ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಬೆವರ ಹನಿಯ ಸಾಲ, ತೀರಿಸಲಾಗದ ಋಣಭಾರ

By * ಪ್ರವೀಣ್ ಚಂದ್ರ ಪುತ್ತೂರು
|
Google Oneindia Kannada News

ನಾನು ಮತ್ತು ನನ್ನಪ್ಪ ಡಿಗ್ರಿಯಲ್ಲಿರುವಾಗ ತೆಗೆದ ಫೋಟೊ
ಅಪ್ಪಾ ಒಂಜಿ ರುಪಾಯಿ ಕೊರ್ಲೆ(ಅಪ್ಪಾ ಒಂದು ರುಪಾಯಿ ಕೊಡು). ನಾನು ಬಾಲ್ಯದಲ್ಲಿ ಶಾಲೆಗೆ ಹೋಗುವ ಮುನ್ನ ನನ್ನ ನಿತ್ಯದ ಬೇಡಿಕೆ. ತೋಟಗ್ ಪೋರ್ ಬಜೈ ಪೆಜೋಂತ್ ಬಲಾ ಕಾಸ್ ಕೊರ್ಪೆ (ತೋಟಕ್ಕೆ ಹೋಗಿ ಅಡಕೆ ಹೆಕ್ಕು, ಕಾಸು ಕೊಡ್ತಿನಿ). ನನ್ನಪ್ಪ ನನಗೆ ಸುಮ್ಮಗೆ ಕಾಸು ಕೊಡುತ್ತಿರಲಿಲ್ಲ. ಏನಾದ್ರು ಕೆಲಸ ಮಾಡಿಸಿ ತಿಂಡಿ ತಿನ್ನಲು ಕಾಸು ಕೊಡುತ್ತಿದ್ದರು. ಆದರೆ ಈಗ "ಸಾಕಪ್ಪ ಕೆಲಸ ಮಾಡಿದ್ದು, ಮನೆಯಲ್ಲಿ ಸುಮ್ಮನೆ ಕುಳಿತುಕೋ ಅಂದ್ರು ಅಪ್ಪ ಕೇಳೋದಿಲ್ಲ. ಕೈಕಾಲು ಗಟ್ಟಿ ಇರೋ ತನಕ ಕೆಲಸ ಮಾಡಬೇಕು" ಅನ್ನೋದು ಅವರ ನಿಲುವು.

ಅಮ್ಮನ ಬಗ್ಗೆ ಬರೀ ಅಂದ್ರೆ ಇಡೀ ಲೈಬ್ರೆರಿಯನ್ನೇ ಮುಗಿಸಿಬಿಡುವ ಅವಳ ಓದುವ ಹುಚ್ಚಿನ ಬಗ್ಗೆ ಬರಿತ್ತೀದ್ದೆ. ಅಣ್ಣನ ಬಗ್ಗೆ ಬರೆ ಅಂದ್ರೆ ಬಾಲ್ಯದ ಎಲ್ಲಾ ನೆನಪುಗಳನ್ನು ಕೆದಕುತ್ತಿದ್ದೆ. ಆದ್ರೆ ಅಪ್ಪನ ಬಗ್ಗೆ ಏನಂತ ಬರೆಯಲಿ. ಈ ಕುರಿತು ಇಲ್ಲಿವರೆಗೆ ಯೋಚಿಸಿರಲಿಲ್ಲ(ಸಂಪಾದಕರು ಹೇಳುವರೆಗೆ). ಸಿಂಪಲ್ ಆಗಿ ಹೇಳಬೇಕಂದ್ರೆ ಎಲ್ಲರ ಅಪ್ಪನಂತೆ ನನ್ನಪ್ಪನೂ ಗ್ರೇಟ್. ಹೆಸರು ನಾರಾಯಣ. ವಯಸ್ಸು 60ಕ್ಕೆ ಹತ್ತಿರ(ಡೇಟ್ ಆಫ್ ಬರ್ತ್ ಗೊತ್ತಿಲ್ಲ). ದುಡಿಮೆ ಅವರಿಗಿಷ್ಟ. ಕಲ್ಲುಗಳ ರಾಶಿಯಿಂದ ಕೂಡಿದ ಬರಡು ತುಂಡು ಭೂಮಿಯನ್ನು ಹಸಿರು ತೋಟ ಮಾಡಿ ನಮ್ಮನ್ನು ಈ ಸ್ಥಿತಿಗೆ ತಲುಪಿಸಿದ್ದು ಅವರ ಸಾಧನೆ.

ಪ್ರೈಮರಿಯಲ್ಲಿರುವಾಗ ತಪ್ಪದೇ ಬಾಲಮಂಗಳ ಮತ್ತು ಚಿತ್ರಕತೆ ತಂದು ಕೊಡುತ್ತಿದ್ದರು. ಅವರು ಕೆಲಸ ಮಾಡಿ ಸುಸ್ತಾಗಿ ಬಂದ ದಿನ ಯಕ್ಷಗಾನಕ್ಕೆ ಕರೆದುಕೊಂಡು ಹೋಗು ಅಂತ ಪೀಡಿಸಿದಕ್ಕೆ ಹುಣಸೆಮರದ ಅಡರಿನಲ್ಲಿ ಚಟೀರ್ ಅಂತ ಹೊಡೆದಿದ್ದರು. ಸ್ಕೂಲ್ ಡೇಗೆ ಹೊಸ ಅಂಗಿ ಬೇಕು ಅಂತ ಹಠ ಹಿಡಿದದಕ್ಕೆ ಅಕ್ಕಿ ತರಲು ಇಟ್ಟಿದ್ದ ನೂರು ರೂಪಾಯಿ ಕೊಟ್ಟಿದ್ದರು. ಅಮ್ಮ ನನಗೆ ಸಪೋರ್ಟ್ ಮಾಡುತ್ತಿದ್ದರು. ಅವರು "ಅಸೂಯೆ"ಯಿಂದ ನೀನು ಅಮ್ಮನ ಮಗ, ನನ್ನ ಮಗ ಅವನು ಅಂತ ಅಣ್ಣನನ್ನು ಹೇಳುತ್ತಿದ್ದರು.

ರೆಡಿಯೋ, ಕ್ಯಾಲ್ಕ್ಯುಲೇಟರ್ ಏನನ್ನು ನನಗೆ ಮುಟ್ಟಲು ಬಿಡುತ್ತಿರಲಿಲ್ಲ. ಯಾಕೆಂದರೆ ನಾನು ಅವನ್ನೆಲ್ಲ ರಿಪೇರಿ ಮಾಡೋಕ್ಕೆ ಬಿಚ್ಚಲು ಹೋಗಿ ಹಾಳು ಮಾಡುತ್ತಿದ್ದೆ. ಸದಾ ಓದು ಓದು ಎನ್ನುತ್ತಿದ್ದರು. ನಾನು ಅವರು ಹೇಳುವಾಗ ಓದುತ್ತಿರಲಿಲ್ಲ. ನಾನು ಕಥೆ ಪುಸ್ತಕ ಓದಿದ್ದರೆ ಅವರ ಪಿತ್ತ ನೆತ್ತಿಗೇರುತ್ತಿತ್ತು. ಪಾಠ ಪುಸ್ತಕ ಓದು ಅನ್ನೋದು ಅವರ ನಿತ್ಯ ವರಾತ. ನಾನಂತು ಪುಸ್ತಕದೆಡೆಯಲ್ಲಿ ಬಾಲಮಂಗಳವಿಟ್ಟು ಓದುತ್ತಿದ್ದೆ.

ಒಂದು ಕ್ಯಾಮರಾ ತೆಗಿಬೇಕು ಅಂತ ಪಿಯುಸಿಯಲ್ಲಿ ತುಂಬಾ ಪ್ರಯತ್ನಿಸಿದೆ. ಅಪ್ಪಾ ದುಡ್ಡು ಕೊಡಲೇ ಇಲ್ಲ. ಮತ್ತೆ ಏನೋ ಸುಳ್ಳು ಹೇಳಿ ಮುನ್ನೂರು ರೂಪಾಯಿ ತೆಗೆದುಕೊಂಡಿದ್ದೆ. ಅದರಲ್ಲಿ ಒಂದು ಲಟ್ಟಾಸ್ ಕ್ಯಾಮರಾ ಖರೀದಿಸಿದೆ. ಅಪ್ಪ ಕೇಳಿದಾಗಲೆಲ್ಲ ಅದು ನನ್ನ ಫ್ರೆಂಡ್ ನದ್ದು ಅನ್ನುತ್ತಿದ್ದೆ. ಕೊನೆಗೆ ಹೇಗೋ ಅದು ಅಪ್ಪನಿಗೆ ಗೊತ್ತಾಯಿತು. ಆಮೇಲೆ ಏನೂ ನಡೆಯಿತ್ತೆಂಬುದು ಸದ್ಯ ನೆನೆಪಿಲ್ಲ. .

ಅದೇ ಲಟ್ಟಾಸ್ ಕ್ಯಾಮರಾ ಹಿಡಿದು ಡಿಗ್ರಿಯಲ್ಲಿರುವಾಗ ನುಡಿಚಿತ್ರ ಬರೆಯಲು ಓಡುತ್ತಿದ್ದೆ. ಪತ್ರಿಕೆಯಲ್ಲಿ ನನ್ನ ಹೆಸರನ್ನು ತೋರಿಸಿ ಕೊಚ್ಚಿಕೊಳ್ಳುತ್ತಿದ್ದೆ. ಅವರು ನಗುತ್ತ ಸಂತೋಷ ಸೂಚಿಸುತ್ತಿದ್ದರು. ರೆಡೀಯೊದಲ್ಲಿ ನಾನು ಬರೆದ ಕಥೆ ಪ್ರಸಾರವಾಗುವ ದಿನಗಳಲ್ಲಿ(ಒಂದೆರಡು ಬಾರಿ ಪ್ರಸಾರವಾಗಿತ್ತು ಅಷ್ಟೇ) ಹೊಸ ಬ್ಯಾಟರಿ ಹಾಕಿ ಕೇಳುತ್ತಿದ್ದರು. ಅದು ಮುಗಿದ ಮೇಲೆ ಅದು ಎಂತಹ ಕಥೆ ಅಂತ ನನ್ನಲ್ಲಿ ವಾಪಸ್ ಕಥೆ ಕೇಳುತ್ತಿದ್ದರು. ಹೀಗೆ ಅಪ್ಪನ ಬಗ್ಗೆ ಸಾವಿರ ನೆನಪುಗಳು.

ಪದವಿ ಮುಗಿದು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಮಾಡುವುದೆಂದರೆ ಅರ್ಧಲಕ್ಷ ಖರ್ಚು. ದುಡ್ಡಿಲ್ಲದಿದ್ದರೂ ಅಪ್ಪ, ಅಣ್ಣ, ಅಮ್ಮ ನನ್ನನ್ನು ಖರ್ಚು ಹಂಚಿಕೊಂಡರು. ಈಗ ಅಪ್ಪನಿಗೂ ವಯಸ್ಸಾಗಿದೆ. ನಾನು ಬೆಂಗಳೂರಿನಿಂದ ಸಿಹಿ ತಂದುಕೊಟ್ಟರೆ ಹೆಚ್ಚು ಖುಷಿ ಪಡುವುದಿಲ್ಲ. ಆದರೆ ಬ್ರಾಂಡೆಡ್ ವಿಸ್ಕಿ ಅಂದ್ರೆ ಅವರಿಗಿಷ್ಟ. ಯಾರದ್ದೇ ಹಂಗಿಗೆ ಒಳಗಾಗದೇ, ಸ್ವಾಭಿಮಾನದಿಂದ ಕಷ್ಟಪಟ್ಟು ದುಡಿದರೆ ಪ್ರತಿಫಲ ಶತಸಿದ್ಧ ಅಂತ ಅವರ ಬದುಕು ನನಗೆ ಕಲಿಸಿದೆ.

ಕೊಡಗು ಅವರ ಹುಟ್ಟೂರು. ಅದಕ್ಕೆ ಸ್ವಲ್ಪ ಕೋಪ, ಧೈರ್ಯ ಜಾಸ್ತಿ. ಮದುವೆಯಾಗಿ ನೆಲೆನಿಂತದ್ದು ಪುತ್ತೂರಿನಲ್ಲಿ. ಅದಕ್ಕೆ ಕರುಣೆ, ಪ್ರೀತಿ, ಮಮತೆ, ಭಾವನಾತ್ಮಕತೆ ಜಾಸ್ತಿ. ಕಾಡಿನ ನಡುವೆ ಕಂಗು, ತೆಂಗು, ಕರಿಮೆಣಸು, ಬಾಳೆಗಿಡಗಳ ಹಸಿರಿನಿಂದ ಕಂಗೋಲಿಸುತ್ತಿರುವ ನಮ್ಮ ತೋಟ ಅವರ ಬದುಕಿನ ಶ್ರಮದ ಕಥೆಯನ್ನು ಹೇಳುತ್ತದೆ. ಅವರ ಬೆವರ ಹನಿಯ ಸಾಲ ಯಾವತ್ತಿಗೂ ತೀರಿಸಲಾಗದ ಋಣಭಾರ. ಕಷ್ಟಪಟ್ಟು ನನ್ನ ಬೆಳೆಸಿದ, ಓದಿಸಿದ ಅಪ್ಪನಿಗೆ ಯಾವತ್ತಿಗೂ ಋಣಿ. ಈಗ ನಾನೆಂದರೆ ಅವರಿಗೆ ಹೆಮ್ಮೆ, ಅಭಿಮಾನ. ನಾನು ಧನ್ಯ. ಊರಲ್ಲಿರುವ ಅಪ್ಪ ನೆನಪಾಗುತ್ತಿದ್ದಾರೆ. ಅವರಿಗೀಗ ಫೋನ್ ಮಾಡಬೇಕು. ಬಾಯ್. [ಪ್ರೀತಿಯ ಅಪ್ಪನಿಗೆ ಹೂವಿನ ಉಡುಗೊರೆ ]

English summary
My dad is hard worker. Name Narayana Puttur. Born in Madikeri. I love my dad. Happy Fathers day my dear dady.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X