ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾತ್ರಿ : ಸೋಮನಾಥೇಶ್ವರನ ಪೌರಾಣಿಕ ಕಥೆ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಗುಜರಾತ್ ರಾಜ್ಯದ ಸೌರಾಷ್ಟ್ರದಲ್ಲಿರುವ ಶ್ರೀ ಸೋಮನಾಥೇಶ್ವರನ ದೇವಸ್ಥಾನವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೇದಾಗಿದೆ. ಕೆಲವರು ನಮ್ಮ ದೇಶ ಹಾಗೂ ದೇವರ ಮೂರ್ತಿ, ದೇವಸ್ಥಾನಗಳ ಮೇಲೆ ಪರಕೀಯರು ದಾಳಿ ಮಾಡಿ ಲೂಟಿ ಮಾಡಿಕೊಂಡು ಹೋದರು ಎನ್ನುತ್ತಾರೆ. ಆವಾಗ ನಮ್ಮ ದೇವರೆಲ್ಲ ಎಲ್ಲಿ ಹೋದರು ಎಂದು ನಾಸ್ತಿಕತನ ಗುಣದಿಂದ ಪ್ರಶ್ನಿಸುತ್ತಾರೆ. ಪರಕೀಯರು ದಾಳಿ ಮಾಡಿ ಲೂಟಿ ಮಾಡಿದ್ದು ಸುಳ್ಳಲ್ಲ. ಇತಿಹಾಸ ಓದಿದ ಎಲ್ಲರಿಗೂ ಗೊತ್ತೇ ಇದೆ. ಆದರೆ, ನಮ್ಮ ಹಿಂದೂ ದೇವರ ಲೀಲೆಯ ಬಗ್ಗೆನೇ ಪ್ರಶ್ನಿಸುವವರು ಅಲ್ಪಬುದ್ಧಿಯ ಮತಿಗೇಡಿ ಹಿಂದೂ ಧರ್ಮ ವಿರೋಧಿಗಳು ಎನ್ನಬೇಕಾಗುತ್ತದೆ.

ಏಕೆಂದರೆ, ಯಾರೆಷ್ಟೇ ದಾಳಿ ಮಾಡಿದರೂ, ಎಷ್ಟೇ ಲೂಟಿ ಮಾಡಿದರೂ ಎಲ್ಲ ದೇವಸ್ಥಾನಗಳಲ್ಲಿರುವ ದೇವರು ಹಾಗೆಯೇ ಇದ್ದಾನೆ. ಅದೂ ಅಲ್ಲದೇ ನಮ್ಮ ದೇಶವು ಕೂಡ ಇಂದಿಗೂ ಸಂಪದ್ಭರಿತವಾಗಿದೆ. ಆದರೆ ಲೂಟಿಕೋರರು ಎಲ್ಲಿದ್ದಾರೆ? ಅವರೆಲ್ಲ ಶಿವನ ಪಾದ ಸೇರಿದ್ದಾರೆ. ಇದರಲ್ಲೇ ಅರ್ಥ ಮಾಡಿಕೊಳ್ಳಬಹುದು. ಕೆಟ್ಟತನ, ಕೆಟ್ಟದ್ದು ಯಾವಾಗಲೂ ಶಾಶ್ವತವಲ್ಲ. ಸತ್ಯ, ಧರ್ಮ, ನ್ಯಾಯವಾಗಿರುವುದೇ ನಿತ್ಯ ನೂತನ ಎಂಬುದನ್ನು. ಇಂಥ ಹಿಂದೂ ಧರ್ಮವಿರೋಧಿಗಳು ದೇವರ ಹೆಸರಿಟ್ಟುಕೊಂಡು, ನಮ್ಮ ಹಿಂದೂ ದೇವರ ಹೆಸರಿಗೆ ಮಸಿ ಬಳಿಯುವಂತಹ ಅನ್ಯಾಯ, ಅನೀತಿ, ಅಧರ್ಮದಿಂದ ಬಾಳುವೆ ಮಾಡುತ್ತ ನಮ್ಮ ದೇವರ ಮರ್ಯಾದೆ ತೆಗೆಯುತ್ತಿದ್ದಾರೆ ಎನ್ನಬಹುದು. ಇದಕ್ಕೆ ಜೀವಂತ ಸಾಕ್ಷಿ ಸಾಕಷ್ಟಿವೆ. ನಮ್ಮ ಸುತ್ತಮುತ್ತಲೇ ಇದ್ದಾರೆ ಇಂಥ ದೇವರ ನಾಮವಿಟ್ಟುಕೊಂಡಿರುವ ಅಸುರರು.

ಅಷ್ಟಕ್ಕೂ ಇಂಥ ಕೊಂಕು ಮಾತನಾಡುವವರು, ನಮ್ಮ ದೇಶದ ಮೇಲಾದ ಅನ್ಯಾಯದ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸಲಿ ನೋಡೋಣ. ಇಂಥದ್ದೆಲ್ಲಾ ಹೇಳಬಾರದು ಇವರಿಗೆ. ನಮ್ಮ ಧರ್ಮ ಮತ್ತು ನಮ್ಮ ದೇಶದ ಮೇಲೆ ಅನಾಚಾರವನ್ನು ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಟೊಂಕ ಕಟ್ಟಿಕೊಂಡು ನಿಲ್ಲಲಿ ಇವರು. ಎಲ್ಲರೂ ಇವರ ಹಿಂದೆ ಬಹುಪರಾಕ್ ಎಂದು ದೇಶಾಭಿಮಾನ ಹಾಗೂ ಧರ್ಮಾಭಿಮಾನದಿಂದ ಬಂದೇ ಬರುತ್ತಾರೆ. ಆದರೆ, ಇಂಥ ಗಂಡಸುತನದ ಧೈರ್ಯ ಮತ್ತು ಗುಂಡಿಗೆ ಇವರಲ್ಲಿರುವುದಿಲ್ಲ. ಕೊಂಕು ಮಾತುಗಳು ಮಾತ್ರ ಸಾಕಷ್ಟು ಬಾಯಲ್ಲಿ ಇವರಿಗೆ.

ಇರಲಿ, ಇನ್ನು ಸೋಮೇಶ್ವರನ ಉದ್ಭವ ಮತ್ತು ಅವನ ಮಹತ್ವದ ಕುರಿತಾದ ಪೌರಾಣಿಕ ಹಿನ್ನೆಲೆಯ ಕಥೆಯನ್ನು ತಿಳಿದುಕೊಳ್ಳೋಣ. [ಜ್ಯೋತಿರ್ಲಿಂಗಗಳ ಪೌರಾಣಿಕ ಹಿನ್ನೆಲೆ]


ಸೋಮನಾಥೇಶ್ವರನ ಪೌರಾಣಿಕ ಕಥೆ : ಸೃಷ್ಟಿಕರ್ತ ಬ್ರಹ್ಮನಿಗೆ ದಕ್ಷ ಪುತ್ರನಾಗಿದ್ದನು. ದಕ್ಷನಿಗಂತೂ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು. ಆ ಮಕ್ಕಳಲ್ಲಿನ ಕೆಲವರು ಇಂದಿಗೂ ನಾವು ಆಕಾಶದಲ್ಲಿ ನೋಡುವ ಹಾಗೂ ಜನ್ಮಜಾತಕದ ಕುಂಡಲಿಯಲ್ಲಿರುವ ನಕ್ಷತ್ರಗಳು. ಆದರೆ ಎಲ್ಲ 27 ನಕ್ಷತ್ರಗಳೆನಿಸಿಕೊಂಡವರು (ಅಶ್ವಿನಿ, ಭರಣಿ, ರೋಹಿಣಿ, ಕೃತ್ತಿಕಾ, ಮೃಗಶಿರಾ ಇತ್ಯಾದಿ) ಹುಡುಗಿಯರೇ ಎನ್ನುವುದು ವಿಶೇಷವಿಲ್ಲಿ.

ಈ ಎಲ್ಲ 27 ಮಕ್ಕಳನ್ನು ದಕ್ಷನು ಆಕಾಶಕಾಯದಲ್ಲಿ ರಾತ್ರಿಯಧಿಪತಿಯೆನಿಸಿಕೊಂಡ ಚಂದ್ರನಿಗೆ ಮದುವೆ ಮಾಡಿಕೊಟ್ಟನು. ಚಂದ್ರನು ಎಲ್ಲ 27 ಹೆಂಡತಿಯರೊಂದಿಗೆ ಒಂದೇ ರೀತಿಯ ಸಂಸಾರ ಮಾಡದೇ ರೋಹಿಣಿಯ ಸೌಂದರ್ಯಕ್ಕೆ ಮಾರು ಹೋಗಿಬಿಟ್ಟನು. ಯಾವಾಗಲೂ ರೋಹಿಣಿಯನ್ನೇ ಬಯಸುತ್ತಿದ್ದನು. ಉಳಿದವರನ್ನು ಮುಟ್ಟಲೂ ಬೇಸರಪಟ್ಟುಕೊಳ್ಳುತ್ತಿದ್ದನು. ಚಂದ್ರನ ಈ ನಡವಳಿಕೆಯಿಂದ ಕೋಪಗೊಂಡು ಉಗ್ರವಾದ ಉಳಿದೆಲ್ಲ 26 ಹೆಂಡತಿಯರು ತಂದೆ ದಕ್ಷನಿಗೆ ದೂರು ನೀಡಿದರು.

ಆದರೂ ರೋಹಿಣಿಯ ಬಗ್ಗೆ ಅತೀವ ಪ್ರೀತಿಯಿಟ್ಟುಕೊಂಡಿದ್ದ ಚಂದ್ರನು ದಕ್ಷನ ಎಚ್ಚರಿಕೆಯ ಮಾತುಗಳನ್ನು ನಿರ್ಲಕ್ಷಿಸತೊಡಗಿದನು. ಎಂದಿನಂತೆಯೇ ರೋಹಿಣಿಯ ಸಂಗಡ ಮಾತ್ರ ಪ್ರೀತಿ, ಪ್ರೇಮದಿಂದಿರುತ್ತಿದ್ದನು. ಉಳಿದವರನ್ನು ಕಡೆಗಣಿಸತೊಡಗಿದನು. ಹೇಳಿದ ಮಾತು ಕೇಳದೇ, ತನ್ನ ಉಳಿದ ಮಕ್ಕಳ ಬಾಳು ಕತ್ತಲಾಗುವಂತೆ ಮಾಡಿದ ಚಂದ್ರನ ಮೇಲೆ ದಕ್ಷನಿಗೆ ವಿಪರೀತ ಕೋಪ ಬಂತು.

ಆ ಕೂಡಲೆ ಸಿಟ್ಟಿನಿಂದ ಚಂದ್ರನಿರುವಲ್ಲಿಗೆ ಹೋಗಿ, "ನಿನಗೆ ಕ್ಷಯರೋಗ ಬಂದು ನಿನ್ನಾಸೆ ಯಾವುದೂ ನೆರವೇರದಂತಾಗಲಿ" ಎಂದು ಶಾಪ ಕೊಟ್ಟನು. ಮಾಡಿದ ತಪ್ಪಿಗೆ ದಕ್ಷನಿಂದ ಶಾಪ ಪಡೆದುಕೊಂಡ ಚಂದ್ರನು ಅಶಕ್ತಿಯಿಂದ ವಿಲವಿಲ ಒದ್ದಾಡಲಾರಂಭಿಸಿದನು. ಕ್ಷಯರೋಗದ ಬಾಧೆಯಿಂದ ದೈಹಿಕವಾಗಿ ಸಣ್ಣಾಗಾಗಲಾರಂಭಿಸಿದನು. ಅಪ್ರತಿಮ ಸೌಂದರ್ಯವಂತನಾದ ಚಂದ್ರನಲ್ಲಿದ್ದ ಹದಿನಾರು ಕಲೆಗಳು ಕ್ಷೀಣಗೊಳ್ಳಲಾರಂಭಿಸಿದವು. ಇದರಿಂದ ನನ್ನ ಅಂತ್ಯ ಬಂತೆಂದು ಗಾಬರಿಗೊಂಡ ಚಂದ್ರನು ಕೂಡಲೇ ಬ್ರಹ್ಮನ ಸನ್ನಿಧಿಗೆ ಹೋದನು. ಅಲ್ಲಿ ಆದ ವೃತ್ತಾಂತವನ್ನೆಲ್ಲವನ್ನೂ ಬಿಡಿಸಿ ಹೇಳಿ, ತನ್ನಿಂದ ತಪ್ಪಾಗಿದ್ದು ನಿಜ, ಆದರೆ ರೋಹಿಣಿಯ ಸೌಂದರ್ಯದ ಮೋಹದಿಂದ ಹೀಗಾಯಿತೇ ಹೊರತು ನಾನೇನು ಉಳಿದವರಿಗೆ ಅನ್ಯಾಯ ಮಾಡಲೇಬೇಕಂತ ಬಯಸಿರಲಿಲ್ಲ ಎಂದನು. ಬ್ರಹ್ಮದೇವನಿಗೆ, ನೀನೆ ನನ್ನನ್ನು ಈ ಕುತ್ತಿನಿಂದ ಪಾರು ಮಾಡೆಂದು ಪರಿಪರಿಯಾಗಿ ಬೇಡಿಕೊಂಡನು.

ಆಗ, ಬ್ರಹ್ಮನು ನಿನ್ನ ಶಾಪ ವಿಮೋಚನೆಗೆ ಇರುವುದು ಒಂದೇ ದಾರಿ. ನಿಷ್ಕಲ್ಮಶ ಭಕ್ತಿಗೆ ಅತೀ ಶೀಘ್ರವಾಗಿ ಒಲಿಯುವವನು ಮಹಾಶಿವನೊಬ್ಬನೇ. ಅವನನ್ನು ಮೃತ್ಯುಂಜಯನೆಂದೂ ಕರೆಯುತ್ತೇವೆ. ಎಂಥದೇ ರೋಗವಿರಲಿ ಅದನ್ನು ನಿವಾರಿಸಬಲ್ಲ ಅಧ್ಬುತ ಶಕ್ತಿಯಿರುವವನು ಈ ಸಮಸ್ತ ಲೋಕದಲ್ಲಿ ಮಹಾಶಿವನೊಬ್ಬನೇ. ನೀನು ಅವನ ಒಲುಮೆ ಪಡೆದುಕೊಂಡರೆ ಈ ರೋಗದಿಂದ ಗುಣಮುಖವಾಗಬಹುದೆಂದನು.

ಆಗ ಚಂದ್ರನು ಈಗಿನ ಸೌರಾಷ್ಟ್ರದ ಪ್ರದೇಶದಲ್ಲಿ ಶಿವನ ಕುರಿತು ತಪಸ್ಸಾಚರಿಸಲಾರಂಭಿಸಿದನು. ಚಂದ್ರನು ಭಕ್ತಿಯಿಂದ ಆರು ಮಾಸಗಳ ಕಾಲ ಉಗ್ರ ತಪಸ್ಸಿನಲ್ಲಿಯೇ ನಿರತನಾಗಿದ್ದನು. "ಓಂ ನಮಃ ಶಿವಾಯಃ" ಎಂಬ ಚಂದ್ರನ ಕರೆಗೋಗೊಟ್ಟ ಮಹಾಶಿವನು ಅವನೆದುರಿಗೆ ಪ್ರತ್ಯಕ್ಷಗೊಂಡನು. ಆದ ಪರಿಸ್ಥಿತಿಯನ್ನು ಶಿವನಿಗೆ ಅಳುತ್ತಾ ವಿವರಿಸಿದ ಚಂದ್ರನು ಹೇಗಾದರೂ ಮಾಡಿ ಈ ವ್ಯಾಧಿಯಿಂದ ಮುಕ್ತಿ ಕೊಡಿಸು ಎಂದನು.

ಶಿವನು, ದಕ್ಷನ ಶಾಪವನ್ನು ನಿವಾರಣೆ ಮಾಡಲಾಗುವುದಿಲ್ಲ. ಆದರೆ ಅದರ ಶಕ್ತಿಯನ್ನು ಕುಂದಿಸಬಹುದು ಎಂದನು. ಹೇಗಾದರಾಗಲಿ, ಒಟ್ಟಿನಲ್ಲಿ ನನಗೆ ಈ ರೋಗದ ನೋವಿನಿಂದ ಪಾರು ಮಾಡು ಎಂದ ಚಂದ್ರ. ಆಗ ಶಿವನು ಮಾಸದ ಹದಿನೈದು ದಿವಸ ನೀನು ದಕ್ಷನ ಶಾಪದಂತೆ ಕ್ಷೀಣವಾಗಿ ಕಪ್ಪಾಗುತ್ತ ಹೋಗುತ್ತೀಯಾ, ನಂತರ ಹದಿನೈದು ದಿವಸ ನನ್ನ ವರದಂತೆ ಉಜ್ವಲವಾಗಿ ಬೆಳಗುತ್ತಿರುತ್ತಿಯಾ ಎಂದನು. ಇದಕ್ಕೇನೇ ನಾವೆಲ್ಲಾ ಹುಣ್ಣಿಮೆ, ಅಮಾವಾಸ್ಯೆ ಎನ್ನುತ್ತೇವೆ.

ಶಿವನಾಜ್ಞೆಯನ್ನೊಪ್ಪಿದ, ಚಂದ್ರನು ಇನ್ನೊಂದು ಬೇಡಿಕೆಯನ್ನು ಶಿವನಲ್ಲಿಟ್ಟನು. ನೀನು ಪ್ರತ್ಯಕ್ಷವಾದ ಈ ಸ್ಥಳದಲ್ಲಿ ಲಿಂಗರೂಪಿಯಾಗಿ ಇಲ್ಲಿಯೇ ನೆಲೆಸಿ ನನ್ನಂಥ ವಾಸಿಯಾಗದ ರೋಗಿಗಳಿಗೆ ಹಾಗೂ ಶಿವಭಕ್ತರ ಇಷ್ಟಾರ್ಥವನ್ನು ತೀರಿಸು ಎಂದನು. ಆಗ ಭಕ್ತನಿಚ್ಛೆಯಂತೆಯೇ ಆಗಲಿ ಎಂದು ಅಲ್ಲಿಯೇ ಲಿಂಗರೂಪದಲ್ಲಿ ನೆಲೆಸಿದನು.

ಚಂದ್ರನು ತಪಸ್ಸಾಚರಿಸಿದ ಈ ಪ್ರದೇಶದಲ್ಲಿರುವ ಹೊಂಡದಲ್ಲಿ ಸ್ನಾನ ಮಾಡಿದರೆ ರೋಗಿಗಳು ಗುಣಮುಖರಾಗುತ್ತಾರೆ ಎಂಬ ಪ್ರತೀತಿ ಇದೆ. ಈ ಸ್ಥಳದಲ್ಲಿ ಶ್ರೀಕೃಷ್ಣ, ಬಲರಾಮ, ಪಾಂಡವರ ವಂಶದವರು, ರಾಜಮಹಾರಾಜರು, ಋಷಿ-ಮುನಿಗಳು, ಸಾಧು, ಸಂತರು ಸೋಮನಾಥನನ್ನು ಪೂಜಿಸಿದ್ದಾರೆಂದು ಪುರಾಣಗಳಲ್ಲಿದೆ. ಶಿವನು ಪ್ರತ್ಯಕ್ಷಗೊಂಡ ಪ್ರದೇಶದಲ್ಲಿರುವ ಲಿಂಗಕ್ಕೆ ಜ್ಯೋತಿರ್ಲಿಂಗದ ಸ್ಥಾನವಿದೆ. ಹೀಗಾಗಿ ಸಾಕಷ್ಟು ಶಿವಭಕ್ತರು ಜ್ಯೋತಿರ್ಲಿಂಗ ರೂಪದ ಸೋಮನಾಥನ ದರ್ಶನ ಮಾಡಿ ತಮ್ಮ ಭವರೋಗ ಕಳೆದುಕೊಳ್ಳುತ್ತಿದ್ದಾರೆ.

"ಶ್ರೀಶೈಲ ಮಲ್ಲಿಕಾರ್ಜುನ" ಎಂಬುದು ಮುಂದಿನ ಲೇಖನದಲ್ಲಿ (ಒನ್ ಇಂಡಿಯಾ)

ಶಿವರಾತ್ರಿ ಟಿಪ್ಸ್ : ಅಂದು ಶಿವಭಕ್ತರು ಹಗಲಿನಲ್ಲಿ ಉಪವಾಸವಿದ್ದು, ರಾತ್ರಿ ಶಿವಧ್ಯಾನದೊಂದಿಗೆ ಜಾಗರಣೆ ಮಾಡಿದರೆ ಶಿವಾನುಗ್ರಹವಾಗುತ್ತದೆ. ಸಿನಿಮಾ ನೋಡುತ್ತ ಜಾಗರಣೆ ಮಾಡಬಾರದು.

ಶಿವಕೃಪೆಗೆ : ದೇವಾಲಯಕ್ಕೆ ಹೋದಾಗ ವೃದ್ಧರಿಗೆ, ಮಹಿಳೆಯರಿಗೆ, ಬಾಲಕರಿಗೆ ದರ್ಶನಕ್ಕಾಗಿ ಮೊದಲ ಪ್ರಾಶಸ್ತ್ಯ ಕೊಡಬೇಕು. ಕಟ್ಟುಮಸ್ತಾಗಿದ್ದೇನೆ ಎಂದೋ ಅಥವಾ ಟೈಮ್ ಇಲ್ಲವೆಂದೋ ಅವಸರದಿಂದ ಎಲ್ಲರ ಮೇಲೆ ಮುಗಿಬಿದ್ದು ದೇವರ ದರ್ಶನ ಮಾಡಬಾರದು. ಅಧಿಕಾರ ದರ್ಪದಿಂದ ಕ್ಯೂ ಬ್ರೇಕ್ ಮಾಡಿ ದೇವರ ದರ್ಶನ ಮಾಡುವುದಂತೂ ಮಹಾಪಾಪ.

English summary
Mahashivaratri will be celebrated all over Karnataka and India by devotees of Lord Shiva. Shivaratri is considered as Shiva's birthday. Astrologer S.S. Naganurmath writes about Somanatheshwara of Saurathtra in Gujarat. It is considered as one of 12 jyotirlingas in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X