ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಜನ್ಮಾಷ್ಟಮಿಯಂದು ಮಾಡಬೇಕಾದ ಸಂಕಲ್ಪ, ಸಿದ್ಧತೆ

By ವಿಷ್ಣುದಾಸ ನಾಗೇಂದ್ರಾಚಾರ್ಯ, ಮೈಸೂರು
|
Google Oneindia Kannada News

ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಶ್ರೀಕೃಷ್ಣ ಅವತರಿಸಿದ ಪರಮಪವಿತ್ರವಾದ ದಿವಸ. ಈ ದಿವಸ ಪೂರ್ಣ ಉಪವಾಸವಿದ್ದು ಶ್ರೀಕೃಷ್ಣನ ಅರ್ಚನೆಯನ್ನು ಮಾಡಿದರೆ ಇಪ್ಪತ್ತು ಕೋಟಿ ಏಕಾದಶಿಗಳನ್ನು ಅನುಷ್ಠಾನ ಮಾಡಿದ ಮಹತ್ತರ ಫಲವನ್ನು, ಅರ್ಥಾತ್ ಎರಡು ಮಹಾಯುಗಗಳಲ್ಲಿ ಏಕಾದಶಿಯ ಉಪವಾಸ ಮಾಡಿದ ಮಹಾಫಲವನ್ನು ಪಡೆಯುತ್ತೇವೆ.

ಕೃಷ್ಣಾಷ್ಟಮಿಯಂದು ಅನ್ನ ನೈವೇದ್ಯವಿಲ್ಲ. ವೈಶ್ವದೇವವಿಲ್ಲ. ಹೋಮ ಹವನಗಳನ್ನು ಮಾಡಬಾರದು. ಈ ಅನುಷ್ಠಾನದಲ್ಲಿ ಹೇಳಿರುವ ಎಲ್ಲ ವಿಧಿಗಳೂ ಮಂತ್ರಗಳೂ, ಸ್ತ್ರೀ ಪುರುಷರಿಬ್ಬರಿಗೂ ಅನ್ವಯಿಸುತ್ತವೆ. ಎಲ್ಲಿ ಅನ್ವಯಿಸುವದಿಲ್ಲ, ಅಲ್ಲಿ ತಿಳಿಸಲಾಗುವದು.

ರಜಸ್ವಲೆಯಾದವರು, ವೃದ್ಧಿ, ಸೂತಕ ಇರುವವರು ಉಪವಾಸವನ್ನು ಮಾಡಲೇಬೇಕು. ಮಂತ್ರಪೂರ್ವಕವಾದ ಸ್ನಾನ, ಅರ್ಘ್ಯಗಳು ಇರುವುದಿಲ್ಲ. ರಜಸ್ವಲೆಯರಿಗಾಗಿ ಅವರ ಗಂಡಂದಿರು, ಅಣ್ಣತಮ್ಮಂದಿರು ಅಥವಾ ಮಕ್ಕಳು ಅರ್ಘ್ಯವನ್ನು ನೀಡಬೇಕು. ಮೇಲೆ ಹೇಳಿದ ಕಾರಣಗಳಿಗಾಗಿ ಅರ್ಘ್ಯಾದಿಗಳನ್ನು ನೀಡಲು ಸಾಧ್ಯವಾಗದವರು ನಿರಂತರ ರಾಮನಾಮಸ್ಮರಣೆಯನ್ನು ಮಾಡುತ್ತಿರಬೇಕು, ಶ್ರೀಕೃಷ್ಣನ ಪರಮಮಂಗಳ ನಾಮವನ್ನು ಪಠಿಸುತ್ತಿರಬೇಕು.

How to celebrate Krishna Janmashtami

ಕೃಷ್ಣಜನ್ಮಾಷ್ಟಮಿಯ ಹಿಂದಿನ ದಿವಸ, ಅಂದರೆ ಸಪ್ತಮಿಯ ರಾತ್ರಿಯಂದು ಅನ್ನ ಉಣ್ಣಬಾರದು. ಲಘುವಾಗಿ ಉಪಾಹಾರವನ್ನು ಸೇವಿಸಬೇಕು. "ಸಪ್ತಮ್ಯಾಂ ಲಘುಭುಕ್". ಸಪ್ತಮಿ, ಅಷ್ಟಮಿ ಎರಡೂ ದಿವಸದಂದು ಬ್ರಹ್ಮಚರ್ಯ ವ್ರತವನ್ನು ಪಾಲಿಸಬೇಕು.

ಕೃಷ್ಣಾಷ್ಟಮಿಯಂದು ನಾಲ್ಕು ಕಾಲಗಳಲ್ಲಿ ಸ್ನಾನ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ. ರಾತ್ರಿಯಲ್ಲಿ ಮಾತ್ರ ಷೋಡಶೋಪಚಾರ ಪೂಜೆ. ಉಳಿದ ಮೂರು ಸಮಯದಲ್ಲಿ ಪರಮಾತ್ಮನ ಮುಂದೆ ಸ್ತೋತ್ರಾದಿಗಳನ್ನು ಹೇಳಬೇಕು. [ಕೃಷ್ಣ ಜನ್ಮಾಷ್ಟಮಿ ಮತ್ತು ಕೃಷ್ಣ ಜಯಂತಿಗಿರುವ ವ್ಯತ್ಯಾಸವೇನು?]

ಅಷ್ಟಮಿಯಂದು ಬೆಳಗಿನ ಜಾವದಲ್ಲಿಯೇ ಏಳಬೇಕು. ಸೋಮಾರಿತನವನ್ನು ಮಾಡಬಾರದು ಎಂದು ಸ್ವಯಂ ಶ್ರೀಮದಾಚಾರ್ಯರೇ ಹೇಳಿದ್ದಾರೆ, ಅತಂದ್ರಿತಃ ಎಂದು. ಬೆಳಗಿನ ಜಾವದಲ್ಲಿ ಎದ್ದು ಶೌಚವನ್ನು ಮುಗಿಸಿ, ದೇವರ ಮನೆಯ ಮುಂದೆ ಬಂದು ದೀರ್ಘದಂಡ ನಮಸ್ಕಾರ ಹಾಕಬೇಕು. "ಅಂತರ್ಯಾಮಿನ್, ನಿನ್ನ ಪ್ರೀತಿಗಾಗಿ ಕೃಷ್ಣಜಯಂತಿಯ ವ್ರತವನ್ನು ಮಾಡುತ್ತೇನೆ, ನಿರ್ವಿಘ್ನವಾಗಿ ನಡೆಯುವಂತೆ ಅನುಗ್ರಹಿಸು" ಎಂದು ಪ್ರಾರ್ಥಿಸಬೇಕು.

ತುಳಸಿಗೆ, ಗೋವುಗಳಿಗೆ ನಮಸ್ಕಾರ ಮಾಡಿ ತುಳಸೀಮೃತ್ತಿಕೆಯಲ್ಲಿ ಊರ್ಧ್ವಪುಂಢ್ರಗಳನ್ನು ಧರಿಸಬೇಕು. ಬಳಿಕ ತಳಿರು ತೋರಣ ರಂಗೋಲಿಗಳಿಂದ ಮನೆಯನ್ನು ಸಿಂಗರಿಸಬೇಕು. ಮಮ ಸ್ವಾಮಿ, ಸರ್ವಸ್ವಾಮಿಯಾದ ಶ್ರೀಹರಿ ಬಾಲಕೃಷ್ಣನಾಗಿ ನಮ್ಮ ಮನೆಗೆ ಬರುತ್ತಿದ್ದಾನೆ. ಅವನು ಅವತರಿಸಿದ ದಿವಸ ಇಂದು. ಗೀತೆಯ ಮುಖಾಂತರ ತನ್ನನ್ನು ನಮಗೆ ತಿಳಿಸಿಕೊಟ್ಟ ಜಗದ್ಗುರು ಅವತರಿಸಿದ ದಿವಸ ಇಂದು ಎಂದು ಸಂಭ್ರಮದಿಂದ, ಮನೆಯನ್ನು ಸಿಂಗರಿಸಬೇಕು.

ಆ ನಂತರ ಮತ್ತೆ ದೇವರಿಗೆ ನಮಸ್ಕಾರ ಮಾಡಿ, ಅನುಜ್ಞಾಂ ದೇಹಿ ದೇವೇಶ ಯುಷ್ಮತ್ತೀರ್ಥನಿಷೇವಣೇ ಎಂದು ಪ್ರಾರ್ಥಿಸಬೇಕು. "ಸ್ನಾನಕ್ಕಾಗಿ ಹೊರಟಿದ್ದೇನೆ, ಶ್ರೀಶ. ನಿನ್ನ ಪಾದೋದಕದಲ್ಲಿ ಸ್ನಾನವಾಗುವಂತೆ ಅನುಗ್ರಹಿಸು ಎಂದು ಪ್ರಾರ್ಥಿಸಬೇಕು. ಆ ಬಳಿಕ ಸಾಧ್ಯವಾದರೆ, ನದೀ-ಸರೋವರಗಳಲ್ಲಿ, ಇಲ್ಲವಾದರೆ ಮನೆಯಲ್ಲಿಯೇ ಸಕಲ ತೀರ್ಥಗಳನ್ನು ಅನುಸಂಧಾನ ಮಾಡಿ ಸ್ನಾನವನ್ನು ಮಾಡಬೇಕು.

ಸ್ನಾನದ ನೀರಿನ ಮೇಲೆ ಕೈಯನ್ನಿಟ್ಟು, ಗಂಗಾ, ಗೋದಾವರೀ, ಕೃಷ್ಣಾ, ಮಾನಸಸರೋವರ, ಸ್ವಾಮಿಪುಷ್ಕರಿಣೀ, ಚಂದ್ರಾಪುಷ್ಕರಿಣೀ, ಕಾವೇರೀ ಸರಸ್ವತೀ, ಸರಯೂ, ತುಂಗಭದ್ರಾ, ಯಮುನಾ ನರ್ಮದಾ ಸಿಂಧು, ಭವನಾಶಿನೀ ಕುಮುದ್ವತೀ, ಚಂದ್ರಭಾಗಾ ಮುಂತಾದ ಎಲ್ಲ ನದಿಗಳನ್ನು ಸ್ಮರಿಸಿ, ಎಂದಿಗೂ ಹುಟ್ಟು ಸಾವಿಲ್ಲದ ಪರಮಾತ್ಮ, ದೋಷದ ಲವಲೇಶವೂ ಇಲ್ಲದ ನಾರಾಯಣ ನನ್ನ ದೇಹದಲ್ಲಿ ನೆಲೆಸಿದ್ದಾನೆ, ಅವನಿಂದಲೇ ನಾನು ಶುದ್ಧನಾಗುವದು ಎಂದು ಸ್ಮರಣೆ ಮಾಡುತ್ತ, ಶ್ರೀಮದಾಚಾರ್ಯರಾದಿ ಸಮಸ್ತಗುರುಗಳನ್ನು ಸ್ಮರಣೆ ಮಾಡುತ್ತ ಸ್ನಾನವನ್ನಾರಂಭಿಸಬೇಕು.

ಸ್ನಾನದ ಕಾಲದಲ್ಲಿ

ಯೋಗಾಯ ಯೋಗಪತಯೇ ಯೋಗೇಶ್ವರಾಯ ಯೋಗಸಂಭವಾಯ ಶ್ರೀಗೋವಿಂದಾಯ ನಮೋನಮಃ

ಎಂಬ ಪರಮಪವಿತ್ರ ಮಂತ್ರವನ್ನು ಉಚ್ಚರಿಸಬೇಕು. ನಮ್ಮನ್ನು ನಮ್ಮ ಗುರುಗಳ ಬಳಿ ಕರೆದುಕೊಂಡು ಹೋಗಿ ಅವರಿಂದ ಉಪದೇಶ ನೀಡಿಸುವ ಶ್ರೀಕೃಷ್ಣನಿಗೆ ಯೋಗ ಎಂಬ ಹೆಸರು. ಆ ಯೋಗನಿಗೆ ನಮಸ್ಕಾರ. ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ ಮುಂತಾದ ಜ್ಞಾನದ ಉಪಾಯಗಳಿಗೆ ಒಡೆಯನಾಗಿ ಅವನ್ನು ನಮಗೆ ಕರುಣಿಸುವ ಯೋಗಪತಿಗೆ ನಮಸ್ಕಾರ.

ಮೇಲೆ ಹೇಳಿದ ಯೋಗಗಳನ್ನು ನಮ್ಮಿಂದ ಮಾಡಿಸುವವನೂ, ಅದರಿಂದ ಪ್ರೀತನಾಗುವವನೂ, ಯೋಗಗಳನ್ನು ಜಗತ್ತಿಗೆ ಉಪದೇಶಿಸುವವನೂ ಆದ ಯೋಗೇಶ್ವರನಿಗೆ ನಮಸ್ಕಾರಗಳು. ನಾವು ಮಾಡುವ ಯೋಗಗಳಿಂದ ಪ್ರೀತನಾಗಿ ಆ ಯೋಗದ ಫಲವಾಗಿ ನಮ್ಮ ಹೃದಯದಲ್ಲಿ ಕಾಣಿಸಿಕೊಳ್ಳುವ ಯೋಗಸಂಭವನಿಗೆ ನಮಸ್ಕಾರ. ಸಮಸ್ತ ವೇದಗಳಿಂದ ಪ್ರತಿಪಾದ್ಯನಾದ ಗೋವಿಂದನಿಗೆ ನಮಸ್ಕಾರಗಳು.

ಆ ನಂತರ ಮೈ ವರೆಸಿಕೊಂಡು, ನೀರಿನಿಂದಲೇ ಊರ್ಧ್ವಪುಂಢ್ರಗಳನ್ನು ಧರಿಸಿ, ಹೆಣ್ಣುಮಕ್ಕಳು, ಬಚ್ಚಲುಮನೆಯಲ್ಲಿಯೇ ಕುಂಕುಮವನ್ನು ಹಚ್ಚಿಕೊಂಡು, ಶುದ್ಧವಾದ ಒಣಗಿದ ಬಟ್ಟೆಯನ್ನುಟ್ಟು ಸಂಧ್ಯಾವಂದನೆ ತುಳಸೀನಮಸ್ಕಾರ ಮುಂತಾದವನ್ನು ಮಾಡಬೇಕು. ಆ ಬಳಿಕ ದೇವರಿಗೆ ನಮಸ್ಕಾರವನ್ನು ಮಾಡಿ, ಮಂಡಿಯೂರಿ ಕೈಜೋಡಿಸಿ ಕುಳಿತು...

ಅದ್ಯ ಸ್ಥಿತ್ವಾ ನಿರಾಹಾರಃ ಶ್ವೋಭೂತೇ ಪರಮೇಶ್ವರ I
ಭೋಕ್ಷ್ಯಾಮಿ ಪುಂಡರೀಕಾಕ್ಷ ಅಸ್ಮಿನ್ ಜನ್ಮಾಷ್ಟಮೀವ್ರತೇ II

ಓ ಪುಂಡರೀಕಾಕ್ಷ, ಈ ಜನ್ಮಾಷ್ಟಮಿಯ ದಿವಸದಂದು ಪೂರ್ಣ ಉಪವಾಸವಿದ್ದು ನಾಳೆಯ ದಿವಸ ಊಟ ಮಾಡುತ್ತೇನೆ, ನಿರ್ವಿಘ್ನವಾಗಿ ನಡೆಯುವಂತೆ ಅನುಗ್ರಹಿಸು.

ವಾಸುದೇವಂ ಸಮುದ್ದಿಶ್ಯ ಸರ್ವಪಾಪಪ್ರಶಾಂತಯೆ I
ಉಪವಾಸಂ ಕರಿಷ್ಯಾಮಿ ಕೃಷ್ಣಾಷ್ಟಮ್ಯಾಂ ನಭಸ್ಯಹಮ್ II

ಪರಮಾತ್ಮನ ಪ್ರೀತಿಯನ್ನು ಅಪೇಕ್ಷಿಸುತ್ತ, ನನ್ನ ಸಕಲ ಪಾಪಗಳ ವಿನಾಶಕ್ಕಾಗಿ ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಉಪವಾಸವನ್ನು ಮಾಡುತ್ತೇನೆ. (ನಭಸಿ ಎಂದರೆ ಶ್ರಾವಣಮಾಸದಲ್ಲಿ ಎಂದರ್ಥ)

ಅದ್ಯ ಕೃಷ್ಣಾಷ್ಟಮೀಂ ದೇವೀಂ ನಭಶ್ಚಂದ್ರಂ ಸರೋಹಿಣೀಮ್I
ಅರ್ಚಯಿತ್ವೋಪವಾಸೇನ ಭೋಕ್ಷ್ಯೇsಹಮಪರೇsಹನಿ II

ಇಂದು ಕೃಷ್ಣಾಷ್ಟಮಿಯಲ್ಲಿ, ಶ್ರೀಕೃಷ್ಣನನ್ನು, ದುರ್ಗೆಯನ್ನು ವಸುದೇವ ದೇವಕಿಯರನ್ನು, ನಭಃ ಶ್ರಾವಣಮಾಸಕ್ಕೆ ಅಭಿಮಾನಿಯಾದ ದೇವತೆಯನ್ನು, ರೋಹಿಣೀಸಮೇತನಾದ ಚಂದ್ರನನ್ನು ಭಕ್ತಿಯಿಂದ ಅರ್ಚನೆ ಮಾಡಿ, ನಾಳಿನ ದಿವಸ ಪಾರಣೆ ಮಾಡುತ್ತೇನೆ.

ಏನಸೋ ಮೋಕ್ಷಕಾಮೋsಸ್ಮಿ ಯದ್ ಗೋವಿಂದವಿಯೋಜಿನಮ್ I
ತನ್ಮೇ ಮುಂಚತು ಮಾಂ ತ್ರಾಹಿ ಪತಿತಂ ಶೋಕಸಾಗರೇ

ಓ ನಾರಾಯಣ, ಏನಸಃ ಪಾಪಗಳಿಂದ ಮೋಕ್ಷಕಾಮೋsಸ್ಮಿ ಮುಕ್ತನಾಗಲು ಬಯಸುತ್ತೇನೆ. ಗೋವಿಂದವಿಯೋಜಿನಮ್ ಪರಮಾತ್ಮನಿಂದ ನಮ್ಮನ್ನು ದೂರ ಮಾಡುವ ಪಾಪಗಳು ಮೇ ಮುಂಚತು ನನ್ನಿಂದ ದೂರವಾಗಲಿ. ಶೋಕತುಂಬಿದ ಭವಸಾಗರದಲ್ಲಿ ಬಿದ್ದಿರುವ ನನ್ನನ್ನು ರಕ್ಷಿಸು ಸ್ವಾಮಿ.

ಆ ಜನ್ಮಮರಣಂ ಯಾವದ್ ಯನ್ಮಯಾ ದುಷ್ಕೃತಂ ಕೃತಮ್
ತತ್ ಪ್ರಣಾಶಯ ಗೋವಿಂದ ಪ್ರಸೀದ ಪುರುಷೋತ್ತಮ

ಈ ಜನ್ಮಾಷ್ಟಮಿಯ ಉಪವಾಸ ಅರ್ಚನೆಗಳಿಂದ ಪ್ರೀತನಾಗಿ, ಹುಟ್ಟಿನಿಂದ ಸಾಯುವವರೆಗೆ ನಾನು ಮಾಡಿರುವ ಪಾಪಗಳನ್ನು ಮನ್ನಿಸು ಸ್ವಾಮಿ. ನನ್ನ ಮೇಲೆ ಪ್ರಸನ್ನನಾಗು, ಎಂದು ಭಕ್ತಿಯಿಂದ ರುಗ್ಮಿಣೀವಲ್ಲಭನನ್ನು ಸತ್ಯಭಾಮೆಯ ಒಡೆಯನನ್ನು ಪ್ರಾರ್ಥಿಸಬೇಕು.

ಆ ಬಳಿಕ ಆಚಮನ, ಪ್ರಾಣಾಯಾಮಗಳನ್ನು ಮಾಡಿ ಕೆಳಕಂಡ ರೀತಿಯಲ್ಲಿ ಸಂಕಲ್ಪ ಮಾಡಬೇಕು. (ವಿಶ್ವನಂದಿನಿ ಲೇಖನಮಾಲೆ - 13ರಲ್ಲಿ ಸಂಕಲ್ಪದ ಕುರಿತ ಪೂರ್ಣ ವಿವರವಿದೆ)

ಮಮ ಗುರ್ವಂತರ್ಗತ
ಪರಮಗುರ್ವಂತರ್ಗತ
ಶ್ರೀರಾಘವೇಂದ್ರಾದಿ ಸಮಸ್ತಗುರ್ವಂತರ್ಗತ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯಗುರ್ವಂತರ್ಗತ
ಶ್ರೀವಿಷ್ಣುಪ್ರೇರಣಯಾ ಶ್ರೀವಿಷ್ಣುಪ್ರೀತ್ಯರ್ಥಂ

ನನ್ನ ಗುರುಗಳ, ಪರಮಗುರುಗಳ, ಶ್ರೀರಾಘವೇಂದ್ರಾದಿ ಸಮಸ್ತಗುರುಗಳ, ಶ್ರೀಮದಾಚಾರ್ಯರ ಅಂತರ್ಯಾಮಿಯಾದ ಲಕ್ಷ್ಮೀನಾರಾಯಣರ ಪ್ರೇರಣೆಯಿಂದ, ಅವರ ಪ್ರೀತಿಗಾಗಿ

ಮಮ ಸರ್ವಪಾಪಕ್ಷಯಾರ್ಥಂ
ವಿಷ್ಣುಭಕ್ತಿ-ತತ್ವಜ್ಞಾನ-ವೈರಾಗ್ಯಾದಿ ಮಹಾಸದ್ಗುಣಾಭಿವೃದ್ಧ್ಯರ್ಥಂ
ವಿಂಶತಿಕೊಟ್ಯೇಕಾದಶ್ಯುಪುವಾಸಫಲಕಂ
ವಿಷ್ಣುಪ್ರೀತಿಕರಂ
ಶ್ರೀಕೃಷ್ಣಜಯಂತೀವ್ರತಂ
ಆಚರಿಷ್ಯೇ

ನಾಹಂಕರ್ತಾ ಹರಿಃ ಕರ್ತಾ ತತ್ಪೂಜಾ ಕರ್ಮ ಚಾಖಿಲಮ್

ನನ್ನ ಸಕಲ ಪಾಪಗಳ ವಿಮೋಚನೆಗಾಗಿ ಹರಿಭಕ್ತಿ, ಶಾಸ್ತ್ರಜ್ಞಾನ ವಿಷಯವಿರಕ್ತಿಗಳಿಗಾಗಿ ಇಪ್ಪತ್ತು ಕೋಟಿ ಏಕಾದಶಿಗಳ ಉಪವಾಸದ ಫಲಕ್ಕೆ ಸಮವಾದ ಫಲವನ್ನು ನೀಡುವ ನಾರಾಯಣನ ಪ್ರೀತಿಯನ್ನು ಅನುಗ್ರಹಿಸುವ ಶ್ರೀಕೃಷ್ಣಜಯಂತೀ ವ್ರತವನ್ನು ಗುರುಗಳ ಅನುಗ್ರಹದಿಂದ ಆಚರಿಸುತ್ತೇನೆ

ನನ್ನಲ್ಲಿ ನಿಂತು ಈ ಕರ್ಮದ ಆಚರಣೆ ಮಾಡಿಸುವವನು ಶ್ರೀಹರಿಯೇ. ಈ ಉಪವಾಸ, ಅರ್ಚನೆಗಳನ್ನು ತನ್ನ ಪೂಜೆಯನ್ನಾಗಿ ಅವನು ಸ್ವೀಕರಿಸಲಿ ಎಂದು ಸಂಕಲ್ಪ ಮಾಡಬೇಕು. ಆ ನಂತರ ಗಂಡಸರು ದೇವರ ಪೆಟ್ಟಿಗೆಯನ್ನು ಬಿಚ್ಚಿ ಹಿಂದಿನ ದಿನದ ನಿರ್ಮಾಲ್ಯ ವಿಸರ್ಜನೆಯನ್ನು ಮಾಡಿ ದೇವರನ್ನು ತಟ್ಟೆಯಲ್ಲಿ ಹಾಗೇ ಮಂಟಪದಲ್ಲಿಡಬೇಕು. ಆ ನಂತರ ದೇವರಿಗೆ ಎಷ್ಟು ಸಾಧ್ಯವೋ ಅಷ್ಟು ನಮಸ್ಕಾರಗಳನ್ನು ಸಮರ್ಪಿಸಿ ರಾತ್ರಿಯ ಪೂಜೆಗೆ ಸಿದ್ಧಪಡಿಸಿಕೊಳ್ಳಲು ಆರಂಭಿಸಬೇಕು.

ಹೂಗಳನ್ನು, ತುಳಸಿಯನ್ನು ಬಿಡಿಸಿಕೊಂಡು, ಗೋಪೀಚಂದನದಲ್ಲಿಯೇ ವಸುದೇವ, ದೇವಕೀ, ನಂದಗೋಪ, ಯಶೋದೆ, ಬಲರಾಮ, ಶ್ರೀಕೃಷ್ಣ, ದುರ್ಗೆ, ಸುಭದ್ರೆ ಇಷ್ಟು ಜನರ ಪ್ರತಿಮೆಯನ್ನು ಮಾಡಬೇಕು. ರಾತ್ರಿಯ ಕೃಷ್ಣನ ನೈವೈದ್ಯಕ್ಕೆ ವಿವಿಧ ರೀತಿಯ ಭಕ್ಷ್ಯಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಇವೆಲ್ಲವನ್ನು ಮಾಡುವಾಗ ಶ್ರೀಮದ್ ಭಾಗವತ, ಭಗವದ್ಗೀತಾ, ವಿಷ್ಣುಸಹಸ್ರ ನಾಮಗಳನ್ನು ಪಠಿಸುತ್ತಿರಬೇಕು, ದೇವರ ಸ್ತೋತ್ರಗಳನ್ನು ಹೇಳುತ್ತಲೇ ಇರಬೇಕು.

ಮಧ್ಯಾಹ್ನ ಕಾಲದಲ್ಲಿ ಮತ್ತೊಮ್ಮೆ ಮೇಲೆ ಹೇಳಿದಂತೆ ಸ್ನಾನ ಮಾಡಿ ಮತ್ತೆ ನಮಸ್ಕಾರಗಳನ್ನು ಸಮರ್ಪಿಸಿ ಮಧ್ಯಾಹ್ನದ ಸಂಧ್ಯಾವಂದನೆಯನ್ನು ಮಾಡಬೇಕು. ಸಾಯಂಕಾಲ ಮತ್ತೆ ಮೇಲೆ ಹೇಳಿದಂತೆ ಸ್ನಾನವನ್ನು ಮಾಡಿ ಸಾಯಂಸಂಧ್ಯಾವಂದನೆಯನ್ನು ಮುಗಿಸಿ ಪರಮಾತ್ಮನ ಮಂದೆ ಮನೆಮಂದಿಯೆಲ್ಲ ಕುಳಿತು ಭಕ್ತಿಯಿಂದ ದೇವರ ಹಾಡುಗಳನ್ನು, ಸ್ತೋತ್ರಗಳನ್ನು ಹೇಳಬೇಕು.

ರಾತ್ರಿಯ ಪೂಜಾ ವಿಧಾನವನ್ನು ಮುಂದಿನ (119) ಲೇಖನದಲ್ಲಿ ವಿವರಿಸುತ್ತೇನೆ.

English summary
How to celebrate Krishna Janmashtami? Vishnudasa Nagendracharya, eminent scholar from Mysuru explains how to celebrate birthday of Lord Krishna in a methodical way, as per hindu practice. Know the importance of fasting, how to perform pooja and significance of chanting matras.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X