ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ಜನ್ಮಾಷ್ಟಮಿ ಮತ್ತು ಕೃಷ್ಣ ಜಯಂತಿಗಿರುವ ವ್ಯತ್ಯಾಸವೇನು?

By ವಿಷ್ಣುದಾಸ ನಾಗೇಂದ್ರಾಚಾರ್ಯ
|
Google Oneindia Kannada News

ಶ್ರೀಕೃಷ್ಣ ಅವತರಿಸಿದ್ದು ಶ್ರಾವಣ ಕೃಷ್ಣ ಅಷ್ಟಮಿಯ ಮಧ್ಯರಾತ್ರಿಯಂದು, ರೋಹಿಣಿ ನಕ್ಷತ್ರದಲ್ಲಿ. ಈ ಯೋಗಕ್ಕೆ ಜಯಂತಿ ಯೋಗ ಎನ್ನುತ್ತಾರೆ. ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು, ಮಧ್ಯರಾತ್ರಿಯಲ್ಲಿ ಚಂದ್ರೋದಯದ ವೇಳೆಗೆ ರೋಹಿಣಿ ನಕ್ಷತ್ರವಿದ್ದರೆ ಶ್ರೀಕೃಷ್ಣ ಜಯಂತಿ ಆಚರಿಸಲಾಗುತ್ತದೆ.

ಕೆಲವು ವರ್ಷಗಳು ಮಧ್ಯರಾತ್ರಿಯ ವೇಳೆ ರೋಹಿಣಿ ನಕ್ಷತ್ರ ದೊರೆಯುವುದಿಲ್ಲ. ಹೀಗಾಗಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣಾಷ್ಟಮಿ ಆಚರಿಸಲಾಗುತ್ತದೆ. ಈ ಬಾರಿ ಕೃಷ್ಣಾಷ್ಟಮಿಯು ಸೆಪ್ಟೆಂಬರ್ 5 ರ ಶನಿವಾರ ಕೃಷ್ಣ ಜಯಂತಿಯು ಎಲ್ಲ್ಲೆಡೆ ಸಂಭ್ರಮದಿಂದ ಸಡಗರದಿಂದ ಜರುಗಲಿದೆ.[ಬಸವನಗುಡಿಯಲ್ಲಿ ಕೃಷ್ಣ ಜನ್ಮಾಷ್ಟಮಿ, ಲೀಲೋತ್ಸವ]

This article enlighten difference between Krishna Janmashtami and Krishna Jayanthi

ಪುರಾಣಗಳಲ್ಲಿ ಯಾವ ವ್ರತ ಶ್ರೇಷ್ಠ?

ಸಮಗ್ರ ಪುರಾಣಗಳಲ್ಲಿ ವಿಹಿತವಾಗಿರುವ ಎಲ್ಲ ವ್ರತಗಳಲ್ಲಿ ಸರ್ವೋತ್ತಮವಾದ ವ್ರತ ಶ್ರೀಕೃಷ್ಣ ಜಯಂತಿವ್ರತ. ಈ ವ್ರತದ ನಂತರದ ಸ್ಥಾನ, ಏಕಾದಶಿಯದು. ಆ ನಂತರದ ಸ್ಥಾನ ಚಾತುರ್ಮಾಸ್ಯ ವ್ರತದ್ದು. ಆ ಬಳಿಕ ಎಲ್ಲಾ ವ್ರತಗಳು ಬರುತ್ತದೆ.

ಶ್ರೀ ಮಧ್ವಾಚಾರ್ಯರು 'ಜಯಂತೀ ನಾಮ ಸಾ ಪ್ರೋಕ್ತಾ ಸರ್ವಪಾಪಪ್ರಣಾಶಿನೀ ಎಂದು ಹೇಳುತ್ತಾ ಈ ಜಯಂತೀ ವ್ರತ ಸರ್ವಪಾಪಗಳನ್ನೂ ವಿನಾಶ ಮಾಡುವ ವ್ರತ ಎಂದು ತಿಳಿಸಿದ್ದಾರೆ.

ಶ್ರೀ ಕೃಷ್ಣ ಜಯಂತಿಯ ಮಹಾತ್ಮೆ ಏನು?

ಇದು ಶ್ರೀ ಕೃಷ್ಣ ರೂಪದ ಜಯಂತಿ. ಪರಮಾತ್ಮ ಭೂಭಾರಹರಣಕ್ಕಾಗಿ, ದ್ವಾಪರದಲ್ಲಿ ಅವತಾರ ಮಾಡಿದ, ಗೀತಾ ಭಾಗವತಗಳ ರೂಪದಲ್ಲಿ ಇಂದಿಗೂ ನಮ್ಮೊಡನೆ ಇದ್ದಾನೆ. ಹೀಗಾಗಿ ನಮಗೆ ಅತ್ಯಂತ ಸನ್ನಿಹಿತವಾದ ಅವತಾರವಾದ್ದರಿಂದ ಈ ಜಯಂತಿಯಲ್ಲಿ ಮಾತ್ರ ಉಪವಾಸ ಮಾಡಬೇಕು ಎಂದು ಶ್ರೀ ಭಾರದ್ವಾಜರು ತಿಳಿಸುತ್ತಾರೆ.

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ I
ಯಸ್ಮಾತ್ ಸನ್ನಿಹಿತಾsತ್ಯಂತಂ ತತ್ರೈವೋಪವಸೇನ್ನರಃ II
ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಶೇಷತಃ I
ಸಾನ್ನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ II

ಎಲ್ಲ ಜಯಂತಿಗಳಲ್ಲಿಯೂ ಶ್ರೀಕೃಷ್ಣಜಯಂತಿ ಸರ್ವೋತ್ಕೃಷ್ಟವಾದದ್ದು. ನಮಗೆ ಅತ್ಯಂತ ಹತ್ತಿರದ ಅವತಾರವಾದ್ದರಿಂದ ನಾವು ಈ ಜಯಂತಿಯಲ್ಲಿಯೇ ಉಪವಾಸ ಮಾಡಬೇಕು.

ಎಲ್ಲ ಅವತಾರಗಳ ಜಯಂತಿಗಳಲ್ಲಿ ವಿಶೇಷವಾಗಿ ಪೂಜೆಯನ್ನು ಸಲ್ಲಿಸಬೇಕು. ಆದರೆ, ನಮಗೆ ಕಾಲದಿಂದ ಹತ್ತಿರವಾದ ಅವತಾರದಲ್ಲಿ ಮಾತ್ರ ಉಪವಾಸವನ್ನು ಮಾಡಬೇಕು, ದೂರದ ಅವತಾರದಲ್ಲಲ್ಲ.

ಯಾವಾಗ ಉಪವಾಸ ಮಾಡಬೇಕು ?

ಕೃತಯುಗದಲ್ಲಿ ನರಸಿಂಹ ಅವತಾರ ಆಗುವುದಕ್ಕಿಂತ ಮುನ್ನ ಕಲ್ಕಿ ಜಯಂತಿ, ನರಸಿಂಹ ಜಯಂತಿ, ಕೂರ್ಮಾ ಜಯಂತಿ, ವಾಮನ ಜಯಂತಿ, ತ್ರೇತೆಯಲ್ಲಿ ಪರಶುರಾಮ ಜಯಂತಿ, ರಾಮನವಮಿಯಂದು ಉಪವಾಸ ಮಾಡಬೇಕು.ಕೃಷ್ಣ ಜಯಂತಿಯಂದು ಉಪವಾಸ ಮಾಡಬೇಕು. ಉಳಿದ ಜಯಂತಿಗಳಲ್ಲಿ ಉಪವಾಸವಿಲ್ಲ. ಆದರೆ ವಿಶೇಷ ಪೂಜೆ ಸಲ್ಲಿಸಬೇಕು.

ಬುದ್ದಾವತಾರ, ಕೃಷ್ಣಾವತಾರ ನಂತರ ಆಗಿರುವ ಅವತಾರ. ಇದು ಸನ್ನಿಹಿತ ಅವತಾರ ಆಗಿರುವುದರಿಂದ, ಯಾವ ನಿಯಮದ ಪ್ರಕಾರ ಉಪವಾಸ ಮಾಡಬೇಕು?

ನಿಜ. ಆದರೆ ಬುದ್ಧವತಾರ ಅಸುರ ಜನ ಮೋಹಕ್ಕಾಗಿ ಆಗಿರುವ ಅವತಾರ. ಹೀಗಾಗಿ ಬುದ್ಧನ ಪ್ರತಿಮೆಯನ್ನಿಟ್ಟು ಪೂಜಿಸುವ ಕ್ರಮವನ್ನು ಅನುಸರಿಸುವ ಹಾಗಿಲ್ಲ.

ಹೇಗೆ ರಾಜನಾದವಾನು ಮಾರುವೇಷವನ್ನು ಹಾಕಿ ನಗರಪ್ರದಕ್ಷಿಣೆಗೆ ಹೋದಾಗ, ತನ್ನ ಜೊತೆಯಲ್ಲಿ ಒಂದಿಬ್ಬರನ್ನು ಕರೆದುಕೊಂಡು ಹೋಗಿರುತ್ತಾನೆ. ಅವನ ಸಂಗಡ ಇರುವವರಿಗೆ ಇವನು ರಾಜ ಎಂದು ತಿಳಿದಿರುತ್ತದೆ. ಆದರೆ, ಊರಿನ ಮಧ್ಯದಲ್ಲಿ ನಡೆದಾಡುವಾಗ ಅವರು ರಾಜನಿಗೆ ಯಾವ ಮರ್ಯಾದೆಯನ್ನೂ ಸಲ್ಲಿಸುವದಿಲ್ಲ, ರಾಜನಂತೆ ವ್ಯವಹರಿಸುವದಿಲ್ಲ. ಕಾರಣೆ, ರಾಜಾಜ್ಞೆಯೇ ಆ ರೀತಿಯಾಗಿದೆ, ಹಾಗೂ, ಅವರು ಗೌರವವನ್ನು ಸಲ್ಲಿಸುತ್ತ ಕುಳಿತರೆ ಬಂದ ಕಾರ್ಯವೇ ಆಗುವದಿಲ್ಲ.

ಹಾಗೆಯೇ ಬುದ್ಧಾವತಾರದ ಉದ್ದೇಶ ಸಮಾಜ ಕಂಟಕರಿಂದ ವೇದಗಳನ್ನು ರಕ್ಷಿಸುವದು. ಕೃಷ್ಣಾವತಾರದ ಉದ್ದೇಶ ವೇದಗಳ ಸಾರವನ್ನು ಗೀತೆಯ ಮೂಲಕ ನೀಡುವುದು. ಹೀಗಾಗಿ ಜ್ಞಾನ ಪ್ರದವಾದ ಕೃಷ್ಣಾವತಾರವನ್ನೇ ಕಲಿಯುಗದ ನಾವು ಉಪಾಸನೆ ಮಾಡಬೇಕು. ಭಾಗವತದ ಏಕಾದಶಸ್ಕಂಧದಲ್ಲಿ ಕಲೌ ಕೃಷ್ನಮ್ ಎಂದು ಸ್ಪಚ್ಟವಾಗಿ ತಿಳಿಸಲಾಗಿದೆ. ಹಾಗಾಗಿ ಶ್ರೀಕೃಷ್ಣನ ಅವತಾರವಾದ ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದೇ ಉಪವಾಸ ಮಾಡಬೇಕು.[ಮುದ್ದು ಮಕ್ಕಳ ರೂಪದಲ್ಲಿ ಅವತರಿಸಿದ್ದಾನೆ ಬೆಣ್ಣೆಕೃಷ್ಣ]

ಯಾಕೆ ಕೃಷ್ಣಾ ಜನ್ಮಾಷ್ಟಮಿಯಂದೇ ಉಪವಾಸ ಮಾಡಬೇಕು?

ಸಜ್ಜನರ ಸರ್ವ ಪಾಪಗಳನ್ನು ಪರಿಹರಿಸುವ, ಪರಮಾತ್ಮನ ಕಾರುಣ್ಯದ ಕುರುಹಾದ ಈ ದಿವಸದಂದು ಉಣ್ಣುವ ಮನುಷ್ಯ ಅಂತಗಾಣದ ಪಾಪಕ್ಕೆ ಗುರಿಯಾಗುತ್ತಾನೆ.

ಕೃಷ್ಣಾಷ್ಟಮೀದಿನೇ ಪ್ರಾಪ್ತೇ ಯೇನ ಭುಕ್ತಂ ದ್ವಿಜೋತ್ತಮ I
ತ್ರೈಲೋಕ್ಯಸಂಭವಂ ಪಾಪಂ ತೇನ ಭುಕ್ತಂ ನ ನ ಸಂಶಯಃ II

ಕೃಷ್ಣಾಷ್ಟಮಿಯಂದು ಉಣ್ಣು ವ್ಯಕ್ತಿ ಮೂರು ಲೋಕದಲ್ಲಿರುವ ಸಕಲ ಪಾಪದ ಫಲವನ್ನೂ ಉಣ್ಣಲೇಬೇಕು. ಬ್ರಹ್ಮಹತ್ಯೆ, ಸುರಾಪಾನ, ಗೋಹತ್ಯೆ, ಸ್ತ್ರೀ ಹತ್ಯೆ ಮುಂತಾದ ಸಕಲ ಪಾಪಗಳು ಈ ದಿವಸದ ಊಟದಿಂದ ಬಂದೊಗುತ್ತದೆ. ಈ ದಿನ ಉಪವಾಸ ಮಾಡದಿದ್ದರೆ ಮುಂದಿನ ಪೀಳಿಗೆಯವರು ಕ್ಲೇಶವನ್ನು ಪಡಬೇಕಾಗುತ್ತದೆ ಎಂದು ವೇದ ವ್ಯಾಸರು ತಿಳಿಸುತ್ತಾರೆ.ಅತೀತಾನಾಗತಂ ತೇನ ಕುಲಮೇಕೋತ್ತರಂ ಶತಮ್ I
ಪಾತಿತಂ ನರಕೇ ಘೋರೇ ಭುಂಜತಾ ಕೃಷ್ಣವಾಸರೇ II

ಹಿಂದು ಮುಂದಿನ ನೂರಾ ಒಂದು ಜನ ತಂದೆತಾಯಿಯರು, ನಾವು ಕೃಷ್ಣಾಷ್ಟಮಿಯನ್ನು ಆಚರಿಸದಿದ್ದರೆ ನರಕವಾಸ ಮಾಡಬೇಕಾಗುತ್ತದೆ.

ಇಷ್ಟೇ ಅಲ್ಲ, ಆ ದಿವಸ ಉಣ್ಣುವದರಿಂದ ಉಂಟಾಗುವ ಭಯಂಕರ ದುಷ್ಫಲಗಳನ್ನು ಪುರಾಣಗಳು ತಿಳಿಸುತ್ತವೆ. ಇಷ್ಟು ಕಠಿಣವಾಗಿ ಆ ದಿವಸ ತಿನ್ನುವದನ್ನು ನಿಷೇಧಿಸಲು ಕಾರಣ, ಕೃಷ್ಣಜಯಂತಿಯ ಸರ್ವಶ್ರೇಷ್ಠತೆ.

ನಮ್ಮೆಲ್ಲರನ್ನು ಉದ್ಧಾರ ಮಾಡಲು ಅವತರಿಸಿ ಬಂದ ಆ ಪರಬ್ರಹ್ಮನನ್ನು ನೆನೆಯದಿರುವದಕ್ಕಿಂತ, ಪೂಜಿಸದೇ ಇರುವದಕ್ಕಿಂತ ಮಿಗಿಲಾದ ಪಾಪವಿರಲು ಸಾಧ್ಯವೇ?

ಪರಮಾತ್ಮ ಅವತರಿಸಿದ ಈ ಪವಿತ್ರದಿನ ಇಪ್ಪತ್ತು ಕೋಟಿ ಏಕಾದಶಿಗಳಿಗೆ ಸಮವಾದ ವ್ರತ ಎಂದು ಬ್ರಹ್ಮವೈವರ್ತಪುರಾಣ ತಿಳಿಸುತ್ತದೆ - "ಏಕಾದಶೀನಾಂ ವಿಶಂತ್ಯಃ ಕೋಟ್ಯೋ ಯಾಃ ಪರಿಕೀರ್ತಿತಾಃ I ತಾಭಿಃ ಕೃಷ್ಣಾಷ್ಟಮೀ ತುಲ್ಯಾ"

ಏನಿದು ಮಹಾಯುಗ?

ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ ಈ ನಾಲ್ಕು ಯುಗಗಳ ಸಮೂಹಕ್ಕೆ ಮಹಾಯುಗ ಎನ್ನುತ್ತಾರೆ. ಇದರ ಪರಿಮಾಣ 43,20,000 ವರ್ಷಗಳು. ಈ ರೀತಿಯ ಎರಡು ಮಹಾಯುಗಗಳಲ್ಲಿ ಅಂದರೆ 86,40,000 ವರ್ಷಗಳಲ್ಲಿ ಒಟ್ಟು 20,73,60,000 ಏಕಾದಶಿಗಳು ಬರುತ್ತವೆ. ಅಷ್ಟೂ ಏಕಾದಶಿಗಳನ್ನು ಮಾಡಿದಲ್ಲಿ ಪಾಪ ಪರಿಹಾರವಾಗುತ್ತದೆ. ಎಷ್ಟು ಪುಣ್ಯ ಒದಗಿಬರುತ್ತದೆಯೋ ಅಷ್ಟು ಫಲ ಕೇವಲ ಒಂದು ಕೃಷ್ಣಜಯಂತಿಯಂದು ಶ್ರದ್ಧೆಯಿಂದ ಉಪವಾಸ ಮಾಡಿ, ಭಕ್ತಿಯಿಂದ ಭಗವಂತನನ್ನು ಅರ್ಚಿಸಿದಲ್ಲಿ ಒದಗಿಬರುತ್ತದೆ.[World premier of 'ಕೃಷ್ಣಂ ವಂದೇ ಜಗದ್ಗುರುಂ...']

ವಿಚಿತ್ರ ವಿಚಿತ್ರ ಪಾಪಗಳನ್ನು ಮಾಡಿದ ನಮಗೆ ಅಷ್ಟು ಮನುಷ್ಯ ಜನ್ಮಗಳು ಬರುತ್ತವೆ ಎನ್ನುವದೇ ದುಸ್ತರ. ಅಂತಹುದರಲ್ಲಿ ಕೇವಲ ಒಂದು ದಿವಸದ ಉಪವಾಸಕ್ಕೆ ಅಷ್ಟು ಫಲವನ್ನು ನೀಡುವ ಶ್ರೀಕೃಷ್ಣನ ಕಾರುಣ್ಯಕ್ಕೆ ಎಣೆಯುಂಟೇ?
ಅಷ್ಟೇ ಅಲ್ಲ, ಕೃಷ್ಣಜಯಂತಿಯನ್ನು ಆಚರಿಸುವದರಿಂದ ಪರಮಾತ್ಮ ಸುಪ್ರಸನ್ನನಾಗಿ ಮಹಾಫಲಗಳನ್ನು ನೀಡುತ್ತಾನೆ ಎಂದು ಭವಿಷ್ಯೋತ್ತರಪುರಾಣದಲ್ಲಿ ವೇದವ್ಯಾಸದೇವರು ತಿಳಿಸುತ್ತಾರೆ -

ನ ದೌರ್ಭಾಗ್ಯಂ ನ ವೈಧವ್ಯಂ ನ ತಸ್ಯ ಕಲಹೋ ಗೃಹೇ I
ಸಂತತೇರವಿಯೋಗಶ್ಚ ನ ಪಶ್ಯತಿ ಯಮಾಲಯಮ್ II

ಸಂಪರ್ಕೇಣಾಪಿ ಯಃ ಕುರ್ಯಾತ್ ಕೃಷ್ಣಜನ್ಮಾಷ್ಟಮೀವ್ರತಮ್ I
ಚಿತ್ತೇಪ್ಸಿತಫಲಪ್ರಾಪ್ತಿಃ ಸಪ್ತಜನ್ಮಸು ಜಾಯತೇ II

ಯೈಸ್ತು ಭಕ್ತ್ಯಾ ನರೈಃ ಸ್ತ್ರೀಭಿಃ ತಿಥಿರೇಷಾ ಉಪೋಷಿತಾ I
ತೇಷಾಂ ವಿಷ್ಣುಃ ಪ್ರಸನ್ನಃ ಸ್ಯಾದ್ ವಿಷ್ಣುಲೋಕಶ್ಚ ಶಾಶ್ವತಃ II

ಶ್ರೀಕೃಷ್ಣನ ಜನ್ಮದಿನದಲ್ಲಿ ಉಪವಾಸವನ್ನು ಮಾಡಿ ಅವನನ್ನು ಅರ್ಚಿಸುವವನ ಮನೆಯಲ್ಲಿ ಎಂದಿಗೂ ದೌರ್ಭಾಗ್ಯವಿರುವದಿಲ್ಲ. ಹೆಂಗಸರನ್ನು ವೈಧವ್ಯ ಕಾಡುವದಿಲ್ಲ. ಯಮಲೋಕದ ಭೀತಿ ಸಜ್ಜನರಿಗಿರುವದಿಲ್ಲ.

ಕೃಷ್ಣಾಷ್ಟಮಿಯ ಬಗ್ಗೆ ಪೂರ್ಣ ತಿಳಿಯದೇ, ಕೇವಲ ಸಜ್ಜನರ ಸಂಪರ್ಕದಿಂದ ಉಪವಾಸ ಮಾಡಿದರೂ, ಮನಸ್ಸಿನ ಎಲ್ಲ ಅಭೀಷ್ಟಗಳನ್ನು ಶ್ರೀಕೃಷ್ಣ ಪೂರೈಸುತ್ತಾನೆ.

ಇನ್ನು ಕೃಷ್ಣಜನ್ಮಾಷ್ಟಮೀವ್ರತದ ಮಾಹಾತ್ಮ್ಯವನ್ನು ತಿಳಿದುಕೊಂಡು ಭಕ್ತಿಯಿಂದ ಮಾಡುವ ಭಕ್ತರ ಮೇಲೆ ಶ್ರೀಹರಿ ಪೂರ್ಣಪ್ರಸನ್ನನಾಗುತ್ತಾನೆ. ಪ್ರೀತಿಯಿಂದ ತನ್ನ ಲೋಕದಲ್ಲಿ ಶಾಶ್ವತವಾದ ಸ್ಥಾನವನ್ನು ನೀಡುತ್ತಾನೆ.

ಈ ಬಾರಿ ಕೇವಲ ಕೃಷ್ಟಾಷ್ಟಮಿಯಲ್ಲ, ಶ್ರೀಕೃಷ್ಣಜಯಂತಿಯೂ ಬಂದೊದಗಿದೆ. ಸರ್ವೋತ್ತಮವಾದ ದಿವಸ. ಆ ದಿವಸ ಯಾವುದೇ ಕಾರ್ಯ ಕೆಲಸಗಳಿದ್ದರೂ ಬದಿಗಿರಿಸಿ. ಸಿನಿಮಾ, ಹರಟೆ ಮುಂತಾದವಂತೂ ಸರ್ವಥಾ ಬೇಡ. ಇಡಿಯ ದಿವಸ ಪರಿಶುದ್ಧವಾದ ಕ್ರಮದಲ್ಲಿ, ನೀರನ್ನೂ ಸ್ವೀಕರಿಸದೆ ಉಪವಾಸವನ್ನು ಆಚರಿಸಿ. ಶ್ರೀಕೃಷ್ಣನ ಪ್ರೀತಿಗಾಗಿ ವಿಷ್ಣುಸಹಸ್ರನಾಮ ಭಗವದ್ಗೀತೆಗಳನ್ನು ಪಠಿಸಿ. ಭಗವದ್ಗೀತೆಯ ಒಂದು ತತ್ವವನ್ನಾದರೂ ಆ ದಿವಸ ತಿಳಿಯಲು ಪ್ರಯತ್ನ ಪಡಿ. ರಾತ್ರಿಯಲ್ಲಿ ಪರಮಭಕ್ತಿಯಿಂದ ಆ ಶ್ರೀಕೃಷ್ಣನಿಗೆ ಪೂಜೆಯನ್ನು ಮಾಡಿ ಅರ್ಘ್ಯಪ್ರದಾನವನ್ನು ಮಾಡಿ. ಜೀವನ ಸಾರ್ಥಕವಾಗುತ್ತದೆ.

ಶ್ರೀಕೃಷ್ಣಜನ್ಮಾಷ್ಟಮಿಯಂದು ಆಚರಿಸಬೇಕಾದ ವಿಧಿವಿಧಾನಗಳ ಕುರಿತು ಮುಂದಿನ ಲೇಖನದಲ್ಲಿ ಬರೆಯುತ್ತೇನೆ.

English summary
This article is enlighten difference between Krishna Janmashtami and Krishna Jayanthi. Article written by Vishnudasa Nagendracharya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X