ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕರ ಸಂಕ್ರಾಂತಿ, ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ

By ಬಿ.ಎಂ.ಲವಕುಮಾರ್
|
Google Oneindia Kannada News

ಸಂಕ್ರಾಂತಿ ಹಬ್ಬ ಬಂದಿದೆ. ಎಲ್ಲೆಡೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಎಳ್ಳುಬೆಲ್ಲವನ್ನು ಮನೆಮನೆಗೆ ನೀಡುವುದು ಹಬ್ಬದ ವಿಶೇಷತೆಯಾಗಿದೆ. "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಎಂಬುವುದು ಹಬ್ಬದ ಸಂದರ್ಭದಲ್ಲಿ ಕೇಳಿ ಬರುವ ಘೋಷ ವಾಕ್ಯ.

ಹಾಗೆ ನೋಡಿದರೆ ಸಂಕ್ರಾಂತಿಯನ್ನು ಮುಖ್ಯವಾಗಿ ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು, ಕೇರಳಗಳಲ್ಲಿ ಆಚರಿಸಲಾಗುತ್ತದೆ. ಧಾನ್ಯ ಲಕ್ಷ್ಮಿ ಮನೆಗೆ ಬರುವ (ಸುಗ್ಗಿ) ಸಂದರ್ಭ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತಿದ್ದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಇದಕ್ಕೆ ಇರುವುದನ್ನು ನಾವು ಕಾಣಬಹುದು.

ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ನಿರಯಣ ಮಕರ ರಾಶಿಯನ್ನು ಪ್ರವೇಶಿಸಿದಾಗ, "ಮಕರ ಸಂಕ್ರಾಂತಿ"ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ 14ರ ಸುಮಾರಿಗೆ ಬರುತ್ತದೆ.[ಸುಗ್ಗಿ ಹಿಗ್ಗಿನ ಸಂಕೇತ ಮಕರ ಸಂಕ್ರಾಂತಿ]

ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರ ದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು.

ಈಗ ಉತ್ತರಾಯಣ ಡಿಸೆಂಬರ್ 22ಕ್ಕೆ ಆದರೂ, ಹಿಂದಿನಂತೆಯೇ ಜನವರಿ 14 ರಂದು ನಡೆಯುವ ಮಕರ ಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ. ಮಹಾಭಾರತದ ಕತೆಯಲ್ಲಿ ಇಚ್ಚಾ ಮರಣಿಯಾದ ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂದು ಹೇಳಲಾಗುತ್ತದೆ. ಮಕರ ಸಂಕ್ರಾಂತಿಯ ಇನ್ನಷ್ಟು ವಿಶೇಷ ಮಾಹಿತಿಗಳು ಈ ಕೆಳಗಿನ ಸ್ಮೈಡ್ ಗಳಲ್ಲಿವೆ.

ಸಂಕ್ರಾಂತಿ ವಿಶೇಷ ಎಳ್ಳು ಬೆಲ್ಲ

ಸಂಕ್ರಾಂತಿ ವಿಶೇಷ ಎಳ್ಳು ಬೆಲ್ಲ

ಮನೆಯಲ್ಲಿ ಎಳ್ಳನ್ನು ತಯಾರಿಸಿ ಅಥವಾ ಖರೀದಿಸಿ ತಂದು ಸುತ್ತಲಿನ ಮನೆಗಳಿಗೆ "ಎಳ್ಳು ಬೀರುವುದು" ಮತ್ತು ಸ್ನೇಹಿತರು-ಸಂಬಂಧಿಕರೊಂದಿಗೆ ಶುಭಾಶಯ ಹಂಚಿಕೊಳ್ಳುವುದು ಸಂಕ್ರಾಂತಿ ಹಬ್ಬದ ಸಂಪ್ರದಾಯ. ಈ ಎಳ್ಳುಬೆಲ್ಲದ ತಯಾರಿಕೆ ಹಬ್ಬಕ್ಕೆ ತಿಂಗಳು ಇರುವಾಗಲೇ ಆರಂಭವಾಗುತ್ತದೆ. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು" ತಯಾರಿಸಲಾಗುತ್ತದೆ. ಎಳ್ಳು ಬೀರುವ ಸಂದರ್ಭ ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ನೀಡಲಾಗುತ್ತದೆ. ಹಬ್ಬದ ಸಂದರ್ಭ ಕಬ್ಬಿಗೆ ಮಾತ್ರ ಎಲ್ಲಿಲ್ಲದ ಬೇಡಿಕೆ ಕಂಡು ಬರುತ್ತದೆ.

ತಮಿಳುನಾಡಿನಲ್ಲಿ ಸಂಕ್ರಾಂತಿ

ತಮಿಳುನಾಡಿನಲ್ಲಿ ಸಂಕ್ರಾಂತಿ

ತಮಿಳುನಾಡಿನಲ್ಲಿ ಈ ಹಬ್ಬವನ್ನು "ಪೊಂಗಲ್" ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳಕಾಲ ನಡೆಯುತ್ತದೆ. ಈ ಸಂದರ್ಭ ಹೊಸಬಟ್ಟೆ ತೊಡುವುದು, ಸಮೃದ್ದಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸುವುದು, ಗೋಪೂಜೆ, ಗೂಳಿಯನ್ನು ಪಳಗಿಸುವ ಆಟವೂ ನಡೆಯುತ್ತದೆ. ಹಲವೆಡೆ ವರ್ಷಪೂರ್ತಿ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಕಿಚ್ಚು ಹಾಯಿಸುವ ಸಂಪ್ರದಾಯವೂ ಇದೆ.

ಮಕರ ಜ್ಯೋತಿ

ಮಕರ ಜ್ಯೋತಿ

ಕೇರಳದಲ್ಲಿ ಮಕರ ಸಂಕ್ರಾಂತಿಯಂದು ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನ ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕೆ ಆಗಮಿಸುತ್ತಾರೆ.

ಮಕರ ಜ್ಯೋತಿಗೆ ಏನೆಂದು ಕರೆಯುತ್ತಾರೆ?

ಮಕರ ಜ್ಯೋತಿಗೆ ಏನೆಂದು ಕರೆಯುತ್ತಾರೆ?

"ಮಕರ ವಿಳಕ್ಕು" ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ. ಶಬರಿಮಲೆಗೆ ತೆರಳಿದ ವೃತಧಾರಿಗಳು ಇದನ್ನು ವೀಕ್ಷಿಸಿದರೆ ಜೀವನ ಪಾವನ ಎಂಬ ನಂಬಿಕೆಯೂ ಇದೆ. ದೇಶದ ವಿವಿಧೆಡೆ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.

ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸಂಕ್ರಾಂತಿಗೆ ಏನು ಸಂಪ್ರದಾಯವಿದೆ?

ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸಂಕ್ರಾಂತಿಗೆ ಏನು ಸಂಪ್ರದಾಯವಿದೆ?

ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಹಾಗೂ ಎಳ್ಳಿನ ಉಂಡೆಗಳನ್ನು ಹಂಚುವ ಸಂಪ್ರದಾಯವೂ ಇಲ್ಲಿದೆ. ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಯನ್ನು "ಲೋಹರಿ," ಎಂದು ಕರೆಯುತ್ತಾರೆ. ಹಬ್ಬದ ಆಚರಣೆ ಕುರಿತಂತೆ ವಿಭಿನ್ನತೆ ಕಂಡು ಬಂದರೂ ಸಂಕ್ರಾಂತಿ ಸಮೃದ್ಧಿಯ ಸಂಕೇತವಾಗಿ ಉಳಿದಿರುವುದಂತು ಸತ್ಯ.

English summary
Makara Sankranti is a major harvest festival in India. Makara Sankranti commemorates the beginning of the harvest season and cessation of the northeast monsoon in South India. The movement of the Sun from one zodiac sign into another is called Sankranti and as the Sun moves into the Capricorn zodiac known as Makara in Sanskrit, this occasion is named as Makara Sankranti in the Indian context.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X