ಸ್ನೇಹ, ಪ್ರೀತಿಯ ಸಂಕೇತ ನಾಡಿನ ಮಕರ ಸಂಕ್ರಾಂತಿ

Written by: ವಿಶ್ವಾಸ ಸೋಹೋನಿ
Subscribe to Oneindia Kannada

ಇಂದಿನ ಅಂತರ್ಜಾಲ, ಮೊಬೈಲ್ ಜಮಾನದಲ್ಲಿ ನಿಜವಾದ ಸ್ನೇಹ ಪ್ರೀತಿ ಎಲೆ ಮರೆಯ ಕಾಯಿಯಂತಾಗಿದೆ. ಸಂಬಂಧಗಳಲ್ಲಿ ಅತ್ಮಿಯತೆ ದೂರವಾಗಿದೆ. ಟಿವಿ ಪರದೆಯೇ ಎಲ್ಲರ ಬದುಕಿನ ಜೀವಾಳವಾಗಿದೆಯೇ ಹೊರತು, ಅತಿಥಿಗಳ ಸತ್ಕಾರ ಮಾಡುವ ಸಮಾಧಾನ, ಆಚರಣೆ ಕಣ್ಮರೆಯಾಗುತ್ತಿದ್ದು, ಸಮಯದ ಅಭಾವ ಎಂಬ ನೆವವನ್ನು ಜನರು ಹುಡುಕುತ್ತಾರೆ. ಇದು ನಗರದ ಎಲ್ಲಾ ಮನೆ ಮನೆ ಕಥೆಯಾದರೆ ಹಳ್ಳಿಗಳಲ್ಲಿಯೇ ಬೇರೆ ರೀತಿಯದು, ಹಾಗಾಗಿಯೇ 'ಹಳ್ಳಿಗಳನ್ನು ಸಂಸ್ಕೃತಿಯ ತವರು' ಎನ್ನಲಾಗುತ್ತದೆ.

ಗತಕಾಲದಿಂದಲೂ ಆಚರಿಸಿಕೊಂಡು ಬಂದಿರುವ ತನ್ನದೇ ಆದ ವೈಜ್ಞಾನಿಕ ಅಂಶಗಳನ್ನು ಒಳಗೊಂಡಿರುವ ಭಾರತದಲ್ಲಿ ಆಚರಿಸುವ ಮಕರ ಸಂಕ್ರಾಂತಿಗೆ ತನ್ನದೇ ಆದ ವಿಶೇಷತೆ ಮತ್ತು ಆಧ್ಯಾತ್ಮಿಕ ಹಿನ್ನಲೆ ಇದೆ. ಈ ಹಬ್ಬವು ಪ್ರತಿ ವರ್ಷ ಜನವರಿ ಮಾಸದ 14 ಅಥವಾ 15 ಕ್ಕೆ ಬರುತ್ತದೆ. ಯಾವ ಹಬ್ಬದ ದಿನಾಂಕಗಳು ಬದಲಾವಣೆಗೊಂಡರೂ ಈ ಹಬ್ಬದ ದಿನಾಂಕ ಮಾತ್ರ ಪಕ್ಕಾ ಜನವರಿ 14 ಅಥವಾ 15.[ಮಕರ ಸಂಕ್ರಾಂತಿ, ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ]

ಜನವರಿ 14ರಂದು 'ಭೋಗಿ ಹಬ್ಬ' ಆಚರಿಸಿದರೆ, 15ರಂದು 'ಮಕರ ಸಂಕ್ರಾಂತಿ' ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಗೆ ಪ್ರತಿಯೊಂದು ಪ್ರದೇಶದಲ್ಲಿ ಅದರದೇ ಆದ ಹೆಸರುಗಳಿವೆ. ಇದು ಭಾರತದಲ್ಲಿ ಮಾತ್ರವಲ್ಲ ಆಚರಣೆಗೊಳ್ಳುವುದಿಲ್ಲ, ಕೆಲವು ವಿದೇಶದಲ್ಲಿಯೂ ಆಚರಣೆಗೊಳ್ಳುತ್ತದೆ. ದೈಹಿಕವಾಗಿ, ಮಾನಸಿಕವಾಗಿ ಸದೃಢತೆ ನೀಡುವ ಮಕರ ಸಂಕ್ರಾಂತಿಯ ಇನ್ನಷ್ಟು ವಿಶೇಷ ಈ ಮುಂದಿನ ಲೇಖನದಲ್ಲಿ ಇದೆ ಓದಿ.

ಮಕರ ಸಂಕ್ರಾಂತಿಗೆ ಎಲ್ಲೆಲ್ಲಿ ಏನೆಂದು ಕರೆಯುತ್ತಾರೆ?

ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಗೊವಾ, ಸಿಕ್ಕಿಂ, ಝಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಒರಿಸ್ಸಾ, ಉತ್ತರಪ್ರದೇಶ, ಉತ್ತರಾಂಚಲ, ಪಶ್ವಿಮ ಬಂಗಾಳ ದಲ್ಲಿ `ಮಕರ ಸಂಕ್ರಾಂತಿ' ಅಥವಾ `ಸಂಕ್ರಾಂತಿ' ಎಂದು, ತಮಿಳುನಾಡಿನಲ್ಲಿ `ಪೊಂಗಲ್'(ಹೊಸ ವರ್ಷದ ಹಬ್ಬ) ಎಂದು, ರಾಜಸ್ಥಾನ, ಗುಜರಾತ್ ನಲ್ಲಿ 'ಉತ್ತರಾಯಣ' ಎಂದು, ಹರಿಯಾಣ, ಉತ್ತರಪ್ರದೇಶ, ದೆಹಲಿ, ಪಂಜಾಬಿನಲ್ಲಿ 'ಮಾಘಿ' ಎಂದು, ಆಸಾಮದಲ್ಲಿ 'ಮಾಘ ಬಿಹು', ಜಮ್ಮು ಕಾಶ್ಮೀರದಲ್ಲಿ 'ಶಿಶುರ ಸೇಂಕ್ರಾತ', ಶಬರಿಮಲೈ ಬೆಟ್ಟದಲ್ಲಿ 'ಮಕರ ವಿಲಕ್ಕು' ಎಂದು ಕರೆಯಲಾಗುತ್ತದೆ.

 

ವಿದೇಶದಲ್ಲಿ ಸಂಕ್ರಾಂತಿಗೆ ಏನೆಂದು ಹೆಸರಿದೆ?

ನೇಪಾಳ ದಲ್ಲಿ 'ಮಾಘಿ', ಮಿಯಾಂಮಾರದಲ್ಲಿ 'ಥಿಂಗ್ಯಾನ',ಕಂಬೊಡಿಯದಲ್ಲಿ 'ಮೊಹಸಂಗ್ರನ', ಥೈಲ್ಯಾಂಡ್ ನಲ್ಲಿ 'ಸಂಗ್ರಾನ' ಎಂದು ಈ ಹಬ್ಬವು ಇತರ ದೇಶದಲ್ಲಿ ಆಚರಿಸುತ್ತಾರೆ.

 

ಭೋಗಿ ಹಬ್ಬ ಮತ್ತು ಮಕರ ಸಂಕ್ರಾಂತಿ

ಜನವರಿ 14ರಂದು 'ಭೋಗಿ ಹಬ್ಬ' ಆಚರಿಸಿದರೆ, 15ಕ್ಕೆ ಮಕರ ಸಂಕ್ರಾಂತಿ (ಕರಿ) ಆಚರಿಸಲಾಗುತ್ತದೆ. ಸೂರ್ಯನು ಕರ್ಕರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ದಿನವೇ `ಮಕರ ಸಂಕ್ರಾಂತಿ'. ಭೋಗಿ ಹಬ್ಬಕ್ಕೆ ಋತುರಾಜ ಇಂದ್ರನಿಗೆ ಪೂಜಿಸಿದರೇ, ಮಕರ ಸಂಕ್ರಾಂತಿಗೆ ಸೂರ್ಯನಿಗೆ ಪೂಜಿಸಲಾಗುತ್ತದೆ. ಮಕರ ಸಂಕ್ರಾಂತಿ ದೇವತೆಗಳ ದಿನದ ಆರಂಭ.

 

ಏನಿದು ಉತ್ತರಾಯಣ, ಉತ್ತರಾಯಣ?

ಉತ್ತರಾಯಣವೆಂದರೆ ದೇವಾಯಣ, ದಕ್ಷಿಣಾಯಣ ಅಂದರೆ ಪಿತ್ರಾಯಣ. ಭಗಿರಥನ ಪ್ರಯತ್ನದಿಂದ ಗಂಗೆ ಧರೆಗೆ ಬಂದು ಮಹಾರಾಜ ಸಾಗರನ 60,000 ಮಕ್ಕಳಿಗೆ ಮುಕ್ತಿ ಸಿಕ್ಕಿರುವ ದಿನವು ಇದೆ ಆಗಿದೆ. ಆದ್ದರಿಂದ ಗಂಗಾಸಾಗರ ಮೇಳ ನಡೆಯುತ್ತದೆ. ಮಹಾಭಾರತದ ಇಚ್ಛಾ ಮರಣಿ ಭೀಷ್ಮಾ ಮರಣವನ್ನಪ್ಪಿದ್ದು ಸಂಕ್ರಾಂತಿಯಂದು ಎಂಬ ಕಥೆ ಇದೆ. ರಾಜಸ್ಥಾನ, ಗುಜರಾತದಲ್ಲಿ ವಿಶೇಷವಾಗಿ ಈ ಹಬ್ಬದ ಸಮಯದಲ್ಲಿ ಗಾಳಿಪಟ ಉತ್ಸವ ನಡೆಯತ್ತದೆ.

 

ಭೋಗಿ ಹಬ್ಬಕ್ಕೆ ಮಾಡುವ ವಿಶೇಷ ಖಾದ್ಯಗಳು?

ಭೋಗಿ ಹಬ್ಬಕ್ಕೆ ಸಜ್ಜಿಗೆ ರೊಟ್ಟಿ, ಬದನೆಕಾಯಿ ಪಲ್ಲೆ ವಿಶೇಷವಾಗಿ ಮಾಡಿದರೆ, ಸಂಕ್ರಾಂತಿಯ ದಿನ ಎಳ್ಳು ಮಿಶ್ರಿತ ಸ್ನಾನ, ಸಿಹಿ ಪೊಂಗಲ್ ಮಾಡುವುದು ರೂಢಿಯಲ್ಲಿದೆ.

 

ಆರೋಗ್ಯ ಸಂಜೀವಿನಿ ಈ ಹಬ್ಬ

ಕಬ್ಬು, ಎಳ್ಳು, ಬೆಲ್ಲ, ಸಜ್ಜೆ, ಗಜ್ಜರಿ, ಕಡಲೆ, ಮುಂತಾದ ಸೇವನೆಯು ಚಳಿಗಾಲದಲ್ಲಿ ದೈಹಿಕ ಆರೋಗ್ಯದ ದೃಷ್ಟಿಯಿಂದ ಹಿತಕರ. ಅಂದು ವಿಶೇಷವಾಗಿ ನದಿ, ಕೆರೆ, ಅಥವಾ ಹಳ್ಳಗಳಲ್ಲಿ ಸ್ನಾನ ಮಾಡುತ್ತಾರೆ. ಪುಣ್ಯಕ್ಷೇತ್ರಕ್ಕೆ ಹೋಗುತ್ತಾರೆ. ದಾನ ಧರ್ಮ ಮಾಡಿದಾಗ `ಸಂಕ್ರಾಂತಿ ಪುರುಷ" ಒಳ್ಳೆಯ ಫಲವನ್ನು ನೀಡುವನು ಎಂದು ನಂಬುತ್ತಾರೆ. ಆಧುನಿಕ ಜಗತ್ತಿನಲ್ಲಿ ಎಳ್ಳು ಬೆಲ್ಲದ ಸ್ಥಾನವನ್ನು ಸಕ್ಕರೆ ಪಾಕದಿಂದ ತಯಾರಿಸಿದ `ಕುಸರೆಳ್ಳು' ಪಡೆದುಕೊಂಡಿದೆ.

 

ಎಳ್ಳು ಬೆಲ್ಲ ಕೊಡುವಾಗ ಎಲ್ಲೆಲ್ಲಿ ಏನು ಹೇಳುತ್ತಾರೆ?

ಹಿಂದಿ ಭಾಷೆಯಲ್ಲಿ `ಗೂಡ ನಹಿ ದೋ ಲೆಕಿನ್ ಗೂಡ ಜೈಸಾ ಮಿಠಾ ತೊ ಬೊಲೊ' ಅಂದರೆ `ಬೆಲ್ಲವನ್ನು ಕೊಡದೆ ಇದ್ದರೂ ಪರವಾಗಿಲ್ಲ ಬೆಲ್ಲದಂತೆ ಸಿಹಿ ಮಾತನಾಡಿ' ಎಂಬ ನಾಣ್ಣುಡಿ ಇದೆ. ಮಹಾರಾಷ್ಟ್ರದಲ್ಲಿ ಏಳ್ಳು ಮತ್ತು ಸಕ್ಕರೆ ಕುಸುರಿಕಾಳನ್ನು ಹಂಚುವಾಗ 'ತಿಳ್ಗುಳ್ ಘ್ಯಾ ಆಣಿ ಗೋಡ ಗೋಡ ಬೋಲಾ' ಎಂದು ಹೇಳುತ್ತಾರೆ. ಕರ್ನಾಟಕದಲ್ಲಿ ಎಳ್ಳು-ಬೆಲ್ಲವನ್ನು ಕೊಟ್ಟು, ಒಳ್ಳೆಯದನ್ನೇ ಮಾತನಾಡಿ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಸಂಕ್ರಾಂತಿ ಎಂದರೆ `ಸಂ' ಸಂಸ್ಕಾರಗಳ ಕ್ರಾಂತಿ ಆಗಬೇಕು.

 

English summary
This special article enlighten on the accurate information about of Indian festival Makara Sankranti. Makara Sankranti is celebrate on January 14th and 15th. Ecpecilly January 14th Bhogi Habba, 15th Makara Sankranti
Please Wait while comments are loading...