತು.

English summary
Prime minister Narendra Modi has a great style of speech. He is a strong communicator, He uses his body language, voice variation to communicate people more effectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X