ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡುಗಟ್ಟಿದ್ದ ದುಃಖ ಒಡೆದು ಹನಿಗೂಡಿದಾಗ...

By * ಎಚ್.ಎಂ. ಮಹೇಂದ್ರ ಕುಮಾರ್
|
Google Oneindia Kannada News

HM Thippeswamy, Bellary
ಅಪ್ಪಾ, ಇಂದು ನಸುಕಿನಿಂದಲೇ ಬುದ್ಧಿಗೆ ಮಂಕು ಕವಿದಿದೆ. ನನ್ನ ಮಕ್ಕಳು 'ಹ್ಯಾಪಿ ಫಾದರ್........" ಎನ್ನುತ್ತಾ ಬಿಗಿದಪ್ಪಿದಾಗ ಮಡುವಾಗಿದ್ದ ದುಃಖ ಒಡೆದು ಹನಿ ನೀರು ಒಸರಿ ಹಾಲುಗಲ್ಲದ ಮಗಳ ಕೆನ್ನೆಯ ಮೇಲೆ ಸುಳಿದಾಡುತ್ತಿತ್ತು. ಮಕ್ಕಳಿಗೆ ನನ್ನ ನೋವು ಅರ್ಥವಾಗಬಾರದು, ಅವರು ಸಂತೋಷದಲ್ಲೇ ಇರಬೇಕು ಎಂದು ಸುಧಾರಿಸಿಕೊಂಡು ಮುಗುಳ್ನಕ್ಕೆ. ಅಳು ತಡೆಯಲಾಗುತ್ತಿಲ್ಲ. ಪದೇ ಪದೇ ನಿನ್ನದೇ ನೆನಪು. ಮಂಜು ಮುಸುಕಿದ ಕಣ್ಣಲ್ಲೇ ನಿನ್ನನ್ನು ನೆನಪಿಸಿಕೊಂಡು ತೋಚಿದ್ದನ್ನು ಗೀಚುತ್ತಿದ್ದೇನೆ.

ಅಂದು ನೀವು ಏಕಾಏಕಿ ನಮ್ಮೆಲ್ಲರನ್ನು ಬಿಟ್ಟು ಎದ್ದು ಹೋದಾಗ, 'ಮುಂದಿನ ದಿನಗಳ ಬದುಕು ಸರಾಗ, ಸುಲಭ, ನಾವೆಲ್ಲಾ ನಿಮ್ಮೊಂದಿಗೆ ಇದ್ದೇವೆ. ಭಯ ಪಡಬೇಡಿ. ದೇವರಿದ್ದಾನೆ" ಎಂದೆಲ್ಲಾ ಸಮಾಧಾನಿಸಿ ನಿನ್ನನ್ನು ಮಣ್ಣಲ್ಲಿ ಮಣ್ಣಾಗಿಸಿದ ನಂತರ ಕಾಣೆ ಆದ ಅವರ‍್ಯಾರೂ ಇಂದು ನಮ್ಮೊಂದಿಗಿಲ್ಲ.

ಪದೇ ಪದೇ ನಿನ್ನದೇ ನೆನಪು. ನಾನು ಅಧೈರ್ಯಗೊಂಡಾಗ, ಅಸಮಾಧಾನಿ ಆದಾಗ, ಹಲಬುಗೆಟ್ಟ ಕಂದನಂತಾದಾಗ ಸಮಾಧಾನದ ಮಾತುಗಳನ್ನ ಹೇಳಿ ನನ್ನಲ್ಲಿ ಚೈತನ್ಯ ತುಂಬಿಸುತ್ತಿದ್ದ ನಿನ್ನ ಕೊರತೆ ಸಾಕಷ್ಟಿದೆ. ನೀನು ನಮ್ಮನ್ನು ಬಿಟ್ಟು ಹೋದ ನಂತರ ನಾನು ಅಮ್ಮನೊಂದಿಗಿದ್ದೇನೆ. ಅಮ್ಮ ನನ್ನ ಮಕ್ಕಳು, ತಮ್ಮ ರವಿಯ ಮಕ್ಕಳ ಜೊತೆ ಆಟ ಆಡುತ್ತಲೇ ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದಾಳೆ. ಆದರೂ, ನೀನಿಲ್ಲದ ಅಮ್ಮ... ಒಂಟಿಯೇ. ಅಮ್ಮ ಮಾತ್ರ ಅಷ್ಟೇ ಅಲ್ಲ, ನಾನೂ ಕೂಡ.

ಒಮ್ಮೆ ಜನವರಿ 9ರ, 2008ರ ಒಂದು ರಾತ್ರಿ ಅಮ್ಮ ನಿನ್ನನ್ನೇ ಹುಡುಕಿಕೊಂಡು ಎಲ್ಲಿಗೋ ಹೋಗಿಬಿಟ್ಟಳು. ನಾನು - ರೋಹಿಣಿ ಅಲ್ಲಲ್ಲೇ ಹುಡುಕಾಡಿದೆವು. ಅಮ್ಮ ಸಿಗಲಿಲ್ಲ. ಕಂಡ ಕಂಡ ದೇವರಿಗೆ ಕೈ ಮುಗಿದೆ. ಅವರಿವರಿಂದ ಕೇಳಬಾರದ ನಿಂದನೆಯ ಮಾತುಗಳನ್ನು ಕೇಳಿದೆವು. ಅನೇಕರು ಮುಖಕ್ಕೇ ನೇರವಾಗಿ ಬೈಯ್ದು ಹೇಳಿದರು. ಒಂದಂತೂ ಸತ್ಯ ನನ್ನ ಹುಟ್ಟಿಗೆ ಕಾರಣ ಆಗಿರುವ ನಿನ್ನನ್ನೂ - ಅಮ್ಮಳನ್ನೂ ಎಂದಿಗೂ ಒಂಟಿ ಮಾಡಬಾರದು ಎಂದು ನಾನು - ನನ್ನ ಹೆಂಡತಿ ಹಾಗೂ ಮಕ್ಕಳು ಕೈಗೊಂಡಿರುವ ನಿರ್ಧಾರಗಳು ಎಲ್ಲವೂ ಮಣ್ಣುಪಾಲಾಗಿದ್ದವು.

ನಾನು ನಿನ್ನನ್ನು, ನನ್ನಲ್ಲಿರುವ ಬದ್ಧತೆಯನ್ನು ನಂಬಿಕೊಂಡಿದ್ದೆ. ನನ್ನ ಹೆಂಡತಿ - ಮಕ್ಕಳು ಅಮ್ಮಳಿಗೆ ಮೋಸ ಮಾಡುವುದಿಲ್ಲ. ಅಮ್ಮ ಕೂಡ ನಮಗೆ ಕಳಂಕ ತರುವುದಿಲ್ಲ ಎಂದು ವಿಶ್ವಾಸ ಹೊಂದಿದ್ದೆ. ಕಾರಣ ಮೈಕೊರೆಯುವ ಛಳಿಯಲ್ಲಿ, ಮುಳ್ಳು ಪೊದೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ, ಗುಡಾರಗಳಲ್ಲಿ, ಗುಡಿಗಳಲ್ಲಿ, ಎಲ್ಲೆಂದರದಲ್ಲಿ ತಿರುಗಾಡಿ ಹುಡುಕಾಡಿದೆ. ದೇವರನ್ನು ಪದೇ ಪದೇ ಬೈಯ್ದುಕೊಂಡೆ. ಮತಿಭ್ರಮಣ ಹೊಂದಿದ, ಕಣ್ಣು ಸರಿಯಾಗಿ ಕಾಣದ ಅಮ್ಮಳನ್ನು ಒಂಟಿಯಾಗಿ ಬಿಟ್ಟು ಹೋದ ನಿನ್ನನ್ನು ನೆನಪಿಸಿಕೊಂಡು ಶಪಿಸಿದೆ.

ಏನು ಮಾಡುವುದು ವಿಧಿ. ದಿಕ್ಕೇ ತೋಚುತ್ತಿಲ್ಲ. ಅಣ್ಣಂದಿರರಿಗೆ, ತಮ್ಮನಿಗೆ, ಮಿತ್ರರಿಗೆ, ಬಂಧುವರ್ಗಕ್ಕೆ ಅಮ್ಮ ಕಾಣೆ ಆಗಿರುವ ವಿಚಾರ ತಿಳಿಸಿದೆ. ಎಡಬಿಡದೆ 20 ದ್ವಿಚಕ್ರ ವಾಹನಗಳು, 50ಕ್ಕೂ ಹೆಚ್ಚಿನ ನನ್ನ ಮಿತ್ರರು ಅಮ್ಮಳನ್ನು ಹುಡುಕಾಡಿದರು. ಕಂಡ ಕಂಡ ದೇವರಿಗೆ ಕೈ ಮುಗಿದು ಹರಕೆ ಹೊತ್ತರು. ಎಲ್ಲರ ಕಣ್ಣಲ್ಲೂ ನೀರು, ಮುಖದಲ್ಲಿ ನೋವು, ಎದೆಬಡಿತದಲ್ಲಿ ಮೌನ, ದುಃಖ ಮನೆ ಮಾಡಿತ್ತು. 500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಮ್ಮನ ಫೋಟೋಗಳನ್ನು ಪ್ರಿಂಟ್ ಹಾಕಿಸಿ ಇಡೀ ಬಳ್ಳಾರಿಯಲ್ಲಿ ಹಂಚಿದೆ. (ಈ ಕಾರಣಕ್ಕಾಗಿ ಇಡೀ ಬಳ್ಳಾರಿ ದರ್ಶನ ನಮಗಾಯಿತು). ಲೆಕ್ಕವಿಲ್ಲದಷ್ಟು ಹಣ ಪೆಟ್ರೋಲ್‌ಗಾಗಿ, ಬ್ಯಾಟರಿಗಳ ಖರೀದಿಗಾಗಿ ಖರ್ಚಾಯಿತು.

ಪತ್ರಿಕೆಗಳಲ್ಲಿ 'ಕಾಣೆ"ಸುದ್ದಿ ಕೊಟ್ಟರೆ ನನ್ನ ವೃತ್ತಿಯ ಬಹುತೇಕ ಮಿತ್ರರು ಉದ್ಧೇಶಪೂರ್ವಕವಾಗಿ ಸುದ್ದಿ - ಫೋಟೋ ಪ್ರಕಟಿಸಲಿಲ್ಲ. (ಪಾಪ, ಅವರ ಪತ್ರಿಕೆಗಳಲ್ಲಿ ನನ್ನ ಅಮ್ಮಳ ಫೋಟೋ ಬಂದಲ್ಲಿ ನನ್ನಮ್ಮ ಸಿಕ್ಕೇ ಬಿಡುತ್ತಾಳೆ ಎನ್ನುವ ಭ್ರಮೆ ಇದ್ದಿರಬೇಕು). ಸಿಟಿಕೇಬಲ್‌ಗೆ ಜಾಹಿರಾತು ನೀಡಿದೆ. ಸಂಜೆಯ ದಿನಪತ್ರಿಕೆಗೆ ಕ್ವಾರ್ಟರ್ ಪೇಜ್ ಆಡ್ ನೀಡಿದೆ. ಈ ಪತ್ರಿಕೆಯ ಮುಖ್ಯಸ್ಥ, ಮಹಾನುಭವ ಇಡೀ ಫೋಟೋವನ್ನು ಕಪ್ಪುಕಪ್ಪಾಗಿ, ಮುಖಪುಟದಲ್ಲಿ ಪ್ರಿಂಟ್ ಮಾಡಿದೆ. ನಾನು ಅತ್ಯಂತ ತಾಳ್ಮೆಯಿಂದ ಮತ್ತೊಂದು ಆಡ್ ನೀಡಿದೆ. ಆಗಲೂ ಅಷ್ಟೇ. ಇದನ್ನು ಪ್ರಶ್ನಿಸಿದಕ್ಕಾಗಿ ಆತನು ಹೇಳಿದ್ದು ಮಾನವೀಯ ಪತ್ರಕರ್ತ ತಲೆ ತಗ್ಗಿಸುವಂಥವ ವಿಚಾರ.

ಅಪ್ಪಾ ಈ ವಿಚಾರವನ್ನೆಲ್ಲಾ ಈಗ ಏತಕ್ಕಾಗಿ ನಿನಗೆ ತಿಳಿಸುತ್ತಿದ್ದೇನೆ ಗೊತ್ತೇ. ಇಂದು ಫಾದರ‍್ಸ್ ಡೇ. ನೀನಿಲ್ಲದ ಅಮ್ಮಳ ಜೊತೆ ನಾನು - ಹೆಂಡತಿ - ಮಕ್ಕಳು ಹೇಗಿದ್ದೇವೆ. ಅಮ್ಮ ನಮ್ಮೊಂದಿಗೆ ಹೇಗಿದ್ದಾಳೆ ಎನ್ನುವುದನ್ನು ತಿಳಿಸುತ್ತೇನೆ ಅಷ್ಟೇ. ಅಪ್ಪಾ, ನೀನು ಹೋದ ಮೇಲೆ ನನ್ನ ಬಾಸ್, ನನ್ನನ್ನು ಉದ್ಧೇಶಪೂರ್ವಕವಾಗಿ ಟ್ರಾನ್ಸ್ವರ್ ಮಾಡಿ, ಕಿರುಕುಳ ನೀಡಿದ. ಅಮ್ಮ ಒಂದೇ ಸವನೆ, 'ನನ್ನ ಬಿಟ್ಟು ಹೋಗಬೇಡ" ಎಂದು ಕಣ್ಣೀರು ಹಾಕಿದಳು. ನನ್ನಮ್ಮಳ ವಸ್ತುಸ್ಥಿತಿಯನ್ನು ಬಾಸ್ ಮನೆಗೆ ಹೋಗಿ ಅಮ್ಮಳ ಮಾನಸಿಕ ಆರೋಗ್ಯ, ವೈದ್ಯಕೀಯ, ಕಿರುಚಾಟ ಇನ್ನಿತರೆಗಳನ್ನು ವಿವರಿಸಿ ದಯಾಭಿಕ್ಷೆ ಕೇಳಿದೆ. ಆ ವ್ಯಕ್ತಿ ಗಣ್ಯಾತಿಗಣ್ಯನಾಗಿದ್ದರೂ ಕೂಡ, ತಾಯಿಯ ಗರ್ಭದಿಂದ ಜನಿಸಿದ್ದರೂ ಕೂಡ 'ನಿನ್ನಮ್ಮಳನ್ನು ಒಂದು ಬೋನ್ ಮಾಡಿ ಆ ಊರಿಗೆ ಹೋಗು......." ಎಂದು ಹೇಳಿದಾಗ ದಾರಿ ಕಾಣದೇ ಆ ಹುದ್ದೆಗೆ ರಾಜೀನಾಮೆ ನೀಡಿದೆ. (ಇಂಥಹ ನಿರ್ದಯಿ ವ್ಯಕ್ತಿಗಳು ಇರುತ್ತಾರೆ ಎನ್ನುವುದು ನನ್ನ ಅನುಭವಕ್ಕೆ ಬಂದಿತ್ತು).

ಆ ನಂತರ ಆರ್ಥಿಕವಾಗಿ ಜರ್ಜರಿತನಾದೆ. ಸಾವು - ಬದುಕಿನ ಮಧ್ಯೆ ನರಳಾಡಿದೆ. ಕನಿಷ್ಟ 3 ತಿಂಗಳು ಸೂರ್ಯನನ್ನೂ ನೋಡದೆ ದಿನಗಳನ್ನು ಉಪವಾಸದಲ್ಲೇ ಕಳೆದೆ. ಆಗ ನನ್ನ ಜೊತೆಗಿದ್ದವರು ನನ್ನ ಮುದ್ದಿನ ಮಕ್ಕಳು, ಮಡದಿ. ನನ್ನ ಪ್ರಾಮಾಣಿಕತೆ, ಬದ್ಧತೆ ಮತ್ತು ಮಾನವೀಯ ಹೃದಯ. ಅಷ್ಟೇ ಅಲ್ಲ, ನಿನ್ನ ಮತ್ತು ಅಮ್ಮಳ ಆಶೀರ್ವಾದ. ಅಮ್ಮ ನಮಗೆ ಸಿಗುವುದು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣ ಆಯಿತು. ಇದೆಲ್ಲಾ ನೆನಪಾಗಿ, ಅನ್ನ - ನೀರಿಲ್ಲದೇ ಕೃಷವಾದೆ. ಜೀವಶ್ಛವದಂತೆ ಬದಲಾದ ನನ್ನ ಬದುಕಿದೆ ದಿಕ್ಕೇ ಇಲ್ಲದಂತೆ ಭ್ರಮಿಸಿದೆ. ಅಮ್ಮ ಸಿಗದೇ ಇದ್ದರೇ ಹೆಂಡತಿ - ಮಕ್ಕಳು, ನಾನು ಜೀವನ ಪರ್ಯಂತವಾಗಿ ಕಳಂಕಿತರಾಗಿ ಸಮೂಹದಲ್ಲಿ ಇರಬೇಕಲ್ಲ. ಇಂಥಹಾ ಬದುಕೇ ಬೇಡ ಎಂದು ಹೆಂಡತಿ - ನಾನು ಒಟ್ಟಾಗಿ ನಿರ್ಧಾರ ಕೈಗೊಂಡೆವು.

ಏನೇ ಆಗಲಿ. ನಿನ್ನನ್ನು ಒಮ್ಮೆ ಕಂಡು ಮಾತನಾಡಿಸಬೇಕು ಎನ್ನುವ ಆಸೆ ಹುಟ್ಟಿತು. ಜನವರಿ 14ರ ಶನಿವಾರದ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಿನ್ನನ್ನು ಕಾಣಲು ವೀರಶೈವ ರುದ್ರಭೂಮಿಗೆ ನಾನು - ಗೆಳೆಯ ಜಿ. ರಾಜಶೇಖರ ಬಂದೆವು. ನಿನ್ನ ಸಮಾಧಿ ಖಚಿತವಾಗಿ ಸಿಗುತ್ತಿಲ್ಲ. ಅಂದಾಜಿನ ಮೇಲೆ ನಿನ್ನ ಮಟ್ಟಿಯ ಮುಂದೆ ಕೂತು ಧ್ಯಾನಾಸಕ್ತನಾದೆ. ಕ್ಷಮೆ ಕೇಳಿದೆ.

ಅಮ್ಮ ಕಾಣೆ ಆಗಿದ್ದಾಳೆ. ಅಮ್ಮಳನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವೆ. ಜನರ, ನೆರೆಹೊರೆಯವರ, ಸಂಬಂಧಿಗಳ ಚುಚ್ಚು ಮಾತುಗಳನ್ನು ಮೌನವಾಗಿ ಸ್ವೀಕರಿಸಿ, ಎದೆಯಾಳಕ್ಕೆ ಚುಚ್ಚಿಕೊಳ್ಳುತ್ತಿದ್ದೆ. ನನ್ನ ಹೆಂಡತಿ ಕೂಡ. ನನ್ನ ಮಕ್ಕಳೂ ಕೂಡ ಅವ್ವಳನ್ನು ಉಪವಾಸ ಇದ್ದು, ನೀರೂ ಕೂಡ ಕುಡಿಯದೇ ಹುಡುಕಾಡುತ್ತಿದ್ದರು. ಅವ್ವ ಸಿಗಲೆಂದು ಹರಕೆ ಹೊತ್ತಿದ್ದಾರೆ ಎನ್ನುವ ವರದಿ ನೀಡಿದೆ. ನಿನ್ನನ್ನು ಚೆನ್ನಾಗಿಯೇ ಬೈಯ್ದೆ. ನಿನ್ನ ಆಧ್ಯಾತ್ಮ ಶಕ್ತಿ, ನಾನು ನಂಬಿದ್ದ ದೈವ ಎನ್ನವಕ್ಕೂ ಸವಾಲು ಹಾಕಿದೆ.

ನನ್ನ ಧ್ಯಾನ ಪೂರ್ಣಗೊಳ್ಳುವ ಹೊತ್ತಿಗೆ ಸರಿಯಾಗಿ, ಹೆಂಡತಿಯಿಂದ ಕರೆ ಬಂತು. 'ಅವ್ವ ಸಿಕ್ಕಿದ್ದಾಳೆ. ಕೂಡಲೇ ಇಂಥಕಡೆ ಹೋಗಿ". ನನ್ನ ಹೆಂಡತಿಗೆ ಕರೆ ಮಾಡಿದ ಕರಾಟೆ ಮಾಸ್ಟರ್ ಕೈಯಲ್ಲಿ ಒಂದು ರುಪಾಯಿ ಹೊರತಾಗಿ ಮತ್ತೇನು ದುಡ್ಡಿಲ್ಲ. ಆದರೂ, ರೋಹಿಣಿ ತೋರಿಸಿದ ಸಕಾಲಿದ ಬುದ್ಧಿಯಿಂದಾಗಿ ಒಂದು ಕಿವಿಯಲ್ ರಿಸೀವಿಂಗ್, ಮತ್ತೊಂದು ಕಿವಿಯಲ್ಲಿ ನನಗೆ ಮಾಹಿತಿ ನೀಡುವ ಕರೆ ಮೂಲಕ ಆತನನ್ನು ನಿಗದಿತ ಸ್ಥಳದಲ್ಲೇ ಇರಲು ಪದೇ ಪದೇ ದೈನಾಸಿ ಕೇಳುತ್ತಿದ್ದಳು.

ನಾನು ನಿನ್ನ ಸಮಾಧಿ ಸ್ಥಳದಿಂದ ಎದ್ದು ನಿಂತು, ಸೂರ್ಯ ನಮಸ್ಕಾರ ಮಾಡಿದೆ. ಜೊತೆಗಾರ ರಾಜನಿಗೆ ಹೇಳಿ, ಕರಾಟೆ ಮಾಸ್ಟರ್ ಹೇಳಿದ ಅಂಥೋನಿ ಹಾಲ್‌ಗೆ ಶರವೇಗದಲ್ಲಿ ಬಂದೆ. ಅಮ್ಮ ಸಿಕ್ಕಳು. ನನ್ನಲ್ಲಿ ಆನಂದಬಾಷ್ಪೆ. ಅಮ್ಮ ನನ್ನನ್ನು ಕಂಡ ಕೂಡಲೇ, ಗಟ್ಟಿಯಾಗಿ ಕಿರುಚಿ, ಬಿಗಿದಪ್ಪಿಕೊಂಡು ಕೂಗಾಡುತ್ತಾ 'ನಾನಿನ್ನು ನಿಮ್ಮನ್ನು ಬಿಟ್ಟು ಎಲ್ಲಿಗೂ ಹೋಗಲ್ಲ. ಏನೋ ದಾರಿ ತಪ್ಪಿ ಬಂದೆ" ಎಂದಾಗ ಅಮ್ಮಳಲ್ಲೂ ಅನಾಥಪ್ರಜ್ಞೆ ಕಾಡಿದ್ದು ತಿಳಿದಿತ್ತು. 7 ದಿನಗಳ ಕಾಲ ಮೈಕೊರೆಯುವ ಛಳಿಯಲ್ಲಿ, ಅವರಿವರು ನೀಡಿದ ಕಪ್ಪು ಟೀಯನ್ನು ಮಾತ್ರ ಕುಡಿದಿದ್ದ ಅಮ್ಮ, ಬೆಡ್‌ಶೀಟನ್ನೂ ಕೂಡ ಹೊದ್ದುಕೊಂಡಿಲ್ಲ. ಅವರಿವರು ನೀಡಿದ್ದ ಇಡ್ಲಿ ಪೊಟ್ಟಣಗಳು ಒಣಗಿ ಅಲ್ಲೇ ಇದ್ದವು.

ನನ್ನಮ್ಮ ಸಿಕ್ಕಳು. ಅಪ್ಪಾ, ಅಮ್ಮನೊಂದಿಗೆ ನಾವಿದ್ದೇವೆ. ಬದುಕು ನಡೆಸುತ್ತಿದ್ದೇನೆ. ಗೌರವಾನ್ವಿತ ಹುದ್ದೆ ಕೈತಪ್ಪಿದ ನೋವಿದೆ. ಆದರೆ, ಇಂದಿನ ಸಮಾಜದಲ್ಲಿ ಹುದ್ದೆ, ಗೌರವ, ಹಣ, ಅಧಿಕಾರ, ಕೀರ್ತಿಗಳನ್ನು ಹುಡುಕಿಕೊಂಡು ಹೋಗುವ ಮಗ, ಸೊಸೆಯರ ಮಧ್ಯೆ ನಾನು - ಹೆಂಡತಿ ರೋಹಿಣಿ ಅಮ್ಮಳ ಜೊತೆ ಅಚ್ಚುಕಟ್ಟಾಗಿ ಬದುಕುತ್ತಿದ್ದೇನೆ. ನಿಜಕ್ಕೂ ಹ್ಯಾಟ್ಸ್‌ಫ್. ರೋಹಿಣಿಯ ಬದ್ಧತೆ, ನನ್ನ ಮಕ್ಕಳು ನೀಡುತ್ತಿರುವ ಧೈರ್ಯ, ಬೆಂಬಲ ನಿಜಕ್ಕೂ ಅಭಿನಂದನೀಯ. ಸದಾ ಸ್ಮರಣೀಯ.

ನನ್ನ ಈ ಬದುಕಿಗೂ ಅನೇಕರು ಕಲ್ಲು ಹಾಕುತ್ತಿದ್ದಾರೆ. ವೈರಾಗ್ಯ ಬಂದಿದೆ. ಕನಸುಗಳು ಕಳೆದುಹೋಗಿವೆ. ಏನು ಮಾಡಲಿ. ಹೊಟ್ಟೆಗಾಗಿ ದುಡಿದುಣ್ಣಲೇ ಬೇಕು. ಅಕ್ಷರವೇ ನನ್ನ ಆಸ್ತಿ. ಬರಹವೇ ನನ್ನ ಕಸುವು - ಕಸುಬು. ಈ ನನ್ನ ಅಕ್ಷರ ಅನೇಕರಿಗೆ ಪ್ರೀತಿ, ಅನೇಕರಿಗೆ ದ್ವೇಷ. ಏನು ಮಾಡಲಿ. ಎಲ್ಲಿದ್ದೀಯ ಅಪ್ಪ? ಹೇಗಿದ್ದೀಯ? ಅಮ್ಮಳ ಪಾದಗಳಿಗೆ ನಿತ್ಯ ನಮಸ್ಕರಿಸುವಾಗ ನಾನು, ಮಕ್ಕಳು ನಿನ್ನನ್ನು ನೆನಪಿಸುತ್ತೇವೆ. ಅನೇಕ ಸಂದರ್ಭಗಳಲ್ಲಿ ಕಣ್ಣೀರು ಹಾಕುತ್ತೇವೆ. ನಾನು - ಹೆಂಡತಿ ಮಾಡಿದ ತಪ್ಪಾದರೂ ಏನು? ಅಮ್ಮಳೊಂದಿಗೆ ಬದುಕಬೇಕೆನ್ನುವ ನಮ್ಮ ಆಶಯಕ್ಕೆ ಯಾರೊಬ್ಬರೂ ಬೆಂಬಲ ನೀಡುತ್ತಿಲ್ಲ.

ಕಷ್ಟದಲ್ಲಿ, ಹಸಿವಿದ್ದು, ಚಿಕ್ಕದಾದ ಕೋಣೆಯಲ್ಲಿ ನನ್ನ ಸಾಕಿ, ಸಲುಹಿ, ಆರೈಕೆ ಮಾಡಿ, ದುಡಿದುಣ್ಣುವ ದಾರಿ ತೋರಿಸಿರುವ ನಿಮ್ಮೊಂದಿಗಿರುವ ನನ್ನ ಆಶಯಕ್ಕೆ ಅನೇಕರು ಕೊಂಕು ಆರೋಪ ಮಾಡುತ್ತಿದ್ಧಾರೆ. ಭ್ರಷ್ಟಾಚಾರದ ಕಳಂಕ ಹಚ್ಚುತ್ತಿದ್ದಾರೆ. ದಿಕ್ಕೆಟ್ಟಿದ್ಧೇನೆ. ಮೂವರು ಮಕ್ಕಳನ್ನು ಶಾಲೆಗೆ ಸೇರಿಸಿದ್ದೇನೆ. ಅಣ್ಣನ ಆರೋಗ್ಯ ಕೆಟ್ಟಿದೆ. ಅಮ್ಮ ನಿತ್ಯವೂ ನಮ್ಮೊಂದಿಗೆ ಕೂತು ಊಟ ಮಾಡುತ್ತಾಳೆ. ಕಾಲ ಕಾಲಕ್ಕೆ ಔಷಧಿ ಕೇಳಿ ಪಡೆಯುತ್ತಾಳೆ. ಕಿರುಚಾಟ ಕಡಿಮೆ. ಎಲ್ಲಿಗೂ ಹೋಗುತ್ತಿಲ್ಲ. ಆಗೊಮ್ಮೆ, ಈಗೊಮ್ಮೆ ಆರೋಗ್ಯ ಹದಗೆಟ್ಟಾಗ, ದೈವ ಸಹಾಯಕ್ಕೆ ಬರುತ್ತಿದೆ. ನನಗೆ, ಹೆಂಡತಿ - ಮಕ್ಕಳಿಗೆ ಅಮ್ಮಳ ಸೇವೆಯೇ ದೇವರ ಸೇವೆ.

ಇದಿಷ್ಟು ನನ್ನ ರಿಪೋರ್ಟ್. ನಿನ್ನ ಇರುವಿಕೆಯ ಸುಳಿವು ನೀಡು. ಕಾಣಬೇಕೆನ್ನುವ ಹಂಬಲ, ತುಡಿತ ತೀವ್ರವಾಗಿದೆ. ದಿಕ್ಕೆಟ್ಟಿದ್ದೇನೆ. ಮುಂದಿನ ದಿನಗಳು ಏನು ಅಂತಾನೆ ತಿಳಿಯುತ್ತಿಲ್ಲ. ಭಯವಾಗುತ್ತಿದೆ. ಇರುವ ಉದ್ಯೋಗದಲ್ಲಿ ಬರುತ್ತಿರುವ ದುಡಿಮೆ ಸಾಲುತ್ತಿಲ್ಲ ಎನ್ನುವ ಕೊರಗಿದೆ. ಸತ್ಯ, ನ್ಯಾಯ, ಧರ್ಮ, ಪ್ರಾಮಾಣಿಕತೆ, ಬದ್ಧತೆ, ನಿಖರತೆ - ಸ್ಪಷ್ಟತೆಗಳಿಗೆ ಬೆಲೆ ನೀಡುವ ಸಮರ್ಥರು ಯಾರಾದರೂ ಇದ್ದಲ್ಲಿ ನನಗೆ ಕೈತುಂಬ ಸಂಬಳ ಬರುವ ಹೊಸ ಹುದ್ದೆ ಸಿಗುವ ವಿಶ್ವಾಸದಲ್ಲಿದ್ಧೇನೆ. ಯಾವುದಕ್ಕೂ ಒಮ್ಮೆ ಕಾಣಿಸಿ, ನಮ್ಮನ್ನು ಶುಭ ಆಶೀರ್ವದಿಸಪ್ಪ.

English summary
Long lasting memories of my beloved father. A write up by Mahendra Kumar from Bellary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X