ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾತ್ರಿ : ಜ್ಯೋತಿರ್ಲಿಂಗಗಳ ಪೌರಾಣಿಕ ಹಿನ್ನೆಲೆ ಗೊತ್ತಾ?

By ನಾಗನೂರಮಠ ಎಸ್.ಎಸ್.
|
Google Oneindia Kannada News

ಮಹಾಶಿವನು ಭೂಲೋಕದಲ್ಲಿ ಪ್ರತ್ಯಕ್ಷನಾದನೆಂಬ ಪ್ರತೀತಿಯಿರುವ 12 ಕ್ಷೇತ್ರಗಳಿಗೆ ಅನಾದಿ ಕಾಲದಿಂದಲೂ ಶಿವಭಕ್ತರು ಭೇಟಿ ನೀಡುತ್ತ ತಮ್ಮ ಇಷ್ಟಾರ್ಥ ಸಿದ್ಧಿಸಿಕೊಳ್ಳುತ್ತಿದ್ದಾರೆ. 12 ಕ್ಷೇತ್ರಗಳಲ್ಲಿರುವ ವಿವಿಧ ರೂಪದ ಶಿವಲಿಂಗಗಳನ್ನು ಪೂಜಿಸುವ ಮೂಲಕ ಭಕ್ತರು ಮಹಾಶಿವನನ್ನು ಆರಾಧಿಸುತ್ತಾರೆ. ಆ ಶಿವಲಿಂಗಗಳಿಗೇನೆ ಜ್ಯೋತಿರ್ಲಿಂಗಗಳೆನ್ನುತ್ತಾರೆ.

ಎಲ್ಲ ಜ್ಯೋತಿರ್ಲಿಂಗಗಳು ನಮ್ಮ ಭಾರತದಲ್ಲೇ ಇರುವುದು ವಿಶೇಷ. ನಾವಿರುವ ಭೂಲೋಕದಲ್ಲಿ ಹಲವಾರು ದೇಶಗಳಿದ್ದರೂ, ಕೇವಲ ಭಾರತದಲ್ಲೇ ಮಾತ್ರ ಶಿವನು ಪ್ರತ್ಯಕ್ಷನಾಗಿದ್ದಾನೆಂದರೆ ನಾವು ಇಲ್ಲಿ ಜನಿಸಿದ್ದೇ ನಮ್ಮ ಪುಣ್ಯವೆಂದುಕೊಳ್ಳಬೇಕು. ಆದರೆ ವಿಪರ್ಯಾಸದ ಸಂಗತಿಯೆಂದರೆ, ನಮ್ಮ ಕರ್ನಾಟಕದಲ್ಲೆಲ್ಲೂ ಜ್ಯೋತಿರ್ಲಿಂಗಗಳಿಲ್ಲ. ನಾವು ಜ್ಯೋತಿರ್ಲಿಂಗಗಳ ದರ್ಶನ ಪಡೆಯಬೇಕೆಂದರೆ ಇಡೀ ದೇಶ ಸುತ್ತಬೇಕಾಗುತ್ತದೆ.

ಆಯುರಾರೋಗ್ಯ ಬೇಕೆಂದರೆ ಶಿವನ ಕೃಪಾಕಟಾಕ್ಷ ಪಡೆದುಕೊಳ್ಳಬೇಕು. "ಅವನ್ಯಾವ ಮಹಾಶಿವ, ಅವನಿಂದೇನಾದೀತು" ಎಂದು ಶಿವನಿಂದೆ ಮಾಡಿದವರು ಎಷ್ಟೋ ಜನ ಶವವಾಗಿದ್ದಾರೆ. ಅಷ್ಟೊಂದು ಅದ್ಭುತ ಶಕ್ತಿ ಮಹಾಶಿವನಿಗಿದೆ. ಏಕೆಂದರೆ ಶಿವನು ಒಲಿಯುವುದೂ ಬಹುಬೇಗ, ಮುನಿಯುವುದಂತೂ ಇನ್ನೂ ವೇಗ. ಮಹಾಶಿವನು ಹಣೆಯ ಮೇಲೆ ಕೋಪದ ಕಣ್ಣಿಟ್ಟುಕೊಂಡಿರುವುದರಿಂದ ಮುಕ್ಕಣ್ಣನೆಂದು ಕರೆಯಿಸಿಕೊಳ್ಳುತ್ತಾನೆ. ಇವನ ಕೋಪ ಶಮನ ಮಾಡಲೆಂದೆ ಗಂಗೆಯು ಇವನ ಶಿರದಲ್ಲಿದ್ದಾಳೆಂದು ಪುರಾಣ ಕಥೆಗಳಲ್ಲಿ ನಾವೆಲ್ಲಾ ಓದಿದ್ದೇವೆ. [ಅಂದಿನ ಶಿವರಾತ್ರಿಯ ಮಜಾ ಇಂದೆಲ್ಲಿ?]

Significance of Jyotirlinga and Shivaratri

ಶಿವನ ಉಗ್ರ ಕೋಪವನ್ನು ತಣ್ಣಗೆ ಮಾಡಲು ಅವನಿಗೆ ಜಲಾಭಿಷೇಕ ಮಾಡುತ್ತಾರೆ. ಆದರೆ, ಶಿವನಿಗೂ ಜಲಾಭಿಷೇಕವೆಂದರೆ ತುಂಬಾ ಇಷ್ಟವೆನ್ನಲಾಗುತ್ತದೆ. ನೀವು ನೋಡಿರಬಹುದು ಹಳೆಯ ಕೆಲವು ಚಲನಚಿತ್ರಗಳಲ್ಲಿ, ಲಿಂಗರೂಪದಲ್ಲಿರುವ ಮಹಾಶಿವನಿಗೆ ನದಿಯಿಂದ ಕೊಡದಲ್ಲಿ ನೀರು ಹೊತ್ತು ತಂದು ಆ ಲಿಂಗಕ್ಕೆ ಸುರಿಯುವುದನ್ನು. ಇದನ್ನೇ ಜಲಾಭಿಷೇಕವೆನ್ನುತ್ತಾರೆ. ಇನ್ನು ಶಿವನನ್ನು ಲಿಂಗರೂಪದಲ್ಲಿಯೇ ಏಕೆ ಪೂಜಿಸುತ್ತಾರೆಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅಥವಾ ಗೊತ್ತಿದ್ದವರು ಅದನ್ನೆಲ್ಲಾ ಹೇಳುವುದಿಲ್ಲವೇನೋ.

ಇರಲಿ, ಶಿವನನ್ನು ಅವನ ರೂಪದ ಮೂರ್ತಿಗೆ ಬದಲಾಗಿ ಲಿಂಗರೂಪದಲ್ಲೇಕೆ ಪೂಜಿಸುತ್ತಾರೆನ್ನುವುದಕ್ಕೆ ಒಂದು ಪೌರಾಣಿಕ ಹಿನ್ನೆಲೆಯ ಕಥೆಯಿದೆ. ಅದೆಂದರೆ ಶಿವನು ಪಾರ್ವತಿಯೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದಾಗ ಋಷಿಯೊಬ್ಬರು ಕೈಲಾಸ ಪರ್ವತಕ್ಕೆ ಬರುತ್ತಾರಂತೆ, ಆದರೆ ಸರಸದಲ್ಲಿ ಮೈಮರೆತ ಶಿವನಿಗೆ ಋಷಿಗಳು ಕೂಗಿದ ಶಬ್ದ ಕೇಳಿಸಲಿಲ್ಲವಂತೆ. ಹೀಗಾಗಿ ಶಿವನು ಪಾರ್ವತಿಯೊಂದಿಗೆ ತನ್ನ ಸಲ್ಲಾಪವನ್ನು ಮುಂದುವರಿಸಿದನಂತೆ. ಇದರಿಂದ ಉಗ್ರಗೊಂಡ ಮಹಾ ತಪಸ್ವಿಯಾದ ಆ ಋಷಿ ಕೂಡಲೇ, ಮಹಾಶಿವನಿಗೆ ನೀನು ನನ್ನನ್ನು ಆಹ್ವಾನಿಸದೇ, ಕಡೇ ಪಕ್ಷ ನನ್ನನ್ನು ಮಾತನಾಡಿಸದೇ ನನ್ನನ್ನು ಅವಮಾನಗೊಳಿಸಿದ್ದೀಯಾ, ಇದಕ್ಕೆ ನಿನಗೆ ನಾನು ಶಾಪ ಕೊಡುತ್ತೇನೆ ಎಂದು ಗುಡುಗಿದರಂತೆ. [ದ್ವಾದಶ ಜ್ಯೋತಿರ್ಲಿಂಗ ದರ್ಶನದಿಂದ ಪುಣ್ಯಪ್ರಾಪ್ತಿ]

ತಕ್ಷಣ ಮಹಾಶಿವನು ಋಷಿಗಳ ಕೋಪದ ಧ್ವನಿಗೆ ಎಚ್ಚರಗೊಂಡು ಮನ್ನಿಸಿ ಎಂದನಂತೆ. ಆದರೂ ಸಿಟ್ಟಿನಲ್ಲಿಯೇ ಇದ್ದ ಆ ಋಷಿಯು ನಿನಗೆ ಆ ಸಲ್ಲಾಪದ ಬಗ್ಗೆಯೇ ಇಷ್ಟೊಂದು ಆಸಕ್ತಿ ಇರುವುದರಿಂದ ನೀನು ಆ ರೂಪದಲ್ಲಿಯೇ ಎಲ್ಲರಿಂದ ಪೂಜಿಸಿಕೊಳ್ಳು ಎಂದು ಶಾಪವಿಟ್ಟರಂತೆ. ಹೀಗಾಗಿ ಎಲ್ಲೆಡೆ ಶಿವನನ್ನು ಲಿಂಗರೂಪದಲ್ಲಿಯೇ ನಾವೆಲ್ಲಾ ಪೂಜಿಸುತ್ತಿರುವುದು. (ಈ ಬಗ್ಗೆ ಪೌರಾಣಿಕ ಹಿನ್ನೆಲೆಯ ಸಂಪೂರ್ಣ ಕಥೆಯನ್ನು ಮುಂದಿನ ಲೇಖನಗಳಲ್ಲಿ ನೀಡಲಾಗುವುದು). ಮಹಾಶಿವನು ಈ ತರಹ ಮಹಾಮುಗ್ಧನಾಗಿದ್ದರಿಂದಲೇ ಅವನನ್ನು ಎಲ್ಲರೂ ಭೋಲೇನಾಥ ಎಂದು ಕರೆಯುತ್ತಾರೆ. ಮಹಾಶಿವನ ಬಗ್ಗೆ ಸಾವಿರಾರು ಪುಟಗಳಷ್ಟು ಬರೆದರೂ ಸಾಲಲ್ಲ. ಆದರೂ ಮಾಹಿತಿಗಳನ್ನು ಚುಟುಕಾಗಿ ನಾವು ಹೇಳಬಹುದಷ್ಟೇ ಇಲ್ಲಿ.

ನಾವು ಆರೋಗ್ಯವಂತರಾಗಿರಬೇಕೆಂದರೆ ಮಹಾಶಿವನ ಕೃಪಾಕಟಾಕ್ಷ ಬೇಕೇಬೇಕು. ಇವನನ್ನು ಮೃತ್ಯುಂಜಯನೆಂದೂ ಕರೆಯುತ್ತಾರೆ. ಅಕಾಲ ಮರಣ, ದುರ್ಮರಣ ಬರಬಾರದೆಂದು "ಮಹಾಮೃತ್ಯುಂಜಯ ಜಪ"ವನ್ನು ಮಾಡಬೇಕು ಎಂದು ನಾವು ಹೇಳುವುದು. ಜೀವನದ ಖರ್ಚಿಗಾಗಿ ಬೇಕಾಗುವ ಹಣಕ್ಕೆ ಭಕ್ತಿಯಿಂದ ಮಹಾವಿಷ್ಣುವಿನ ಮೊರೆ ಹೋದರೆ ಸಾಕು. ಅದರನುಕೂಲ ನಮಗಾಗುತ್ತದೆ. ಅಪಘಾತ, ರೋಗ-ರುಜಿನಗಳು ಬರದಂತಿರಲು ಶಿವನ ಆಶೀರ್ವಾದ ಪಡೆದುಕೊಂಡಿರಬೇಕು.

"ವಿಷ್ಣು ಹೆಚ್ಚು, ಶಿವ ಕಮ್ಮಿ" ಎನ್ನೋರಿಗೆ ಆರೋಗ್ಯ ಕೈಕೊಟ್ಟಾಗ ಮಹಾಶಿವ ನೆನಪಾಗುತ್ತಾನೆ. ಆಗ ಶಂಭೋಲಿಂಗನ ಪಾದ ಹಿಡಿದುಕೊಳ್ಳುತ್ತಾರೆ. "ಶಿವ ಹೆಚ್ಚು ವಿಷ್ಣು ಕಮ್ಮಿ" ಎನ್ನೋರು, ಹಣದ ಕೊರತೆಯಾಗಿ ಬಡತನದ ಬೇಗೆಯಲ್ಲಿ ಬೇಯುತ್ತಿರುವಾಗ ತಿಮ್ಮಪ್ಪ ಎಲ್ಲಿದ್ದೀಯಪ್ಪಾ ಎಂದು ವೆಂಕಪ್ಪನ ಪಾದ ಹಿಡಿದುಕೊಳ್ಳುತ್ತಾರೆ. ಆಗ ತಿರುಪತಿಗೆ (ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡುವ ವಿಶಿಷ್ಟ ಪದ್ಧತಿಯೇ ಇದೆ. ಅದನ್ನು ಮುಂದಿನ ಲೇಖನಗಳಲ್ಲಿ ತಿಳಿಸಲಾಗುವುದು.) ಹೋಗಿ, ವೆಂಕಪ್ಪನಿಗೆ ಮುಡಿ ಕೊಟ್ಟು, ಉಡಿ ತುಂಬಿ ತುಳುಕುವಷ್ಟು ಹಣ ಬರುವಂಗಾಗುವ ವರ ಪಡೆದುಕೊಂಡು ಬರುತ್ತಾರೆ. ಎಲ್ಲರಿಗೂ ಜೀವನದಲ್ಲಿ ಆರೋಗ್ಯವೂ ಬೇಕು, ಹಣಾನೂ ಬೇಕು. ಹಣದ ಅನುಕೂಲ ಮಾಡುವವನು ಲಕ್ಷೀಪತಿ ಬಾಲಾಜಿಯಾದರೆ, ಆಯುರಾರೋಗ್ಯ ಕೋಡೋನು ನೀಲಕಂಠನು. ಹೀಗಾಗಿ ಇವರಿಬ್ಬರ ಕೃಪಾಕಟಾಕ್ಷ ಪಡೆದುಕೊಂಡವರು ಆರೋಗ್ಯವಂತರಾಗಿ, ಹಣವಂತರಾಗಿ ಜೀವನವನ್ನು ಆನಂದಿಸಿ ಕಡೆಗೆ ಶಿವನ ಬಳಿ ಸಂತಸದಿಂದ ಹೋಗಬಹುದು.

ಇನ್ನು ಮಹಾಶಿವರಾತ್ರಿಯ ಬಗ್ಗೆ ಹೇಳಬೇಕೆಂದರೆ. ಅಂದು ಶಿವನ ಜನ್ಮದಿನವಾಗಿ ಇಡೀ ವಿಶ್ವದಾದ್ಯಂತ ಭಕ್ತರು ಆಚರಿಸುತ್ತಾರೆ. ಅದೂ ಅಲ್ಲದೇ ತಾಂಡವ ನೃತ್ಯ ಮಾಡಿದ ದಿನವೂ ಕೂಡ ಇಂದೇ ಆಗಿದೆ ಎಂಬುದಾಗಿ ಪೌರಾಣಿಕ ಹಿನ್ನೆಲೆಯಿದೆ. ಅಮೃತಕ್ಕಾಗಿ ಸಮುದ್ರವನ್ನು ಕಡೆದಾಗ ಬಂದ ವಿಷವನ್ನು ಶಿವನು ಕುಡಿದ ದಿನವೆಂದು ಶಿವರಾತ್ರಿಯನ್ನು ಪರಿಗಣಿಸಲಾಗುತ್ತದೆ. ಸಮುದ್ರ ಮಂಥನ ಮಾಡಿದಾಗ ಬಂದ ವಿಷವನ್ನು ಶಿವನು ಕುಡಿದಾಗ, ಕೂಡಲೇ ದೇವಿ ಪಾರ್ವತಿಯು ಅವನ ಕೊರಳನ್ನು ಬಿಗಿಯಾಗಿ ಹಿಡಿದಳು. ಆ ವಿಷವು ಶಿವನ ದೇಹ ಪ್ರವೇಶಿಸದೆ ಕೊರಳಲ್ಲಿಯೇ ಉಳಿಯಿತು. ಹೀಗಾಗಿ ಆವಾಗಿನಿಂದ ಮಹಾಶಿವನಿಗೆ ನೀಲಕಂಠ ಎಂಬ ಹೆಸರು ಬಂದಿದ್ದು.

ಕೆಲವೇ ದಿನಗಳಲ್ಲಿ (ಫೆ.27) ಶಿವರಾತ್ರಿ ಹಬ್ಬ ಬರಲಿದೆ. ಈ ಸಂದರ್ಭದಲ್ಲಿ ದೇಶದೆಲ್ಲೆಡೆ ಹರಡಿಕೊಂಡಿರುವ 12 ಜ್ಯೋತಿರ್ಲಿಂಗಗಳ ಕುರಿತಾದ ಪೌರಾಣಿಕ ಹಿನ್ನೆಲೆ ಕಥೆಗಳನ್ನು ಓದಿ ತಿಳಿದುಕೊಂಡು ಶಿವರಾತ್ರಿಯ ಸುಸಮಯದಲ್ಲಿ ಜೀವನವನ್ನು ಪಾವನ ಮಾಡಿಕೊಳ್ಳುವವರು ಭಾಗ್ಯವಂತರೆನ್ನಬಹುದು.

"ಶ್ರೀ ಸೋಮನಾಥೇಶ್ವರ ಕುರಿತ ಪೌರಾಣಿಕ ಹಿನ್ನೆಲೆ" ಎಂಬುದು ಮುಂದಿನ ಲೇಖನದಲ್ಲಿ (ಒನ್‌ಇಂಡಿಯಾ)

ಶಿವರಾತ್ರಿ ಟಿಪ್ಸ್ : ಅಂದು ಶಿವಭಜನೆ ಮಾಡುವಲ್ಲಿ ಸಮಯವಿದ್ದವರು ಪಾಲ್ಗೊಳ್ಳಬೇಕು.

ಶಿವಕೃಪೆಗೆ : ದೇವಸ್ಥಾನಕ್ಕೆ ಹೋದಾಗ ದೇವರ ಮುಖ ಬಿಟ್ಟು ಬಂದ ಭಕ್ತರ ಮುಖವನ್ನು ಪಿರಿಪಿರಿಯಾಗಿ ನೋಡುತ್ತಿರಬಾರದು. ಪ್ರೇಮಿಗಳು ದೇವಸ್ಥಾನವನ್ನು ಭೇಟಿಯ ಸ್ಥಳವನ್ನಾಗಿಸಕೊಳ್ಳಬಾರದು. ಇದನ್ನೆಲ್ಲಾ ನಂಬೋಲ್ಲಾ ನಾವು ಎಂದರೆ, ನೀವು ಮುಖ ಎತ್ತಿ ತಿರುಗಾಡೋಕಾಗಲ್ಲ ಅಂಥ ಶಿಕ್ಷೆ ದೇವರಿಂದ ಗ್ಯಾರಂಟೀನೆ.

English summary
Mahashivaratri will be celebrated all over Karnataka and India by devotees of Lord Shiva. Shivaratri is considered as Shiva's birthday. Astrologer S.S. Naganurmath explains the significance of Jyotirlinga and Shivaratri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X