ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕ್ರಾಂತಿಗಾಗಿ ಒನ್ ಇಂಡಿಯಾಕ್ಕೆ 'ಹಂಸಲೇಖ' ನೀಡಿದ ವಿಶೇಷ ಸಂದರ್ಶನ

|
Google Oneindia Kannada News

ಗಾನಗಾರುಡಿಗ, ನಾದಬ್ರಹ್ಮ ಹಂಸಲೇಖ ಅವರ ನೆಚ್ಚಿನ ಹಬ್ಬ ಸಂಕ್ರಾಂತಿ ಈಗ ಮತ್ತೊಮ್ಮೆ ಬಂದಿದೆ. ಒನ್ ಇಂಡಿಯಾ ಓದುಗರಿಗಾಗಿ, ನಮ್ಮ ಜನಪದದ ಪ್ರತಿಬಿಂಬವಾದ, ಜನಮಾನಸದ ಸಂಭ್ರಮವಾದ ಈ ಹಬ್ಬವನ್ನು ಖುದ್ದು ಅವರೇ ಅವರ ದೃಷ್ಟಿಕೋನದಲ್ಲಿ ಇಲ್ಲಿ ಬಿಡಿಸಿದ್ದಾರೆ, ಬಡಿಸಿದ್ದಾರೆ.

ಸಂಕ್ರಾಂತಿಯೆಂದರೆ, ಕೇವಲ ಸುಗ್ಗಿ ಹಬ್ಬ ಮಾತ್ರವಲ್ಲ ಅದು ನಿಸರ್ಗ ಹಾಗೂ ಮಾನವನ ಬೆಸುಗೆಯ ಸಂಭ್ರಮ ಎಂದು ವಿಭಿನ್ನವಾಗಿ ಹೇಳುವ ಅವರು, ಈ ಹಬ್ಬದ ವಿಶೇಷವೇನು, ಅದನ್ನು ನಾವು ಹೇಗೆ ಸವಿಯಬೇಕು ಎಂಬುದನ್ನು ಸವಿವರವಾಗಿ ಬಣ್ಣಿಸಿದ್ದಾರೆ. ಅಲ್ಲದೆ, ತಮ್ಮ ಬಾಲ್ಯದಲ್ಲಿ ತಾವು ಕಂಡ ಹಬ್ಬದ ಸಡಗರವನ್ನು ನೆನಪಿಸಿಕೊಂಡಿದ್ದಾರೆ.

ಅಲ್ಲದೇ ಸಂಕ್ರಾಂತಿ ಹಬ್ಬದ ವೇಳೆ ನೆನಪಾಗುವ ಅವರ, "ಸಂಕ್ರಾಂತಿ ಬಂತು ರತ್ತೋ ರತ್ತು'' ಹಾಡು ಹುಟ್ಟಿದ ಸಮಯವನ್ನೂ ವಿವರಿಸಿದ್ದಾರೆ. ಈ ಬಾರಿಯ ಸುಗ್ಗಿ ಹಬ್ಬಕ್ಕೆ ರಾಗಬ್ರಹ್ಮರ ಈ ಮಾತುಗಳೇ ಎಲ್ಲಾ ಓದುಗರಿಗೆ ಎಳ್ಳು-ಬೆಲ್ಲ.

Sankrati is a combination of light and crop: Hamsalekha

- ನಿಮ್ಮ ಪ್ರಕಾರ, ಸಂಕ್ರಾಂತಿ ಎಂದರೇನು?
ನಮ್ಮ ದೇಶದ ನಿಸರ್ಗ ಜ್ಞಾನ, ನಮ್ಮ ನಾಡಿನ ಕೃಷಿ ಜ್ಞಾನ ಮತ್ತು ನಮ್ಮ ನಾಡಿನ ಜೀವನ ಸಂಭ್ರಮದ ಜ್ಞಾನ. ಈ ಮೂರರ ಸಮ್ಮಿಶ್ರಣವೇ ಸಂಕ್ರಾಂತಿ. ಇಲ್ಲಿ ಗಣಿತವಿದೆ. ಕಾಗುಣಿತವಿದೆ. ತಕಧಿಮಿತ ಇದೆ. ಜೀವನವನ್ನು ಹೇಗೆ ಸಂಭ್ರಮಿಸಬೇಕು, ಬದುಕನ್ನು ಹೇಗೆ ಬೆಳೆಯಬೇಕು, ನಿಸರ್ಗವನ್ನು ನಮ್ಮಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಈ ಸಂಕ್ರಾಂತಿ ಬಿಂಬಿಸುತ್ತದೆ.

ಈ ಸಂಭ್ರಮಾಚರಣೆಯಲ್ಲಿ ಎಲ್ಲರೂ ಭಾಗಿಗಳು. ಬುದ್ಧಿವಂತರು, ವಿದ್ಯಾವಂತರು, ಕೃಷಿಕರು, ಮೂಢರು, ಮೂರ್ಖರು, ಮಕ್ಕಳು, ಗೋವುಗಳು... ಹೀಗೆ, ನಾಡಿನ ಜೀವರಾಶಿಗಳು ಹಾಗೂ ನಿಸರ್ಗ ಇಲ್ಲೆದರ ಸಂಗಮ ಈ ಹಬ್ಬ. ನನ್ನ ಪ್ರಕಾರ, ನಮ್ಮ ನಾಡಿನಲ್ಲಿ ಇದಕ್ಕಿಂತ ಶ್ರೇಷ್ಠ ಹಬ್ಬ ಮತ್ತೊಂದಿಲ್ಲ. ವಿವಿಧೆಡೆ ಈ ಹಬ್ಬವನ್ನು ಬೇರೆ ಬೇರಿ ರೀತಿಯಲ್ಲಿ ಆಚರಿಸುತ್ತಾರೆ. ಆದರೆ, ಎಲ್ಲರ ಅರ್ಥ ಒಂದೇ. ಬೆಳೆ ಮತ್ತು ಬೆಳಕು ಎಂಬೆರಡರ ಸಮ್ಮಿಲನ ಈ ಹಬ್ಬ.

Sankrati is a combination of light and crop: Hamsalekha

- ಬಾಲ್ಯದಲ್ಲಿ ನಿಮ್ಮ ಮನೆಯಲ್ಲಿ ನೀವು ನೋಡಿದ ಸಂಕ್ರಾಂತಿ ಸಡಗರ ಹೇಗಿತ್ತು?
ನಾನು ಹುಟ್ಟಿದ್ದು ಅಕ್ಕಿಪೇಟೆಯಲ್ಲಿ. ಈಗಿನ ಚಿಕ್ಕಲಾಲ್ ಬಾಗ್ ಇದೆಯಲ್ಲಾ ಅದರ ಹತ್ತಿರವೇ ಅಕ್ಕಿಪೇಟೆಯ ತುಳಸಿ ತೋಟವಿತ್ತು. ಅಲ್ಲೊಂದು ರಾಮನ ದೇವಸ್ಥಾನ. ಅಲ್ಲೊಂದು ವೇದಿಕೆ. ಅಲ್ಲಿ ಯಾವಾಗಲೂ ಕನ್ನಡ, ತಮಿಳು ನಾಟಕಗಳು ನಡೆಯುತ್ತಿದ್ದವು. ಅದರ ಎದುರುಗಡೆಯ ಮನೆಯೇ ನಮ್ಮದು. ಅಲ್ಲೊಂದು ಪ್ರಿಂಟಿಂಗ್ ಪ್ರೆಸ್ ಅನ್ನೂ ನಡೆಸುತ್ತಿದ್ದೆವು. ಗೀತಾ ಪವರ್ ಪ್ರೆಸ್ ಅಂತ.

ನಮ್ಮ ಮನೆಯ ಮುಂದೆ ಪ್ರತಿ ಸಂಕ್ರಾಂತಿಯಂದು ನಮ್ಮ ಹಳ್ಳಿಯ (ಕೆ.ಆರ್. ಪುರ ದಾಟಿದ ಮೇಲೆ ಬರುವ ಕಿತ್ತಗನೂರು) ನಮ್ಮ ಜಮೀನಿನಲ್ಲಿ ಬೆಳೆದಿದ್ದ ರಾಗಿ, ಬತ್ತ ಹಾಕಿಕೊಂಡು ಬಂದ ಐದು ಗಾಡಿಗಳು ಬಂದು ನಿಲ್ಲುತ್ತಿದ್ದವು.

ಆಗೆಲ್ಲಾ ಪಂಚೇರು ಅನ್ನೋ ಅಳತೆಯ ಸಾಮಗ್ರಿ ಬಳಕೆಯಲ್ಲಿತ್ತು. ಈ ಪಂಚೇರು ಅನ್ನೋ ಪದವನ್ನು ಕಲ್ಲರಳಿ ಹೂವಾಗಿ ಸಿನಿಮಾದ ಹಾಡೊಂದರಲ್ಲಿ ಬಳಸಿದ್ದೇನೆ. ಆ ಪಂಚೇರಿನಲ್ಲಿ ಐದು ಸೇರುಗಳಷ್ಟು ಧವಸ, ಧಾನ್ಯ ತುಂಬಬಹುದಾಗಿತ್ತು.[ಬೆಂಗಳೂರು ವ್ಯಾಪಾರಿಗಳಿಗಿಲ್ಲ ಸಂಕ್ರಾಂತಿ ಸುಗ್ಗಿ, ಸಡಗರ]

ಗಾಡಿಗಳಲ್ಲಿ ಬಂದಿದ್ದ ಭತ್ತ ಮತ್ತು ರಾಗಿ, ಬೇರಾನಾದರೂ ಕಾಳುಗಳನ್ನು ನಾವು ಮಕ್ಕಳು ತೆಗೆದುಕೊಂಡು ಹೋಗಿ ನಮ್ಮ ಮನೆಯ ಆಸುಪಾಸಿನ ಪ್ರತಿ ಮನೆಗೂ ಪಂಚೇರು ರಾಗಿ, ಪಂಚೇರು ಭತ್ತ, ಪಂಚೇರು ಕಾಳುಗಳನ್ನು ನೀಡಿ ಬರುತ್ತಿದ್ದೆವು. ಅದೆಷ್ಟು ಖುಷಿ ಕೊಡುತ್ತಿತ್ತು ಅಂದರೆ, ಬೆಳೆದ ಬೆಳೆಯನ್ನು ಇನ್ನೊಬ್ಬರಿಗೆ ಹಂಚಿ ತಿನ್ನುವುದರ ಸಂತೋಷವನ್ನು ನಮ್ಮ ಅಪ್ಪ-ಅಪ್ಪ, ನಾವು ಮಕ್ಕಳು ಅನುಭವಿಸಿದ್ದೇವೆ.
ಶೂದ್ರ, ಬ್ರಾಹ್ಮಣ, ಕ್ಷತ್ರಿಯ, ಲಿಂಗಾಯಿತ... ಹೀಗೆ ಎಲ್ಲರಿಗೂ ಹಂಚಿಕೊಂಡು ಬರುತ್ತಿದ್ದೆವು. ಯಾರಿಗೂ ಯಾವ ಬೇಧವನ್ನೂ ಮಾಡುತ್ತಿರಲಿಲ್ಲ. ಅದು ಎಲ್ಲರಲ್ಲೂ ಒಂದು ಧನ್ಯತಾ ಭಾವ ತರಿಸುತ್ತಿತ್ತು.

ಅಕ್ಕಿಪೇಟೆ ಅಂದ್ರಲ್ಲಾ... 'ನಾನು ನನ್ನ ಹೆಂಡ್ತಿ' ಚಿತ್ರದ ನಿಮ್ಮ ಹಾಡೊಂದರಲ್ಲಿ ಬರುವ ಅಕ್ಕಿಪೇಟೆ ಲಕ್ಕಮ್ಮ ಅಲ್ಲಿಯವಳೇನಾ?
ಹ್ಹ..ಹ್ಹ.... ಹ್ಹ.... (ನಗು). ಹೌದು. ಅವಳು ಅಲ್ಲಿಯವಳೇ. ನನ್ನ ಮೊದಲ ಗರ್ಲ್ ಫ್ರೆಂಡ್. ಆಕೆ ನನಗಿಂತ ಎರಡು ವರ್ಷ ದೊಡ್ಡವಳು. ನನಗೆ ತೀರಾ ಆಪ್ತ ಸ್ನೇಹಿತೆ. ಹಾಗಾಗಿ, ಅದೊಂದು ಹಾಡಿನಲ್ಲಿ ಆಕೆಯನ್ನು ಸ್ಮರಿಸಿದ್ದೇನೆ.

Sankrati is a combination of light and crop: Hamsalekha


- ಸರಿ. ನೀವು ಹಬ್ಬದಲ್ಲಿ ಹೇಗೆ ಭಾಗಿಯಾಗುತ್ತಿದ್ದಿರಿ?
ಇನ್ನು, ಮನೆಯಲ್ಲಿ ಎಳ್ಳು,ಬೆಲ್ಲ, ಪೂಜೆ ಪುನಸ್ಕಾರ ಮಾಮೂಲಾಗಿ ನಡೆಯುತ್ತಿತ್ತು. ನಮ್ಮ ಮನೆಯ ಹತ್ತಿರದಲ್ಲೇ ಇದ್ದ, ನಾವೆಲ್ಲರೂ ನಿತ್ಯವೂ ಹೋಗುತ್ತಿದ್ದ ಗರಡಿ ಮನೆಯ ಬಳಿ ಎಲ್ಲಾ ಎತ್ತುಗಳ ಕೊಂಬುಗಳಿಗೆ ಬಣ್ಣ ಬಳಿಯಲಾಗುತ್ತಿತ್ತು. ಆ ಗರಡಿ ಮನೆಯ ಮಾಲೀಕರು ಟಿಂಗ್ ಟಿಂಗ್ ಸೀನ ಅಂತ. ಅವರು ನನ್ನ ಗುರು. ಅವರು ತಂಬೂರಿ ಮೀಟುತ್ತಾ ಹಾಡು ಕಟ್ಟುವವರು. ಹಾಗಾಗೇ ಅವರಿಗೆ ಆ ಹೆಸರು ಬಂದಿತ್ತು. ನನಗೆ ಆಡು ಮಾತಿನಲ್ಲಿ ಹಾಡು ಕಟ್ಟುವುದನ್ನು ಅವರೇ ಕಲಿಸಿಕೊಟ್ಟಿದ್ದು.

ಅವರು ಸಂಕ್ರಾಂತಿಯಂದು ಹಸು, ಎತ್ತು ಇಟ್ಟುಕೊಂಡವರೆಲ್ಲಾ ಅವರ ಗರಡಿ ಮುಂದೆ ತಂದು ಬಿಟ್ಟರೆ ಅವಕ್ಕೆ ಬಣ್ಣ ಬಳಿಯುವುದಾಗಿ ಘೋಷಿಸುತ್ತಿದ್ದರು. ಹಾಗಾಗಿ, ಅನೇಕರು ಅಲ್ಲಿ ತಮ್ಮ ಮನೆಯಲ್ಲಿನ ಎತ್ತು, ಹಸುಗಳನ್ನು ತಂದು ನಿಲ್ಲಿಸುತ್ತಿದ್ದರು. ನಾವು ಹಟ್ಟಿ ಹುಡುಗರೆಲ್ಲಾ ಹೋಗಿ ಅವಕ್ಕೆ ಬಣ್ಣ ಬಳಿಯುತ್ತಿದ್ದೆವು.

ಅವುಗಳ ಕೊಂಬು, ಕಾಲಿನ ಗೊರಸುಗಳನ್ನೂ ತೊಳೆದು ಬಣ್ಣ ಬಳಿದು ಸಿಂಗಾರಗೊಳಿಸುತ್ತಿದ್ದೆವು. ಆನಂತರ, ಆ ಎತ್ತು, ಹಸುಗಳನ್ನೆಲ್ಲಾ ರಾಮಮಂದಿರ ದೇವಸ್ಥಾನದ ಬಳಿ ತಂದು ಅವುಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮಾಡುತ್ತಿದ್ದರು. ನಾವೂ ಆ ಮೆರವಣಿಗೆಯಲ್ಲಿ ಭಾಗಿಯಾಗುತ್ತಿದ್ದೆವು.

ಸ್ವಲ್ಪ ದೂರದಲ್ಲಿ ಕೆರೆ ಕಟ್ಟೆಯಿತ್ತು. ಅಲ್ಲಿ ಕಿಚ್ಚು ಹಾಯಿಸುತ್ತಿದ್ದರು. ಅಕ್ಕಿಪೇಟೆ, ಕಾಟನ್ ಪೇಟೆ ನಡುವೆ ಒಂದು ದರ್ಗಾ ಇದೆ. ಆ ದರ್ಗಾದ ದಾರಿಯಲ್ಲೂ ನಾವು ಎತ್ತುಗಳನ್ನು ಮೆರವಣಿಗೆ ಮಾಡಿಕೊಂಡು ಬರುತ್ತಿದ್ದೆವು.

ರಾತ್ರಿ ನಮ್ಮತಂದೆ ವೇದಿಕೆ ಹಾಕಿಸುತ್ತಿದ್ದರು. ಎಲ್ಲಿ ಯಾರಿಗೆ ಹಾಡಲು ಆಸಕ್ತಿಯಿರುವುದೋ ಅಂಥವರು ಹಾಡುತ್ತಿದ್ದರು. ಮತ್ತೆ ಸಂಕ್ರಾಂತಿ ವೇಳೆ, ತಾವು ಕೂಡಿಡುತ್ತಿದ್ದ ಒಂದಷ್ಟು ಬೆಳ್ಳಿ ನಾಣ್ಯಗಳನ್ನು ಒಂದು ಬಟ್ಟಲಲ್ಲಿ ಹಾಕಿಕೊಂಡು ಮನೆಯ ಬಳಿ ಕೂಡುತ್ತಿದ್ದ ನಮ್ಮ ತಂದೆ ಕೂಲಿ ಮಾಡಿ ಮೈಮುರಿದು ದುಡಿಯುತ್ತಿದ್ದ ಬಡವರಿಗೆ ಒಬ್ಬೊಬ್ಬರನ್ನೇ ಒಂದಿಷ್ಟು ನಾಣ್ಯಗಳನ್ನು ಕರೆದು ಕೊಟ್ಟುಬಿಡೋರು.

ಆಮೇಲೆ ಎಲ್ಲರಿಗೂ ಮೊಸರನ್ನ ಪ್ರಸಾದ ಸಿಗೋದು. ಬಂಡಿಗಟ್ಟಲೆ ಮೊಸರನ್ನ ಮಾಡಿಸುತ್ತಿದ್ದೆವು. ಹಾಗೆ, ನಮ್ಮ ಸಂಕ್ರಾಂತಿಯ ಸಡಗರ ಇರುತ್ತಿತ್ತು. ಅದೆಲ್ಲಾ ಮರೆಯಲಾಗದ ಮಹಾ ದಿನಗಳು.

- ಅವತ್ತಿನ ಸಂಕ್ರಾಂತಿಗೂ, ಇವತ್ತಿನ ಸಂಕ್ರಾಂತಿಗೂ ಏನು ವ್ಯತ್ಯಾಸ?

ಹಬ್ಬದಾಚರಣೆ, ಸಡಗರ ಈಗಲೂ ಇದೆ. ಈಗ ಆ ಸಂಭ್ರಮ, ಸಡಗರಗಳೆಲ್ಲವೂ ಮನೆಗಷ್ಟೇ ಸೀಮಿತವಾಗಿವೆ. ಇವತ್ತು ಮನೋಕ್ಲೇಷೆ ಜಾಸ್ತಿ. ಎಲ್ಲರೂ ಒಂದೆಡೆ ಸೇರಲು ಭಾರೀ ಕಷ್ಟಪಡುತ್ತಾರೆ. ಅವನೇನು, ನಾನೇನು ಅಂತೆಲ್ಲಾ ಯೋಚಿಸುತ್ತಾರೆ. ಆದರೆ, ಯಾರಾದ್ರೂ ಎಲ್ಲರನ್ನೂ ಒಟ್ಟಿಗೇ ಸೇರಿಸಿದರೆ ಆಗ ಎಲ್ಲರೂ ನಗುನಗುತ್ತಾ ಹಬ್ಬ ಮಾಡುತ್ತಾರೆ. ಆದರೆ, ಎಲ್ಲರನ್ನೂ ಒಂದೆಡೆ ಸೇರಿಸುವುದೇ ಕಷ್ಟ.

ಆದರೆ, ನಮ್ಮ ಆ ನಿಶ್ಯಬ್ದದ ದಿನಗಳಲ್ಲಿದ್ದ ಸಂಕ್ರಾಂತಿ ಈಗಿಲ್ಲ. ಅಂದು ನಾವು ವಾಸಿಸುವ, ಕೆಲಸ ಮಾಡುವ ಜಗಗಳೆಲ್ಲೆಲ್ಲೂ ನಿಶ್ಯಬ್ದತೆ ಇರುತ್ತಿತ್ತು. ನಾನು ಇಲ್ಲಿ ಯಾರನ್ನೋ "ಏ... ಗೋಪಿ ಬಾ ಇಲ್ಲಿ" ಎಂದರೆ, ಅದು ಮತ್ತೆಲ್ಲೋ ಪ್ರತಿಧ್ವನಿಸುತ್ತಿತ್ತು. ಅಕ್ಕಪಕ್ಕದ ಬೀದಿಗೂ ಕೇಳುತ್ತಿತ್ತು. ಅಷ್ಟು ನಿಶ್ಯಬ್ಧತೆ ಇರುತ್ತಿತ್ತು. ಆದರೆ, ಕಾಲ ಕಳೆದಂತೆ ವಾಹನ, ಜನಸಂದಣಿ ಹೆಚ್ಚಾಗಿ ಆ ನಿಶ್ಯಬ್ದತೆಯೇ ಕಳೆದುಹೋಗಿದೆ. ಆಗಿನ ನಿಶ್ಯಬ್ದತೆಯಲ್ಲಿನ ಸಂಭ್ರಮ ಇಂದಿನ ಸಶಬ್ದತೆಯಲ್ಲಿಲ್ಲ.

- ನೀವು ಕೊಟ್ಟ ಸಂಕ್ರಾಂತಿ ಗೀತೆ ಜಾನಪದ ಗೀತೆಯಾಗಿದೆ. ಅದರ ಹುಟ್ಟು ಹೇಗಾಯ್ತು?
ರವಿ ಚಿತ್ರಗಳಿಗೆ ಹಾಡುಗಳನ್ನು ಕಂಪೋಸ್ ಮಾಡೋವಾಗ ಅವರೂ ನಾನು ಸಾಕಷ್ಟು ಚರ್ಚೆ ಮಾಡುತ್ತಿದ್ದೆವು. ಹಬ್ಬಗಳ ಹಿನ್ನೆಲೆಯಲ್ಲಿ ಗೀತೆಗಳನ್ನು ಮಾಡಬೇಕೆಂದು ನಾನು ಆಗಾಗ ಅವರಲ್ಲಿ ಕೇಳುತ್ತಿದ್ದೆ. ಹಬ್ಬ, ಆಚರಣೆಗಳ ಹಿನ್ನೆಲೆಯನ್ನಿಟ್ಟುಕೊಂಡು ಹಾಡು ಮಾಡಿದರೆ ಅದು ಜನಸಾಮಾನ್ಯರಲ್ಲಿ ತುಂಬಾ ದಿನ ಉಳಿಯುತ್ತದೆ ಎಂಬ ಐಡಿಯಾ ನನ್ನದಾಗಿತ್ತು. ಅದಕ್ಕೆ, ಹೌದು ಮಾಡೋಣ ಅಂತ ರವಿಯೂ ಹೇಳುತ್ತಿದ್ದರು. ಒಂದೊಮ್ಮೆ, ಹಳ್ಳಿ ಮೇಷ್ಟ್ರು ಚಿತ್ರದ ಕಂಪೋಸಿಂಗ್ ಗಾಗಿ ಕುಳಿತಾಗ ಹಬ್ಬದ ಹಿನ್ನೆಲೆ ಇಟ್ಟುಕೊಂಡು ಹಾಡು ಮಾಡೋಣವೇ ಎಂದು ನೆನಪಿಸಿದೆ. ಆಗ, ರವಿ, ಹೌದು ಮಾಡೋಣ ಎಂದರಲ್ಲದೆ, ಯಾವ ಹಬ್ಬ ಅಂದರು.
ಅದಕ್ಕೆ ನಾನು ಸಂಕ್ರಾಂತಿ ಎಂದೆ. ತಕ್ಷಣವೇ 'ಗುಡ್ ಐಡಿಯಾ' ಎಂದ ಅವರು, ಹಾಡು ಮಾಡಿ ಎಂದು ಸೂಚಿಸಿದರು. ಆಗ ನಾನು ಅಲ್ಲೇ, "ಸಂಕ್ರಾಂತಿ ಬಂತು ರತ್ತೋ ರತ್ತೋ, ಮನಸಲ್ಲಿ ಮನಸು ಬಿತ್ತೋ ಬಿತ್ತೋ'' ಅಂತ ಹೇಳಿಬಿಟ್ಟೆ. ತಕ್ಷಣವೇ ಅದು ಓಕೆ ಆಯ್ತು. ಹಾಗೆ ಹಾಡು ಸೃಷ್ಟಿಯಾಯ್ತು.

- ಸಂಕ್ರಾಂತಿ ಹಾಡಿನಲ್ಲಿ ಪ್ರಣಯವನ್ನು ಸೇರಿಸಿದ್ದು ಯಾಕೆ?
ರೊಮ್ಯಾನ್ಸ್ ಇಲ್ಲದೆ ಸಂಕ್ರಾಂತಿ ಸಾಧ್ಯವೇ ಇಲ್ಲ. ರೊಮ್ಯಾನ್ಸ್ ಅಂದರೆ ಅದೊಂದು ಜೀವನ ಪ್ರೀತಿ. ನನ್ನ ಬಾಲ್ಯದ ಕಾಲದಲ್ಲಿ ಹಳ್ಳಿಗಳಲ್ಲಿ ಸಂಕ್ರಾಂತಿ ಬಂತೆಂದರೆ ಭಾರೀ ಸಡಗರ. ಆ ಜೀವನ ಪ್ರೀತಿಯನ್ನು ನಾನು ನೋಡಿದ್ದೇನೆ. ಹಾಗಾಗಿಯೇ ಅದೇ ಜೀವನ ಪ್ರೀತಿಯನ್ನು ನಾನು ಹಾಡಿನಲ್ಲಿ ತಂದಿದ್ದೇನಷ್ಟೇ.

-ಎಸ್ ಬಿ ಬಾಲು ಸರ್ ಈ ಹಾಡನ್ನು ಹಾಡುವಾಗ ಏನಂದಿದ್ದರು?

ಅವರಿಗೆ ಹಾಡಿನ ಪಲ್ಲವಿ ಮುಗಿದ ಕೂಡಲೇ ಬರುವ ಚುಂ... ಚುಂ... ಚುಂ... ಚು... ಚುಂ... ಚುಂ... ಚುಂ... ಚುಂ... ಚುಂ... ಚುಂ... ಲಹರಿ ಭಾರೀ ಇಷ್ಟವಾಗಿತ್ತು. ಹಾಡುವುದಕ್ಕೂ ಮುನ್ನ ರಿಹರ್ಸಲ್ ಮಾಡುವಾಗ, ಚುಂ, ಚುಂ ಲಹರಿ ನೋಡಿದರೆ ನನಗೆ ಅಸೂಯೆ ಬರುತ್ತದೆ ಎಂದು ತಮಾಷೆ ಮಾಡಿದ್ದರು. "ನಾನು (ಬಾಲು) ಕಂಪೋಸ್ ಮಾಡಿದ್ದರೆ, ಸಂಕ್ರಾಂತಿ ಬಂತು ರತ್ತೋ ರತ್ತೋ ಅಂತ ಶುರು ಮಾಡಿ, ಪಲ್ಲವಿಯ ಕೊನೇ ಸಾಲು ಆದ 'ಮೈಯ್ಯಲ್ಲಿ ಏರುತಿದೆ ಮನ್ಮಥನ ಅಂಬುಗಳು' ಅಂತ ಅಲ್ಲಿಯೇ ನಿಲ್ಲಿಸಿಬಿಡುತ್ತಿದ್ದೆ. ಆದರೆ, ಅಲ್ಲಿಂದ ಮುಂದಕ್ಕೆ ಚುಂ... ಚುಂ... ಚುಂ... ಚು... ಚುಂ... ಚು.. ಚುಂ... ಚುಂ... ಚುಂ... (ಹಂಸಲೇಖ) ಒಬ್ಬ ಹಾಡುಗಾರ, ಬರಹಗಾರ, ಸಂಗೀತಗಾರ ಹಾಗೂ ನಟ ಆಗಿರುವುದರಿಂದ ಚುಂ, ಚುಂ ಲಹರಿ ಸೇರಿಸಿದ್ದೀರಿ. ಇಡೀ ಹಾಡಿನಲ್ಲಿ ಇದೇ ಎಲ್ಲರನ್ನೂ ಸೆಳೆಯುತ್ತದೆ. ಒಬ್ಬ ಸಂಗೀತಗಾರ, ಬರಹಗಾರನೂ ಆಗಿದ್ದರಿಂದ ಮಾತ್ರ ಇಂಥ ಲಹರಿಗಳನ್ನು ಸೃಷ್ಟಿಸಲು ಸಾಧ್ಯ" ಎಂದು ಖುಷಿಪಟ್ಟಿದ್ದರು.

English summary
Veteran music director of sandalwood has defined Sankranti as the combination of light and crop. He says that it is the celebration of love. ಸಂಕ್ರಾಂತಿ ಬಗ್ಗೆ ತಮ್ಮದೇ ಅನಿಸಿಕೆ ವ್ಯಕ್ತಪಡಿಸಿರುವ ಕನ್ನಡ ಚಿತ್ರರಂಗದ ಮೇರು ಸಂಗೀತ ನಿರ್ದೇಶಕ ಹಂಸಲೇಖ, ಈ ಹಬ್ಬ ಬೆಳೆ ಮತ್ತು ಬೆಳಕುಗಳ ಸಮ್ಮಿಶ್ರಣ ಎಂದಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X