ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನಿಗೆ ಬೇಕಿರುವುದು ಒಂದು ಹಿಡಿ ಪ್ರೀತಿಯಷ್ಟೆ!

By ಪ್ರಸಾದ ನಾಯಿಕ
|
Google Oneindia Kannada News

ಒಂದು ಪುಟಾಣಿ ಮಗುವನ್ನು ಮುಂದೆ ನಿಲ್ಲಿಸಿಕೊಂಡು ನಿನಗೆ ಅಮ್ಮ ಇಷ್ಟನೋ, ಅಪ್ಪ ಇಷ್ಟನೋ ಎಂದು ಕೇಳಿದರೆ ಏನು ಹೇಳೀತು? ಕುಟುಂಬ ಕೇಂದ್ರೀಕೃತವಾದ ಭಾರತದ ಸಮಾಜದಲ್ಲಿ ಮಕ್ಕಳಿಗೆ ಇಂದಿನ ಕಾಲದಲ್ಲಿ ಇಬ್ಬರೂ ಬೇಕು. ಸಂಕೀರ್ಣವಾಗುತ್ತಿರುವ ಜೀವನದಲ್ಲಿ ಮಗುವಿಗೆ ಅಪ್ಪನ ಮಮತೆ, ಅಮ್ಮನ ವಾತ್ಸಲ್ಯ ಎರಡೂ ಬೇಕು.

ಆದರೆ, ಇಂದೇನಾಗುತ್ತಿದೆ? ಹೆಚ್ಚುತ್ತಿರುವ ವಿವಾಹ ವಿಚ್ಛೇದನದಿಂದಾಗಿ ಅಪ್ಪ ಅಮ್ಮಂದಿರು ಬೇರೆಯಾಗುತ್ತಿದ್ದಾರೆ. ಸಹಜವಾಗಿ ಅಪ್ಪ ಅಥವಾ ಅಮ್ಮಂದಿರ ಪ್ರೀತಿಯಿಂದ ಮಗು ವಂಚಿತವಾಗುತ್ತಿದೆ. ವಿಚ್ಛೇದನವಾದ ನಂತರ ಮಗುವಿನ ಪಾಲನೆಯ ಜವಾಬ್ದಾರಿಯನ್ನು ತಾಯಿಯ ಮೇಲೇ ಹೊರಿಸುವುದರಿಂದ ಹೆಚ್ಚಾಗಿ ಅಪ್ಪಂದಿರೇ ಮಗುವಿನ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ.

ಈ ವಾದವನ್ನು ಅನೇಕರು ಒಪ್ಪಬಹುದು, ಒಪ್ಪದಿರಬಹುದು. ಆದರೆ, ಇದು ವಾಸ್ತವ. ಪುಟಾಣಿ ಮಗುವಿನ ಲಾಲನೆ-ಪಾಲನೆ ಅಪ್ಪನಿಂದ ಸಾಧ್ಯವಿಲ್ಲವೆಂದು ಕೌಟುಂಬಿಕ ನ್ಯಾಯಾಲಯಗಳು ಅಮ್ಮನಿಗೇ ಮಗುವನ್ನು ಒಪ್ಪಿಸುತ್ತವೆ. ಅಮ್ಮನ ತೆಕ್ಕೆಯಲ್ಲಿ ಬೆಳೆಯುವ ಮಗು ಕ್ರಮೇಣ ಅಪ್ಪನನ್ನು ಮರೆತಿರುತ್ತದೆ. ಮದುವೆ ಎಂಬ ವ್ಯವಸ್ಥೆಯನ್ನು ಧಿಕ್ಕರಿಸುತ್ತಿರುವ ಅನೇಕ ನಾರಿಮಣಿಗಳು ಅಪ್ಪಂದಿರ ಸಹವಾಸವೇ ಬೇಡವೆಂದು ಮಕ್ಕಳನ್ನು ದತ್ತು ತೆಗೆದುಕೊಂಡು ತಾವೇ ಅಮ್ಮ ಅಪ್ಪಂದಿರ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. [ಅಪ್ಪನ ದಿನ ವಿಶೇಷ : ಸೀದಾ ಸಾದಾ ನನ್ನ ದಾದಾ]

Father's day

ಅಮ್ಮಂದಿರಿಗೆ ನೀಡಲಾಗುತ್ತಿರುವ ಪ್ರಾಮುಖ್ಯತೆ, ಪ್ರೀತಿ, ಗೌರವವನ್ನು ಅಪ್ಪಂದಿರಿಗೆ ಇಂದು ನೀಡಲಾಗುತ್ತಿಲ್ಲ. ಭಾವನಾತ್ಮಕವಾಗಿ ಅಮ್ಮನೊಂದಿಗಿರುವ ಬಂಧ ಅಪ್ಪನೊಂದಿಗಿರುವುದು ಕಡಿಮೆಯೇ. ಅಮ್ಮನ ದಿನವನ್ನು ಆಚರಿಸುವಷ್ಟು ಸಂಭ್ರಮದಿಂದ ಅಪ್ಪನ ದಿನವನ್ನು ಆಚರಿಸಲಾಗುವುದಿಲ್ಲ. ಅನೇಕರಿಗೆ, ಇಂಥ ದಿನ ಅಪ್ಪನ ದಿನ ಆಚರಿಸಲಾಗುತ್ತಿದೆ ಎಂದು ಕೂಡ ಗೊತ್ತಿರುವುದಿಲ್ಲ.

ಇಂಥ ಆಚರಣೆಗಳಾದರೂ ಏಕೆ ಬೇಕು? ಇದೆಲ್ಲ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಎಂದು ವಾದಿಸಬಹುದಾದರೂ, ಅಪ್ಪನ ಬಗ್ಗೆ ಚಿಂತಿಸಲಾದರೂ ಇಂಥ ದಿನವಿದ್ದರೆ ತಪ್ಪಾದರೂ ಏನು? ಅಮ್ಮನ ವಾತ್ಸಲ್ಯದಿಂದ ವಂಚಿತರಾದ ಎಷ್ಟೊಂದು ಮಕ್ಕಳು ಅಪ್ಪನಲ್ಲೇ ಅಮ್ಮನನ್ನು ಕಂಡಿರುತ್ತಾರೆ. ಮಲತಾಯಿಯ ಹಂಗು ಬೇಡವೆಂದು ಅನೇಕ ಅಪ್ಪಂದಿರು ತಾವೇ ತಾಯಿಯಾಗಿರುತ್ತಾರೆ. ಅಮ್ಮನ ಕೊರತೆಯನ್ನು ತುಂಬಿರುತ್ತಾರೆ.

ಅಪ್ಪನ ದಿನದ ಆಚರಣೆ ಪ್ರಾರಂಭವಾಗಿದ್ದೂ ಇದೇ ಕಾರಣದಿಂದ. ಅಪ್ಪನ ದಿನದ ಆಚರಣೆಗೆ ಈಗ ಶತಮಾನದ ಸಂಭ್ರಮ. ಅಮ್ಮನ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದುದನ್ನು ಗಮನಿಸಿದ ಅಮ್ಮನ ಪ್ರೀತಿಯಿಂದ ವಂಚಿತೆಯಾದ, ಆದರೆ ಅಪ್ಪನ ಪ್ರೇಮವನ್ನು ಕಂಡಿದ್ದ ಸೋನೋರಾ ಎಂಬ ಹುಡುಗಿ ಅಮೆರಿಕಾದಲ್ಲಿ ಅಪ್ಪನ ದಿನಕ್ಕೆ ನಾಂದಿ ಹಾಡಿದಳು, 1909ರಲ್ಲಿ. ಅಂದಿನಿಂದ ಖಂಡಾಂತರಗೊಂಡು ಈ ಆಚರಣೆ ಭಾರತದಲ್ಲಿಯೂ ಆಚರಿಸಲಾಗುತ್ತಿದೆ.

ಇಂದಿನ ದಿನಗಳಲ್ಲಿ ಅಮ್ಮನ ದಿನವಾಗಲಿ, ಅಪ್ಪನ ದಿನವಾಗಲಿ ವ್ಯಾಪಾರಿ ದೃಷ್ಟಿಯಿಂದ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ. ಕೊಳ್ಳುವವರಿಗೆ ಭರ್ಜರಿ ಆಮಿಷ ತೋರಿಸಿ ವ್ಯಾಪಾರಿಗಳು ಬ್ಯಾಂಕ್ ಬ್ಯಾಲನ್ಸನ್ನು ಹಿಗ್ಗಿಸಿಕೊಳ್ಳುತ್ತಿದ್ದಾರೆ. ಐದು ಸಾವಿರ ರು.ಯಷ್ಟು ಕೊಂಡರೆ ಅಪ್ಪನ ವಯಸ್ಸಿನಷ್ಟು ಡಿಸ್ಕೌಂಟು!

ಒಂದು ಅಧ್ಯಯನದ ಪ್ರಕಾರ, ಅಮ್ಮನ ದಿನದಂದು ಆಗುವಷ್ಟು ಕೊಳ್ಳುವಿಕೆ ಅಪ್ಪನ ದಿನದಂದು ಆಗುವುದಿಲ್ಲ. ಅಮ್ಮನಿಗೆ ಕೊಡಬಹುದಾದಂಥ ಉಡುಗೊರೆಗಳೂ ಅಪ್ಪಂದಿರಿಗೆ ದಕ್ಕುವುದಿಲ್ಲ. ಯಾರಿಗೆ ಎಷ್ಟು ಕೊಡುತ್ತೇವೆಂಬುದು ಮುಖ್ಯವಲ್ಲ, ಅಪ್ಪ ಅಮ್ಮನಿಗೆ ಒಂದೇ ರೀತಿಯ ಪ್ರೀತಿಯನ್ನು, ಗೌರವವನ್ನು ನೀಡುತ್ತೇವೆಂಬುದು ಮುಖ್ಯವಾಗಬೇಕು. ಅಪ್ಪನಿಗೆ ಬೇಕಾಗಿರುವುದೂ ಅಷ್ಟೇ ಅಲ್ಲವೆ?

ಅಂಬೆಗಾಲಿಡುವಾಗ ಆನೆಯಾಗಿ ಆಡಿಸುವ, ನಡೆಯುವಾಗ ಅಂಗಡಿಗೇ ಬೆರಳು ಹಿಡಿದು ಹೋಗಿ ಕೇಳಿದ್ದು ಕೊಡಿಸುವ, ದೊಡ್ಡವರಾದಾಗ ಓದಿಗೆ ಆಸರೆಯಾಗುವ, ವೃತ್ತಿಯಲ್ಲಿ, ಜೀವನದಲ್ಲಿ ಯಶಸ್ಸು ಕಂಡಾಗ ಮಗುವಿನಂತೆ ನಲಿದಾಡುವ ಅಪ್ಪನಿಗೆ ಅಷ್ಟೂ ಬೇಡವಾ? [ಬೆಚ್ಚುವಂತೆ ಮಾಡುತ್ತಿದ್ದ ಅಪ್ಪನ ಬೆಚ್ಚನೆಯ ಪ್ರೀತಿಗೆ ನಮನ]

English summary
A beautiful bouquet for loving father on Father's Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X